Homeಕರ್ನಾಟಕಯಾರೀತ, ಯಥಾಸ್ಥಿತಿಯ ಶೂಲಕ್ಕೇರಿಸುವ ಸರಹಪಾದ..

ಯಾರೀತ, ಯಥಾಸ್ಥಿತಿಯ ಶೂಲಕ್ಕೇರಿಸುವ ಸರಹಪಾದ..

- Advertisement -
- Advertisement -

ಪ್ರೊ. ನಟರಾಜ್ ಬೂದಾಳುರವರು ಅನುವಾದಿಸಿರುವ ’ಸರಹಪಾದ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಆಗಿನಿಂದ ಹಲವರ ತಲೆಯಲ್ಲಿ ಯಾರೀತ ’ಸರಹಪಾದ’ ಎಂಬ ಪ್ರಶ್ನೆ ಮೂಡಿದೆ. ಖುಷಿ ಪಡುವ ವಿಚಾರವೆಂದರೆ ಸುಮಾರು ಎರಡು ಸಾವಿರ ವರ್ಷಗಳ ನಂತರವಾದರೂ ಕನ್ನಡದ ಅಕೆಡೆಮಿಕ್ ಹಾಗೂ ಓದುಗ ವಲಯಕ್ಕೆ ’ಸರಹಪಾದ’ ಎಂಬ ’ಬೌದ್ಧಸಿದ್ಧ’ ಪರಿಚಿತನಾದನಲ್ಲ ಎಂಬುದು. ಬೌದ್ಧ ಮೀಮಾಂಸೆಯಲ್ಲಿ ಪ್ರತ್ಯೇಕವಾಗಿಯೇ ನಿಲ್ಲುವ ’ಸರಹ’ನ ದೋಹೆಗಳು ಎಂದೆಂದಿಗೂ ಪ್ರಸ್ತುತ. ಅದೆಷ್ಟೆಂದರೆ ಸರಹನ ದೋಹೆಗಳು ಸರಹನನ್ನೂ ವಿಡಂಬನೆ ಮಾಡಿಬಿಡುವಷ್ಟು ನಿತ್ಯ ನಿರಂತರ.

ಸರಹಪಾದ ಎಂದರೆ ’ಬಾಣ ಬಿಟ್ಟ ಗುರು’ ಎಂದರ್ಥ. ಈತನ ಮೂಲ ಹೆಸರು ರಾಹುಲಭದ್ರ. ನಳಂದ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿ ಅಲ್ಲಿಯೇ ಗುರುವಾದ ಈತನಿಗೆ ’ತಾಂತ್ರಿಕ ಸಿದ್ಧಿ’ ಪಡೆದ ಬಾಣ ತಯಾರಿಸುವ ಸ್ಮಶಾನವಾಸಿ ಶಬರಕನ್ಯೆ ಪರಿಚಯವಾಗುತ್ತಾಳೆ. ಮೊದಲ ಬೇಟಿಯ ಮೊದಲ ಮಾತಿನಲ್ಲಿಯೇ ’ಬುದ್ಧನ ತತ್ವವನ್ನು ಚರ್ಯೆ ಮತ್ತು ಅದರ ಗುರುತುಗಳಿಂದ ಅರಿಯಬಹುದೇ ಹೊರತು ಮಾತು ಅಥವಾ ಪುಸ್ತಕಗಳಿಂದಲ್ಲ’ ಎಂದು ರಾಹುಲಭದ್ರನಿಗೆ ’ಕಾಯಕವೇ ಜ್ಞಾನ’ ಎಂಬ ಪಾಠ ಮಾಡುತ್ತಾಳೆ. ಅಂದಿನಿಂದ ರಾಹುಲಭದ್ರ ಆಕೆಯನ್ನು ಗುರುವಾಗಿ ಸ್ವೀಕರಿಸಿ ನಂತರ ಅವಳನ್ನೇ ಮದುವೆಯಾಗಿ ಅವಳ ವೃತ್ತಿಯನ್ನೇ ತನ್ನದಾಗಿಸಿಕೊಂಡು ’ಸರಹ’ನಾಗುತ್ತಾನೆ. ಸ್ಮಶಾನದಲ್ಲಿಯೇ ವಾಸಿಸುತ್ತಾನೆ. ಆಕೆಯಿಂದಾಗಿ ಸ್ವತಃ ಯೋಗಿನಿ ತಂತ್ರ ಮತ್ತು ಮಹಾಸಿದ್ಧಿಯನ್ನು ಪಡೆದು ಮುಂದೆ ನಾಗಾರ್ಜುನನಂತಹ ಬೌದ್ಧ ಸಿದ್ಧನಿಗೆ ಗುರುವಾಗಿ ಸರಹಪಾದನಾಗುತ್ತಾನೆ.

ಸರಹನ ಕಾಲಮಾನ ಸುಮಾರು ಕ್ರಿ.ಶ ಒಂದನೇ ಶತಮಾನ ಎನ್ನಲಾಗುತ್ತದೆ. ಭಾರತದ ಜನಭಾಷೆಯಾಗಿದ್ದ ಅಪಭ್ರಂಶ ಭಾಷೆಯಲ್ಲಿ ಸರಹನ ಮೌಖಿಕ ದೋಹೆಗಳು ಹಾಡಾಗಿ ಹರಿದು ಬಂದಿವೆ. ಈತ ಪ್ರತಿಪಾದಿಸಿದ ಸಹಜಮಾರ್ಗ ಅಥವಾ ಮಧ್ಯಮಮಾರ್ಗ ಅಥವಾ ಮಹಾಸಿದ್ಧಿ ನೇಪಾಳ ಮತ್ತು ಟಿಬೆಟ್‌ಗಳಲ್ಲಿ ಶಾಖೆಗಳಾಗಿವೆ. ಈತ ಬ್ರಾಹ್ಮಣನಾಗಿದ್ದು ನಂತರದಲ್ಲಿ ಬೌದ್ಧ ಸಿದ್ಧನಾದನು. ಅಂಬೇಡ್ಕರರು ’ಪ್ರಾಚೀನ ಭಾರತದ ಇತಿಹಾಸವು ಬೌದ್ಧ ಮತ್ತು ಬ್ರಾಹ್ಮಣ ಧರ್ಮಗಳ ನಡುವಿನ ಸಂಘರ್ಷ’ ಎನ್ನುವಂತೆ ಸರಹನ ಕಾಲಕ್ಕೆ ಪ್ರಮುಖವಾಗಿ ಎರಡು ತಾತ್ವಿಕ ಧಾರೆಗಳಿದ್ದವು. ಒಂದು ಶ್ರಮಣಧಾರೆ ಮತ್ತೊಂದು ಬ್ರಾಹ್ಮಣ ಧಾರೆ. ಇವು ಜಾತಿ ಸೂಚಕವಲ್ಲದೇ ಜ್ಞಾನಸೂಚಕಗಳೆಂದು ನಟರಾಜ್ ಬೂದಾಳರು ಹೇಳುತ್ತಾರೆ. ಏಕೆಂದರೆ ಇವುಗಳ ನಡುವೆ ಚಲನೆ ಇತ್ತು. ಪೂರ್ವಮೀಮಾಂಸ ಭಾಷ್ಯಾಕಾರ ಕುಮಾರಿಲಭಟ್ಟನೇ ಇದಕ್ಕೆ ಸಾಕ್ಷಿ. ಮತ್ತೊಂದು ಬದಿಯಲ್ಲಿ ಪಂಪನೂ ಸಹ ಸಾಕ್ಷಿ ನುಡಿಯುತ್ತಾನೆ.

ಸರಹಪಾದನ ಬೌದ್ಧ ತಾತ್ವಿಕತೆಯು ಮಹಾಯಾನ ಹಾಗೂ ತಾಂತ್ರಿಕ ಆರಾಧನೆಯ ಸಮ್ಮಿಲನವಾಗಿದೆ. ತಾಂತ್ರಿಕ ಆರಾಧನೆಯಲ್ಲಿ ಐದು ’ಮ’ ಕಾರಗಳು ಬಹುಮುಖ್ಯವಾಗಿವೆ ಎಂದು ಅಂಬೇಡ್ಕರರು ಗುರುತಿಸುತ್ತಾರೆ. ಅವುಗಳೆಂದರೆ 1. ಮದ್ಯಪಾನ 2. ಮಾಂಸಾಹಾರ 3. ಮತ್ಸ್ಯಾಹಾರ 4. ಮುದ್ರಾಹಾರ (ಒಣಗಿದ ಅಥವಾ
ಹುರಿದ ಕಾಳು) 5. ಮೈಥುನ. ಈ ಪಂಚ ಪ್ರಾದಾನ್ಯತೆಗಳು ಸಾಂಪ್ರದಾಯಿಕ ಬೌದ್ಧ ಧಮ್ಮವನ್ನು ಬಹುದೂರದಿಂದ ಮತ್ತೆ ಬೌದ್ಧ ಸಿದ್ಧರ ಬಳಿಗೆ ಕರೆ ತರುತ್ತವೆ. ಮತ್ತೆ ಜಂಗಮಗೊಳಿಸಲು ಪ್ರಯತ್ನಿಸುತ್ತವೆ. ಲೌಕಿಕದಲ್ಲಿಯೇ ಬದುಕಬೇಕೆಂದು ಕಿವಿ ಹಿಂಡುತವೆ. ಬಯಲಾಗುತ್ತವೆ.

ಧ್ಯಾನವೂ ಬೇಡ, ವಿರಕ್ತಿಯೂ ಬೇಡ
ಮನೆಯಲ್ಲಿ ಸಂತೋಷದಿಂದಿರು
ಮಡದಿ ಮಕ್ಕಳ ಜೊತೆಗೆ ಸುಖಿಸು
ಅಲ್ಲಿ ಮುಕ್ತಿ ದೊರೆಯದೆ ಹೋದರೆ
ಸರಹ ನುಡಿಯುತ್ತಾನೆ
ಪರಿಜ್ಞಾನವ ಮತ್ತೆಲ್ಲಿಯೂ ಪಡೆಯಲಾರೆ

ಹೀಗೆ ಲೌಕಿಕ ಜೀವನ ನಡೆಸುತ್ತಲೇ ಬುದ್ಧರಾಗಬಹುದೆಂಬುದು ಸರಹಪಾದನ ಮೂಲ ಮಾರ್ಗವಾಗಿದೆ.

ಸರಹನ ಸುಪ್ರಸಿದ್ಧ ದೋಹೆಗಳು ಹೆಚ್ಚು ಸಂಗ್ರಹವಿರುವುದು ಟಿಬೆಟಿಯನ್ ಭಾಷೆಯಲ್ಲಿ. ಈತನ ದೋಹೆಗಳು ಎಲ್ಲಾ ರೀತಿಯ ವ್ಯರ್ಥ ಸಂಪ್ರದಾಯಗಳನ್ನು ವ್ಯಂಗ್ಯ ಮಾಡುತ್ತವೆ. ಕಣ್ಣು ಮುಚ್ಚಿಕೊಂಡು ’ಪುರಾತನ, ಸನಾತನ’ ಎಂಬುದನ್ನೆಲ್ಲಾ ಒಪ್ಪಿಕೊಳ್ಳಲು ಧಿಕ್ಕರಿಸುತ್ತವೆ. ಇಂದಿಗೆ ಮಾತ್ರ ಬಾಳಿ ಬದುಕು ಎಂದು ಸಾರುತ್ತವೆ. ಸರಹ ರಚಿಸಿದ ಒಟ್ಟು ಕೃತಿಗಳು 26. ಅವುಗಳಲ್ಲಿ ದೋಹೆಗಳೂ ಒಂದು ಭಾಗವಾಗಿದೆ. ಇವು ಜೆನ್ ಕತೆಗಳಷ್ಟು ಒಗಟಾಗಿರುವುದಿಲ್ಲ. ನೇರವಾಗಿಯೇ ಮುಖಾಮುಖಿಯಾಗುತ್ತವೆ. ಯಥಾಸ್ಥಿತಿವಾದವನ್ನು ಅಲ್ಲಗೆಳೆಯುವುದೇ ಅವುಗಳ ಮುಖ್ಯ ಕರ್ತವ್ಯವಾಗಿದೆ. ಸರಹಪಾದನಂತೆ ಇತಿಹಾಸದಲ್ಲಿ 84 ಬೌದ್ಧ ಸಿದ್ಧರನ್ನು ಗುರುತಿಸಲಾಗಿದೆ. ಅವರಲ್ಲಿ ತಿಲೋಪ, ಕಣ್ಹ ಇವನಷ್ಟೇ ಪ್ರಸಿದ್ಧರು.

ಸರಹ ಎಲ್ಲಾ ಧರ್ಮದ ಪೊಳ್ಳುತನಗಳನ್ನು ಬಯಲಿಗೆಳೆದು ವಾಸ್ತವದಲ್ಲಿ ಬದುಕುವಂತೆ ಪ್ರೇರೇಪಿಸುತ್ತಾನೆ. ಸ್ವತಃ ಬೌದ್ಧನಾಗಿದ್ದು ಬೌದ್ಧರನ್ನೂ ಬಿಡದೆ ತರಾಟೆಗೆ ತೆಗೆದುಕೊಳ್ಳುವುದು ಈತನ ವೈಶಿಷ್ಟ್ಯ. ಅಷ್ಟರಮಟ್ಟಿಗೆ ವಸ್ತುನಿಷ್ಠವಾದ ಜ್ಞಾನಶಾಖೆ ಸರಹನದ್ದು. ಶಬರಕನ್ಯೆ ಹೇಳಿಕೊಟ್ಟಂತೆ ಸರಹನ ಜ್ಞಾನದ ವ್ಯಾಖ್ಯಾನ ’ಶ್ರಮ’ವಾಗಿದೆಯೇ ಹೊರತು ಅಕ್ಷರವಲ್ಲ. ಸರಹನ ಸಹಜಮಾರ್ಗದಲ್ಲಿ ಬೆವರಿನ ತತ್ವಜ್ಞಾನವಿದೆ. ಇಂತಹ ಸಹಜ ತತ್ವಜ್ಞಾನಿ ನಿಷ್ಪಕ್ಷಪಾತವಾದ ಕೆಲವು ದೋಹೆಗಳು ಹೀಗಿವೆ.

ಬ್ರಾಹ್ಮಣ ವಿಡಂಬನೆ
ವ್ಯಾ! ಬ್ರಾಹ್ಮಣರು
ಯಾವುದು ಏನೆಂದು ಅವರಿಗೇನು ಗೊತ್ತು?
ಸುಮ್ಮನೆ ನಾಲ್ಕು ವೇದಗಳ ಬಾಯಿಪಾಠ ಒಪ್ಪಿಸುತ್ತಾರೆ
ಮನೆಯಲ್ಲಿ ಕೂತು ಮಣ್ಣು, ನೀರು
ದರ್ಬೆ ಹುಲ್ಲುಗಳನ್ನು ಹಿಡಿದು
ಮಂತ್ರಗಳನ್ನು ಗುಣುಗುಣಿಸುತ್ತಾರೆ
ಬೆಂಕಿಗೆ ಅರ್ಪಣೆ ಮಾಡುತ್ತಾರೆ

ಕೆಲಸವಿಲ್ಲದೆ ಹೋಮ ಮಾಡುತ್ತಾರೆ
ಘಾಟಿನ ಹೊಗೆಯಿಂದ ಕಣ್ಣು ಕೆಂಪಾಗಿಸಿಕೊಳ್ಳುತ್ತಾರೆ
ಏಕದಂಡಿ, ತ್ರಿದಂಡಿ, ಭಗವಾ ವೇಷ ತೊಟ್ಟು
ಜ್ಞಾನಿಗಳಂತೆ ಹಂಸೋಪದೇಶ ನೀಡುತ್ತಾರೆ

ಲೋಕವನ್ನು ಧಿಕ್ಕುತಪ್ಪಿಸುವ ಆ ಪೊಳ್ಳುಜನಕ್ಕೆ
ಧರ್ಮಾಧರ್ಮವೇನೆಂಬುದು ತಿಳಿದೇ ಇಲ್ಲ

ಪಾಶುಪತ ವಿಡಂಬನೆ
ಈ ಶೈವಸಾಧುಗಳಿಗೆ ಗೊತ್ತಿರುವುದು; ಮೈತುಂಬಾ ಬೂದಿ ಬಳಿದುಕೊಳ್ಳುವುದು
ತಲೆಯ ಮೇಲೆ ಜಡೆಗಟ್ಟಿದ ಕೂದಲ ಕುಪ್ಪೆ
ಕೂರಿಸುವುದು
ಮನೇಲಿ ಕೂತು ಯಾವಾಗಲೂ ಪೂಜೆ ಮಾಡುವುದು
ಮೂಲೇಲಿ ಕೂತು ಗಣ ಗಣ ಗಂಟೆ ಬಾರಿಸುವುದು

ಜೈನ ವಿಡಂಬನೆ
ಉದ್ದ ಉಗುರುಗಳ ಕೊಳಕು ಕ್ಷಪಣಕರು
ಬೆತ್ತಲೆ ತಿರುಗುತ್ತಾರೆ ಕೂದಲು ಕಿತ್ತುಕೊಳ್ಳುತ್ತಾರೆ
ನಗೆಪಾಟಲಿನ ಕ್ಷಪಣಕರು ಹೊರಗೆಲ್ಲೋ ಮೋಕ್ಷವ ಹುಡುಕಿ
ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಾರೆ

ಬೆತ್ತಲಾಗುವುದರಿಂದ ಮುಕ್ತಿ ಸಿಗುವುದಾದರೆ
ನಾಯಿನರಿಗಳಿಗೂ ಸಿಗಬೇಕು
ಬೋಳುಮಂಡೆಯಿಂದ ಸಿದ್ಧಿಯೆಂದಾದರೆ
ಯುವತೀ ನಿತಂಬಕ್ಕೆ ಸಿಗಬೇಕು
ಪಿಂಛದಿಂದ ಮುಕ್ತಿ ಎಂದಾದರೆ ನವಿಲು ನರಿಗಳಿಗೆ ಸಿಗಬೇಕು
ಸಸ್ಯಾಹಾರದಿಂದ ಜ್ಞಾನ ಸಿಗುವುದಾದರೆ
ಆನೆ ಕುದುರೆಗಳಿಗೆ ಸಿಗಬೇಕು
ಸರಹ ನುಡಿಯುತ್ತಾನೆ
ಕ್ಷಪಣಕರ ಮೋಕ್ಷದ ದಾರಿ ನನಗೆ ಒಪ್ಪಿಗೆಯಾಗದು
ತತ್ವರಹಿತ ಸಾಧನೆಯಿಂದ ಕೇವಲ ಜ್ಞಾನ ದೊರಕದು

ಬೌದ್ಧ ವಿಡಂಬನೆ
ಚೇಲಾ, ಭಿಕ್ಕು, ಸ್ಥವಿರರು ಎಂದು
ವೇಷವ ತೊಟ್ಟ ಪರಿವ್ರಾಜಕರು
ಕೆಲವರು ಸೂತ್ರಗಳಿಗೆ ವ್ಯಾಖ್ಯಾನ ಮಾಡಲು ಕುಳಿತರೆ
ಕೆಲವರು ಮಾಯಾದೃಷ್ಟಿಯ ಚಿಂತೆಯಲ್ಲಿ ಮುಳುಗುತ್ತಾರೆ
ಕೆಲವರು ಮಹಾಯಾನದ ಹಿಂದೆ ಧಾವಿಸಿದರೆ
ಮತ್ತೆ ಕೆಲವರು ಮಂಡಲ ಚಕ್ರಗಳಲ್ಲಿ ಸಿಕ್ಕಿಕೊಳ್ಳುತ್ತಾರೆ
ಇನ್ನು ಕೆಲವರು ಚತುಷ್ಕೋಟಿಯ ಸಾರಾಂಶ
ಹೇಳುವುದರಲ್ಲಿ ಮುಳುಗುತ್ತಾರೆ
ಮತ್ತೆ ಕೆಲವರಿಗೆ ನಿಜವೆನ್ನುವುದು ಆಕಾಶದಂತೆ ನಿಚ್ಛಳ
ಇನ್ನು ಕೆಲವರಿಗೆ ನಿಜವೆನ್ನುವುದು ಶೂನ್ಯಸಮ
ಇವರೆಲ್ಲ ಸಹಜವ ತೊರೆದು ನಿಬ್ಬಾಣದ ಹಿಂದೆ ಓಡುತ್ತಾರೆ
ಇವರ್‍ಯಾರಿಗೂ ಪರಮಾರ್ಥ ದೊರಕುವುದಿಲ್ಲ

ಹೀಗೆ ಸರಹ ಯಥಾಸ್ಥಿತಿವಾದಿಗಳಲ್ಲಿ ಯಾರನ್ನೂ ವಿಡಂಬನೆ ಮಾಡದೆ ಬಿಡಲಾರನು. ಈತನ ಸಿದ್ಧ ಪರಂಪರೆಯು ನಂತರದ ಭಕ್ತಿ, ಸೂಫಿ, ನಾಥ, ದತ್ತ, ಕಾಪಾಲಿಕ ಪಂಥದ ಮೇಲೂ ಪ್ರಭಾವ ಬೀರಿರುವಂತಿದೆ. ಕರ್ನಾಟಕದ ವಚನ ಚಳವಳಿ ಮತ್ತು ನೀಲಗಾರರು, ಗುಡ್ಡಪ್ಪ ಪರಂಪರೆಯ ಮೇಲೂ ಪ್ರಭಾವ ಬೀರಿದಂತಿದೆ.
ಸಂಶೋಧಿಸಲು ಇದೊಂದು ಸಮುದ್ರವಾಗಿದೆ. ಸರಹಪಾದನ ಬಾಣಗಳು ಅದೆಲ್ಲೆಲ್ಲಿ ನಾಟಿವೆಯೋ ಸಂಶೋಧಕರೇ ಕಂಡುಹಿಡಿಯಬೇಕಿದೆ. ಈ ಸಂಶೋಧನೆಗೆ ಸರಿಯಾದ ಅಡಿಪಾಯವನ್ನು ಪ್ರೊ. ನಟರಾಜ್ ಬೂದಾಳರು ಹಾಕಿಕೊಟ್ಟಿದ್ದಾರೆ. ಎರಡು ಸಾವಿರ ವರ್ಷಗಳ ಹಿಂದಿನ ಸರಹಪಾದ 1928ರಲ್ಲಿ ಫ್ರೆಂಚರಿಗೂ, 1954ರಲ್ಲಿ ಇಂಗ್ಲೀಷರಿಗೂ ದೋಹೆಗಳ ಮೂಲಕ ಪರಿಚಿತನಾಗಿದ್ದನು. ಆದರೆ ಭಾರತದ ಕರ್ನಾಟಕಕ್ಕೆ ಪರಿಚಯವಾಗಲು 2016ರವರೆಗೂ ಕಾಯಬೇಕಾಯಿತು. ಯಾಜಮಾನ್ಯ ಸಂಸ್ಕೃತಿಯೊಂದು ಸರಹಪಾದನನ್ನು ಭಾರತದಿಂದ ಓಡಿಸಿರುವಾಗ ಬೂದಾಳರಿಂದಾಗಿ ಸರಹಪಾದ ಮತ್ತೆ ಮನೆಗೆ ಮರಳಿದ್ದಾನೆ. ದಕ್ಕಿಸಿಕೊಳ್ಳುವುದು ಇಂದಿನ ಮತ್ತು ಮುಂದಿನ ತಲೆಮಾರಿಗೆ ಬಿಟ್ಟದ್ದು. ಸರಹಪಾದನ ಅಪಭ್ರಂಶವನ್ನು ಕನ್ನಡದ ಜೊತೆಗೆ ಮಾತಿಗಿಳಿಸಿದ ಬೂದಾಳರಿಗೆ ಕನ್ನಡಿಗರ ಕೃತಜ್ಞತೆಗಳು ಸಲ್ಲುತ್ತವೆ.

(ಈ ಲೇಖನ ಒಳಗೊಂಡಿರುವ ಎಲ್ಲ ಅನುವಾದಗಳು ಪ್ರೊ. ನಟರಾಜ್ ಬೂದಾಳು ಅವರದ್ದೇ)


ಇದನ್ನೂ ಓದಿ: ಬೌದ್ಧ ತಾತ್ವಿಕತೆಯ ಚಿಂತಕ ನಟರಾಜ ಬೂದಾಳು

ಇದನ್ನೂ ಓದಿ: ಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...