ಟೊಯೊಟಾ ಕಾರ್ ಕಂಪನಿ ಲಾಕ್‌ ಔಟ್?- ಬೀದಿಗಿಳಿದು ಪ್ರತಿಬಟಿಸುತ್ತಿರುವ 3500 ಕಾರ್ಮಿಕರು!

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಲಿಮಿಟೆಡ್ ಕಾರ್ಮಿಕರು ನಿನ್ನೆಯಿಂದ ಅಹೋರಾತ್ರಿ ಧರಣಿ ನೆಡೆಸುತ್ತಿದ್ದು, ಧಿಡೀರ್ ಲಾಕ್ ಔಟ್ ಮಾಡುವ ಕಂಪನಿಯ ನಿರ್ಧಾರವನ್ನು ವಿರೋಧಿಸಿ ಹಾಗೂ ಕಾರ್ಮಿಕರ ಕೆಲಸದ ಸಮಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಬೇಕೆನ್ನುವ ಬೇಡಿಕೆ ಸೇರಿದಂತೆ ಇನ್ನೂ ಹತ್ತಾರು ಬೇಡಿಕೆಗಳನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.

ಜಪಾನ್ ಮೂಲದ ಕಂಪನಿಯು 1999 ರಿಂದಲೂ ಬಿಡದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಸಾವಿರಾರು ಕಾರ್ಮಿಕರು ಕಳೆದ 20 ವರ್ಷದಿಂದಲೂ ಕೆಲಸ ಮಾಡಿಕೊಂಡು ಬಂದಿದ್ದಾರೆ. ಇದೀಗ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಟೊಯೊಟಾ ಕಂಪನಿಯ ಸುಮಾರು 3500 ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್‌ ಅವಧಿಯಲ್ಲಿ 1,550 ಟನ್ ಆಹಾರಧಾನ್ಯ ಹಾಳು!

ಕಂಪನಿಯ ಲಾಕ್‌ ಔಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಧಿಕಾರಿಗಳು, “ಕಾರ್ಮಿಕರು ಕಾನೂನು ಬಾಹಿರ ಹೋರಾಟವನ್ನು ಮಾಡಿದ್ದಕ್ಕಾಗಿ ಈ ಕಂಪನಿಯನ್ನು ಲಾಕ್‌ ಔಟ್ ಮಾಡಲಾಗುತ್ತಿದೆ” ಎಂದಿದ್ದಾರೆ.

ಈ ಕುರಿತು ನಾನು ಗೌರಿ.ಕಾಂ ಜೊತೆ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕ ಯೂನಿಯನ್ ಪದಾಧಿಕಾರಿಯಾದ ಗಂಗಾಧರ್, “ನಮ್ಮಲ್ಲಿ ಹಲವಾರು ಸಮಸ್ಯೆಗಳು ಮೊದಲಿಂದಲೂ ಇವೆ. ಕಂಪನಿ ಲಾಕ್‌ ಔಟ್ ಮಾಡುವುದಾಗಿ ಹೇಳುತ್ತಿರುವುದು ಇದು 3ನೇ ಬಾರಿ. ಆದರೆ ಲಾಕ್‌ಡೌನ್ ನಂತರ ನಮ್ಮ ಸಮಸ್ಯೆಗಳು ಮತ್ತಷ್ಟು ಜಟಿಲವಾಗಿವೆ. ಮೊದಲಿಗೆ ನಾವು ಕೆಲಸ ಮಾಡುವ ಶಿಫ್ಟ್‌ ವ್ಯವಸ್ಥೆಯೇ ಅವೈಜ್ಞಾನಿಕವಾಗಿದ್ದು, ಮೊದಲ ಶಿಫ್ಟ್‌ ಮಧ್ಯರಾತ್ರಿ 2 ಗಂಟೆಗೆ ಮುಗಿಯುತ್ತದೆ. ಎರಡನೇ ಶಿಫ್ಟ್‌ ಬೆಳಗಿನ ಜಾವ 3 ಗಂಟೆಗೆ ಆರಂಭವಾಗುತ್ತದೆ. ಪ್ರತಿ ವಾರವೂ ಈ ಶಿಫ್ಟ್‌ ಬದಲಾಗುತ್ತಲೇ ಇರುತ್ತದೆ. ಹಾಗಾಗಿ ದೈನಂದಿನ ಅವಶ್ಯಕ ಕೆಲಸಗಳಾದ ಊಟ-ನಿದ್ರೆಯಲ್ಲಿ ಏರುಪೇರಾಗಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ” ಎಂದು ಹೇಳಿದರು.

ಇದನ್ನೂ ಓದಿ: ಭಾರಿ ಮಳೆ, ಲಾಕ್‌ಡೌನ್ ಎಫೆಕ್ಟ್: ಮುಂದಿನ ವರ್ಷ ಉಪ್ಪಿನ ಕೊರತೆ ಸಾಧ್ಯತೆ

“ನಮ್ಮದು ಜಪಾನ್ ಮೂಲದ ಕಂಪನಿಯಾಗಿರುವುದರಿಂದ ಅಲ್ಲಿನಂತೆಯೇ ಕೆಲಸ ಮಾಡಬೇಕು ಎಂದು ಆಡಳಿತ ಹೇಳುತ್ತದೆ. ಉದಾಹರಣೆಗೆ, ಇಂದು ದಿನಕ್ಕೆ ನಮ್ಮಲ್ಲಿ 300 ಕಾರುಗಳು ಸಿದ್ಧವಾಗುತ್ತವೆ. ಹಾಗಾಗಿ ಒಬ್ಬ ವ್ಯಕ್ತಿಗೆ ದಿನದಲ್ಲಿ 480 ನಿಮಿಷ ಕೆಲಸ ಮಾಡಬೇಕಾಗುತ್ತದೆ. ಅಂದರೆ 1 ಕಾರಿಗೆ 3 ನಿಮಿಷದಂತೆ ಒಬ್ಬ ಕಾರ್ಮಿಕ ಕೆಲಸ ಮಾಡಬೇಕು ಎಂದು ಆಡಳಿತ ಹೇಳುತ್ತದೆ. ಇದೇ ಸಮಯವನ್ನು ಇಡೀ 300 ಕಾರುಗಳಿಗೂ ಅನ್ವಯಿಸಬೇಕು ಎಂದು ಹೇಳುತ್ತಾರೆ. ಅಂದರೆ ಮೊದಲ ಸೆಕೆಂಡಿನಿಂದ ಯಾವ ಸಾಮರ್ಥ್ಯದಲ್ಲಿ ಕೆಲಸ ಆರಂಭಿಸಿರುತ್ತೇನೋ ಅದನ್ನೇ ಕೊನೆಯ ಸೆಕೆಂಡ್‌ವರೆಗೂ ಉಳಿಸಿಕೊಂಡು ಕೆಲಸ ಮಾಡಬೇಕು”

“ಇದು ಒಂದು ರೀತಿಯಲ್ಲಿ ಉಸಿರು ಬಿಗಿಹಿಡಿದು ಕೆಲಸ ಮಾಡುವಂತೆ. ಇದರಲ್ಲಿ ಒಂದು ಕ್ಷಣ ಹೆಚ್ಚು-ಕಡಿಮೆಯಾದರೂ ಇಡೀ ಉತ್ಪಾದನೆಯನ್ನು ನಿಲ್ಲಿಸಿ ನಮ್ಮ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಈ ವ್ಯವಸ್ಥೆಯೇ ತುಂಬಾ ಕಷ್ಟವಾದುದಾಗಿದ್ದು, ಇದರ ವಿರುದ್ಧ ಹಲವು ವರ್ಷಗಳಿಂದ ಹೋರಾಡುತ್ತಲೇ ಇದ್ದೇವೆ. ಆದರೂ ಯಾವುದೇ ಪೂರಕ ಕ್ರಮ ಕೈಗೊಂಡಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನೆಲಕಚ್ಚಿದ್ದಾಗ ಅಂಬಾನಿ ಪ್ರತಿ ಗಂಟೆಗೆ ಸಂಪಾದಿಸಿದ್ದು ಎಷ್ಟು ಗೊತ್ತೇ?

“ಕಡಿಮೆ ಮಾನವ ಸಂಪನ್ಮೂಲ ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡಬೇಕು ಎಂದು ಕಂಪನಿಯೇ ಹೇಳುತ್ತದೆ. ಹಾಗಾಗಿ ಕಂಪನಿ ಪ್ರತಿ ವರ್ಷವೂ ಕೆಲವರನ್ನು ಕೆಲಸದಿಂದ ತೆಗೆಯುತ್ತದೆ. ಆದರೆ ಉತ್ಪಾದನೆ ಮಾತ್ರ ಅಷ್ಟೇ ಇರಬೇಕು ಎಂದು ಹೇಳುತ್ತದೆ. ಆದರೆ ಈಗ ಲಾಕ್‌ಡೌನ್‌ಗಿಂತ ಮೊದಲು ಒಂದು ಕಾರು ತಯಾರಿಸಲು ಒಬ್ಬ ಕಾರ್ಮಿಕ 3 ನಿಮಿಷ ದುಡಿಯಬೇಕಾಗಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ ಲಾಕ್‌ಡೌನ್‌ ನಂತರದಲ್ಲಿ 2.5 ನಿಮಿಷದಲ್ಲಿ ಅದೇ ಕೆಲಸವನ್ನು ಮುಗಿಸಬೇಕು ಎಂದು ಹೇಳುತ್ತದೆ”

“ಇದು ಯಾವ ನ್ಯಾಯ. ಉತ್ಪಾದನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ, ತಾಂತ್ರಿಕ ಸಹಕಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಸಂಬಳದಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಆದರೂ ಉತ್ಪಾದನೆ ಮಾತ್ರ ಹೆಚ್ಚಾಗಬೇಕು ಎಂದು ಹೇಳುತ್ತಿದ್ದಾರೆ. ಹಳೆಯ ನಿಯಮವೇ ನಮಗೆ ಹೊರೆಯಾಗಿರುವಾಗ ಈ ಹೊಸ ನಿಯಮ ಬಾಣಲೆಯಿಂದ ಬೆಂಕಿಗೆ ಹಾಕಿದಂತಾಗಿದೆ. ಅಷ್ಟಕ್ಕೂ ಈ ಕಂಪನಿಗೆ ವರ್ಷಕ್ಕೆ 20 ಸಾವಿರ ಕೋಟಿ ವ್ಯವಹಾರವಿದೆ. ಈ ವರ್ಷ 350 ಕೋಟಿ ಲಾಭವಾಗಿದೆ ಎಂದು ಕಂಪನಿಯೇ ಅಧಿಕೃತವಾಗಿ ಹೇಳಿಕೊಂಡಿದೆ” ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ: ಕೊರೊನಾ ಲಾಕ್‌ಡೌನ್; ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸುಳ್ಳುಸುದ್ಧಿಗಳೇ ಕಾರಣ: ಕೇಂದ್ರ ಸರ್ಕಾರ

“ಈಗಾಗಲೇ 40 ವರ್ಷ ದಾಟುತ್ತಿದ್ದಂತೆ ಕೆಲವರಿಗೆ ಮೂಲೆ ಸವೆತ ಸೇರಿದಂತೆ ಹಲವು ಖಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಇನ್ನು ಕೆಲಸದ ನಡುವೆ ಪ್ರತಿ 2 ಗಂಟೆಗೊಮ್ಮೆ ನಮಗೆ ನೀಡುವ 10 ನಿಮಿಷ ವಿಶ್ರಾಂತಿ ಸಮಯದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ವಿಶ್ರಾಂತಿ ಕೊಠಡಿಗೆ ಹೋಗಿ ಬರುವುದಕ್ಕೆ 5-6 ನಿಮಿಷ ಬೇಕು. ಹೀಗಿರುವಾಗ ನೀರು ಕುಡಿಯಲು, ಮೂತ್ರ ವಿಸರ್ಜಿಸಲೂ ಸಮಯವಿಲ್ಲ. ಇದರಲ್ಲಿ ವಿಶ್ರಾಂತಿಯ ಮಾತೇ ಇಲ್ಲ. ಕೆಲಸದ ಮಧ್ಯೆ ನೀರು ಕುಡಿಯಬೇಕಾದರೂ ಮ್ಯಾನೇಜರ್‌ಗೆ ಕರೆ ಮಾಡಿ, ಅವರು ಬಂದು ಪತ್ರ ಬರೆಸಿಕೊಂಡು ಅಪ್ಪಣೆ ಕೊಟ್ಟರೆ ಮಾತ್ರ ಹೋಗಿ ಕುಡಿಯಬೇಕು. ಇದು ನಮ್ಮ ಪರಿಸ್ಥಿತಿ. ಇವರು ಅಕ್ಷರಶಹ ಕಾರ್ಪೋರೇಟ್ ರೌಡಿಗಳಂತೆ ವರ್ತಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಾವು ಹೇಳಿಕೊಳ್ಳುವುದಕ್ಕಷ್ಟೇ ಕಾರ್ಪೋರೇಟ್ ಉದ್ಯೋಗಿಗಳು. ಆದರೆ ವಾಸ್ತವದಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾದರೂ ಇವರ ಬಳಿ ಅಪ್ಪಣೆ ಕೇಳುವ ಕಾರ್ಪೋರೇಟ್ ಗುಲಾಮರಾಗಿದ್ದೇವೆ. ಈ ಕಂಪನಿ, ಭಾರತದ ಮತ್ತು ರಾಜ್ಯದ ಯಾವುದೇ ಕಾನೂನುಗಳನ್ನೂ ಗೌರವಿಸದೇ ತನ್ನಿಷ್ಟದಂತೆ ನಮ್ಮನ್ನು ದುಡಿಸಿಕೊಳ್ಳುತ್ತಿದೆ. ಇದರ ವಿರುದ್ಧ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಸಭೆಗಳನ್ನು ನಡೆಸಿದ್ದೇವೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೂ ಕಾರ್ಪೋರೇಟ್‌ಗಳ ಪರ ಇರುವಂತೆ ವರ್ತಿಸುತ್ತಿದ್ದಾರೆ. ಆದರು ಯಾವುದೇ ಕ್ರಮ ಕೈಗೊಳ್ಳದಿರುವುದು ನಮ್ಮ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಮೊದಲೂ ಇದನ್ನೆಲ್ಲಾ ಪ್ರಶ್ನಿಸುವ ಅನೇಕರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಬೆದರಿಕೆ, ಅಮಾನತುಗಳಂತಹ ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಗಾಗಿ ಒಂದು ಸಭೆ ಮಾಡಿಕೊಳ್ಳೋಣ ಎಂದು ಮೊದಲ ಶಿಫ್ಟಿನ ಕಾರ್ಮಿಕರೆಲ್ಲವೂ ಸಭೆ ಸೇರಿದ್ದೆವು. ಈಗ ಅದನ್ನೇ ಕಾನೂನು ಬಾಹಿರ ಹೋರಾಟವೆಂದು ಕಂಪನಿಯನ್ನು ಲಾಕ್‌ ಔಟ್ ಮಾಡಲು ಮುಂದಾಗಿದೆ. ಆದರೆ ನಮಗೆ ನ್ಯಾಯ ಸಿಗುವವರೆಗೂ ನಾವು ಹೋರಾಡುತ್ತೇವೆ” ಎಂದು ಹೇಳಿದರು.


ಇದನ್ನೂ ಓದಿ: ಲಾಕ್‌ಡೌನ್ ವಿಧಿಸಿದ್ದು ನೀವು, ಈಗ ನೀವೇ ನೆರವು ನೀಡಿ: ಕೇಂದ್ರಕ್ಕೆ ಸುಪ್ರೀಂ ತಾಕೀತು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here