Homeಕರ್ನಾಟಕಹೂವು-ಬಳ್ಳಿಯ ಸಂಬಂಧ ಹಾಗೂ ಧಾರವಾಡ ಎಂಬ ವಿದ್ಯಮಾನ

ಹೂವು-ಬಳ್ಳಿಯ ಸಂಬಂಧ ಹಾಗೂ ಧಾರವಾಡ ಎಂಬ ವಿದ್ಯಮಾನ

- Advertisement -
- Advertisement -

ಹುಬ್ಬಳ್ಳಿ-ಧಾರವಾಡ ಮೂಲದವರು ಯಾವುದೇ ಊರಿನಲ್ಲಿ ಇರಲಿ, ಅವರ ಮನೆಯಲ್ಲಿ ಒಂದು ಅಪರೂಪದ ಫೋಟೋ ಇರುತ್ತದೆ. ಅದು ಅವಿಭಜಿತ ಧಾರವಾಡ ಜಿಲ್ಲೆಯ ಸಂತರ ಸಮಾಗಮದ ಚಿತ್ರ. ಅದರಲ್ಲಿ ಸರ್ವಶ್ರೀ ಸಿದ್ಧಾರೂಢರು, ಶಿಶುನಾಳ ಶರೀಫರು, ಗೋವಿಂದ ಭಟ್ಟರು ಹಾಗೂ ಕಬೀರ್ ದಾಸ ಎನ್ನುವ ಸಂತರು, ಇತರ ಸಾಧುಸಂತರ ಜೊತೆಯಲ್ಲಿ ಕುಳಿತದ್ದು ಕಾಣುತ್ತದೆ. ಇದು ಬ್ರಿಟಿಷರ ಆಡಳಿತ ಕಾಲದಲ್ಲಿ, 1915ರ ಸುಮಾರಿಗೆ ತೆಗೆದ ಚಿತ್ರ ಎಂದು ಮಠದ ಭಕ್ತರು ತಿಳಿಸುತ್ತಾರೆ.

ಇದರಲ್ಲಿ ಇರುವ ಎರಡು ಗುರು-ಶಿಷ್ಯರ ಜೋಡಿಗಳನ್ನು ನೋಡೋಣ. ಎಲ್ಲರಿಗೂ ಗೊತ್ತಿರುವಂತೆ ಕಳಸದ ಗೋವಿಂದ ಭಟ್ಟರು ಗುರು, ಶಿಶುನಾಳದ ಷರೀಫರು ಅವರ ಶಿಷ್ಯ. ‘ತುರುಕರ’ ಜಾತಿಗೆ ಸೇರಿದ ಹುಡುಗನೊಬ್ಬನನ್ನು ಶಿಷ್ಯನಾಗಿ ಸ್ವೀಕರಿಸಿದ್ದಕ್ಕೆ ಸ್ವಜಾತಿ ಬಂಧುಗಳಿಂದ ಮೂದಲಿಕೆಗೆ ಒಳಗಾದ ಗುರುಗಳು ತಮ್ಮ ಶಿಷ್ಯನಿಗೆ ಜನಿವಾರ ತೊಡಿಸಿ ದ್ವಿಜನಾಗಿಸಿದರು. ಅವನಿಗೆ ಆಧ್ಯಾತ್ಮಿಕ ಪಾಠ ಮಾಡಿದರು. ಆ ಜನಿವಾರವನ್ನು ರೂಪಕವನ್ನಾಗಿಸಿ ಷರೀಫರು ‘ಹಾಕಿದ ಜನಿವಾರವಾ, ಸದ್ಗುರುನಾಥಾ’ ಅಂತ ಹಾಡಿದರು.

ಕಬೀರ್ ದಾಸ

ಆದರೆ ಅನೇಕರಿಗೆ ಗೊತ್ತಿರಲಾರದ ಸಂಗತಿ ಎಂದರೆ ಸಿದ್ಧಾರೂಢರು ಹಾಗೂ ಕಬೀರ ದಾಸರ ಸಂಬಂಧ. ಸಿದ್ಧಾರೂಢರು ಕಬೀರ ದಾಸರ ಶಿಷ್ಯರಾಗಿ ಸೂಫಿ ಇಸ್ಲಾಮಿನ ಬಗ್ಗೆ ಮಾಹಿತಿ ಪಡೆದಿದ್ದರು ಎನ್ನುವ ವಿಷಯ ಅನೇಕರಿಗೆ ತಿಳಿದಿಲ್ಲ. ಹೈದರಾಬಾದಿನ ದೀನದಾರ ಬಸವ ಸಮಾಜದವರು ಪ್ರಕಟಿಸಿದ – ಜಗದ್ಗುರು ಸರ್ವರೆ ಆಲಂ ಪುಸ್ತಕದಲ್ಲಿ ಸಯ್ಯದ್ ಅಮೀರ್ ಹುಸೇನ್ ಅನ್ನುವ ಸಂತರು ಕಬೀರ್ ದಾಸ ಎನ್ನುವ ಹೆಸರಿನಿಂದ ಜನಪ್ರಿಯರಾಗಿದ್ದರು ಹಾಗೂ ಅವರು ಸಿದ್ದಾರೂಢರಿಗೆ ಆತ್ಮಜ್ಞಾನಿಯಾಗಲು ಮಾರ್ಗದರ್ಶನ ನೀಡಿದರು. ‘ದೇವರನ್ನು ಹೊರತುಪಡಿಸಿ ಇತರರು ಪೂಜೆಗೆ ಅರ್ಹರಲ್ಲ’ ಎನ್ನುವ ಸೂಕ್ತಿಯನ್ನು ಮಠದ ತೇರಿನ ಮೇಲೆ ಕೆತ್ತಲಾಗಿದೆ ಎನ್ನುವ ಮಾತುಗಳು ಇವೆ. ಇದರ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

ಸುಮಾರು ಒಂದು ಶತಮಾನದ ಹಿಂದೆ ಕಲಬುರ್ಗಿ ಜಿಲ್ಲೆಯ ವಾಡಿಯಲ್ಲಿ ಜನಿಸಿ, ದೇಶಾದ್ಯಂತ ಸುತ್ತಾಡಿ ಕನ್ನಡ ಕಂಪನ್ನು ಚೆಲ್ಲಿದ, ಹಿಂದು-ಮುಸ್ಲಿಂ ಏಕತೆಯನ್ನು ಪ್ರತಿಪಾದಿಸಿದ ದೀನದಾರ ಚನ್ನಬಸವೇಶ್ವರ ಸಿದ್ದಿಕಿ ಅವರು ಲಿಂಗಾಯತ ಮಠಗಳಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ಇಸ್ಲಾಂ-ಲಿಂಗಾಯತ ಸಿದ್ಧಾಂತಗಳಲ್ಲಿ ಇರುವ ಏಕರೂಪಿ ಸೂತ್ರಗಳನ್ನು ವಿವರಿಸಿ ಹೇಳುತ್ತಿದ್ದರು. ವಿಗ್ರಹ ಆರಾಧನೆಗೆ ವಿರೋಧ, ಆತ್ಮಲಿಂಗ ಕಲ್ಪನೆ, ಆತ್ಮ ಸಾಕ್ಷಾತ್ಕಾರ, ಏಕದೇವೋಪಾಸನೆ ಮುಂತಾದ ಸಾಮ್ಯಗಳ ಬಗ್ಗೆ ತಿಳಿಸುತ್ತಿದ್ದರು. ಅಲ್ಲಮ ಪ್ರಭುವಿನ ಹೆಸರಿನಲ್ಲಿನ ಅಲ್ಲಮ ಎನ್ನುವ ಪರ್ಷಿಯನ್-ಉರ್ದು ಪದವೇ ನಮ್ಮ ನಡುವಿನ ಸಾಮರಸ್ಯದ ಕುರುಹು ಎಂದು ಪ್ರತಿಪಾದಿಸುತ್ತಿದ್ದರು. ಹೈದರಾಬಾದ್ ನಗರದ ಆಸಿಫ್ ನಗರದಲ್ಲಿ ಹೈದರಬಾದು ನಿಜಾಮರು ನೀಡಿದ ಇನಾಮು ಜಮೀನಿನಲ್ಲಿ ಜಗದ್ಗುರು ಮಠ ಸ್ಥಾಪಿಸಿದರು. ಅಲ್ಲಿ ಈಗಲೂ ಕನ್ನಡದ ಬೋರ್ಡು ಇದೆ.

ಅವರ ಶಿಷ್ಯರಲ್ಲಿ ಅನೇಕರು ಲಿಂಗಾಯತರು. ಅವರು ಬಸವಣ್ಣ ಹಾಗೂ ಆತನ ನಂತರದ ಶರಣರ ಸಿದ್ಧಾಂತಗಳ ಬಗ್ಗೆ ಪ್ರವಚನ ಮಾಡುತ್ತಿದ್ದರು. ಇವರ ಪ್ರಭಾವ ಕಿತ್ತೂರು ಕರ್ನಾಟಕದ (ಮುಂಬೈ ಕರ್ನಾಟಕ) ಮೇಲೆ ದಟ್ಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹುಬ್ಬಳ್ಳಿ ಹಾಗೂ ಧಾರವಾಡಗಳಲ್ಲಿ ಅಸಂಖ್ಯ ರಾಜಾ ಬಾಗ್ ಸವಾರ ಅವರ ಗುಡಿಗಳು ಇವೆ. ಇಲ್ಲಿಗೆ ನಡೆದುಕೊಳ್ಳುವವರಲ್ಲಿ ಮುಸ್ಲಿಂಮರಿಗಿಂತ ಹಿಂದೂಗಳೇ ಜಾಸ್ತಿ. ಅವರ ಉರುಸು ಹಾಗೂ ಸಂದಲ್ ಉತ್ಸವಗಳನ್ನು ಅತಿ ಉತ್ಸಾಹದಿಂದ ಆಚರಿಸುತ್ತಾರೆ. ಬಾಗ್ ಸವಾರ ಎನ್ನುವುದು ಪ್ರವಾದಿ ಮಹಮ್ಮದ್ ಅವರ ಅಳಿಯ ಅಲಿ ಅವರ ಸಂಕೇತ. ಅರೇಬಿಯಾದಲ್ಲಿ ಅಲಿ ಅವರನ್ನು (ಅರಸಲಾನ್) ಸಿಂಹ ಎಂದು ಗುರುತಿಸಿದರೆ, ಭಾರತ ಹಾಗೂ ಏಷಿಯಾಗಳಲ್ಲಿ ಅವರನ್ನು ಹುಲಿಯ ಸಂಕೇತದಿಂದ ಗುರುತಿಸುತ್ತಾರೆ.

ಆಧುನಿಕ ಕಾಲದಲ್ಲಿಯೂ ಸೌಹಾರ್ದ ಹಾಗೂ ಸಾಮರಸ್ಯದ ಉದಾಹರಣೆಗಳು ಹೇರಳವಾಗಿ ಸಿಕ್ಕುತ್ತವೆ. ಧಾರವಾಡದಿಂದ ಒಂದೂವರೆ ತಾಸು ಕ್ರಮಿಸಿದರೆ ಸಿಕ್ಕುವ ಸವದತ್ತಿಯ ಗುಡ್ಡದ ಮೇಲೆ ಎಲ್ಲರ ಅಮ್ಮ ಯಲ್ಲಮ್ಮನ ದೇವಸ್ಥಾನ ಇದೆ. ಇಲ್ಲೇ ಸೇರುವ ಸದ್ಭಕ್ತರು ಜೋರು ಗಂಟಲಿನಿಂದ ಹಾಡುವ ಪದ- “ಹುಟ್ಟಿ ಬಂದೆ ಎಲ್ಲಮ್ಮನಾಗಿ, ನಿನ್ನ ಮದುವೆಯ ಮಾಡಿ ಕೊಟ್ಟಾರವ್ವ ಜಮದಗ್ನಿಗೆ” ಇದನ್ನು ಬರೆದವರು ಹಲಸಂಗಿ ಖಾಜಾ ಸಾಹೇಬರು.

ಇಬ್ರಾಹಿಂ ಸುತಾರ

ಮೊನ್ನೆ ತಾನೇ ನಿಧನರಾದ ಇಬ್ರಾಹಿಂ ಸುತಾರ್ ಅವರು ಜೀವನ ಪರ್ಯಂತ ಗುರುತತ್ವದ ಪ್ರಚಾರ ಮಾಡಿದರು. ತಮ್ಮ ಊರಿನ ಗೆಳೆಯರನ್ನು ಸೇರಿ ಭಜನಾ ಮಂಡಳಿ ಕಟ್ಟಿಕೊಂಡು ಊರೂರು ಸುತ್ತಿದರು. ರಾಮಾಯಣ, ಮಹಾಭಾರತ, ಪುರಾಣ, ಭಾಗವತದ ಕಥೆಗಳನ್ನು ಹೇಳಿ ಜನರಲ್ಲಿ ಜಾಗೃತಿ ಮೂಡಿಸಿದರು. ಬೆಳಗಾವಿಯ ನಾಗನೂರು ಮಠದ ಆಸ್ತಿಯನ್ನು ರುದ್ರಾಕ್ಷಿ ಮಠದ ಶತಾಯುಷಿ ಶ್ರೀ ಶಿವ ಬಸವ ಸ್ವಾಮಿಗಳು ಶೇಖ್ ಶಿಕ್ಷಣ ಸಂಸ್ಥೆಗೆ ಹಂಚಿದರು. ಸಂಸ್ಥೆಯ ಅಧ್ಯಕ್ಷ ಎ. ಎಂ ಶೇಖ್ ಅವರು ತಮ್ಮ ಸಂಸ್ಥೆಗೆ ಶ್ರೀ ಶಿವ ಬಸವ ಸ್ವಾಮಿಗಳನ್ನು ಆಜೀವ ಅಧ್ಯಕ್ಷರನ್ನಾಗಿ ಘೋಷಿಸಿದರು.

ಉತ್ತರ ಕರ್ನಾಟಕದ ಅನೇಕ ಹಳ್ಳಿ-ನಗರಗಳಲ್ಲಿ ಹಿಂದೂ-ಮುಸ್ಲಿಮರು ಸೇರಿ ಮೊಹರಂ ಆಚರಣೆ
ಮಾಡುತ್ತಾರೆ. ಕತಲ್ ರಾತ್ರಿ ಶೋಕಾಚರಣೆ ಮಾಡುತ್ತಾರೆ. ಹಸೆನ್-ಹುಸೇನ್‌ರ ಡೋಲಿ ಹೊರುತ್ತಾರೆ. ಅನೇಕರು ಉಪವಾಸ ಮಾಡುತ್ತಾರೆ. ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲದ ಅನೇಕ ಊರುಗಳಲ್ಲಿ ಸಹ ಈ ಆಚರಣೆಗಳು ನಡೆಯುತ್ತವೆ.

ಈ ರೀತಿಯ ಇನ್ನೂ ಅನೇಕ ಆಚರಣೆ-ಪದ್ಧತಿ, ಕಲೆ-ಸಂಸ್ಕೃತಿಗಳ ಕೂಡಾಟ, ಈ ನೆಲದಲ್ಲಿ ಇವೆ. ಹಿಂದೂ ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಇರುವ ವ್ಯವಸ್ಥೆ ಇಲ್ಲಿನ ಜನರಿಗೆ ಅಪರಿಚಿತ ಏನಲ್ಲ. ಇವೆಲ್ಲ ಕಾರಣಗಳಿಂದಲೇ ಧಾರವಾಡ ಎನ್ನುವುದು ಕೇವಲ ಒಂದು ಊರಲ್ಲ, ಅದೊಂದು ವಿದ್ಯಮಾನ ಎನ್ನುವ ಹೆಸರು ಗಳಿಸಿತು.

ಆದರೆ ಇವೆಲ್ಲವುಗಳ ನೆನಪು ಮೊನ್ನೆ ನುಗ್ಗಿಕೇರಿ ಹನುಮಂತನ ಗುಡಿಯ ಎದುರಿಗೆ ಒಡೆದ ಕಲ್ಲಂಗಡಿ ಹಣ್ಣುಗಳ ರಸದ ಜೊತೆ ಕರಗಿ ಸೋರಿಹೋಯಿತು. ಅಲ್ಲಿನ ಬಡ ಮುಸಲ್ಮಾನ ವ್ಯಾಪಾರಿಯ ಹಣ್ಣಿನ ಅಂಗಡಿಗೆ ನುಗ್ಗಿದ
ಯುವಕರಿಗೆ ಈ ಸಾಂಸ್ಕೃಕ ಹಿನ್ನೆಲೆ ಗೊತ್ತಿರಲಾರದೇ ಹೋಗಿರಬಹುದು. ಹೀಗೆಂದುಕೊಂಡು ಇಷ್ಟೆಲ್ಲಾ ಬರೆಯಬೇಕಾಯಿತು.

ಪಂಡಿತ ವೆಂಕಟೇಶಕುಮಾರ್ ಅವರು ಮೊದಲ ಬಾರಿಗೆ ಕೊಲ್ಕತ್ತಾ ಸಂಗೀತ ಸಮ್ಮೇಳನದಲ್ಲಿ ಭಾಗಿಯಾದಾಗ, ಅಲ್ಲಿನ ಕೇಳುಗರಿಗೆ ಸಹರ್ಷ ಆಶ್ಚರ್ಯ ಆಯಿತಂತೆ. ಇಷ್ಟು ಒಳ್ಳೆಯ ಹಾಡುಗಾರನ ಬಗ್ಗೆ ನಮಗೆ ಗೊತ್ತೇ ಇರಲಿಲ್ಲವಲ್ಲ ಎಂದು ಹಳಿಹಳಿ ಆಯಿತಂತೆ. “ಅವರ ಕಛೇರಿ ನಡೆಯುತ್ತಾ ಇದ್ದಂತೆಯೇ ಅಲ್ಲಿನ ಜನ ಅವರ ಬಗೆಗಿನ ಪರಿಚಯ ಪತ್ರ ತೆಗೆದು ಓದಲು ಶುರುಮಾಡಿದರು. ಅದರಲ್ಲಿ ಅವರಿಗೆ ಗೊತ್ತಿದ್ದ ಒಂದೇ ಪದ ಎಂದರೆ ‘ಧಾರವಾಡ’. ಅದನ್ನು ನೋಡಿದ ತಕ್ಷಣ ನಮ್ಮ ಜನರಿಗೆ ಎಲ್ಲ ಸಂದೇಹಗಳೂ ತೀರಿದವು. ನಾವು ಇವರನ್ನು ಇಷ್ಟು ದಿವಸ ಯಾಕೆ ಆಹ್ವಾನಿಸಲಿಲ್ಲ ಎನ್ನುವ ಸಂಕಟ ಮಾತ್ರ ಉಳಿಯಿತು” ಎಂದು ಲೇಖಕರಾದ ಅರುನಾಭಾ ದೇವ ಬರೆಯುತ್ತಾರೆ.

ಧಾರವಾಡ ಎನ್ನುವ ಊರು ಒಂದು ವಿದ್ಯಮಾನ ಆಗಿದ್ದು ಈ ಅರ್ಥದಲ್ಲಿ. ಆದರೆ ಇತ್ತೀಚೆಗೆ ನಡೆದ ದ್ವೇಷ ಆಧಾರಿತ ಅಪರಾಧಗಳು ಅದರ ಸುನೇರಿ ಮೇಲಪಟ್ಟಿಯನ್ನು ಕಿತ್ತುಹಾಕುತ್ತಿವೆ.

ಅಲ್ಲಿನ ಶಾಸಕರು, ಶ್ರೀರಾಮ ಸೇನೆಯಂತಹ ಸಂಘಟನೆಯ ನಾಯಕರು ಆಡಿದ ಮಾತುಗಳನ್ನು ನೋಡಿದಾಗ ಒಂದು ಮಾತು ಸ್ಪಷ್ಟವಾಗುತ್ತದೆ. ಇವರಿಗೆ ಆಧ್ಯಾತ್ಮದ ಬಗ್ಗೆಯಾಗಲಿ ಅಥವಾ ಪ್ರಜಾಸತ್ತೆಯಂತಹ ಲೌಕಿಕ ವಿಷಯಗಳ ಬಗ್ಗೆಯಾಗಲಿ ಸ್ಪಷ್ಟ ಕಲ್ಪನೆ ಇಲ್ಲ. ತಾವು ಏನು ಮಾಡಿದರೂ ಮುಂದಿನ ಚುನಾವಣೆಗೆ ಅನುಕೂಲ ಆಗುವ ಹಾಗಿರಬೇಕು ಎನ್ನುವ ಮನೋಸ್ಥಿತಿಯ ರಾಜಕಾರಣಿಗಳು ಪ್ರತಿಯೊಂದು ಪ್ರಸಂಗದ ಲಾಭ ಪಡೆಯುವ ಪ್ರಯತ್ನ ಮಾಡುತ್ತಾರೆ. ಇಲ್ಲಿ ದಂತಗೋಪುರದಲ್ಲಿ ಕುಳಿತು ಭಾಷಣ ಮಾಡುವವರು ಕೆಲವರು ಆದರೆ, ರಸ್ತೆಗೆ ಇಳಿದು ಹಿಂಸಾತ್ಮಕ ಚಟುವಟಿಕೆ ನಡೆಸುವವರು ಇತರರು. ಇವೆಲ್ಲವನ್ನೂ ನೋಡುತ್ತಾ ಸಾಮಾಜಿಕ ಮಾಧ್ಯಮಗಳ ಸಂದೇಶ ಓದುತ್ತಾ, ಹಂಚಿಕೊಳ್ಳುತ್ತಾ ಬೆಂಕಿಗೆ ಬಿಸಿ ಕಾಯಿಸುತ್ತಾ ಇರುವರು ಇನ್ನು ಕೆಲವರು. ಅವರು ರೋಮ್‌ನ ಚಕ್ರವರ್ತಿ ನೀರೋನ ಅತಿಥಿಗಳು ಇದ್ದಂತೆ. ದೊರೆಯ ಸೈನಿಕರು ಗುಲಾಮರನ್ನು ಬೆಂಕಿಗೆ ಎಸೆಯುತ್ತಿದ್ದಾಗ ಇವರು ನೋಡಿ ನಸುನಗುವರು.

ಇವರ ವಿಚಾರ ಸರಣಿ ಮಾತ್ರ ವಿಚಿತ್ರವಾಗಿ ಇರುತ್ತದೆ. ಹಿಂಸೆಯನ್ನು ಪ್ರಚೋದಿಸಿದವರು ನಮ್ಮವರಾದರೆ ಅದು ಬೇರೆ ರೀತಿ ಇರುತ್ತದೆ. ಅದೇ ಆ ಪ್ರಚೋದನೆ ಆ ಕಡೆಯಿಂದ ಬಂದರೆ ಅದು ಸಂಪೂರ್ಣ ಉಲ್ಟಾ ಹೊಡೆಯುತ್ತದೆ. ಹಿಂಸೆಗೆ ಇಳಿದವರು ನಮ್ಮವರು ಆದರೆ ಬೇರೆ, ಇತರರು ಇಳಿದರೆ ಬೇರೆ. ಧಾರವಾಡದ ವಿಚಾರವನ್ನೇ ತೆಗೆದುಕೊಳ್ಳಿ. ದೇವಸ್ಥಾನದ ಸುತ್ತ ಹಿಂದೂ ಅಲ್ಲದವರಿಗೆ ಅಂಗಡಿ ಬಾಡಿಗೆ ಕೊಡಬಾರದು ಎಂಬ ನಿಯಮ ಇದೆ. ಕಾಂಗ್ರೆಸ್ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಕಾಲದ ತಿದ್ದುಪಡಿ ಅದು. ಆದರೆ ವ್ಯಾಪಾರ ಮಾಡಬಾರದು ಅಂತ ಯಾವ ನಿಯಮವೂ ಇಲ್ಲ. ಇದು ಅನೇಕರಿಗೆ ಗೊತ್ತಿಲ್ಲ. ಯಾಕೆಂದರೆ ನಾವು ಈಗ ವಿಚಾರ ಮಾಡುವ ಕೆಲಸವನ್ನು ಹೊರಗುತ್ತಿಗೆ ಕೊಟ್ಟುಬಿಟ್ಟಿದ್ದೇವೆ. ಸ್ವಂತ ವಿಚಾರ ಮಾಡುವದನ್ನು ಬಿಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸಂಸ್ಕರಿತ ಮಾಹಿತಿಯನ್ನು ಕಾಪಿ ಮಾಡಿ ತಲೆಯಲ್ಲಿ ಅಂಟಿಸಿಕೊಂಡುಬಿಡುತ್ತೇವೆ. ಹೋಗಲಿ ಹಿಂದೂ ಅಲ್ಲದ ಮುಸ್ಲಿಂ, ಜೈನರು-ಬೌದ್ಧರು-ಸಿಖ್, ಕ್ರಿಶ್ಚಿಯನ್ ಮುಂತಾದ ವ್ಯಾಪಾರಿಗಳನ್ನು
ದೇವಸ್ಥಾನದ ಸುತ್ತಲಿನ ಮಳಿಗೆಗಳಿಂದ ದೂರ ಇಡಬೇಕು ಎನ್ನುವ ನಿಯಮ ನಾಳೆ ಬಂತು ಎಂದು ಇಟ್ಟುಕೊಳ್ಳಿ, ಅದನ್ನು ಜಾರಿ ಮಾಡಬೇಕಾದವರು ಯಾರು? ಸರಕಾರಿ ಅಧಿಕಾರಿಗಳೋ ಅಥವಾ ಖಾಸಗಿ ಸಂಘಟನೆ ಸದಸ್ಯರೋ? ಈಗಂತೂ ಈ ರೀತಿಯ ಖಾಸಗಿ ಜಾರಿ ಘಟಕಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ತಮ್ಮದೆ ಸಿದ್ಧಾಂತದ ಸರಕಾರ ಇದ್ದಾಗ ಅದರ ಮೇಲೆ ಪ್ರಭಾವ ಬೀರಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಕೋ ಅಥವಾ ತಾವೇ ಗೈರು ಕಾನೂನು ಕೆಲಸ ಮಾಡಬೇಕೋ? ಈ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ಸಿಗುವುದಿಲ್ಲ.

ಇನ್ನು ಹುಬ್ಬಳ್ಳಿಯಲ್ಲಿ ನಡೆದ ಗಲಭೆಯನ್ನು ತಗೊಳ್ಳಿ. ಅಲ್ಲಿ ಇನ್ನೂ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಹುಡುಗನೊಬ್ಬ ಹಾಕಿದ ಸಾಮಾಜಿಕ ಮಾಧ್ಯಮದ ಸಂದೇಶ ಮುಸ್ಲಿಂರನ್ನು ರೊಚ್ಚಿಗೆ ಎಬ್ಬಿಸಿತು. ಅದರ ವಿರುದ್ಧ ಪೊಲೀಸು ಠಾಣೆಯಲ್ಲಿ ದೂರು ದಾಖಲು ಆಗಿತ್ತು. ಆದರೆ ಆ ಹುಡುಗನನ್ನು ಬಂಧಿಸಿ ಶಿಕ್ಷೆ ಕೊಡಿಸುವಲ್ಲಿ ವಿಳಂಬ ಆಗುತ್ತಿದೆ ಎಂದು ಸುದ್ದಿ ಹರಡಿ ನೂರಾರು ಸಂಖ್ಯೆಯಲ್ಲಿ ಯುವಕರು ಪೊಲೀಸು ಠಾಣೆ ಎದುರು ಜಮಾಯಿಸಿದರು. ಪೊಲೀಸರ ಮನವಿಗೆ ಬಗ್ಗದೇ ಕಲ್ಲು ತೂರಾಟ ಮಾಡಿದರು. ಸರಕಾರಿ ವಾಹನ ಜಖಂ ಮಾಡಿದರು. ಅದರ ನಂತರ ಸುಮಾರು 90 ಜನ ಬಂಧಿಯಾದರು. ಇದರಲ್ಲಿ ಪ್ರಚೋದನಕಾರಿ ಸಂದೇಶ ಹಾಕಿದ ಹುಡುಗ ಸೇರಿದಂತೆ ನಾಲ್ಕು ಜನ ಚಿಕ್ಕ ವಯಸ್ಸಿನವರು. ಇದನ್ನು ನೋಡಿದಾಗ ನನಗೆ ಧರಾಸನಾ ಉಪ್ಪಿನ ಕಾರಖಾನೆಯ ಹೋರಾಟ ನೆನಪಿಗೆ ಬರುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನು ಬದಲಿಸಿದ ಅಹಿಂಸಾತ್ಮಕ ಪ್ರತಿಭಟನೆ ಎಂದು ಹೆಸರಾದ ಇದು ಬ್ರಿಟಿಷರ ರಾಕ್ಷಸಿ ಶಕ್ತಿಯನ್ನು ಮಣಿಸಿತು. ಜಗತ್ತು ಭಾರತೀಯ ಗಾಂಧಿವಾದಿ ಹೋರಾಟಗಾರರನ್ನು ಗೌರವದಿಂದ ನೋಡುವಂತೆ ಮಾಡಿತು. ರಿಚರ್ಡ್ ಅಟೆನ್‌ಬರೋ ಅವರು ಗಾಂಧಿ ಚಿತ್ರದಲ್ಲಿ ಇದನ್ನು ನೆನಪಿಡುವಂತೆ ಚಿತ್ರಿಸಿದ್ದಾರೆ. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟ ಮುಸ್ಲಿಂ ಯುವಕರು ಅದನ್ನು ಇನ್ನೊಮ್ಮೆ ನೋಡಬೇಕು.

ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾಸಗಿ ಸೈದ್ಧಾಂತಿಕ ಸಂಘಟನೆಗಳ ಹಿಂಸೆಯನ್ನು ಸಮರ್ಥಿಸಿಕೊಂಡಿದ್ದರು. ಪ್ರತಿಯೊಂದು ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಏನೂ ಮಾಡಲಿಕ್ಕೆ ಆಗೋದಿಲ್ಲ ಎಂದು ಅವರು ಭೌತ ವಿಜ್ಞಾನಿ ನ್ಯೂಟನ್‌ನ ನಿಯಮಗಳನ್ನು ನೆನಪು ಮಾಡಿಕೊಂಡಿದ್ದರು. ಆದರೆ ಹುಬ್ಬಳ್ಳಿಯ ಘಟನೆಯ ನಂತರ ಬೊಮ್ಮಾಯಿ ಅವರಿಗೆ ತಾವು ಹಿಂದೆ ಆಡಿದ ಮಾತು ನೆನಪಾದಂತೆ ಕಾಣಲಿಲ್ಲ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: 40% ಕಮಿಷನ್‌ನಿಂದ ಕರುನಾಡು ಕಳೆದುಕೊಳ್ಳುತ್ತಿರುವುದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...