Homeಕರ್ನಾಟಕಬೌದ್ಧ ತಾತ್ವಿಕತೆಯ ಚಿಂತಕ ನಟರಾಜ ಬೂದಾಳು

ಬೌದ್ಧ ತಾತ್ವಿಕತೆಯ ಚಿಂತಕ ನಟರಾಜ ಬೂದಾಳು

- Advertisement -
- Advertisement -

ಎಸ್ ನಟರಾಜ ಬೂದಾಳು ಅವರು ಸಮಕಾಲಿನ ಕನ್ನಡದ ಬೌದ್ಧ ತಾತ್ವಿಕತೆಯ ಚಿಂತಕ. ಬೌದ್ಧ ತಾತ್ವಿಕತೆಯ ಪಥದಲ್ಲಿ ನಟರಾಜ ಬೂದಾಳು ಅವರ ಪಯಣ ಕಠಿಣವಾದದ್ದು. ಇದನ್ನು ವಿವಿರಿಸಲು ಕನ್ನಡದ ತತ್ತ್ವಪದಕಾರರಲ್ಲಿರುವ ವಿವಿಧ ಪಂಥಗಳು ನನಗೊಂದು ಹೊಳಹನ್ನು ನೀಡಿವೆ. ಅದು ಯಾವುದೆಂದರೆ, ತತ್ತ್ವಪದಕಾರರಲ್ಲಿ ಸಾಧಕನಿಗೆ ಎರಡು ಮಾರ್ಗಗಳಿವೆ. ಒಂದು: ಪಿಪಿಲಿಕ ಮಾರ್ಗ. ಎರಡನೆಯದು: ವಿಹಂಗಮ ಮಾರ್ಗ. ಪಿಪಿಲಿಕ ಮಾರ್ಗದಲ್ಲಿ ಸಾಧಕನ ನಡೆ ಇರುವೆಯಂತೆ ಸಾಗಿ, ಮರದಲ್ಲಿರುವ ಗುರುಕರುಣೆಯ ಹಣ್ಣನ್ನು ಪ್ರಯಾಸದಿಂದ ಪಡೆಯುವುದು. ವಿಹಂಗಮ ಮಾರ್ಗದಲ್ಲಿ ಸಾಧಕನು ಹಕ್ಕಿಯಂತೆ ಆಕಾಶದಿಂದ ಹಾರಿಬಂದು ಮರದಲ್ಲಿರುವ ಹಣ್ಣನ್ನು ಪಡೆಯುವುದು. ಈ ಎರಡೂ ಮಾರ್ಗಗಳೂ ಕಠಿಣವಾದುವುಗಳೆ! ಈ ರೂಪಕ ಕೊಡುವ ಹೊಳಹಿನಲ್ಲಿ ಹೇಳುವುದಾದರೆ, ಈ ಎರಡು ಮಾರ್ಗಗಳಲ್ಲಿ ನಟರಾಜ ಬೂದಾಳು ಅವರು ಪಿಪಿಲಿಕ ಮಾರ್ಗದ ಪಥಿಕ. ಹತ್ತಾರು ವರುಷಗಳ ನಿರಂತರ ಶ್ರದ್ಧೆ ಮತ್ತು ಅಧ್ಯಯನದಿಂದ ಸಾಧಕರಾಗಿ ಫಲವನ್ನು ಪಡೆದಿದ್ದಾರೆ.

ಹೀಗೆ ಹಲವಾರು ವರುಷಗಳಿಂದ ಭಾರತೀಯ ದರ್ಶನಗಳ ಗಂಭೀರ ವಿದ್ಯಾರ್ಥಿಯಾಗಿರುವ ನಟರಾಜ ಬೂದಾಳು ಕನ್ನಡದ ಹೊಸ ತಲೆಮಾರಿನ ಚಿಂತಕರಾಗಿ ರೂಪುಗೊಂಡಿದ್ದಾರೆ. ಭಾರತೀಯ ಸಿದ್ಧ ಮತ್ತು ನಾಥ ಪರಂಪರೆ, ಅಲ್ಲಮಪ್ರಭು, ಬೌದ್ಧ ಪರಂಪರೆ ಹಾಗೂ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಗಳಲ್ಲಿ ಕರ್ನಾಟಕದ ಉದ್ದಗಲಕ್ಕೂ ಇರುವ ಗುರುಗದ್ದುಗೆಯ ಅಡಿಯಲ್ಲಿ ಗುರುಮಕ್ಕಳ ತತ್ತ್ವಗಳಿಗೆ ಅಹೋರಾತ್ರಿ ಶ್ರದ್ಧೆಯಿಂದ ಕಿವಿಗೊಟ್ಟು ಅವರ ಬೋಧನೆಗಳನ್ನು ತಮ್ಮ ಚಿಂತನೆಯ ತಳಹದಿಯನ್ನಾಗಿ ರೂಪಿಸಿಕೊಂಡಿದ್ದಾರೆ. ಹೀಗಾಗಿಯೇ ಅವರ ಬರೆಹಗಳ ಶೋಧ ಏಕರೂಪದ ಭಾರತೀಯ ಮೀಮಾಂಸೆ ಒಡ್ಡಿರುವ ಗ್ರಹಿಕೆಯ ತೊಡಕುಗಳನ್ನು ನಿವಾರಿಸಿಕೊಳ್ಳುತ್ತಾ, ಬಹುತ್ವದ ಭಾರತದಲ್ಲಿ ಆಳವಾಗಿ ಬೇರುಬಿಟ್ಟಿರುವ ಸ್ಥಳೀಯ ಸಂಸ್ಕೃತಿಗಳು ರೂಪಿಸಿಕೊಂಡಿರುವ ತತ್ತ್ವಚಿಂತನೆಗಳತ್ತ ಹೊರಳಿವೆ.

ಗುರುಮಕ್ಕಳಿಂದ ಪಡೆದ ಬೋಧಿಯ ಫಲವಾಗಿಯೇ ನಟರಾಜ ಬೂದಾಳು ಅವರು, ವಿದ್ವಾಂಸರ ಕಣ್ಣುಗಳಿಂದ ಮರೆಯಾಗಿದ್ದು, ಜನಸಾಮಾನ್ಯರ ನಡೆಯಲ್ಲಿ ಹಾಸುಹೊಕ್ಕಾಗಿದ್ದ ಕನ್ನಡ ತತ್ತ್ವಪದಗಳನ್ನು 50 ಸಂಪುಟಗಳಲ್ಲಿ ಹೊರತಂದಿರುವುದು ಚಾರಿತ್ರಿಕ ಮಹತ್ವದ್ದು. ಈ ಅಸಂಖ್ಯಾತ ತತ್ತ್ವಪದಗಳ ರಾಶಿಯನ್ನು ನೋಡಿದಾಗ, ಕನ್ನಡ ಸಾಹಿತ್ಯ ಎಂತಹ ಉಜ್ವಲ ಪರಂಪರೆಯೊಂದನ್ನು ಕಳೆದುಕೊಂಡಿತ್ತು ಎನಿಸುತ್ತದೆ. ಈಗ ಆ ಕೊರತೆ ನೀಗಿದೆ. ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನಕಾರರ ನಂತರ ಅದರಷ್ಟೇ ತಾತ್ವಿಕವಾಗಿ ಬಲವಾಗಿದ್ದ ತತ್ತ್ವಪದಗಳು ಕನ್ನಡದ ಅನುಭಾವಿ ಪರಂಪರೆಯ ಹೆಮ್ಮೆಯ ಹಾದಿಯೊಳಗಣ ಜ್ಯೋತಿ, ಬೀದಿಯೊಳಗಣ ಜ್ಯೋತಿಗಳಾಗಿ ಉರಿಯುತ್ತಿವೆ.

ನಟರಾಜ ಬೂದಾಳು ಅವರು ಬೌದ್ಧ ತಾತ್ವಿಕ, ವಜ್ರಯಾನದ ಪ್ರವರ್ತಕ ಹಾಗೂ ನಾಗಾರ್ಜುನನ ಗುರು ಸರಹಪಾದನ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ’ಸರಹಪಾದ’ (ಸಾಧಕ ಜಗತ್ತಿನ ಜೊತೆ ನಡೆಸಿದ ಮಾತುಕತೆ) ಕೃತಿಯ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಈ ಸಲ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ. ಬೌದ್ಧ ಸಹಜಯಾನದ ಸರಹಪಾದನ ಕೃತಿಗೆ ದೊರೆತಿರುವ ಈ ಪ್ರಶಸ್ತಿಯು, ಒಂದು ಶತಮಾನಗಳ ಇತಿಹಾಸವಿರುವ ಕನ್ನಡದ ಬೌದ್ಧ ವಾಙ್ಮಯ ಪರಂಪರೆಗೆ ಸಂದ ಗೌರವವಾಗಿದೆ.

ಭಾರತೀಯ ತತ್ವ ಮೀಮಾಂಸೆಯಲ್ಲಿ ಸಿದ್ಧ ಪರಂಪರೆಯ ಸಾಧಕರಾದ ಸರಹಪಾದ ಮತ್ತು ನಾಗಾರ್ಜುನನ ಹೆಸರು ಮುಂಚೂಣಿಯಲ್ಲಿರಬೇಕಿತ್ತು! ಆದರೆ ಭಾರತೀಯ ವಿದ್ವನ್ಮಣಿಗಳ ಮೇಲಾಟದಲ್ಲಿ ಬೌದ್ಧ ತಾತ್ವಿಕರ ಚಿಂತನೆಗಳು ಹಿಂದಕ್ಕೆ ಸರಿದಿರುವುದು ವಿಷಾದದ ಸಂಗತಿ. ಅಕ್ಷರ ಜ್ಞಾನ, ವೇದ, ಮಂತ್ರಗಳು ಹಾಗೂ ಜ್ಞಾಪಕ ಶಕ್ತಿಯೇ ಶಿಕ್ಷಣವಲ್ಲ! ಶ್ರಮ, ಬೆವರು, ಕೌಶಲಗಳೂ ಕೂಡ ಜ್ಞಾನವೇ ಎನ್ನುವುದನ್ನು ಪ್ರಧಾನವಾಗಿ ಸರಹಪಾದನ ಕೃತಿ ನಮಗೆ ತಿಳಿಸುತ್ತದೆ. ಹೀಗೆ ಜ್ಞಾನದ ವ್ಯಾಖ್ಯಾನವನ್ನೇ ಬದಲಿಸಿದ ಸರಹಪಾದನ ಚಿಂತನೆಗಳನ್ನು ಹಾಗೂ ಅವನ ದೋಹೆಗಳನ್ನು ನಮ್ಮ ಪರಿಚಿತ ನುಡಿಲಯಕ್ಕೆ ಅನುವಾದಿಸುವುದರ ಮೂಲಕ ಕನ್ನಡದ ಬೌದ್ಧಿಕ ಚಿಂತನೆಯ ಪರಂಪರೆಯನ್ನು ಬಲಪಡಿಸಿದ್ದಾರೆ. ’ಇದು ಈಗಾಗಲೇ ಇದೆ ಎಂಬುದು ಇನ್ನೊಂದು ಗ್ರಹಿಕೆ. ಸರಹನ
-ಸಹಜಯಾನ ಕನ್ನಡದ ಬದುಕಿನಲ್ಲಿ ಈಗಾಗಲೆ ಇದೆ. ಹೀಗೆ ಅಲ್ಲಮನನ್ನೂ ಸರಹನನ್ನೂ ಜೊತೆಗಿಟ್ಟು ನೋಡಲು ಸಾಧ್ಯವೆಂದು ಅನಿಸಿದೆ’ (ಸರಹಪಾದ: 2016). ಎಂದು ನಟರಾಜ ಬೂದಾಳು ತಮ್ಮ ಕೃತಿಯಲ್ಲಿ ಹೇಳುತ್ತಾರೆ.

ಹೀಗೆಯೇ ನಟರಾಜ ಅವರು ತಮ್ಮ ’ಪ್ರತ್ಯೇಕ ಬುದ್ಧ ಅಲ್ಲಮಪ್ರಭು’ ಕೃತಿಯಲ್ಲಿ ಅಲ್ಲಮನ ಮೂಲಕ ನಾಗಾರ್ಜುನನ್ನೂ, ನಾಗಾರ್ಜುನನ ಮೂಲಕ ಅಲ್ಲಮನನ್ನೂ ನಮ್ಮ ಗ್ರಹಿಕೆಯ ಸಮೀಪಕ್ಕೆ ತರುತ್ತಾರೆ. ಹೀಗೆ ಆ ದಡದಿಂದ ಈ ದಡಕ್ಕೆ, ಈ ದಡದಿಂದ ಆ ದಡಕ್ಕೆ ಲೀಲಾಜಾಲವಾಗಿ ಸಂಚರಿಸುತ್ತಾರೆ. ಇದೊಂದು ರೀತಿಯ ಅಲ್ಲಮನ ಲೀಲಾ ವಿನೋದ! ಹೀಗೆ ಅಲ್ಲಮ ಮತ್ತು ನಾಗಾರ್ಜುನನ್ನು ಬೆರೆಸುವುದೆಂದರೆ, ಅದು ನೀರನ್ನು ನೀರಿನೊಂದಿಗೆ ಬೆರೆಸಿದಂತೆ. ಈ ಕಾರಣಕ್ಕಾಗಿಯೇ ನಟರಾಜ ಬೂದಾಳು ಅವರ ಒಟ್ಟು ಬೌದ್ಧ ಕೃತಿಗಳ ಕೇಂದ್ರದಲ್ಲಿ ಕನ್ನಡದ ಪ್ರಜ್ಞೆ ಸದಾ ಅಂಗೈ ಮೇಲಣ ಜ್ಯೋತಿಯಂತೆ ಉರಿಯುತ್ತಿರುತ್ತದೆ. ಅದು ಅಲ್ಲಮನ ಜ್ಯೋತಿ. ಹೀಗೆ ಬೌದ್ಧ ತಾತ್ವಿಕತೆಯನ್ನು ಕನ್ನಡದ್ದೇ ಎಂದು ಅಲ್ಲಮನ ಮೂಲಕ ನಿರೂಪಿಸಿ ನಮ್ಮನ್ನು ಗೆದ್ದುಬಿಡುತ್ತಾರೆ. ಇದಕ್ಕಾಗಿ ನಟರಾಜ ಬೂದಾಳು ಅವರು ಅಭಿನಂದನಾರ್ಹರು.

ಕನ್ನಡದ ಬೌದ್ಧ ವಾಙ್ಮಯದಲ್ಲಿ ಎರಡು ಕವಲುಗಳಿವೆ. ಒಂದು: ಬೌದ್ಧ ಧರ್ಮವನ್ನು ಜೀವದಯೆ, ಲೋಕ ಕಾರುಣ್ಯ, ಸಾಮರಸ್ಯದ ಬದುಕಿನ ದಾರಿದೀಪವಾಗಿ ತೋರಿಸುವ ಬೌದ್ಧ ಸಾಹಿತ್ಯ. ಎರಡನೆಯದು: ಬೌದ್ಧ ತಾತ್ವಿಕ ಚಿಂತನೆಯ ಮೂಲಕ ಲೋಕವ್ಯವಸ್ಥೆಯನ್ನು ವಿವರಿಸುವ ಕೃತಿಗಳು. ಮೊದಲನೆಯ ಮಾರ್ಗ ಕನ್ನಡಕ್ಕೆ ವಿಪುಲ ಸಂಖ್ಯೆಯ ಕೃತಿಗಳನ್ನು ಕೊಟ್ಟಿರುವುದನ್ನು ಚರಿತ್ರೆ ಹೇಳುತ್ತದೆ. ಆದರೆ ಎರಡನೆಯ ಮಾರ್ಗದಲ್ಲಿ ನಡೆದಿರುವ ಪ್ರಯತ್ನಗಳು ವಿರಳ. ’ಭಾರತೀಯ ಕಾವ್ಯ ಮೀಮಾಂಸೆ’ ಎಂದು ತನ್ನನ್ನು ತಾನು ಕರೆದುಕೊಂಡಿರುವ ಮೀಮಾಂಸೆ, ಬಹುತ್ವದ ಭಾರತದಲ್ಲಿರುವ ಬೇರೆ ಬೇರೆ ಭಾಷಿಕ ಆವರಣಗಳ ನೋಟಕ್ರಮವನ್ನು ನಿಯಂತ್ರಿಸುವ ಏಕರೂಪಿ ಸಂವಿಧಾನ. ತನ್ನನ್ನು ’ಭಾರತೀಯ’ ಎಂದು ಕರೆದುಕೊಳ್ಳುವ ಮೂಲಕ ಒಂದು ಲೋಕಗ್ರಹಿಕೆಯನ್ನು ನಮ್ಮ ಮುಂದಿಡುತ್ತದೆ. ಇದೂ ಒಂದು ಗ್ರಹಿಕೆಯ ಕ್ರಮ ಎಂದು ಒಪ್ಪೋಣ! ಆದರೆ ಭಾರತದ ಸಣ್ಣ ಸಣ್ಣ ಭಾಷಿಕ ಆವರಣಗಳ ಗ್ರಹಿಕೆಗಳಿಗೆ ನಿಜವಾದ ಅಪಾಯವಿರುವುದು ಇದರಿಂದಲೇ.

ಈ ನೆಲದ ಪ್ರಮುಖ ಮೂರು ಲಕ್ಷಣಗಳಲ್ಲಿ ಮೊದಲನೆಯದು: ಬಹುತ್ವ, ಎರಡನೆಯದು: ವಿಜ್ಞಾನ, ಮೂರನೆಯದು: ಸಂವಿಧಾನ. ಆದರೆ ಈ ಮೂರೂ ನೆಲೆಗಳಲ್ಲಿ, ವಸಾಹತುಶಾಹಿಯನ್ನು ಪ್ರತಿನಿಧಿಸುವ ’ಭಾರತೀಯಕಾವ್ಯ ಮೀಮಾಂಸೆ’ ಎನ್ನುವುದು ಪ್ರಾದೇಶಿಕ ಭಾಷಿಕವಲಯದ ಅಭಿವ್ಯಕ್ತಿಗಳನ್ನು ಪರಿಗಣಿಸದೆ ಇರುವುದರಿಂದ ಅದು ಭಾರತೀಯ ಹೇಗಾಗುತ್ತದೆ! ನಟರಾಜ ಬೂದಾಳರ ಪ್ರಮುಖಕೃತಿ ’ಕನ್ನಡಕಾವ್ಯ ಮೀಮಾಂಸೆ’ ಇದನ್ನೇ ತೀವ್ರವಾಗಿ ಪ್ರಶ್ನಿಸುತ್ತದೆ. ನಟರಾಜ ಬೂದಾಳು ಅವರ ತಾರ್ಕಿಕತೆ ಹರಿತವಾಗುವದು ಭಾರತೀಯ ಎಂದು ಕರೆಯುವ ಏಕರೂಪಿ ಸಂವಿಧಾನವನ್ನು ಪ್ರಶ್ನಿಸುವಲ್ಲಿ. ಇದು ಹೇಗಿದೆ ಎಂದರೆ, ಹುಲ್ಲೆ ಮರಿಯೊಂದು ಹೊಂಚುಹಾಕಿ ವ್ಯಾಘ್ರನ ಮೇಲೆ ಎರಗುವಂತೆ ಕಾಣುತ್ತದೆ. ಈ ರೂಪಕ ಕನ್ನಡ ಭಾಷೆಗಷ್ಟೇ ಸೀಮಿತವಲ್ಲ! ಭಾರತದ ಎಲ್ಲ ಸಣ್ಣ ಸಣ್ಣ ಭಾಷೆಗಳಿಗೂ ಅನ್ವಯವಾಗುತ್ತದೆ. ಯಾವುದು ನಮಗೆ ಬಂಧನ ಎನಿಸಿದೆಯೋ, ಅದೇ ಬಂಧನದಿಂದ ಬಿಡುಗಡೆ ಪಡೆಯುವ ತವಕ ಇವರ ಬರೆಹಗಳಲ್ಲಿ ಮೇಲಿಂದ ಮೇಲೆ ಕಾಣುತ್ತದೆ. ಹೀಗೆ ನಟರಾಜ ಬೂದಾಳು ಅವರ ಎಲ್ಲಾ ಕೃತಿಗಳು ಕನ್ನಡದಲ್ಲಿ ಬೌದ್ಧಚಿಂತನೆಯ ಸಾಮರ್ಥ್ಯವನ್ನು ವೃದ್ಧಿಸುತ್ತಿವೆ. ಇವರ ಬರೆಹಗಳು ಮುಖ್ಯವಾಗಿ ಭಾರತದಲ್ಲಿ ಏಕರೂಪಿ ಸಂಸ್ಕೃತಿಯು ಸೃಷ್ಟಿಸಿರುವ ಪೊಳ್ಳು ವಿಚಾರಗಳ ಉಲ್ಲಂಘನೆಯನ್ನು ಪ್ರತಿನಿಧಿಸುತ್ತವೆ.

ನಟರಾಜ ಬೂದಾಳು ಅವರು ತಮ್ಮ ಶೋಧದ ದಾರಿಯನ್ನು ಸ್ಪಷ್ಟವಾಗಿಯೇ ನಮ್ಮ ಮುಂದಿಡುತ್ತಾರೆ. ಅವರ ಪ್ರಕಾರ ’ಬೌದ್ಧಧರ್ಮ’ವೇ ಬೇರೆ, ’ಬೌದ್ಧತಾತ್ವಿಕತೆ’ಯೇ ಬೇರೆ. ’ಬೌದ್ಧದರ್ಶನ’ದ ಮುಖ್ಯಗುರಿ ಲೋಕದ ಜೀವಿಗಳನ್ನು ಸಂಕಟಗಳಿಂದ ಬಿಡುಗಡೆಗೊಳಿಸುವುದು, ಜೀವಿಗಳು ಸಾಮರಸ್ಯದಿಂದ ಬಾಳಲು ಅನುವು ಮಾಡಿಕೊಡುವುದೇ ಆಗಿದೆ. ಬೌದ್ಧ ತಾತ್ವಿಕತೆಯ ಗುರಿಯೂ ಕೂಡ ಲೋಕವನ್ನು ಸಂಕಟಗಳಿಂದ ಮುಕ್ತಿಗೊಳಿಸುವುದೇ ಆಗಿದೆ. ಎರಡರ ಗುರಿಯೂ ಒಂದೆ, ದಾರಿಯೂ ಒಂದೆ. ತಮ್ಮ ಬೌದ್ಧಾಸಕ್ತಿಯನ್ನು ಕುರಿತು ’ಬೌದ್ಧ ಮಹಾಯಾನದ ತತ್ವ ಪ್ರಯಾಣವೂ ಕನ್ನಡದಲ್ಲಿ ಸಂಭವಿಸಿದ್ದು, ಇದು ಆಧುನಿಕ ಚಿಂತನಾಕ್ರಮದಲ್ಲಿ ಮುಂದುವರೆಯುತ್ತಲೇ ಇದೆ. ಹಾಗೆ ನೋಡಿದರೆ ನನ್ನ ಮಾರ್ಗದರ್ಶಿ ಸೂತ್ರಗಳೆಂದರೆ ಬಹುತ್ವ, ನಿಸರ್ಗ ವಿವೇಕ ಮತ್ತು ಜಾತ್ಯತೀತ ಸಾಂವಿಧಾನಿಕ ನಡೆ. ಈ ಮೂರೂ ಅಲ್ಲಮನ ನಿಲುವುಗಳೇ ಆಗಿವೆ’ ಎಂದು ನಟರಾಜ ಬೂದಾಳು ಅವರು ಹೇಳುವ ಮಾತುಗಳು ಅವರ ಒಟ್ಟು ಕೃತಿಗಳ ತಾತ್ವಿಕ ಹಿನ್ನೆಲೆಯನ್ನು ವಿವರಿಸುತ್ತವೆ. ಹೀಗೆಯೇ ನಟರಾಜ ಬೂದಾಳು ಅವರು ಕನ್ನಡಕ್ಕೆ ಕೊಟ್ಟಿರುವ ಬೌದ್ಧದರ್ಶನದಲ್ಲಿ ಎದುರಾಗುವ ಪರಿಭಾಷೆಗಳನ್ನು ವಿವರಿಸಿಕೊಡುವ ’ಬುದ್ಧ ನಡೆ’ – ಈ ಮಾಲಿಕೆಯ ಪುಟ್ಟ ಹೊತ್ತಿಗೆಗಳು ಕನ್ನಡ ಬೌದ್ಧ ವಾಙ್ಮಯಕ್ಕೆ ಮೌಲಿಕವಾದ ಕೊಡುಗೆಗಳಾಗುತ್ತವೆ. ಬೌದ್ಧದರ್ಶನದ ಮಾರ್ಗವು ಲೋಕವನ್ನು ಸರಿಯಾಗಿ ಅರಿತು ಬಾಳುವ ನಿಸರ್ಗದ ವಿವೇಕವಾಗಿದೆ ಎಂದು ಈ ಸರಣಿಯ ಕೃತಿಗಳು ಮತ್ತೆ ಮತ್ತೆ ಹೇಳುತ್ತವೆ.

ನಟರಾಜ ಬೂದಾಳು ಅವರ ಸಮಗ್ರ ಹೊತ್ತಗೆಗಳು ನಮ್ಮ ಸಮಕಾಲೀನ ಜಗತ್ತಿನೊಂದಿಗೂ ಮಾತನಾಡುತ್ತವೆ. ಯಾವುದೇ ತತ್ವಸಿದ್ಧಾಂತಗಳು ಎಲ್ಲ ಕಾಲಕ್ಕೂ ಸಮಕಾಲೀನವಾಗಿರುವುದಿಲ್ಲ! ಅವುಗಳನ್ನು
ಸಮಕಾಲೀನಗೊಳಿಸಿಕೊಳ್ಳುವಲ್ಲಿಯೇ ಅವುಗಳ ಪ್ರಸ್ತುತತೆ ಮತ್ತು ಮೌಲಿಕತೆ ಇರುತ್ತದೆ. ಹೀಗೆ ಚಿಂತನೆಗಳನ್ನು ಸಮಕಾಲೀನಗೊಳಿಸಿಕೊಳ್ಳುವ ಕಲೆ ನಟರಾಜ ಬೂದಾಳರಿಗೆ ಸಿದ್ಧಿಸಿದೆ. ಹೀಗಾಗಿ ಬೌದ್ಧತಾತ್ವಿಕತೆ ಎನ್ನುವುದು ಎಂದೋ ಆಗಿಹೋಗಿರುವುದಲ್ಲ ಹಾಗೂ ಅದು ಜಡವಾದದ್ದೂ ಅಲ್ಲ! ಅದು ಸದಾ ಲೋಕದೊಂದಿಗೆ ಬದಲಾಗುವ, ಲೋಕಹಿತವನ್ನು ಬಯಸುವ ಮಾನವ ಕಾಳಜಿಯ ಚಿಂತನೆ. ಈ ಬಗೆಯ ತಾತ್ವಿಕತೆಯನ್ನು ನಟರಾಜರ ಬರೆಹಗಳು ಅಂತರ್ಗತಗೊಳಿಸಿಕೊಂಡಿವೆ. ಆದರೆ ನಾವು ನಟರಾಜ ಬೂದಾಳರ ಕೃತಿಗಳಿಗೆ ಪ್ರವೇಶ ಪಡೆಯುವ ಮುನ್ನ ಸರಹಪಾದ ಹೇಳಿರುವ ಮಾತುಗಳು ನಮ್ಮ ಕಿವಿಗಳನ್ನು ತುಂಬಲಿ:

ಏನನ್ನೂ ಹೊತ್ತು ತರಬೇಡ,
ನಿನ್ನನ್ನಂತೂ ಬೇಡವೇ ಬೇಡ
ನಿನ್ನೆಲ್ಲ ಯೋಚನೆಗಳ ಕೆಳಗಿಟ್ಟು
ನೀನಿರುವಂತೆ ಬಾ.

ನಟರಾಜ ಬೂದಾಳು ಅವರ ಪ್ರಕಟಿತ ಕೃತಿಗಳು:
1. ನಾಗಾರ್ಜುನನ ಮೂಲಮಾಧ್ಯಮಕಕಾರಿಕಾ
2. ಬೌದ್ಧಧರ್ಮ ಮತ್ತು ಅಲ್ಲಮಪ್ರಭು ತೌಲನಿಕ ಅಧ್ಯಯನ
3. ಸರಹಪಾದ
4 ನಾಗಾರ್ಜುನನ ನುಡಿ ಕತೆಗಳು
5. ಕನ್ನಡಕಾವ್ಯ ಮೀಮಾಂಸೆ
6. ಪ್ರತ್ಯೇಕ ಬುದ್ಧ ಅಲ್ಲಮಪ್ರಭು
7. ಮಾತಿನ ಮೊದಲು
8. ಹಿಂದಣ ಹೆಜ್ಜೆಯನರಿತಲ್ಲದೆ
9. ಸಂಸ್ಕೃತಿ ಮೀಮಾಂಸೆ

ಬುದ್ಧನಡೆ ಮಾಲಿಕೆಯ ಕೃತಿಗಳು:
1. ಮಧ್ಯಮ ಮಾರ್ಗ
2. ಪ್ರಜ್ಞಾಪಾರಮಿತ ಹೃದಯಸೂತ್ರ
3. ದಾವ್ ದ ಜಿಂಗ್
4. ಬೌದ್ಧ ಧರ್ಮದ ರಾಜನೀತಿ
5. ಪ್ರತೀತ್ಯ ಸಮುತ್ಪಾದ
6. ಮನಮಗ್ನತೆ

ತತ್ವಪದ ಸಂಪಾದನೆ:
1. ಶಂಕರಾನಂದಯೋಗಿ ಮತ್ತು ಇತರರ ತತ್ವಪದಗಳು
2. ತುರುವನೂರು ಲಿಂಗಾರ್ಯರ ತತ್ವಪದಗಳು
3. ತುಮಕೂರು ಜಿಲ್ಲೆಯ ತತ್ವಪದಕಾರರು
4. ಶಂಕರಾನಂದಯೋಗಿ ಮತ್ತು ಇತರರ ತತ್ವಪದಗಳ ವಾಚಿಕೆ
5. ಪ್ರಧಾನ ಸಂಪಾದಕನಾಗಿ, ಐವತ್ತು ತತ್ವಸಂಪುಟಗಳು ವಿವಿಧ ಸಂಪಾದಕರಿಂದ ಪ್ರಕಟಣೆಗೊಂಡಿವೆ.

ಜಿ ವಿ ಆನಂದಮೂರ್ತಿ

ಜಿ ವಿ ಆನಂದಮೂರ್ತಿ
ತುಮಕೂರು ಮೂಲದವರು. ಸಣ್ಣಕತೆಗಾರ ಮತ್ತು ಪ್ರಬಂಧಕಾರರಾಗಿ ಹಲವು ಮೌಲ್ಯಯುತ ಕೃತಿಗಳನ್ನು ನೀಡಿದ್ದಾರೆ. ’ಬುದ್ಧ ತೋರಿದ ದಾರಿ’, ’ಹೊಳೆಸಾಲು’, ’ಜಾಲಾರ ಹೂವು’, ’ಗುಣಸಾಗರಿ’, ’ಬುದ್ಧನ ಕಥೆಗಳು’ ಅವರ ಕೆಲವು ಪ್ರಕಟಿತ ಕೃತಿಗಳು.


ಇದನ್ನೂ ಓದಿ: ಪೊಳ್ಳು ಜಗದ್ಗುರುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಸರಹಪಾದ: ನಟರಾಜ ಬೂದಾಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...