Homeಕರ್ನಾಟಕಸೆಕ್ಸ್ ವರ್ಕ್‌ಗೆ ’ವೃತ್ತಿ’ ಘನತೆ: ಸುಪ್ರೀಂ ಆದೇಶದ ಸುತ್ತ...

ಸೆಕ್ಸ್ ವರ್ಕ್‌ಗೆ ’ವೃತ್ತಿ’ ಘನತೆ: ಸುಪ್ರೀಂ ಆದೇಶದ ಸುತ್ತ…

- Advertisement -
- Advertisement -

“ಲೈಂಗಿಕ ವೃತ್ತಿಯಲ್ಲಿ ತೊಡಗಿದ ಮಹಿಳೆಯರ ಮೇಲೆ 2018-2019ರವರೆಗೂ ಪೊಲೀಸರು ಸಾಕಷ್ಟು ದೌರ್ಜನ್ಯಗಳನ್ನು ಎಸಗಿದ್ದಾರೆ. ಮನಬಂದಂತೆ ಹೊಡೆಯುವುದು, ಕೆಟ್ಟ ಭಾಷೆಯಲ್ಲಿ ಬೈಯುವುದು, ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿಯೆಲ್ಲ ಕೂರಿಸುವುದು, ಕೋರ್ಟ್‌ಗೂ ಒಪ್ಪಿಸದಿರುವುದು… ಹೀಗೆ ಸೆಕ್ಸ್ ವರ್ಕರ್‌ಗಳು ನಿರಂತರ ಕಿರುಕುಳವನ್ನು ಅನುಭವಿಸಿದ್ದೇವೆ” ಎನ್ನುತ್ತಾರೆ ಸಾಧನ ಮಹಿಳಾ ಸಂಘದ ಗೀತಾ.

ಬೀದಿಗಳಲ್ಲಿ ಸೆಕ್ಸ್ ವರ್ಕ್ ಮಾಡುವ ಹೆಣ್ಣು ಮಕ್ಕಳ ಹಕ್ಕುಗಳಿಗಾಗಿ ದುಡಿಯುತ್ತಿರುವ ಸಾಧನ ಸಂಘವಷ್ಟೇ ಅಲ್ಲ, ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲ ಮನಸ್ಸುಗಳು ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶದಿಂದ ಸಂತಸಗೊಂಡಿದ್ದಾರೆ. ಪೊಲೀಸರು ನಡೆಸಿರುವ ದೌರ್ಜನ್ಯಗಳ ಬಗ್ಗೆ ಯಾರಾದರೂ ಸೆಕ್ಸ್‌ವರ್ಕರ್‌ಗಳನ್ನು ಕೇಳಿದರೆ ಬೆಚ್ಚಿಬೀಳಿಸುವ ಕಥೆಗಳನ್ನು ಹೇಳುತ್ತಾರೆ.

“1998-95ನೇ ಇಸವಿಯಿಂದ ನಾವು ಕಾನೂನು ಹೋರಾಟಕ್ಕೆ ಇಳಿದೆವು. ಸುಮಾರು 575 ಪ್ರಕರಣಗಳಲ್ಲಿ ನಮಗೆ ಗೆಲುವಾಯಿತು. ಈ ಗೆಲುವುಗಳ ಪ್ರತಿ ಹಿಡಿದು 2015ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಬಳಿ ಹೋದೆವು. ಹೊಸದೊಂದು ಸುತ್ತೋಲೆ ಹೊರಡಿಸಿದ ಐಜಿ, ಈ ತೀರ್ಪುಗಳು ಬೀದಿ ಆಧಾರಿತ ಸೆಕ್ಸ್ ವರ್ಕರ್‌ಗಳಿಗೆ ಅನ್ವಯಿಸುವುದಿಲ್ಲ, ಮಾನವ ಸಾಗಣೆಯಾದವರಿಗೆ ಮಾತ್ರ ಅನ್ವಯವಾಗುತ್ತವೆ ಎಂದಿದ್ದರು. ಅಲ್ಲದೆ ನಮ್ಮ ಡ್ಯೂಟಿಗೆ ಸೆಕ್ಸ್ ವರ್ಕರ್‌ಗಳು ಅಡಚಣೆ ಮಾಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಲು ಶುರು ಮಾಡಿದ್ದರು. ಅದನ್ನೂ ಕೂಡ ಪ್ರಶ್ನಿಸಿದ್ದೆವು. ಸ್ಟೇಷನ್‌ಗೆ ಕರೆದೊಯ್ದು ಮನಬಂದಂತೆ ಹೊಡೆದು, ಬಾಯಿಗೆಬಂದಂತೆ ಬೈದು, ಐದು ನೂರು, ಮುನ್ನೂರು ಫೈನ್ ಕಟ್ಟಿಸಿಕೊಳ್ಳೋರು. ದುಡ್ಡು ಇಲ್ಲವೆಂದರೆ ಮೊಬೈಲ್ ಅಥವಾ ಇನ್ಯಾವುದೇ ಬೆಲೆ ಬಾಳುವ ವಸ್ತುವನ್ನು ಇಟ್ಟುಹೋಗಿ ಎನ್ನುತ್ತಿದ್ದರು. ಪೊಲೀಸರು ಕೇಳುವ ದುಡ್ಡಿಗೆ ಪ್ರತಿಯಾಗಿ ರಸೀದಿ ಕೇಳಿದರೆ, ಮತ್ತೆ ಹೊಡೆಯುತ್ತಿದ್ದರು…” ಹೀಗೆ ತಾವು ಅನುಭವಿಸಿದ ದೌರ್ಜನ್ಯವನ್ನು ಮೆಲುಕು ಹಾಕುತ್ತಾರೆ ಸಾಧನ ಸಂಸ್ಥೆಯ ಗೀತಾ.

ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೀಡಿರುವ ಕೆಲವು ನಿರ್ದೇಶನಗಳು ಸೆಕ್ಸ್ ವರ್ಕರ್‌ಗಳಿಗೆ ಭರವಸೆಯನ್ನು ಹುಟ್ಟಿಸಿವೆ. ಅವುಗಳಲ್ಲಿ ಕೆಲವು ಇಂತಿವೆ.

1. ಲೈಂಗಿಕ ಕೆಲಸವನ್ನು ’ವೃತ್ತಿ’ ಎಂದು ಗುರುತಿಸಬೇಕು. ವೃತ್ತಿಯಲ್ಲಿರುವವರು ಘನತೆಯಿಂದ ಬದುಕುವುದಕ್ಕೆ, ಕಾನೂನಿನಡಿಯಲ್ಲಿ ಸಮಾನ ರಕ್ಷಣೆಗೆ ಅರ್ಹರಾಗಿದ್ದಾರೆ.

2. ವೃತ್ತಿಯ ಹೊರತಾಗಿಯೂ, ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಗೌರವಯುತವಾದ ಜೀವನ ನಡೆಸುವ ಹಕ್ಕನ್ನು ಹೊಂದಿದ್ದಾರೆ.

3. ಲೈಂಗಿಕ ಕಾರ್ಯಕರ್ತರು ಕಾನೂನಿನ ಸಮಾನ ರಕ್ಷಣೆಗೆ ಅರ್ಹರಾಗಿದ್ದಾರೆ. ’ವಯಸ್ಸು’ ಮತ್ತು ’ಸಮ್ಮತಿ’ಯ ಆಧಾರದ ಮೇಲೆ ಕ್ರಿಮಿನಲ್ ಕಾನೂನು ನಿರ್ಧರಿತವಾಗುತ್ತದೆ. ಲೈಂಗಿಕ ಕಾರ್ಯಕರ್ತೆಯರು ವಯಸ್ಕರಾಗಿದ್ದು, ಒಪ್ಪಿಗೆಯೊಂದಿಗೆ ಇದರಲ್ಲಿ ತೊಡಗಿದ್ದಾರೆಂದು ಸ್ಪಷ್ಟವಾದಾಗ, ಪೊಲೀಸರು ಮಧ್ಯಪ್ರವೇಶಿಸುವಂತಿಲ್ಲ ಅಥವಾ ಯಾವುದೇ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ.

4. ಯಾವುದೇ ವೇಶ್ಯಾಗೃಹದ ಮೇಲೆ ದಾಳಿ ನಡೆದಾಗ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸಬಾರದು, ದಂಡ ವಿಧಿಸಬಾರದು, ಕಿರುಕುಳ ನೀಡಬಾರದು ಅಥವಾ ಬಲಿಪಶು ಮಾಡಬಾರದು. ಏಕೆಂದರೆ ಸ್ವಯಂಪ್ರೇರಿತ ಲೈಂಗಿಕ ಕೆಲಸ ಕಾನೂನುಬಾಹಿರವಲ್ಲ. ಆದರೆ ವೇಶ್ಯಾಗೃಹವನ್ನು ನಡೆಸುವುದು ಕಾನೂನುಬಾಹಿರವಾಗಿದೆ.

5. ಮಹಿಳೆಯೊಬ್ಬಳು ಲೈಂಗಿಕ ಕಾರ್ಯಕರ್ತೆಯಾಗಿದ್ದಾಳೆಂಬ ಕಾರಣಕ್ಕೆ ಆಕೆಯ ಮಗುವನ್ನು ತಾಯಿಯಿಂದ ಬೇರ್ಪಡಿಸಬಾರದು. ಮಾನವನ ಸಭ್ಯತೆ ಮತ್ತು ಘನತೆಯ ಮೂಲಭೂತ ರಕ್ಷಣೆಯು ಲೈಂಗಿಕ ಕಾರ್ಯಕರ್ತರು ಹಾಗೂ ಅವರ ಮಕ್ಕಳಿಗೂ ವಿಸ್ತರಿಸುತ್ತದೆ.

6. ಅಪ್ರಾಪ್ತ ವಯಸ್ಕ ಮಗು ವೇಶ್ಯಾಗೃಹದಲ್ಲಿ ಅಥವಾ ಲೈಂಗಿಕ ಕಾರ್ಯಕರ್ತರೊಂದಿಗೆ ವಾಸಿಸುತ್ತಿರುವುದು ಕಂಡುಬಂದರೆ, ಮಗುವನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಪರಿಭಾವಿಸಬಾರದು.

7. ಒಂದು ವೇಳೆ ಲೈಂಗಿಕ ಕಾರ್ಯಕರ್ತೆ ತನ್ನ ಮಗ/ಮಗಳು ಎಂದು ಹೇಳಿಕೊಂಡರೆ, ಅವರು ಹೇಳುತ್ತಿರುವುದು ನಿಜವೇ ಎಂದು ನಿರ್ಧರಿಸಲು ಪರೀಕ್ಷೆಗಳನ್ನು ಮಾಡಬಹುದು. ನಿಜವಾಗಿದ್ದಲ್ಲಿ ಅಪ್ರಾಪ್ತ ಮಗುವನ್ನು ಬಲವಂತವಾಗಿ ಬೇರ್ಪಡಿಸಬಾರದು.

8. ವಿಶೇಷವಾಗಿ ಲೈಂಗಿಕ ಸ್ವರೂಪದ ಕ್ರಿಮಿನಲ್ ದೂರು ದಾಖಲಿಸುವಾಗ ಲೈಂಗಿಕ ಕಾರ್ಯಕರ್ತೆಯರ ವಿರುದ್ಧ ತಾರತಮ್ಯ ಎಸಗಬಾರದು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಲೈಂಗಿಕ ಕಾರ್ಯಕರ್ತೆಯರಿಗೆ ತಕ್ಷಣದ ವೈದ್ಯಕೀಯ-ಕಾನೂನು ಆರೈಕೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು.

9. ಕಾನೂನಿನ ಹೊರತಾಗಿಯೂ, ಟ್ರಾನ್ಸ್‌ಜೆಂಡರ್ ಸಮುದಾಯವು ತಾರತಮ್ಯ ಮತ್ತು ನಿಂದನೆಯನ್ನು ಎದುರಿಸುತ್ತಿದೆ. ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸರ ವರ್ತನೆ ಸಾಮಾನ್ಯವಾಗಿ ಕ್ರೂರ ಮತ್ತು ಹಿಂಸಾತ್ಮಕವಾಗಿರುತ್ತದೆ.

10. ಲೈಂಗಿಕ ಕಾರ್ಯಕರ್ತರ ಗುರುತನ್ನು ಬಹಿರಂಗಪಡಿಸಬಾರದು. ಬಂಧನ, ದಾಳಿ ಮತ್ತು ರಕ್ಷಣಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಸಂತ್ರಸ್ತರ ಅಥವಾ ಆರೋಪಿಗಳ ಗುರುತನ್ನು ಬಹಿರಂಗಪಡಿಸಲು ಕಾರಣವಾಗುವ ಯಾವುದೇ ಫೋಟೋಗಳನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಮಾಧ್ಯಮಗಳು ಹೆಚ್ಚಿನ ಕಾಳಜಿ ವಹಿಸಬೇಕು.

11. ಕಾಂಡೋಮ್ ಬಳಕೆಯಂತಹ ಕ್ರಮಗಳನ್ನು ಪೊಲೀಸರು ಲೈಂಗಿಕ ಕಾರ್ಯಕರ್ತರ ’ಅಪರಾಧ’ದ ಪುರಾವೆಯಾಗಿ ನೋಡುವಂತಿಲ್ಲ. ಕೇಂದ್ರ ಮತ್ತು ರಾಜ್ಯಗಳು ಕಾನೂನುಗಳನ್ನು ಸುಧಾರಿಸಲು ಲೈಂಗಿಕ ಕಾರ್ಯಕರ್ತರು ಅಥವಾ ಅವರ ಪ್ರತಿನಿಧಿಗಳನ್ನು ಒಳಗೊಳ್ಳಬೇಕು.

ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಿರ್ದೇಶನಗಳ ಸುತ್ತ ಚರ್ಚೆಗಳು ನಡೆಯುತ್ತಿವೆ. Brothel ಅಂದರೆ ವೇಶ್ಯಾಗೃಹಗಳನ್ನು ನಿರ್ಬಂಧಿಸಿದ್ದಲ್ಲಿ ಸೆಕ್ಸ್ ವರ್ಕರ್‌ಗಳಿಗೆ ಪರ್ಯಾಯ ಜಾಗಗಳು ಯಾವುವು? ಎಲ್ಲ ಲೈಂಗಿಕ ಕಾರ್ಯಕರ್ತೆಯರು ಒಪ್ಪಿತವಾಗಿಯೇ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರಾ? ಮಾನವ ಕಳ್ಳ ಸಾಗಣೆ ತಡೆಗೆ ಏನು ಕ್ರಮ ಜರುಗಿಸಬೇಕು? ಒಂದಿಷ್ಟು ವರ್ಷ ಸೆಕ್ಸ್ ವರ್ಕ್‌ನಲ್ಲಿದ್ದು ನಂತರ ಹೊರಬರಲು ಬಯಸುವ ಹೆಣ್ಣುಮಕ್ಕಳಿಗೆ, ಟ್ರಾನ್ಸ್‌ಜೆಂಡರ್‌ಗಳಿಗೆ ಯಾವ ವ್ಯವಸ್ಥೆಗಳಿವೆ? ಲೈಂಗಿಕ ವೃತ್ತಿ ’ಲೀಗಲೈಲ್ಸ್’ (ಕಾನೂನಾತ್ಮಕಗೊಳಿಸುವುದು) ಆದರೆ ಏನೆಲ್ಲ ಪರಿಣಾಮ ಬೀರಬಹುದು? ಇತ್ಯಾದಿ ಪ್ರಶ್ನೆಗಳು ಮುನ್ನಲೆಗೆ ಬಂದಿವೆ. ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಂಡವರು, ಲೈಂಗಿಕ ಕಾರ್ಯಕರ್ತೆಯರ ಪರ ಹೋರಾಟ ಮಾಡುತ್ತಿರುವವರು ಹಾಗೂ ಹೋರಾಟಗಾರರನ್ನು ’ನ್ಯಾಯಪಥ’ ವಾರಪತ್ರಿಕೆ ಸಂಪರ್ಕಿಸಿದಾಗ ಹಲವಾರು ಅಭಿಪ್ರಾಯಗಳು ಹೊರಬಂದಿವೆ.

ವೇಶ್ಯಾಗೃಹ ಅನುಮತಿ ನಿರಾಕರಣೆ ಸ್ವಾಗತಾರ್ಹ: ಗೀತಾ

“ವೇಶ್ಯಾಗೃಹಕ್ಕೆ ಅನುಮತಿ ನಿರಾಕರಿಸುವ ಸುಪ್ರೀಂ ಕೋರ್ಟ್ ನಡೆ ಸರಿಯಾಗಿದೆ. ಒಬ್ಬ ವ್ಯಕ್ತಿ ನಾಲ್ಕೈದು ಜನ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುವುದು ಅಪರಾಧ. ನನಗೆ ಹಣ ಅಗತ್ಯವಿದ್ದರೆ ಒಬ್ಬ ಪುರುಷನನ್ನು ನನ್ನ ಮನೆಗೆ ಕರೆದುಕೊಂಡು ಹೋದರೆ ತಪ್ಪಲ್ಲ. ಆದರೆ ಐದಾರು ಮಹಿಳೆಯನ್ನು ಇಟ್ಟುಕೊಂಡು ದಂಧೆ ಮಾಡುವುದು ತಪ್ಪಾಗುತ್ತದೆ” ಎನ್ನುತ್ತಾರೆ ಸಾಧನ ಗೀತಾ.”ಹೆಣ್ಣಿನ ಸೌಂದರ್ಯವನ್ನು ವೇಶ್ಯಾಗೃಹ ಹಾಗೂ ರೆಡ್‌ಲೈಟ್ ಏರಿಯಾಗಳಲ್ಲಿ ಬಳಸಿಕೊಳ್ಳುತ್ತಾರೆ. ನಿರಂತರವಾದ ರಕ್ಷಣೆ ಅಲ್ಲಿ ಸಿಗುವುದಿಲ್ಲ. ಒಂದು ಹೆಣ್ಣಿನಿಂದ ಎಲ್ಲ ಲಾಭ ಗಿಟ್ಟಿಸಿದ ಮೇಲೆ ಒಂದು ಬ್ರಾಥೆಲ್‌ನಿಂದ ಮತ್ತೊಂದು ಬ್ರಾಥೆಲ್‌ಗೆ ವರ್ಗಾವಣೆ ಮಾಡಿಬಿಡುತ್ತಾರೆ. ಸುಮಾರು ಮೂವತ್ತು ವರ್ಷವಾದ ಮೇಲೆ ಹೊರಗೆ ಹಾಕುತ್ತಾರೆ. ಮತ್ತೆ ಬೀದಿಗೆ ಬರಬೇಕಾಗುತ್ತದೆ. ರೈಲ್ವೆ ಸ್ಟೇಷನ್, ಬೀದಿ, ಬಸ್ ಸ್ಟ್ಯಾಂಡ್‌ಗಳಲ್ಲಿ ನಿಲ್ಲಬೇಕಾಗುತ್ತದೆ” ಎನ್ನುತ್ತಾರೆ.

“ಮಾನವ ಕಳ್ಳಸಾಗಣೆಯನ್ನು ನಾವು ಖಂಡಿಸುತ್ತೇವೆ. ಅಪ್ರಾಪ್ತ ಹೆಣ್ಣು ಮಕ್ಕಳು ಈ ವೃತ್ತಿಗೆ ಬರುವುದನ್ನು ತಡೆಯಬೇಕು. ಬದುಕಿನ ಅನಿವಾರ್ಯತೆ ಇರುವ ವಯಸ್ಕರಿಗೆ ಈ ವೃತ್ತಿ ಬಿಟ್ಟುಬಿಡಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಬೇರೆ ಪರ್ಯಾಯಗಳಿದ್ದರೆ ಈ ವೃತ್ತಿಯನ್ನು ಯಾರೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ಗಂಡ ಸತ್ತಿದ್ದರೆ ಅಥವಾ ವಿಕಲಚೇತನರಾಗಿದ್ದರೆ ಹೆಂಡತಿ ಈ ವೃತ್ತಿಗೆ ಬರುವ ಸಾಧ್ಯತೆಗಳಿರುತ್ತವೆ. ಕಳ್ಳಸಾಗಣೆಯಾಗಿ ಮತ್ತೆ ಮನೆಗೆ ವಾಪಸ್ ಆಗಲು ಸಾಧ್ಯವಾಗದವರು ಬೀದಿಗೆ ಬರುತ್ತಾರೆ” ಎಂದು ವಿವರಿಸಿದರು.

“ಸುಪ್ರೀಂ ಕೋರ್ಟ್ ಆದೇಶವೇನೋ ಬಂದಿದೆ. ಆದರೆ ಪೊಲೀಸ್ ದೌರ್ಜನ್ಯದ ಕುರಿತು ಎಚ್ಚರ ವಹಿಸಲೇಬೇಕು. ನಮ್ಮ ಮೇಲೆ ರಾಬರಿ ಕೇಸ್, ಪಿಂಪ್ ಕೇಸ್, ಗಂಜಾ ಮಾರುತ್ತಿದ್ದರೆಂಬ ಕೇಸ್ ಹಾಕಬಹುದು. ನಾವು ಅದಕ್ಕೆಲ್ಲ ತಯಾರಾಗಿರಬೇಕು” ಎಂದು ಎಚ್ಚರಿಸಿದರು.

ವೇಶ್ಯಾವೃತ್ತಿ ಅಪರಾಧವಲ್ಲ: ಮಧು ಭೂಷಣ್

“ಕಾನೂನಿನಪ್ರಕಾರ ವೇಶ್ಯಾವೃತ್ತಿ ಅಪರಾಧವೇನೂ ಅಲ್ಲ. ಪಬ್ಲಿಕ್‌ನಲ್ಲಿ ನಿಲ್ಲುವುದು, ಪಿಂಪ್ ಕೆಲಸ ಮಾಡುವುದು, ಟ್ರಾಫಿಕಿಂಗ್ ಮಾಡುವುದು ಅಪರಾಧವೆಂದು ಪರಿಗಣಿಸಲಾಗಿದೆ. ಸಮಾಜ ತನ್ನ ನೈತಿಕತೆಯ ದೃಷ್ಟಿಯಿಂದ ನೋಡುವುದರಿಂದ ಸೆಕ್ಸ್ ವರ್ಕರ್‌ಗಳು ಕೆಟ್ಟವರಂತೆ ಕಾಣುತ್ತಾರೆ. ಹೀಗಾಗಿ ಕಾನೂನಿನಲ್ಲಿಯೂ ಇವರು ಅಪರಾಧಿಗಳೆಂದೇ ಬಿಂಬಿತವಾಗಿದ್ದಾರೆಂದು ಜನ ಭಾವಿಸುತ್ತಾರೆ. ಆದರೆ ಹಾಗಿಲ್ಲ. ನೈತಿಕತೆ ಕಾನೂನು ಅಲ್ಲ, ಸಂವಿಧಾನವೂ ಅಲ್ಲ. ಈ ಕುರಿತು ಕೆಲವು ಪೊಲೀಸರಿಗೂ ಅರಿವು ಇರುವುದಿಲ್ಲ. ಈ ನಿಟ್ಟಿನಲ್ಲಿ ಮಧ್ಯಂತರ ತೀರ್ಪು ಮಹತ್ವದ್ದಾಗಿದೆ” ಎಂದು ಹೇಳುತ್ತಾರೆ ಗಮನ ಮಹಿಳಾ ಸಮೂಹದ ಕಾರ್ಯಕರ್ತೆ ಮಧು ಭೂಷಣ್.

“ಪೌರಕಾರ್ಮಿಕರಿಗೆ, ಸಫಾಯಿ ಕರ್ಮಚಾರಿಗಳಿಗೆ ಘನತೆಯನ್ನು ಸರ್ಕಾರ ಕೊಡಬೇಕು. ಹಾಗೆಯೇ ವೇಶ್ಯಾವೃತ್ತಿಗೂ ಘನತೆಯನ್ನು ತರಬೇಕು. ದುರಾದೃಷ್ಟವಶಾತ್ ಈ ವೃತ್ತಿಯನ್ನು ತೊರೆದರೂ ಪೊಲೀಸರ ದೌರ್ಜನ್ಯ ತಪ್ಪುವುದಿಲ್ಲ. ಬೀದಿಗೆ ಬಂದರೂ ಆಕೆ ದಂಧೆಗಾಗಿಯೇ ಬರುತ್ತಿದ್ದಾಳೆಂದು ಪೊಲೀಸರು ಬಿಂಬಿಸುತ್ತಾರೆ” ಎಂದು ವಿಷಾಸುತ್ತಾರೆ ಮಧು ಭೂಷಣ್.

“ಸೆಕ್ಸ್ ವರ್ಕರ್‌ಗಳ ಸಂಬಂಧ ಸುಧಾರಣೆಗಳನ್ನು ತರಲು ನೇಮಿಸಿದ ಸಮಿತಿಯು ವೇಶ್ಯಾಗೃಹಕ್ಕೆ ಅವಕಾಶ ನೀಡಬೇಕು ಎಂದು ಶಿಫಾರಸ್ಸನ್ನೂ ಮಾಡಿತ್ತು. ವೇಶ್ಯಾಗೃಹಗಳನ್ನು ಅಪರಾಧೀಕರಣ ಮಾಡಿದರೆ ಈ ವೃತ್ತಿಯಲ್ಲಿ ತೊಡಗಿರುವವರು ಎಲ್ಲಿ ಸೇರಬೇಕು. ಇವರು ಎಲ್ಲರಿಗೂ ಮನೆ ಕೊಡುತ್ತಾರಾ? ವೇಶ್ಯಾಗೃಹವೆಂದಾಗ ಅಲ್ಲಿ ರಕ್ಷಣೆ ಇರುತ್ತದೆ. ರೆಡ್‌ಲೈಟ್ ಏರಿಯಾಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡಿದ್ದೀರಲ್ಲವೇ?” ಎಂದು ಪ್ರಶ್ನಿಸಿದರು.

ಪುನರ್‌ವಸತಿ: ಎಮ್ಮೆಯ ಕಥೆ ನೆನೆಯುತ್ತಾರೆ ಮಲ್ಲು ಕುಂಬಾರ್

“ವೇಶ್ಯಾವೃತ್ತಿ ತ್ಯಜಿಸಿ ಹೊರಬರಲು ಬಯಸುವ ಹೆಣ್ಣು ಮಕ್ಕಳಿಗೆ ಪುನರ್ ವಸತಿ ಕಲ್ಪಿಸಬೇಕೆಂಬುದು ಉದಾತ್ತವಾದ ಚಿಂತನೆ. ಆದರೆ ಸರ್ಕಾರ ಕಲ್ಪಸುವ ಪುನರ್‌ವಸತಿಗಳು ಹಾಸ್ಯಾಸ್ಪದವಾಗಿರುತ್ತವೆ” ಎಂದು ಹೇಳುತ್ತಾರೆ ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ ಮಲ್ಲು ಕುಂಬಾರ್. ಅದಕ್ಕೆ ಪೂರಕವಾಗಿ ಎಮ್ಮೆ ಕೊಟ್ಟ ಕಥೆಯನ್ನು ನೆನೆಯುತ್ತಾರೆ ಅವರು.

“ದೇವದಾಸಿ ಮಹಿಳೆಯರಿಗೆ ಪುನರ್‌ವಸತಿ ಕಲ್ಪಿಸಿ ದಲಿತ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಹೊರಟಿತು. ಆದರೆ ಸರ್ಕಾರ ಸರಿಯಾದ ಯೋಜನೆ ಇಲ್ಲದೆ ಮುತ್ತುಕಟ್ಟುವ ಪದ್ಧತಿ ಮುಂದುವರಿಯುತ್ತಲೇ ಇದೆ. ಸಭೆಯೊಂದರಲ್ಲಿ ದೇವದಾಸಿ ಮಹಿಳೆಯೊಬ್ಬರು ಬೆಳಗಾವಿಯಲ್ಲಿ ಕೇಳಿದ್ದ ಪ್ರಶ್ನೆ ಮಾರ್ಮಿಕವಾಗಿತ್ತು.
– ’ನನ್ನ ಬದುಕಿಗೆ ಅನುಕೂಲವಾಗಲೆಂದು ಎಮ್ಮೆ ಕೊಳ್ಳಲು ಒಂದೂವರೆ ಲಕ್ಷ ರೂ. ಸಾಲ ಕೊಡಿಸಿದಿರಿ. ಎಮ್ಮೆ ತಂದು ಕಟ್ಟಿದ್ದೇನೆ. ಅದು ಗಬ್ಬವಾಗಿ ಮರಿಹಾಕುವವರೆಗೂ ಮೇವು ಹಾಕಿ ಸಾಕಬೇಕು. ನನ್ನ ಬಳಿ ತುಂಡು ಜಮೀನೂ ಇಲ್ಲ. ಎಮ್ಮೆ ಮೇಯಿಸಲು ಗೌಡನ ಹೊಲಕ್ಕೇ ಹೋಗಬೇಕು. ಮೇವು ಬೇಕೆಂದರೆ ನನ್ನ ಬಳಿ ಬಂದು ಮಲಗು ಎನ್ನುತ್ತಾನೆ ಆತ. ಎಮ್ಮೆಗೆ ಮೇವು ತಂದು ಹಾಕುವುದಕ್ಕಾಗಿ ಪುಗಸಟ್ಟೆ ಆತನೊಂದಿಗೆ ಮಲಗಬೇಕು. ಈ ರೀತಿ ನಿಮ್ಮ ಪುನರ್ ವಸತಿ ಇದೆ’- ಎಂದು ಆ ಮಹಿಳೆ ತಿಳಿಸಿದ್ದಳು. ಇಂತಹ ಪುನರ್‌ವಸತಿಗಿಂತ ಲೈಂಗಿಕ ವೃತ್ತಿಯಲ್ಲಿರುವ ಮಹಿಳೆಯರಿಗೆ ಭೂಮಿಯನ್ನು ಹಂಚಬೇಕು. ಉಚಿತ ಹಾಗೂ ಗುಣಮಟ್ಟ ಶಿಕ್ಷಣವನ್ನು ಹೆಚ್ಚಿಸಬೇಕು” ಎಂದು ಆಗ್ರಹಿಸುತ್ತಾರೆ ಅವರು.

ಕಾನೂನಾತ್ಮಕಗೊಳಿಸಬಾರದು: ರೂಮಿ ಹರೀಶ್

“ಸೆಕ್ಸ್ ವರ್ಕ್‌ಅನ್ನು ವೃತ್ತಿಯಾಗಿ ನೋಡಿರುವುದು ಸಂತಸದ ಸಂಗತಿ. ಆದರೆ ಈ ವೃತ್ತಿಯನ್ನು ಕಾನೂನಾತ್ಮ ಗೊಳಿಸಬಾರದು. ಒಂದು ವೇಳೆ ಲೀಗಲೈಸ್ ಮಾಡಿದರೆ ಪೊಲೀಸ್ ಹಿಡಿತಕ್ಕೆ ಸೆಕ್ಸ್‌ವರ್ಕರ್‌ಗಳು ಸಿಲುಕುತ್ತಾರೆ. ಪ್ರದೇಶಕ್ಕಿಷ್ಟು ಜನ ಎಂದು ನೇಮಿಸುತ್ತಾರೆ. ಇದರಿಂದ ಒಳ್ಳೆಯದೇನೂ ಆಗುವುದಿಲ್ಲ” ಎನ್ನುತ್ತಾರೆ ಪರ್ಯಾಯ ಕಾನೂನು ವೇದಿಕೆಯ ರೂಮಿ ಹರೀಶ್.

ರೂಮಿ ಹರೀಶ್

“ಈ ವೃತ್ತಿಗೆ ಬರುವ ಹೆಚ್ಚಿನ ಸಂಖ್ಯೆಯ ಮಹಿಳೆಯರು ಶೋಷಿತ ಸಮುದಾಯದವರಾಗಿರುತ್ತಾರೆ. ಕೌಟುಂಬಿಕ ವಾತಾವರಣ, ಆರ್ಥಿಕ ಪರಿಸ್ಥಿತಿ, ಹೆಣ್ಣಿನ ಮೇಲಿನ ತಾರತಮ್ಯ ಎಲ್ಲವೂ ಇದಕ್ಕೆ ಕಾರಣವಾಗುತ್ತವೆ. ಗಂಡಂದಿರಿಂದಲೇ ಟ್ರಾಫಿಕ್ ಆಗಿ ಸೆಕ್ಸ್ ವರ್ಕ್‌ಗೆ ಬಂದ ಹೆಣ್ಣುಮಕ್ಕಳಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ದೊರೆತು, ಪರ್ಯಾಯ ಆರ್ಥಿಕ ಮೂಲಗಳು ತೆರೆದುಕೊಂಡರೆ ಈ ವೃತ್ತಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ” ಎಂದರು.

ಸೆಕ್ಸ್ ವರ್ಕರ್‌ಗಳ ಮೇಲಾಗುವ ಅತ್ಯಾಚಾರ ತಡೆಯಿರಿ: ಅಕ್ಕಯ್

“ಲೈಂಗಿಕ ವೃತ್ತಿನಿರತ ಮಹಿಳೆಯರ ಮೇಲೆ ಅತ್ಯಾಚಾರ ಆದಾಗ, ತೊಂದರೆ ಇಲ್ಲ ಎಂಬ ಗ್ರಹಿಕೆ ಅನೇಕರಲ್ಲಿದೆ. ಅದು ಸರಿಯಲ್ಲ. ಅತ್ಯಾಚಾರವನ್ನು ಅತ್ಯಾಚಾರವನ್ನಾಗಿಯೇ ನೋಡಬೇಕು, ಮಹಿಳೆಯರನ್ನು ಮಹಿಳೆಯರನ್ನಾಗಿಯೇ ನೋಡಬೇಕು, ವೃತ್ತಿಯನ್ನು ವೃತ್ತಿಯಾಗಿಯೇ ನೋಡಬೇಕು” ಎಂದು ಆಗ್ರಹಿಸುತ್ತಾರೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ದಿಟ್ಟ ದನಿ, ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಅಕ್ಕಯ್ ಪದ್ಮಶಾಲಿ. ಸುಪ್ರೀಂ ಕೋರ್ಟ್‌ನ ಆದೇಶದ ಕುರಿತು ’ನ್ಯಾಯಪಥ’ದೊಂದಿಗೆ ಮಾತನಾಡಿದ ಅವರು, “ವೃತ್ತಿಯಲ್ಲಿ ಡಾಕ್ಟರ್ ಆಗಿದ್ದವರ ಮೇಲೆ ಅತ್ಯಾಚಾರವಾದಾಗ ಅದನ್ನು ಅತ್ಯಾಚಾರವೆಂದೇ ನೋಡುತ್ತೇವೆ ಅಲ್ಲವೇ? ಅಂತಹದ್ದೇ ನಿಲುವನ್ನು ಸೆಕ್ಸ್ ವರ್ಕರ್‌ಗಳ ಕುರಿತೂ ತೋರಬೇಕು. ನನ್ನ ದೇಹ ನನ್ನ ಹಕ್ಕು, ನನ್ನ ಲಿಂಗತ್ವ ನನ್ನ ಹಕ್ಕು, ನನ್ನ ವೃತ್ತಿ ನನ್ನ ಹಕ್ಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಈ ಸಮಾಜ ಅದನ್ನು ಯಾಕೆ ಒಪ್ಪುತ್ತಿಲ್ಲ” ಎಂಬುದು ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದರು.

“ಸೆಕ್ಸ್ ಎಂಬ ಪದದ ಕುರಿತು ಮಡಿವಂತಿಕೆ ಇದೆ. ನಾವು ಏನು ಮಾಡುತ್ತಿದ್ದೇವೆಯೋ ಅದನ್ನು ಹೇಳಲು ಮಡಿವಂತಿಕೆ ಏಕೆ? ಮುಚ್ಚಿಡುವಂತಹ ಕೆಲಸವನ್ನು ಏಕೆ ಮಾಡುತ್ತಿದ್ದಾರೆ? ಲೈಂಗಿಕ ವೃತ್ತಿ ಎಂಬುದು ನಿನ್ನೆ ಮೊನ್ನೆಯದಲ್ಲ. ರಾಜ ಮಹಾರಾಜರ ಕಾಲದಿಂದಲೂ ನಡೆದು ಬಂದಿದೆ” ಎಂದು ತಿಳಿಸಿದರು.

“ಲೈಂಗಿಕ ವೃತ್ತಿಯನ್ನು ಕಾನೂನು ಬದ್ಧ ಮಾಡಬೇಕೆ? ಬೇಡವೇ ಎಂಬ ಚರ್ಚೆಯಾಗುತ್ತದೆ. ಆದರೆ ಲೈಂಗಿಕ ಕಾರ್ಯಕರ್ತೆಯರ ಪರ ಹೋರಾಟದಲ್ಲಿರುವವರು ಕಾನೂನುಬದ್ಧ ಮಾಡಬಾರದೆಂಬ ನಿಲುವಿಗೆ ಬರುತ್ತಾರೆ, ಕಾನೂನುಬದ್ಧ ಮಾಡಿದ ತಕ್ಷಣ ನಾವು ಸರ್ಕಾರದ ಹಿಡಿತಕ್ಕೆ ಸಿಲುಕುತ್ತೇವೆ. ತೆರಿಗೆ ವಸೂಲಿ ಮಾಡುತ್ತಾರೆ. ಪೊಲೀಸರ ನಿರ್ಬಂಧಗಳಿಗೆ ಒಳಪಡುತ್ತೇವೆ. ಕಾನೂನುಬದ್ಧ ಮಾಡದೆ ಈ ವೃತ್ತಿಯನ್ನು ನಿರಪರಾಧೀಕರಣಗೊಳಿಸಬೇಕು. ಪೊಲೀಸರಿಗೆ ಜಾಗೃತಿ ಮೂಡಿಸಬೇಕು. ನಮ್ಮ ಮೇಲೆ ದೌರ್ಜನ್ಯ ಎಸಗುವ ಪೊಲೀಸರಿಗೆ ಶಿಕ್ಷೆ ವಿಧಿಸುವ ಪ್ರತ್ಯೇಕ ಕಾನೂನು ರೂಪಿಸಬೇಕು. ಅಂತಹ ಕಾನೂನಿನ ಜಾರಿಗಾಗಿ ಪ್ರ್ರಣಾಳಿಕೆಯನ್ನು ಎಲ್ಲ ಪಕ್ಷಗಳು ಸಿದ್ಧಪಡಿಸಿಕೊಳ್ಳಬೇಕು” ಎಂದ ಅವರು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದರು.

ಲೈಂಗಿಕ ಅಲ್ಪಸಂಖ್ಯಾತರ ಮಕ್ಕಳ ಕುರಿತು ಮಾತನಾಡಿದ ಅವರು, “ಈ ವೃತ್ತಿಯನ್ನು ಅವಲಂಬಿಸಿರುವ ಹೆಣ್ಣು ಮಕ್ಕಳು ಏನಾಗಬಹುದು? ಬೀದಿಯಲ್ಲಿ, ಪೊದೆಗಳಲ್ಲಿ, ಲಾಡ್ಜ್, ಮನೆಗಳಲ್ಲಿ ಲೈಂಗಿಕ ವೃತ್ತಿ ನಡೆಸುತ್ತಿರುತ್ತಾರೆ. ಮಕ್ಕಳಿರುವ ತಾಯಂದಿರಿಗೆ ಇದು ಸಂದಿಗ್ಧವಾದ ಪರಿಸ್ಥಿತಿ. ಈ ಸಮಯದಲ್ಲಿ ಸುಪ್ರೀಂಕೋರ್ಟ್ ಅವಲೋಕನ ಗಂಭೀರವಾದದ್ದು. ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಗಳು, ಮಕ್ಕಳ ಪೋಷಣಾ ಕೇಂದ್ರಗಳು ದೊಡ್ಡ ಮಟ್ಟದಲ್ಲಿ ಆಗಬೇಕು” ಎಂದು ಆಗ್ರಹಿಸಿದರು.

ಅಕ್ಕಯ್ ಪದ್ಮಶಾಲಿ

“ಮಕ್ಕಳು, ಮಹಿಳೆಯರು, ವಿಕಲಚೇತನರು, ಕಾರ್ಮಿಕರು – ಈ ಎಲ್ಲರೂ ಕಳ್ಳಸಾಗಾಣಿಕೆಗೆ ಒಳಗಾಗುತ್ತಿದ್ದಾರೆ. ಎಲ್ಲ ಕ್ಷೇತ್ರದ ಕಳ್ಳಸಾಗಾಣಿಕೆಯ ಕುರಿತು ಧ್ವನಿ ಎತ್ತಲೇಬೇಕು. ಕಳ್ಳ ಸಾಗಣಿಕೆಯ ಮೂಲಕ ಲೈಂಗಿಕ ವೃತ್ತಿಗೆ ತೊಡಗಿದ್ದರೆ ಅದರ ವಿರುದ್ಧ ನಿಲ್ಲಬೇಕು. ಇಷ್ಟಪಟ್ಟು ಈ ವೃತ್ತಿಯನ್ನು ಮಾಡಿದರೆ ಬಲವಂತವಾಗಿ ಮಾಡುವುದು ಬೇರೆ ವಿಚಾರ” ಎನ್ನುತ್ತಾರೆ ಅಕ್ಕಯ್.

ವೇಶ್ಯಾಗೃಹ ನಡೆಸುವುದು ಅಪರಾಧ ಎಂಬ ನಿಲುವನ್ನು ತಿರಸ್ಕರಿಸಿದ ಅವರು, “ಮನೆಯಲ್ಲಿ, ಬೀದಿಯಲ್ಲಿ, ಪಬ್ಲಿಕ್ ಟಾಯ್ಲೆಟ್‌ನಲ್ಲಿ ಸೆಕ್ಸ್ ವರ್ಕ್ ಮಾಡುತ್ತಾರೆ. ಒಂದು ಕಡೆ ಸೇರಿ ಸೆಕ್ಸ್ ವೃತ್ತಿ ಮಾಡುತ್ತಿದ್ದೇನೆ ಎಂದರೆ ತಪ್ಪೇನಿದೆ? ಯಾವುದೇ ಒಪ್ಪಿಗೆ ಇಲ್ಲದೆ ಸೆಕ್ಸ್ ವರ್ಕ್‌ನಲ್ಲಿ ಮಹಿಳೆಯರನ್ನು ದೂಡಿದ್ದರೆ ಅಂತಹ ವೇಶ್ಯಾಗೃಹಗಳನ್ನು ಮುಚ್ಚಿಸಬಹುದು. ಹೀಗಾಗಿ ಸುಪ್ರೀಂ ಕೋರ್ಟ್ ವೇಶ್ಯಾಗೃಹದ ಕುರಿತು ತಾಳಿರುವ ಅಭಿಪ್ರಾಯವನ್ನು ಪರಾಮರ್ಶಿಸಬೇಕು. ಈಗಾಗಲೇ ಲಕ್ಷಾಂತರ ವೇಶ್ಯಾಗೃಹಗಳಿವೆ. ಅವುಗಳನ್ನು ನೆಲಸಮ ಮಾಡಲು ಸಾಧ್ಯವೇ?” ಎಂದು ಕೇಳಿದರು.

“ಲೈಂಗಿಕ ಕಾರ್ಯಕರ್ತೆಯರ ಸಬಲೀಕರಣದ ವಿಚಾರದಲ್ಲಿ ರಾಜ್ಯಾಂಗದ ವೈಫಲ್ಯ ಎದ್ದು ಕಾಣುತ್ತಿದೆ. ಘನತೆಯಿಂದ ನಾವು ಬದುಕುವಂತಾಗಬೇಕು. ಸುಪ್ರೀಂ ಕೋರ್ಟ್ ಆದೇಶಗಳು ಜಾರಿಯಾಗಬೇಕಾದರೆ ರಾಜಕೀಯ ಭಾಗವಾಗಿ ಸೆಕ್ಸ್‌ವರ್ಕರ್‌ಗಳು ಹೊಮ್ಮಬೇಕು” ಎಂದು ಆಶಿಸಿದರು.


ಇದನ್ನೂ ಓದಿ: ಪಠ್ಯಪರಿಷ್ಕರಣೆಯ ಬೇರಡಗಿರುವುದು ’ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...