ಭಾರತೀಯ ಕ್ರಿಕೆಟ್ ಆಟಗಾರ ಮಯಾಂಕ್ ಅಗರ್ವಾಲ್ ಅವರು ಮಂಗಳವಾರ ತ್ರಿಪುರಾದಿಂದ ದೆಹಲಿಗೆ ಹೊರಡುವ ಮೊದಲು ಇಂಡಿಗೋ ವಿಮಾನದಲ್ಲಿ ಅಶುದ್ಧ ನೀರು ಕುಡಿದ ನಂತರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ತಮ್ಮ ತಂಡದ ಮ್ಯಾನೇಜರ್ ಮೂಲಕ ಪೊಲೀಸ್ ದೂರು ನೀಡಿದ್ದಾರೆ.
ನೀರು ಕುಡಿದು ಅಸ್ವಸ್ಥರಾದ ಆಟಗಾರನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ನಂಬಲಾಗಿದೆ. ಆದರೆ, ವಿಮಾನ ಸಂಸ್ಥೆ ವಿರುದ್ಧ ಅವರು ದೂರು ನೀಡಿದ್ದಾರೆ.
‘ಮಯಾಂಕ್ ಅಗರ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ; ಈಗ ಅವರು ಸ್ಥಿರವಾಗಿದ್ದಾರೆ. ಆದರೆ, ಅವರ ಮ್ಯಾನೇಜರ್ ಎನ್ಸಿಸಿಪಿಎಸ್ (ಹೊಸ ರಾಜಧಾನಿ ಸಂಕೀರ್ಣ ಪೊಲೀಸ್ ಠಾಣೆ) ಅಡಿಯಲ್ಲಿ ಪ್ರಕರಣದ ತನಿಖೆಗಾಗಿ ನಿರ್ದಿಷ್ಟ ದೂರು ದಾಖಲಿಸಿದ್ದಾರೆ’ ಎಂದು ಪಶ್ಚಿಮ ತ್ರಿಪುರಾ ಎಸ್‌ಪಿ ಕಿರಣ್ ಕುಮಾರ್ ಹೇಳಿದ್ದಾರೆ.
ಘಟನೆಯ ಕುರಿತು ವಿವರ ನೀಡಿದ ಪೊಲೀಸರು, ವಿಮಾನದಲ್ಲಿ ಅನುಮಾನಾಸ್ಪದ ದ್ರವವನ್ನು ಸೇವಿಸಿದ ನಂತರ ಮಯಾಂಕ್ ಅವರ ಬಾಯಿಯಲ್ಲಿ ಕಿರಿಕಿರಿ ಉಂಟಾಗಿದೆ; ಅವರಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಕೂಡಲೆ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಅವರು ಬಾಯಿಯಲ್ಲಿ ಊತ ಮತ್ತು ಹುಣ್ಣುಗಳನ್ನು ಹೊಂದಿದ್ದರು’ ಎಂದು ಹೇಳಿದ್ದಾರೆ.
ಆಗಿದ್ದೇನು?
ಕರ್ನಾಟಕ ರಣಜಿ ತಂಡ ನಾಯಕರಾಗಿರುವ ಮಯಾಂಕ್ ಅಗರ್ವಾಲ್, ತ್ರಿಪುರಾದಿಂದ ದೆಹಲಿಗೆ ಹೊರಟಿದ್ದರು. ವಿಮಾನದಲ್ಲಿ ತಮ್ಮ ಮುಂದೆ ಇಟ್ಟಿದ್ದ ಬಾಟಲಿಯಿಂದ ನೀರು ಕುಡಿದಿದ್ದಾರೆ. ತಕ್ಷಣವೇ ಅವರಿಗೆ ಗಂಟಲು ತುರಿಕೆ ಅನುಭವಿಸಲು ಪ್ರಾರಂಭವಾಗಿದ್ದು, ಕೆಲ ಹೊತ್ತಿನ ಬಳಿಕ ಅವರ ತುಟಿಗಳು ಊದಿಕೊಂಡವು. ಮಯಾಂಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯರ ತಂಡ ಚಿಕಿತ್ಸೆ ನೀಡಿತು. ಅವರು ಪ್ರಾಣಾಪಾಯದಿಂದ ಪಾರಾಗಿದ್ದರೂ, ಬಾಯಿಯಲ್ಲಿ ಹುಣ್ಣು ಮತ್ತು ಊತವಿರುವುದರಿಂದ ಅವರು ಒಂದು ಅಥವಾ ಎರಡು ದಿನಗಳವರೆಗೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ.
ಕರ್ನಾಟಕ ರಣಜಿ ತಂಡದ ಮ್ಯಾನೇಜರ್ ಪ್ರಕಾರ, ವೈದ್ಯರು ಹಾಜರಾಗುವ ಮೊದಲು ಮಯಾಂಕ್ ಗಂಟಲಿನಲ್ಲಿ ತುರಿಕೆ ಮತ್ತು ವಾಂತಿ ಸಂವೇದನೆಯನ್ನು ಅನುಭವಿಸಿದರು. ನಂತರ ಅವರು ವಿಮಾನದಲ್ಲಿ ವಿಶ್ರಾಂತಿ ಕೊಠಡಿಗೆ ಧಾವಿಸಿದರು, ನಂತರ ವೈದ್ಯರು ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದರು.
‘ನಾವು ದೆಹಲಿಗೆ ಹೊರಟಿದ್ದೆವು, ಮಯಾಂಕ್‌ಗೆ ಬಾಯಾರಿಕೆಯಾಯಿತು. ಆದ್ದರಿಂದ, ಅವರು ತನ್ನ ಸೀಟಿನ ಮುಂಭಾಗದ ಸೀಟಿನ ಪಾಕೆಟ್‌ನಲ್ಲಿ ಹಿಂದೆ ಇಟ್ಟಿದ್ದ ನೀರು ಕುಡಿದರು. ಕೆಲವು ನಿಮಿಷಗಳ ನಂತರ, ಅವರ ಗಂಟಲು ತುರಿಕೆಯಾಗಿದೆ. ವಾಂತಿ ಮಾಡುವ ಲಕ್ಷಣಗಳನ್ನು ಅನುಭವಿಸಿದರು. ಕೂಡಲೆ ಅವರು ಕಾಕ್ಪಿಟ್ ಬಳಿಯ ವಾಶ್ರೂಮ್‌ಗೆ ಧಾವಿಸಿ ಗಗನಸಖಿಯರಿಗೆ ಮಾಹಿತಿ ನೀಡಿದರು’ ಎಂದು ಕರ್ನಾಟಕ ತಂಡದ ಮ್ಯಾನೇಜರ್ ರಮೇಶ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
‘ಗಗನಸಖಿ ತಕ್ಷಣವೇ ತುರ್ತು ಕರೆಗಂಟೆ ಬಾರಿಸಿದರು, ವಿಮಾನದಲ್ಲಿ ಯಾರಾದರೂ ವೈದ್ಯರು ಇದ್ದಾರೆಯೇ ಎಂದು ಪರಿಶೀಲಿಸಿದರು. ದುರದೃಷ್ಟವಶಾತ್ ಯಾವುದೇ ವೈದ್ಯರಿರಲಿಲ್ಲ. ಆದ್ದರಿಂದ ಪೈಲಟ್‌ಗೆ ಮಾಹಿತಿ ನೀಡಲಾಯಿತು ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ಸಂದೇಶ ಕಳುಹಿಸಲಾಯಿತು. ಅವರನ್ನು ನೋಡಲು ಬಂದ ವೈದ್ಯರು, ‘ನಾವು ಇಲ್ಲಿ ಪ್ರಥಮ ಚಿಕಿತ್ಸೆ ನೀಡಲು ಸಾಧ್ಯವಿಲ್ಲ; ಕೂಡಲೆ ಇವರನ್ನು ಆಸ್ಪತ್ರೆಗೆ ಸೇರಿಸಬೇಕಾಗಿದೆ’ ಎಂದು ಹೇಳಿದರು, ತಕ್ಷಣ ನಾವು ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ದೆವು’ ಎಂದು ಹೇಳಿದರು.
ಈ ಬಗ್ಗೆ ಹೇಳಿಕೆ ನೀಡಿರುವ ವಿಮಾನಯಾನ ಸಂಸ್ಥೆ, ‘ಇಂಡಿಗೋ ಫ್ಲೈಟ್ 6E 5177 ಅಗರ್ತಲಾದಿಂದ ದೆಹಲಿಗೆ ವೈದ್ಯಕೀಯ ತುರ್ತುಸ್ಥಿತಿಯ ಕಾರಣದಿಂದಾಗಿ ವಿಮಾನ ನಿಲ್ದಾಣಕ್ಕೆ ಮರಳಿತು. ಪ್ರಯಾಣಿಕರನ್ನು ಕೂಡಲೆ ಹೆಚ್ಚಿನ ವೈದ್ಯಕೀಯ ಸಹಾಯಕ್ಕಾಗಿ ಆಸ್ಪತ್ರೆಗೆ ಸಾಗಿಸಲಾಯಿತು’ ಎಂದು ಹೇಳಿದೆ.
ಇದನ್ನೂ ಓದಿ; ಭಾರತದ ಭೂಪ್ರದೇಶದಲ್ಲಿ ಕುರಿ ಮೇಯಿಸಲು ಚೀನಿ ಸೈನಿಕರಿಂದ ಆಕ್ಷೇಪ; ತಮ್ಮ ಹಕ್ಕು ಪ್ರತಿಪಾದಿಸಿದ ಲಡಾಖ್ ಕುರಿಗಾಹಿಗಳು


