Homeಅಂತರಾಷ್ಟ್ರೀಯಪಶ್ಚಿಮದಲ್ಲಿ ಧರೆಗುರುಳುತ್ತಿರುವ ಪ್ರತಿಮೆಗಳು.. ಆತ್ಮಾವಲೋಕನಕ್ಕೆ ಭಾರತೀಯರಿಗೂ ಸಕಾಲ

ಪಶ್ಚಿಮದಲ್ಲಿ ಧರೆಗುರುಳುತ್ತಿರುವ ಪ್ರತಿಮೆಗಳು.. ಆತ್ಮಾವಲೋಕನಕ್ಕೆ ಭಾರತೀಯರಿಗೂ ಸಕಾಲ

- Advertisement -
- Advertisement -

ಮೇ ತಿಂಗಳ ಕೊನೆಯ ವಾರದಲ್ಲಿ ಅಮೆರಿಕಾದ ಮಿನಿಯಾಪೋಲಿಸ್‌ನಲ್ಲಿ ಬಿಳಿಯ ಪೊಲೀಸನೊಬ್ಬ ಆಫ್ರಿಕನ್-ಅಮೇರಿಕನ್ ಜನಾಂಗದ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಆವರ ಕುತ್ತಿಗೆಯ ಮೇಲೆ ಮೊಣಕಾಲೂರಿ ದೌರ್ಜನ್ಯ ನಡೆಸಿದ ನಂತರ ಆತ ಹತನಾದ ಘಟನೆ ಅಮೆರಿಕಾ ಮತ್ತು ಹಲವು ಯೂರೋಪಿಯನ್ ದೇಶಗಳು ಹಾಗೂ ಆಸ್ಟ್ರೇಲಿಯಾದಲ್ಲಿ ಗಂಭೀರ ಪ್ರತಿಭಟನೆಯ ಸ್ವರೂಪ ಪಡೆದಿದೆ. ‘ಬ್ಲಾಕ್ ಲೈವ್ಸ್ ಮ್ಯಾಟರ್’ ಎಂಬ ಹೆಸರಿನಲ್ಲಿ ಜನರು ಬೀದಿಗೆ ಇಳಿದಿದ್ದು, ಸಮಗ್ರ ವ್ಯವಸ್ಥಿತ ಸುಧಾರಣೆಗಳಿಗೆ ಆಗ್ರಹಿಸುತ್ತಿದ್ದಾರೆ. ಈ ಪ್ರತಿಭಟನೆಗಳ ಭಾಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನೆಟ್ಟಿದ್ದ-ತಲೆ ಎತ್ತಿ ನಿಂತಿದ್ದ ಜನಾಂಗೀಯ ನಿಂದಕ ಪ್ರವೃತ್ತಿಯ ಹಲವು ವ್ಯಕ್ತಿಗಳ ಪ್ರತಿಮೆಗಳು ಧರೆಗುರುಳುತ್ತಿವೆ. ನಗರ ಪ್ರದೇಶಗಳ ಸ್ಥಳಗಳನ್ನು ಜಾತ್ಯಾತೀತಗೊಳಿಸಬೇಕು ಎಂಬ ಕೂಗಿನ ಭಾಗವೂ ಅದು.

ಬಿದ್ದ ಪ್ರತಿಮೆಗಳ ಸುತ್ತ ಒಂದು ಚಿಕ್ಕ ಪ್ರದಕ್ಷಿಣೆ

ಕಳೆದ ವಾರ ಅಮೆರಿಕಾದ ಬೋಸ್ಟನ್‌ನಲ್ಲಿ ಕ್ರಿಸ್ಟೊಫರ್ ಕೊಲಂಬಸ್‌ನ ಪ್ರತಿಮೆಯ ತಲೆಯನ್ನು ಕಡಿದು ಹಾಕಲಾಯಿತು. ಇನ್ನು ಕೆಲವು ಕಡೆ ಹಲವು ಕೊಲಂಬಸ್‌ನ ಪ್ರತಿಮೆಗಳನ್ನು ಉರುಳಿಸಿ ಕೆರೆ ಕಟ್ಟೆಗಳಲ್ಲಿ ಮುಳುಗಿಸಲಾಗಿದೆ. ಕೊಲಂಬಸ್ ಎಂಬುವವನು ಸಮುದ್ರಯಾನ ಮಾಡಿ ಹಲವು ಹೊಸ ಪ್ರದೇಶಗಳನ್ನು ಕಂಡು ಹಿಡಿದ ವ್ಯಕ್ತಿ ಎಂಬ ತಿರುಚಿದ ಧೀರಗಾತೆಯ ಇತಿಹಾಸವನ್ನಷ್ಟೇ ಓದಿದ ಹಲವರಿಗೆ ಇದು ಆಶ್ಚರ್ಯಕರ ಸಂಗತಿ ಎನ್ನಿಸಬಹುದು. ಸ್ಪೇನಿನ ಸಾಮ್ರಾಟರಿಗೆ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಅಮೆರಿಕಾಕ್ಕೆ ಸಮುದ್ರಯಾನದ ಮೂಲಕ ಬಂದು ಆಕ್ರಮಣ ಮಾಡಿ ನಡೆಸಿದ ದುರಾಚಾರಗಳಿಗೆ ಲೆಕ್ಕವೇ ಇಲ್ಲ. ಇನ್ನು ಸ್ಪೇನಿನ ವಸಾಹತುಶಾಹಿಗೆ ಕ್ರೌರ್ಯದ ಇತಿಹಾಸವೇ ಇದೆ. ಜೀತದ ಆಳುಗಳನ್ನು ಮಾರಾಟ ಮಾಡುವ ಮತ್ತು ಮಾರಣ ಹೋಮ ನಡೆಸಿದ ಕರಾಳ ವ್ಯಕ್ತಿತ್ವ ಕೊಲಂಬಸ್‌ನದ್ದು. ಇಂತಹ ಕೊಲಂಬಸ್‌ನ ಪ್ರತಿಮೆ ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸುತ್ತಿದ್ದರೆ ಅದು ಮುಂದಿನ ಪೀಳಿಗೆಗೆ ದಾಟಿಸುವ ಪಾಠವೇನು?

ಪ್ರತಿಭಟನೆಗಳು ಯೂರೋಪಿನ ಹಲವು ದೇಶಗಳು ಸೇರಿ ಬ್ರಿಟನ್ನಿಗೂ ಹರಡಿದೆ. ಬ್ರಿಟನ್ನಿನ ಮಾಜಿ ಪ್ರಧಾನಿ ಎರಡನೇ ಮಹಾಯುದ್ಧದ ಹೀರೋ ಎಂದೆ ಪರಿಗಣಿಸಲಾಗುವ ವಿನ್ಸ್ಟನ್ ಚರ್ಚಿಲ್ ಪ್ರತಿಮೆಯ ಮೇಲೆ ಕೂಡ ದಾಳಿ ಮಾಡಲಾಗಿದೆ. ಭಾರತವನ್ನು ವಸಾಹತು ಮಾಡಿಕೊಂಡಿದ್ದ ಸಂದರ್ಭದಲ್ಲಿ, ಬೆಂಗಾಳದ ಕ್ಷಾಮಕ್ಕೆ 30 ಲಕ್ಷ ಜನರ ಮೃತಪಟ್ಟಿದ್ದರು. ಇಂತಹ ಕ್ಷಾಮವನ್ನು ತಡೆಯುವ ಶಕ್ತಿಯಿದ್ದರೂ, ಚರ್ಚಿಲ್ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆ ಸಮಯದಲ್ಲಿ ಚರ್ಚಿಲ್ ಹೀಗೆ ಹೇಳಿದ್ದ ಎನ್ನಲಾಗುತ್ತದೆ: ‘ಮೊಲಗಳು ಈಯುವ ರೀತಿಯಲ್ಲಿ ಮಕ್ಕಳನ್ನು ಮಾಡಿಕೊಂಡರೆ ಇನ್ನೇನಾಗುತ್ತದೆ, ಈಗ ಅಲ್ಲಿ ಅಭಾವ ಇದ್ದರೆ ಗಾಂಧಿ ಹೇಗೆ ಬದುಕಿದ್ದಾರೆ’ ಎಂದಿದ್ದನಂತೆ. ನಮ್ಮ ಶಾಲೆಗಳಲ್ಲಿ ಹೇಳಿಕೊಟ್ಟ ಇತಿಹಾಸದ ಪಾಠಗಳು ಚರ್ಚಿಲ್‌ನ ಈ ಮುಖವನ್ನು ಪರಿಣಾಮಕಾರಿಯಾಗಿ ಪರಿಚಯ ಮಾಡಿಕೊಟ್ಟಿವೆಯೇ?

ಅಮೆರಿಕಾ, ಯೂರೋಪುಗಳಲ್ಲಿ ನಾಗರಿಕ ಸಮಾಜ, ಜೀತ ಪದ್ಧತಿಯನ್ನು ನಡೆಸುತ್ತಿದ್ದ, ಒಂದು ಜನಾಂಗದ ಜನರನ್ನು ಜೀತದ ಆಳುಗಳನ್ನಾಗಿ ಮಾರಾಟ ಮಾಡುತ್ತಿದ್ದ, ಜನಾಂಗೀಯ ತಾರತಮ್ಯಕ್ಕೆ ಕಾರಣರಾಗಿದ್ದ, ಇಂತಹ ಐತಿಹಾಸಿಕ ವ್ಯಕ್ತಿಗಳ ಪ್ರತಿಮೆಗಳನ್ನು ಸಾರ್ವಜನಿಕ ಪ್ರದೇಶಗಳಿಂದ ತೆರವು ಮಾಡುವುದಕ್ಕೆ ಮತ್ತು ಸಾರ್ವಜನಿಕ ಸ್ಮಾರಕಗಳು, ರಸ್ತೆಗಳು, ಚೌಕಗಳು ಮತ್ತು ಉದ್ಯಾನವನಗಳಿಗೆ ಇಟ್ಟಿರುವ ಇವರ ಹೆಸರುಗಳನ್ನು ಬದಲಿಸುವುದಕ್ಕೆ ಒತ್ತಡ ಹಾಕುತ್ತಿದೆ. ಇದು ಇನ್ನೂ ತೀವ್ರವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ಗಾಂಧಿ ಪ್ರತಿಮೆ ಮತ್ತು ವಿವಾದಗಳು

ಇದೇ ಪ್ರತಿಭಟನೆಗಳ ಸಮಯದಲ್ಲಿ ಅಮೆರಿಕಾದ ವಾಶಿಂಗ್ಟನ್ ಡಿಸಿಯಲ್ಲಿ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ವರದಿಯೂ ಮೂಡಿಬಂದಿತ್ತು. ಇದು ಪ್ರತಿಭಟನೆಗಳ ಸಮಯದಲ್ಲಿ ಆಕಸ್ಮಿಕವಾಗಿ ನಡೆದದ್ದೊ ಅಥವಾ ಉದ್ದೇಶಪೂರ್ವಕವಾಗಿ ನಡೆದದ್ದೊ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದೆ ಇದ್ದರೂ, 2018ರಲ್ಲಿ ಘಾನಾದ ವಿಶ್ವವಿದ್ಯಾಲಯದಲ್ಲಿ ಗಾಂಧಿಯವರನ್ನು ರೇಸಿಸ್ಟ್ ಎಂದು ಕರೆದು ಅವರ ಪ್ರತಿಮೆಯನ್ನು ತೆರವುಗೊಳಿಸಿದ್ದ ಘಟನೆಯನ್ನು ಇದು ಮತ್ತೆ ನೆನಪಿಸಿದೆ. ಯುವಕ ಗಾಂಧಿ ವಕೀಲರಾಗಿ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿದ್ದಾಗ ಅಲ್ಲಿನ ಕಪ್ಪು ಜನಾಂಗದ ಸಮುದಾಯವನ್ನು ಕಾಫಿರರು ಎಂದು ಕರೆದಿದ್ದನ್ನು ಅವರೇ ದಾಖಲು ಮಾಡಿರುವ ಸಂಬಂಧದ ವಿವಾದ ಇದಾಗಿತ್ತು.

ಉಳಿದ ಜನಾಂಗೀಯ ಶೋಷಕರಿಗೂ, ಗಾಂಧಿ ಮಾಡಿರುವ ಪ್ರತಿಕ್ರಿಯೆಗೂ ಮೂಲಭೂತ ವ್ಯತ್ಯಾಸ ಇದೆ. ಗಾಂಧಿ ಎಂದಿಗೂ ಅಧಿಕಾರವನ್ನು ಅನುಭವಿಸಲಿಲ್ಲ ಅಥವಾ ಅಧಿಕಾರದ ಮೂಲಕ ಯಾವ ಜನಾಂಗೀಯ ತಾರತಮ್ಯವನ್ನು ಆಚರಿಸಲಿಲ್ಲ ಎಂಬುದು ಒಂದು ವಿಷಯವಾದರೆ, ಗಾಂಧಿ ಯುವಕನಾಗಿದ್ದಾಗ ಹೊಂದಿದ್ದ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಕ್ಕೆ ಹಲವು ನಿದರ್ಶನಗಳು ನಮಗೆ ದೊರಕುತ್ತವೆ. ತಮ್ಮ ಜೀವನವನ್ನು ಸತ್ಯದೊಂದಿಗೆ ಪ್ರಯೋಗ ಎಂದು ಕರೆದುಕೊಂಡಿದ್ದ ಮಹಾತ್ಮ ಗಾಂಧೀಜಿ, ತಮ್ಮ ತಿಳಿವನ್ನು ಹೆಚ್ಚಿಸಿಕೊಂಡಂತೆ ತಮ್ಮ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಲು ಮತ್ತು ಅವುಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಎಂದೂ ಹಿಂಜರಿದವರಲ್ಲ. ಗಾಂಧಿಯವರು 1930ರ ಪೂರ್ವದಲ್ಲಿ ವರ್ಣಾಶ್ರಮದ ಬಗ್ಗೆ ಹೊಂದಿದ್ದ ಅಭಿಪ್ರಾಯಕ್ಕೂ ನಂತರದ ವರ್ಷಗಳಲ್ಲಿ ಅವರು ಅದನ್ನು ಬದಲಿಸಿಕೊಂಡು ತಳೆದ ವ್ಯಕ್ತಿತ್ವಕ್ಕೂ ಅಪಾರ ವ್ಯತ್ಯಾಸ ಇದೆ. ಬಹುಷಃ ಗಾಂಧಿಯವರ ಚಿಂತನೆಗೂ, ಚರ್ಚಿಲ್ ಮತ್ತು ಕೊಲಂಬಸ್ ನಂತರ ದುರಾಕ್ರಮಣಕಾರಿಗಳಿಗೂ ಇರುವ ವ್ಯತ್ಯಾಸವನ್ನು ಖಂಡಿತಾ ನಾವೆಲ್ಲರೂ ತಿಳಿಯಬಹುದಾಗಿದೆ.

ಭಾರತೀಯರ ಆತ್ಮಾವಲೋಕನಕ್ಕೆ ಸಕಾಲ

ಜನಾಂಗೀಯ ನಿಂದನೆ ಅಂದರೆ ವರ್ಣಬೇಧ ಮಾತ್ರವಲ್ಲ. ಭಾರತದಲ್ಲಿ ತಲೆತಲಾಂತರಗಳಿಂದ ಬಂದಿರುವ ಜಾತಿ ಶೋಷಣೆಗಳು ಅದಕ್ಕಾಗಿ ಹುಟ್ಟಿದ ಆಚರಣೆಗಳು ಇವತ್ತಿಗೂ ಮುಂದುವರೆದುಕೊಂಡು ಬಂದಿವೆ. ಭಾರತಕ್ಕೆ ಸಂಬಂಧಿಸಿದ ಜನಾಂಗೀಯ ನಿಂದನೆ ಹೆಚ್ಚಾಗಿ ಧರ್ಮದ ಜೊತೆಗೆ ತಳುಕುಹಾಕಿಕೊಂಡಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

ಸಂವಿಧಾನದಲ್ಲಿ ಅಪರಾಧ ಎಂದು ಹೇಳಿದ್ದರೂ, ಇನ್ನೂ ಹಲವು ಸಮುದಾಯಗಳನ್ನು ಒಳಗೆ ಬಿಟ್ಟುಕೊಳ್ಳದ ಸಾರ್ವಜನಿಕ ದೇವಾಲಯಗಳು ಭಾರತದಲ್ಲಿ ಸಾಕಷ್ಟು ಇವೆ. ಇಂದಿಗೂ ಜಾತಿಯ ಸಲುವಾಗಿ ಶೋಷಣೆ ಮತ್ತು ಕೊಲೆಗಳು ಮುಂದುವರೆದೇ ಇವೆ. ಒಂದೇ ಸಮುದಾಯಕ್ಕೆ ಮಣೆ ಹಾಕುವ, ಪಂಕ್ತಿಬೇಧ ಮಾಡುವ ಕ್ಷುಲ್ಲಕ ಆಚರಣೆಗಳು ಶ್ರೇಷ್ಠತೆಯ ಹೆಸರಿನಲ್ಲಿ ಹಲವು ಪ್ರಮುಖ ದೇವಾಲಯಗಳಲ್ಲಿ ಇಂದಿಗೂ ನಡೆದಿವೆ. ನಮ್ಮ ಕ್ರೌರ್ಯದ ಮತ್ತು ದೌರ್ಜನ್ಯದ ಇತಿಹಾಸ ಇವತ್ತಿಗೂ ಇಂತಹ ಕಡೆಗಳಲ್ಲಿ ಜೀವಂತವಾಗಿದೆ.

ಬಸವಣ್ಣನಂತಹ ದಾರ್ಶನಿಕ ಶರಣರು ಇಂತಹ ಸ್ಥಾವರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ನಂತರ ಆಧುನಿಕ ಭಾರತದಲ್ಲಿ ಅಂಬೇಡ್ಕರ್, ಗಾಂಧಿ ಮತ್ತು ಪೆರಿಯಾರ್ ಅಂತಹ ಮಹಾನುಭಾವರು ಕೂಡ ವಿಭಿನ್ನ ನೆಲೆಯಲ್ಲಿ ಇಂತಹ ತಾರತಮ್ಯದ ಧಾರ್ಮಿಕ ಕ್ಷೇತ್ರಗಳನ್ನು ಸುಧಾರಣೆ ತರಲು ಪ್ರಯತ್ನಿಸಿದವರು. ಆದರೆ ಇವು ಯಾವುವೂ ಪೂರ್ಣ ಪ್ರಮಾಣದಲ್ಲಿ ಫಲ ನೀಡದೆ ಇಂದಿಗೂ ಜನಾಂಗೀಯ ತಾರತಮ್ಯವನ್ನು ಪೋಷಿಸಿಕೊಂಡು ಬಂದಿವೆ.

ಹಲವು ಧರ್ಮಗಳ, ಹಲವು ಜಾತಿಗಳ, ಹಲವು ಆಚರಣೆಗಳ ವೈವಿಧ್ಯತೆ ಹೊಂದಿರುವ ಮತ್ತು ಅವುಗಳು ಜನಜೀವನದಲ್ಲಿ ಬೆರೆತುಹೋಗಿರುವ ಭಾರತದಂತಹ ಸಂದರ್ಭದಲ್ಲಿ, ಅವುಗಳು ನೆಲಸಮವಾಗುವ ಲಕ್ಷಣಗಳು ಇಲ್ಲದೆ ಇರುವಾಗ, ಕೊನೆ ಪಕ್ಷ ಈ ಸಾರ್ವಜನಿಕ ಆಚರಣೆಗಳು ಮತ್ತು ದೇವಾಲಯಗಳ ಆವರಣಗಳು ಜಾತ್ಯಾತೀತ ಮೌಲ್ಯವನ್ನು ಅನುಸರಿಸುವ ಮಟ್ಟಿಗೆ ಸುಧಾರಣೆಗೊಳ್ಳುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು.

ಪ್ರತಿಮೆಗಳು ತೆರವು? ದೇವಾಲಯಗಳ ಜಾತ್ಯಾತೀತಿಕರಣ ಜೊತೆಗೆ ಶಿಕ್ಷಣದ ಪ್ರತಿಪಾದನೆ ಬದಲಾಗಬೇಕು

ಚಲಿಸದ ಈ ಪ್ರತಿಮೆಗಳು, ದೇವಾಲಯಗಳು ಒಂದು ಮಟ್ಟಕ್ಕೆ ಪ್ರಭಾವ ಬೀರುತ್ತವೆ ಮತ್ತು ಅವುಗಳ ಬಗ್ಗೆ ಪ್ರಶ್ನೆಗಳನ್ನೇ ಕೇಳದಂತೆ ಹೊಸ ಪೀಳಿಗೆ ಅವುಗಳ ಬಗ್ಗೆ ಪೂಜ್ಯ ಭಾವನೆ ಬೆಳೆಸಿಕೊಳ್ಳುವ ಅಪಾಯ ಇದ್ದೇ ಇದೆ. ಈ ನಿಟ್ಟಿನಲ್ಲಿ ಕರಾಳ ಇತಿಹಾಸವುಳ್ಳ ಪ್ರತಿಮೆಗಳನ್ನು ಗುರುತಿಸಿ ತೆರವುಗೊಳಿಸುವ, ಮತ್ತು ಧಾರ್ಮಿಕ ಸ್ಥಳಗಳಲ್ಲಿ ತಾರತಮ್ಯದ ಕ್ರೌರ್ಯವನ್ನು ತೆರವುಗೊಳಿಸುವ ಸುಧಾರಣೆ ಬಹಳ ಮುಖ್ಯ. ಆದರೆ ಈ ಸಿಂಬಾಲಿಕ್ ಪ್ರಕ್ರಿಯೆಗಳಷ್ಟೇ ಭವಿಷ್ಯದ ಮಾನವೀಯ ಮತ್ತು ಸಮಾನತೆಯ ಸಮಾಜಕ್ಕೆ ಸಹಾಯ ಮಾಡಲಾರವು. ಇಂತಹ ಪ್ರತಿಮೆಗಳಲ್ಲಿ ಇನ್ನೂ ಜೀವಂತವಾಗಿರುವ ಆ ವ್ಯಕ್ತಿಗಳು ಮತ್ತು ಆ ಧಾರ್ಮಿಕ ಸ್ಥಳಗಳು ಪ್ರತಿಪಾದಿಸುತ್ತಿದ್ದ, ನಂಬಿದ್ದ ಮತ್ತು ಆಚರಿಸಿದ್ದ ಸಿದ್ಧಾಂತ ಮತ್ತು ತತ್ವಗಳು ಮುಂದುವರೆಯದಂತೆ ತಿಳಿವಳಿಕೆ ನೀಡುವ ಶಿಕ್ಷಣ ಕ್ರಮ ಅಗತ್ಯವಿದೆ.

ಕೊಲಂಬಸ್ ಕೇವಲ ಸಮುದ್ರಯಾತ್ರಿಯಾಗಿರದೆ ಅವನು ಮಾಡಿರುವ ಕ್ರೌರ್ಯವನ್ನು ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ಭಾರತದಲ್ಲಿ ದೇವಾಲಯಗಳು ಮತ್ತು ಪೂಜಾ ಕ್ಷೇತ್ರಗಳು ಆಚರಿಸಿಕೊಂಡು ಬಂದಿದ್ದ ಶೋಷಣೆ ಮತ್ತು ತಾರತಮ್ಯದ ಇತಿಹಾಸ ಭಾರತದ ಮಕ್ಕಳಿಗೆ ತಿಳಿಸಲು ಅದು ಸಮಾಜ ಶಿಕ್ಷಣದ ಭಾಗವಾಗಬೇಕಿದೆ. ಇದು ಪ್ರತಿಮೆಗಳನ್ನು ತೆರವು ಮಾಡುವ ಕೆಲಸದಂತೆಯೇ ಇನ್ನೂ ಹೆಚ್ಚು ಬಲವಾಗಿ ನಡೆಯಬೇಕಿದೆ.

ಐತಿಹಾಸಿಕ ಕ್ರೌರ್ಯದ ನೆನಪುಗಳನ್ನು ಉಳಿಸುವ ಸ್ಮಾರಕಗಳು ಬೇಡವೇ?

ಐತಿಹಾಸಿಕವಾಗಿ ನಡೆದಿರುವ ದೌರ್ಜನ್ಯಗಳನ್ನು, ಕ್ರೌರ್ಯಗಳನ್ನು, ಗಲಭೆಗಳ ಕರಾಳ ಇತಿಹಾಸವನ್ನು ನೆನಪಿಸುವ ಮತ್ತು ಜನರನ್ನು ಎಚ್ಚರಿಸುವ ಸ್ಮಾರಕಗಳನ್ನು, ವಸ್ತುಸಂಗ್ರಹಾಲಯಗಳನ್ನು ಕಟ್ಟುವ ಮತ್ತು ಸಂರಕ್ಷಿಸುವ ಅಗತ್ಯ ಇಲ್ಲವೆ ಅಂದರೆ ಖಂಡಿತಾ ಇದೆ.

ದೆಹಲಿ ಬೀದಿಗಳಲ್ಲಿ 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡದ ನೆನಪು ಆ ಬೀದಿಗಳ ಎಲ್ಲೋ ಒಂದು ಕಡೆ ಉಳಿದುಕೊಳ್ಳುವಂತೆ ಮಾಡಬೇಕು. ಗುಜರಾತಿನ ಕೋಮು ಗಲಭೆಯ ಕಹಿ ಘಟನೆಗಳನ್ನು ನೆನಪಿಸಿ ಮನುಷ್ಯರನ್ನು ಮಾನವೀಯಗೊಳಿಸುವ ಸ್ಮಾರಕಗಳು, ಅಂತಹ ವಿನ್ಯಾಸದ ಪ್ರತಿಮೆಗಳು ನಗರ ಪ್ಲಾನಿಂಗ್ ಭಾಗವಾಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅವು ಸದಾ ಯುವ ಪೀಳಿಗೆಯನ್ನು ಎಚ್ಚರಿಸುತ್ತಿರಬೇಕು.

ಜರ್ಮನಿಯಲ್ಲಿ ಗ್ಯಾಸ್ ಚೇಂಬರ್‌ಗಳು, ನಾಜಿ ದೌರ್ಜನ್ಯದ ಮ್ಯೂಸಿಯಂಗಳು ಇಂದಿಗೂ ಅಲ್ಲಿನ ಜರ್ಮನ್ ಯುವಜನತೆಯನ್ನು ಅವರ ಪೂರ್ವಜರ ಪಾಪದ ಕೆಲಸಗಳ ಬಗ್ಗೆ ಎಚ್ಚರಿಕೆ ನೀಡುತ್ತಾ ಬಂದಿವೆ. ತಿಳುವಳಿಕೆಯನ್ನು ಮೂಡಿಸುತ್ತಿವೆ. ಮನುಧರ್ಮಶಾಸ್ತ್ರ ಕಟ್ಟಿಕೊಟ್ಟ ವರ್ಣವ್ಯವಸ್ಥೆ ಭಾರತಕ್ಕೆ ಮಾಡಿರುವ ಅಪಾಯ, ಧರ್ಮದ ಧೃವೀಕರಣ ಎಸಗಿರುವ ಅಪಚಾರಗಳು ಕೂಡ ಇಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ವಿನ್ಯಾಸಗಳಾಗಿ ಕಾಣಿಸಿಕೊಳ್ಳಬೇಕು. ಅದರ ಜೊತೆಗೆ ಭಾರತದಲ್ಲಿ ಆಗಾಗ ದಾಳಿ ಮಾಡುವ ಅಂಬೇಡ್ಕರ್, ಪೆರಿಯಾರ್ ಅವರಂತಹ ಮಹಾನ್ ಚೇತನಗಳ ಪ್ರತಿಮೆಗಳನ್ನು ದುಷ್ಕರ್ಮಿಗಳಿಂದ ಕಾಯುವುದಕ್ಕೂ ಮುಂದಾಗಬೇಕು.

ಕೊನೆ ಮಾತು: ನಮ್ಮ ಭವ್ಯ ಪರಂಪರೆ ಮತ್ತು ಕರಾಳ ಇತಿಹಾಸ ಎರಡನ್ನೂ, ಸಾರ್ವಜನಿಕ ಸ್ಥಳಗಳ ಹೆಸರುಗಳು, ಸ್ಮಾರಕಗಳು ಮತ್ತು ಪ್ರತಿಮೆಗಳು ನೆನಪಿಸುತ್ತವೆ. ಅವುಗಳಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುವು ನಮ್ಮ ಸಂಸ್ಕೃತಿಯ ಪತಿನಿಧಿಯಂತಿರಬೇಕು, ಯಾವುದು ರಾರಾಜಿಸಬೇಕು ಎಂಬುದನ್ನು ನಿಷ್ಕರ್ಷೆ ಮಾಡಿ ನಿಶ್ಚಯಿಸುವ ಹಾಗು ವೈವಿಧ್ಯತೆಯ ಸಮುದಾಯಗಳಿಗೆ, ಸಾರ್ವಜನಿಕ ಹಿತಾಸಕ್ತಿಗೆ ಒಳಿತಾಗುವ ಮಾದರಿಯಲ್ಲಿ ನಾವು ವಾಸಿಸುವ ನಗರ ಮತ್ತು ಗ್ರಾಮಗಳನ್ನು ವಿನ್ಯಾಸಗೊಳಿಸುವುದು ನಾಗರಿಕ ಸಮಾಜದ ಲಕ್ಷಣ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣ. ಕರಾಳತೆಯನ್ನು ಮೆರೆಸುವ ವ್ಯಕ್ತಿಗಳು ಮತ್ತು ಐಡಿಯಾಗಳನ್ನು ಜೀವಂತವಾಗಿರಿಸುವ ಸ್ಮಾರಕಗಳನ್ನು ಪಕ್ಕಕ್ಕೆ ಸರಿಸಿ ಮಾನವೀಯತೆಯ ಪಾಠ ಹೇಳಿದ ಮಹನೀಯರನ್ನು ಸ್ಮರಿಸುವಂತಹ ಸಾರ್ವಜನಿಕ ಸ್ಥಳಗಳ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಮುಂದಾಗೋಣ.

  • ಗುರುಪ್ರಸಾದ್‌ ಆಕೃತಿ

ಇದನ್ನೂ ಓದಿ: ತುರುವೇಕೆರೆಯಲ್ಲಿ ದಲಿತ ಮುಖಂಡನ ಸಂಶಯಾಸ್ಪದ ಸಾವು – ಪೊಲೀಸ್ ವೈಫಲ್ಯವೆಂದ ಪಿಯುಸಿಎಲ್ ಸತ್ಯಶೋಧನ ಸಮಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸರ್ಕಾರ 5ಜಿ ಮೆಗಾ ಹಗರಣವನ್ನು ರೂಪಿಸುತ್ತಿದೆ: ಎಎಪಿ ಮುಖಂಡ ಸಂಜಯ್ ಸಿಂಗ್

0
2ಜಿ ಸ್ಪೆಕ್ಟ್ರಮ್ ಪ್ರಕರಣದಲ್ಲಿ 2012ರ ತೀರ್ಪನ್ನು ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ...