Homeಮುಖಪುಟ‘ನಿರುತ್ತರ'ದ ರಾಜೇಶ್ವರಿ ನೆನಪು

‘ನಿರುತ್ತರ’ದ ರಾಜೇಶ್ವರಿ ನೆನಪು

- Advertisement -
- Advertisement -

ಒಂದು ದಿನ, ನನ್ನ ತಮ್ಮ ಕಲೀಂ ’ರಾಜೇಶ್ವರಿಯವರನ್ನು ಮಾತನಾಡಿಸಿಕೊಂಡು ಬರೋಣ, ಬರ್ತೀಯಾ’ ಎಂದು ಕೇಳಿದ. ಅವನು ತೇಜಸ್ವಿಯವರ ಕಟ್ಟಾಭಿಮಾನಿ. ಅವರ ಸಾಹಿತ್ಯದ ಮೇಲೇಯೇ ಪಿಎಚ್.ಡಿ., ಮಾಡಿದ. ಅವರಂತೆಯೇ ವೈಲ್ಡ್‌ಲೈಫ್ ಫೋಟೊಗ್ರಫಿಯನ್ನು ಹವ್ಯಾಸವಾಗಿಸಿಕೊಂಡ. ಅವನಿಗೆ ತಾನು ಸಂಗ್ರಹಿಸಿದ ತೇಜಸ್ವಿ ಲೇಖನಗಳನ್ನು ರಾಜೇಶ್ವರಿಯವರಿಗೆ ಕೊಡುವ ಕೆಲಸವೂ ಇತ್ತು.

ಸಾಮಾನ್ಯವಾಗಿ ನಾನು ನನ್ನಿಷ್ಟದ ಲೇಖಕರನ್ನು ಭೇಟಿಮಾಡುವುದಕ್ಕೆ ಮುಂದೊಡಗುವುದಿಲ್ಲ. ಅವರ ಕೃತಿಗಳ ಮೂಲಕವೇ ಸಂಬಂಧ ಇಟ್ಟುಕೊಳ್ಳುವುದಕ್ಕೆ ಬಯಸುತ್ತೇನೆ. ಆದರೂ ತೇಜಸ್ವಿಯವರ
ಸಂದರ್ಶನವನ್ನು ಮಾಡಿ ಪ್ರಕಟಿಸುವ ಆಸಕ್ತಿ ನನಗಿತ್ತು. ಆದರೆ ಮೂಡಿಯಾದ ಅವರು ಹೇಗೆ ವರ್ತಿಸುವರೊ ಎಂಬ ಶಂಕೆಯಿಂದ ಹಿಂಜರಿದುಕೊಂಡಿದ್ದೆ. ಒಮ್ಮೆ ಗುರುಗಳಾದ ಜಿ.ಎಚ್.ನಾಯಕರ ಮನೆಯಲ್ಲಿ ಅವರನ್ನು ಕಾಣುವ ಅವಕಾಶ ಸಿಕ್ಕಿತು. ಹೊಸಬರ ಎದುರು ತೇಜಸ್ವಿ, ಜನಸುಳಿವನ್ನು ಕಂಡೊಡನೆ ವನ್ಯಮೃಗಗಳು ಹಳುವಿನಲ್ಲಿ ನುಸುಳಿ ಮರೆಯಾಗುವಂತೆ, ಸೆನ್ಸಿಟಿವ್ ಆಗಿಬಿಡುತ್ತಾರೆಂದು ತೋರುತ್ತದೆ. ಅಥವಾ ಅವರು ಬಂದು ಬಹಳ ಹೊತ್ತಾಗಿರಬೇಕು. ‘ನಾಯಕರೇ ಬರ್ತೀನಿ’ ಎಂದು ಹೊರಟುಬಿಟ್ಟರು.

ಇದಾದಬಳಿಕ ಬಾಬಾಬುಡನಗಿರಿ ಕುರಿತು ನಾನು ಬರೆದ ಲೇಖನ ಓದಿ ಮೆಚ್ಚಿಕೊಂಡು ಬರೆದಿದ್ದರು. ಶ್ವಾನಪ್ರಿಯರಾದ ಅವರಿಗೆ ಲೇಖನ ಇಷ್ಟವಾಗಿದ್ದು ನನ್ನ ಸಂಶೋಧನ ’ಪ್ರತಿಭೆ’ಯಿಂದಲ್ಲ; ದತ್ತಾತ್ರೇಯನ ಸುತ್ತ ಇರುವ ನಾಲ್ಕು ನಾಯಿಗಳಿರುವ ಚರ್ಚೆಯಿಂದ. ಅವರು ನನ್ನ ಲೇಖನವನ್ನು ಕರ್ನಾಟಕದ ಯುವಕರು ಓದುವಂತೆ ತಮ್ಮ ಬರೆಹದಲ್ಲಿ ಶಿಫಾರಸ್ಸು ಮಾಡಿದ್ದೂ ಉಂಟು. ಒಮ್ಮೆ ತಮ್ಮ ಆಪ್ತರೊಬ್ಬರ ಮೂಲಕ ನನಗೆ ಮನೆಗೆ ಬರಹೇಳಿದ್ದರು. ನನ್ನ ಮಖೇಡಿತನದಿಂದ ದಿನ ದೂಡಿಕೊಂಡಿದ್ದೆ. ಅಷ್ಟರಲ್ಲೇ ಸಾವಿನ ಸುದ್ದಿ ಬಡಿಯಿತು. ಮನಸ್ಸು ಕಲ್ಲೇಟು ತಿಂದ ಹಕ್ಕಿಯಂತೆ ತೇಜಸ್ವಿ ತೇಜಸ್ವಿ ಎಂದು ಚಡಪಡಿಸಿತು. ಈಗವರ ಮನೆಗೆ ಹೋಗುವ ಅವಕಾಶ ಬಂದಿದೆ. ಆದರೆ ಅವರೇ ಇಲ್ಲ.

ಸದಾ ಶಿವ-ಶವಾಣಿಯರಂತೆ ಜತೆಯಲ್ಲಿ ಇರುತ್ತಿದ್ದ ತೇಜಸ್ವಿ-ರಾಜೇಶ್ವರಿಯವರನ್ನು ಮತ್ತೊಮ್ಮೆ ಕಂಡಿದ್ದು, ಕುಪ್ಪಳಿಯಲ್ಲಿ. ಅದು ಕುವೆಂಪು ಜನ್ಮಶತಮಾನೋತ್ಸವದ ಕಾರ್ಯಕ್ರಮ. ಕುವೆಂಪು ಸಮಾಧಿಯನ್ನು ರಾಜಘಾಟಿನ ಸಮಾಧಿಯಂತೆ ಹೂಗಳಿಂದ ಸಿಂಗರಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಅತಿಥಿಗಳಾದ ನಾವು ಬಿಡಿಹೂವನ್ನು ಸಮಾಧಿಯ ಮೇಲೆ ಚೆಲ್ಲಿ ಶ್ರದ್ಧಾಂಜಲಿ ಸೂಚಿಸುವುದಿತ್ತು. ನಾವು ಹಾಗೆ ಮಾಡುವಾಗ, ತೇಜಸ್ವಿ ಮತ್ತು ರಾಜೇಶ್ವರಿ ಸಂಬಂಧವಿಲ್ಲದಂತೆ ದೂರ ನಿಂತು ನಮ್ಮಲ್ಲಿ ಗಿಲ್ಟ್ ಹುಟ್ಟಿಸುತ್ತಿದ್ದರು. ಇಬ್ಬರೂ ಕುವೆಂಪು ಶತಮಾನೋತ್ಸವ ಕಾರ್ಯಕ್ರಮಕ್ಕೆ ಹಂಪಿಗೆ ಬಂದಾಗಲೂ ಅಷ್ಟೆ. ಸಭೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಾಗಿ ದಾರಿತಪ್ಪಿ ಬಂದ ಗಂಧರ್ವರಂತೆ ಕನ್ನಡ ವಿವಿಯ ಕ್ಯಾಂಪಸ್ಸಿನಲ್ಲಿ ಅಡ್ಡಾಡಿಕೊಂಡಿದ್ದರು.


ಎಲ್ಲ ಬಗೆಯ ಫಾರ್ಮಾಲಿಟಿಗಳನ್ನು ತಮ್ಮ ಮಾತು-ವರ್ತನೆಗಳಿಂದ ಗೇಲಿಗೊಳಿಸುವ ತೇಜಸ್ವಿಯವರು ಈಗ ಮನೆಯೊಳಗಿಲ್ಲ ಎಂಬುದು ಧೈರ್ಯವಾದರೆ, ಅವರಿಲ್ಲದ ಮನೆಗೆ ಹೋಗುವುದು ಸಂಕಟವೆನಿಸುತ್ತಿತ್ತು. ವರ್ಷ ಕಳೆದರೂ ಸೂತಕದ ಭಾವವಿನ್ನೂ ಮಲೆನಾಡಿನ ಮಾಗಿಯ ಮಂಜಿನಂತೆ ಆವರಿಸಿಕೊಂಡಿತ್ತು. ಲೇಖಕರಿಗೆ ಜಾತಿಮತಗಳಾಚೆ ನಿರ್ಮಾಣಗೊಳ್ಳುವ ಈ ಬಂಧುತ್ವ ರಕ್ತ ಸಂಬಂಧಕ್ಕಿಂತ ಅದೆಷ್ಟು ಗಾಢ? ಕೈಮರದಲ್ಲಿಳಿದು ‘ನಿರುತ್ತರ’ಕ್ಕೆ ಹೋದೆವು. ಮೊದಲಿಗೆ ಮನೆಯೇ ಕಾಣಲಿಲ್ಲ. ತಾನೇ ದಬ್ಬಿಕೊಂಡು ಹೋಗುವಷ್ಟು ಇಳಿಜಾರಲ್ಲಿ, ಸೊಕ್ಕಿಬೆಳೆದ ಕಾಫಿಗಿಡಗಳ ನಡುವಿದ್ದ ಎರಡು ಪಟ್ಟೆಯ ಜೀಪುದಾರಿಯಲ್ಲಿ ನಡೆದವು. ಕಾಫಿಗಿಡಗಳು ಚಾಚಿದ ತೋಳಗೆಲ್ಲುಗಳಲ್ಲಿ ಕೆಂಪು-ಹಸಿರು ಹಣ್ಣನ್ನು ಕೋದಂತೆ ನಿಂತಿದ್ದವು. ತೋಟ ಹಕ್ಕಿಗಳ ಜಾತ್ರೆಯಂತಾಗಿ ಕಲರವ ಹೊಮ್ಮುತ್ತಿತ್ತು. ಕೊಂಚ ದೂರ ನಡೆದ ಬಳಿಕ ಕೆಂಪ್ಹಂಚಿನ ಮನೆಯ ಮಾಡು ಕಾಣಿಸಿತು. ಮನೆಯ ಸುತ್ತ ನೀಟಾಗಿ ಕತ್ತರಿಸಿ ಬೆಳೆಸಿದ ಅಲಂಕಾರದ ಗಿಡಗಳು. ಹುಲ್ಲುಹಾಸು. ಮನೆಯೊಳಗಿಂದ ರಾಜೇಶ್ವರಿಯವರ ಮಾತು ಕೇಳಿಸಿತು. ಅತಿಥಿಗಳು ಬಂದಿರಬೇಕು. ಅವರು ಹೊರಬಂದ ಮೇಲೆ ಹೋಗೋಣ ಎಂದು, ಪಕ್ಕದಲ್ಲಿದ್ದ ಶೆಡ್ಡಿನತ್ತ ಹೋದೆವು. ಅಲ್ಲಿದ್ದ ಸೌದೆ ಒಟ್ಟಲಿನ ಪಕ್ಕ ತೇಜಸ್ವಿಯವರ ಸ್ಕೂಟರ್ ನಿಂತಿತ್ತು. ರೈಲಿನಲ್ಲಿ ಪಾರ್ಸೆಲ್ ಮಾಡಲು ಪ್ಯಾಕ್ ಮಾಡಿದಂತೆ, ಗೋಣಿಯ ಬ್ಯಾಂಡೇಜನ್ನು ಬಿಗಿಸಿಕೊಂಡಿತ್ತು. ಧೂಳುಹಿಡಿದ ಅದರ ಹ್ಯಾಂಡಲನ್ನು ನವಿರಾಗಿ ಮುಟ್ಟಿದೆ. ಅಲುಗಾಡಿತು. ಶೆಡ್ಡಿನ ಪಕ್ಕದಲ್ಲಿದ್ದ ಕಣದಲ್ಲಿ ವಿವಿಧ ಬಣ್ಣದ ಕಾಫಿಬೀಜ ಒಣ ಹಾಕಲಾಗಿತ್ತು. ಇವನ್ನೆಲ್ಲ ನೋಡುತ್ತ ನಿಂತಿರುವಾಗ ಗಾಜಿನ ಕಿಟಕಿಯ ಮೂಲಕ ನಮ್ಮ ಸುಳಿದಾಟ ಕಂಡವರೇ ರಾಜೇಶ್ವರಿ ತಟ್ಟನೆ ಹೊರಬಂದು ಸ್ವಾಗತಿಸಿದರು. 70 ದಾಟಿದ್ದರೂ ಅಜ್ಜಿಯೆನಿಸದಂತೆ ಚಟುವಟಿಕೆಯಿಂದ ತುಡಿಯುತ್ತಿದ್ದರು. ನಾವು ಬರುವ ವರ್ತಮಾನ ಅವರಿಗೆ ಮೊದಲೇ ಇತ್ತು. ಕುಪ್ಪಳಿಯಲ್ಲಿ ನಡೆದ ಕುವೆಂಪು ಕಾರ್ಯಕ್ರಮದಲ್ಲಿ ನನ್ನ ನೋಡಿದ್ದನ್ನು ನೆನಪಿಸಿಕೊಂಡರು. ಅಲ್ಲಿದ್ದ ಸಸ್ಯವಿಜ್ಞಾನಿ ಮಲಿಕರನ್ನು ಪರಿಚಯಿಸಿದರು. ಅವರ ಚರ್ಚೆಯಿನ್ನೂ ಮುಗಿದಂತಿರಲಿಲ್ಲ. ನಾವು ‘ತೋಟ ಅಡ್ಡಾಡಿ ಬರುತ್ತೇವೆ’ ಎಂದು ಹೊರಟೆವು.

ಮಲಿಕರನ್ನು ಕಳಿಸಿದ ಬಳಿಕ, ರಾಜೇಶ್ವರಿ ನಮ್ಮನ್ನು ಕರೆಯಲು ಹೊರಬಂದರು. ಎಲ್ಲರೂ ಹಾಲಲ್ಲಿ ಕೂತೆವು. ಗಾಜಿನ ಮನೆಯೊಂದನ್ನು ಅನಾಮತ್ತಾಗಿ ತಂದು ದಟ್ಟಕಾಡಿನಲ್ಲಿ ಇಟ್ಟಿರುವಂತೆ ಭಾಸವಾಯಿತು. ನಾನು ಚಕ್ಕೋತ ಮರ ಕಾಣುವಂತೆ ಕೂತೆ. ರಾಜೇಶ್ವರಿ ಅಕ್ಕರೆಯಿಂದ “ಏನು ಕೊಡಲಿ?” ಎಂದರು. ’ಕಾಫಿ’ ಎಂದೆವು. “ತರ್ತೇನೆ. ಅಲ್ಲೀತನಕ ಈ ಹಣ್ಣು ತಿನ್ನಿ. ಇದು ತೇಜಸ್ವಿ ನೆಟ್ಟಮರದ್ದು” ಎನ್ನುತ್ತ ಕಿತ್ತಳೆಯ ಬುಟ್ಟಿಯನ್ನು ಮುಂದಿಟ್ಟರು. ಹಸಿರು ಉಂಡೆಗಳಂತಿದ್ದ ಅವನ್ನು ಸುಲಿದು ತಿಂದೆವು. ತೊಳೆ ಕೊಂಚ ಹುಳಿಯಾಗಿದ್ದವು.

ಕಾಫಿಯ ಜತೆ ಬಂದ ರಾಜೇಶ್ವರಿ ಮಾತಿಗೆ ಕೂತರು. ಒಂದೇ ಸಮನೆ ಮಾತಾಡುತ್ತ ಹೋದರು. ನಾವು ಕೇಳಿಸಿಕೊಳ್ಳುತ್ತ ಹೋದೆವು. ಅರ್ಧಶತಮಾನದ ನೆನಪು ಕಡಲ ಅಲೆಗಳಂತೆ ಉಕ್ಕುಕ್ಕಿ ಬರುತ್ತಿದ್ದವು. ಎಲ್ಲವನ್ನು ಇಸವಿ ಸಮೇತ ಕರಾರುವಾಕ್ಕಾಗಿ ಹೇಳುತ್ತಿದ್ದರು. ಸಿರಿವಂತ ಕುಟುಂಬದಲ್ಲಿ ಹುಟ್ಟಿಬೆಳೆದ ತೇಜಸ್ವಿಯವರ ಸರಳತೆ ಬಗ್ಗೆ ಅವರಿಗೆ ಅಭಿಮಾನ. ಒಮ್ಮೆ ಮದುವೆಗೆ ಮುಂಚೆ ತಮ್ಮ ಮನೆಗೆ ತೇಜಸ್ವಿಯವರು ಬಂದಾಗ, ಅಲ್ಯುಮಿನಿಯಂ ತಟ್ಟೆಯಲ್ಲಿ ಊಟಕೊಟ್ಟರಂತೆ. ಅದರ ಬಗ್ಗೆ ಗಮನವೇ ಇಲ್ಲದೆ ತೇಜಸ್ವಿ ಉಂಡರಂತೆ. ಅದನ್ನು ಕಂಡು ರಾಜೇಶ್ವರಿಯವರಿಗೆ ಈ ವ್ಯಕ್ತಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಅನಿಸಿಬಿಟ್ಟಿತಂತೆ.

ತೇಜಸ್ವಿ ಸಾಹಿತ್ಯದ ಗಂಭೀರ ವಿದ್ಯಾರ್ಥಿನಿಯಂತಿದ್ದ ರಾಜೇಶ್ವರಿ, ಸಾಲುಗಳನ್ನೆಲ್ಲ ನೆನಪಿಟ್ಟುಕೊಂಡಿದ್ದರು. ಕೆಲವನ್ನು ಉಲ್ಲೇಖಿಸುತ್ತ ’ಹೀಗೆ ಯೋಚಿಸಲು ಯಾರಿಗೆ ಬರುತ್ತೆ? ನಿಮಗಾಗುತ್ತಾ? ನನಗಾಗುತ್ತಾ?’ ಎನ್ನುತ್ತ ತಮ್ಮ ತೇಜಸ್ವಿ ಎಷ್ಟು ಅನನ್ಯ ಎಂದು ವಿವರಿಸುತ್ತಿದ್ದರು; ಜಗತ್ತಿನ ಯಾವುದೇ ವಿದ್ಯಮಾನದ ಮೇಲೆ ಮಾತಾಡಿದರೂ ಅದು ಬಂದು ತೇಜಸ್ವಿಯವರಿಗೆ ಲಗತ್ತಾಗಿ ಮುಗಿಯುವಂತೆ ಮಾತಾಡುತ್ತಿದ್ದರು. ಹಕ್ಕಿ ಫೋಟೊಗಾಗಿ ಮರಸಿನಲ್ಲಿ ಕೂತಿದ್ದ ತೇಜಸ್ವಿಯವರಿಗೆ ಊಟಕ್ಕೆ ಕೂಗಿ ಕರೆದೊ, ಒಗ್ಗರಣೆಗೆ ಕರಿಬೇವಿನಸೊಪ್ಪು ತರಲೆಂದು ಹೋಗಿ ಹಕ್ಕಿಯನ್ನು ಓಡಿಸಿಯೊ ಬೈಸಿಕೊಂಡಿದ್ದನ್ನು ಪ್ರೀತಿಯಿಂದ ನೆನೆದರು-ಈಗ ಹಾಗೆ ಬೈಯುವವರಿಲ್ಲವಲ್ಲ ಎಂಬ ಕೊರಗಿನಲ್ಲಿ. ಮನೆಯ ಪ್ರೀತಿಯ ನಾಯಿ ಪ್ರಾಣ ಬಿಡುವಾಗ, ತೇಜಸ್ವಿಯವರು ಅದನ್ನು ಮಗುವಿನಂತೆ ತಬ್ಬಿಕೊಂಡು ತೋಟದ ಮೂಲೆಮೂಲೆಗೆ ಒಯ್ದು, ’ನೋಡೊ ನೋಡು, ಇದು ನೀನು ಓಡಾಡಿದ ನೆಲ. ಕೊನೆಯ ಸಲ ನೋಡಿಕೊ’ ಎಂದು ಹುಚ್ಚರಂತೆ ಓಡಾಡಿದ್ದನ್ನು ನೆನೆದರು.

ಈಗವರ ಕಂಠ ತುಂಬಿಬಂದಿತು. ಮಾತು ನಿಂತಿತು. ಬೆರಳುಗಳನ್ನು ಕನ್ನಡಕದೊಳಗೆ ತೂರಿಸಿ ಕಣ್ಣುಗಳ ಮೇಲಿಟ್ಟು ಸುಮ್ಮನಾದರು. ಆದರೆ ಕಣ್ಣುಗಳಿಗೆ ಹರಿವ ಕಂಬನಿ ತಡೆಯಲಾಗಲಿಲ್ಲ. ಅಗಲಿಕೆಯ ನೋವು ಎಷ್ಟು ಹಸಿಯಾಗಿದೆ- ವರ್ಷ ತುಂಬಿದರೂ! ಬಹುಶಃ ಅದು ಮಾಯದ ಗಾಯ. ತೇಜಸ್ವಿ ತಮ್ಮನ್ನು ಅಲೆಮಾರಿ ಎಂದು ಕರೆದುಕೊಂಡರು. ಆದರೆ ಹೆಂಡತಿ ತೋಟದಮನೆ ಬಿಟ್ಟು ಹೊರಗೆ ಹೆಚ್ಚು ಹೋಗದ ಅವರಂತಹ ’ಗೃಹಸ್ತ’ ಬೇರೆಯಿಲ್ಲ. ಅರ್ಧಶತಮಾನ ಕಾಲ ತಾನು ಪ್ರೀತಿಸಿ ಮದುವೆಯಾದ ವ್ಯಕ್ತಿಯ ಜತೆ ನಿರಂತರವಾಗಿ ಸಮಯ ಕಳೆದ ಈ ಜೀವ, ಇದ್ದಕ್ಕಿದ್ದಂತೆ ಅದರಿಂದಗಲಿ ವೇದನೆ ಅನುಭವಿಸುತ್ತಿದೆ-ರಾಮಾಯಣದ ಕ್ರೌಂಚದಂತೆ.

ಮಧ್ಯಾಹ್ನವಾಗುತ್ತಿತ್ತು. ಹೊರಗೆ ಹಕ್ಕಿಗಳ ದನಿಯಿಲ್ಲ. ಅವು ಎಲ್ಲೋ ಅಡಗಿ, ಇಡೀ ವಾತಾವರಣ ಮೌನದಿಂದ ನಿರುತ್ತರವಾಗಿತ್ತು. ಊಟವಾದ ಬಳಿಕ, ಮತ್ತೆ ಮಾತು. ಮತ್ತೆ ಕಾಫಿ. ಹಗಲು ಇಳಿಯತೊಡಗಿತು. ಮಧ್ಯಾಹ್ನದ ನೀರವತೆಯನ್ನು ಮುರಿಯುವಂತೆ, ನಿಸರ್ಗದ ಚಟುವಟಿಕೆ ಮತ್ತೆ ಆರಂಭ. ಚಕ್ಕೋತದ ಮರವನ್ನೇ ನಾನು ನೋಡುತ್ತಿದ್ದರಿಂದ ಇರಬೇಕು, ರಾಜೇಶ್ವರಿ ಮನೆಯೊಳಗೆ ಕತ್ತಲಮೂಲೆಯಲ್ಲಿ ಇಟ್ಟಿದ್ದ ಚಕ್ಕೋತವನ್ನು ಸುಲಿದು ಎಲ್ಲರಿಗೂ ಕೊಡುವಂತೆ ಕೆಲಸದಾಕೆ ದೇವಕಿಗೆ ಕೊಟ್ಟರು. ದೇವಕಿ ಬಾಗುಗತ್ತಿ ತೆಗೆದುಕೊಂಡು, ಗೊಮ್ಮಟನನ್ನು ಕಟೆದು ತೆಗೆವ ಶಿಲ್ಪಿಯಂತೆ, ಚಕ್ಕೋತದ ಹಳದಿ ಸಿಪ್ಪೆಯನ್ನೂ, ಅದಕ್ಕೆ ಹತ್ತಿಕೊಂಡಿದ್ದ ಹತ್ತಿಯಂತಹ ದಪ್ಪನಾದ ಮೆತ್ತೆಯನ್ನೂ ಕತ್ತರಿಸಿ, ಒಂದಕ್ಕೊಂದು ತಬ್ಬಿಕೊಂಡು ಪವಡಿಸಿದ್ದ ತಿಳಿಗುಲಾಬಿ ತೊಳೆಗಳನ್ನು ಅನಾವರಣಗೊಳಿಸಿದಳು. ಅವು ತೇಜಸ್ವಿ ತರಹ ಒಗರಿನಿಂದ ತುಂಬಿದ್ದವು. ಚಕ್ಕೋತವನ್ನು ಗಿಡದಿಂದ ಕಿತ್ತಕೂಡಲೇ ತಿನ್ನಬಾರದಂತೆ. ಅದನ್ನು ಕತ್ತಲಮೂಲೆಯಲ್ಲಿ ಕಳಿಯಲು ಬಿಡಬೇಕಂತೆ.

ಅನುಭವದಿಂದ ಮಾಗಿರುವ ರಾಜೇಶ್ವರಿ, ತೇಜಸ್ವಿ ತೀರಿಕೊಂಡ ಬಳಿಕ ಲೇಖಕಿಯಾಗಿ ಹೊಮ್ಮಿದರು. ತಾರಿಣಿಯವರು ಕುವೆಂಪು ಅವರ ಇನ್ನೊಂದೇ ಮುಖವನ್ನು ಕಟ್ಟಿಕೊಟ್ಟಂತೆ ತೇಜಸ್ವಿಯವರನ್ನು ರಾಜೇಶ್ವರಿ ಕಟ್ಟಿಕೊಟ್ಟರು. ಅವರ ಸರಳವೂ ಮುಗ್ಧವೂ ಆದ ಬರೆಹ ಆಪ್ತವಾಗಿದೆ. ತೇಜಸ್ವಿಯಂತಹ ಕಣ್ಕೋರೈಸುವ ಬೆಳಕಿನ ಜತೆ ಬದುಕಿದ ಅವರಲ್ಲಿ ಸಹಜವಾಗಿ ಅಭಿಮಾನ ತುಳುಕುತ್ತಿದೆ. ಆದರೆ ಅದುವೇ ತೇಜಸ್ವಿ ಚಿತ್ರವು ತನ್ನ ಮಾನುಷ ಸಹಜ ಮಿತಿಗಳ ಸಮೇತ ಮೂಡದಂತೆ ಮಾಡಿದೆಯಾ ಎಂದೂ ಅನಿಸಿತು. ಜೀವಮಾನವೆಲ್ಲ ತೇಜಸ್ವಿಯವರ ಓದುಗರಿಗೂ ಗೆಳೆಯರಿಗೂ ಉಪಚರಿಸಿ ದಣಿದಿರುವ ಅವರಿಗೆ, ಈಗಲೂ ನಮ್ಮಂತಹವರ ಕಾಟ ತಪ್ಪಿಲ್ಲ. ಆದರೆ ತೇಜಸ್ವಿಯವರನ್ನು ಪ್ರೀತಿಸುವ ಜನ ಇರುವೆಗಳಂತೆ ಬರುತ್ತಿದ್ದಾರೆ. ಬರವನ್ನು ತಡೆಯಲಾರರು. ಬಂದವರಿಗೆಲ್ಲ ಉಪಚರಿಸಿಕೊಂಡೂ ಇರಲಾರರು. ಸಂದರ್ಶಕರ ಭೇಟಿಯಿಂದ ತಮಗೆ ಬರೆಹ ಮುಗಿಸಲು ಆಗುತ್ತಿಲ್ಲ ಎಂದು ಸಣ್ಣಗೆ ಅವರು ಚಡಪಡಿಸುತ್ತಿರುವಂತೆ ತೋರಿತು. ಇವತ್ತಂತೂ ಬಹಳ ಮಾತಾಡಿ ಸುಸ್ತಾಗಿದ್ದರು. ಹೊರಳು ಸೂರ್ಯನ ಬೆಳಕಲ್ಲಿ ನಿಂತಿದ್ದ ಅವರಿಗೆ ನಮಿಸಿ ಹೊರಟೆವು. ರಾಜೇಶ್ವರಿ ನಮಗೆ ನಾಲ್ಕೈದು ನವಿಲುಗರಿ ಕೊಟ್ಟರು. ನಾನೊಂದು ಬಳ್ಳಿಯ ಚೂರನ್ನು ಹಿತ್ತಲಲ್ಲಿ ನೆಡಲು ಕೇಳಿ ಪಡೆದುಕೊಂಡೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಬಾವುಟಕ್ಕೆ ಬೆಂಕಿ ಇಟ್ಟವರನ್ನು ಶಿಕ್ಷಿಸಿ, ನಮ್ಮ ಧ್ವಜ ಹಿಡಿದ ಭುಜಗಳನ್ನು ರಕ್ಷಿಸಿ: ಡಾ.ಹಂಸಲೇಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...