| ಪಿ.ಕೆ. ಮಲ್ಲನಗೌಡರ್ |
ಆ ಚುನಾವಣಾ ಫಲಿತಾಂಶದಿಂದ ಈ ಚುನಾವಣಾ ಫಲಿತಾಂಶ ಬರುವುದರೊಳಗೆ ಕುಮಾರಸ್ವಾಮಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದೇ ಗೊತ್ತಾಗಲಿಲ್ಲ! ಈ ಸರ್ಕಾರ ಒಂದರ್ಥದಲ್ಲಿ ‘ಚಲನಶೀಲ’ವೇ ಆಗಿದೆ. ಆದರೆ ಅದು ತಿರುತಿರುಗಿ ಮತ್ತಲ್ಲೇ ನಿಂತಿದೆ. ಹುಟ್ಟಿದಾಗ ಯಾವ ಆತಂಕದಲ್ಲಿತ್ತೋ ಅದೇ ಆತಂಕದಲ್ಲಿ ಸರ್ಕಾರವಿದ್ದರೆ, ಅವತ್ತು ಯಾವ ಭ್ರಮೆಯಲ್ಲಿತ್ತೋ ಅದೇ ಭ್ರಮೆಯಲ್ಲಿ ವಿಪಕ್ಷವಿದೆ!
ಇದು ಕರ್ನಾಟಕದ ಜನರ ದುರಾದೃಷ್ಟ. ಕಳೆದ ಸಲ ಹೊಸ ಸರ್ಕಾರ ಬಂದಾಗ ಅದು ತನ್ನ ಅಸ್ತಿತ್ವ ಕಾಪಾಡಿಕೊಳ್ಳಲೇ ಹೆಣಗಬೇಕಿತ್ತು. ಇದೇ ತಿಂಗಳಲ್ಲಿ ತೀನ್ ದಿನ್ ಕಾ ಸುಲ್ತಾನ್ ಆಗಿ, ಸಂವಿಧಾನಿಕ ನಡೆಯ ಎದುರು ತಲೆಬಾಗಬೇಕಾದ ಯಡಿಯೂರಪ್ಪನವರು ಈಗಲೂ ಜನರ ತೀರ್ಪಿನ ವ್ಯಾಖ್ಯಾನವನ್ನು ಅರಗಿಸಿಕೊಂಡಿಲ್ಲ, ಅವರಿಗೆ 24*7 ಮುಖ್ಯಮಂತ್ರಿ ಕನಸು. ಅದರ ಸುತ್ತಲೇ ಅವರ ಕಾರ್ಯಚಟುವಟಿಕೆ. ಕಳೆದ ಸಲ ಫಲಿತಾಂಶ ಬಂದಾಗಿನಿಂದ ಸಿಎಂ ಆಗುವ ತಮ್ಮ ಹಂಬಲವನ್ನು ಹೈಕಮಾಂಡ್ ಕಾರಣಕ್ಕಾಗಿ ಅದುಮಿಟ್ಟಿದ್ದ ಸಿದ್ದರಾಮಯ್ಯ ಈಗ ಅದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ತೆರೆಮರೆಯಲ್ಲಿ ನಡೆಸಿದ್ದಾರೆ.
ಹಾಗಾದ್ದ ಮೇಲೆ ಈ ಸರ್ಕಾರಕ್ಕೆ ಒಂದು ವಿಷನ್ ಎಂಬುದು ಇರಲು ಹೇಗೆ ಸಾಧ್ಯ? ಇವರ ಕಿತ್ತಾಟದ ಫಲವೆಂದರೆ, ಈ ವರ್ಷದ ಬಜೆಟ್ ಯಾವುದೇ ರ್ಚೆಯಿಲ್ಲದೇ ಪಾಸಾಗುವ ಮೂಲಕ ಕರ್ನಾಟಕ ವಿಧಾನಸಭಾ ಇತಿಹಾಸದಲ್ಲಿ ದಾಖಲೆ ಬರೆಯಿತು. ಇದಕ್ಕೆ ಮೂರೂ ಪಕ್ಷಗಳೂ ಕಾರಣ. ಒಂದು ರಾಜ್ಯದ ಅಭಿವೃದ್ಧಿಯ, ಯೋಜನೆಗಳ ನೀಲನಕ್ಷೆಯ ವಾರ್ಷಿಕ ಮುನ್ನೋಟ ನೀಡುವ ಬಜೆಟ್ ಬಗ್ಗೆ ಮೂರೂ ಪಕ್ಷಗಳ ನಿಲುವು ಒಂದೇ ಆಗಿರುವಾಗ ಯಾವ ರಚನಾತ್ಮಕ ಕೆಲಸಗಳನ್ನು ನಿರೀಕ್ಷಿಸಲು ಸಾಧ್ಯ?
ತಳಮಟ್ಟದ ಆಡಳಿತ ಕುಸಿತ
ಇಲ್ಲಿ ಯಾವ ಸಚಿವ, ಶಾಸಕರಿಗೂ ಸ್ಥಳಿಯ ಸಮಸ್ಯೆಗಳ ಕಡೆ ಗಮನ ಹರಿಸಲು ಪುರುಸೊತ್ತಿಲ್ಲ. ಎಲ್ಲರಿಗೂ ಈ ಸರ್ಕಾರ ಬೀಳುವುದೋ ಇಲ್ಲವೋ ಎಂಬುದರ ಚಿಂತೆ. ಉಪ ಚುನಾವಣೆಗಳ ಎರಡು ಸೀಟುಗಳು ಬಹುಮುಖ್ಯವಾಗಿದ್ದರಿಂದ ಮೂರೂ ಪಕ್ಷಗಳ ನಾಯಕರು ತಲೆಕೆಡಿಸಿಕೊಂಡು ಭಾಗವಹಿಸಿದರು. ಈಗವರಿಗೆ ಕೇಂದ್ರದಲ್ಲಿ ಯಾವ ಸರ್ಕಾರ ಬರುತ್ತದೆ ಮತ್ತು ಇಲ್ಲೇನಾಗಲಿದೆ ಎಂಬುದಷ್ಟೇ ಚಿಂತೆ. ಇದೇ ಮೇ 29 ಕ್ಕೆ ಸುಮಾರು 15 ಲಕ್ಷ ಮತದಾರರು ಪಾಲ್ಗೊಳ್ಳುವ 69 ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿವೆ. ಮೂರೂ ಪಕ್ಷಗಳ ನಾಯಕರಿಗೆ ಇದರ ಕಡೆ ಪುರುಸೊತ್ತೇ ಇಲ್ಲ. 2018ರ ಅಗಸ್ಟ್‍ನಲ್ಲಿ 109 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಸರ್ಕಾರದ ಮೀಸಲಾತಿ ನಿಗದಿಯಲ್ಲಿ ರೋಸ್ಟರ್ ಅನುಸರಿಸದೇ ಇದ್ದುದರಿಂದ ಹೈಕೋರ್ಟಿನಲ್ಲಿ ಕೆಲವರು ತಡೆಯಾಜ್ಞೆ ತಂದರು. ಆ ತಡೆಯಾಜ್ಞೆ ತೆರವುಗೋಳಿಸುವ ಆಸಕ್ತಿಯೇ ಸರ್ಕಾರಕ್ಕೆ ಇಲ್ಲದ್ದರಿಂದ ಈ 109 ಸ್ಥಳಿಯ ಸಂಸ್ಥೆಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇನ್ನೂ ಆಗಿಲ್ಲ. ಆಡಳಿತಾಧಿಕಾರಿಗಳದ್ದೇ ಕಾರುಬಾರು. ಸದ್ಯ ಕುಡಿಯುವ ನೀರಿನ ತೀವ್ರ ಅಭಾವವಿದ್ದು ಇಂತಹ ಕಡೆ ಅಧಿಕಾರಿಗಳು ನೀರು ಪೂರೈಕೆ ನೆಪದಲ್ಲಿ ಹಣ ಮಾಡುತ್ತಿದ್ದಾರೆ. ಬಹುಪಾಲು ಶಾಸಕರು ಬೆಂಗಳೂರಲ್ಲೇ ಇರುವುದರಿಂದ ಸ್ಥಳಿಯ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ.
ವಿಕೇಂದ್ರಿಕರಣದ ನಿರ್ಲಕ್ಷ್ಯ
ಕಳೆದ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿ ತಣ್ಣಗೆ ಅದ್ಭುತ ಸಾಧನೆ ಮಾಡಿದ್ದ ಯುವ ಶಾಸಕ ಈ ಸಲ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಅಂತಹ ಉತ್ಸಾಹವನ್ನೇನೂ ತೋರುತ್ತಿಲ್ಲ. ಅವರ ಪೊಟೆನ್ಸಿಯಲ್‍ಗೆ ಹೋಲಿಸಿದರೆ ಈಗಿನ ಅವರ ಕಾರ್ಯವೈಖರಿ ನೀರಸವಾಗಿದೆ. ಕಳೆದ ಸಲ ಈ ಖಾತೆಗಿದ್ದ ಎಚ್.ಕೆ. ಪಾಟೀಲ ತಳಹಂತದಲಾಗುತ್ತಿದ್ದ ಪ್ರತಿ ಬೆಳವಣಿಗೆ, ಕುಂಠಿತಗಳನ್ನು ಖುದ್ದು ಪರಿಶೀಲಿಸಿ ಎಷ್ಟು ಸಾಧ್ಯವೋ ಅಷ್ಟು ಪರಿಹಾರ ಒದಗಿಸಲು ವಿವಿಧ ಸಚಿವರೊಂದಿಗೆ, ಇಲಾಖೆಗಳೊಂದಿಗೆ ಮಾತಾಡಿ, ಮನವರಿಕೆ ಮಾಡಿಕೊಟ್ಟು ಸಹಕಾರ ಪಡೆಯುತ್ತಿದ್ದರು. ಕೃಷಿಹೊಂಡ ಮತ್ತು ಕೃಷಿ ಉಪಕರಣಗಳ ಬಾಡಿಗೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಂದಿದ್ದ ಕೃಷ್ಣ ಭೈರೆಗೌಡರು ಈ ಸಮ್ಮಿಶ್ರ ಜಂಜಾಟದಲ್ಲಿ ಮುಳುಗಿ ಸುಸ್ತಾಗಿಬಿಟ್ಟರೆ? ಸಚಿವರು ಪದೇ ಪದೇ ಮನೆಪಟ್ಟಿ (ತೆರಿಗೆ), ನೀರಿನ ಕರ ವಸೂಲಿ ಸರಿಯಾಗಿ ಮಾಡಿ ಎಂದು ಆದೇಶ ಕೊಡುತ್ತಾರೆ? ಸತತ ಬರದಿಂದ ತತ್ತರಿಸುವ ಪ್ರದೇಶಗಳಲ್ಲಿ ಜನರಿಗೆ ಇದನ್ನೆಲ್ಲ ಭರಿಸಲು ಸಾಧ್ಯವಾ? ಅದರ ಬದಲು, ಸದ್ಯಕ್ಕೆ ಅಂತಹ ಕರಗಳನ್ನು ಸಂಗ್ರಹಿಸುವುದನ್ನು ಮುಂದಕ್ಕೆ ಹಾಕೋಣ ಎಂಬ ಸಾಮಾಜಿಕ ಅರಿವಿನ ಚಿಂತನೆಯನ್ನು ಕೃಷ್ಣ ಭೈರೆಗೌಡರು ಮಾಡಬಹುದಿತ್ತು.
ಕಳೆದ ಸರ್ಕಾರದ ಅವಧಿಯಲ್ಲಿ ಗ್ರಾಪಂಗಳಿಗೆ ಅವರ ವ್ಯಾಪ್ತಿಯಲ್ಲಿನ ಮೊಬೈಲ್ ಟವರ್, ಗಾಳಿ ವಿದ್ಯುತ್ ಯಂತ್ರಗಳ ಕಂಪನಿಗಳಿಂದ ತೆರಿಗೆ ಪಡೆಯುವ ಅಧಿಕಾರ ನೀಡಲಾಗಿದೆ. ಆದರೆ ದೂರದಲ್ಲೆಲ್ಲೋ ಹೆಡ್ ಆಫೀಸ್ ಹೊಂದಿರುವ ಈ ಕಂಪನಿಗಳು 9-10 ನೋಟಿಸ್ ಕೊಟ್ಟರೂ ಉತ್ತರಿಸುತ್ತಿಲ್ಲ. ಸೀದಾ ಈ ಕಂಪನಿಗಳ ರಾಜ್ಯ ಪ್ರತಿನಿಧಿಗಳಿಗೆ ಜಾಡಿಸಿ ಸರಿ ದಾರಿಗೆ ತರುವ ಬದಲು ಸಂಕಷ್ಟದಲ್ಲಿರುವ ಜನರಿಂದ ಕರ ವಸೂಲಿಗೆ ಒತ್ತಾಯಿಸುತ್ತಿದ್ದಾರೆ ಸಚಿವರು.
ಇದನ್ನು ಓದಿ: ರಾಜ್ಯ ಸರ್ಕಾರದ ಭವಿಷ್ಯ ನಿಂತಿರುವುದು ಈ ನಾಲ್ಕು ಅಂಶಗಳ ಮೇಲೆ.
ಎಲ್ಲವನ್ನೂ ಅವರು ಜಿಲ್ಲಾ ಪಂಚಾಯತಿ ಸಿಇಒಗಳ ಉಸಾಬರಿಗೆ ನೀಡಿದ ಪರಿಣಾಮವಾಗಿ, ಇವತ್ತು ಗ್ರಾಮಗ್ರಾಮಗಳಲ್ಲಿ ಕುಡಿಯುವ ನೀರಿಗೆ ತಾತ್ವಾರ. ಈಗ ಅಧಿಕಾರಿಗಳು ಬಾವಿ ತೋಡಲು ಹೊರಟಿದ್ದಾರೆ.
ಇಂತಹ ಸಂದರ್ಭದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಸಚಿವರ ನಡುವೆ ಸಮನ್ವಯವಿರಬೇಕಿತ್ತು. ಸದಾ ಕೈಗಾರಿಕೆ, ಮೂಲ ಸೌಕರ್ಯ ಸಚಿರಾಗಿದ್ದ ಆರ್‍ವಿ.. ದೇಶಪಾಂಡೆಯವರಿಗೆ ಕಂದಾಯ ಖಾತೆ ಒಗ್ಗುತ್ತಿಲ್ಲವೇನೋ? ಆದರೆ ಈ ಇಲಾಖೆಯ ‘ಆದಾಯ’ ಖುಷಿ ಕೊಡುತ್ತದೆ, ಆದರೆ ತಳಮಟ್ಟಕ್ಕೆ ಇಳಿದು ಕೆಲಸ ಮಾಡಲ್ಲ ಅಂದರೆ ಹೇಗೆ?
ಪ್ರಾಥಮಿಕ ಶಿಕ್ಷಣಕ್ಕೆ ಸಚಿವರೇ ಇಲ್ಲ!

ಇವತ್ತು ನಮ್ಮ ಸರ್ಕಾರಿ ಶಾಲೆಗಳು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ, ಸದ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆಂದು ಪ್ರತ್ಯೇಕ ಸಚಿವರಿಲ್ಲ! ಅಂದರೆ ಅದು ಪರೋಕ್ಷವಾಗಿ ಮುಖ್ಯಮಂತ್ರಿ ಬಳಿಯೇ ಇದೆ ಎಂದರ್ಥ. ಕಳೆದ ಅಕ್ಟೋಬರ್‍ನಲ್ಲಿ ಬಿಎಸ್‍ಪಿಯ ಎನ್ ಮಹೇಶ್ ಅವರ ಪಾರ್ಟಿ ಹೈಕಮಾಂಡ್ ಆದೇಶದಂತೆ ಪ್ರಾಥಮಿಕ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಮೇಲೆ, ಈ ಇಲಾಖೆಗೆ ಈಗ ಸಚಿವರೇ ಇಲ್ಲ! ಈ ಬಗ್ಗೆ ಕಾಂಗ್ರೆಸ್‍ಗೂ ಚಿಂತೆಯಿಲ್ಲ, ವಿಪಕ್ಷಕ್ಕೆ ಇದು ಮುಖ್ಯ ವಿಷಯವೇ ಅಲ್ಲ!
ರೆಸಾರ್ಟಿನಿಂದ ರೆಸಾರ್ಟಿಗೆ: ಇದೇ ‘ಚಲನಶೀಲತೆ’!
ಹಾಗಂತ ಈ ಸರ್ಕಾರ ಕೆಲಸವೇ ಮಾಡಿಲ್ಲ ಅಂತಲ್ಲ. ಸಾಲಮನ್ನಾ ವಿಷಯದಲ್ಲಿ ಅನಗತ್ಯ ರೂಲ್ಸ್ ಮಾಡಿ ವಿಳಂಬ ಮಾಡಿದೆಯಾದರೂ, ಅದರ ಸಾಧನೆ ಈ ವಿಷಯದಲ್ಲಿ ಪರವಾಗಿಲ್ಲ. ಆದರೆ ನೀರಾವರಿ ಯೋಜನೆಗಳಲ್ಲಿ ತುಂಬ ಹಿಂದಿದೆ. ಜಲ ಸಂಪನ್ಮೂಲ ಸಚಿವರಿಗೆ ಉಪ ಚುನಾವಣೆ ಉಸ್ತುವಾರಿ, ಬೇರೆ ಜಿಲ್ಲೆಗಳಲ್ಲಿ ಮೂಗು ತೂರಿಸುವುದು, ತಮ್ಮ ಕೇಸುಗಳನ್ನು ಫೈಟು ಮಾಡುವುದೇ ದೊಡ್ಡ ಕೆಲಸ. ಅವರ ಬಳಿ ನೀರಾವರಿ ಕುರಿತಂತೆ ಮುನ್ನೋಟವಿರಲಿ, ಆಕ್ತಿಯೂ ಇಲ್ಲ. ಈಗ ಚಾಲ್ತಿಯಲ್ಲಿರುವ ಯೋಜನೆಗಳಿಂದ ಅವರಿಗೆ ಬರಬೇಕಾದದ್ದು ಬಂದರೆ ಮುಗೀತು. ಪ್ರತಿ ಕ್ಯಾಬಿನೆಟ್ ಸಭೆಯಲ್ಲೂ ಲೋಕೋಪಯೋಗಿ ಸಚಿವ ರೇವಣ್ಣರಿಗೆ ವಿಶೇಷ ಅನುದಾನಗಳು. ಅವರ ಪಾಲಿಗೆ ‘ಲೋಕ’ ಅಂದರೆ ಹಾಸನ ಜಿಲ್ಲೆಯಷ್ಟೇ!
ಇಡೀ ಒಂದು ವರ್ಷದ ಚಿತ್ರಣ ನೋಡಲು ಹೊರಟರೆ ಆಪರೇಷನ್ ಕಮಲ, ಅದನ್ನು ತಡೆಯಲು ಹೆಣಗಾಟ, ಶಾಸಕರು ರೆಸಾರ್ಟಿನಿಂದ ರೆಸಾರ್ಟಿಗೆ ಅಲೆಯುವ ದೃಶ್ಯಗಳೇ ಜನರ ಕಣ್ಮುಂದೆ ಬರುತ್ತಿವೆ.
ಇದು ಕೇವಲ ಕುಮಾರಸ್ವಾಮಿ ಸರ್ಕಾರದ ವಿಫಲತೆಯಲ್ಲ, ರಾಜ್ಯದ ಮೂರೂ ಪ್ರಮುಖ ಪಾರ್ಟಿಗಳ ವಿಫಲತೆ ಕೂಡ.
ಇದನ್ನು ಓದಿ: ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳತ್ತೋ? ಕೊಡವಿಕೊಂಡು ಏಳತ್ತೋ?


