ನಂಜುಂಡಸ್ವಾಮಿ
PC: enacademic.com

ಸಂಪನ್ಮೂಲಗಳನ್ನು ಮಾನವ ಶಕ್ತಿಯ ಮೂಲಕ ಸಿದ್ಧವಸ್ತುಗಳನ್ನಾಗಿ ಪರಿವರ್ತಿಸುವುದೇ ಬಂಡವಾಳದ ಉತ್ಪಾದನೆ. ಈ ದೃಷ್ಟಿಯಲ್ಲಿ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಶೇಕಡ 75 ಭಾಗ ಇರುವ ರೈತರು ಮತ್ತು ರೈತ ಕೂಲಿಕಾರರೇ ನಮ್ಮ ದೇಶದ ಎಲ್ಲಾ ಬಂಡವಾಳವನ್ನು ಸೃಷ್ಟಿಸುತ್ತಿರುವವರು ಹಾಗೂ ಹೆಚ್ಚಿಸುತ್ತಿರುವವರು

ಹೀಗಿದ್ದರೂ ಇವರೆಲ್ಲಾ ನಿರಂತರ ಸಾಲಗಾರರಾಗಿದ್ದಾರೆ. ಇದಕ್ಕೆ ಕಾರಣ ಏನು? ಇಂತಹ ಸಾಲದಿಂದ ಇವರನ್ನು ಹೇಗೆ ಮುಕ್ತಿಗೊಳಿಸಬೇಕು? ಇವರಿಗೆಲ್ಲಾ ಸಮಾನ ಸ್ಥಾನಮಾನ, ಸಮಾನ ಗೌರವ ಮತ್ತು ಸಮಾಜ ಜೀವನ ವ್ಯವಸ್ಥೆಯನ್ನು ಹೇಗೆ ಸ್ಥಾಪಿಸಬೇಕು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದೇ ರೈತ ಚಳವಳಿಯ ವಿಜಾರ ಮತ್ತು ಉದ್ದೇಶ.

ಇದನ್ನೂ ಓದಿ: ರೈತ ಹೋರಾಟ 80ನೇ ದಿನಕ್ಕೆ: ಪ್ರೊ ಎಂ.ಡಿ ನಂಜುಂಡಸ್ವಾಮಿಯವರನ್ನು ನೆನೆದ ರೈತ ಒಕ್ಕೂಟ

ಇವುಗಳಿಗೆ ಕರ್ನಾಟಕ ರೈತರು ಉತ್ತರ ಕಂಡುಕೊಂಡಿದ್ದಾರೆ. ತಮ್ಮ ಸಾಲಕ್ಕೆ ಬೆಲೆ ಮೋಸ ಕಾರಣ, ಬೆಲೆ ಸಮಾನತೆಯೇ ಇಂತ ಸಾಲಗಳಿಂದ ಮುಕ್ತಿ ಪಡೆಯಲು ಪರಿಹಾರ, ಬೆಲೆ ಸಮಾನತೆಯ ಕಾನೂನು ರಚನೆಗಾಗಿ ಹೋರಾಡಿ ಜಯಗಳಿಸಿದರೆ ಮಾತ್ರ ಸಮಾನ ಜೀವನ ವ್ಯವಸ್ಥೆಯ ಸ್ಥಾಪನೆ ಸಾಧ್ಯ. ಇದನ್ನೆಲ್ಲಾ ಅಹಿಂಸಾತ್ಮಕ ಸತ್ಯಾಗ್ರಹದಿಂದ ಸ್ಥಾಪಿಸಲು ಪ್ರಯತ್ನಿಸಬೇಕು. ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಮಣಿಯದ ಕಳ್ಳ ಸರ್ಕಾರಗಳು ಎದುರಾದರೆ ರೈತರೇ ರಾಜಕೀಯ ಶಕ್ತಿಯಾಗಿ ತಮ್ಮ ಓಟಿನ ಶಕ್ತಿಯಿಂದ ರೈತರದ್ದೇ ಆದ ಸರ್ಕಾರ ಸ್ಥಾಪಿಸಿಕೊಂಡು ರೈತರಿಗೆ ಸಮಾನ ಗೌರವ ಸ್ಥಾನವನ್ನು ದಕ್ಕಿಸಿಕೊಳ್ಳಬೇಕು. ಇದು ಕರ್ನಾಟಕದ ರೈತ ಚಳುವಳಿಯ ಸ್ವಾಭಿಮಾನದ ಹೋರಾಟದ ವಿಚಾರ ಮತ್ತು ಕಾರ್ಯಕ್ರಮ.

ಕರ್ನಾಟಕದ ರೈತರ ಚಳವಳಿ ಮತ್ತು ಕಾರ್ಯಕ್ರಮ ಈ ದಿಕ್ಕಿನಲ್ಲಿ ನಡೆದಿದ್ದರೆ ನೆರೆ ರಾಜ್ಯವಾದ ಮಹಾರಾಷ್ಟ್ರದ ರೈತರ ಚಳವಳಿ ದಿಕ್ಕೆಟ್ಟಿದೆ. ದೇಶದ ಸಂಪತ್ತನ್ನು ದಿನೇ ದಿನೇ ಹೆಚ್ಚಿಸುತ್ತಿರುವ ನಾವು ರೈತರು ಸಾಲಗಾರರೇ ಅಲ್ಲ ಎಂದು ಕರ್ನಾಟಕದ ರೈತರು ಘೋಷಿಸಿಕೊಂಡಿದ್ದರೆ ಮಹಾರಾಷ್ಟ್ರದ ರೈತರು ಈ ಮುಖ್ಯ ವಿಷಯವನ್ನೇ ಮರೆತು ನಾವು ಪಾಪರಾಗಿದ್ದೇವೆ, ದಿವಾಳಿಯಾಗಿದ್ದೇವೆ ಎಂದು ಘೋಷಿಸಬೇಕೆಂದು ಮಹಾರಾಷ್ಟ್ರದ ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಳತು-ವಿವೇಕ: ಸಮಕಾಲೀನತೆಯಲ್ಲಿ ಕುವೆಂಪು-ಕ್ರಿಯೆ, ಪ್ರತಿಕ್ರಿಯೆ – ದಿ. ಎಂ. ಡಿ. ನಂಜುಂಡಸ್ವಾಮಿ

ಮಹಾರಾಷ್ಟ್ರದ ನ್ಯಾಯಾಲಯಗಳೇನಾದರೂ ಅಲ್ಲಿನ ರೈತರ ವಾದವನ್ನು ಒಪ್ಪಿ ಅವರೆಲ್ಲ ದಿವಾಳಿಗಳೆಂದು ಘೋಷಿಸಿದರೆ ಆಗುವ ಪರಿಣಾಮಗಳನ್ನು ಅವರೆಲ್ಲ ಯೋಚಿಸಿಲ್ಲ ಎಂದು ಕಾಣುತ್ತದೆ. ಅವರೆಲ್ಲರೂ ದಿವಾಳಿಗಳೆಂದು ನ್ಯಾಯಾಲಯ ಘೋಷಿಸಿದರೆ ಅವರೆಲ್ಲ ಇನ್ನು ಮುಂದೆ ಯಾವುದೇ ಹಣಕಾಸಿನ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಗಳಾಗುವ ಹಾಗೂ ಮತದಾನದ ಹಕ್ಕುಗಳನ್ನೆಲ್ಲ ಕಳೆದುಕೊಳ್ಳುತ್ತಾರೆ. ಭಾರತದ ರೈತರಿಗಿರುವ ಏಕೈಕ ಅಮೂರ್ತ ಶಕ್ತಿಯಾದ ಮತ ಶಕ್ತಿಯನ್ನೂ ಕಳೆದುಕೊಂಡು ರೈತ ಶಾಶ್ವತ ಜೀತಗಾರನಾಗುತ್ತಾನೆ. ಈ ಮೂಲಕ ಸಾಲಗಳಿಂದ ವಿಮುಕ್ತನಾಗುವುದಿರಲಿ, ಸಾಲದ ಶಿಶುವಾಗಿಯೇ ಉಳಿದು ಬಿದಡುತ್ತಾನೆ.

ಮಹಾರಾಷ್ಟ್ರದ ರೈತರು ಇಷ್ಟು ದಡ್ಡರೇ ಎಂದು ಯಾರಾದರೂ ಹುಬ್ಬೇರಿಸಬಹುದು. ಆದರೆ ಅವರು ದಡ್ಡರಲ್ಲ ಎನ್ನುವುದು ನಿಜವಾದರೂ ಅವರ ಚಳವಳಿಯ ನಾಯಕತ್ವವನ್ನು ಕೆಲವು ಬೇಜವಾಬ್ದಾರಿ ಹುಂಬರು ವಹಿಸಿಕೊಂಡಿದ್ದಾರೆ ಎನ್ನುವುದನ್ನು ಇನ್ನೂ ಗುರುತಿಸಿಕೊಂಡಿಲ್ಲದ ದಡ್ಡರು ಎಂದೇ ಹೇಳಬೇಕಾಗುತ್ತದೆ. ಈ ಹುಂಬ ನಾಯಕರು ಇದೊಂದು ಚಳವಳಿಯ ತಂತ್ರ! ಸಾಲ ಪಾವತಿಯನ್ನು ಅನಿರ್ದಿಷ್ಟ ಕಾಲ ತಪ್ಪಿಸಿಕೊಳ್ಳುವ ತಂತ್ರ ಎನ್ನುವ ಜಾಣ ವಾದವನ್ನು ಮಹಾರಾಷ್ಟ್ರದ ರೈತರ ಮುಂದಿಡಬಹುದು. ಆದರೆ, ಇಂತಹ ತಂತ್ರಗಳ ತಳಹದಿಯ ಆಧಾರದ ಮೇಲೆ ರೈತ ಚಳವಳಿ ರೂಪಿತವಾಗಬೇಕೋ ಅಥವಾ ಸತ್ಯದ ಆಧಾರದ ಮೇಲೆ ಹಾಗೂ ಸತ್ಯಾಗ್ರಹದ ಆಧಾರದ ಮೇಲೆ ರೈತ ಚಳವಳಿ ರೂಪಿತವಾಗಬೇಕೋ ಎನ್ನುವುದು ಅತಿ ಮುಖ್ಯವಾದ ಅಂಶ.

ಇದನ್ನೂ ಓದಿ: ಕೃಷಿ ಕಾಯ್ದೆಗಳ ಪರ ಪ್ರಚಾರ: ಒಕ್ಕೂಟ ಸರ್ಕಾರ ಖರ್ಚು ಮಾಡಿರುವ ಹಣ ಎಷ್ಟು ಗೊತ್ತೇ?

ಏಕೆಂದರೆ, ಸಮಾನತೆಯನ್ನು ತಂತ್ರಗಳ ಮೂಲಕ ದೊರಕಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ, ಅಸಮಾನತೆಯನ್ನು ಮುಂದುವರಿಸಬೇಕೆನ್ನುವವರ ಬಳಿ ತಂತ್ರಗಳಿಗೇನೂ ಅಭಾವವಿರುವುದಿಲ್ಲ. ಹಾಗೆಯೇ ಸಮಾನತೆಯನ್ನು ಯಾರೂ ಚಿನ್ನದ ತಟ್ಟೆಯಲ್ಲಿ ಅರ್ಪಿಸುವುದಿಲ್ಲ. ಅದನ್ನು ಹೋರಾಟದ ಮೂಲಕವೇ ದಕ್ಕಿಸಿಕೊಳ್ಳಬೇಕು. ಇದಕ್ಕೆ ತಾರ್ಕಿಕ ಹೋರಾಟದ ಮಾರ್ಗವೊಂದೇ ಇರುವ ದಾರಿ. ಸತ್ಯಾಗ್ರಹವೇ ಈ ಹೋರಾಟದ ಮಾರ್ಗ. ಇದೂ ಸೋತರೆ ಇರುವ ಇತರ ಏಕೈಕ ಮಾರ್ಗ ಅಧಿಕಾರಗ್ರಹಣ ಒಂದೇ.

ಮಹಾರಾಷ್ಟ್ರದ ರೈತರ ದಿಕ್ಕೆಟ್ಟಿರುವ “ಸಾಲ ಮುಕ್ತಿ” ಕಾರ್ಯಕ್ರಮ ತಾತ್ಕಾಲಿಕ ಎಂದೇ ಭಾವಿಸಬಹುದೇನೋ, ಏಕೆಂದರೆ ಈಗಾಗಲೇ ನ್ಯಾಯಾಲಯಗಳು ಅಲ್ಲಿ ಕಾರ್ಯೋನ್ಮುಖವಾಗುವ ಮೊದಲೇ ಪಟ್ಟಭದ್ರರ ಪ್ರತಿನಿಧಿಯಾದ ಮಹಾರಾಷ್ಟ್ರ ಸರ್ಕಾರ ಸಾಲ ವಸೂಲಿ ಪ್ರಾರಂಭಿಸಿದೆ. ಈ ಸರ್ಕಾರದ ಬತ್ತಳಿಕೆಯಲ್ಲಿ ಹಾಗೂ ಈಗಿರುವ ಬಂಡವಾಳಶಾಹಿ ಕಾನೂನಿನ ಬತ್ತಳಿಕೆಯಲ್ಲಿ ಬಹಳಷ್ಟು ಬಾಣಗಳಿವೆ.

ಇದನ್ನೂ ಓದಿ: ರೈತರಿಗೆ ಬೆಂಬಲ: ಹರಿಯಾಣದ ಪ್ರತಿ ಹಳ್ಳಿಗೂ ಹರಡಿದ ಮಹಾಪಂಚಾಯತ್ – ಗ್ರೌಂಡ್ ರಿಪೋರ್ಟ್

ಈ ಕಾರಣ ಮಹಾರಾಷ್ಟ ರೈತರ “ದಿವಾಳಿ ಚಳವಳಿಯೇ ದಿವಾಳಿಯಾಗಿ ಅವರ ಹೋರಾಟ ಸರಿಯಾದ ವಿಚಾರಕ್ಕೆ ಹಾಗೂ ದಿಕ್ಕಿಗೆ ತಿರುಗಿಯೇ ತಿರುಗುತ್ತದೆ” ಹೋರಾಟದ ವಿಚಾರ ಪೂರ್ಣ ಬದಲಾದಾಗ ಹೋರಾಟದ ಹುಂಬ ನಾಯಕತ್ವ ಕೂಡ ಪೂರ್ಣವಾಗಿ ಮಾಯವಾಗುತ್ತದೆ. ಇಂತಹ ಬದಲಾವಣೆಗಾಗಿ ದೇಶದ ಎಲ್ಲಾ ರೈತರೂ ಆಶಿಸೋಣ, ಶ್ರಮಿಸೋಣ.

31 ಅಕ್ಟೋಬರ್ 1988 ರಂದು ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರು ಬರೆದ ಈ ಲೇಖನವನ್ನು ರವಿಕುಮಾರ್ ಬಾಗಿ ಅವರು ಸಂಪಾದಿಸಿರುವ “ಹಳ್ಳಿ ಕಣ್ಣಲ್ಲಿ ಇಂಡಿಯ- ಪ್ರೊ. ಎಂ ಡಿ ನಂಜುಂಡಸ್ವಾಮಿ ಬರಹಗಳು” ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

ಇದನ್ನೂ ಓದಿ: ಗಂಗೂಲಿಯ ಹೃದಯಾಘಾತಕ್ಕೆ ಮರುಗುವ ಮೋದಿಗೆ 60 ಹುತಾತ್ಮ ರೈತರು ಕಾಣುತ್ತಿಲ್ಲ: ಯೋಗೇಂದ್ರ ಯಾದವ್ ಕಿಡಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here