ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲೆ ದೇಶದ ಯಾವುದೇ ಭಾಗದಲ್ಲಿ ದೌರ್ಜನ್ಯ ನಡೆದರೂ SC/ST ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗಲಿದೆ. ಅದು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ವ್ಯಾಪ್ತಿಯು ಸೀಮಿತವಾಗಿಲ್ಲ. ನಿರ್ದಿಷ್ಟ ರಾಜ್ಯದಲ್ಲಿ ಮಾತ್ರ ಆ ಸಮುದಾಯದ ವ್ಯಕ್ತಿಗೆ ಅನ್ವಯಿಸುವುದಲ್ಲ, ದೇಶದಾದ್ಯಂತ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯವಾಗಲಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ, ಭಾರತಿ ಡಾಂಗ್ರೆ ಮತ್ತು ಎನ್‌ಜೆ ಜಮಾದಾರ್ ಅವರ ತ್ರಿಸದಸ್ಯ ಪೀಠವು ತಮ್ಮ ತೀರ್ಪಿನಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಒಂದು ಸಮುದಾಯದ ಜನರಿಗೆ ಆಗುವ ಅವಮಾನ ಮತ್ತು ಕಿರುಕುಳವನ್ನು ತಡೆಯುವ ಉದ್ದೇಶವನ್ನು ಹೊಂದಿದ್ದು, ಆ ಸಮುದಾಯಕ್ಕೆ ಮೂಲಭೂತ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳ ಭರವಸೆ ನೀಡುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಪರಿಶಿಷ್ಟ ವ್ಯಕ್ತಿ ಮೇಲೆ ದೌರ್ಜನ್ಯ ನಡೆದಿರಲಿ, ಕೃತ್ಯ ನಡೆದ ರಾಜ್ಯದಲ್ಲಿ ಆತನನ್ನು ಎಸ್‌ಸಿ ಅಥವಾ ಎಸ್‌ಟಿ ಎಂದು ಪರಿಗಣಿಸದಿದ್ದರೂ ಈ ಕಾಯ್ದೆಯಡಿ ಆ ವ್ಯಕ್ತಿಗೆ ರಕ್ಷಣೆ ನೀಡಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಒಬ್ಬ ವ್ಯಕ್ತಿಗೆ ಜಾತಿ ಅಥವಾ ಗುಂಪಿಗೆ ಸೇರಿದ ಇಬ್ಬರಿಗೆ ಜನಿಸಿರುವುದರಿಂದ ಜಾತಿ ತಾನಾಗಿಯೇ ಆತನಿಗೆ ಅಂಟಿಕೊಳ್ಳುತ್ತದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಒಬ್ಬ ವ್ಯಕ್ತಿಯು ತನ್ನ ಹುಟ್ಟಿದ ಜಾತಿಯನ್ನು ತೊಡೆದುಹಾಕಲು ಸಾಧ್ಯವಿಲ್ಲ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದಲ್ಲಿ ಜನಿಸಿದ ವ್ಯಕ್ತಿಗೆ ಅಂಟಿಕೊಂಡಿರುವ ಹಣೆಪಟ್ಟಿ ತನ್ನ ವೈಯಕ್ತಿಕ ಉನ್ನತಿ, ಸಾಮಾಜಿಕ ಉನ್ನತಿ ಏನೇ ಇರಲಿ, ಆದರೆ ಜಾತಿ ಹಣೆಪಟ್ಟಿ ಕಳಚಿಕೊಳ್ಳಲು ವ್ಯಕ್ತಿಗೆ ಸಾಧ್ಯವಾಗುವುದಿಲ್ಲ. ಇದು ವಿಚಿತ್ರವಾದುದು ಎಂದು ಕೋರ್ಟ್ ತೀರ್ಪಿನ ವೇಳೆ ಹೇಳಿದೆ.
ಇದನ್ನು ಓದಿ: ‘ಚೀನಾ’ ಎಂಬ ಪದದ ಉಚ್ಚಾರಣೆಗೂ ಪ್ರಧಾನಿ ಭಯಪಡುತ್ತಿದ್ದಾರೆ: ಕಾಂಗ್ರೆಸ್ ಟೀಕೆ


