ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣರವರು ದೇಶದ ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ಉಪನ್ಯಾಸವೊಂದರಲ್ಲಿ ಮಾತನಾಡಿದ ಅವರು, ಈ ಮಾಧ್ಯಮಗಳು ಕಾಂಗರೂ ಕೋರ್ಟ್‌ಗಳಾಗಿದ್ದು, ಪ್ರಜಾಪ್ರಭುತ್ವಕ್ಕೆ ಅಪಚಾರವೆಸುಗುತ್ತಿವೆ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರ ವಿರುದ್ಧ ಉದ್ದೇಶಪೂರ್ವಕ ಪ್ರಚಾರಗಳು ನಡೆಯುತ್ತಿವೆ. ಆದರೆ ನ್ಯಾಯಾಧೀಶರು ಅದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದನ್ನು ಅಸಹಾಯಕತೆ ಅಥವಾ ಬಲಹೀನತೆ ಎಂದು ತಪ್ಪು ತಿಳಿಯಬೇಡಿ ಎಂದು ಸಿಜೆಐ ಎಚ್ಚರಿಕೆ ನೀಡಿದ್ದಾರೆ.
ಟಿವಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಹೊಸ ಮಾಧ್ಯಮ ಪರಿಕರಗಳು ಅಗಾಧವಾದ ವರ್ಧಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಸರಿ ಮತ್ತು ತಪ್ಪು, ಒಳ್ಳೆಯದು ಮತ್ತು ಕೆಟ್ಟದ್ದು ಹಾಗೂ ನೈಜ ಮತ್ತು ನಕಲಿಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಅಸಮರ್ಥವಾಗಿವೆ ಎಂದಿದ್ದಾರೆ.
ಮಾಧ್ಯಮಗಳು ಕಾಂಗರೂ ನ್ಯಾಯಾಲಯಗಳನ್ನು ನಡೆಸುವುದನ್ನು ನಾವು ನೋಡುತ್ತೇವೆ, ಕೆಲವೊಮ್ಮೆ ಅನುಭವಿ ನ್ಯಾಯಾಧೀಶರು ಸಹ ನಿರ್ಧರಿಸಲು ಕಷ್ಟಪಡುವ ಸಂದರ್ಭ ಬಂದಿದೆ. ಆದರೆ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಮಾಧ್ಯಮ ವಿಚಾರಣೆಗಳು ಪ್ರಭಾವ ಬೀರಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯ ವಿತರಣೆ ವ್ಯವಸ್ಥೆ ಕುರಿತು ಸಾಮಾನ್ಯ ಜ್ಞಾನವಿಲ್ಲದೆ ಟಿವಿಗಳಲ್ಲಿ ಅಜೆಂಡಾಚಾಲಿತ ಚರ್ಚೆಗಳು ನಡೆಯುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕ. ಮಾಧ್ಯಮಗಳ ಪಕ್ಷಪಾತದ ದೃಷ್ಟಿಕೋನಗಳ ಜನರ ಮೇಲೆ ಪರಿಣಾಮ ಬೀರುತ್ತವೆ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ ಮತ್ತು ವ್ಯವಸ್ಥೆಗೆ ಹಾನಿ ಮಾಡುತ್ತಿವೆ. ಇದರಿಂದಾಗಿ ನ್ಯಾಯವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದಿಗೂ ಮುದ್ರಣ ಮಾಧ್ಯಮಗಳು(ಪತ್ರಿಕೆಗಳು) ಒಂದಿಷ್ಟು ಉತ್ತರದಾಯಿತ್ವವನ್ನು ಇಟ್ಟುಕೊಂಡಿವೆ. ಆದರೆ ಟಿವಿ ಮಾಧ್ಯಮಗಳು ಶೂನ್ಯ ಉತ್ತರದಾಯಿತ್ವಗಳಾಗಿವೆ. ಸಾಮಾಜಿಕ ಮಾಧ್ಯಮಗಳ ಸ್ಥಿತಿ ಇನ್ನೂ ಶೋಚನೀಯವಾಗಿದ್ದು, ಕೂಡಲೇ ಈ ಮಾಧ್ಯಮಗಳು ಸ್ವಯಂ ನಿಯಂತ್ರಣ ಇಟ್ಟುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಜನರು ಜಾಗೃತರಾಗುವ ರೀತಿಯಲ್ಲಿ ಕೆಲಸ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 2019 ರಿಂದ ಮಾಧ್ಯಮ ಜಾಹೀರಾತಿಗಾಗಿ ಬರೋಬ್ಬರಿ ₹900 ಕೋಟಿ ಖರ್ಚು ಮಾಡಿದ ಮೋದಿ ಸರ್ಕಾರ!


