ಕರ್ನಾಟಕದ ಜನತೆ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು, ಹಾಗಾಗಿ ಬಿಜೆಪಿ ಮತ ನೀಡಿ ಎಂದು ಬೆದರಿಕೆಯೊಡ್ಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ದೇಶದ ಕ್ಷಮೆ ಕೇಳಬೇಕು ಎಂದು ರಾಜ್ಯದ ಲೇಖಕರು, ಸಾಹಿತಿಗಳು ಒತ್ತಾಯಿಸಿದ್ದಾರೆ.
ಪ್ರೊ. ಕೆ ಎಂ ಮರುಳಸಿದ್ದಪ್ಪ, ಡಾ. ವಿಜಯಾ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಪ್ರೊ. ಕಾಶೀನಾಥ ಅಂಬಲಗಿ, ದಿನೇಶ್ ಅಮೀನ್ ಮಟ್ಟು, ಗಿರಿಧರ ಕಾರ್ಕಳ, ಪುರುಷೋತ್ತಮ ಬಿಳಿಮಲೆ ಮತ್ತು ಶ್ರೀನಿವಾಸ ಕಾರ್ಕಳರವರು ಜಂಟಿ ಹೇಳಿಕೆ ನೀಡುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 19, 2023ರಂದು ಕರ್ನಾಟದ ಚುನಾವಣಾ ಸಭೆಯೊಂದರಲ್ಲಿ ಭಾಷಣ ಮಾಡಿದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, “ಕರ್ನಾಟಕದಲ್ಲಿ ಅಭಿವೃದ್ಧಿಯು ನಿರಂತರವಾಗಿ ಹರಿಯಲು ನಿಮಗೆ ಮೋದೀಜಿಯವರ ಆಶೀರ್ವಾದ ಬೇಕು. ಆದ್ದರಿಂದ ರಾಜ್ಯವು ಮೋದಿ ಜಿ ಅವರ ಆಶೀರ್ವಾದದಿಂದ ದೂರವಿರಬಾರದುʼ ಎಂಬ ಮಾತನ್ನು ಹೇಳಿದ್ದಾರೆ. ಈ ಮಾತಿನ ಮೂಲಕ ನಡ್ಡಾ ಅವರು ʼ ಬಿಜೆಪಿಗೆ ಮತ ಹಾಕದಿದ್ದರೆ ಕರ್ನಾಟಕ ಅಭಿವೃದ್ಧಿ ಹೊಂದುವುದಿಲ್ಲʼ ಎಂಬ ಬೆದರಿಕೆಯನ್ನು ಮತದಾರರಿಗೆ ಹಾಕುವುದರ ಜೊತೆಗೆ ಪಕ್ಷ ರಾಜಕಾರಣದಿಂದ ಹೊರಗೆ ಇರಬೇಕಾಗಿರುವ ಪ್ರಧಾನಿ ಹುದ್ದೆಯ ಘನತೆಯನ್ನು ಸಂಕುಚಿತಗೊಳಿಸಿದ್ದಾರೆ. ನಡ್ಡಾ ಅವರ ಮಾತುಗಳು ಪ್ರಜಾಪ್ರಭುತ್ವದ ಮೇಲಿನ ಧಾಳಿ ಹೇಗೋ ಹಾಗೆ ಸಂವಿಧಾನದ ಮೇಲಿನ ಆಕ್ರಮಣವೂ ಹೌದು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕವೂ ಸೇರಿದಂತೆ ದೇಶದ ಯಾವ ರಾಜ್ಯವಾದರೂ ತನಗೆ ಬೇಕಾದ ಪಕ್ಷವನ್ನು ಚುನಾವಣೆಯ ಮೂಲಕ ಅಧಿಕಾರಕ್ಕೆ ತರುವ ಹಕ್ಕನ್ನು ಸಂವಿಧಾನವು ಮತದಾರರಿಗೆ ನೀಡಿದೆ. ಮತದಾರರ ಅಯ್ಕೆಯನ್ನು ಕೇಂದ್ರದಲ್ಲಿರುವ ಒಕ್ಕೂಟ ಸರಕಾರ ಗೌರವಿಸಬೇಕು. ಸಂವಿಧಾನದ ಪರಿಚ್ಛೇದ XI, ಅಧಿಕಾರವನ್ನು ರಾಜ್ಯ ಮತ್ತು ಕೇಂದ್ರಗಳ ನಡುವೆ ಹಂಚಿಕೊಟ್ಟಿರುವುದರಿಂದ ಭಾರತವು ಒಂದು ಒಕ್ಕೂಟ ರಾಷ್ಟ್ರವಾಗಿದೆ. ಇಲ್ಲಿ ಒಂದು ಇನ್ನೊಂದನ್ನು ದುರ್ಬಲಗೊಳಿಸುವುದಿಲ್ಲ ಬದಲು ಬಲಗೊಳಿಸುತ್ತದೆ. ಆದರೆ ನಡ್ಡಾ ಅವರ ಮಾತುಗಳು ಒಕ್ಕೂಟ ಸರಕಾರದ ಮೂಲ ತತ್ವಗಳಿಗೆ ವಿರೋಧವಾಗಿದ್ದು, ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗ ಕೇಂದ್ರದಲ್ಲಿರುವ ಎನ್ ಡಿ ಎ ಸರಕಾರವು ಹಂತ ಹಂತವಾಗಿ ರಾಜ್ಯ ಸರಕಾರಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತಲೇ ಬರುತ್ತಿದೆ. ಇದಕ್ಕೆ ಪೂರಕವಾಗಿಯೇ ನಡ್ಡಾ ಅವರ ಮಾತುಗಳು ಬಂದಿವೆ. ಇದು ಅಂತಿಮವಾಗಿ ಭಾರತದ ಬಹುತ್ವವನ್ನು ನಾಶ ಮಾಡುತ್ತದೆ. ಕಾರಣ, ಸಂವಿಧಾನ ವಿರೋಧಿ ಮಾತುಗಳನ್ನಾಡಿದ ಜೆ ಪಿ ನಡ್ಡಾ ಅವರು ಕೂಡಲೇ ಭಾರತದ ಮತದಾರರ ಕ್ಷಮೆ ಯಾಚಿಸಬೇಕು ಮತ್ತು ತಮ್ಮ ಮುಂದಿನ ಭಾಷಣಗಳಲ್ಲಿ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: “ರಾಜ್ಯದ ಜನತೆ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ವಂಚಿತರಾಗಬಾರದು”: ಜೆ.ಪಿ ನಡ್ಡಾ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು