ಯಾವುದೋ ಒಂದು ಸಿನೆಮಾ ಏಕೆ ಇಷ್ಟವಾಗುವುದು ಎಂದು ಸರಳವಾಗಿ ಹೇಳುವುದು ಕಷ್ಟ. ಕೆಲವೊಮ್ಮೆ ನಮ್ಮ ಭಾವನೆಗಳನ್ನು, ನಮ್ಮ ತುಮುಲ ಸಂಕಷ್ಟಗಳನ್ನು ಪರದೆಯ ಮೇಲೆ ನೋಡಿದಾಗ, ಕೆಲವೊಮ್ಮೆ ನಮಗೆ ಗೊತ್ತಿರದ ಹೊಸ ಸಂಗತಿಗಳನ್ನು, ಹೊಸ ರೀತಿಯ ಸಂಬಂಧಗಳನ್ನು ನೋಡಿದಾಗ, ಇನ್ನೂ ಕೆಲವೊಮ್ಮೆ ನಾವು ಕಂಡಿದ್ದರೂ ಎಂದೂ ಗಮನಿಸದ ಸಂಗತಿಗಳನ್ನು ನೋಡಿದಾಗ ಆಯಾ ಚಿತ್ರಗಳು ಇಷ್ಟವಾಗುತ್ತವೆ. ಕೆಲವೊಮ್ಮೆ ಆಯಾ ಕಥೆಗಾರರು ಏನನ್ನು ಹೇಳಲು ಬಯಸುತ್ತಾರೆಯೋ ಅದನ್ನು ಮೀರಿ ಬೇರೆ ಕೆಲವು ಅಂಶಗಳ ಕಾರಣದಿಂದಲೂ ಚಿತ್ರಗಳು ಇಷ್ಟವಾಗುತ್ತವೆ.

ಕೌಟುಂಬಿಕ ಸಂಬಂಧಗಳ ಬಗ್ಗೆ ಸಾಕಷ್ಟು ಚಿತ್ರಗಳನ್ನು ನೋಡಿದ್ದೇವೆ ಎಂದು ನನಗನಿಸಿತ್ತು. ಕೌಟುಂಬಿಕ ಚಿತ್ರಗಳೆಂದರೆ ಹೆಚ್ಚಾಗಿ ದಂಪತಿಗಳ ಸಂಬಂಧ ಅಥವಾ ತಂದೆ ತಾಯಿ ಮತ್ತು ಮಕ್ಕಳ ಸಂಬಂಧದ ಚಿತ್ರಗಳು ಕಂಡುಬರುತ್ತವೆ. ನಾನು ನೋಡಿದ ಹಾಗೆ ಅಣ್ಣತಂಗಿಯರ ಸಂಬಂಧದ ಚಿತ್ರಗಳು ಬಂದಿದ್ದು ಸಾಪೇಕ್ಷವಾಗಿ ಕಡಿಮೆ. ಶೆರಿಬೇಬಿ (Sherrybaby)2006 ಎನ್ನುವ ಚಿತ್ರ ಮುಖ್ಯ ಅಂಶ ಅಣ್ಣತಂಗಿಯರ ಸಂಬಂಧವಂತೂ ಅಲ್ಲ ಆದರೆ ನನಗೆ ನೆನಪುಳಿದಿದ್ದು ಆ ಸಂಬಂಧ.

ಮಾದಕವ್ಯಸನಿಯಾಗಿದ್ದ ಶೆರಿ ಸ್ವಾನ್ಸನ್ ಈಗತಾನೇ ಯಾವುದೋ ಒಂದು ಅಪರಾಧಕ್ಕಾಗಿ ಸೆರೆವಾಸ ಅನುಭವಿಸಿ ಪರೋಲ್ ಮೇಲೆ ಹೊರಬಂದಿದ್ದಾಳೆ. ಅವಳಿಗೆ ಈಗ ತನ್ನ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕಿದೆ. ತನ್ನ ಪುಟ್ಟ ಮಗಳೊಂದಿಗೆ ಹೊಸದಾಗಿ ಸಂಬಂಧ ಬೆಸೆಯಬೇಕಿದೆ, ಕೆಲಸ ಮಾಡಬೇಕಿದೆ. ಮಾದಕವಸ್ತುವನ್ನು ಸೇವಿಸದರೆ ಮತ್ತೇ ಸೆರೆವಾಸ ಅನುಭವಿಸಬೇಕಾಗುತ್ತದೆ.

ಲಾರಿ ಕೋಲ್ಯರ್ ನಿರ್ದೇಶಿಸಿದ ಈ ಚಿತ್ರ ಮಾದಕವಸ್ತು, ಅದರ ಬಳಕೆಯ ಬಗ್ಗೆ ಆಗಿಲ್ಲ ಅಥವಾ ಬಳಕೆಯನ್ನು ತ್ಯಜಿಸಲು ಮಾಡುವ ಸಂಘರ್ಷದ ಬಗ್ಗೆಯೂ ಇಲ್ಲ. ನಾಯಕಿಯನ್ನು ಒಬ್ಬ ಸಂತ್ರಸ್ತೆಯಂತೆ ಚಿತ್ರಿಸದೇ, ಹೊರಗಡೆಯ ಜೀವನಕ್ಕೆ ಹೊಂದಿಕೊಳ್ಳಬೇಕಾದರೆ ಅವಳೇನೇನು ಮಾಡುತ್ತಾಳೆ ಎನ್ನುವುದನ್ನು ಸರಳವಾಗಿ ಚಿತ್ರಿಸಿದ್ದಾರೆ. ನಾಯಕಿ ಉದ್ಯೋಗವನ್ನು ಪಡೆಯಲು ತನ್ನ ಲೈಂಗಿಕತೆಯನ್ನು ಬಳಸುವಳು. ಬೇಟಿಯಾದ ಕೆಲವೇ ಸಮಯದಲ್ಲಿ ಇನ್ನೊಬ್ಬನೊಂದಿಗೆ ಲೈಂಗಿಕ ಸಂಪರ್ಕ ಮಾಡುವಳು. ಅವಳಿಗೆ ತಾನು ಮಾಡಿದ ತಪ್ಪಿನ ಅರಿವಿದೆ. ತನ್ನ ಅಣ್ಣ ಮತ್ತು ಅತ್ತಿಗೆಯ ಮನೆಯಲ್ಲಿ ಬೆಳೆಯುತ್ತಿರುವ ಮಗಳೊಂದಿಗೆ ಬಾಂಧ್ಯವ್ಯವನ್ನು ಮರುಸ್ಥಾಪಿಸಬೇಕಿದೆ. ಮಗಳನ್ನು ನೋಡಿಕೊಳ್ಳುತ್ತಿರುವ ಅತ್ತಿಗೆಗೆ ಇವಳು ತಾಯಿಯ ಜವಾಬ್ದಾರಿಯನ್ನು ನಿಭಾಯಿಸಬಲ್ಲಳೇ ಎನ್ನುವ ಸಂಶಯವಿದೆ. ಮಗಳು ಒಂದು ಸಲ ಮಮ್ಮಿ ಎಂದು ಕರೆದರೆ ಇನ್ನೊಂದು ಸಲ ಇವಳ ಹೆಸರನ್ನು ಹೇಳಿ ಕರೆಯುತ್ತಾಳೆ.

ತನ್ನ ಪರೋಲ್ ಸರಿಯಾಗಿ ನಿಭಾಯಿಸುವುದು, ಕೆಲಸ, ತನ್ನ ತಂದೆಯೊಂದಿಗಿನ ಸಂಕೀರ್ಣ ಸಂಬಂಧಗಳೆಲ್ಲವೂ ಇವಳ ಮೇಲೆ ಪರಿಣಾಮ ಬೀರದೇ ಇರುವುದಿಲ್ಲ. ಮಾದಕವಸ್ತುಗಳು ಸದಾಕಾಲ ಅವಳನ್ನು ಕರೆಯುತ್ತಲೇ ಇರುತ್ತವೆ. ಇವಳು ಯಶಸ್ವಿಯಾಗಿ ನಿಭಾಯಿಸಬಲ್ಲಳೆ ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ.

ಇಂತಹ ಪಾತ್ರಗಳನ್ನು ಅಭಿನಯಿಸುವುದೆಂದರೆ ಸಾಮಾನ್ಯವಾಗಿ ಹೆಚ್ಚಿನ ನಟರಿಗೆ ತಮ್ಮ ಅಭಿನಯ ಸಾಮಥ್ರ್ಯವನ್ನು ಪ್ರದರ್ಶಿಸುವ ಅವಕಾಶ ಸಿಕ್ಕಂತೆ. ಆದರೆ ಮ್ಯಾಗಿ ಜಿಲೆನ್‍ಹಾಲ್ ಎಂಬ ಅದ್ಭುತ ನಟಿಯು ನಾವೆಷ್ಟು ಸಲ ಈ ಚಿತ್ರವನ್ನು ನೋಡಿದರೂ ಅವರ ಅಭಿನಯವನ್ನು ವಿಶ್ಲೇಷಿಸಲು ಆಗದಂತೆ, ಕೇವಲ ಶೇರಿಯನ್ನು ಮಾತ್ರ ನೋಡುವಂತೆ ಸರಳವಾಗಿ ಅಭಿನಯಿಸಿದ್ದಾರೆ.

ಸಂಕೀರ್ಣ ಸಂಬಂಧಗಳನ್ನು ನೇರವಾಗಿ ಹೇಳುವ ಈ ಚಿತ್ರವನ್ನು ನೋಡುವುದು ಸುಲಭವಲ್ಲ ಎನ್ನುವುದು ಹಲವರ ಅಭಿಪ್ರಾಯ. ಸಂಕೀರ್ಣತೆಗಳ ಹುಡುಕಾಟ ಕತೆಗಾರನಿಗಾಗಲೀ, ನೋಡುಗನಿಗಾಗಲೀ ಸುಲಭ ಎಂದು ಯಾರೂ ಹೇಳಿಲ್ಲವಲ್ಲ.

ನೊಬಡಿ’ಸ್ ಫೂಲ್ (Nobody’s fool)1994. ರಾಬರ್ಟ್ ರುಸೊ ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ನೋಡಿದರೆ ‘ಈ ಚಿತ್ರದಲ್ಲಿ ಏನೂ ಆಗುವುದೇ ಇಲ್ಲವಲ್ಲ’ ಎಂದು ಕೆಲವರಿಗೆ ಅನಿಸಬಹುದು.

ಅಮೇರಿಕದ ಒಂದು ಸಣ್ಣ ನಗರದಲ್ಲಿ ಯಾವುದೇ ಜವಾಬ್ದಾರಿಗಳಿಲ್ಲದೇ ಜೀವನವನ್ನು ಸವೆಸುತ್ತಿರುವ ಡೊನಾಲ್ಡ್ ಸಲಿವಾನ್ ‘ಸಲಿ’(ಪಾಲ್ ನ್ಯೂಮನ್). ಅವನ ಗತಕಾಲ ವರ್ತಮಾನದೊಂದಿಗೆ ತಳಕಾಡುತ್ತದೆ. ತನ್ನ ಮಗ ಕೆಲವು ತಿಂಗಳಷ್ಟಿದ್ದಾಗಲೇ ಮಡದಿಯೊಂದಿಗೆ ಬೇರೆಯಾಗಿ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಲಿವಾನ್‍ಗೆ ಈಗಾಗಲೇ 60 ವರ್ಷ. ಇಲ್ಲಿ ಬರುವ ಪಾತ್ರಗಳು ಮತ್ತು ಅವುಗಳೊಡನೆ ಸಲಿವಾನ್‍ಗೆ ಇರುವ ಸಂಬಂಧಗಳು ಸಲಿವಾನ್‍ನ ತಪ್ಪು ಒಪ್ಪುಗಳ ಬಗ್ಗೆ ಹೇಳುತ್ತವೆ. ಒಂದು ದೃಷ್ಟಿಯಲ್ಲಿ ಇದು ಅವನ ಪಯಣ, ನೇರ ಸರಳ ಪಯಣ.

ತನಗೆ ಮನೆಯೆಂಬುದು ಇಲ್ಲ, ಸ್ಥಳೀಯ ಬಿಲ್ಡರ್‍ನೊಂದಿಗೆ ಚಿಕ್ಕಪುಟ್ಟ ಕೆಲಸ ಮಾಡುತ್ತಾನೆ, ಹಂಡತಿಯಿಲ್ಲ, ಮಗನನ್ನು ಕೆಲವು ತಿಂಗಳಿದ್ದಾಗ ಮಾತ್ರ ನೋಡಿದ್ದು, ಜವಾಬ್ದಾರಿ ಎನ್ನುವುದು ಇವನಿಗೆ ಗೊತ್ತೇ ಇಲ್ಲ. ಆದರೂ ಇವನನ್ನು ಇಷ್ಟಪಡದೇ ಇರಲಾರೆವು. ಹಬ್ಬಕ್ಕಾಗಿ ತಾಯಿಯ ಮನೆಗೆ ಬಂದ ಮಗ ಮತ್ತು ಅವನ ಕುಟುಂಬದಿಂದ ಸಲಿವಾನ್‍ಗೆ ತನ್ನ ತಪ್ಪುಗಳನ್ನು ಸರಿಪಡಿಸಲು ಒಂದು ಅವಕಾಶ ಸಿಕ್ಕಿದೆ. ಆದರೆ ಇವನು ಒಂದು ಅವಕಾಶ ಎಂದು ನೋಡುತ್ತಿಲ್ಲ; ತನಗೆ ತೋಚಿದ್ದನ್ನು ಮಾಡುತ್ತಿದ್ದಾನೆ. ಎಲ್ಲವನ್ನು ಕಳೆದುಕೊಂಡವನಿಗೆ ಪಡೆದುಕೊಳ್ಳುವುದು ಏನೂ ಇಲ್ಲ, ಆದರೂ ಜೀವನ ಬೆಂಬಿಡುವುದಿಲ್ಲ. ತನ್ನ ಜೊತೆಗೆ ಕೆಲಸ ಮಾಡುವ ರಬ್, ತನ್ನ ಮನೆಯ ಮಾಲಕಿ ಬೆರಿಲ್, ತಾನು ಪ್ರತಿನಿತ್ಯ ಕುಡಿಯುವ ಬಾರಿನ ಬರ್ಡಿ, ಜೊತೆಯಲ್ಲಿ ಜೂಜಾಡುವ ವಕೀಲ ಗೆಳೆಯ, ಪೊಲೀಸ್ ಅಧಿಕಾರಿ, ವೈದ್ಯ ಇವರೆಲ್ಲರಿಗೂ ಸಲಿವಾನ್‍ನ ಒಳ್ಳೆಯತನದ ಬಗ್ಗೆ ನಂಬಿಕೆಯಿದೆ. ಬಿಲ್ಡರ್ ಕಾರ್ಲ್‍ನೊಂದಿಗೆ (ಬ್ರೂಸ್ ವಿಲಿಸ್) ಜಗಳವಾಡುತ್ತಿದ್ದರೂ ಪರಸ್ಪರ ನಂಬಿಕೆಯಿದೆ. ಆ ಘಳಿಗೆಯಲ್ಲಿ ಅನಿಸಿದ್ದನ್ನು ಮಾಡುವ ಈತ ಒಬ್ಬ ಪೊಲೀಸ್ ಅಧಿಕಾರಿಗೆ ಗೂಸಾ ಕೊಟ್ಟು ಜೈಲಿಗೂ ಹೋಗಿ ಬರಬಲ್ಲ. ಕಾರ್ಲ್‍ನ ಮನೆಯಿಂದ ಕಳ್ಳತನವನ್ನೂ ಮಾಡಬಲ್ಲ, ಕಾರ್ಲ್‍ನ ಹೆಂಡತಿಯೊಂದಿಗೆ ಫ್ಲರ್ಟ್ ಕೂಡ ಮಾಡಬಲ್ಲ ಆದರೆ ಜವಾಬ್ದಾರಿ ತೆಗೆದುಕೊಳ್ಳಲು ಆಗುವುದಿಲ್ಲ.


ಇಲ್ಲಿ ಕಥೆಗಾರ ಇವನ ವ್ಯಕ್ತಿತ್ವಕ್ಕೆ, ಬೇಜವಾಬ್ದಾರಿಗೆ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಎದುರಾದ ಹೊಸ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾ ಹೋಗುತ್ತಾನೆ ಎನ್ನುವುದೇ ಈ ಚಿತ್ರದ ಪಯಣ. ಇವನಿಗೆ ತಾನು ಒಳ್ಳೆಯವನಾಗಬೇಕು ಅಥವಾ ಸರಿಯಾಗಿರಬೇಕು ಎನ್ನುವ ಯಾವ ಬಯಕೆಯೂ ಇಲ್ಲ. ತನ್ನ ಮಗ ಇಷ್ಟು ವರ್ಷಗಳ ನಂತರ ತನ್ನ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಭೇಟಿಯಾದಾಗ ಯಾರು ಯಾರಿಗೆ ಸಹಾಯ ಮಾಡುತ್ತಾರೆ ಎಂಬುವುದು ಸ್ಪಷ್ಟವಾಗುವುದಿಲ್ಲ. ಕೂಸಾಗಿದ್ದಲೇ ತನ್ನನ್ನು ಬಿಟ್ಟು ಹೋದ ಅಪ್ಪ ಎನ್ನುವ ಸಿಟ್ಟಿದೆ ಮಗನಿಗೆ. ಸದ್ಯಕ್ಕೆ ಅವನೂ ತನ್ನ ಕೆಲಸ ಕಳೆದುಕೊಂಡು, ತನ್ನ ಹೆಂಡತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾನೆ. ಗೆಳೆಯ ರಬ್‍ನಿಗೆ ಸಲಿವಾನ್ ಬಿಟ್ಟರೆ ಯಾರೂ ಇಲ್ಲ.

ಯಾವುದೇ ಜವಾಬ್ದಾರಿ ಇಲ್ಲದೇ ಸ್ವೇಚ್ಛಂಧವಾಗಿ ಜೀವಿಸಿದರೂ ಅವನಿಗೂ ಕಾಣದಂತೆ ಜವಾಬ್ದಾರಿಗಳು ಬರುತ್ತಿವೆ. ತನ್ನ ಪಾಪಗಳನ್ನು ಪರಿಹರಿಸುವ ಅವಕಾಶ ಸಿಕ್ಕಿದೆ. ಚಿತ್ರದ ಕೊನೆಯಲ್ಲಿ ಒಂದು ಸೋಫಾ ಮೇಲೆ ಕುಳಿತಲ್ಲಿಯೇ ನಿದ್ರೆಗೆ ಜಾರಿದಾಗ ತುಟಿಯ ಅಂಚಿನಲ್ಲಿ ಒಂದು ಕಿರುನಗೆ ಕಾಣಿಸಿಕೊಳ್ಳುತ್ತದೆ.

ರಾಬರ್ಟ್ ಬೆಂಟನ್ ನಿರ್ದೇಶಿಸಿದ ಈ ಚಿತ್ರದ ಜೀವಾಳ ನಟರ ಅಭಿನಯ. ಈ ಚಿತ್ರವನ್ನು ನಾವೆಷ್ಟೇ ಸಲ ನೋಡಿದರೂ ಪಾಲ್ ನ್ಯೂಮನ್ ಡೋನಾಲ್ಡ್ ಸಲಿವಾನ್ ಆಗಿಯೇ ಕಾಣುತ್ತಾನೆಯೇ ಹೊರತು ಪ್ರಸಿದ್ಧ ನಟನಾಗಿ ಅಲ್ಲ. ಸಲಿವಾನ್ ಆಗಿ ಯಾವುದೇ ಶ್ರಮವಿಲ್ಲದೇ ಸಹಜವಾಗಿ ಪಾಲ್ ನ್ಯೂಮನ್ ಅಭಿನಯಿಸಿದ್ದರೆ, ಅವರೊಂದಿಗೆ ಆ್ಯಕ್ಷನ್ ಹೀರೊ ಬ್ರೂಸ್ ವಿಲಿಸ್‍ನಿಂದ ಇತರ ಎಲ್ಲರೂ ಆಯಾ ಪಾತ್ರಗಳು, ಸನ್ನಿವೇಶಗಳನ್ನು ಸಹಜವಾಗಿಸುವಲ್ಲಿ ಅಷ್ಟೇ ಪ್ರಮುಖ ಪಾತ್ರ ವಹಿಸಿದ್ದಾರೆ. ಜೀವನದ ಒಂದು ಜೀವಂತ ತುಣುಕು ಪರದೆಯ ಮೇಲೆ ಬಂದ ಒಂದು ಉದಾಹರಣೆ ನೊಬಡಿ’ಸ್ ಫೂಲ್.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here