ಭಾರತದಲ್ಲಿ 300 ಕ್ಕೂ ಹೆಚ್ಚು ಜನರ ಮೊಬೈಲ್ ಸಂಖ್ಯೆಗಳು ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚರ್ಯೆ ಮಾಡಲಾಗಿದೆ ಎಂಬ ಆರೋಪಗಳ ಬಗ್ಗೆ ಜುಲೈ 28 ರಂದು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿಯು ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ.
ಸ್ಥಾಯಿ ಸಮಿತಿಯು “ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆ” ಕುರಿತು ಚರ್ಚಿಸಲಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಗೃಹ ಸಚಿವಾಲಯ ಮತ್ತು ಸಂವಹನ ಸಚಿವಾಲಯದ ಪ್ರತಿನಿಧಿಗಳನ್ನು ಕರೆದು ಈ ವಿಷಯದ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಸ್ರೇಲಿ ನಿರ್ಮಿತ ಪೆಗಾಸಸ್ ಸ್ಪೈವೇರ್ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಈ ಸ್ಪೈವೇರ್ ಬಳಸಿ ದೇಶದಲ್ಲಿ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಮತ್ತು ರಾಜಕಾರಣಿಗಳು ಸೇರಿ ಸುಮಾರು 300ಕ್ಕೂ ಅಧಿಕ ಜನರ ಮೇಲೆ ಕನ್ಗಾವಲು ಮಾಡಲಾಗಿದೆ. ಈ ವಿಷಯವು ಮಾಧ್ಯಮಗಳಲ್ಲಿ ಬಹಿರಂಗವಾದ ಬಳಿಕ, ಕಳೆದೆರಡು ದಿನಗಳಿಂದ ಮಾನ್ಸೂನ್ ಅಧಿವೇಶನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಪೆಗಾಸಸ್ ಪ್ರಾಜೆಕ್ಟ್ ಕುರಿತು ಮಾಧ್ಯಮಗಳ ವರದಿ ಅತ್ಯಂತ ಕಳವಳಕಿರಿಯಾಗಿದ್ದು, ಈ ಬೇಹುಗರಿಕೆ ವಿಚಾರ ಗಂಭೀರ ರಾಷ್ಟ್ರೀಯ ಭದ್ರತಾ ವಿಷಯವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಇದನ್ನೂ ಓದಿ: ಪೆಗಾಸಸ್ ಪ್ರಾಜೆಕ್ಟ್: ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಕಾಂಗ್ರೆಸ್ ಒತ್ತಾಯ
ಇಸ್ರೇಲಿ ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು ಪ್ರಸ್ತುತ ಸಂಪುಟದಲ್ಲಿರುವ ಇಬ್ಬರು ಮಂತ್ರಿಗಳು, 40 ಕ್ಕೂ ಹೆಚ್ಚು ಪತ್ರಕರ್ತರು, ಮೂವರು ವಿರೋಧ ಪಕ್ಷದ ನಾಯಕರು ಮತ್ತು ಒಬ್ಬ ನ್ಯಾಯಾಧೀಶರು, ಹಲವಾರು ಉದ್ಯಮಿಗಳು ಮತ್ತು ಹೋರಾಟಗಾರರು ಸೇರಿದಂತೆ 300 ಕ್ಕೂ ಹೆಚ್ಚು ಜನರ ಮೊಬೈಲ್ ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಪ್ಯಾರಿಸ್ ಮೂಲದ ಫಾರ್ಬಿಡನ್ ಸ್ಟೋರೀಸ್ ಸಂಸ್ಥೆ ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ. ಆದರೆ, ಸೋರಿಕೆಯಾದ ಡೇಟಾಬೇಸ್‌ನಲ್ಲಿ ಕಂಡುಬರುವ ಎಲ್ಲಾ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಗೂಢಚರ್ಯೆ ನಡೆಸುವಲ್ಲಿ ಒಕ್ಕೂಟ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಸರ್ಕಾರ ತಿಳಿಸಿದೆ. ತಾವೇ ಗೂಢಚರ್ಯೆಗೆ ಒಳಗಾಗಿದ್ದೇನೆ ಎಂದು ತಿಳಿಯುವ ಮೊದಲು ನೂತನ ಐಟಿ ಸಚಿವ ಅಶ್ವಿನಿ ವೈಷ್ಣವ್ ಬೇಹುಗಾರಿಕೆ ವರದಿಗಳಲ್ಲಿ ಯಾವುದೇ ಅಂಶವಿಲ್ಲ. ದೇಶದಲ್ಲಿ ಅನಧಿಕೃತ ಕಣ್ಗಾವಲು ಸಂಭವಿಸುವುದಿಲ್ಲ ಎಂದು ತಿಳಿಸಿದ್ದರು.
ಕರ್ನಾಟಕದ 2019 ರ ಸಮ್ಮಿಶ್ರ ಸರ್ಕಾರ ಉರುಳಲು ಈ ಪೆಗಾಸಸ್ ಗೂಢಚರ್ಯೆ ಕಾರಣವಾಗಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಮೇಲೆ ಪೆಗಾಸಸ್ ಕಣ್ಗಾವಲು ಇದ್ದದ್ದು ಈಗ ಬಹಿರಂಗವಾಗಿದೆ. ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ವೈಯಕ್ತಿಕ ಕಾರ್ಯದರ್ಶಿಗಳ ಮೊಬೈಲ್ ಫೋನ್ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಪ್ಯಾರಿಸ್ ಮೂಲದ ಫಾರ್ಬಿಡನ್ ಸ್ಟೋರೀಸ್ ಸಂಸ್ಥೆ ನಡೆಸಿದ ತನಿಖೆಯಿಂದ ಬಹಿರಂಗಗೊಂಡಿದೆ.
ಇದನ್ನೂ ಓದಿ: Explainer: ಏನಿದು ಪೆಗಾಸಸ್? ಹೇಗೆ ಫೋನ್ ಹ್ಯಾಕ್ ಮಾಡುತ್ತದೆ? ಅಪಾಯಗಳೇನು?


