ಮಹಾರಾಷ್ಟ್ರದ ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ ಅವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್ ಜಾತಿ ಪ್ರಮಾಣ ಪತ್ರ ರದ್ದು ಪಡಿಸಲು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ.
ನವನೀತ್ ಕೌರ್ ರಾಣಾ ಸ್ವತಂತ್ರ ಅಭ್ಯರ್ಥಿಯಾಗಿ, ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರಿಗೆ ಮೀಸಲಾಗಿರುವ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು, ಬಾಂಬೆ ಹೈಕೋರ್ಟ್ ಆದೇಶದಿಂದ ಸಂಸದೆ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಅಪಾಯದಲ್ಲಿತ್ತು.
ಜೂನ್ 9 ರಂದು ಆದೇಶ ನೀಡಿದ್ದ ಬಾಂಬೆ ಹೈಕೋರ್ಟ್, ಸಂಸದೆ ನವನೀತ್ ಕೌರ್ ರಾಣಾ ನಕಲಿ ದಾಖಲೆಗಳನ್ನು ನೀಡಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿ, 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿತ್ತು.
ಆದರೆ ನ್ಯಾಯಮೂರ್ತಿಗಳಾದ ವಿನೀತ್ ಸರಣ್ ಮತ್ತು ದಿನೇಶ್ ಮಹೇಶ್ವರಿ ಅವರ ರಜಾ ಪೀಠವು ಮಂಗಳವಾರ ಹೈಕೋರ್ಟ್ ತೀರ್ಪಿನ ಆದೇಶವನ್ನು ತಡೆಹಿಡಿದಿದೆ.
ಇದನ್ನೂ ಓದಿ: ಇಲ್ಲಿರುವ ಜಾತಿ ಸಮಸ್ಯೆಯನ್ನು ಮುಚ್ಚಿಡಬೇಕೆ? ಜಾತಿ ಬಗ್ಗೆ ಮಾತನಾಡಬಾರದೇ?: ಸತೀಶ್ ನಿನಾಸಂ
ಅಮರಾವತಿ ಸಂಸದೆ ಪರ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ, “ಮೋಚಿ” ಮತ್ತು “ಚಮಾರ್” ಪದಗಳು ಸಮಾನಾರ್ಥಕ ಪದ. ಪರಿಶೀಲನಾ ಸಮಿತಿಯು ಮೂಲ ದಾಖಲೆಗಳ ಆಧಾರದ ಮೇಲೆ ಸಂಸದರ ಜಾತಿ ಸ್ಥಿತಿಯನ್ನು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಹಲವಾರು ಪ್ರಮುಖ ದಾಖಲೆಗಳನ್ನು ನಿರ್ಲಕ್ಷಿಸಿದ್ದರಿಂದ ಬಾಂಬೆ ಹೈಕೋರ್ಟ್ ನಿರ್ಧಾರವು “ತಪ್ಪಾಗಿದೆ” ಎಂದು ಮುಕುಲ್ ರೋಹಟ್ಗಿ ವಾದಿಸಿದ್ದಾರೆ.
ಪ್ರಕರಣ ಸಂಬಂಧ ಆದೇಶ ತಡೆಹಿಡಿದಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿದೆ. ಅಲ್ಲಿಯವರೆಗೂ ಆದೇಶವನ್ನು ತಡೆಹಿಡಿಯಲಾಗಿದ್ದು, ಜುಲೈ 27 ರಂದು ಪ್ರಕರಣ ಬಗೆಹರಿಸಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: ಮೋದಿ ಮೆಚ್ಚಿಸಿ, ಕುರ್ಚಿ ಉಳಿಸಿಕೊಳ್ಳಲು ಹಿಂದಿ ಜಾಹೀರಾತಿಗೆ ಕೋಟ್ಯಾಂತರ ರೂ. ಸುರಿಯುತ್ತಿರುವ ಯಡಿಯೂರಪ್ಪ: ಆರೋಪ


