Homeಅಂಕಣಗಳುಯುದ್ಧವಿರೋಧಿ ಜನ ಪ್ರತಿರೋಧವನ್ನು ಸಂವೇದನೆಯಿಂದ ಅವಲೋಕಿಸುವ ಚಿತ್ರ - ‘ದ ಟ್ರಯಲ್ ಆಫ್ ದ ಶಿಕಾಗೊ...

ಯುದ್ಧವಿರೋಧಿ ಜನ ಪ್ರತಿರೋಧವನ್ನು ಸಂವೇದನೆಯಿಂದ ಅವಲೋಕಿಸುವ ಚಿತ್ರ – ‘ದ ಟ್ರಯಲ್ ಆಫ್ ದ ಶಿಕಾಗೊ 7’

ಜೆಎನ್‍ಯು, ಸಿಎಎ-ಎನ್‍ಆರ್‌ಸಿ ವಿರೋಧಿ ಮತ್ತು ಭೀಮ ಕೊರೆಂಗಾವ್ ಪ್ರಕರಣಗಳಲ್ಲಿ ಶಿಕಾಗೊ 7 ಪ್ರಕರಣವನ್ನೂ ನಮ್ಮ ನ್ಯಾಯಾಂಗ ಮೀರಿಸಿದೆ.

- Advertisement -
- Advertisement -

ನಾಗೇಶ್ ಹೆಗಡೆಯವರ ‘ಗಗನಸಖಿಯರ ಸೆರಗು ಹಿಡಿದು’ (ಪತ್ರಿಕಾ ಅಂಕಣಗಳ ಸಂಗ್ರಹ) ಎಂಬ ಪುಸ್ತಕದ ‘ಕೊಳ್ಳೆಗಾಲ್ ಮೆಮೋರಿಯಲ್’ ಎಂಬ ಲೇಖನದಲ್ಲಿ ವಿಯೆಟ್ನಾಂ ಯುದ್ಧ ಕುರಿತು ಮಾಡಿದ ಉಲ್ಲೇಖ ಈ ರೀತಿ ಇದೆ “ವಿಯೆಟ್ನಾಂನಲ್ಲಿ 1955 ರಿಂದ 1975 ರವರೆಗೆ ಸತತ ಇಪ್ಪತ್ತು ವರ್ಷಗಳು ಹೋರಾಟ ನಡೆಸಿ ಅಮೆರಿಕ ಕೊನೆಗೂ ಯಶಗಳಿಸಲಾಗದೇ ಸೋತು ಹಿಮ್ಮೆಟ್ಟಿದ್ದು ಈ ಮಹಾನ್ ದೇಶಕ್ಕೆ ಎಂದೂ ಮರೆಯಲಾಗದ ಮುಖಭಂಗ. ಅಮೆರಿಕದ ಸುಮಾರು ಅರವತ್ತು ಸಾವಿರ ಯೋಧರು ಮಡಿದರು. ಚುರುಕು ಬುದ್ಧಿಯ, ಅನುಕೂಲಸ್ಥ ಕುಟುಂಬದ ಹುಡುಗರು ಕಾಲೇಜಿನಲ್ಲಿ ಓದಲು ಹೋದರೆ; ದಡ್ಡರನ್ನೂ, ದನಿ ಇಲ್ಲದವರನ್ನೂ, ಹುಂಬರನ್ನೂ ಹುರಿದುಂಬಿಸಿ ವಿಯೆಟ್ನಾಂ ರಣಭೂಮಿಗೆ ಕಳಿಸಲಾಯಿತು. ಯುದ್ಧ ಕೊನೆಗೂ ಕೊನೆಗೊಂಡಾಗ ಅಮೆರಿಕದ ಪ್ರಜೆಗಳ ಪಾಲಿಗೆ ಕಹಿನೆನಪು ಮಾತ್ರ ಉಳಿಯಿತು. ಯುದ್ಧದಲ್ಲಿ ಮಡಿದ ಅಮೆರಿಕ ಯೋಧರ ಸಂಖ್ಯೆ ಸುಮಾರು 60 ಸಾವಿರ. ಇವರ ಸರಾಸರಿ ವಯಸ್ಸು ‘18 ವರ್ಷ 8 ತಿಂಗಳು’’’. (ಇಲ್ಲಿ ಬಳಸಿದ ‘ಹೋರಾಟ’ ಎಂಬ ಒಂದು ಪದದ ಬಗ್ಗೆ ವೈಯಕ್ತಿಕವಾಗಿ ನನಗೆ ತಕಾರಾರಿದೆ. ಅದರ ಬದಲಾಗಿ ‘ದಬ್ಬಾಳಿಕೆ’ ಎಂದು ಹೇಳಬಹುದು.)

ಆರೋನ್ ಸೋರ್ಕಿನ್ ನಿರ್ದೇಶನದ ‘ದ ಟ್ರಯಲ್ ಆಫ್ ದ ಶಿಕಾಗೊ 7’ ಸಿನಿಮಾ, ವಿಯೆಟ್ನಾಂ ಮೇಲಿನ ಯುದ್ಧವನ್ನು ವಿರೋಧಿಸಿ ಅಮೆರಿಕದ ಶಿಕಾಗೊ ನಗರದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ (Democratic National Convention 1968) ಭಾಗವಹಿಸಿದ, ಸಾಂವಿಧಾನಿಕ ಹಕ್ಕುಗಳ ಹೋರಾಟ ಹಿನ್ನೆಲೆಯ ವಿವಿಧ ಸಂಘಟನೆಗಳ 8 ಜನರನ್ನು ‘ಗಲಭೆ ಮತ್ತು ಸಂಚು’ ಅಪಾದನೆ ಮೇಲೆ ಸರ್ಕಾರ ಬಂಧಿಸುತ್ತದೆ. ಈ 8 ಜನರ ಸುದೀರ್ಘ ನ್ಯಾಯಾಲಯ ವಿಚಾರಣೆಯೇ ಸಿನಿಮಾದ ವಸ್ತು.

ಸುಮಾರು ಅರ್ಧ ಶತಮಾನದ ಹಿಂದೆ ನಡೆದ ಈ ನೈಜ ಘಟನೆ ಆಧಾರಿತ ಸಿನಿಮಾ ಯಾಕೆ ಮುಖ್ಯ? ಅದರಲ್ಲೂ ಪ್ರಸ್ತುತ ಸಂದರ್ಭದಲ್ಲಿ! ಸಮಕಾಲೀನ ಪ್ರಪಂಚ ಎರಡು ಅಲೋಚನೆಯಲ್ಲಿ ಹೊಡೆದು ವಿಭಾಗವಾಗುತ್ತಿದೆ. ಒಂದು: ಬಲಪಂಥದ ಅಲೋಚನೆವುಳ್ಳ ರಾಜಕೀಯ ಶಕ್ತಿಗಳು ಪ್ರಪಂಚದ ಬಹುತೇಕ ದೇಶಗಳಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಇವು ಧರ್ಮ, ಸಂಸ್ಕೃತಿ, ಜನಾಂಗೀಯ ಶ್ರೇಷ್ಠತೆ, ಪ್ರಾದೇಶಿಕ ಆಸ್ಮಿತೆ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು, ತಮ್ಮ ಅಸಾಧ್ಯ ಸುಳ್ಳು ಹೇಳುವ ಪ್ರತಿಭೆ ಮೂಲಕ ಅಲ್ಪಸಂಖ್ಯಾತ, ದುರ್ಬಲ, ದಮನಿತ ಮತ್ತು ವಲಸಿಗರ ಮೇಲೆ ಬಹುಸಂಖ್ಯಾತರನ್ನು ಎತ್ತಿ ಕಟ್ಟುತ್ತಿದ್ದಾರೆ. ಎರಡು: ಈ ಬಲಪಂಥ ಮತ್ತು ಅವರ ವಿಚಾರಗಳನ್ನು ವಿರೋಧಿಸುವ ಶಕ್ತಿಗಳು. ವಿಪರ್ಯಾಸ ಎಂದರೆ, ಬಲಪಂಥ ಶಕ್ತಿಗಳು ತಮ್ಮ ಉದ್ದೇಶ ಮತ್ತು ಅದನ್ನು ಸಾಧಿಸುವ ದಾರಿಯಲ್ಲಿ ಅಸಾಧ್ಯ ಒಗ್ಗಟ್ಟು ಹೊಂದಿದ್ದರೆ, ಅದನ್ನು ವಿರೋಧಿಸುವ ಶಕ್ತಿಗಳ ಉದ್ದೇಶ ಒಂದೇ ಆಗಿದ್ದರೂ, ಅದನ್ನೂ ಸಾಧಿಸುವ ದಾರಿಯಲ್ಲಿ ಭಿನ್ನ ಪ್ರಾಧಾನ್ಯತೆ, ಹಿತಾಸಕ್ತಿ ಮುಂತಾದ ವಿಚಾರಗಳಲ್ಲಿ ಒಡೆದುಹೋಗಿವೆ. ಹೀಗೆ ಒಡೆದುಹೋಗಿರುವ ಶಕ್ತಿಗಳ ನಡುವೆ ಸಮನ್ವಯದ ದಾರಿ ತೋರಿಸುವ ಅಥವಾ ಕನಿಷ್ಟ ತಮ್ಮಲ್ಲಿರುವ ಭಿನ್ನತೆಗೆ ಕಾರಣಗಳನ್ನು ಕಂಡುಕೊಳ್ಳಲು ಮತ್ತು ಆ ದಾರಿಯಲ್ಲಿ ಆಲೋಚಿಸಲು ‘ದ ಟ್ರಯಲ್ ಆಫ್ ದ ಶಿಕಾಗೊ 7’ ಸಿನಿಮಾ ಪ್ರೇರೇಪಿಸುತ್ತದೆ.

Democratic National Conventionನಲ್ಲಿ ಘಟಿಸಿದ ಗಲಭೆ ಮತ್ತು ಗಲಭೆಗೆ ರೂಪಿಸಿದ ಸಂಚಿನ ಅರೋಪದಡಿ ಬಂಧಿತರಾಗಿ ವಿಚಾರಣೆ ಎದುರಿಸುತ್ತಿರುವವರು: ಬ್ಲಾಕ್ ಪ್ಯಾಂಥರ್ ಪಾರ್ಟಿಯ ನ್ಯಾಷನಲ್ ಛೇರ್ಮನ್ ಬಾಬಿ ಸೀಲ್, ಸ್ಕೂಲ್ ಆಫ್ ಡೆಮಾಕ್ರಟಿಕ್ ಸೊಸೈಟಿಯ(SDS) ಟಾಮ್ ಹೇಡನ್ ಮತ್ತು ರೇನ್ನಿ ಡೇವಿಸ್, ಯೂತ್ ಇಂಟರ್‌ನ್ಯಾಷನಲ್ ಪಾರ್ಟಿ(Yippies)ಯ ಆಬ್ಬೀ ಹಾಫ್ಮನ್ ಮತ್ತು ಜೆರ್ರಿ ರುಬಿನ್, ನ್ಯಾಷನಲ್ ಮೊಬಿಲೈಜೇಷನ್ ಕಮಿಟಿ ಟು ಎಂಡ್ ದ ವಾರ್ ಇನ್ ವಿಯೆಟ್ನಾಂ(MOBE) ಸಂಘಟನೆಯ ಡೇವಿಂಡ್ ಡಿಲಿಂಜರ್ ಕೊನೆಯದಾಗಿ ಲೀ ವೈನರ್ ಮತ್ತು ಜಾನ್ ಪ್ರೊಯ್ನೆಸ್. ಇವರನ್ನು ಪ್ರತಿನಿಧಿಸುತ್ತಿರುವ ಡಿಫೆಂಡೆಂಟ್ ಲಾಯರ್ ವಿಲಿಯಮ್ ಕನ್ಸಟ್ಲರ್ ಮತ್ತು ಲಿಯೋನಾರ್ಡ್ ವೈನ್‍ಗ್ಲಾಸ್. ಸರ್ಕಾರದ ಪರ ವಾದ ಮಾಡುತ್ತಿರುವ ಪ್ರಾಸಿಕ್ಯೂಷನ್ ಲಾಯರ್ ರಿಚರ್ಡ್ ಸ್ಖಲಟ್ಜ್ ಮತ್ತು ಟಾಮ್ ಫೋರಾನ್. ನ್ಯಾಯಧೀಶ ಜ್ಯೂಲಿಸ್ ಹಾಫ್ಮನ್ (ಅಪಾದಿತ ಆಬ್ಬೀ ಹಾಫ್ಮನ್‍ಗೂ ಇವನಿಗೂ ಯಾವುದೇ ಸಂಬಂಧ ಇಲ್ಲ).

ನ್ಯಾಯಾಲಯದ ವಿಚಾರಣೆಯ ಪ್ರಾರಂಭದಲ್ಲೆ ಎರಡು ವಿಚಾರಗಳು ಸ್ಪಷ್ಟವಾಗುತ್ತವೆ. ಒಂದು: ಯುದ್ಧವಿರೋಧಿ ಸಮಾವೇಶದಲ್ಲಿ ನಡೆದ ಗಲಭೆಗೆ ಮೂಲಕಾರಣ ಪೋಲಿಸರು. ಎರಡು: ನ್ಯಾಯಾಧೀಶ ಪ್ರಕರಣದ ವಿಚಾರಣೆ ಮುನ್ನವೇ ಒಂದು ತೀರ್ಮಾನಕ್ಕೆ ಬಂದುಬಿಟ್ಟಿದ್ದಾನೆ ಮತ್ತವನು ಪೂರ್ವಗ್ರಹಪೀಡಿತ ಮತ್ತು ರೇಸಿಸ್ಟ್ ಎಂಬುದು. 12 ಜನ ಜ್ಯೂರಿಗಳಲ್ಲಿ ಇಬ್ಬರು ಆಪಾದಿತರ ಪರವಾಗಿ ಮರುಕಹೊಂದಿದ್ದ ಸಲುವಾಗಿ, ಸುಳ್ಳು ಸಾಕ್ಷ್ಯ ಸೃಷ್ಟಿಸಿ ಅವರನ್ನು ಬದಲಾಯಿಸಲಾಗುತ್ತದೆ.

ಇಡೀ ವಿಚಾರಣೆ ಹೇಗೆ unfair ಆಗಿದೆ, ನ್ಯಾಯಾಲಯ ಹೇಗೆ ಪ್ರಭುತ್ವದ ಪರವಾಗಿ ವರ್ತಿಸುತ್ತದೆ ಮತ್ತು ಥಿಯರಿಯಲ್ಲಿರುವ ನ್ಯಾಯಾಂಗಕ್ಕೂ ಆಚರಣೆಯಲ್ಲಿರುವ ನ್ಯಾಯಾಂಗಕ್ಕೂ ಹೇಗೆ ಭಿನ್ನ ಎಂಬುದನ್ನ ಪ್ರತಿ ಹಂತದಲ್ಲೂ ಗಮನಿಸಬಹುದು. ಇದು ಇಂದಿನ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನ ನೆನಪಿಸುತ್ತೆ. ಜೆಎನ್‍ಯು, ಸಿಎಎ-ಎನ್‍ಆರ್‌ಸಿ ವಿರೋಧಿ ಮತ್ತು ಭೀಮ ಕೊರೆಂಗಾವ್ ಪ್ರಕರಣಗಳಲ್ಲಿ ಶಿಕಾಗೊ 7 ಪ್ರಕರಣವನ್ನೂ ನಮ್ಮ ನ್ಯಾಯಾಂಗ ಮೀರಿಸಿದೆ.

ಸಿನಿಮಾದಲ್ಲಿ ಹೆಚ್ಚಾಗಿ ಕಾಡುವ ಏಳು ದೃಶ್ಯಗಳು/ಸಂದರ್ಭಗಳು:

1. ಬ್ಲಾಕ್ ಪ್ಯಾಂಥರ್ ಪಾರ್ಟಿಯ ಬಾಬಿ ಸೀಲ್ ಅವತ್ತಿನ ಸಮಾವೇಶದಲ್ಲಿ ಭಾಷಣ ಮಾಡುವ ಉದ್ದೇಶದಿಂದ ಭಾಗವಹಿಸಿದ್ದನಾದರೂ ಉಳಿದ 7 ಆಪಾದಿತರ ಜೊತೆ ಅವನು ಗುರುತಿಸಿಕೊಳ್ಳಲು ಒಪ್ಪಿಗೆ ಇಲ್ಲ, ಮತ್ತು ಅವನ ಪರ ವಾದ ಮಾಡಲು ಪ್ರತ್ಯೇಕ ವಕೀಲರನ್ನು ನೇಮಿಸಿಕೊಂಡಿದ್ದಾನೆ. ಆದರೆ ಆ ವಕೀಲರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ (ನಂತರ ಕೊಲೆಯಾಗುತ್ತದೆ). ಪ್ರತಿ ಬಾರಿ ಬಾಬಿ ತನ್ನ ಪರವಾಗಿ ತಾನೇ ವಾದ ಮಾಡಲು ನ್ಯಾಯಾಧೀಶನನ್ನು ಕೋರಿದಾಗ ನಿರಾಕರಿಸಲಾಗುತ್ತದೆ. ಕೊನೆಗೊಮ್ಮೆ ಬಾಬಿ ನ್ಯಾಯಾಧೀಶನ ವಿರುದ್ಧ ಕೂಗಾಡುತ್ತಾನೆ. ನ್ಯಾಯಾಧೀಶನ ನಿರ್ದೇಶನದ ಮೇರೆಗೆ ಪೊಲೀಸರು ಬಾಬಿಯನ್ನು ಪ್ರತ್ಯೇಕ ಕೋಣೆಗೆ ಕರೆದುಕೊಂಡು ಹೋಗಿ, ಹೊಡೆದು ಕೈಕಾಲುಗಳನ್ನು ಚೈನಿನಿಂದ ಬಿಗಿದು ಕಣ್ಣನ್ನು ಬಟ್ಟೆಯಿಂದ ಕಟ್ಟಿ ಕೋರ್ಟ್ ರೂಮ್‍ಗೆ ಕರೆತರಲಾಗುತ್ತದೆ. ನ್ಯಾಯಾಧೀಶನ ಈ ನಡೆವಳಿಕೆ ಪ್ರಾಸಿಕ್ಯೂಷನ್ ವಕೀಲರಿಗೂ ದಂಗುಬಡಿಸುತ್ತದೆ. ಆ ದಿನದ ವಿಚಾರಣೆ ಕೊನೆಯಲ್ಲಿ ನ್ಯಾಯಾಧೀಶರು ತೆರಳುವಾಗ ಅಪಾದಿತರು ಮತ್ತು ಅವರ ಪರ ವಕೀಲರು ಯಾರು ಎದ್ದು ನಿಲ್ಲದೆ (ಟಾಮ್ ಹೇಡನ್ ಹೊರತುಪಡಿಸಿ) ಅಗೌರವ ತೋರಿಸುವ ಮೂಲಕ ನ್ಯಾಯಾಧೀಶನ ಅಮಾನವೀಯ ನಡೆಯನ್ನು ವಿರೋಧಿಸುತ್ತಾರೆ.

2. ಆಬ್ಬೀ ಹಾಫ್ಮನ್ ವಿಚಾರಣೆ ಪ್ರಾರಂಭದಲ್ಲೆ ತಮ್ಮ ವಕೀಲ ಕನ್ಸಟ್ಲರ್‌ಗೆ ಹೇಳುತ್ತಾನೆ ‘ಇಲ್ಲಿ ನಡೆಯುತ್ತಿರುವುದು Political Trail. ಈ ಪ್ರಕರಣದಲ್ಲಿ ನಮ್ಮನ್ನ ಆಯ್ಕೆ(Pick)ಮಾಡಲಾಗಿದೆ’ ಎಂದು. ಕನ್ಸಟ್ಲರ್ ಇದನ್ನ ನಿರಾಕರಿಸುತ್ತಾನೆ. ‘ಇಲ್ಲಿ ನಡೆಯುವುದು ಎರಡೇ ರೀತಿಯ ಟ್ರಯಲ್ ಒಂದು ಸಿವಿಲ್ ಟ್ರಯಲ್ ಮತ್ತೊಂದು ಕ್ರಿಮಿನಲ್ ಟ್ರಯಲ್ ಅಷ್ಟೇ’ ಎನ್ನುತ್ತಾನೆ. ಯಾವಾಗ ಸುಳ್ಳು ಕಾರಣದ ಮೇಲೆ ಜ್ಯೂರಿಗಳ ಬದಲಾವಣೆಯಲ್ಲಿ ಪ್ರಾಸಿಕ್ಯೂಷನ್ ಮತ್ತು ನ್ಯಾಯಾಧೀಶರ ಕೈವಾಡ ಇರುವುದು ಗೊತ್ತಾಗುತ್ತದೋ ಅವಾಗ ಕನ್ಸಟ್ಲರ್‌ಗೂ ಇದೊಂದು ಪೊಲಿಟಿಕಲ್ ಟ್ರಯಲ್ ಅನ್ನೋದು ಅರಿವಾಗುತ್ತೆ.

3. ಆಪಾದಿತರಾದ ಟಾಮ್ ಹೇಡನ್ ಮತ್ತು ಆಬ್ಬೀ ಹಾಫ್ಮನ್ ನಡುವೆ ನಡೆಯುವ ವಾಗ್ವಾದ. ಹೇಡನ್ ಈಗಿರುವ ವ್ಯವಸ್ಥೆಯಲ್ಲಿ ನಂಬಿಕೆ ಇರುವವನು. ಆ ಫ್ರೇಮ್‍ವರ್ಕ್ ಒಳಗೇ ಪ್ರಗತಿಪರ ಬದಲಾವಣೆಗಳನ್ನ ತರಬೇಕು ಎಂದು ವಾದಿಸುತ್ತಾನೆ. ಬಾಬ್ಬಿ ಹೇಳೋದು, ಈಗ ನಾವು ಮಾಡಿಕೊಂಡಿರುವ ವ್ಯವಸ್ಥೆಯೇ ಸಮಾನತೆಯ ಸಮಾಧಿ ಮೇಲೆ ರೂಪುಗೊಂಡಿದೆ, ಸಮಾನತೆಯಾಗಿ ರೂಪುಗೊಳ್ಳಲು ಮೊದಲು ಸಾಂಸ್ಕೃತಿಕ ಕ್ರಾಂತಿಯಾಗಬೇಕು ಅನ್ನುತ್ತಾನೆ. ಮುಂದಿನ ಅಮೆರಿಕ ಯುವಪೀಳಿಗೆ ನಿನ್ನಿಂದ ಹಿಂಸೆಗೆ ಇಳಿಯುತ್ತೆ ಎಂದು ಹೇಡೆನ್ ಅಬ್ಬೀಯನ್ನು ಮೂದಲಿಸುತ್ತಾನೆ.

4. ಕನ್ಸಟ್ಲರ್ ಮತ್ತು ವೈನ್‍ಗ್ಲಾಸ್ ಮಾಜಿ ಅಟಾರ್ನಿಯನ್ನು ವಿಚಾರಣೆಯ ಸಾಕ್ಷಿಯಾಗಲು ಕೇಳಲು ಅವರ ಮನೆಗೆ ಹೋದಾಗ ಜೊತೆಯಲ್ಲಿ ಹೇಡೆನ್ ಕೂಡ ಹೋಗುತ್ತಾನೆ. ಇವರನ್ನು ಸ್ವಾಗತಿಸುವ ಪರಿಚಾರಕಿ (ಕಪ್ಪು ಜನಾಂಗದ ಮಹಿಳೆ) ಹೇಡನನ್ನು ಕೇಳುತ್ತಾಳೆ – ‘ಪತ್ರಿಕೆಯಲ್ಲಿ ಓದಿದೆ, ನ್ಯಾಯಧೀಶ ಬಾಬಿ ಸೀಲ್‍ಗೆ ಮಾಡಿದ್ದನ್ನ ವಿರೋಧಿಸಿ ಯಾರು ಎದ್ದು ನಿಲ್ಲಲಿಲ್ಲ ನಿನ್ನನ್ನು ಬಿಟ್ಟು’ ಎಂದು. ಅದಕ್ಕೆ ಹೇಡನ್ ಸಾರಿ ಕೇಳುತ್ತಾನೆ.

5. ಸಿನಿಮಾದುದ್ದಕ್ಕೂ ಇವು ತುಂಬಾ ತಮಾಷೆಯ ಪ್ರಸಂಗಗಳೂ ಹೌದು ಮತ್ತು ಅಷ್ಟೇ ಪ್ರಖರ ವ್ಯಂಗ್ಯ ಮತ್ತು ಪ್ರತಿಭಟನೆಯ ಅದ್ಭುತ ಮಾದರಿಗಳೂ ಹೌದು. ಆಬ್ಬೀ ಹಾಫ್ಮನ್ ಮತ್ತು ಜೆರ್ರಿ ರುಬಿನ್ ವಿಚಾರಣೆಯ ಪ್ರತಿ ಹಂತದಲ್ಲೂ ನ್ಯಾಯಧೀಶನ ನಡೆಯನ್ನ ವಿಭಿನ್ನ ರೀತಿಯಲ್ಲಿ ವ್ಯಂಗ್ಯ ಮಾಡುತ್ತಾರೆ. ಇವರ ಪರ ವಕೀಲ ಕನ್ಸಟ್ಲರ್ ಇವರಿಗೆ ಎಚ್ಚರಿಕೆ ನೀಡಿದರೂ ಅವರು ನಿಲ್ಲಿಸುವುದಿಲ್ಲ. ಅವರು ಪ್ರತಿಯೊಂದು ವ್ಯಂಗ್ಯದ ನುಡಿಗಳು ವ್ಯವಸ್ಥೆಯ ಪ್ರತಿಮೆಗಳಂತೆ ಕಾಣುತ್ತವೆ.

6. ಆಬ್ಬೀ ಹಾಫ್ಮನ್ ವಿಚಾರಣೆಯ ಸಂದರ್ಭ. ಪ್ರಾಸಿಕ್ಯೂಷನ್ ಕೇಳುವ ಪ್ರತಿಯೊಂದು ಪ್ರಶ್ನೆಗೂ ಆಬ್ಬೀ ನೀಡುವ ಉತ್ತರ ಅದ್ಭುತವಾದದ್ದು. ಒಂದು ಹೊಸ ಅಲೋಚನೆಯೇ ಆ ಉತ್ತರದಲ್ಲಿದೆ. ಕನ್ಸಟ್ಲರ್ ‘ನೀನು ಯಾಕೆ ಬಂಧಿತನಾಗಿ ವಿಚಾರಣೆಯಲ್ಲಿದ್ದೀಯ ಗೊತ್ತೆ?’ ಎಂದು ಕೇಳಿದಾಗ ಆಬ್ಬೀಯ ಉತ್ತರ ‘ಕೆಲವು ಅಲೋಚನೆ (Idea) ಜೊತೆ ಸ್ಟೇಟ್ ಲೈನಲ್ಲಿ ಸೇರಿದ್ವಿ ಅಷ್ಟೇ. ನಮ್ಮ ಬಳಿ ಮಿಷನ್ ಗನ್ ಆಗಲಿ ಡ್ರಗ್ಸ್ ಆಗಲಿ, ಪುಟ್ಟ ಹೆಣ್ಣು ಮಕ್ಕಳಾಗಲಿ ಇರಲಿಲ್ಲ. ಕೇವಲ ಕೆಲವು ಅಲೋಚನೆ ಅಷ್ಟೇ, ಈ ಕಾರಣಕ್ಕೆ ನಮನ್ನು ಹೊಡೆಯಲಾಯಿತು, ಗ್ಯಾಸ್ ಗನ್ ಬಳಸಲಾಯಿತು, ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ’ ಎನ್ನುತ್ತಾನೆ.

7. ವಿಚಾರಣೆಯ ಕೊನೆಗೆ ನ್ಯಾಯಾಧೀಶ ಅಪಾದಿತರ ಪರವಾಗಿ ಕೊನೆಯ ಮಾತುಗಳನ್ನಾಡಲು ಹೇಡನ್ನನಿಗೆ ಅವಕಾಶ ಮಾಡಿಕೊಡುತ್ತಾನೆ. ಜೊತೆಗೆ ಹೇಡನ್ ಮುಂದೆ ಒಂದು ಪ್ರಸ್ತಾವನೆಯನ್ನು ಇಡುತ್ತಾನೆ ‘ವಿಚಾರಣೆ ಪ್ರಾರಂಭದಿಂದಲೂ ನೀನು ಈ ದೇಶ ಮತ್ತು ನ್ಯಾಯಾಲಯಕ್ಕೆ ಗೌರವ ಸಲ್ಲಿಸಿದ್ದೀಯಾ. ಹಾಗಾಗಿ ನಿನ್ನ ಮಾತುಗಳು ಪೊಲಿಟಿಕಲ್ ಆಗದೆ, ನ್ಯಾಯಾಲಯಕ್ಕೆ ಅಗೌರವ ತೋರುವಂತದ್ದಾಗದೆ, ತುಂಬಾ ಸಂಕ್ಷಿಪ್ತವಾಗಿದ್ದರೆ ನಿನ್ನನ್ನು ವಿಶೇಷವಾಗಿ ಪರಿಗಣಿಸಲಾಗುವುದು’ ಎಂದು. ಟಾಮ್ ಹೇಡನ್ ವಿಚಾರಣೆ ಪ್ರಾರಂಭದ ದಿನದಿಂದ ಇಲ್ಲಿಯವರೆಗೆ ವಿಯೆಟ್ನಾಂ ಯುದ್ಧದಲ್ಲಿ ಮಡಿದ ಸುಮಾರು ನಾಲ್ಕು ಸಾವಿರ ಅಮೆರಿಕ ಯೋಧರ ಹೆಸರನ್ನು ಓದಲು ಪ್ರಾರಂಭಿಸುತ್ತಾನೆ. ಇದರಿಂದ ಅಸಾಧ್ಯ ಸಿಟ್ಟಾಗುವ ನ್ಯಾಯಾಧೀಶ ಕಿರುಚುತ್ತಾನೆ. ಕೋರ್ಟ್ ರೂಮ್‍ನ ಎಲ್ಲರೂ ಎದ್ದು ನಿಲ್ಲುತ್ತಾರೆ. ಮಡಿದ ಯೋಧರಿಗೆ ಗೌರವ ಸಲ್ಲಿಸುತ್ತಾರೆ. ಪ್ರಾಸಿಕ್ಯೂಷನ್ ವಕೀಲರು ಕೂಡ. ಇಂತಹ ಮನಸ್ಸಿನ ಮೇಲೆ ಗಾಢ ಪರಿಣಾಮ ಮೂಡುವ ಕ್ಲೈಮ್ಯಾಕ್ಸ್ ನಿಂದ ಸಿನೆಮಾ ಅಂತ್ಯಗೊಳ್ಳುತ್ತದೆ.

ನಿರ್ದೇಶಕ ಆರೋನ್ ಸೋರ್ಕಿನ್

ನಿರ್ದೇಶಕ ಆರೋನ್ ಸೋರ್ಕಿನ್ ಮೂಲತಃ ನಾಟಕ ರಚನೆಕಾರ ಮತ್ತು ಚಿತ್ರಕಥೆಗಾರ. ಹಲವು ಪ್ರಸಿದ್ಧ ಹಾಲಿವುಡ್ ಸಿನಿಮಾಗಳಿಗೆ (ಎ ಫಿವ್ ಗುಡ್ ಮೆನ್, ದ ಸೋಷಿಯಲ್ ನೆಟ್ವರ್ಕ್, ಸ್ಟೀವ್ ಜಾಬ್ಸ್ ಮುಂತಾದವು) ಚಿತ್ರಕಥೆ ಬರೆದಿದ್ದಾನೆ. ‘ದ ಟ್ರಯಲ್ ಆಫ್ ದ ಶಿಕಾಗೊ 7’ ಚಿತ್ರಕತೆ ಬರೆದದ್ದು 2007ರಲ್ಲಿ. ಪ್ರಾರಂಭದಲ್ಲಿ ಹಾಲಿವುಡ್ ಪ್ರಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಈ ಸಿನಿಮಾ ನಿರ್ದೇಶನ ಮಾಡಲು ಇಚ್ಛಿಸಿದ, ಕಾರಣಾಂತರಗಳಿಂದ ಇದು ಸಾಧ್ಯವಾಗುವುದೇ ಇಲ್ಲ. 2017ರಲ್ಲಿ ಸೋರ್ಕಿನ್ ಚೊಚ್ಚಲ ನಿರ್ದೇಶನದ ಸಿನಿಮಾ ‘ಮೊಲ್ಲೀಸ್ ಗೇಮ್’ (Molli’s Game) ನೋಡಿದ ಸ್ಪೀಲ್ಬರ್ಗ್ ‘ದ ಟ್ರಯಲ್ ಆಫ್ ದ ಶಿಕಾಗೊ 7’ ಸಿನಿಮಾವನ್ನ ಸೋರ್ಕಿನ್ ನಿರ್ದೇಶನ ಮಾಡಲಿ ಎಂದು ಆಶಿಸುತ್ತಾನೆ.

ಅಮೆರಿಕ ಒಬ್ಬ ಅತ್ಯಂತ ದುಷ್ಟ, ಅವಿವೇಕಿ, ಮನುಷ್ಯ ವಿರೋಧಿ, ಅಸಮರ್ಥ ಅಧ್ಯಕ್ಷನ ಕೈಯಲ್ಲಿ ಸಿಕ್ಕಿ ನಲುಗುತ್ತಿದ್ದಾಗ ಮತ್ತು ಈ ಅವಿವೇಕಿ ಪ್ರಪಂಚದ ಇತರೇ ದೇಶಗಳ ಇನ್ನಷ್ಟು ಅವಿವೇಕಿಗಳನ್ನು ಪ್ರೇರೇಪಿಸುವ ಹೊತ್ತಿನಲ್ಲಿ ಈ ತರದ ನಾಯಕರು ನಮಗೆ ಬೇಕಾ ಎಂದು ಪ್ರಶ್ನಿಸಿಕೊಳ್ಳಲು ಮತ್ತು ಆ ಮೂಲಕ ವಿವೇಕದ ನಿರ್ಧಾರ ತೆಗೆದುಕೊಳ್ಳುವ ಸಮಯಕ್ಕೆ ಸರಿಯಾಗಿ ಇಂತಹ ಒಂದು ಸಿನಿಮಾವನ್ನು ಸೋರ್ಕಿನ್ ನೀಡಿದ್ದಾನೆ. ಒಂದು ದೃಶ್ಯ ಮಾಧ್ಯಮವಾಗಿ ಸೋರ್ಕಿನ್ ಸಿನಿಮಾದಲ್ಲಿ ಒಂದಷ್ಟು ಕೊರತೆ, ಹೆಚ್ಚೆ ಅನಿಸುವಷ್ಟು ಮೆಲೋಡ್ರಾಮದ ಸಂಗತಿಗಳನ್ನು ಗುರುತಿಸಬಹುದಾದರೂ, ಇವುಗಳನ್ನು ದಾಟಿ ‘ದ ಟ್ರಯಲ ಆಫ್ ದ ಶಿಕಾಗೊ 7′ ಸಮಕಾಲೀನ ಸಂದರ್ಭಕ್ಕೆ ಬಹಳ ಮುಖ್ಯವಾದ ಸಿನಿಮಾವಾಗಿ ಎದ್ದು ನಿಲ್ಲುತ್ತದೆ.

ಈ ಬರೆಹ ಬರೆಯುವ ಹೊತ್ತಿಗೆ ಅಮೆರಿಕದಲ್ಲಿ ಹೊಸ ಗಾಳಿ ಬೀಸಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಗೆಲುವು ಸಾಧಿಸಿದೆ. ಈ ಬಾರಿ, ಶತಮಾನಗಳಿಂದ ದಬ್ಬಾಳಿಕೆಗೆ ಒಳಗಾಗಿರುವ ಅಸಂಖ್ಯಾತ ದಮನಿತರು ಹೊಸ ಕನಸಿನೊಂದಿಗೆ ಡೆಮಾಕ್ರಟಿಕ್ ಪಕ್ಷಕ್ಕೆ ಮತನೀಡಿದ್ದಾರೆ. ಈ ಹೊಸ ನಾಯಕರು ತಮ್ಮ ದೇಶ ವಿಶ್ವದ ದೊಡ್ಡಣ್ಣ ಎಂಬ ಆಹಂನಿಂದ ಹೊರಬಂದು ಬಾಬಿಸೀಲ್‍ನಂತಹ ದಮನಿತರ ಹಕ್ಕುಗಳನ್ನು ರಕ್ಷಿಸುವ ಮತ್ತು ಆಬ್ಬೀ ಹಾಫ್ಮನ್ ಅಂತವರ ಆಲೋಚನೆಗೆ ಬೆಲೆ ಕೊಡುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಶ್ರಮಿಸಲಿ ಎಂಬ ಆಶಯ.

ಯದುನಂದನ್‌ ಕೀಲಾರ

(ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು  ತೀಕ್ಷ್ಣವಾಗಿ ಶೋಧಿಸುತ್ತಾರೆ.)


ಇದನ್ನೂ ಓದಿ: ಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು…..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...