ದೆಹಲಿ ಗಲಭೆಗೆ ಸಂಬಂಧಿಸಿದ “ದೊಡ್ಡ ಮಟ್ಟದ ಪಿತೂರಿ”ಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿರುವ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಹೋರಾಟಗಾರ ಶಾರ್ಜೀಲ್ ಇಮಾಮ್ ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಸೆಪ್ಟೆಂಬರ್ 2ರಂದು, ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರ ದೆಹಲಿ ಹೈಕೋರ್ಟ್ ಪೀಠವು ಶಾರ್ಜೀಲ್ ಇಮಾಮ್, ಉಮರ್ ಖಾಲಿದ್, ಮೊಹಮ್ಮದ್ ಸಲೀಮ್ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್, ಮೀರನ್ ಹೈದರ್, ಅಬ್ದುಲ್ ಖಾಲಿದ್ ಸೈಫಿ ಮತ್ತು ಗುಲ್ಫಿಶಾ ಫಾತಿಮಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
ನ್ಯಾಯಮೂರ್ತಿಗಳಾದ ಸುಬ್ರಹ್ಮಣ್ಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರ ಮತ್ತೊಂದು ವಿಭಾಗೀಯ ಪೀಠವು ಮತ್ತೊಬ್ಬ ಆರೋಪಿ ತಸ್ಲೀಮ್ ಅಹ್ಮದ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಹತ್ತು ಆರೋಪಿಗಳು ಅಪರಾಧ ರುಜುವಾತಾಗದೆ ಕಳೆದ ಐದು ವರ್ಷಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿದ್ದಾರೆ.
2020ರಲ್ಲಿ ನಡೆದ ದೆಹಲಿ ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಮುಸ್ಲಿಮರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೆಡವಲು ರೂಪಿಸಿದ್ದ ದೊಡ್ಡ ಪಿತೂರಿಯ ಭಾಗವಾಗಿ ಈ ಹಿಂಸಾಚಾರ ನಡೆದಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದ್ದವರೇ ಇದನ್ನು ಯೋಜಿಸಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.
ಸೆಪ್ಟೆಂಬರ್ 2 ರಂದು, ನ್ಯಾಯಮೂರ್ತಿಗಳಾದ ಚಾವ್ಲಾ ಮತ್ತು ಕೌರ್ ಅವರನ್ನೊಳಗೊಂಡ ಪೀಠವು ಜಾಮೀನು ಅರ್ಜಿಗಳನ್ನು ವಜಾಗೊಳಿಸುವ ವೇಳೆ, ಪ್ರಾಥಮಿಕವಾಗಿ ಆಪಾದಿತ ಪಿತೂರಿಯಲ್ಲಿ ಇಮಾಮ್ ಮತ್ತು ಖಾಲಿದ್ ಅವರ ಪಾತ್ರದ ಕುರಿತು ಮಾಡಿರುವ ಆರೋಪಗಳು ‘ಗಂಭೀರವಾಗಿವೆ’ ಮತ್ತು ಅವರು ಕೋಮು ಆಧಾರದ ಮೇಲೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾರೆ ಎಂದು ಹೇಳಿದೆ.
ಪ್ರಾಸಿಕ್ಯೂಷನ್ ‘ವಿವರವಾದ ತನಿಖೆ’ ನಡೆಸಿದೆ ಎಂದು ನ್ಯಾಯಾಲಯ ಹೇಳಿದೆ. ಇದರ ಪರಿಣಾಮವಾಗಿ ನಾಲ್ಕು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದೆ. ಇದಲ್ಲದೆ, 58 ಸಾಕ್ಷಿಗಳ ಹೇಳಿಕೆಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ವಿಚಾರಣೆ ವಿಳಂಬವಾಗಿದೆ ಎಂಬ ಕಾರಣ ಮುಂದಿಟ್ಟು ಇಮಾಮ್ ಮತ್ತು ಇತರ ಆರೋಪಿಗಳು ಜಾಮೀನು ಕೋರಿದ್ದರು. ಪ್ರಕರಣದ ಇತರ ಸಹ-ಆರೋಪಿಗಳಾದ ವಿದ್ಯಾರ್ಥಿ ಹೋರಾಟಗಾರರಾದ ಆಸಿಫ್ ಇಕ್ಬಾಲ್ ತನ್ಹಾ, ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್ ಅವರಿಗೆ ಜಾಮೀನು ನೀಡಿದಂರೆ ತಮಗೂ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಜೂನ್ 2021ರಲ್ಲಿ ಈ ಮೂವರಿಗೆ ಜಾಮೀನು ದೊರೆತಿದೆ.
ಮುಸ್ಲಿಮರ ಮೇಲೆ ದೋಷಾರೋಪಣೆಗೆ ಯತ್ನ: ಗಣೇಶ ಚತುರ್ಥಿ ವೇಳೆ ಹುಸಿ ಬೆದರಿಕೆ ಹಾಕಿದ ಹಿಂದೂ ವ್ಯಾಪಾರಿ ಸೆರೆ


