“ನಗರದ ಮಧ್ಯಮ ವರ್ಗದ ಮಂದಿಗೆ ನಕಲಿ ದೇಶಭಕ್ತಿಯನ್ನು ಹೇಳುತ್ತಿದ್ದ ಬಿಜೆಪಿ ಈಗ ನಗರ ವಾಸಿಗಳ ಮತ್ತು ತೆರಿಗೆದಾರರ ಬದುಕನ್ನೂ ಹೈರಾಣ ಮಾಡಿಟ್ಟಿದೆ. ವಿಪರೀತ ಬೆಲೆ ಏರಿಕೆ ಮತ್ತು ಪರೋಕ್ಷ ಹಾಗೂ ಪ್ರತ್ಯಕ್ಷ ತೆರಿಗೆಗಳ ಭಾರಕ್ಕೆ ನಗರ ಪ್ರದೇಶಗಳಲ್ಲಿರುವ ಜನರು, ಮಧ್ಯಮ ವರ್ಗದ ಮಂದಿ ಕೂಡ ಇತರೆ ಸಮುದಾಯಗಳ ರೀತಿಯಲ್ಲಿ ಹೈರಾಣಾಗಿ ಹೋಗಿದ್ದಾರೆ” ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
“ಕೆಲವರಿಗೆ ತಮ್ಮಲ್ಲಿ ಯಾವುದರ ಕೊರತೆ ಇರುತ್ತದೋ ಅದರ ಬಗ್ಗೆಯೇ ಹೆಚ್ಚೆಚ್ಚು ಮಾತನಾಡುವ ಚಟ ಇರುತ್ತದೆ. ಬಿಜೆಪಿ ಮತ್ತು ಪರಿವಾರದ ಮಂದಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲ. ಇಡೀ ದೇಶದ ಜನ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ ಬಿಜೆಪಿ ಮತ್ತು ಪರಿವಾರ ದೇಶದ ಜನತೆಯ ಜತೆಗೆ ನಿಲ್ಲಲಿಲ್ಲ. ಹೀಗಾಗಿ ಬಿಜೆಪಿಗೆ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಇಲ್ಲ ಮತ್ತು ಬಿಜೆಪಿಯಲ್ಲಿ ಹುತಾತ್ಮರಾದವರು ಯಾರೂ ಇಲ್ಲ. ಅದಕ್ಕೇ ಬಿಜೆಪಿ ಹೆಚ್ಚೆಚ್ಚು ದೇಶಭಕ್ತಿಯ ಬಗ್ಗೆ ಮಾತನಾಡುತ್ತದೆ” ಎಂದಿದ್ದಾರೆ.
’ಒಂದೇ ಮಾತರಂ, ಜೈ ಜವಾನ್-ಜೈ ಕಿಸಾನ್, ಸ್ವದೇಶಿ ಘೋಷಣೆಗಳೆಲ್ಲಾ ಸ್ವಾತಂತ್ರ್ಯ ಹೋರಾಟದ ನಾಯಕರುಗಳು ಕೊಟ್ಟಿದ್ದು. ಈ ಘೋಷಣೆಗಳಿಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು, ದೇಶದ ಜನರ ಹೋರಾಟದ ಜತೆಗೆ ನಿಂತಿದ್ದು ಕಾಂಗ್ರೆಸ್ ಪಕ್ಷ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
’ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ನಗರವಾಸಿಗಳ ಬದುಕು ನರಕವಾಗಿದೆ. ವಿದ್ಯುಚ್ಚಕ್ತಿ ಬಿಲ್ಲುಗಳು ಶೇ 30 ರಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ ಮೋದಿ ಅವರು ಪ್ರಧಾನಿ ಆಗಿರುವವರೆಗೂ ಇಳಿಯುವಂತೆ ಕಾಣುತ್ತಿಲ್ಲ. ಒಂದು ವಾರದಲ್ಲಿ ಅಡುಗೆ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಾಗಿ ನಗರದಲ್ಲಿ 886 ರೂಪಾಯಿ ಗ್ರಾಮೀಣ ಭಾಗದಲ್ಲಿ 900 ರೂಪಾಯಿ ತಲುಪಿದೆ. ಮನೆಗಳ ಆಸ್ತಿ ತೆರಿಗೆ ವಿಪರೀತ ಹೆಚ್ಚಾಗಿರುವುದು ಮಾತ್ರವಲ್ಲದೆ ಖಾಲಿ ಜಾಗಗಳಿಗೂ ತೆರಿಗೆ ವಿಧಿಸುತ್ತಿದ್ದಾರೆ. ಕಬ್ಬಿಣ, ಸಿಮೆಂಟ್ ಸೇರಿ ದಿನನಿತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆಯೂ ಆಕಾಶ ಮುಟ್ಟುತ್ತಿದೆ. ಅಚ್ಛೆ ದಿನ್ ಅಂದರೆ ಇದೇನಾ…?’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ ಸಿ.ಟಿ. ರವಿ ಅವರಿಂದ: ಡಿ.ಕೆ. ಶಿವಕುಮಾರ್ ಲೇವಡಿ
’ಕೇಂದ್ರ ಸರ್ಕಾರ ನಗರ ಪ್ರದೇಶಗಳಿಗೆ ಕೊಡುತ್ತಿದ್ದ ಅನುದಾನ ಕಡಿತಗೊಳಿಸಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬಜೆಟ್ ಗಾತ್ರ ಕಡಿಮೆ ಇದ್ದಾಗಲೂ 15 ಸಾವಿರ ಕೋಟಿ ಅನುದಾನ ನೀಡಿದ್ದೆ. ಈಗ ಬಜೆಟ್ ಗಾತ್ರ ಹೆಚ್ಚಾಗಿದ್ದರೂ ಬಿಜೆಪಿ ಸರ್ಕಾರ ನೀಡಿರುವುದು 14 ಸಾವಿರ ಕೋಟಿ ಮಾತ್ರ. ಹೀಗಾಗಿ ನಮ್ಮ ಸರ್ಕಾರದ ಅವಧಿಯಲ್ಲೇ ಅತಿ ಹೆಚ್ಚು ಹಣ ನಗರ ಅಭಿವೃದ್ಧಿಗೆ ನೀಡಿದ್ದು ಬಿಟ್ಟರೆ ಬಿಜೆಪಿಯವರು ಮಾಡಿದ್ದು ಬರೀ ಭಜನೆ ಅಷ್ಟೆ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
’ತೆರಿಗೆದಾರರ, ನಗರ ವಾಸಿಗಳ, ಗ್ರಾಮೀಣ ಜನರನ್ನು ಬೆಲೆ ಏರಿಕೆಯ ನರಕದಲ್ಲಿ ನರಳಿಸುತ್ತಿರುವ ಬಿಜೆಪಿ ಸರ್ಕಾರ ಕಾರ್ಪೋರೇಟ್ ಶ್ರೀಮಂತರ ಆಸ್ತಿ ಪ್ರತೀ ವರ್ಷ ಲಕ್ಷ ಲಕ್ಷ ಕೋಟಿಗಳ ಗಡಿ ದಾಟಿಸುತ್ತಿದೆ.
ರೈತರು ಸಾಲ ತೀರಿಸಿಲ್ಲ ಎಂದು ಅವರ ಟ್ರಾಕ್ಟರ್‌ಗಳನ್ನು ಜಪ್ತಿ ಮಾಡುವ ಬಿಜೆಪಿ ಸರ್ಕಾರ ಮೋದಿ ಪ್ರಧಾನಿ ಆದ 7 ವರ್ಷಗಳಲ್ಲಿ 7 ಲಕ್ಷ ಕೋಟಿಯಷ್ಟು ಕಾರ್ಪೋರೇಟ್ ಶ್ರೀಮಂತರ ಸಾಲವನ್ನು ಮನ್ನಾ ಮಾಡಿದೆ. ಇದರಲ್ಲಿ ಅಂಬಾನಿ ಒಬ್ಬನದ್ದೇ 4.5 ಲಕ್ಷ ಕೋಟಿ ಸೇರಿದೆ’ ಎಂದಿದ್ದಾರೆ.
’ಆಸ್ತಿ ನಗದೀಕರಣ ಹೆಸರಿನಲ್ಲಿ ಭಾರತದ ರಸ್ತೆಗಳು, ಏರ್ಪೋರ್ಟ್ಗಳು, ರೈಲು ನಿಲ್ದಾಣಗಳು ಸೇರಿ ಪ್ರತಿಯೊಂದನ್ನೂ ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು ಈಗ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದೆಲ್ಲಾ ಯಾರ ಅವಧಿಯಲ್ಲಿ ಆಗಿದ್ದು..? ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಮೋದಿಯವರು ಈ ದೇಶದ ಜನರ ಅನುಮತಿ, ಒಪ್ಪಿಗೆ ಪಡೆದಿದ್ದಾರಾ..?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಗರದ, ಮಧ್ಯಮ ವರ್ಗದ ಮಂದಿಗೆ ನಕಲಿ ದೇಶಭಕ್ತಿಯನ್ನು ಹೇಳುತ್ತಿದ್ದ @BJP4India ಈಗ, ನಗರ ವಾಸಿಗಳ ಮತ್ತು ತೆರಿಗೆದಾರರ ಬದುಕನ್ನೂ ಬರ್ಬರಗೊಳಿಸಿದೆ. ಬೆಲೆ ಏರಿಕೆ ಮತ್ತು ಪರೋಕ್ಷ ಹಾಗೂ ಪ್ರತ್ಯಕ್ಷ ತೆರಿಗೆಗಳ ಭಾರಕ್ಕೆ ಅವರು ಹೈರಾಣಾಗಿ ಹೋಗಿದ್ದಾರೆ.
13/14#AccheDin #Pressmeet— Siddaramaiah (@siddaramaiah) September 2, 2021
ಇದನ್ನೂ ಓದಿ: ‘ವಾರ್ತಾಭಾರತಿ’ಗೆ ಸರ್ಕಾರಿ ಜಾಹಿರಾತು ನಿರಾಕರಣೆ: ಮುಖ್ಯಮಂತ್ರಿಗೆ ಪತ್ರ ಬರೆದ ಸಿದ್ದರಾಮಯ್ಯ
’7 ವರ್ಷಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿ ಜನರಿಂದ ಸುಲಿಗೆ ಮಾಡಿದ ಹಣದ ಪ್ರಮಾಣ 22 ಲಕ್ಷ ಕೋಟಿ. ಇದರಲ್ಲಿ ಕರ್ನಾಟಕವೊಂದರಿಂದಲೇ ಸುಲಿಗೆ ಮಾಡಿದ್ದು 1.20 ಲಕ್ಷ ಕೋಟಿ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶಕ್ಕೆ ಆಹಾರ ಭದ್ರತೆ ಒದಗಿಸಿ, ಸಾರ್ವಜನಿಕ ಉದ್ದಿಮೆಗಳನ್ನು ಸೃಷ್ಟಿಸಿ ಲಕ್ಷಾಂತರ ಕೋಟಿ ಆಸ್ತಿಯನ್ನು ಸೃಷ್ಟಿಸಿದ್ದು ಕಾಂಗ್ರೆಸ್. ಇದನ್ನೆಲ್ಲಾ ಒಂದೊಂದಾಗಿ ಮಾರಾಟ ಮಾಡುತ್ತಾ ಕುಳಿತಿರುವ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಸಾವಿರಾರು ಸುಳ್ಳುಗಳನ್ನು ಹಿಂದೆ ಮುಂದೆ ನೋಡದೆ ಹೇಳುತ್ತಲೇ ಹೋಗುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
’ನಾನು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಕಾಂಗ್ರೆಸ್ ಸರ್ಕಾರ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಿತ್ತು. ಈ ಬಿಜೆಪಿ ಸರ್ಕಾರ ಎರಡು ವರ್ಷದಲ್ಲಿ ಒಂದೇ ಒಂದು ಮನೆ ಕಟ್ಟಿಸಿದ್ದರೆ ತೋರಿಸಲಿ. ನಮ್ಮ ಕಾಂಗ್ರೆಸ್ ಅವಧಿಯಲ್ಲಿ ನೀಡಿದ ಬಡವರ ಮನೆಗಳಿಗೆ ಕಟ್ಟಲು ಬಾಕಿ ಇದ್ದ 2,786 ಕೋಟಿ ರೂಪಾಯಿಯನ್ನು ಮನ್ನಾ ಮಾಡಿ ಬಡವರಿಗೆ ನೆರವಾದೆವು’ ಎಂದಿದ್ದಾರೆ.
“ವಿಪರೀತ ಬೆಲೆ ಏರಿಕೆ, ತೆರಿಗೆಯ ಸುಲಿಗೆ ನಡೆಯುತ್ತಿದ್ದರೂ ಕಾಂಗ್ರೆಸ್ ವಿರೋಧ ಪಕ್ಷವಾಗಿ ದೊಡ್ಡ ಮಟ್ಟದ ಹೋರಾಟ ಮಾಡುವಲ್ಲಿ ವಿಫಲವಾಗಿದ್ದು ಏಕೆ ಎಂದು ಕೆಲವರು ಪ್ರಶ್ನಿಸುತ್ತಾರೆ. ನಾವೇನು ಬಿಜೆಪಿಯವರ ಕಪಾಳಕ್ಕೆ ಹೊಡೆಯಲು ಸಾಧ್ಯವಾ ? ನಾವು ಬೀದಿಗಿಳಿದು ಹೋರಾಟ ಮಾಡಿದರೆ ಕೋವಿಡ್ ನಿಯಮ ಉಲ್ಲಂಘನೆ ಎಂದು ಕೇಸು ಹಾಕುತ್ತಾರೆ. ಅರೆಸ್ಟ್ ಮಾಡುತ್ತಾರೆ. ಆದರೆ ಬಿಜೆಪಿ ಕೇಂದ್ರ ಮಂತ್ರಿಗಳು ‘ಜನಾಶೀರ್ವಾದ ಯಾತ್ರೆ” ಹೆಸರಿನಲ್ಲಿ ಸಾವಿರಾರು ಮಂದಿಯನ್ನು ಸೇರಿಸಿ ಮೆರವಣಿಗೆ ಮಾಡಬಹುದು. ಅವರಿಗೆ ಮಾತ್ರ ಕೋವಿಡ್ ನಿಯಮ ಅನ್ವಯ ಆಗುವುದಿಲ್ಲ. ಆದರೆ ಬೆಲೆ ಏರಿಕೆ, ತೆರಿಗೆ ಸುಲಿಗೆ ವಿರೋಧಿಸಿ ಜನಪರವಾದ ಪ್ರತಿಭಟನೆ ಮಾಡಲೂ ಅವಕಾಶ ಆಗುತ್ತಿಲ್ಲ” ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಲ್‌ಪಿಜಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ – ಯುವ ಕಾಂಗ್ರೆಸ್ ಪ್ರತಿಭಟನೆ


