Homeಕರ್ನಾಟಕಜಾತಿಗೊಂದು ನಿಗಮ ರಚನೆ: ಸಿಎಂ ನಡೆಗೆ ಸೊಗಡು ಶಿವಣ್ಣ ತೀವ್ರ ಅಸಮಾಧಾನ

ಜಾತಿಗೊಂದು ನಿಗಮ ರಚನೆ: ಸಿಎಂ ನಡೆಗೆ ಸೊಗಡು ಶಿವಣ್ಣ ತೀವ್ರ ಅಸಮಾಧಾನ

"ದುರ್ಬಲರಿಗೆ ಮೀಸಲಾತಿ ನೀಡುವುದು ಸಂವಿಧಾನದ ಆಶಯ. ಬಲಿಷ್ಠರಿಗೆ ನಿಗಮ ರಚನೆ ಮಾಡಿ, ಜಾತಿ ರಾಜಕಾರಣ ಮಾಡುವುದು ಸಂವಿಧಾನ ವಿರೋಧಿ".

- Advertisement -
- Advertisement -

ಜಾತಿ, ಧರ್ಮದ ಅಮಲನ್ನು ಜನರ ಮೆದುಳಿಗೆ ತುಂಬುವುದು, ಅಧಿಕಾರಕ್ಕೆ ಏರಲು ಜಾತಿಯನ್ನು ಬಳಸುವುದು. ಜಾತಿಗೊಂದು ನಿಗಮ ರಚನೆ, ಮೀಸಲಾತಿಯ ಘೋಷಣೆ, ಮಠಗಳಿಗೆ ಪುರಸ್ಕಾರ, ಇವೆಲ್ಲವೂ ತಮ್ಮ ಜಾತಿ ಬೆಂಬಲವನ್ನು ಘೋಷಿಸಿಕೊಳ್ಳುವುದು ರಾಜಕೀಯ ನಡೆಯಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿರುವ ಸೊಗಡು ಶಿವಣ್ಣ ಅವರ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ. ಈ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಅಸಮಾಧಾನವನ್ನು ಹೊರಹಾಕಿರುವುದು ಸಪ್ಷವಾಗುತ್ತದೆ. ಸ್ವಾಮೀಜಿಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಟೀಕಿಸುತ್ತಲೇ ಮುಖ್ಯಮಂತ್ರಿಗಳ ಇತ್ತೀಚಿನ ನಡೆಗಳನ್ನು ಸೊಗಡು ಶಿವಣ್ಣ ಟೀಕಿಸಿದ್ದಾರೆ.

ಶಿರಾ ಉಪಚುನಾವಣೆಯ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಕುಂಚಿಟಿಗರನ್ನು ಒಬಿಸಿ ಪಟ್ಟಿಗೆ ಸೇರಿಸುವ ಭರವಸೆ ನೀಡಿದ್ದು, ಮರಾಠ ಅಭಿವೃದ್ಧಿ ಪ್ರಾಧಿಕಾರ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ, ಒಳಮೀಸಲಾತಿ ಜಾರಿ, ಮಠಗಳಿಗೆ ಹೆಚ್ಚಿನ ಮನ್ನಣೆ ನೀಡಿದ್ದು -ಇವೆಲ್ಲವೂ ಮುಖ್ಯ ಮಂತ್ರಿಗಳು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಅನುಸರಿಸಿದ ರಾಜಕೀಯ ನಡೆಗಳು. ಇದನ್ನೇ ಮಾಜಿ ಸಚಿವ ಸೊಗಡು ಶಿವಣ್ಣ ಟೀಕಿಸುತ್ತಿರುವುದು. ಅಂದರೆ ಮುಖ್ಯಮಂತ್ರಿಗಳು ಭಿನ್ನ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ. ಅದು ಸಲ್ಲದ ನಡೆ ಎಂಬುದರದತ್ತ ಬೊಟ್ಟು ಮಾಡಿ ಮೂಲ ಬಿಜೆಪಿಯ ಮುಖಂಡ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ತೆಲುಗು, ತಮಿಳು, ಮರಾಠಿ, ಮಲಯಾಳಂ: ಇದು ಎಲ್ಲರ ಕರ್ನಾಟಕ – ಪ್ರೊ.ರಹಮತ್ ತರೀಕೆರೆ

ಸೊಗಡು ಶಿವಣ್ಣ ತಾವು ಬೆಂಬಲಿಸುವ ಕೆ.ಎಸ್.ಈಶ್ವರಪ್ಪ ಕೂಡ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಒತ್ತಾಯ ಮಾಡುತ್ತಿದ್ದು ಇದರ ಕುರಿತು ಮಾತ್ರ ಟೀಕೆ ವ್ಯಕ್ತಪಡಿಸಿಲ್ಲ. ಆದರೆ ಮುಖ್ಯಮಂತ್ರಿಗಳು ತನ್ನ ಬೆಂಬಲಿಗರಿಗೆ ಯಾವುದೇ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲು ಮನಸು ಮಾಡಿಲ್ಲ ಎಂಬ ಬೇಸರ ಸೊಗಡು ಶಿವಣ್ಣ ಅವರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಧರ್ಮ ಒಡೆಯುವ ವಿಷಯದ ಕುರಿತು ಹೇಳಿಕೆ ನೀಡಿ ಮುಖ್ಯಮಂತ್ರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಬಿಜೆಪಿಯಲ್ಲಿ ಯಡಿಯೂರಪ್ಪ ವಿರುದ್ಧದ ದನಿಗಳು ಹೆಚ್ಚುವಂತೆ ನೋಡಿಕೊಳ್ಳಲಾಗುತ್ತಿದೆ. ಇಡೀ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿಗಳು ಧರ್ಮವನ್ನು ಪ್ರಚುರ ಪಡಿಸಬೇಕು. ಧರ್ಮದ ರಕ್ಷಣೆ ಮಾಡಬೇಕು. ಸರ್ಕಾರಕ್ಕೆ ಸಲಹೆ ನೀಡಬೇಕು ಎಂದು ಹೇಳುತ್ತಾರೆಯೇ ವಿನಃ ಉತ್ತರಪ್ರದೇಶದಲ್ಲಿ ಸನ್ಯಾಸಿಯಾಗಿದ್ದುಕೊಂಡೇ ಕಾವಿಯೊಳಗೆ ಅಧಿಕೃತವಾಗಿ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿ ಆದಿತ್ಯನಾಥ್ ಬಗ್ಗೆ ಮೌನ ವಹಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುತ್ತಿರುವ ವೇಳೆ ತನ್ನನ್ನು ಪರಿಗಣಿಸಬೇಕು ಎಂದು ಸೊಗಡು ಶಿವಣ್ಣ ಬಯಸುತ್ತಿರಬಹುದು.ಇದನ್ನು ಬಹಿರಂಗವಾಗಿ ಎಲ್ಲಿಯೂ ತೋರ್ಪಡಿಕೊಳ್ಳುತ್ತಿಲ್ಲ. ಆದರೂ ಮುಖ್ಯಮಂತ್ರಿಗಳನ್ನು ಪರೋಕ್ಷವಾಗಿ ಟೀಕಿಸಿರುವುದಂತೂ ಸತ್ಯ. ಬಿಜೆಪಿ ಜಾತಿಯನ್ನೇ ಹೊದ್ದು ಮಲಗಿದೆ. ವರ್ಣಾಶ್ರಮ ಶ್ರೇಣೀಕರಣ ವ್ಯವಸ್ಥೆಯೇ ಬಿಜೆಪಿಯ ಧರ್ಮ. ಜಾತಿ ವ್ಯವಸ್ಥೆ ಯನ್ನು ಪೋಷಿಸಿಕೊಂಡು ಬರುತ್ತಿರುವ ಬಿಜೆಪಿಯ ಧರ್ಮಕ್ಕೆ ಒಗ್ಗಿಕೊಳ್ಳದವರು ದೇಶದ್ರೋಹಿಗಳೆಂಬಂತೆ ಬಿಂಬಿಸಲಾಗುತ್ತಿದೆ. ಇದು ಸೊಗಡು ಶಿವಣ್ಣ ಅವರಿಗೆ ಗೊತ್ತಿಲ್ಲದೆ ಇಲ್ಲ. ಸತ್ಯ ಗೊತ್ತಿದ್ದು ದ್ವಂದ್ವಮುಖಿಯಾಗಿ ಉಳಿಯಲು ಬಯಸುವುದು ಬಿಜೆಪಿಯ ಧರ್ಮದ ತಿರುಳು.

ಇದನ್ನೂ ಓದಿ: ಕುರುಬರ ST ಹೋರಾಟದ ಹಿಂದೆ ಆರ್‌ಎಸ್ಎಸ್‌ನ ಕೈವಾಡವಿದೆ: ಸಿದ್ದರಾಮಯ್ಯ

ಬಸವಣ್ಣ, ಕನಕದಾಸ, ಬುದ್ದ, ಮಹಾವೀರ, ವಿವೇಕಾನಂದರು ತಮ್ಮ ಆದರ್ಶವೆಂದು ಹೇಳಿಕೊಂಡಿರುವ ಸೊಗಡು ಶಿವಣ್ಣ ಜಾತಿ ವ್ಯವಸ್ಥೆ ಪೋಷಿಸುವ ಹಿಂದೂ ಧರ್ಮದ ರಕ್ಷಣೆಗೆ ಬದ್ದರಾಗಬೇಕು ಎಂಬ ಬೇಡಿಕೆ ಇಟ್ಟಿರುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಶೋಷಣೆಗೆ ಒಳಗಾದವರು, ಬಡವರ ರಕ್ಷಣೆಗೆ ಬರಬೇಕೆಂಬ ಶಿವಣ್ಣ ಅವರ ಮಾತು ಸತ್ಯ. ಆದರೆ ಬಿಜೆಪಿ ಸರ್ಕಾರ ಹತ್ರಾಸ್ ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಬಲಿಷ್ಠ ಜಾತಿಗಳ ಪರ ನಿಂತಿದ್ದು ನಮ್ಮ ಕಣ್ಣ ಮುಂದೆಯೇ ಇದೆ. ಅದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಲಿಲ್ಲ. ಈ ಬಗ್ಗೆ ಸೊಗಡು ಶಿವಣ್ಣನವರು ಚಕಾರ ಎತ್ತಲಿಲ್ಲ ಎಂಬುದೂ ಬೇರೆ ಮಾತು.

ಎರಡು ಪುಟಗಳಷ್ಟು ಪತ್ರಿಕಾ ಹೇಳಿಕೆಯಲ್ಲಿ “ರಾಜಕೀಯ ನಡೆ”ಯಲ್ಲಿ ವ್ಯಕ್ತವಾಗಿರುವ ನಾಲ್ಕು ಅಂಶಗಳು ಸಿಎಂ ಯಡಿಯೂರಪ್ಪ ಅವರನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ಇದು ಮೇಲ್ನೋಟಕ್ಕೆ ಸತ್ಯವಾದ ಅಂಶಗಳು. ಇದರಲ್ಲಿ ಯಾವುದೇ ತಕಾರು ಇಲ್ಲ. ಹೀಗೆಂದು ಸಿಎಂ ವಿರುದ್ದ ತೊಡೆ ತಟ್ಟಿ ನಿಂತಿರುವುದು ಸೊಗಡು ಶಿವಣ್ಣ ಅವರ ಮಾತುಗಳ ಹಿಂದಿದೆ.

ದುರ್ಬಲರಿಗೆ ಮೀಸಲಾತಿ ನೀಡುವುದು ಸಂವಿಧಾನದ ಆಶಯ. ಬಲಿಷ್ಠರಿಗೆ ನಿಗಮ ರಚನೆ ಮಾಡುವುದು ಜಾತಿ ರಾಜಕಾರಣ ಮಾಡುವುದು ಸಂವಿಧಾನ ವಿರೋಧಿ. ಮುಖ್ಯಮಂತ್ರಿ ಯಡಿಯೂರಪ್ಪ ನಡೆ ಸಂವಿಧಾನ ವಿರೋಧಿಯಾದುದು. ಹಾಗೆ ನೋಡಿದರೆ ಸೊಗಡು ಶಿವಣ್ಣ ಮುಖ್ಯಮಂತ್ರಿ ಗಳನ್ನು ಟೀಕಿಸಿರುವುದು ಸರಿಯಾಗಿಯೇ ಇದೆ. ಅದು ಬಾಯಿ ಮಾತು ಆಗಬಾರದು. ಹುದ್ದೆ ಹೊಡೆಯುವ ಉದ್ದೇಶ ಆಗಬಾರದು. ಆಗ ಮಾತ್ರ ಶಿವಣ್ಣ ಮಾತಿಗೆ ಬೆಲೆ ಬರುತ್ತದೆ.


ಇದನ್ನೂ ಓದಿ: ಡಿಸೆಂಬರ್ 5ರ ‘ಕರ್ನಾಟಕ ಬಂದ್’ಗೆ ಬೆಂಬಲ ಘೋಷಿಸಿದ ಕರ್ನಾಟಕ ರಕ್ಷಣಾ ವೇದಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...