ಅಮೆರಿಕದ ಖ್ಯಾತ ಸ್ಟಾಂಡ್‌ಅಪ್ ಕಮೆಡಿಯನ್ ಜಾರ್ಜ್ ಕಾರ್ಲಿನ್ ಮಾತು ಹೀಗಿದೆ: “ಕೋತಿ ನಿನ್ನ ಬೆನ್ನು ಬಿಟ್ಟಿತು ಎಂದ ಕ್ಷಣ ಸರ್ಕಸ್ ಪಟ್ಟಣ ಬಿಟ್ಟಿದೆ ಎಂದು ಅರ್ಥ ಅಲ್ಲ. ಇದು ರಾಜಕೀಯ ಆಯ್ಕೆಗಳ ಬಗ್ಗೆ ಮಾಡುವ ತಮಾಷೆ. ಈ ವ್ಯಂಗ್ಯ ಟ್ರಂಪ್ ಅಧಿಕಾರದಿಂದ ಕೆಳಗಿಳಿದ ಖುಷಿಗೆ ಅನ್ವಯಿಸಿದರು, ಆಳುವ ವರ್ಗಗಳು ಮತದಾರರಿಗೆ ಸೃಷ್ಟಿಸುವ ರಾಜಕೀಯ ಆಯ್ಕೆಯ ಹೇಗಿರುತ್ತವೆ ಎಂಬುದರ ಎಚ್ಚರಿಕೆ ಕೂಡ. ಟ್ರಂಪ್ ಬದಲಿಗೆ ಬಂದಿರುವ ಜೋ ಬೈಡೆನ್ ಕೂಡ ತನ್ನ ಯುದ್ಧಪರ ನೀತಿಗಳಲ್ಲಿ, ವಿದೇಶಿ ನೀತಿಗಳಲ್ಲಿ, ಕಾರ್ಪೊರೇಟ್ ಪರ ನೀತಿಗಳಲ್ಲಿ ಟ್ರಂಪ್ ಹಾಗೆಯೆ. ಟ್ರಂಪ್ ಮಾದರಿ ಜೋಕೆರ್ ರೀತಿ ವರ್ತಿಸುವುದಿಲ್ಲ ಎನ್ನುವ ವ್ಯತ್ಯಾಸವಷ್ಟೆ.
2014 ಅಕ್ಟೋಬರ್ ತಿಂಗಳ ಮೊದಲ ವಾರ. ಒಬಾಮ ಅಧಿಕಾರಾವಧಿಯ ಸಮಯ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಂದು ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್ ಒಬ್ಬ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ’ಅವರ ಮಿತ್ರ ರಾಷ್ಟ್ರಗಳಾದ ಟರ್ಕಿ, ಸೌದಿ, ಯುಏಇ ಇನ್ನಿತರೆ ಅರಬ್ ರಾಷ್ಟ್ರಗಳು ಸಿರಿಯಾದಲ್ಲಿ ಅಧ್ಯಕ್ಷ ಅಸ್ಸಾದ್‌ನನ್ನು ಶತಾಯಗತಾಯ ಕೆಳಗಿಳಿಸಲು ಕೋಟಿಗಟ್ಟಲೆ ಹೇಗೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿ ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದನೆ ಸೃಷ್ಟಿಸಿದವು ಮತ್ತು ಹೇಗೆ ಅಮೆರಿಕ ಈ ಎಲ್ಲದರ ಭಾಗವಾಗಿತ್ತು, ಆದ್ದರಿಂದ ಸುನ್ನಿ ನೆರೆಹೊರೆಯವರ ಒಕ್ಕೂಟವನ್ನು ಹೇಗೆ ಒಟ್ಟುಗೂಡಿಸಲು ಸಾಧ್ಯವಾಯಿತು’ ಎಂಬ ವಿಷಯಗಳನ್ನು ಬಹಿರಂಗಪಡಿಸಿದ್ದಲ್ಲದೆ ’ಇದೆಲ್ಲಾ ಆಗಿದ್ದು ಏಕೆಂದರೆ ಅಮೆರಿಕಕ್ಕೆ ಮತ್ತೊಮ್ಮೆ ಮುಸ್ಲಿಂ ರಾಷ್ಟ್ರಕ್ಕೆ ಹೋಗಿ ಆಕ್ರಮಣಕಾರರಾಗಲು ಸಾಧ್ಯವಿಲ್ಲ. ಅದರ ನೇತೃತ್ವವನ್ನು ಸುನ್ನಿಗಳು ವಹಿಸಬೇಕಾಗಿದೆ’ ಎಂದು ಹೇಳುತ್ತಾರೆ. ಅಷ್ಟರಲ್ಲೇ ಮೈಕ್ ಆಫ್ ಆಗುತ್ತದೆ ಮತ್ತು ನಂತರದ ಧ್ವನಿ ಕೆಲವಷ್ಟೇ ಮಾಧ್ಯಮಗಳಿಗೆ ಸಿಗುತ್ತವೆ. ನಂತರದಲ್ಲಿ ಈ ಸುದ್ದಿ ದೊಡ್ಡದಾಗುವಷ್ಟರಲ್ಲಿ ಬಿಡೆನ್ ತನ್ನ ಮಿತ್ರರಾಷ್ಟ್ರಗಳ ಕ್ಷಮೆ ಕೇಳುತ್ತಾರೆ.
ಟ್ರಂಪ್ ಆಡಳಿತದ ಇತ್ತೀಚಿನ ರಾಜತಾಂತ್ರಿಕ ಸಾಧನೆಯೆಂದರೆ ಕಚ್ಚಾ ತೈಲದೊರೆಗಳಾದ ಸೌದಿ, ಎಮಿರಾಟಿ, ಬ್ರಹರೈನ್, ಕುವೈಟ್, ಕತಾರ್, ಒಮನ್ ರಾಷ್ಟ್ರಗಳ ಆಳುವ ವರ್ಗಗಳನ್ನು ಇಸ್ರೇಲ್ ಜತೆಗೆ ಕೂಡಿಸಿದ್ದು. ವರ್ಷಗಳಿಂದ ಯುಎಇ, ಸೌದಿ ಮತ್ತು ಇತರ ಕೊಲ್ಲಿ ರಾಜಪ್ರಭುತ್ವಗಳು ಕದ್ದು ಮುಚ್ಚಿ ಇಸ್ರೇಲ್ ಜೊತೆ ಭದ್ರತೆ, ಗುಪ್ತಚರ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ಸಹಕರಿಸುತ್ತಿದ್ದವು. ಅರಬ್ ರಾಷ್ಟ್ರಗಳ ಸುತ್ತಲಿನಲ್ಲಿ ಬೆಳೆಯುತ್ತಿರುವ ಇರಾನಿನ ಪ್ರಭಾವ ಮತ್ತು ಕ್ಷೀಣಿಸುತ್ತಿರುವ ಅಮೆರಿಕ ಇಸ್ರೇಲ್ ಪ್ರಭಾವ ಈ ಅಸಾಮಾನ್ಯ ಒಕ್ಕೂಟಕ್ಕೆ ಕಾರಣವಾಗಿದೆ. ಇರಾನ್ ಬಹುತೇಕವಾಗಿ ಶಿಯಾ ಇಸ್ಲಾಂ ಅನುಸರಿಸಿದರೆ, ಅರಬ್ ರಾಜಮನೆತನಗಳು ಬಹುತೇಕವಾಗಿ ಸುನ್ನಿ ಇಸ್ಲಾಂ ಅನುಸರಿಸುತ್ತದೆ.

ಒಂದು ಕಡೆ ಬಹಿರಂಗಗೊಳ್ಳುತ್ತಿರುವ ಈ ಒಕ್ಕೂಟವಾದರೆ ಇನ್ನೊಂದೆಡೆ ಅರಬ್ ವಸಂತದ ಪ್ರಭಾವ ಇಳಿಮುಖವಾಗಿ ಅಲ್ಲಿನ ಬಹುತೇಕ ರಾಷ್ಟ್ರಗಳಲ್ಲಿ ಸರ್ವಾಧಿಕಾರ (ಈಜಿಪ್ಟ್), ಅರಾಜಕತೆ, ಗುಲಾಮರ ಮಾರಾಟ(ಲಿಬಿಯಾ), ಆಂತರಿಕ ಯುದ್ದ (ಸಿರಿಯಾ), ಯುದ್ಧದ ನಂತರ ಮರುನಿರ್ಮಾಣದ ಹೆಜ್ಜೆಗಳು (ಇರಾಕ್), ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತದ ನರಮೇಧ (ಯೆಮೆನ್) ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಕುತಂತ್ರ ತಾಂಡವವಾಡಿತ್ತಿದೆ. ಸತತ 40 ವರ್ಷಗಳಿಗಿಂತ ಹೆಚ್ಚು ಅಂತಾರಾಷ್ಟ್ರೀಯ ನಿರ್ಬಂಧಗಳಿಂದ ತತ್ತರಿಸಿಯೂ ಅಮರಿಕಗೆ ಮಣಿಯದೆ ಸೆಟೆದು ನಿಂತಿರುವ ಇರಾನ್ ಈಗ ಹೊಸ ಶತ್ರು. ಇರಾನಿನ ಪ್ರಭಾವ ಇರಾಕ್, ಸಿರಿಯಾ ಮತ್ತು ಯೆಮೆನ್ ಯುದ್ಧದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಗೋಚರಿಸುತ್ತಿದೆ. ಇಸ್ರೇಲ್, ಇರಾನ್, ಸಿರಿಯಾ, ಲೆಬನಾನ್, ಯೆಮೆನ್ ದೇಶದ ಕಲಹಗಳಲ್ಲಿ ಪರೋಕ್ಷ ಯುದ್ಧ ಸಾರಿವೆ.
ಸಿರಿಯಾ ಯುದ್ಧದ ನಂತರ ಇರಾನಿನ ಸೈನಿಕರು ಈಗ ಇಸ್ರೇಲ್ ಗಡಿಯವರೆಗೂ ವಿಸ್ತರಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದಕ ಪೆಡಂಭೂತವನ್ನು ಮಣಿಸುವಲ್ಲಿ ಇರಾನಿಯ ಕ್ರಾಂತಿಕಾರಿ ಸೈನಿಕರು ಬಹುಮುಖ್ಯ ಪಾತ್ರ ವಹಿಸಿದ್ದರು. ಮುಖ್ಯವಾಗಿ ಜನವರಿ 3, 2020ರಲ್ಲಿ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘಿಸಿ ಕೊಲ್ಲಲ್ಪಟ್ಟ ಇರಾನಿ ಕ್ರಾಂತಿಕಾರಿ ಸೈನಿಕ ಪಡೆಯ ಮುಖ್ಯಸ್ಥ ಜನರಲ್ ಸೊಲೈಮಾನಿ ಪಾತ್ರ ಬಹು ದೊಡ್ಡದು. ಒಂದು ಕಡೆ ಇರಾನ್ ದೇಶವನ್ನು ಅಮೆರಿಕ, ಇಸ್ರೇಲ್ ಮತ್ತು ಹೊಸ ಒಕ್ಕೂಟದ ಪಡೆಗಳು ಸುತ್ತುವರೆದರೆ. ಇರಾನಿನ ಸೈನಿಕರು ಇಸ್ರೇಲ್ ಮತ್ತು ಅರಬ್ಬೀ ರಾಜಪ್ರಭುತ್ವಗಳನ್ನೂ ಸುತ್ತುವರೆದಿದ್ದಾರೆ. ಸಾಂಪ್ರದಾಯಿಕ ಯುದ್ಧದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಗೆಲ್ಲಲಾಗುವುದಿಲ್ಲ. ಆದರೆ ಅಸಂಪ್ರದಾಯಕ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸಿದೆ. ಇರಾನ್‌ಗೆ ಸಾಮ್ರಾಜ್ಯಶಾಹಿ ರಶಿಯಾ ಮತ್ತು ಚೀನಾ ಬೆಂಬಲವಿಲ್ಲದೆ ಯಾವುದೇ ತರಹದ ಗೆಲುವು ಅಸಾಧ್ಯ. ಆದ್ದರಿಂದ ಪ್ರತಿರೋಧದ ಶಕ್ತಿಯಾಗಿ ಇರಾನ್, ರಶಿಯಾ ಮತ್ತು ಚೀನಾ ಒಂದಾಗುತ್ತಿದ್ದಾರೆ, ತನ್ನ ದುರಹಂಕಾರಿ, ಸರ್ವಾಧಿಕಾರಿ, ದಮನಕಾರಿ ನಡೆಗಳಿಂದ ಅರಬ್ ಒಕ್ಕೊಟ ಅಮೇರಿಕ ಮತ್ತು ಇಸ್ರೇಲ್ ಜೊತೆ ಗುರುತಿಸಿಕೊಳ್ಳುತ್ತಿದೆ.
ಸಾಮ್ರಾಜ್ಯಶಾಹಿ ಶಕ್ತಿಗಳ ಪೈಪೋಟಿ ಮತ್ತು ಇಸ್ಲಾಮಿಕ್ ಪ್ರಪಂಚದ ಮೇಲೆ ಬೆಳೆಯುತ್ತಿರುವ ಚೀನಾದ ಪ್ರಭಾವ
ಸೋವಿಯೆತ್ ಯೂನಿಯನ್ ಪತನದ ನಂತರ ಏಕಪಕ್ಷೀಯವಾಗಿದ್ದ ಜಾಗತಿಕ ರಾಜಕೀಯ ಚೀನಾ ಪ್ರಗತಿಯಿಂದ ಮತ್ತೊಮ್ಮೆ ಬಹುಮುಖ ಜಾಗತಿಕ ರಾಜಕೀಯಕ್ಕೆ ನಾಂದಿಯಾಗಿದೆ. ಚೀನಾ ತನ್ನ ರಾಜತಾಂತ್ರಿಕತೆ ಮತ್ತು ಆರ್ಥಿಕ ಶಕ್ತಿಯಿಂದ ಇಸ್ಲಾಮಿಕ್ ರಾಷ್ಟ್ರಗಳತ್ತ ಒಳ್ಳೆಯ ಸ್ನೇಹ ಮತ್ತು ಬಾಂಧವ್ಯವನ್ನು ಸಾಧಿಸಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗೆ ನೆರವಾಗುತ್ತಿದೆ. ಚೀನಾ ತನ್ನ ಎರಡನೆ ಸಿಲ್ಕ್ ರೋಡ್ ಯೋಜನೆಯಡಿ ಪಾಕಿಸ್ತಾನ, ಇರಾನ್, ಇರಾಕ್, ಸಿರಿಯಾ, ಈಜಿಪ್ಟ್, ಸೌದಿ, ಎಮಿರಾಟಿ, ಓಮನ್, ಕತಾರ್, ಟರ್ಕಿ, ಆಫ್ರಿಕಾದ ಉತ್ತರ ಭಾಗದ ಮುಸ್ಲಿಂ ರಾಷ್ಟ್ರಗಳು ಮತ್ತು ಆಗ್ನೇಯ ಏಷ್ಯಾದ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ ಬ್ರುನೈ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧಗಳನ್ನು ಹೆಚ್ಚಿಸಿಕೊಳ್ಳುತ್ತಿದೆ.

ತನ್ನ ತಂತ್ರಜ್ಞಾನ, ಮೂಲಸೌಕರ್ಯ ಯೋಜನೆಗಳು, ಬಂದರುಗಳು, ರೈಲ್ವೆ ಸಂಪರ್ಕ, ವ್ಯಾಪಾರ ವಹಿವಾಟು ಮೂಲಕ ತನ್ನ ಶಕ್ತಿಯನ್ನು ಶರವೇಗದಲ್ಲಿ ಬಲಪಡಿಸಿಕೊಳ್ಳುತ್ತಿದೆ. ಹೆಚ್ಚಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಚೀನಾ ’ಪಾಲುದಾರಿಕೆ’, ’ರಾಜಕೀಯ ಸಮಾನತೆ’, ಮತ್ತು ’ಇಬ್ಬರ ಸಹಭಾಗಿತ್ವದ ಗೆಲುವು’ ಸಿದ್ಧಾಂತದ ಸಹಕಾರಿಯಂತೆ ಕಂಡರೆ, ಅದೇ ಪಾಶ್ಚಾತ್ಯ ಅಮೆರಿಕದ ಅಫ್ಘಾನಿಸ್ತಾನ, ಇರಾಕ್, ಸಿರಿಯಾ, ಲಿಬಿಯಾ, ಸುಡಾನ್, ಯೆಮೆನ್ ಯುದ್ಧಗಳ ನಂತರ ಹಸ್ತಕ್ಷೇಪವಾದಿ ವೈರಿಯಾಗಿ ಕಾಣತೊಡಗಿದೆ. ಸೋವಿಯೆತ್ ಪತನದ ನಂತರ ಸುಮ್ಮನಿದ್ದ ರಶಿಯಾ ಮತ್ತೆ ತನ್ನ ಮಿಲಿಟರಿ ಸಾಮರ್ಥ್ಯನನ್ನು ಸಿರಿಯಾದಲ್ಲಿ ನಿರೂಪಿಸಿದೆ. ಆದರೆ ರಷ್ಯಾಗೆ ತನ್ನದೇ ಆದ ಆರ್ಥಿಕ ಸವಾಲುಗಳಿವೆ. ಆದ್ದರಿಂದ ಅದು ಚೀನಾಗೆ ಹತ್ತಿರವಾಗುತ್ತಿದೆ.
ಇವೆಲ್ಲದರಲ್ಲಿ ಹೆಚ್ಚಾಗಿ ನಷ್ಟ ಅನುಭವಿಸುತ್ತಿರುವುದೇ ಭಾರತ. ಮೋದಿ ಸರ್ಕಾರ ತನ್ನೆಲ್ಲ ಸಾಂಪ್ರದಾಯಿಕ ಸ್ನೇಹಗಳನ್ನು ಬದಿಗಿಟ್ಟು ಅಮೆರಿಕ ಇಸ್ರೇಲ್ ಮತ್ತು ಅರಬ್ಬೀ ರಾಜಮನೆತನಗಳ ಸ್ನೇಹಕ್ಕೆ ಕೈ ಚಾಚುತ್ತಿದೆ. ಅಮೆರಿಕದ ಒತ್ತಡದಿಂದ ಇರಾನಿನೊಂದಿಗಿನ ಐತಿಹಾಸಿಕ ಬಾಂಧವ್ಯವನ್ನು, ಅನನ್ಯ ಸ್ನೇಹವನ್ನು ಹಾಳು ಮಾಡಿಕೊಂಡಿರುವ ಭಾರತ ಚಾಬಹಾರ್ ಬಂದರು ಮತ್ತು ಇರಾನಿನ ಬಹುದೊಡ್ಡ ಕಚ್ಚಾ ತೈಲ ಭಾವಿ ಫಾರ್ಜಾಡ್-ಬಿ ಕಳೆದುಕೊಂಡಿದೆ. ತನ್ನ ಮುಸ್ಲಿಂ ದ್ವೇಷಿ ರಾಜಕಾರಣದಿಂದ ತನ್ನ ನೆರೆಹೊರೆಯ ರಾಷ್ಟ್ರಗಳೆನ್ನಲ್ಲ ದೂರ ಮಾಡಿಕೊಂಡಿರುವ ಭಾರತ ಈಗ ತನ್ನ ಸಾಂಪ್ರದಾಯಿಕ ಮಿತ್ರರಾಷ್ಟ್ರ ರಷ್ಯಾವನ್ನು ಕೂಡ ದೂರ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿ ರಷ್ಯಾದ ಅಂತರರಾಷ್ಟ್ರೀಯ ವ್ಯವಹಾರಗಳ ಮಂಡಳಿಯ ಅಂದ್ರೆ ಕೋರ್ಟುನೋವ್, ಚೀನಾದ ಗ್ಲೋಬಲ್ ಟೈಮ್ಸ್‌ನಲ್ಲಿ ಬರೆದಿರುವ ’ರಶಿಯಾ ಪೂರ್ವಕ್ಕೆ ಭಾರತ ಪಶ್ಚಿಮಕ್ಕೆ, ಸಂಬಂಧಗಳ ಹದಗೆಡುವಿಕೆ’ ಬರಹವೇ ಸಾಕ್ಷಿ.
ಮಧ್ಯಪ್ರಾಚ್ಯ ಏಷ್ಯಾ ಐತಿಹಾಸಿಕವಾಗಿ ಇಡೀ ಜಗತ್ತಿಗೆ ಬಹಳಷ್ಟು ಹೊಸದನ್ನು ಕೊಟ್ಟಿದೆ. ಒಳ್ಳೆಯ ಬದಲಾವಣೆಗಳಿಗೂ, ಕೆಟ್ಟ ಬದಲಾವಣೆಗಳಿಗೂ ನಾಂದಿ ಹಾಡಿದೆ. ಆದರೆ ಪ್ಯಾಲೆಸ್ಟೀನ್‌ಅನ್ನು ನಡುನೀರಿನಲ್ಲಿ ಕೈಬಿಟ್ಟು ಬಹಿರಂಗವಾಗಿ ಅನಾವರಣಗೊಳ್ಳುತ್ತಿರುವ ಈ ಸರ್ವಾಧಿಕಾರಿ ರಾಜಮನೆತನಗಳ ಒಕ್ಕೂಟದಿಂದ ಅರಬ್ ರಾಷ್ಟ್ರಗಳಿಂದಾಚೆಇರುವ ೮೦% ಮುಸಲ್ಮಾನರ ಮೇಲೆ ಯಾವ ಪರಿಣಾಮ ಬೀರುತ್ತದೆಯೆಂದು ಕಾದು ನೋಡಬೇಕಿದೆ.


