Homeಅಂತರಾಷ್ಟ್ರೀಯಶೆರಿಬೇಬಿ ಮತ್ತು ನೊಬಡಿ’ಸ್ ಫೂಲ್: ಹಾಲಿವುಡ್ ನ ಎರಡು ಸರಳ ಚಿತ್ರಗಳು

ಶೆರಿಬೇಬಿ ಮತ್ತು ನೊಬಡಿ’ಸ್ ಫೂಲ್: ಹಾಲಿವುಡ್ ನ ಎರಡು ಸರಳ ಚಿತ್ರಗಳು

- Advertisement -
- Advertisement -

ಯಾವುದೋ ಒಂದು ಸಿನೆಮಾ ಏಕೆ ಇಷ್ಟವಾಗುವುದು ಎಂದು ಸರಳವಾಗಿ ಹೇಳುವುದು ಕಷ್ಟ. ಕೆಲವೊಮ್ಮೆ ನಮ್ಮ ಭಾವನೆಗಳನ್ನು, ನಮ್ಮ ತುಮುಲ ಸಂಕಷ್ಟಗಳನ್ನು ಪರದೆಯ ಮೇಲೆ ನೋಡಿದಾಗ, ಕೆಲವೊಮ್ಮೆ ನಮಗೆ ಗೊತ್ತಿರದ ಹೊಸ ಸಂಗತಿಗಳನ್ನು, ಹೊಸ ರೀತಿಯ ಸಂಬಂಧಗಳನ್ನು ನೋಡಿದಾಗ, ಇನ್ನೂ ಕೆಲವೊಮ್ಮೆ ನಾವು ಕಂಡಿದ್ದರೂ ಎಂದೂ ಗಮನಿಸದ ಸಂಗತಿಗಳನ್ನು ನೋಡಿದಾಗ ಆಯಾ ಚಿತ್ರಗಳು ಇಷ್ಟವಾಗುತ್ತವೆ. ಕೆಲವೊಮ್ಮೆ ಆಯಾ ಕಥೆಗಾರರು ಏನನ್ನು ಹೇಳಲು ಬಯಸುತ್ತಾರೆಯೋ ಅದನ್ನು ಮೀರಿ ಬೇರೆ ಕೆಲವು ಅಂಶಗಳ ಕಾರಣದಿಂದಲೂ ಚಿತ್ರಗಳು ಇಷ್ಟವಾಗುತ್ತವೆ.

ಕೌಟುಂಬಿಕ ಸಂಬಂಧಗಳ ಬಗ್ಗೆ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ ಎಂದು ನನಗನಿಸಿತ್ತು. ಕೌಟುಂಬಿಕ ಚಿತ್ರಗಳೆಂದರೆ ಹೆಚ್ಚಾಗಿ ದಂಪತಿಗಳ ಸಂಬಂಧ ಅಥವಾ ತಂದೆ ತಾಯಿ ಮತ್ತು ಮಕ್ಕಳ ಸಂಬಂಧದ ಚಿತ್ರಗಳು ಕಂಡುಬರುತ್ತವೆ. ನಾನು ನೋಡಿದ ಹಾಗೆ ಅಣ್ಣತಂಗಿಯರ ಸಂಬಂಧದ ಚಿತ್ರಗಳು ಬಂದಿದ್ದು ಸಾಪೇಕ್ಷವಾಗಿ ಕಡಿಮೆ. ಶೆರಿಬೇಬಿ (Sherrybaby)2006 ಎನ್ನುವ ಚಿತ್ರ ಮುಖ್ಯ ಅಂಶ ಅಣ್ಣತಂಗಿಯರ ಸಂಬಂಧವಂತೂ ಅಲ್ಲ ಆದರೆ ನನಗೆ ನೆನಪುಳಿದಿದ್ದು ಆ ಸಂಬಂಧ.

ಮಾದಕವ್ಯಸನಿಯಾಗಿದ್ದ ಶೆರಿ ಸ್ವಾನ್ಸನ್ ಈಗತಾನೇ ಯಾವುದೋ ಒಂದು ಅಪರಾಧಕ್ಕಾಗಿ ಸೆರೆವಾಸ ಅನುಭವಿಸಿ ಪರೋಲ್ ಮೇಲೆ ಹೊರಬಂದಿದ್ದಾಳೆ. ಅವಳಿಗೆ ಈಗ ತನ್ನ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕಿದೆ. ತನ್ನ ಪುಟ್ಟ ಮಗಳೊಂದಿಗೆ ಹೊಸದಾಗಿ ಸಂಬಂಧ ಬೆಸೆಯಬೇಕಿದೆ, ಕೆಲಸ ಮಾಡಬೇಕಿದೆ. ಮಾದಕವಸ್ತುವನ್ನು ಸೇವಿಸದರೆ ಮತ್ತೇ ಸೆರೆವಾಸ ಅನುಭವಿಸಬೇಕಾಗುತ್ತದೆ.

ಲಾರಿ ಕೋಲ್ಯರ್ ನಿರ್ದೇಶಿಸಿದ ಈ ಚಿತ್ರ ಮಾದಕವಸ್ತು, ಅದರ ಬಳಕೆಯ ಬಗ್ಗೆ ಆಗಿಲ್ಲ ಅಥವಾ ಬಳಕೆಯನ್ನು ತ್ಯಜಿಸಲು ಮಾಡುವ ಸಂಘರ್ಷದ ಬಗ್ಗೆಯೂ ಇಲ್ಲ. ನಾಯಕಿಯನ್ನು ಒಬ್ಬ ಸಂತ್ರಸ್ತೆಯಂತೆ ಚಿತ್ರಿಸದೇ, ಹೊರಗಡೆಯ ಜೀವನಕ್ಕೆ ಹೊಂದಿಕೊಳ್ಳಬೇಕಾದರೆ ಅವಳೇನೇನು ಮಾಡುತ್ತಾಳೆ ಎನ್ನುವುದನ್ನು ಸರಳವಾಗಿ ಚಿತ್ರಿಸಿದ್ದಾರೆ. ನಾಯಕಿ ಉದ್ಯೋಗವನ್ನು ಪಡೆಯಲು ತನ್ನ ಲೈಂಗಿಕತೆಯನ್ನು ಬಳಸುವಳು. ಬೇಟಿಯಾದ ಕೆಲವೇ ಸಮಯದಲ್ಲಿ ಇನ್ನೊಬ್ಬನೊಂದಿಗೆ ಲೈಂಗಿಕ ಸಂಪರ್ಕ ಮಾಡುವಳು. ಅವಳಿಗೆ ತಾನು ಮಾಡಿದ ತಪ್ಪಿನ ಅರಿವಿದೆ. ತನ್ನ ಅಣ್ಣ ಮತ್ತು ಅತ್ತಿಗೆಯ ಮನೆಯಲ್ಲಿ ಬೆಳೆಯುತ್ತಿರುವ ಮಗಳೊಂದಿಗೆ ಬಾಂಧ್ಯವ್ಯವನ್ನು ಮರುಸ್ಥಾಪಿಸಬೇಕಿದೆ. ಮಗಳನ್ನು ನೋಡಿಕೊಳ್ಳುತ್ತಿರುವ ಅತ್ತಿಗೆಗೆ ಇವಳು ತಾಯಿಯ ಜವಾಬ್ದಾರಿಯನ್ನು ನಿಭಾಯಿಸಬಲ್ಲಳೇ ಎನ್ನುವ ಸಂಶಯವಿದೆ. ಮಗಳು ಒಂದು ಸಲ ಮಮ್ಮಿ ಎಂದು ಕರೆದರೆ ಇನ್ನೊಂದು ಸಲ ಇವಳ ಹೆಸರನ್ನು ಹೇಳಿ ಕರೆಯುತ್ತಾಳೆ.

ತನ್ನ ಪರೋಲ್ ಸರಿಯಾಗಿ ನಿಭಾಯಿಸುವುದು, ಕೆಲಸ, ತನ್ನ ತಂದೆಯೊಂದಿಗಿನ ಸಂಕೀರ್ಣ ಸಂಬಂಧಗಳೆಲ್ಲವೂ ಇವಳ ಮೇಲೆ ಪರಿಣಾಮ ಬೀರದೇ ಇರುವುದಿಲ್ಲ. ಮಾದಕವಸ್ತುಗಳು ಸದಾಕಾಲ ಅವಳನ್ನು ಕರೆಯುತ್ತಲೇ ಇರುತ್ತವೆ. ಇವಳು ಯಶಸ್ವಿಯಾಗಿ ನಿಭಾಯಿಸಬಲ್ಲಳೆ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ.

ಇಂತಹ ಪಾತ್ರಗಳನ್ನು ಅಭಿನಯಿಸುವುದೆಂದರೆ ಸಾಮಾನ್ಯವಾಗಿ ಹೆಚ್ಚಿನ ನಟರಿಗೆ ತಮ್ಮ ಅಭಿನಯ ಸಾಮಥ್ರ್ಯವನ್ನು ಪ್ರದರ್ಶಿಸುವ ಅವಕಾಶ ಸಿಕ್ಕಂತೆ. ಆದರೆ ಮ್ಯಾಗಿ ಜಿಲೆನ್‍ಹಾಲ್ ಎಂಬ ಅದ್ಭುತ ನಟಿಯು ನಾವೆಷ್ಟು ಸಲ ಈ ಚಿತ್ರವನ್ನು ನೋಡಿದರೂ ಅವರ ಅಭಿನಯವನ್ನು ವಿಶ್ಲೇಷಿಸಲು ಆಗದಂತೆ, ಕೇವಲ ಶೇರಿಯನ್ನು ಮಾತ್ರ ನೋಡುವಂತೆ ಸರಳವಾಗಿ ಅಭಿನಯಿಸಿದ್ದಾರೆ.

ಸಂಕೀರ್ಣ ಸಂಬಂಧಗಳನ್ನು ನೇರವಾಗಿ ಹೇಳುವ ಈ ಚಿತ್ರವನ್ನು ನೋಡುವುದು ಸುಲಭವಲ್ಲ ಎನ್ನುವುದು ಹಲವರ ಅಭಿಪ್ರಾಯ. ಸಂಕೀರ್ಣತೆಗಳ ಹುಡುಕಾಟ ಕತೆಗಾರನಿಗಾಗಲೀ, ನೋಡುಗನಿಗಾಗಲೀ ಸುಲಭ ಎಂದು ಯಾರೂ ಹೇಳಿಲ್ಲವಲ್ಲ.

ನೊಬಡಿ’ಸ್ ಫೂಲ್ (Nobody’s fool)1994. ರಾಬರ್ಟ್ ರುಸೊ ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ನೋಡಿದರೆ ‘ಈ ಚಿತ್ರದಲ್ಲಿ ಏನೂ ಆಗುವುದೇ ಇಲ್ಲವಲ್ಲ’ ಎಂದು ಕೆಲವರಿಗೆ ಅನಿಸಬಹುದು.

ಅಮೇರಿಕದ ಒಂದು ಸಣ್ಣ ನಗರದಲ್ಲಿ ಯಾವುದೇ ಜವಾಬ್ದಾರಿಗಳಿಲ್ಲದೇ ಜೀವನವನ್ನು ಸವೆಸುತ್ತಿರುವ ಡೊನಾಲ್ಡ್ ಸಲಿವಾನ್ ‘ಸಲಿ’(ಪಾಲ್ ನ್ಯೂಮನ್). ಅವನ ಗತಕಾಲ ವರ್ತಮಾನದೊಂದಿಗೆ ತಳಕಾಡುತ್ತದೆ. ತನ್ನ ಮಗ ಕೆಲವು ತಿಂಗಳಷ್ಟಿದ್ದಾಗಲೇ ಮಡದಿಯೊಂದಿಗೆ ಬೇರೆಯಾಗಿ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಲಿವಾನ್‍ಗೆ ಈಗಾಗಲೇ 60 ವರ್ಷ. ಇಲ್ಲಿ ಬರುವ ಪಾತ್ರಗಳು ಮತ್ತು ಅವುಗಳೊಡನೆ ಸಲಿವಾನ್‍ಗೆ ಇರುವ ಸಂಬಂಧಗಳು ಸಲಿವಾನ್‍ನ ತಪ್ಪು ಒಪ್ಪುಗಳ ಬಗ್ಗೆ ಹೇಳುತ್ತವೆ. ಒಂದು ದೃಷ್ಟಿಯಲ್ಲಿ ಇದು ಅವನ ಪಯಣ, ನೇರ ಸರಳ ಪಯಣ.

ತನಗೆ ಮನೆಯೆಂಬುದು ಇಲ್ಲ, ಸ್ಥಳೀಯ ಬಿಲ್ಡರ್‍ನೊಂದಿಗೆ ಚಿಕ್ಕಪುಟ್ಟ ಕೆಲಸ ಮಾಡುತ್ತಾನೆ, ಹಂಡತಿಯಿಲ್ಲ, ಮಗನನ್ನು ಕೆಲವು ತಿಂಗಳಿದ್ದಾಗ ಮಾತ್ರ ನೋಡಿದ್ದು, ಜವಾಬ್ದಾರಿ ಎನ್ನುವುದು ಇವನಿಗೆ ಗೊತ್ತೇ ಇಲ್ಲ. ಆದರೂ ಇವನನ್ನು ಇಷ್ಟಪಡದೇ ಇರಲಾರೆವು. ಹಬ್ಬಕ್ಕಾಗಿ ತಾಯಿಯ ಮನೆಗೆ ಬಂದ ಮಗ ಮತ್ತು ಅವನ ಕುಟುಂಬದಿಂದ ಸಲಿವಾನ್‍ಗೆ ತನ್ನ ತಪ್ಪುಗಳನ್ನು ಸರಿಪಡಿಸಲು ಒಂದು ಅವಕಾಶ ಸಿಕ್ಕಿದೆ. ಆದರೆ ಇವನು ಒಂದು ಅವಕಾಶ ಎಂದು ನೋಡುತ್ತಿಲ್ಲ; ತನಗೆ ತೋಚಿದ್ದನ್ನು ಮಾಡುತ್ತಿದ್ದಾನೆ. ಎಲ್ಲವನ್ನು ಕಳೆದುಕೊಂಡವನಿಗೆ ಪಡೆದುಕೊಳ್ಳುವುದು ಏನೂ ಇಲ್ಲ, ಆದರೂ ಜೀವನ ಬೆಂಬಿಡುವುದಿಲ್ಲ. ತನ್ನ ಜೊತೆಗೆ ಕೆಲಸ ಮಾಡುವ ರಬ್, ತನ್ನ ಮನೆಯ ಮಾಲಕಿ ಬೆರಿಲ್, ತಾನು ಪ್ರತಿನಿತ್ಯ ಕುಡಿಯುವ ಬಾರಿನ ಬರ್ಡಿ, ಜೊತೆಯಲ್ಲಿ ಜೂಜಾಡುವ ವಕೀಲ ಗೆಳೆಯ, ಪೊಲೀಸ್ ಅಧಿಕಾರಿ, ವೈದ್ಯ ಇವರೆಲ್ಲರಿಗೂ ಸಲಿವಾನ್‍ನ ಒಳ್ಳೆಯತನದ ಬಗ್ಗೆ ನಂಬಿಕೆಯಿದೆ. ಬಿಲ್ಡರ್ ಕಾರ್ಲ್‍ನೊಂದಿಗೆ (ಬ್ರೂಸ್ ವಿಲಿಸ್) ಜಗಳವಾಡುತ್ತಿದ್ದರೂ ಪರಸ್ಪರ ನಂಬಿಕೆಯಿದೆ. ಆ ಘಳಿಗೆಯಲ್ಲಿ ಅನಿಸಿದ್ದನ್ನು ಮಾಡುವ ಈತ ಒಬ್ಬ ಪೊಲೀಸ್ ಅಧಿಕಾರಿಗೆ ಗೂಸಾ ಕೊಟ್ಟು ಜೈಲಿಗೂ ಹೋಗಿ ಬರಬಲ್ಲ. ಕಾರ್ಲ್‍ನ ಮನೆಯಿಂದ ಕಳ್ಳತನವನ್ನೂ ಮಾಡಬಲ್ಲ, ಕಾರ್ಲ್‍ನ ಹೆಂಡತಿಯೊಂದಿಗೆ ಫ್ಲರ್ಟ್ ಕೂಡ ಮಾಡಬಲ್ಲ ಆದರೆ ಜವಾಬ್ದಾರಿ ತೆಗೆದುಕೊಳ್ಳಲು ಆಗುವುದಿಲ್ಲ.


ಇಲ್ಲಿ ಕಥೆಗಾರ ಇವನ ವ್ಯಕ್ತಿತ್ವಕ್ಕೆ, ಬೇಜವಾಬ್ದಾರಿಗೆ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಎದುರಾದ ಹೊಸ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾ ಹೋಗುತ್ತಾನೆ ಎನ್ನುವುದೇ ಈ ಚಿತ್ರದ ಪಯಣ. ಇವನಿಗೆ ತಾನು ಒಳ್ಳೆಯವನಾಗಬೇಕು ಅಥವಾ ಸರಿಯಾಗಿರಬೇಕು ಎನ್ನುವ ಯಾವ ಬಯಕೆಯೂ ಇಲ್ಲ. ತನ್ನ ಮಗ ಇಷ್ಟು ವರ್ಷಗಳ ನಂತರ ತನ್ನ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಭೇಟಿಯಾದಾಗ ಯಾರು ಯಾರಿಗೆ ಸಹಾಯ ಮಾಡುತ್ತಾರೆ ಎಂಬುವುದು ಸ್ಪಷ್ಟವಾಗುವುದಿಲ್ಲ. ಕೂಸಾಗಿದ್ದಲೇ ತನ್ನನ್ನು ಬಿಟ್ಟು ಹೋದ ಅಪ್ಪ ಎನ್ನುವ ಸಿಟ್ಟಿದೆ ಮಗನಿಗೆ. ಸದ್ಯಕ್ಕೆ ಅವನೂ ತನ್ನ ಕೆಲಸ ಕಳೆದುಕೊಂಡು, ತನ್ನ ಹೆಂಡತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾನೆ. ಗೆಳೆಯ ರಬ್‍ನಿಗೆ ಸಲಿವಾನ್ ಬಿಟ್ಟರೆ ಯಾರೂ ಇಲ್ಲ.

ಯಾವುದೇ ಜವಾಬ್ದಾರಿ ಇಲ್ಲದೇ ಸ್ವೇಚ್ಛಂಧವಾಗಿ ಜೀವಿಸಿದರೂ ಅವನಿಗೂ ಕಾಣದಂತೆ ಜವಾಬ್ದಾರಿಗಳು ಬರುತ್ತಿವೆ. ತನ್ನ ಪಾಪಗಳನ್ನು ಪರಿಹರಿಸುವ ಅವಕಾಶ ಸಿಕ್ಕಿದೆ. ಚಿತ್ರದ ಕೊನೆಯಲ್ಲಿ ಒಂದು ಸೋಫಾ ಮೇಲೆ ಕುಳಿತಲ್ಲಿಯೇ ನಿದ್ರೆಗೆ ಜಾರಿದಾಗ ತುಟಿಯ ಅಂಚಿನಲ್ಲಿ ಒಂದು ಕಿರುನಗೆ ಕಾಣಿಸಿಕೊಳ್ಳುತ್ತದೆ.

ರಾಬರ್ಟ್ ಬೆಂಟನ್ ನಿರ್ದೇಶಿಸಿದ ಈ ಚಿತ್ರದ ಜೀವಾಳ ನಟರ ಅಭಿನಯ. ಈ ಚಿತ್ರವನ್ನು ನಾವೆಷ್ಟೇ ಸಲ ನೋಡಿದರೂ ಪಾಲ್ ನ್ಯೂಮನ್ ಡೋನಾಲ್ಡ್ ಸಲಿವಾನ್ ಆಗಿಯೇ ಕಾಣುತ್ತಾನೆಯೇ ಹೊರತು ಪ್ರಸಿದ್ಧ ನಟನಾಗಿ ಅಲ್ಲ. ಸಲಿವಾನ್ ಆಗಿ ಯಾವುದೇ ಶ್ರಮವಿಲ್ಲದೇ ಸಹಜವಾಗಿ ಪಾಲ್ ನ್ಯೂಮನ್ ಅಭಿನಯಿಸಿದ್ದರೆ, ಅವರೊಂದಿಗೆ ಆ್ಯಕ್ಷನ್ ಹೀರೊ ಬ್ರೂಸ್ ವಿಲಿಸ್‍ನಿಂದ ಇತರ ಎಲ್ಲರೂ ಆಯಾ ಪಾತ್ರಗಳು, ಸನ್ನಿವೇಶಗಳನ್ನು ಸಹಜವಾಗಿಸುವಲ್ಲಿ ಅಷ್ಟೇ ಪ್ರಮುಖ ಪಾತ್ರ ವಹಿಸಿದ್ದಾರೆ. ಜೀವನದ ಒಂದು ಜೀವಂತ ತುಣುಕು ಪರದೆಯ ಮೇಲೆ ಬಂದ ಒಂದು ಉದಾಹರಣೆ ನೊಬಡಿ’ಸ್ ಫೂಲ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಛತ್ತೀಸ್‌ಗಢ| ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿ ಗುಂಪಿನಿಂದ ಹಲ್ಲೆ; ‘ಜೈ ಶ್ರೀ ರಾಮ್’ ಕೂಗುವಂತೆ ಒತ್ತಾಯ

ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಯುವಕನ ಮೇಲೆ ಹಿಂದುತ್ವವಾದಿಗಳ ಗುಂಪೊಂದು ಹಲ್ಲೆ ನಡೆಸಿ, ಜೈಶ್ರೀರಾಮ್ ಎಂದು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದೆ ಎಂಬ ಆರೋಪ ಕೇಳಿಬಂದಿದೆ. ಇಂದು (ಮಾ.18) ನಡೆದಿದೆ ಎನ್ನಲಾದ ಈ ಘಟನೆಯ...

ಯುಪಿಎಸ್‌ಸಿ 440 ನೇ ರ‍್ಯಾಂಕ್ ಎಂದು ಸುಳ್ಳು ಹೇಳಿ ಸಂಭ್ರಮಾಚರಣೆ ಮಾಡಿದ್ದ ಬಿಹಾರದ ಯುವಕನ ಬಂಧನ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) 2025 ರಲ್ಲಿ ಅಖಿಲ ಭಾರತ ರ‍್ಯಾಂಕ್ (ಎಐಆರ್) 440 ಗಳಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡ ಕೆಲವು ದಿನಗಳ ನಂತರ, ಬಿಹಾರದ ಶೇಖ್‌ಪುರ...

‘ಜೈ ಬಾಂಗ್ಲಾ’ ಘೋಷಣೆ ಕೂಗಿದ ಆರೋಪ: ಮಹಿಳೆಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರಿನ ಹೆಬ್ಬಗೂಡಿಯಲ್ಲಿ ಅಕ್ರಮ ಎನ್ನಲಾದ ಶೆಡ್‌ಗಳ ತೆರವು ಕಾರ್ಯಾಚರಣೆ ವೇಳೆ 'ಜೈ ಬಾಂಗ್ಲಾ' ಘೋಷಣೆ ಕೂಗಿದ ಆರೋಪದ ಮೇಲೆ ಬಂಧಿತರಾದ ಪಶ್ಚಿಮ ಬಂಗಾಳದ ಮಹಿಳೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಎಸ್.ರಾಚಯ್ಯ...

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡಿಜೆ, ಐಟಂ ಹಾಡು ನಿಷೇಧಿಸಲು ಕರ್ನಾಟಕ ಯೋಜನೆ; ವಿಧಾನಸಭೆಯಲ್ಲಿ ಸಂತೋಷ್ ಲಾಡ್ ಪ್ರಸ್ತಾಪ

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಧಾರ್ಮಿಕ ಮೆರವಣಿಗೆಗಳಲ್ಲಿ ಅಬ್ಬರದ ಸಂಗೀತ ಮತ್ತು "ಐಟಂ ಹಾಡುಗಳನ್ನು" ನುಡಿಸುವ ಡಿಸ್ಕ್ ಜಾಕಿಗಳನ್ನು (ಡಿಜೆ) ನಿಷೇಧಿಸುವ ಪರವಾಗಿ ಕರ್ನಾಟಕ ಸರ್ಕಾರವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ...

ದೆಹಲಿಯ ಪಾಲಂನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಮೂವರು ಮಕ್ಕಳು ಸೇರಿ ಏಳು ಮಂದಿ ಸಾವು

ರಾಷ್ಟ್ರ ರಾಜಧಾನಿಯ ಪಾಲಂ ಪ್ರದೇಶದ ವಸತಿ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ...

ವಾರಣಾಸಿ: ಗಂಗಾ ನದಿಯ ದೋಣಿಯಲ್ಲಿ ‘ಇಫ್ತಾರ್’ ಕೂಟ ಆಯೋಜಿಸಿದ್ದಕ್ಕಾಗಿ 14 ಜನರ ಬಂಧನ 

ವಾರಣಾಸಿಯಲ್ಲಿ ಗಂಗಾ ನದಿಯ ಮಧ್ಯದಲ್ಲಿ ದೋಣಿಯಲ್ಲಿ 'ಇಫ್ತಾರ್' (ರಂಜಾನ್ ಸಮಯದಲ್ಲಿ ಸೂರ್ಯಾಸ್ತದ ನಂತರ ತಿನ್ನುವ ಊಟ) ಕೂಟವನ್ನು ಆಯೋಜಿಸಿದ್ದಕ್ಕಾಗಿ ಹದಿನಾಲ್ಕು ಮುಸ್ಲಿಂ ಯುವಕರನ್ನು ಬಂಧಿಸಲಾಗಿದೆ.  ದೈನಂದಿನ ಮುಸ್ಲಿಂ ಜೀವನವನ್ನು ಅಪರಾಧೀಕರಿಸುವ ಮತ್ತೊಂದು ಪ್ರಕರಣ ಇದಾಗಿದ್ದು,...

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ರಾಜೀನಾಮೆ

ಚುನಾವಣೆ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ತಮ್ಮ ಸ್ಥಾನಗಳಿಗೆ ಮಂಗಳವಾರ (ಮಾ.17) ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಹಾಗೂ ನೌಗಾಂಗ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರದ್ಯುತ್ ಬೋರ್ಡೊಲೊಯ್...

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ : ಮೂವರು ಶಾಸಕರನ್ನು ಅಮಾನತುಗೊಳಿಸಿದ ಒಡಿಶಾ ಕಾಂಗ್ರೆಸ್

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾ ಕಾಂಗ್ರೆಸ್ ಮೂವರು ಶಾಸಕರಾದ ಸೋಫಿಯಾ ಫಿರ್ದೌಸ್, ರಮೇಶ್ ಜೆನಾ ಮತ್ತು ದಾಸರಥಿ ಗೊಮಾಂಗೊ ಅವರನ್ನು ಅಮಾನತುಗೊಳಿಸಿದೆ. ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದು, ನಾಲ್ಕನೇ...

ಅಮೆರಿಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಳದ ನಿರ್ದೇಶಕ ಜೋ ಕೆಂಟ್‌ ರಾಜೀನಾಮೆ

ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎನ್‌ಸಿಟಿಸಿ) ನಿರ್ದೇಶಕ ಜೋ ಕೆಂಟ್ ಅವರು ಇರಾನ್ ಜೊತೆಗಿನ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. "ಇರಾನ್‌ನಿಂದ ಅಮೆರಿಕಕ್ಕೆ ಯಾವುದೇ ತಕ್ಷಣದ ಅಪಾಯವಿರಲಿಲ್ಲ. ಇಸ್ರೇಲ್‌ನ ಒತ್ತಡದಿಂದಾಗಿ...

ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡ ಇಸ್ರೇಲ್ 

ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಮಂಗಳವಾರ ಹೇಳಿದ್ದಾರೆ. ಆದರೆ ಟೆಹ್ರಾನ್‌ನಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಕಾಟ್ಜ್ ಪ್ರಕಾರ, ಜನರಲ್ ಘೋಲಮ್...