Homeಕರ್ನಾಟಕತೆಲುಗು, ತಮಿಳು, ಮರಾಠಿ, ಮಲಯಾಳಂ: ಇದು ಎಲ್ಲರ ಕರ್ನಾಟಕ - ಪ್ರೊ.ರಹಮತ್ ತರೀಕೆರೆ

ತೆಲುಗು, ತಮಿಳು, ಮರಾಠಿ, ಮಲಯಾಳಂ: ಇದು ಎಲ್ಲರ ಕರ್ನಾಟಕ – ಪ್ರೊ.ರಹಮತ್ ತರೀಕೆರೆ

ಧಾರ್ಮಿಕವಾಗಿ ಭಾಷಿಕವಾಗಿ ಅವರು-ನಾವು ಎಂಬ ವಿಭಜನೆ ಸಾಪೇಕ್ಷವಾದುದು. ಹಲವಾರು ಭಾಷೆಯ ಧರ್ಮದ ದೇಶ ಪ್ರದೇಶ ಮೂಲದ ಜನರು ಸೇರಿ ತಮ್ಮ ಪ್ರತಿಭೆ ದುಡಿಮೆ ಕಲ್ಪನಾಶಕ್ತಿ ಶ್ರದ್ಧೆಗಳಿಂದ ಒಂದು ನಾಡು ರೂಪುಗೊಂಡಿರುತ್ತದೆ. ಪಂಕ್ಚರ್ ಹಾಕುವವರು-ಬೀದಿಕಸ ಗುಡಿಸುವವರಿಂದ ಹಿಡಿದು ನೀತಿನಿರೂಪಣೆ ಮಾಡುವ ಶಾಸಕರವರೆಗೆ ಒಂದು ನಾಡಿನ ಕಟ್ಟುವಿಕೆಯಲ್ಲಿ ಹಲವರ ಕೊಡುಗೆ ಇರುತ್ತದೆ. ಇದು ಅವರ ಜಾತಿ ಧರ್ಮ ಮತ ಭಾಷೆಗಳ ಹಿನ್ನೆಲೆಯಾಚೆ ಕೂಡ ಚಲಿಸುತ್ತದೆ.

- Advertisement -
- Advertisement -

ಕರ್ನಾಟಕ ಏಕೀಕರಣದ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಕರೆಯಲಾಗುತ್ತದೆ. ಅದು ಕನ್ನಡ ರಾಜ್ಯೋತ್ಸವವೋ, ಕರ್ನಾಟಕ ರಾಜ್ಯೋತ್ಸವವೋ? ಚದುರಿಹೋಗಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನು ಒಗ್ಗೂಡಿಸಿ, ಒಂದು ರಾಜ್ಯವನ್ನು ಮಾಡುವಾಗ ಭಾಷೆ ಕೇಂದ್ರ ಬಿಂದುವಿನಲ್ಲಿ ಇದ್ದುದು ದಿಟ. ಆದರೆ ಭಾರತದಂತಹ ಬಹುಭಾಷಿಕ ದೇಶದಲ್ಲಿ, ಆಡಳಿತದ ಅನುಕೂಲಕ್ಕೆ ಪ್ರಾಂತ್ಯಗಳನ್ನು ಹೇಗೆ ಕತ್ತರಿಸಿದರೂ-ಒಗ್ಗೂಡಿಸಿದರೂ, ಗಡಿಗಳ ಆಚೀಚೆ ಮತ್ತು ನಡುವೆ ಹಲವು ಭಾಷಿಕರು ಉಳಿದುಬಿಡುವರು. ಸದ್ಯ ಕರ್ನಾಟಕದೊಳಗೆ ಮಲೆಯಾಳ ಮರಾಠಿ ಕೊಂಕಣಿ ಉರ್ದು ಕೊಡವ ತುಳುವ ಕೊರಗ ಮಾರವಾರಿ ಇಂಗ್ಲಿಷ್ ಹಿಂದಿ ಹೀಗೆ 20ಕ್ಕೂ ಹೆಚ್ಚು ಭಾಷಿಕರಿದ್ದಾರೆ. ಆದ್ದರಿಂದ ಕರ್ನಾಟಕವು ಆಡಳಿತ, ಶಿಕ್ಷಣ, ವ್ಯವಹಾರದಲ್ಲಿ ಕನ್ನಡ ಪ್ರಧಾನವಾಗಿರುವ ಬಹುಭಾಷಿಕ ರಾಜ್ಯ. ಯಾವ ಪ್ರಾಂತ್ಯದ ಪ್ರಧಾನ ಭಾಷೆಯೂ ಉಳಿದ ಜನಭಾಷೆಗಳನ್ನು ದಮನಿಸಿಯೊ, ಅಧಿಕಾರಸ್ಥ ಭಾಷೆಗಳನ್ನು ಹೇರಿಕೊಂಡೊ ಬದುಕಬೇಕಿಲ್ಲ.

ಒಮ್ಮೆ ನಾವೆಲ್ಲ ಗುನುಗುವ ಮಧುರವಾದ ಕನ್ನಡ ಹಾಡುಗಳನ್ನು ಹಾಡಿದ ಗಾಯಕರ ಹಿನ್ನೆಲೆಯನ್ನು ಕೆದಕಿದೆ. ಜೇಸುದಾಸ್, ಎಸ್. ಜಾನಕಿ, ಘಂಟಸಾಲಾ, ಸುಶೀಲಾ, ಪಿ.ಬಿ.ಶ್ರೀನಿವಾಸ್, ಬಾಲಸುಬ್ರಹ್ಮಣ್ಯ, ಸೋನು ನಿಗಂ, ಲತಾ, ರಫಿ, ಶೀರ್ಕಾಳಿ ಗೋವಿಂದರಾಜನ್- ಎಲ್ಲ ಬೇರೆಬೇರೆ ಭಾಷೆಯಿಂದ ಬಂದವರು. ಇದರಂತೆಯೇ ಕನ್ನಡದ ಪ್ರತಿಭಾವಂತ ಲೇಖಕರಾದ ಪಂಜೆ ಮಂಗೇಶರಾವ್, ಗೋವಿಂದಪೈ, ಮಾಸ್ತಿ, ಬೇಂದ್ರೆ, ಶಂಬಾ, ಡಿವಿಜಿ, ಜಯಂತ, ನಿಸಾರ್, ಕಾರ್ನಾಡ್, ಅಬ್ದುಲ್‍ರಶೀದ್ ಮುಂತಾದವರ ಮನೆಮಾತು ಕನ್ನಡವಲ್ಲ. ಪಂಜೆ, ರಾಜಕುಮಾರ್, ಕಾರ್ನಾಡರು ಹುಟ್ಟಿದ್ದು ಈಗಿನ ಕೇರಳ ತಮಿಳುನಾಡು ಮಹಾರಾಷ್ಟ್ರಗಳಲ್ಲಿ. ಕನ್ನಡದ ಕೇಳುಗ-ಪ್ರೇಕ್ಷಕ-ವಾಚಕರು, ತಾವು ಓದುವ ಸಾಹಿತ್ಯ, ಕೇಳುವ ಹಾಡು, ನೋಡುವ ನಾಟಕ-ಸಿನಿಮಾಗಳಲ್ಲಿರುವ ಕಲಾವಿದರ ಧರ್ಮ, ಭಾಷೆ, ಪ್ರಾಂತ್ಯದ ಮೂಲದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅವರು ಸೃಷ್ಟಿಸಿದ ಕಲೆಯನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡರು.

ಕರ್ತರ ಮೂಲವನ್ನು ಕೇಳದೆ ಅವರು ಸೃಷ್ಟಿಸಿದ ಉಪಯುಕ್ತವಾದುದನ್ನು ಒಳಗೊಂಡು ಬದುಕುವ ಈ ನಿಲುವು, ಚಾರಿತ್ರಿಕವಾಗಿ ಕರ್ನಾಟಕವನ್ನು ರೂಪುಗೊಳಿಸಿದ ಪ್ರಧಾನ ತತ್ವ. ಈಗಿರುವ ಕರ್ನಾಟಕವನ್ನು, ಹಲವು ಧರ್ಮ ಮತ್ತು ಪ್ರಾಂತ್ಯದ ಹಿನ್ನೆಲೆಯಿಂದ ಬಂದವರು ಬೇರೆಬೇರೆ ಕಾಲಘಟ್ಟದಲ್ಲಿ ಆಳಿದರು. ಇವರಲ್ಲಿ ಕನ್ನಡ ಮನೆಮಾತಿನ ಅರಸರಷ್ಟೇ ಪ್ರಮುಖವಾಗಿ, ತುಳು ಕೊಡವ ತಮಿಳು ಮರಾಠಿ ದಖನಿ ಫಾರಸಿ ಇಂಗ್ಲಿಷ್ ಮನೆಮಾತಿನವರೂ ಇದ್ದಾರೆ. ಧಾರ್ಮಿಕವಾಗಿ ಅವರು ಕ್ರೈಸ್ತರು ಜೈನರು ಮುಸ್ಲಿಂ ಬೌದ್ಧ ಇತ್ಯಾದಿ. ಮರಾಠಿ-ಮಹಾರಾಷ್ಟ್ರದ ಪರಿಕಲ್ಪನೆಗಳೂ ಕೂಡ ಚಾರಿತ್ರಿಕವಾಗಿ ಹೀಗೇ ವಿಕಸನಗೊಂಡವು. ಮರಾಠಿಗರು ದುರಭಿಮಾನದಲ್ಲಿ ಬೀಗುತ್ತಿದ್ದಾಗ, ಶಂಬಾ ‘ನಿಮ್ಮ ಸಂಸ್ಕೃತಿಯ ಮೂಲವು ಕರ್ನಾಟಕದಲ್ಲಿದೆ’ ಎಂದು ಕಾಣಿಸುವ ‘ಮರಾಠಿ ಸಂಸ್ಕೃತಿ’ ಕೃತಿಯನ್ನು ಬರೆದು ಬಲೂನಿಗೆ ಚುಚ್ಚಿ ಸತ್ಯವನ್ನು ಮನಗಾಣಿಸಿದರು. ಇದು ಭಾರತದ ಎಲ್ಲ ಪ್ರಾದೇಶಿಕ ಸಂಸ್ಕೃತಿಗಳ ಮಟ್ಟಿಗೂ ಸತ್ಯವೇ.

PC : Times Of India

ಈ ಕೂಡುತತ್ವವು, ಹಲವು ಭಾಷಿಕ ಸಂಸ್ಥಾನಗಳನ್ನು ಒಳಗೊಂಡು ಸಂಭವಿಸಿರುವ ಭಾರತದ ಪರಿಕಲ್ಪನೆಗೂ ಅನ್ವಯವಾಗುವುದು. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯದ ಭಾಷೆ ಸಾಹಿತ್ಯ ಆರ್ಥಿಕ ಅಭಿವೃದ್ಧಿ ರಾಜಕಾರಣವನ್ನು ಹಲವು ಧಾರ್ಮಿಕ ಪ್ರಾಂತೀಯ ಭಾಷಿಕ ಹಿನ್ನೆಲೆಯವರು ಕೂಡಿ ರೂಪಿಸುವುದು ಅನಿವಾರ್ಯ. ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಅಂತರ ಪ್ರಾಂತೀಯ ವಲಸೆ ಮತ್ತು ನೆಲೆಸುವ ಹಕ್ಕನ್ನು ನೀಡಿದೆ. ಜಾಗತೀಕರಣವು ವಿದೇಶಿ ಬಂಡವಾಳಗಾರರ ವಲಸೆಗೂ ಅವಕಾಶವನ್ನು ತೆರೆದ ಬಳಿಕ ವಲಸೆ ಇನ್ನೂ ಹೆಚ್ಚಿದೆ. ಕಚ್ಚಾವಸ್ತು, ಮಾರುಕಟ್ಟೆ, ಬಂಡವಾಳ, ಕುಶಲತೆ, ತಂತ್ರಜ್ಞಾನ, ಮಾನವಸಂಪನ್ಮೂಲಗಳ ವಿಷಯದಲ್ಲಿ ಯಾವ ಪ್ರಾಂತ್ಯವೂ ಸ್ವಾವಲಂಬಿಯಲ್ಲ. ಕೆಲವು ವಿಷಯದಲ್ಲಿ ಎರವಲು ಕಸಿ ಕಡ ಪಡೆಯಲೇಬೇಕು. ಕರ್ನಾಟಕದ ಭಾಷೆ, ಸಾಹಿತ್ಯ, ರಂಗಭೂಮಿ, ಸಂಗೀತ, ಸಿನಿಮಾ ಉದ್ಯಮ ವಾಣಿಜ್ಯಗಳಾದರೂ ಹಲವು ಭಾಷೆ ಧರ್ಮ ಪ್ರಾಂತ್ಯದವರು ಸೇರಿ ರೂಪುಗೊಂಡವು.

ತಮಿಳುನಾಡು ಮೂಲದ ದಿವಾನ್ ರಂಗಾಚಾರ್ಲು, ಜರ್ಮನ್ ಮೂಲದ ತೋಟಗಾರಿಕೆ ತಜ್ಞ ಕ್ರುಂಬಿಗಲ್ ಮುಂತಾದವರು ಆಧುನಿಕ ಮೈಸೂರಿನ ನಿರ್ಮಾತೃಗಳಲ್ಲಿ ಮುಖ್ಯರಾಗಿರುವುದು ಹೀಗೆ. ಇದರಂತೆ ಕರ್ನಾಟಕ ಮೂಲದ ಸರ್‌ಎಂವಿ, ಮಿರ್ಜಾ ಇಸ್ಮಾಯಿಲ್, ಮುಂಬೈ ಹೈದರಾಬಾದ್ ಜಯಪುರ ಪ್ರಾಂತ್ಯಗಳಲ್ಲಿ ಸೇವೆ ಸಲ್ಲಿಸಿದರು. ಗುಜರಾತಿಗಳ ಬಂಡವಾಳ ಮತ್ತು ಕನ್ನಡಿಗರ ಹೋಟೆಲ್ ಉದ್ಯಮ ಹಾಗೂ ಉತ್ತರ ಭಾರತದ ಮಾನವ ಸಂಪನ್ಮೂಲವಿಲ್ಲದೆ ಮಹಾರಾಷ್ಟ್ರವನ್ನು ಕಲ್ಪಿಸಿಕೊಳ್ಳಲಾಗದು. ಭಾಷಾ ಪ್ರಾಂತೀಯ ದುರಭಿಮಾನದಂತೆ ಶೋಷಕ ಬಂಡವಾಳವಾದವನ್ನು ನಿಯಂತ್ರಿಸುವುದಾದರೆ, ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಯಾರು ಏನನ್ನು ಉತ್ಪಾದನೆ ಮತ್ತು ವಿತರಣೆ ಮಾಡುತ್ತಾರೆ, ಅದು ನಾಡಿನ ಅಭಿವೃದ್ಧಿಗೆ ಹೇಗೆ ಪೂರಕ-ಮಾರಕ ಎಂಬ ಪ್ರಶ್ನೆಯಷ್ಟೆ ಮುಖ್ಯವಾಗುತ್ತದೆ.

ಈ ಹಿನ್ನೆಲೆಯಲ್ಲಿ, ಕರ್ನಾಟಕದ ರಂಗಭೂಮಿ, ರಾಜಕಾರಣ, ಉದ್ಯಮ ಮುಂತಾದ ಕ್ಷೇತ್ರಗಳನ್ನು ಗಮನಿಸಬಹುದು. ಕನ್ನಡ ವೃತ್ತಿರಂಗಭೂಮಿಯ ಹಿಂದೆ ಆಂಗ್ಲ, ಫಾರಸಿ ಹಾಗೂ ಮರಾಠಿ ರಂಗಭೂಮಿಗಳ ಗಾಢ ಪ್ರೇರಣೆಗಳಿವೆ. ಭಾರತದ ಸಿನಿಮಾ ಉದ್ಯಮವಂತೂ ಹಲವು ಭಾಷಿಕರ-ಪ್ರಾಂತ್ಯಗಳ ಕೂಡುಸೃಷ್ಟಿ. ಒಂದು ಕಾಲಕ್ಕೆ ಕನ್ನಡ ಸಿನಿಮಾ ತಯಾರಾಗುತ್ತಿದ್ದುದು ಮದರಾಸ್ ಮುಂಬೈ ಸ್ಟುಡಿಯೊಗಳಲ್ಲಿ. ಪ್ರಥಮ ಸ್ವರ್ಣಕಮಲ ಪ್ರಶಸ್ತಿ ಪಡೆದ ಸಂಸ್ಕಾರದ ಕ್ಯಾಮೆರಮನ್ ವಿದೇಶದವರು; `ಸನಾದಿ ಅಪ್ಪಣ್ಣ’ ಸಿನಿಮಾದ ಯಶಸ್ಸಿನಲ್ಲಿ ಬಿಸ್ಮಿಲ್ಲಾಖಾನರ ಶಹನಾಯಿಯಿದೆ. ಸವಾಯಿ ಗಂಧರ್ವ, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಅವರಿಗೆ ಸಂಗೀತ ಕಲಿಸಿದ ಗುರುಗಳು ಹಾಗೂ ಅವರ ಸಂಗೀತ ಸವಿದ ಶ್ರೋತೃಗಳು, ಭಾರತದ ಯಾವ್ಯಾವುದೊ ಜಾತಿ ಧರ್ಮ ಭಾಷೆ ಸಂಸ್ಕೃತಿ ಪ್ರಾಂತ್ಯಗಳಿಗೆ ಸೇರಿದವರು!

ಕನ್ನಡ ಭಾಷೆಯನ್ನು ಉರ್ದು ಫಾರಸಿ ಪೋರ್ಚುಗೀಸ್ ಮರಾಠಿ ಇಂಗ್ಲಿಷ್ ಭಾಷೆಯ ಶಬ್ದಗಳು ಸೇರಿ ಸಮೃದ್ಧಗೊಳಿಸಿವೆ. ಕನ್ನಡ ಸಾಹಿತ್ಯ ಮತ್ತು ಚಿಂತನೆಗಳ ಹಿಂದೆ ಭಾರತದ ಮತ್ತು ಜಗತ್ತಿನ ಹಲವಾರು ದಾರ್ಶನಿಕ ಚಿಂತನೆಗಳಿವೆ ಮತ್ತು ಸಾಹಿತ್ಯ ಕೃತಿಗಳಿವೆ. `ಕನ್ನಡ ಮಾತು ತಲೆಯೆತ್ತುವ ಬಗೆ’ಯನ್ನು ಸದಾ ಚಿಂತಿಸುತ್ತಿದ್ದ ಬಿಎಂಶ್ರೀ, `ಇಂಗ್ಲಿಷ್ ಗೀತ’ಗಳ ಅನುವಾದದಿಂದ ತಮ್ಮ ಕಾರ್ಯ ಆರಂಭಿಸಿದ್ದು ಮಾರ್ಮಿಕವಾಗಿದೆ. ಕನ್ನಡಮ್ಮನಿಗೆ ಇನಿಯ ತಂಗಿಯಾಗಿ ಬ್ರಿಟಾನಿಯಾಳನ್ನು ಅವರು ಜೋಡಿಸಿದರು. `ಅವಳ ತೊಡುಗೆ ಇವಳಿಗಿಟ್ಟು ನೋಡ’ ಬಯಸಿದರು. ಈ ಕಾರ್ಯವನ್ನು ಕುವೆಂಪು ಕನ್ನಡಮಾತೆಯನ್ನು ಭಾರತ ಜನನಿಯ ಮಗಳಾಗಿಸುವ ಫೆಡರಲ್ ತತ್ವದಲ್ಲಿ ಬೇರೊಂದು ಬಗೆಯಲ್ಲಿ ಮುಂದುವರೆಸಿದರು.

ಆದರೆ ಈ ಬಗೆಯ ಸ್ವೀಕಾರವು ಶಕ್ತ ಸಂಸ್ಕೃತಿಯನ್ನು ಕೇವಲ ಸ್ವೀಕಾರಗಾರನಾಗಿ ಉಳಿಸುವುದಿಲ್ಲ. ಆಧುನಿಕ ಸಾಹಿತ್ಯವು ಸ್ವೀಕಾರ ಅನುವಾದ ಅನುಕರಣೆಗಳಿಂದ ಶುರುವಾಯಿತು ನಿಜ. ಬಳಿಕ ಸ್ವಯಂ ಸೃಷ್ಟಿಗೆ ತೊಡಗಿ ಸ್ವಂತಿಕೆಯ ಹೊಳೆಯನ್ನೇ ಹರಿಸಿತು. ಆದರೂ ಕನ್ನಡದ ಈ ಸ್ವೀಕಾರಗುಣವು ಕೆಲವು ಕ್ಷೇತ್ರಗಳಲ್ಲಿ ಅರೆಬರೆಯಾಗಿ ಉಳಿದಿದೆ. ಕರ್ನಾಟಕವು ಹಲವು ಭಾಷೆಗಳ ಪ್ರಾಂತ್ಯಗಳ ದೇಶಗಳ ಸಂಗದಲ್ಲಿ ಉತ್ತಮ ಸಾಧನೆಗಳನ್ನು ಮಾಡಿರಬಹುದು. ಆದರೆ ಕನ್ನಡತ್ವ-ಕರ್ನಾಟಕತ್ವಕ್ಕೆ ಕೊಡುಕೊಳೆಯ ಸಮತೋಲನದ ವಿಸ್ತರಣೆ ಸಿಗುವುದೇ ಸಾಧನೆಗಳನ್ನು ಲೋಕದ ಬೇರೆಬೇರೆ ಪ್ರಾಂತ್ಯ-ಭಾಷೆಗಳಿಗೆ ಹಂಚಿಕೊಳ್ಳುವಲ್ಲಿ. ಸಂಸ್ಕೃತಿಯೊಂದರ ಕೇವಲ ಸ್ವೀಕಾರದ ಆಯಾಮವು ಅದನ್ನು ಏಕಮುಖಿಯಾಗಿಸುತ್ತದೆ ಅಥವಾ ದ್ವೀಪವಾಗಿಸುತ್ತದೆ. ಕದಕಿಟಕಿಗಳು ತೆರೆದಿಟ್ಟುಗೊಳ್ಳುವ ಉದಾರಗುಣವು ಮನೆಯವರ ಸ್ವಂತಿಕೆಯನ್ನು ಕಳೆದುಹಾಕುವಷ್ಟು ಶಿಥಿಲವಾಗುತ್ತದೆ. ಕರ್ನಾಟಕ ಇತಿಹಾಸವನ್ನು ಮುಖ್ಯವಾಗಿ ಕನ್ನಡ ಆಕರಗಳಿಂದಲೇ ಕಟ್ಟಲಾಗಿದೆ. ಆದರೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಪೋರ್ಚುಗೀಸ್ ಇತಾಲಿಯಾ ಫಾರಸಿ ಅರಬ್ಬಿ ಉರ್ದು ತಮಿಳು ಮರಾಠಿ ಭಾಷೆಯ ಆಕರಗಳ ಮೂಲಕವೂ ರೂಪುಗೊಂಡರೆ, ಅದಕ್ಕೆ ಬಹುತ್ವ ಪ್ರಾಪ್ತವಾಗುವುದು.

ಉತ್ತರ ಕರ್ನಾಟಕವು ಜೋಳವನ್ನೂ ಕರಾವಳಿ-ಮಲೆಸೀಮೆ ಅಕ್ಕಿಯನ್ನೂ ಪ್ರಧಾನ ಆಹಾರವಾಗಿಸಿಕೊಂಡಿವೆ. ಇದರಂತೆ ದಕ್ಷಿಣ ಕರ್ನಾಟಕ ರಾಗಿ ಕೇಂದ್ರಿತವಾಗಿದೆ. ಆದರೆ ರಾಗಿ ಬಂದಿದ್ದು ಆಫ್ರಿಕಾದಿಂದ. ಬಿಜಿಎಲ್ ಸ್ವಾಮಿಯವರ `ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ’ ಓದಿದರೆ ದಿಗಿಲಾಗುತ್ತದೆ. ಇದರಂತೆ ಕರ್ನಾಟಕದ ರೈತ, ದಲಿತ, ಮಹಿಳಾ, ಕೋಮುಸೌಹಾರ್ದ ಚಳವಳಿಗಳು ಸಂಬೋಧಿಸಿದ್ದು ಕರ್ನಾಟಕದ ಸಮಸ್ಯೆಗಳಾದರೂ, ಅವುಗಳ ಹಿಂದೆ ಇರುವ ಸಿದ್ಧಾಂತಗಳು ಮತ್ತು ಚಳವಳಿಗಳು ಜಗತ್ತಿನ ಹಲವೆಡೆಯಿಂದ ಬಂದವು. ಕರ್ನಾಟಕದ ಸಮಾಜ ಸುಧಾರಣ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ ಗೋಪಾಲಸ್ವಾಮಿ ಅಯ್ಯರ್, ಶಾಹು ಮಹಾರಾಜ್, ಅಂಬೇಡ್ಕರ್, ಕುದ್ಮಲ್ ರಂಗರಾವ್ ಇವರಲ್ಲಿ ಯಾರ ಮನೆಮಾತೂ ಕನ್ನಡವಲ್ಲ.

ಚಾರಿತ್ರಿಕವಾಗಿ ಎಂದೂ ಕರ್ನಾಟಕ ದ್ವೀಪವಾಗಿರಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ತನ್ನನ್ನು ತೆರೆದುಕೊಂಡಿತ್ತು. ಕರ್ನಾಟಕದಿಂದ ಅಡಿಕೆ ಅಕ್ಕಿ ಬಟ್ಟೆ ಸಾಂಬಾರ ಪದಾರ್ಥಗಳು ಭೂಮಂಡಲದ ಅನೇಕ ದೇಶಗಳಿಗೆ ಹೋಗುತ್ತಿದ್ದವು. ಈಗಲೂ ನಮ್ಮ ಹಾಸನದ ಆಲೂಗಡ್ಡೆ ರೈತರಿಗೆ ಬೀಜವು ಪಂಜಾಬಿನಿಂದ ಸರಬರಾಜಾಗುತ್ತದೆ. ನಾವು ನಮ್ಮದೇ ಸಂಪನ್ಮೂಲ ತಂತ್ರಜ್ಞಾನ ಹಾಗೂ ಮಾರುಕಟ್ಟೆಗಳಿಂದ ಬದುಕಲಾರದಂತೆ ಜಗತ್ತು ಸಂಕೀರ್ಣವಾಗಿದೆ. ಯುದ್ಧ ಅಥವಾ ಸಾಂಕ್ರಾಮಿಕ ರೋಗಗಳು ಪರಸ್ಪರ ಅವಲಂಬನೆಯ ಸ್ವರೂಪದ ಸತ್ಯವನ್ನು ದರ್ಶನ ಮಾಡಿಸುತ್ತವೆ. ಆದರೆ ಪರಸ್ಪರ ಅವಲಂಬನೆಯು ಪಾರಂಪರಿಕ ಕುಶಲತೆಗಳನ್ನು ಕಳೆದುಕೊಳ್ಳದಂತೆ ಎಚ್ಚರದಲ್ಲಿಡದೆ ಹೋದರೆ ಘಾತವಾಗುತ್ತದೆ. ಕರ್ನಾಟಕ ಹೀಗೆ ಕಳೆದುಕೊಂಡ ಕುಶಲತೆಗಳನ್ನು ಲೆಕ್ಕಹಾಕಬೇಕಿದೆ.

ಸದ್ಯ ಕರ್ನಾಟಕದಲ್ಲಿ ವಿಭಿನ್ನ ಜನಭಾಷೆಯಲ್ಲಿ ಶಿಕ್ಷಣ ಮಾಧ್ಯಮವಿದೆ. ಅಕಾಡೆಮಿಗಳಿವೆ. ಮರಾಠೀ ಏಕೀಕರಣದ ಸಮಿತಿಯ ಶಾಸಕರಿದ್ದಾರೆ. ಆದರೆ ಕಾವೇರಿ ವಿವಾದ, ಬೆಳಗಾವಿ ಗಡಿವಿವಾದ, ಮರಾಠಿ ಪ್ರಾಧಿಕಾರಗಳು, ಹಿಂದಿ ಹೇರಿಕೆ, ಆಂಗ್ಲಮಾಧ್ಯಮದ ಲಾಬಿಗಳು ಆರ್ಥಿಕ-ರಾಜಕೀಯ ಹಿತಾಸಕ್ತಿಗಳಿಂದ ಹುಟ್ಟಿದವು. ಕರ್ನಾಟಕದ ಪರಿಕಲ್ಪನೆಯೊಳಗೆ ಸಹಜವಾಗಿ ಸೇರಿಕೊಂಡವಲ್ಲ. ಪ್ರತಿರೋಧ ಇರಬೇಕಾದ್ದು ಕನ್ನಡೇತರ ಭಾಷೆ-ಭಾಷಿಕರ ಮೇಲಲ್ಲ. ಆ ಭಾಷಿಕರ ದುರಭಿಮಾನ ಮತ್ತು ಸ್ವಹಿತಾಸಕ್ತಿಗಳ ಬಗ್ಗೆ. ಆದರೆ, ತಮಿಳು ಮರಾಠಿ ದುರಭಿಮಾನ ಚಳವಳಿ ವಿರೋಧಿಸುವ ಕೆಲವು ಕನ್ನಡಾಭಿಮಾನಿಗಳು, ವಸಾಹತುಶಾಹಿ ಜಾಗತೀಕರಣ ಮತ್ತು ಕೇಂದ್ರ ಸರ್ಕಾರದ ವಿಸ್ತರಣಾವಾದಗಳ ಫಲವಾದ ಆಂಗ್ಲ-ಹಿಂದಿ ಯಜಮಾನಿಕೆಗಳನ್ನು ಸಹಿಸಿಕೊಳ್ಳುವರು. ಏಕೀಕರಣಕ್ಕೆ ಮೊದಲು ಮತ್ತು ನಂತರ ಕರ್ನಾಟಕಕ್ಕೆ ಕೊಡುಗೆ ಕೊಟ್ಟಿರುವ ವ್ಯಕ್ತಿಗಳ ಹಿಂದೆ ಅವರವೇ ಸ್ವಂತ ಹಿತಾಸಕ್ತಿಗಳಿದ್ದವು. ರಾಜ್ಯವಿಸ್ತರಣೆ, ಮತಾಂತರ ಇತ್ಯಾದಿ. ಆದರೆ ಮೊಗ್ಲಿಂಗ್ ಕಿಟೆಲ್ ರೈಸ್ ಅವರು ಭಾಷೆ ವ್ಯಾಕರಣ ನಿಘಂಟು ಶಾಸನ ಗ್ರಂಥಸಂಪಾದನೆ ಕ್ಷೇತ್ರದಲ್ಲಿ ಮಾಡಿದ ಕೆಲಸವು, ಅವರ ಘೋಷಿತ ಉದ್ದೇಶವನ್ನು ಮೀರಿಹೋಯಿತು.

PC : Christian Today

ಬಾಸೆಲ್ ಮಿಶನ್ ಕ್ರೈಸ್ತಧರ್ಮವನ್ನು ಮಾತ್ರವಲ್ಲ, ಕೆಂಪುಹೆಂಚು ಮುದ್ರಣಯಂತ್ರ ವಾರ್ತಾಪತ್ರಿಕೆ ಗ್ರಂಥಸಂಪಾದನೆಗಳನ್ನು ಪರಿಚಯಿಸಿತು. ವಿದೇಶಿಗರ ಈ ಕೊಡುಗೆ ನೆನೆಯುವ ಹೊತ್ತಲ್ಲೇ, ಕರ್ನಾಟಕದಲ್ಲೇ ಹುಟ್ಟಿದ ಕನ್ನಡ ಮಾತಾಡುವ ಅಧಿಕಾರಸ್ಥರು ತಮ್ಮ ಆಡಳಿತದ ಕಾಲದಲ್ಲಿ ಮಾಡಿದ ಯಾವುದೊ ಕಾನೂನು ಕರ್ನಾಟಕದ ರೈತರಿಗೆ, ವ್ಯಾಪಾರಿಗಳಿಗೆ, ಕುಶಲಕರ್ಮಿಗಳಿಗೆ ಕೇಡನ್ನುಂಟುಮಾಡಿರುವ ಸಾಧ್ಯತೆಯಿದೆ. ಕತ್ತಿ ನಮ್ಮವರೇ ಹದಹಾಕಿ ತಿವಿದರೇ ನೋವಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಕುವೆಂಪು ಕೇಳಿದ್ದು ಇದೇ ಅರ್ಥದಲ್ಲಿ. ವಿದೇಶಿಯರಾದ ಫ್ರೆಂಚರ ಜತೆಗೂಡಿ ಟಿಪ್ಪು ಆಧುನಿಕ ಮೈಸೂರು ಕಟ್ಟಲು ಯತ್ನಿಸಿದನು. ಆದರೆ ಭಾರತೀಯರೇ ಆಗಿದ್ದ ನಿಜಾಮರು ಪೇಶ್ವೆಗಳು ಬ್ರಿಟೀಶರ ಜತೆಗೂಡಿ ಅದರ ಲಯವನ್ನು ಮುರಿದರು.

ಧಾರ್ಮಿಕವಾಗಿ ಭಾಷಿಕವಾಗಿ ಅವರು-ನಾವು ಎಂಬ ವಿಭಜನೆ ಸಾಪೇಕ್ಷವಾದುದು. ಹಲವಾರು ಭಾಷೆಯ ಧರ್ಮದ ದೇಶ ಪ್ರದೇಶ ಮೂಲದ ಜನರು ಸೇರಿ ತಮ್ಮ ಪ್ರತಿಭೆ ದುಡಿಮೆ ಕಲ್ಪನಾಶಕ್ತಿ ಶ್ರದ್ಧೆಗಳಿಂದ ಒಂದು ನಾಡು ರೂಪುಗೊಂಡಿರುತ್ತದೆ. ಪಂಕ್ಚರ್ ಹಾಕುವವರು-ಬೀದಿಕಸ ಗುಡಿಸುವವರಿಂದ ಹಿಡಿದು ನೀತಿನಿರೂಪಣೆ ಮಾಡುವ ಶಾಸಕರವರೆಗೆ ಒಂದು ನಾಡಿನ ಕಟ್ಟುವಿಕೆಯಲ್ಲಿ ಹಲವರ ಕೊಡುಗೆ ಇರುತ್ತದೆ. ಇದು ಅವರ ಜಾತಿ ಧರ್ಮ ಮತ ಭಾಷೆಗಳ ಹಿನ್ನೆಲೆಯಾಚೆ ಕೂಡ ಚಲಿಸುತ್ತದೆ. ನಾಡಿನ ಆರ್ಥಿಕ ಭಾಷಿಕ ಸಾಹಿತ್ಯಕ ವಿಕಸನವು ಒಂದು ಪ್ರಕ್ರಿಯೆ. ಅದು ಮರದ ಹಾಗೆ ಬೆಳೆಯುತ್ತ, ಹೊಳೆಯ ಹಾಗೆ ಹರಿಯುತ್ತ ಇರುತ್ತದೆ. ತನ್ನ ಬೆಳೆತದಲ್ಲಿ ಹರಿವಿಕೆಯಲ್ಲಿ ಚಾರಿತ್ರಿಕವಾದ ಒತ್ತಡಗಳ ಜತೆ ಸೆಣಸುತ್ತದೆ. ಸ್ನೇಹ-ಸಂಘರ್ಷ ಮಾಡುತ್ತದೆ. ಹಿನ್ನಡೆ-ಮುನ್ನಡೆಗಳಿಗೆ ಕಾರಣವಾಗುತ್ತದೆ. ಕರ್ನಾಟಕವು ಚಾರಿತ್ರಿಕವಾಗಿ ಹೀಗೆ ಹಲವು ಸಂಗತಿಗಳಿಂದ ಅನೇಕ ಏಳುಬೀಳುಗಳಿಂದ ರೂಪುಗೊಂಡಿರುವ ರಾಜ್ಯವಾಗಿದೆ.

  • ಪ್ರೊ. ರಹಮತ್ ತರೀಕೆರೆ

ರಹಮತ್ ತರೀಕೆರೆ ಕನ್ನಡ ನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ ಇವರ ವಿಮರ್ಶಾ ಸಂಕಲನ ‘ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.


ಇದನ್ನೂ ಓದಿ: ತಾತ್ಸಾರ ತೊರೆದು ಸ್ವಾಯತ್ತತೆಗಾಗಿ – ಕರ್ನಾಟಕದ ಹಕ್ಕುಗಳಿಗಾಗಿ ಹೋರಾಟವೇ ರಾಜ್ಯೋತ್ಸವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಕದನ ವಿರಾಮಕ್ಕೆ ಕರೆ ನೀಡುವ UN ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿ ಯುಎಸ್‌ ತಡೆ

0
ಗಾಝಾ ಪಟ್ಟಿಯ ಮೇಲೆ ಇಸ್ರೇಲ್‌ ನಿರಂತರ ದಾಳಿ ಮಾಡುತ್ತಿದೆ. ಯುದ್ಧ ಘೋಷಣೆ ಬಳಿಕ ಪ್ಯಾಲೆಸ್ತೀನ್‌ನಲ್ಲಿ 17,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 4 ದಿನಗಳ ಕದನ ವಿರಾಮದ ಬಳಿಕ ಇಸ್ರೇಲ್‌ ಮತ್ತೆ ಯುದ್ಧವನ್ನು ಮುಂದುವರಿಸಿದೆ....