ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ, ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಮುದ್ದಾದ ಮಗಳು ಅಶ್ಮಿತಾ ಜೊತೆ ಸಾಕಷ್ಟು ಫೋಟೋಶೂಟ್ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಿನ್ನೆ ಕೂಡ ನವರಾತ್ರಿ ಹಿನ್ನೆಲೆ ದುರ್ಗೆಯಂತೆ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ದುರ್ಗಾ ದೇವಿಯ ಮೂರ್ತಿಯಲ್ಲಿರುವ 8 ಕೈಗಳಂತೆ ನಟಿಯ ಚಿತ್ರವನ್ನು ಎಡಿಟ್ ಮಾಡಲಾಗಿದೆ. ಒಂದೊಂದು ಕೈಯಲ್ಲೂ ಸಾಮಾನ್ಯವಾಗಿ ಮಹಿಳೆ ಬಳಸುವ ವಸ್ತುಗಳನ್ನು ಹಿಡಿದು, ಮಹಿಳೆಯರ ಬದುಕನ್ನು ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ.
ಮಗಳನ್ನು ತಮ್ಮ ತೊಡೆಗಳ ಮೇಲೆ ಕೂರಿಸಿಕೊಂಡು ಮತ್ತೊಂದು ಕೈಯಲ್ಲಿ ತ್ರಿಶುಲಾ ಹಿಡಿದು ಕುಳಿತಿರುವ ಶ್ವೇತಾ ಅವರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ: ವಲಸೆ ಕಾರ್ಮಿಕ ಮಹಿಳೆಗೆ ಹೋಲುವ ದುರ್ಗಾ ಮಾತೆ ಪ್ರತಿಮೆ: ಕಲಾವಿದನ ಕೈಚಳಕ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಶೇರ್ ಮಾಡಿಕೊಂಡಿರುವ ನಟಿ “ನಾನು ಒಬ್ಬ ಸಾಮಾನ್ಯ ಮಹಿಳೆ, ಆದರೆ ನನ್ನೊಳಗಿನ ಶಕ್ತಿಯನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ನಾನು ಅವಲಂಬಿಸುವ ಮುಖ್ಯವಾದ ಅಸ್ತ್ರಗಳು ಇವು. ತಾಯಿ ದುರ್ಗೆಯ ಕಥೆಯೇ ನಮಗೆಲ್ಲಾ ಸ್ಫೂರ್ತಿ” ಎಂದು ಬರೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೈಮಗ್ಗದ ಸೀರೆಯುಟ್ಟು, ಮಗಳಿಗೂ ಕೈಮಗ್ಗದ ಬಟ್ಟೆಯಿಂದ ವಿನ್ಯಾಸಿತ ಉಡುಪು ತೊಡಿಸಿ, ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದರು.

ಮಗಳು ಅಶ್ಮಿತಾ ಹುಟ್ಟಿದಾಗಿನಿಂದ ಹಲವು ಪೋಟೋಶೂಟ್‌ಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಶ್ವೇತಾ ಜೊತೆ ಜೊತೆಗೆಯೇ ಮಗಳು ಅಶ್ಮಿತಾ ಕೂಡ ಸೆಲಬ್ರಿಟಿ ಆಗಿದ್ದಾರೆ.


