ಯಾವುದೇ ಮಾಲೀಕರ ಒಂದೂ ಕೇಸ್‌ಗಳನ್ನು ಪಡೆಯದೇ ಕೇವಲ ಕಾರ್ಮಿಕರ ಪರವಾಗಿ ಮಾತ್ರವೇ ವಾದ ಮಂಡಿಸುತ್ತಿದ್ದ ಹಿರಿಯ ನ್ಯಾಯವಾದಿ ಕೆ.ಸುಬ್ಬರಾವ್ ನಿಧನ ಹೊಂದಿದ್ದಾರೆ. 92 ವಯಸ್ಸಿನ ಅವರು ವಯೋಸಹಜ ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ.
ಪುತ್ತೂರು ತಾಲೂಕಿನ ಮಣಿಲ ಗ್ರಾಮದ ಕುಟುಂಬದಲ್ಲಿ 1931 ಜೂನ್ 15 ರಂದು ಜನಿಸಿದ್ದ ಅವರು ಕಾನೂನಿನ ಅಧ್ಯಯನ ಮಾಡಿ ಸುಮಾರು ಆರು ದಶಕಗಳ ಕಾಲ ದುಡಿಯುವವರ ಪರವಾಗಿ ಕೆಲಸ ಮಾಡಿದ್ದರು.
1964 ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಕಾರ್ಮಿಕರ ಸಂಘದ ಕಾನೂನು ಸಲಹೆಗಾರರಾಗಿ, ನಂತರ ಹೆಚ್.ಎಂ.ಟಿ, ಬಿ.ಇ.ಎಲ್, ಎಚ್.ಎ.ಎಲ್, ಐ.ಟಿ.ಐ ನಂತಹ ಬೃಹತ್ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರ ಪರವಾಗಿ ದುಡಿದಿದ್ದರು. ಇಂಡಿಯನ್ ಕಾಫಿ ವರ್ಕರ್ಸ್ ಕೋ-ಆಪರೇಟಿವ್ ಯೂನಿಯನ್, ಮೈಸೂರು ಕಮರ್ಷಿಯಲ್ ಎಂಪ್ಲಾಯಿಸ್ ಯೂನಿಯನ್, ಬಿನ್ನಿಮಿಲ್ ಕಾರ್ಮಿಕರ ಸಂಘ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಅಸೋಶಿಯೇಶನ್ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದರು.
1986 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ‘ಅಂತರಾಷ್ಟ್ರೀಯ ಕಾನೂನು ಸಮ್ಮೇಳನ’ದಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿದ್ದರು. ಕಾಸರಗೋಡಿನ ಗ್ರಾಮವೊಂದರಲ್ಲಿ ಕನ್ನಡ ಶಾಲೆ ಸ್ಥಾಪಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಅಲ್ಲಿ ಸಾಮಾಜಿಕ ಬದಲಾವಣೆಯ ಕೇಂದ್ರವನ್ನು ಸ್ಥಾಪಿಸಲು ತಮ್ಮ 2.3 ಎಕರೆ ಭೂಮಿಯನ್ನು ದಾನ ಮಾಡಿ, ಟ್ರಸ್ಟ್ ಒಂದನ್ನು ಸ್ಥಾಪಿಸಿ ಮಾದರಿಯಾಗಿದ್ದರು.
ಅಖಿಲ ಭಾರತ ವಕೀಲರ ಒಕ್ಕೂಟ( ಎ.ಐ.ಎಲ್.ಯು) ಕರ್ನಾಟಕ ರಾಜ್ಯ ಸಮಿತಿಯು ಕೆ.ಸುಬ್ಬರಾವ್‌ರವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಎ.ಐ.ಎಲ್.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಕುಮಾರ್, ದಕ್ಷಿಣ ಭಾರತ ಸಂಚಾಲಕರಾದ ರಾಮಚಂದ್ರರೆಡ್ಡಿ, ರಾಜ್ಯ ಮುಖಂಡರಾದ ಶಿವಾರೆಡ್ಡಿ, ಶಿವಶಂಕರಪ್ಪ, ಎಲ್.ಎಂ.ಪೇಶ್ವಾ, ಶರಣಬಸವ ಮರದ್, ಹುಳ್ಳಿ ಉಮೇಶ್, ರಮೇಶ್ ಪಿಎಸ್, ರವಿ.ಜಿ.ಎನ್, ಸೇರಿದಂತೆ ಎ.ಐ.ಎಲ್.ಯು ಮುಖಂಡರು ಗೌರವ ನಮನ ಸಲ್ಲಿಸಿದರು.
ಇದನ್ನೂ ಓದಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಲೇಖಕ ಶ್ರೀನಿವಾಸ ವೈದ್ಯ ನಿಧನ


