ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತೆಲುಗು ಸುದ್ದಿ ವಾಹಿನಿಗಳ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ಸೋಮವಾರ ತಡೆಹಿಡಿದಿದೆ. ಜೊತೆಗೆ “ದೇಶದ್ರೋಹದ ಮಿತಿಗಳನ್ನು ನಾವು ವ್ಯಾಖ್ಯಾನಿಸುವ ಸಮಯ ಇದು” ಎಂದು ಹೇಳಿದೆ.
ತೆಲುಗು ಸುದ್ದಿ ವಾಹಿನಿಗಳಾದ ಟಿವಿ 5 ಮತ್ತು ಎಬಿಎನ್ ಆಂಧ್ರ ಜ್ಯೋತಿ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಆಂಧ್ರಪ್ರದೇಶದ ಆಡಳಿತಾರೂ ವೈಎಸ್ಆರ್ ಕಾಂಗ್ರೆಸ್ ನ ಬಂಡಾಯ ಸಂಸದ ಕೆ. ರಘುರಾಮ ಕೃಷ್ಣ ರಾಜು ಅವರ ಟೀಕೆಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ದೇಶದ್ರೋಹದ ಆರೋಪದ ಮೇಲೆ ಆಂಧ್ರಪ್ರದೇಶ ಪೊಲೀಸರು ಎರಡು ಚಾನೆಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಸಂಸದ ರಾಜು, ತಮ್ಮದೇ ಸರ್ಕಾರ ಕೋವಿಡ್ ನಿರ್ವಹಿಸುತ್ತಿರುವ ಬಗೆಯ ಕುರಿತು ಬಹಳ ಟೀಕಿಸಿದ್ದರು.
ಇದನ್ನೂ ಓದಿ: “ನನ್ನನ್ನು ಈ ರೀತಿ ಅವಮಾನಿಸಬೇಡಿ”: ಪಿಎಂ ಜೊತೆಗಿನ ಭೇಟಿ ನಂತರ ಮಮತಾ ಅಸಮಾಧಾನ
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ವಿಶೇಷ ನ್ಯಾಯಪೀಠವು ದೇಶದ್ರೋಹದ ಕಠಿಣ ದಂಡದ ಅಪರಾಧ ಸೇರಿದಂತೆ ವಿವಿಧ ಅಪರಾಧಗಳಿಗೆ ಆರೋಪಿಸಲಾಗಿರುವ ಚಾನೆಲ್‌ಗಳ ಮನವಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ರಾಜ್ಯ ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿತು. “ನ್ಯಾಯಾಲಯವು ದೇಶದ್ರೋಹವನ್ನು ವ್ಯಾಖ್ಯಾನಿಸುವ ಸಮಯ ಇದು” ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಎಸ್.ರವೀಂದ್ರ ಭಟ್ ಅವರನ್ನೂ ಒಳಗೊಂಡ ನ್ಯಾಯಪೀಠ, ಅದೇ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನೌಕರರು ಅಥವಾ ಸುದ್ದಿ ವಾಹಿನಿಗಳ ಸಿಬ್ಬಂದಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸ್ಪಷ್ಟಪಡಿಸಿದೆ.
ಕೋವಿಡ್ ಸಂಬಂಧಿತ ಕುಂದುಕೊರತೆಗಳನ್ನು ತೋರಿಸಿದ್ದಕ್ಕಾಗಿ ಸರ್ಕಾರಗಳು ನಾಗರಿಕರಿಗೆ ಶಿಕ್ಷೆ ನೀಡುವುದನ್ನು ತಡೆಯುವ ಇತ್ತೀಚಿನ ನ್ಯಾಯಾಲಯದ ಆದೇಶವನ್ನು ಆಂಧ್ರ ಸರ್ಕಾರ ಉಲ್ಲಂಘಿಸಿದೆ ಎಂದು ಎರಡು ಸುದ್ದಿ ವಾಹಿನಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.
ಅಸಮಾನ ಆಸ್ತಿ ಪ್ರಕರಣದಲ್ಲಿ ತಮ್ಮ ಪಕ್ಷದ ಸಂಸ್ಥಾಪಕ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಕೆಲವೇ ವಾರಗಳ ನಂತರ ಸಂಸದ ರಾಜು ಅವರನ್ನು ಬಂಧಿಸಲಾಗಿತ್ತು. ಮೇ 21 ರಂದು ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು.
ಇದನ್ನೂ ಓದಿ: ಬಿಜೆಪಿ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಸುತ್ತಿದೆ: ಕಾಂಗ್ರೆಸ್ ಗಂಭೀರ ಆರೋಪ


