Homeಚಳವಳಿದಿಲ್ಲಿಯಲ್ಲಿ ನಾನುಗೌರಿ ವಿಶೇಷ ವರದಿ: ಚಳಿ-ಮಳೆಗೆ ಅಳುಕದೆ ಅದೇ ಉತ್ಸಾಹದಲ್ಲಿ ಅನ್ನದಾತರು

ದಿಲ್ಲಿಯಲ್ಲಿ ನಾನುಗೌರಿ ವಿಶೇಷ ವರದಿ: ಚಳಿ-ಮಳೆಗೆ ಅಳುಕದೆ ಅದೇ ಉತ್ಸಾಹದಲ್ಲಿ ಅನ್ನದಾತರು

ಪತ್ರಕರ್ತರಾಗಿ ಎದುರಾದ ಕಷ್ಟವೆಂದರೆ, ನಾವು ಮಾಧ್ಯಮದವರು ಎಂದ ಕೂಡಲೇ ರೈತರು ಮಾತನಾಡಲು ಹಿಂದೇಟು ಹಾಕುತ್ತಾರೆ. ಪ್ರಗತಿಪರ-ಜನಪರ ಮಾಧ್ಯಮ ಎಂದು ಖಾತ್ರಿಪಡಿಸಿಕೊಂಡ ನಂತರವೇ ಅವರು ಮಾತಿಗಿಳಿಯುತ್ತಾರೆ. ಸಣ್ಣ ಮಕ್ಕಳೂ ಸಹ..

- Advertisement -
- Advertisement -

ವಿವಾದಿತ ಕೃಷಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ದೆಹಲಿ ಗಡಿಯಲ್ಲಿ ಕಳೆದ 42 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಹೋರಾಟಗಾರರ ಕುರಿತು ಬೆಂಗಳೂರಿನಲ್ಲಿ ಕುಳಿತು ವರದಿ ಮಾಡುತ್ತಿದ್ದ ನಾವುಗಳು, ಸುದ್ದಿಗಾಗಿ ದೆಹಲಿ ಕೇಂದ್ರಿತ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಕೆಲವು ಅಥೆಂಟಿಕ್ ಮೂಲಗಳನ್ನು ಅರಸುತ್ತಿದ್ದೆವು. ಕೆಲವು ಮಾಧ್ಯಮಗಳು ರೈತ ಪ್ರತಿಭಟನೆಯ ಬಗ್ಗೆ ನೈಜ ವಿಚಾರಗಳನ್ನು ವರದಿ ಮಾಡುತ್ತಿದ್ದರೆ, ಮತ್ತೆ ಕೆಲವು ಕಾರ್ಪೊರೆಟ್ ಹಿಂಬಾಲಕ ಮಾಧ್ಯಮಗಳು ರೈತರ ಬಗ್ಗೆ, ರೈತ ಪ್ರತಿಭಟನೆಯ ತಪ್ಪು ಮತ್ತು ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡಲೆಂದೇ ವರದಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ನ್ಯಾಯಪಥ – ನಾನುಗೌರಿ.ಕಾಂ ತಂಡ ದೆಹಲಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪ್ರತ್ಯಕ್ಷವಾಗಿ ಕಂಡು ಓದುಗರಿಗೆ ತಿಳಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಬೆಂಗಳೂರಿನಿಂದ ದೆಹಲಿಗೆ ಹೊರಟ ನಮಗೆ ರೈಲು ಪ್ರಯಾಣದಲ್ಲಿ ಸಿಕ್ಕ ಹಲವಾರು ಸಹ ಪ್ರಯಾಣಿಕರ ಮಾತು ರೈತರ ಪ್ರತಿಭಟನೆಗಳ ಬಗ್ಗೆ, ಪಂಜಾಬ್ ಮತ್ತು ಹರಿಯಾಣ ರೈತರು ದೆಹಲಿಯ ಗಡಿಗಳನ್ನು ಬಂದ್ ಮಾಡಿದ್ದರ ಬಗ್ಗೆಯೇ ಇದ್ದವು. ಯಾರೊಬ್ಬರೂ ಈ ಪ್ರತಿಭಟನೆಗಳ ಬಗ್ಗೆ ಅಪಸ್ವರವೆತ್ತಿದ್ದು ಕೇಳಿಸಲಿಲ್ಲ. ಬದಲಿಗೆ ರೈತರ ಹೋರಾಟವನ್ನು ಎಲ್ಲರೂ ಸಮರ್ಥಿಸುತ್ತಿದ್ದವರೆ. ನಾವು ರೈತರ ಮಕ್ಕಳು ಎಂದು ಕೆಲವರು ಹೇಳಿದರೆ, ಈಗ ನಾವು ಕೃಷಿ ಮಾಡದೇ ಇರಬಹುದು ಹಾಗೆಂದು ರೈತರೇ ಇಲ್ಲದಿದ್ದರೆ ಹೊಟ್ಟೆಗೆ ತಿನ್ನುವುದಾದರೂ ಏನು ಎಂಬ ಸಾಮಾನ್ಯ ತಿಳಿವಳಿಕೆಯ ಮಾತುಗಳು ಕೇಳುತ್ತಿದ್ದವು. ಇದರಿಂದಲೇ ಗೊತ್ತಾಗಿದ್ದು: ಟ್ರೋಲ್ ಸೇನೆಗಳ ರೈತರ ವಿರುದ್ಧದ ಸಂಚು ಫಲ ನೀಡಿಲ್ಲವೆಂದು.

“ರೈತರು ಏಕೆ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಸರ್ಕಾರ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಮಸೂದೆಗಳು ರೈತರ ಪರವಾಗಿವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ರೈತರೇ ನಮಗೆ ಆ ಮಸೂದೆಗಳು ಬೇಡ ಎನ್ನುವಾಗ ಸರ್ಕಾರ ಯಾರಿಗಾಗಿ ಕಾನೂನುಗಳನ್ನು ಜಾರಿಗೊಳಿಸಿದೆ” ಎಂಬುದು ರೈಲಿನಲ್ಲಿ ಸಹ ಪ್ರಯಾಣಿಕರಾಗಿದ್ದ ಪಶ್ಚಿಮ ಬಂಗಾಳದ ಹಿಂದಿ ಶಿಕ್ಷಕಿಯೊಬ್ಬರ ಪ್ರಶ್ನೆ.

PC : naanugauri.com

ದೆಹಲಿ ತಲುಪಿದ ನಮಗೆ ಅಲ್ಲಿನ ಚಳಿ ಮತ್ತು ಮಳೆ ಎರಡೂ ಒಟ್ಟಿಗೆ ಸ್ವಾಗತ ಕೋರಿದವು. ಇಂತಹ ವಾತಾವರಣದಲ್ಲಿ ರೈತರು ಆ ಬಟಾಬಯಲಿನಲ್ಲಿ ಯಾವ ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಪ್ರಶ್ನೆ ಮತ್ತು ಸೋಜಿಗ ನಮ್ಮನ್ನು ಕಾಡದೆ ಇರಲಿಲ್ಲ. ಮದ್ಯಾಹ್ನದ ಹೊತ್ತಿಗೆ ದೊಡ್ಡ ಮಟ್ಟದಲ್ಲಿ ರೈತರು ಜಮೆಯಾಗಿರುವ ಸಿಂಘು ಗಡಿಗೆ ತಲುಪಿದೆವು. ಅಲ್ಲಿನ ಪರಿಸ್ಥಿತಿ ನಮ್ಮ ತಂಡಕ್ಕೆ ಅತೀವ ಆಶ್ಚರ್ಯವನ್ನು ತಂದಿದ್ದು ನಿಜ.

ಹೌದು, ಹನಿಯುತ್ತಿರುವ ಜಿಟಿ ಜಿಟಿ ಮಳೆಯಲ್ಲಿಯೇ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಸೇವೆ ಮಾಡುವ ಉದ್ದೇಶದಿಂದ ಬಂದಿರುವ ಹಲವಾರು ಮಂದಿ ಸ್ವಯಂಸೇವಕರು ಮಳೆ ಎನ್ನದೆ ತಮ್ಮ ಸೇವೆ ಮುಂದುವರೆಸುತ್ತಿದ್ದಾರೆ. ರೈತರಿಗೆ ರೈನ್ ಕೋಟ್‌ ಕೊಡುತ್ತಿದ್ದಾರೆ. ವೇದಿಕೆ ಮೇಲೆ ಮಾತನಾಡುತ್ತಿದ್ದವರ ಧ್ವನಿಯಲ್ಲಾಗಲಿ, ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ರೈತರಲ್ಲಾಗಲಿ 42 ದಿನಗಳ ಪ್ರತಿಭಟನೆಯ ಸುಸ್ತು ಕಾಣಿಸುತ್ತಿರಲಿಲ್ಲ. ಯಾವ ಸಂಗತಿಯೂ ರೈತರನ್ನು ಎದೆಗುಂದಿಸಿಲ್ಲ.

ಸಿಂಘು ಗಡಿಯ ಪ್ರತಿಭಟನೆಯ ಸ್ಥಳದಲ್ಲಿ ಶಸ್ತ್ರಸಜ್ಜಿತ ಪೊಲೀಸರ ಸಂಖ್ಯೆ ಹೆಚ್ಚಾಗಿದೆ. ಯಾವ ಕ್ಷಣದಲ್ಲಿ ಏನಾಗಲಿದೆಯೋ ಎಂಬಂತೆ ವಾಹನಗಳನ್ನು ಸಿದ್ಧಮಾಡಿಕೊಂಡು ಕಾಯುತ್ತಿದ್ದಾರೆ. ಇವರ್‍ಯಾರಿಗೂ ರೈತರು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ತಮ್ಮ ಪಾಡಿಗೆ ತಾವು ಪ್ರತಿಭಟಿಸುತ್ತಾ, ಪ್ರತಿಭಟನೆಗೆ ಬಂದವರಿಗೆ ಊಟ, ಚಹಾ, ಇರಲು ಸ್ಥಳದ ವ್ಯವಸ್ಥೆ ಮಾಡುತ್ತಿದ್ದಾರೆ.

ಸ್ಥಳದಲ್ಲಿ ಪ್ರತಿಭಟನಾಕಾರರ ಸಂಖ್ಯೆಯಷ್ಟೇ ಸ್ವಯಂ ಸೇವಕರ ಸಂಖ್ಯೆಯು ಇದೆ.

ದೆಹಲಿಯಲ್ಲಿ ಎಂಥವರೂ ಕಾಯಿಲೆ ಬೀಳುವಂತ ವಾತಾವರಣ ಇದೆ. ಹೀಗಾಗಿ ರೈತರ ಆರೋಗ್ಯವನ್ನು ನೋಡಿಕೊಳ್ಳಲು ಪ್ರತಿಭಟನೆ ಆರಂಭವಾದ ದಿನದಿಂದಲೂ ಆಂಬುಲೆನ್ಸ್ ಜೊತೆಗೆ, ಸೇವೆಗೆ ಸಿದ್ಧವಾಗಿ ವೈದ್ಯರ ತಂಡಗಳು ಇಲ್ಲಿವೆ. ಉಚಿತವಾಗಿ ಔಷಧೋಪಚಾರ ಮಾಡಲಾಗುತ್ತಿದೆ. ಭ್ರಾತೃತ್ವದ ಭಾವನೆ ಕಣ್ಣಾರೆ ಕಾಣಸಿಗುವ ಜಾಗ ಇದಾಗಿದೆ.

ರೈತರ ಬಟ್ಟೆ ಒಗೆದುಕೊಡಲು ವಾಷಿಂಗ್ ಮಿಷಿನ್‌ಗಳನ್ನು ಇಟ್ಟುಕೊಂಡಿರುವ ಮೂರು ತಂಡಗಳಿವೆ. ಈ ತಂಡದ ಸದಸ್ಯರು ರೈತರ ಬಟ್ಟೆಗಳನ್ನು ಒಗೆದು, ಒಣಗಿಸಿಕೊಡುವುದನ್ನು ಮಾಡುತ್ತಾರೆ. ಬಟ್ಟೆ ಹರಿದುಕೊಂಡವರಿಗೆ ಹೊಲಿಗೆ ಹಾಕಿ ಕೊಡಲು ಎರಡು ಕಡೆಗಳಲ್ಲಿ ಹೊಲಿಗೆ ಯಂತ್ರಗಳನ್ನು ಇಟ್ಟುಕೊಂಡು ಕುಳಿತಿರುವ ಸ್ವಯಂಸೇವಕರಿದ್ದಾರೆ. ಗಮನಿಸಬೇಕಾದ ವಿಚಾರವೆಂದರೆ ಇವರ್‍ಯಾರು ಲಕ್ಷಾಂತರ ರುಪಾಯಿ ಸಂಬಳ ಪಡೆಯುವವರಲ್ಲ. ಹೊಟ್ಟೆಪಾಡಿಗೆ ಬಟ್ಟೆ ಹೊಲಿಯುತ್ತಿದ್ದವರು. ಇದೊಂದು ಸೇವೆ ಎಂದು ಹೇಳುತ್ತಾರೆ ಈ ಮಂದಿ.

PC : naanugauri.com

ಪ್ರತಿಭಟನಾ ಸ್ಥಳದಲ್ಲಿ ಬರೀ ಪುರುಷರಷ್ಟೇ ಅಲ್ಲ. ರೈತ ಮಹಿಳೆಯರು, ಅವರ ಮಕ್ಕಳು, ವಿದ್ಯಾರ್ಥಿನಿಯರು ಇದ್ದಾರೆ. ಇವರುಗಳಿಗಾಗಿ ಪ್ರತ್ಯೇಕವಾದ ಟೆಂಟ್‌ಗಳನ್ನು ಹಾಕಲಾಗಿದೆ. ಕೆಲವು ಮಹಿಳಾ ಸಂಘಟನೆಗಳು ತಾವೇ ಟೆಂಟ್‌ಗಳನ್ನು ನಿರ್ಮಿಸಿಕೊಂಡಿದ್ದರೆ, ಮತ್ತೆ ಕೆಲವರು ಸ್ಥಳದಲ್ಲಿ ಮಹಿಳೆಯರಿಗೆ ಮಾತ್ರ ಮೀಸಲಿರುವ ಜಾಗಗಳಲ್ಲಿ ವಾಸವಿದ್ದು, ರೈತ ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನಾ ಸ್ಥಳ ಅದೇ ಒಂದು ಪಟ್ಟಣವಾಗಿ ಮಾರ್ಪಾಡಾಗಿರುವುದು ಒಂದು ವಿಶೇಷ ಸಂಗತಿ. ಇಷ್ಟು ದಿನ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶಗಳನ್ನು ದೆಹಲಿಗೆ ಕೂಡುವ ರಾಷ್ಟ್ರೀಯ ಹೆದ್ದಾರಿಗಳ ಜಾಗ, ಈಗ ಹೊಸ ಬಗೆಯಲ್ಲಿ, ಹೊಸದಾದ ರೈತರ ಪಟ್ಟಣವಾಗಿ ಬದಲಾಗಿದೆ. ಇಲ್ಲಿ ಹಲವು ರೀತಿಯ ವ್ಯವಸ್ಥೆಗಳು ಈಗ ತಲೆಯೆತ್ತಿವೆ. ಆಸ್ಪತ್ರೆ, ಹೋಟೆಲ್, ಗ್ರಂಥಾಲಯ, ಬಟ್ಟೆ, ಚಪ್ಪಲಿ, ಮೊಬೈಲ್ ಎಲ್ಲಾ ರೀತಿಯ ಅಂಗಡಿಗಳು ಆರಂಭವಾಗಿವೆ. ಕೆಲವು ಉಚಿತವಾಗಿದ್ದರೆ, ಮತ್ತೆ ಕೆಲವಕ್ಕೆ ಹಣ ಪಾವತಿಸಬೇಕು. ಎಲ್ಲೂ ಸುಲಿಗೆಯಿಲ್ಲ ಎನ್ನುವುದು ಮುಖ್ಯ.

ಇಷ್ಟೊಂದು ಜನ ಸೇರಿರುವ ಕಡೆ ಸ್ವಚ್ಛತೆ ಹೇಗೆ ಎಂಬ ಪ್ರಶ್ನೆ ನಮಗೂ ಕಾಡಿತ್ತು. ಅದಕ್ಕೆ ಉತ್ತರ ಅಲ್ಲಿ ಇಳಿದ ಕೂಡಲೇ ದೊರೆಯಿತು. ಸಾಲುಸಾಲಾಗಿ ಇ-ಶೌಚಾಲಯಗಳನ್ನು ಇರಿಸಲಾಗಿದೆ. ಕಸ ಬಾಚಲು, ಸ್ವಚ್ಛತೆ ಕಾಪಾಡಲು ನಗರಪಾಲಿಕೆಯ ನೌಕರಿಗಾಗಿ ಕಾಯುವುದಿಲ್ಲ ಇಲ್ಲಿ. ಸ್ವಯಂಸೇವಕರೆ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತಾರೆ. ಎಷ್ಟೇ ಸ್ವಚ್ಛತೆ ಮಾಡಿದರೂ ಮಳೆ ಮತ್ತೆ ಮತ್ತೆ ರೈತರನ್ನು ಕಾಡುತ್ತಿದೆ. ಮಳೆ, ಕೆಸರಿನಲ್ಲಿ ಓಡಾಡುವ, ಅಲ್ಲಿಯೇ ಮತ್ತೆ ಮತ್ತೆ ರ್‍ಯಾಲಿಗಳನ್ನು ಮಾಡುವ ಇವರ ಹೋರಾಟ ಎಂಥವರನ್ನು ಬೆರಗುಗೊಳಿಸುತ್ತದೆ.

ಪ್ರತಿಭಟನೆ ಒಂದು ಜಾಗದಲ್ಲಿ, ಒಂದು ಕಡೆ ಅಥವಾ ಒಂದು ವೇದಿಕೆಯಲ್ಲಿ ಮಾತ್ರ ನಡೆಯುತ್ತಿಲ್ಲ. 10 ಕಿ.ಮೀಗಳಿಗೂ ಉದ್ದದ ಪ್ರತಿಭಟನೆ ನಡೆಯುತ್ತಿದೆ. ಇದರ ಉದ್ದ ಇನ್ನೂ ಜಾಸ್ತಿ ಇರಬಹುದು. ಎರಡು ಮುಖ್ಯ ವೇದಿಕೆಗಳಿದ್ದರೆ, ಅಲ್ಲಲ್ಲಿ ಪುಟ್ಟ, ಪುಟ್ಟ ವೇದಿಕೆಗಳು ಹಲವಾರಿವೆ. ಇಲ್ಲಿ ಜನರನ್ನು ಒಟ್ಟಾಗಿರಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಚಳವಳಿಯ ಗೀತೆಗಳನ್ನು ಹಾಡಲಾಗುತ್ತದೆ. ವಿವಾದಿತ ಕೃಷಿ ಮಸೂದೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ತಾವು ಯಾಕೆ ಕಾಯ್ದೆಯನ್ನು ವಿರೋಧಿಸುತ್ತಿದ್ದೇವೆ ಎಂಬುದನ್ನು ವಿವರವಾಗಿ ತಿಳಿಸಲಾಗುತ್ತದೆ. ರೈತರಿಂದ ಹಿಡಿದು ರೈತ ಮುಖಂಡರು, ಪ್ರತಿಭಟನೆ ಬೆಂಬಲಿಸುವವರು ಕೂಡ ವೇದಿಕೆ ಮೇಲೆ ಬಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆಯನ್ನು ಹಲವಾರು ಸಂಘಟನೆಗಳು, ಸ್ವಯಂ ಸೇವಾ ಸಂಘಗಳು ಮಾಡುತ್ತಿವೆ. ಮಾರು ದೂರಕ್ಕೊಂದರಂತೆ ಊಟದ ಲಂಗರ್‌ಗಳು ಕಾಣಿಸುತ್ತವೆ, ಒಂದೊಂದು ಲಂಗರ್‌ಗಳಲ್ಲೂ ಒಂದೊಂದು ಬಗೆಯ ಆಹಾರ ನೀಡಲಾಗುತ್ತದೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟು ಯಾರನ್ನಾದರೂ ಮಾತನಾಡಿಸಲು ಆರಂಭಿಸುತ್ತಿದ್ದಂತೆ ಮೊದಲು ಹೇಳುವ ಮಾತು. ಪೆಹಲೇ ಖಾನಾ ಖಾಲಿಜಿಯೇ (ಮೊದಲು ಊಟ ಮಾಡಿ) ಎಂಬುದು. ಹಾಗಾಗಿ ಪ್ರತಿಭಟನಾ ಸ್ಥಳದಲ್ಲಿ ರೈತರಿಗೆ, ಪ್ರತಿಭಟನೆಯ ಬೆಂಬಲಿಗರಿಗೆ ಆಹಾರದ ಕೊರತೆ ಖಂಡಿತ ಇಲ್ಲ. ಆದರೆ ಕಂಪ್ಯೂಟರ್ ಪರದೆ ಮುಂದೆ ಕುಳಿತು ಇದರ ಬಗ್ಗೆ ಕುಹಕವಾಡಿದ ಮಂದಿಯೂ ಇದ್ದರು ಎಂಬುದನ್ನು ನಾವು ಮರೆಯುವಂತಿಲ್ಲ.

PC : naanugauri.com

ಪತ್ರಕರ್ತರಾಗಿ ತೆರಳಿದ ನಮಗೆ ಎದುರಾದ ಒಂದು ಕಷ್ಟ ಎಂದರೆ, ನಾವು ಮಾಧ್ಯಮದವರು ಎಂದಕೂಡಲೇ ಪ್ರತಿಭಟನಾಕಾರರು ಮಾತನಾಡಲು ಹಿಂದೇಟು ಹಾಕುವುದು. ಐಡಿ ಕಾರ್ಡ್ ನೋಡಿದ ಮೇಲೆಯೇ ಮತ್ತು ಪ್ರಗತಿಪರ-ಜನಪರ ಮಾಧ್ಯಮ ಎಂದು ಖಾತ್ರಿಪಡಿಸಿಕೊಂಡ ನಂತರವೇ ಅವರು ಮಾತನಾಡಲು ಆರಂಭಿಸುವುದು. ಚಿಕ್ಕ ವಯಸ್ಸಿನ ಮಕ್ಕಳು ಕೂಡ ಯಾವ ಮಾಧ್ಯಮ ಎಂಬುದನ್ನು ಖಚಿತಪಡಿಸಿಕೊಂಡು ನಂತರ ಮಾತನಾಡುತ್ತಾರೆ. ಈ ಮೂಲಕ ಗೋಧಿ ಮೀಡಿಯಾ ವಿರುದ್ಧ ತಾವೆಷ್ಟು ನಿಷ್ಠುರವಾಗಿದ್ದೇವೆ ಎಂಬುದನ್ನು ತಿಳಿಸುತ್ತಾರೆ.

ಮುಂದೆ ಗುಂಡು ಇದೆ ಎಂದು ಗೊತ್ತಿದೆ ಹಾಗೆಂದು ಯುದ್ಧರಂಗದಿಂದ ವಾಪಾಸ್ ಆಗಲಾರೆ ಎನ್ನುವ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಅಂತಹ ಚಳಿ, ಗಾಳಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೈತರು ಮತ್ತು ರೈತ ಮಕ್ಕಳ ಹೋರಾಟ ನಿಜಕ್ಕೂ ಕಣ್ಣಾಲಿಯಲ್ಲಿ ನೀರುಕ್ಕಿಸುತ್ತದೆ. ದೆಹಲಿಯಲ್ಲಿ ಚಳಿ ನಿಜಕ್ಕೂ ಕೊರಯುತ್ತಿದೆ. ಜೊತೆಗೆ ಮಳೆ ಬೇರೆ ಜಿನುಗುತ್ತಿದೆ. ಇವುಗಳ ನಡುವೆ ಅನ್ನದಾತರ ಪಟ್ಟು ಎಂಥವರನ್ನು ಒಮ್ಮೆ ಆಶ್ಚರ್ಯಕ್ಕೆ ನೂಕುತ್ತದೆ.


ಇದನ್ನೂ ಓದಿ: ಈ ಬಾರಿ ಕೆಂಪುಕೋಟೆಯಲ್ಲಿ ಮೋದಿ ಧ್ವಜಾರೋಹಣ ಮಾಡಲು ಬಿಡುವುದಿಲ್ಲ: ಟ್ರಾಕ್ಟರ್ ರ್ಯಾಲಿಯಲ್ಲಿ ರೈತರ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...