ಸಂವಿಧಾನದ 370ನೇ ವಿಧಿಯ ರದ್ದತಿಯನ್ನು ಎತ್ತಿಹಿಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಎರಡು ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
ಜಮ್ಮು ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್‌ನ ಮುಖ್ಯಸ್ಥ ಡಾಕ್ಟರ್ ಹುಸೇನ್ ಮತ್ತು ಜಮ್ಮು ಕಾಶ್ಮೀರ ಅವಾಮಿ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಮುಜಾಫರ್ ಶಾ ಅವರು ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
“370ನೇ ವಿಧಿಯನ್ನು ಕೊಲ್ಲಲು ಸಾಧ್ಯವಿಲ್ಲ. ನಾವು ಈ ವಿಷಯವವನ್ನು ನ್ಯಾಯಾಲಯದಲ್ಲಿ ವಾದಿಸುತ್ತೇವೆ” ಎಂದು ಮುಜಾಫರ್ ಶಾ ಹೇಳಿದ್ದಾಗಿ ವರದಿ ತಿಳಿಸಿದೆ.
370ನೇ ವಿಧಿಯನ್ನು ರದ್ದುಗೊಳಿಸಿರುವ ರಾಷ್ಟ್ರಪತಿಯವರ 2019 ರ ಆದೇಶದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಎತ್ತಿಹಿಡಿದಿದೆ. 370ನೇ ವಿಧಿ ಒಂದು ತಾತ್ಕಾಲಿಕ ನಿಯಮ ಎಂದು ನ್ಯಾಯಾಲಯ ತೀರ್ಪು ನೀಡುವೆ ವೇಳೆ ಹೇಳಿದೆ. 370ನೇ ವಿಧಿ ರದ್ದುಪಡಿಸಿ, ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸುಮಾರು 20ಕ್ಕೂ ಹೆಚ್ಚು ಅರ್ಜಿಗಳಿಗೆ ಸಂಬಂಧಿಸಿದ ನ್ಯಾಯಾಲಯ ತೀರ್ಪು ನೀಡಿತ್ತು.
ಈ ತೀರ್ಪಿನಲ್ಲಿ 1947 ರಲ್ಲಿ ಜಮ್ಮು ಮತ್ತು ಕಾಶ್ಮೀರವು ಭಾರತಕ್ಕೆ ಸೇರ್ಪಡೆಯಾದ ನಂತರ, ಅದರ ಆಂತರಿಕ ಸಾರ್ವಭೌಮತ್ವವು ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಅರ್ಜಿದಾರರು 370ನೇ ವಿಧಿ ವಾಸ್ತವವಾಗಿ ತಾತ್ಕಾಲಿಕ ನಿಬಂಧನೆ ಅಲ್ಲ, 1957ರಲ್ಲಿ ಜಮ್ಮು ಕಾಶ್ಮೀರ ಸಂವಿಧಾನ ಸಭೆಯ ವಿಸರ್ಜನೆಯ ನಂತರ ಶಾಶ್ವತತೆಯನ್ನು ಪಡೆದುಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : 370ನೇ ವಿಧಿ ರದ್ದತಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಅಪ್ರಜಾಸತ್ತಾತ್ಮಕ ಆಡಳಿತಕ್ಕೆ ಅಧಿಕೃತ ಮುದ್ರೆ


