ಟೊಯೊಟಾ: 5 ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಅಹೋರಾತ್ರಿ ಪ್ರತಿಭಟನೆ!

ತಮ್ಮ ಮೆಲಿನ ದೌರ್ಜನ್ಯವನ್ನು ಕೊನೆಗೊಳಿಸುವಂತೆ ಮತ್ತು ದಿಢೀರ್ ಎಂದು ಘೋಷಿಸಿರುವ ಲಾಕೌಟ್ ಕ್ರಮವನ್ನು ಹಿಂಪಡೆಯಬೇಕೆಂದು ಟೊಯೊಟಾ ಮೋಟಾರ್ಸ್‌ ಕಾರ್ ಕಂಪನಿಯ ಕಾರ್ಮಿಕರು ಕಳೆದ 5 ದಿನಗಳಿಂದ ಬಿಡದಿಯಲ್ಲಿರುವ ಕಂಪನಿಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೋರಾಟನಿರತ ಕಾರ್ಮಿಕರು ಹೇಳುತ್ತಾರೆ.

ರಾಜ್ಯದ ಉಪಮುಖ್ಯಮಂತ್ರಿಗಳಾದ ಅಶ್ವತ್ ನಾರಾಯನ್ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಮಿಕ ಸಚಿವರು ಮತ್ತು ಕಾರ್ಮಿಕ ಕಮಿಷನರ್ ಅವರನ್ನೂ ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ. ಆದರೆ ಸರ್ಕಾರದ ಕಡೆಯಿಂದಾಗಲೀ ಅಥವಾ ಅಧಿಕಾರಿಗಳ ಕಡೆಯಿಂದಾಗಲೀ ಯಾವುದೇ ಗಮನಾರ್ಹ ಕ್ರಮ ಕೈಗೊಂಡಿಲ್ಲ ಎಂದು ಹೆಸರು ಹೇಳಲಿಚ್ಚಿಸದ ಹೋರಾಟಗಾರರೊಬ್ಬರು ನಾನು ಗೌರಿ.ಕಾಂ ಗೆ ಹೇಳಿದರು.

ಇದನ್ನೂ ಓದಿ: ಟೊಯೊಟಾ ಕಾರ್ ಕಂಪನಿ ಲಾಕ್‌ ಔಟ್?- ಬೀದಿಗಿಳಿದು ಪ್ರತಿಭಟಿಸುತ್ತಿರುವ 3500 ಕಾರ್ಮಿಕರು!

ಜಪಾನ್ ಮೂಲದ ಕಂಪನಿಯು 1999 ರಿಂದಲೂ ಬಿಡದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸಾವಿರಾರು ಕಾರ್ಮಿಕರು ಕಳೆದ 20 ವರ್ಷದಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವೈಜ್ಞಾನಿಕ ಕೆಲಸದ ಸಮಯ ಮತ್ತು ಕೆಲಸದ ಶಿಫ್ಟ್‌, ಪ್ರಶ್ನೆ ಮಾಡುವ ಕಾರ್ಮಿಕರು ಮತ್ತು ಕಾರ್ಮಿಕ ಮುಖಂಡರ ಅಮಾನತು, ಬಂಡವಾಳಶಾಹಿಗಳ ದರ್ಪ, ದಿಢೀರ್ ಲಾಕೌಟ್ ಸೇರಿದಂತೆ ಹತ್ತಾರು ಸಮಸ್ಯೆಗಳನ್ನಿಟ್ಟುಕೊಂಡು ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಟೊಯೊಟಾ ಕಂಪನಿಯ ಸುಮಾರು 3500 ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ರೈಲ್ವೇ ಖಾಸಗೀಕರಣದ ವಿರುದ್ಧ ಆನ್‌ಲೈನ್ ಸಹಿ ಸಂಗ್ರಹ: ನೀವೂ ಭಾಗವಹಿಸಲು ಇಲ್ಲಿದೆ ವಿವರ…

“ಮೊದಲಿನಿಂದಲೂ ನಮ್ಮ ಸಮಸ್ಯೆಗಳ ಬಗ್ಗೆ ನಾವು ಪ್ರಶ್ನೆ ಮಾಡುತ್ತಲೇ ಬಂದಿದ್ದೇವೆ. ಆದರೆ ಈ ರೀತಿ ಪ್ರಶ್ನೆ ಮಾಡುವವರ ವಿರುದ್ಧ ಆಡಳಿತ ಮಂಡಳಿಯು ಅನ್-ಆಥರೈಸ್‌ಡ್ ರಜೆಯ ಅಸ್ತ್ರವನ್ನು ಬಳಸಿ ಅವರನ್ನು ಕೆಲಸದಿಂದ ತೆಗೆಯುವ ಹುನ್ನಾರ ಮಾಡುತ್ತಿದೆ. ಜೊತೆಗೆ ಖಾಯಂ ಕಾರ್ಮಿಕರನ್ನು ಕೆಲಸದಿಂದ ತೆಗೆಯಬೇಕು ಎನ್ನುವ ಉದ್ದೇಶದಿಂದ ಕೆಲಸದ ಸಮಯವನ್ನು ಕಡಿಮೆಗೊಳಿಸಿ, ಉತ್ಪಾದನಾ ಮಟ್ಟವನ್ನು ಹೆಚ್ಚಿಸಬೇಕು ಎಂದು ಹೇಳುತ್ತಿದೆ. ನಿಜಕ್ಕೂ ಇದು ಅಮಾನವೀಯ ಮತ್ತು ಶೋಷಣೆಯಾಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿದ ಕಾರ್ಮಿಕ ಸಂಘದ ಪದಾಧಿಕಾರಿಯನ್ನು ಅಮಾನತು ಮಾಡಿದ್ದರು. ಈ ಹಿಂದೆಯೂ ಇದೇ ರೀತಿ ಇಬ್ಬರನ್ನು ಅಮಾನತು ಮಾಡಿದ್ದರು. ಆಡಳಿತದ ಈ ಕ್ರಮವನ್ನು ಕಾರ್ಮಿಕರೆಲ್ಲಾ ಒಟ್ಟಾಗಿ ಪ್ರಶ್ನಿಸಿದೆವು. ಆದರೆ ಇದನ್ನೆ ನೆಪ ಮಾಡಿಕೊಂಡು ‘ಕಾನೂನು ಬಾಹಿರ ಹೋರಾಟ ಮಾಡುತ್ತಿದ್ದಾರೆ ಎಂದು ಆಡಳಿತವು ಲಾಕೌಟ್ ಘೋ‍‍ಷಣೆಯನ್ನು ಮಾಡಿದೆ” ಎಂದು ಹೇಳಿದರು.

ಇದನ್ನೂ ಓದಿ: 40 ಐಟಿಐಗಳ ಖಾಸಗೀಕರಣಕ್ಕೆ ಮುಂದಾದ ಯೋಗಿ ಸರ್ಕಾರ: ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ

“ಈ ಕಂಪನಿಯಲ್ಲಿ ಕಾರ್ಮಿಕರು ರೋಬೋಟ್‌ಗಳಂತೆ ಕೆಲಸ ನಿರ್ವಹಿಸಬೇಕು ಎಂದು ಆಡಳಿತ ಹೇಳುತ್ತದೆ. ಹಾಗಾಗಿಯೇ 2010 ರ ನಂತರ ಇಲ್ಲಿಗೆ ನೇಮಿಸಿಕೊಳ್ಳುವ ಕಾರ್ಮಿಕರನ್ನು ವೈದ್ಯಕೀಯ ಪರೀಕ್ಷೆಯೊಂದಿಗೆ, ಭಾರತೀಯ ಸೇನೆಯಲ್ಲಿ ಮಾಡುವ ದೈಹಿಕ ಪರೀಕ್ಷೆಯನ್ನೂ ಮಾಡಿ ನೇಮಿಸಿಕೊಳ್ಳಲಾಗುತ್ತದೆ. ನಿರ್ಧಿಷ್ಟ ಸಮಯದಲ್ಲಿ ಇಷ್ಟು ದೂರ ಓಡಬೇಕು, ಇಷ್ಟು ಭಾರ ಎತ್ತಬೇಕು ಇನ್ನು ಮುಂತಾದ ಮಾನದಂಡಗಳನ್ನು ನಿಗದಿಪಡಿಸಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಆದರೆ ಈ ವಿಧಾನದ ಮೂಲಕ ಆಯ್ಕೆಯಾಗಿರುವ ಕಾರ್ಮಿಕರಿಗೂ ಸಹ ಈಗ, ಮೂಳೆ ಸವೆತ, ಮಿದುಳು ಬಳ್ಳಿಯ ಸಮಸ್ಯೆ, ಕಿಡ್ನಿ ಸ್ಟೋನ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಇದಕ್ಕೆ ಕಾರಣ ಇಲ್ಲಿನ ಅವೈಜ್ಞಾನಿಕ ಕೆಲಸದ ಸಮಯ ಮತ್ತು ಶಿಫ್ಟ್‌ ವ್ಯವಸ್ಥೆ.

ಇದನ್ನೂ ಓದಿ: ಎಲ್ಐಸಿ ಖಾಸಗೀಕರಣ ಪ್ರಸ್ತಾಪ : ಕೇಂದ್ರದ ವಿರುದ್ಧ ಅಧಿಕಾರಿಗಳು, ನೌಕರರ ಪ್ರತಿಭಟನೆ

“ಈ ಪ್ರತಿಭಟನೆಗೆ ತತ್‌ಕ್ಷಣದ ಕಾರಣ, ಪದಾಧಿಕಾರಿಗಳ ಅಮಾನತುಗೊಳಿಸುವಿಕೆ ಮತ್ತು ಕಂಪನಿ ಲಾಕೌಟ್ ಕ್ರಮವಾಗಿದ್ದು, ಧೀರ್ಘಕಾಲಿಕವಾಗಿ ನಮ್ಮಲ್ಲಿ ಹತ್ತಾರು ಸಮಸ್ಯೆಗಳಿವೆ. ಇವುಗಳಿಗೆ ನ್ಯಾಯ ಸಿಗುವವರೆಗೂ ನಾವು ನ್ಯಾಯಯುತವಾಗಿ ಅಹೋರಾತ್ರಿ ಧರಣಿ ಮಾಡುತ್ತೇವೆ” ಎಂದು ಹೇಳಿದರು.

ಕಂಪನಿಯ ಲಾಕ್‌ ಔಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಗಳು, “ಕಾರ್ಮಿಕರು ಕಾನೂನು ಬಾಹಿರ ಹೋರಾಟವನ್ನು ಮಾಡಿದ್ದಕ್ಕಾಗಿ ಈ ಕಂಪನಿಯನ್ನು ಲಾಕ್‌ ಔಟ್ ಮಾಡಲಾಗುತ್ತಿದೆ” ಎಂದಿದ್ದಾರೆ.

ಜಿಲ್ಲೆಯ ಕಾರ್ಮಿಕ ಕಮಿಷನರ್ ಅವರ ಕೇಛೇರಿಯಲ್ಲಿ ಸಂದಾನಕ್ಕೆಂದು ಕರೆದಿದ್ದಾಗಲೂ ಸಹ ಕಂಪನಿಯು ತನ್ನ ದರ್ಪವನ್ನು ತೋರಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಈ ಬಹುರಾಷ್ಟ್ರೀಯ ಕಂಪನಿಯು ದೇಶದ ಎಲ್ಲಾ ಕಾನೂನುಗಳನ್ನೂ ಸಾರಾಸಗಟಾಗಿ ಉಲ್ಲಂಘಿಸಿ ನಮ್ಮ ಕಾರ್ಮಿಕರನ್ನ ಶೋಷಣೆ ಮಾಡುತ್ತಿದೆ. ಆರಂಭದಲ್ಲಿ ಖಾಸಗೀಕರಣ, ಅಭಿವೃದ್ಧಿ, ನಮ್ಮ ದೇಶದ ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡುತ್ತೇವೆ ಎಂದು ಹೇಳಿಕೊಂಡು ಬಂದು, ಕಾಲ ಸಂದಂತೆ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಇದಕ್ಕೆ ಸರ್ಕಾರಗಳು ಸೊಪ್ಪು ಹಾಕುತ್ತವೆ. 1992 ರ ನಂತರ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ಇಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ನಮ್ಮ ದೇಶದಲ್ಲಿ ಜಾಗ ಕೊಡಲಾಗಿದೆ. ಅಂದಿನಿಂದಲೂ ಇಂತಹ ಸಮಸ್ಯೆಗಳನ್ನು ಸಾವಿರಾರು ಕಂಪನಿಗಳ ಕಾರ್ಮಿಕರು ಎದುರಿಸುತ್ತಲೇ ಇದ್ದಾರೆ. ಆದರೆ ತಮ್ಮ ಕೆಲಸ ಕಳೆದುಕೊಂಡು ಬೀದಿಗೆ ಬರುವ ಭಯಕ್ಕೆ ಅವರ್ಯಾರೂ ದನಿಯೆತ್ತುತ್ತಿಲ್ಲ. ಪ್ರಶ್ನಿಸುವ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರನ್ನು ಕಂಪನಿ ದಮನಿಸುತ್ತಿದೆ. ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಅದನ್ನೂ ಮೀರಿ ದನಿಯೆತ್ತಿದರೂ ನಮ್ಮ ಸರ್ಕಾರ ಅದಕ್ಕೆ ಬೆಲೆ ಕೊಟ್ಟು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದು ನಮ್ಮ ದೇಶದ ಪರಿಸ್ಥಿತಿ.

ಇದನ್ನೂ ಓದಿ: ಕುಸಿಯುತ್ತಿರುವ ಕಣ್ವ ಸಾಮ್ರಾಜ್ಯ: ಆತಂಕದಲ್ಲಿ ಲಕ್ಷಾಂತರ ಕಾರ್ಮಿಕರು

ಹಿಂದೆಂದಿಗಿಂತಲೂ ಇಂದು ಈ ಖಾಸಗೀಕರಣ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ನಮ್ಮ ದೇಶದ ಕಡೆ ಸೆಳೆದು ಅಭಿವೃದ್ಧಿ ಮಾಡಬೇಕು ಎನ್ನುವ ಯೋಚನೆ ಸರ್ಕಾರದ ಮತ್ತು ಸೋ ಕಾಲ್ಡ್‌ ಜನರಿಂದ ಕೇಳಿಬರುತ್ತಿದೆ. ಆದರೆ ಇದರ ಪರಿಣಾಮಗಳು ಏನಿರಬಹುದು ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಇದಾಗಿದೆ.

ಈಗಾಗಲೇ ಈ ಟೊಯೊಟಾ ಕಾರ್ಮಿಕರ ಸಮಸ್ಯೆಗಳಿಗೆ ರಾಜ್ಯದ ಕೆಲವು ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಬೆಂಬಲ ನೀಡಿವೆ. ಕಾರ್ಮಿಕರ ಈ ಸಮಸ್ಯೆಗಳನ್ನು ಸರ್ಕಾರ ಮತ್ತು ಆಡಳಿತ ಮಂಡಳಿ ಈ ಕೂಡಲೇ ಬಗೆಹರಿಸದಿದ್ದರೆ ಇನ್ನೂ ತೀವ್ರವಾದ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿವೆ.


ಇದನ್ನೂ ಓದಿ: ಎಎಪಿ ಪ್ರಣಾಳಿಕೆ ಬಿಡುಗಡೆ : ಸ್ವಚ್ಚತೆ, ಶಿಕ್ಷಣ, ಆರೋಗ್ಯಕ್ಕೆ ಒತ್ತು, ಪೌರಕಾರ್ಮಿಕರು ಮೃತಪಟ್ಟಲ್ಲಿ ಒಂದು ಕೋಟಿ ಪರಿಹಾರ…

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here