ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನಾಲ್ಕೈದು ದಿನಗಳಲ್ಲಿ ಹೆಚ್ಚು ಹರಿದಾಡಿದ ಜೋಕು “ಲಾಭ ಖಾಸಗೀಕರಣಗೊಂಡಿದೆ ಮತ್ತು ನಷ್ಟ ರಾಷ್ಟ್ರೀಕರಣಗೊಂಡಿದೆ” ಎಂದು. ಭಾರತ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲಿ ಯೆಸ್ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಂಡು, ಆರ್.ಬಿ.ಐ ತೆಗೆದುಕೊಂದಿರುವ ಕ್ರಮಗಳ ಹಿನ್ನೆಲೆಯಲ್ಲಿ ಮತ್ತು ಈಗ ಗ್ರಾಹಕರ ಹಿತದೃಷ್ಟಿಯಿಂದ, ಈ ಖಾಸಗಿ ಬ್ಯಾಂಕ್ ರಕ್ಷಣೆಗಾಗಿ ರಾಷ್ಟ್ರೀಕೃತ ಬ್ಯಾಂಕ್ ಎಸ್ ಬಿ ಐಗೆ ಆರ್.ಬಿ.ಐ/ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯೆಸ್ ಬ್ಯಾಂಕಿನ 49% ಶೇರುಗಳನ್ನು ಖರೀದಿಸಿ, ಅಲ್ಲಿನ ಗ್ರಾಹಕರ ಆತ್ಮವಿಶ್ವಾಸವನ್ನು ಮರುಕಳಿಸಲು ಎಸ್.ಬಿ.ಐ ಮುಂದಾಗಿದೆ. ಇಂತಹ ಪರಿಸ್ಥಿತಿಗೆ ಬಂದದ್ದು ಹೇಗೆ? ಇಂತಹ ಪರಿಹಾರಗಳು ಶಾಶ್ವತವೇ? ಈ ಬಿಕ್ಕಟ್ಟಿನ ಮತ್ತು ಮುಂದೆ ಸೃಷ್ಟಿಯಾಗಬಹುದಾದ ಬಿಕ್ಕಟ್ಟುಗಳಿಂದ ದೇಶದ ಮೇಲೆ ಉಂಟಾಗುವ ಆರ್ಥಿಕ ಪರಿಣಾಮಗಳು ಎಂತಹುವು ಎಂಬುದರ ಬಗ್ಗೆ ಅಜೀಮ್ ಪ್ರೇಮ್‍ಜೀ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಮಿತ್ ಬಾಸೊಲೆ ನ್ಯಾಯಪಥದೊಂದಿಗೆ ಚರ್ಚಿಸಿದ್ದಾರೆ.
ಪ್ರ: ಕಳೆದ ಐದಾರು ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದ ಬಿಕ್ಕಟ್ಟುಗಳು ಸಾರ್ವಜನಿಕವಾಗಿ ಬಹಿರಂಗವಾಗುತ್ತಿವೆ. ಈಗ ಯೆಸ್ ಬ್ಯಾಂಕ್ ಬಿಕ್ಕಟ್ಟು ಬೃಹತ್ತಾಗಿ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇದರ ಹಿನ್ನೆಲೆ ಮತ್ತು ಸ್ವರೂಪ ಏನು?
ನವ ಉದಾರೀಕರಣ ನೀತಿಗಳು ಭಾರತಕ್ಕೆ ಕಾಲಿಡುವ ಮುಂಚೆ ಭಾರತದಲ್ಲಿ ಬ್ಯಾಂಕುಗಳು ಹಲವು ನಿಯಂತ್ರಣಗಳಿಗೆ ಒಳಪಟ್ಟಿದ್ದವು. ನಂತರ ನಮ್ಮಲ್ಲಾಗಲೀ ಮತ್ತು ಅತಿ ದೊಡ್ಡ ಮಟ್ಟದಲ್ಲಿ ಅಮೆರಿಕಾದಲ್ಲಾಗಲೀ, ಬ್ಯಾಂಕುಗಳ ಮೇಲಿನ ನಿಯಂತ್ರಣವನ್ನು ಭಾರಿಯಾಗಿ ಸಡಿಲಿಸಲಾಯಿತು. ಖಾಸಗಿ ಬ್ಯಾಂಕುಗಳಿಗೆ ಅವಕಾಶ ಕೊಟ್ಟ ಮೇಲೆ ಅವರು ಲಾಭ, ಸಣ್ಣ ಅವಧಿಯ ಗಳಿಕೆ ಬಿಟ್ಟರೆ ದೂರದೃಷ್ಟಿಯ ಚಿಂತನೆ ಅಥವಾ ಜನಕಲ್ಯಾಣ ಯೋಜನೆಗಳ ಬಗ್ಗೆ ಅವರು ಚಿಂತಿಸುವುದಿಲ್ಲ. ಆದುದರಿಂದಲೇ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರತ್ಯೇಕವಾಗಿ ಇಟ್ಟಿದ್ದು. ಈ ಕ್ಷೇತ್ರದಲ್ಲಿ ಸಮಸ್ಯೆಯಾದರೆ ಸಮಾಜದ ಉಳಿದ ಎಲ್ಲಾ ವಲಯಗಳ ಮೇಲೆ ಅದು ಪರಿಣಾಮ ಬೀರುತ್ತೆ.
ಮೊದಲ ದಶಕದಲ್ಲಿ ಭಾರತದಲ್ಲಿ ಅಭಿವೃದ್ಧಿ ಮುಂಚೂಣಿಯಲ್ಲಿತ್ತು. ಎನ್‍ಡಿಎ-1 ಆಳ್ವಿಕೆಯ ಕೊನೆಯ ಭಾಗ, ಯುಪಿಎ-1 ಮತ್ತು ಯುಪಿಎ-2ರ ಸಮಯದಲ್ಲಿ ವೇಗವಾದ ಆರ್ಥಿಕ ಬೆಳವಣಿಗೆ ಕಂಡೆವು. ಮೂಲಸೌಕರ್ಯ ಮತ್ತು ನಿರ್ಮಾಣ ಉದ್ಯಮ ವಲಯಕ್ಕೆ ಸಾಕಷ್ಟು ಹಣ ಹರಿದುಬಂತು. ಈ ವಲಯಗಳು ಆರ್ಥಿಕತೆಗೆ ಸಾಕಷ್ಟು ಇಂಬು ಕೊಡುತ್ತಾ ಬಂದವು. ಇದೇ ಸಮಯದಲ್ಲಿ ಇದರ ಭಾಗವಾಗಿ ಹೊಸ ಮೂಲಸೌಕರ್ಯ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಹಲವು ಸಾಲಗಳನ್ನು ಬ್ಯಾಂಕುಗಳಿಂದ ತೆಗೆದುಕೊಳ್ಳಲಾಯಿತು. ಈ ಸಾಲ ತೆಗೆದುಕೊಳ್ಳುತ್ತಿರುವವರ ವಿಶ್ವಾಸಾರ್ಹತೆಯ ಬಗ್ಗೆ ಹೆಚ್ಚು ಯೋಚಿಸದೆ, ಇಂತಹ ರಿಸ್ಕ್ ತೆಗೆದುಕೊಳ್ಲುವುದು ಸೂಕ್ತವೇ ಪತ್ತೆ ಹಚ್ಚದೆ, ಲಾಭದ ಮೇಲಷ್ಟೇ ಕಣ್ಣಿಟ್ಟು ಬ್ಯಾಂಕುಗಳು ಯಥೇಚ್ಛವಾಗಿ ಸಾಲ ಕೊಡುತ್ತಾ ಬಂದರು. ಇಂತಹುದಕ್ಕೆ ಒಳ್ಳೆಯ ಉದಾಹರಣೆ ಯೆಸ್ ಬ್ಯಾಂಕ್. ಅವರು ಬಂದಿದ್ದು ಸುಮಾರು 2000ನೇ ಇಸವಿಯಲ್ಲಿ ಮತ್ತು ಇಂತಹ ಹಲವು ಮೂಲಸೌಕರ್ಯ ಮತ್ತು ನಿರ್ಮಾಣ ಉದ್ಯಮ ಸಂಸ್ಥೆಗಳಿಗೆ ಸಾಲ ಕೊಡುತ್ತಾ ಹೋದರು. ಈ ಬ್ಯಾಂಕಿನ ಸಾಲದ ಪಟ್ಟಿ ಸಿಕ್ಕಾಪಟ್ಟೆ ಹೆಚ್ಚಾಯಿತು. ಸಾಮಾನ್ಯವಾಗಿ ಅಪಾಯಕಾರಿ ಸಾಲ ಎಂದು ಪರಿಗಣಿಸುವುದನ್ನು ಇಂತಹ ಬ್ಯಾಂಕುಗಳು ಯಾವುದೇ ಮುಂದಾಲೋಚನೆ ಇಲ್ಲದೆ ಕೊಡುತ್ತಾ ಬಂದವು. ಆರ್ಥಿಕತೆ ಬೆಳೀತಾ ಇದೆ ಎಂಬ ಒಂದೇ ನೋಟದಿಂದ, ಮುಂದೆ ಬರಬಹುದಾದ ಸಂಕಷ್ಟಗಳನ್ನು ಊಹಿಸದೆ ಇದ್ದುದು ಇದಕ್ಕೆ ದೊಡ್ಡ ಕಾರಣ. ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ (ಪಿಎಂಸಿ) ಪ್ರಕರಣದಲ್ಲಿಯೂ ಹಲವು ಮಾರಕ ಹಿತಾಸಕ್ತಿಯುಳ್ಳ ಜನ ಕೆಲಸ ಮಾಡಿದ್ದನ್ನು ನಾವು ನೋಡಿದ್ದೇವೆ. ದೊಡ್ಡ ಸಾಲಗಾರರು ಇದ್ದರು. ಆ ಸಾಲಗಾರರು ಮರುಪಾವತಿಗೆ ಅರ್ಹರಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಿದ್ದರೂ ಅವರಿಗೆ ಸಾಲಗಳನ್ನು ಕೊಡುತ್ತಾ ಬಂದರು. ಇದರ ಪರಿಣಾಮ ಆವರು ಎದುರಿಸಬೇಕಿಲ್ಲ ಎಂದು ಅವರಿಗೆ ತಿಳಿದಿತ್ತು. ಅನಿಯಂತ್ರಿಯ ಬ್ಯಾಂಕಿಂಗ್ ಅಂದರೆ ಇದೇ.
ಪ್ರ: ಈಗ ಯೆಸ್ ಬ್ಯಾಂಕ್ ರಕ್ಷಣೆಗಾಗಿ ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ದೇಶದ ಆರ್ಥಿಕ ವ್ಯವಸ್ಥೆಯ ದೃಷ್ಟಿಯಿಂದ ಪರಿಪಕ್ವವಾದವೇ?
ಈಗ ಸದ್ಯಕ್ಕೆ ಇವು ಸಹಾಯ ಮಾಡುವಂತಹುವೇ. ಆದರೆ ದೂರದೃಷ್ಟಿಯಲ್ಲಿ ಇದು ಒಳ್ಳೆಯದಲ್ಲ. ಇದು ಜನರಲ್ಲಿ ಅಪನಂಬಿಕೆಯನ್ನು ಹುಟ್ಟಿಸುತ್ತದೆ. ಡಿಮಾನೆಟೈಸೇಶನ್ ಸಮಯದಲ್ಲಿ ಆದದ್ದೇ ಇದು. ಇಂತಹ ಕ್ರಮಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಜನರಿಗೆ ಇರುವ ನಂಬಿಕೆಗೆ ಬೆದರಿಕೆ ಒಡ್ಡುತ್ತವೆ. ನನ್ನ ದುಡ್ಡು ನಾನು ಹಿಂಪಡೆಯಲು ಇಷ್ಟು ಕಷ್ಟ ಪಡಬೇಕೆಂದರೆ ಮುಂದಿನ ಕತೆ ಏನು, ಮುಂದೆ ಯಾವ ಬ್ಯಾಂಕು ವಿಫಲ ಆಗಬಹುದು ಎಂತಹ ಸಂಗತಿಗಳು ಜನರನ್ನು ಆತಂಕಕ್ಕೀಡುಮಾಡುತ್ತವೆ. ಇದರ ಪರಿಣಾಮಗಳು ದೂರದ ಆರ್ಥಿಕ ವ್ಯವಸ್ಥೆಗೆ ಋಣಾತ್ಮಕವಾದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇಕಿತ್ತೇನೋ. ಆದರೆ ಇಷ್ಟು ದಿನಗಳು ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಏಕಾಏಕಿ ಇಂತಹ ಕ್ರಮಗಳಿಗೆ ಮುಂದಾಗಿರುವುದು ಆಶ್ಚರ್ಯ ತರಿಸಿದೆ.
ಪ್ರ: ಪ್ರಸಕ್ತ ಕೇಂದ್ರ ಸರ್ಕಾರದ ನೀತಿಗಳು ಇಂತಹ ಬಿಕ್ಕಟ್ಟುಗಳಿಗೆ ಇನ್ನಷ್ಟು ಅವಕಾಶ ನೀಡುತ್ತಿವೆಯೇ?
ಈ ಸಮಸ್ಯೆಗಳಿಗೆ ಹೆಚ್ಚು ಕಾರಣ ಅಭಿವೃದ್ಧಿ ವೇಗವಾಗಿದ್ದ 2014ರಕ್ಕಿಂತ ಹಿಂದಿನ ವರ್ಷಗಳೇ. 2014ರ ನಂತರ ಆರ್ಥಿಕತೆ ಮತ್ತು ಅಭಿವೃದ್ಧಿ ಕುಂಠಿತವಾಗಿದೆ. ಬ್ಯಾಂಕಿಂಗ್ ದೃಷ್ಟಿಯಿಂದ ಈ ಸರ್ಕಾರ ಬಿಕ್ಕಟ್ಟಿನ ಸಮಯದಲ್ಲಿ ಏನು ಮಾಡಬಹುದೋ ಅದನ್ನು ಮಾಡುತ್ತಿದೆ (ಆರ್‍ಬಿಐ ಬ್ಯಾಂಕುಗಳಿಗೆ ತನ್ನ ಆಸ್ತಿಯನ್ನು ಘೋಷಿಸುವಂತೆ ಮಾಡಿದ್ದು ಆಗಲಿ, ಇಂತಹ ಕ್ರಮಗಳು). ಆದರೆ ಈ ಸರ್ಕಾರದ ಇತರ ಆರ್ಥಿಕ ನೀತಿಗಳು ಪರಿಸ್ಥಿತಿಯನ್ನು ಬಿಗಡಾಯಿಸಿವೆ. ಸಾಮಾನ್ಯವಾಗಿ ಇಂತಹ ಬಿಕ್ಕಟ್ಟುಗಳು ಯಾರ ಸರ್ಕಾರದ ಸಮಯದಲ್ಲಿ ಬಹಿರಂಗವಾಗುತ್ತದೋ ಅಂತಹ ಸರ್ಕಾರಗಳು ಕೆಂಗಣ್ಣಿಗೆ ಗುರಿಯಾಗುತ್ತವೆ. ಈ ನಿಟ್ಟಿನಲ್ಲಿ ಈ ನಿರ್ದಿಷ್ಟ ಬಿಕ್ಕಟ್ಟಿಗೆ ಈ ಸರ್ಕಾರ ಹೊಣೆಯಲ್ಲದೆ ಹೋದರೂ, ಉಳಿದ ಗಂಭೀರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಈ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಡಿಮಾನೆಟೈಸೇಶನ್ ಅತಿ ಕೆಟ್ಟ ನಿರ್ಧಾರ ಆಗಿತ್ತು. ಇದು ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟುಮಾಡಿದ್ದಲ್ಲದೆ, ಆಗಲೇ ಹೇಳಿದಂತೆ ಜನರ ನಂಬಿಕೆಯ ದೃಷ್ಟಿಯಿಂದ ಕೂಡ ವಿಫಲ ನಡೆ. ಆಮೇಲೆ ಜಿಎಸ್‍ಟಿಯನ್ನು ಅವರು ಕಾರ್ಯರೂಪಗೊಳಿಸಿದ ರೀತಿ ಕೂಡ ದೊಡ್ಡ ಹೊಡೆತ ಕೊಟ್ಟಿತು. ಮಾಹಿತಿ, ಅಂಕಿ-ಅಂಶ, ಪಾರದರ್ಶಕತೆ ನಿಟ್ಟಿನಲ್ಲೂ ಅವರು ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿಲ್ಲ. ಇವೆಲ್ಲಾ ಅಪನಂಬಿಕೆಯ ವಾತಾವರಣಕ್ಕೆ ಕೊಡುಗೆ ನೀಡಿವೆ. ಆಮೇಲೆ ಕೋಮು ಉದ್ವಿಗ್ನತೆಯ ಸಂಗತಿಗಳು ಕೂಡ ಇದಕ್ಕೆ ಸಂಬಂಧಿಸಿರುವುದೇ. ಇದೆಲ್ಲಾ ಸಾಮಾಜಿಕ ನಂಬಿಕೆಗೆ ಧಕ್ಕೆ ತರುತ್ತವೆ. ಸಂಸ್ಥೆಗಳ ಮೇಲೆ ಹಲವು ಸ್ತರದ ನಂಬಿಕೆಗಳಿಗೆ ಸವಾಲು ಒಡ್ಡುವುದರಲ್ಲಿ ಈ ಸರ್ಕಾರದ ಪಾತ್ರ ದೊಡ್ಡದಿದೆ. ಪ್ರಸಕ್ತ ಸರ್ಕಾರದ ಅಡಿ ಆರ್‍ಬಿಐ ತನ್ನ ಸ್ವಾಯತ್ತತೆಯಲ್ಲಿ ರಾಜಿ ಮಾಡಿಕೊಂಡಿರುವುದು ಮತ್ತೊಂದು ಕಾರಣ. ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್, ಉಪ ಗವರ್ನರ್ ವಿರಳ್ ಆಚಾರ್ಯ ರಾಜೀನಾಮೆ ನೀಡಿದ್ದು, ಸರ್ಕಾರ ಆರ್‍ಬಿಐನ ಮೀಸಲು ನಿಧಿಯ ವರ್ಗಾವಣೆಗೆ ಪಟ್ಟು ಹಿಡಿದಿದ್ದು ಇತ್ಯಾದಿ. ಇವೆಲ್ಲಾ ಘಟಿಸುವುದಿಲ್ಲ ಎಂದಲ್ಲ, ಆದರೆ ಆರ್‍ಬಿಐ ಮೇಲೆ ಒತ್ತಡ ತರುವುದು ಸರಿ ಅಲ್ಲ.
ಪ್ರ: ಈಗ ಒಂದು ರಾಷ್ಟ್ರೀಕೃತ ಬ್ಯಾಂಕು ಖಾಸಗಿ ಬ್ಯಾಂಕಿನ ರಕ್ಷಣೆಗೆ ನಿಂತಿರುವ ಸಮಯದಲ್ಲಿ, ಸಾಮಾನ್ಯ ವ್ಯಕ್ತಿಗೆ ಇದು ಹೇಗೆ ಪರಿಣಾಮ ಬೀರುತ್ತದೆ?
ಮೊದಲಿಗೆ ಎನ್‍ಪಿಎಗಳ ಸಮಸ್ಯೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಹ ಇದೆ. ಇಂತಹ ಸಮಯದಲ್ಲಿ ಖಾಸಗಿ ಬ್ಯಾಂಕುಗಳ ಎನ್‍ಪಿಎ ಸಮಸ್ಯೆಯನ್ನು ಸರಿಪಡಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಮೊರೆ ಹೋದರೆ ಹೆಚ್ಚಿನ ಉಪಯೋಗವನ್ನು ನಿರೀಕ್ಷಿಸಲು ಸಾಧ್ಯ ಇಲ್ಲ. ಈಗ ಯಾರೋ ಖಾಸಗಿ ಸಂಸ್ಥೆ ಹಿಂದಿರುಗಸದೆ ಇದ್ದ ಸಾಲದ ಪರಿಣಾಮವಾಗಿ ತಲೆದೋರುವ ಬಿಕ್ಕಟ್ಟನ್ನು ಸರಿಪಡಿಸಲು ಎಸ್‍ಬಿಐ ಬ್ಯಾಂಕ್ ಮುಂದೆ ಬಂದಾಗ, ಆ ಕೊರತೆ ಹಣವನ್ನು ಸರಿದೂಗಿಸಲು ಸಂಪನ್ಮೂಲಗಳನ್ನು ಎಸ್‍ಬಿಐ ಯಾವುದೋ ಒಂದು ಮೂಲದಿಂದ ಕ್ರೋಢೀಕರಿಸಬೇಕು. ಅದು ಎಸ್‍ಬಿಐನಲ್ಲಿರುವ ಠೇವಣಿ ಆಗಿರಬಹುದು. ಅಥವಾ ಆರ್‍ಬಿಐ ಹೊಂದಿರುವ ಮೀಸಲು ಹಣ ಆಗಿರಬಹುದು. ದೇಶದ ಹಣಕಾಸು ಸರಬರಾಜಿನ ಮೇಲೆ ಆರ್‍ಬಿಐ ನಿಯಂತ್ರಣ ಇದ್ದೇ ಇದೆ. ಆದರೆ ಇದರ ಪರಿಣಾಮ ಏನೆಂದರೆ, ಆರ್ಥಿಕವ್ಯವಸ್ಥೆಯಲ್ಲಿ ನಿಜವಾದ ಅಭಿವೃದ್ಧಿ ಇಲ್ಲದೆ ಹೋದಾಗ, ಅಂತಹ ಹೂಡಿಕೆಗಳನ್ನು ತರುವುದು ಕಷ್ಟ ಮತ್ತು ಅಪಾಯಕಾರಿ.
ಇದು ಸಾಮಾನ್ಯ ಜನರ ಮೇಲೆ ಬೀರುವ ಪರಿಣಾಮ ಏನೆಂದರೆ, ಕ್ರೆಡಿಟ್ ಪ್ರೀಜಿಂಗ್ ಅಥವಾ ಬ್ಯಾಂಕುಗಳಿಂದ ನೈಜ್ಯ ವ್ಯವಹಾರಗಳಿಗೆ ಸಾಲ ಹುಟ್ಟದೆ ಇರುವುದು. ಕೆಟ್ಟ ಸಾಲಗಾರರ ಹೊಣೆ ಒಳ್ಳೆ ಇತಿಹಾಸ ಇರುವವರು ಹೊರುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಸಮಯದಲ್ಲಿ ಸಾಲಗಳು ಸಿಗುವುದು ಕಷ್ಟ ಆಗುತ್ತದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೆಲೆ ಭಾರಿ ಹೊಡೆತ ಬೀಳುತ್ತದೆ. ಅವರಿಗೆ ಬೇರೆ ವಲಯಗಳಿಂದ ಹೂಡಿಕೆಗಳು ಇರುವುದಿಲ್ಲ. ಈ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಲವು ಉದ್ಯೋಗಗಳನ್ನು ಸೃಷ್ಟಿಸಿವೆ. ಇವುಗಳಿಗೆ ಬ್ಯಾಂಕ್ ಹಣ ಕೊಡುವುದನ್ನು ನಿಲ್ಲಿಸಿದರೆ, ಅವರ ವಿಸ್ತರಣೆ, ಉತ್ಪಾದನೆ ಎಲ್ಲವೂ ಕಡಿಮೆಯಾಗುತ್ತದೆ.
ಇನ್ನು ಅಸಂಘಟಿತ ಆರ್ಥಿಕ ವಲಯಕ್ಕೆ ಬಂದರೆ ಇದು ಟ್ರಿಕಲ್ ಡೌನ್ (ಮೇಲಿಂದ ಎಲ್ಲರಿಗೂ ಬೀರುವ) ಪರಿಣಾಮ. ಅವರು ಬ್ಯಾಂಕಿಂಗ್‍ಗೆ ಕ್ಷೇತ್ರದ ಜೊತೆಗೆ ಸಂಬಂಧ ಇಟ್ಟುಕೊಳ್ಳದೆ ಇದ್ದರೂ, ಅವರ ವ್ಯವಹಾರಗಳು ಉಳಿದ ಆರ್ಥಿಕತೆ ಜೊತೆಗೆ ಬೆಸೆದುಕೊಂಡಿದೆ. ಈ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆಗಲಿ, ಜನರ ಕೊಳ್ಳುವ ಶಕ್ತಿ ಆಗಲೀ, ಇವುಗಳ ಮೇಲೆ ಅವಲಂಬಿತವಾಗಿದೆ. ಜನ ಖರ್ಚು ಮಾಡುವುದನ್ನ ನಿಲ್ಲಿಸಿದರೆ, ಇದರ ಭಾರ ಈ ಅಸಂಘಟಿತ ಆರ್ಥಿಕ ವ್ಯವಸ್ಥೆಯ ಮೇಲೆ ಬೀಳುತ್ತದೆ. ಗ್ರಾಹಕ ಬೇಡಿಕೆ ಕಡಿಮೆಯಾದಾಗ ಇಂತಹ ವಲಯದ ವ್ಯವಹಾರಕ್ಕೆ ಭಾರಿ ಹೊಡೆತ ಬೀಳುತ್ತದೆ.
ಪ್ರ: ಅಭಿವೃದ್ಧಿ ಎಂಬ ಸಂಗತಿಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು. ಸರ್ಕಾರಗಳು ಜನರ ಮುಂದೆ ಇಡುವ ಅಭಿವುದ್ಧಿ ಅಂಕಿ-ಅಂಶಗಳು ಎಷ್ಟು ನಂಬಲರ್ಹ?
ಸರ್ಕಾರಗಳು ಹೇಳುತ್ತಿದ್ದ ಅಭಿವೃದ್ಧಿ ಎಲ್ಲಾ ವಲಯಗಳಿಂದ ಸಾಧ್ಯವಾದದ್ದಲ್ಲ. ಇದು ಹೆಚ್ಚು ದಾಖಲಾಗುತ್ತಿದ್ದುದು ವಿತ್ತೀಯ, ವಿಮೆ, ಐ ಟಿ ಸೇವೆಗಳು ಮತ್ತು ಮೂಲಸೌಕರ್ಯದ ವಲಯಗಳಿಂದ. ಆದರೆ ಅತಿ ಹೆಚ್ಚು ಜನಕ್ಕೆ ಉದ್ಯೋಗ ನೀಡುವ ಕೃಷಿ ಮತ್ತು ಕೆಳಸ್ತರದ ಸೇವೆಗಳ ವಲಯ ಹಾಗೂ ಅಸಂಘಟಿತ ವಲಯಗಳಲ್ಲಿ ಅಭಿವೃದ್ಧಿ ಇತ್ತೇ ಎಂದರೆ ಇಲ್ಲ. ಆದುದರಿಂದ ಸರ್ಕಾರಗಳು ತೋರಿಸುತ್ತಿದ್ದ ಅಭಿವೃದ್ಧಿಯಿಂದ ಬಂದ ಲಾಭ ಕೇವಲ ಮೇಲಿನ 15% ಕಾಪೆರ್Çರೆಟ್ ವಲಯದ ಜನಕ್ಕೆ ಮಾತ್ರ ಸೀಮಿತವಾಗಿತ್ತು. ಈ ಶತಮಾನದ ಮೊದಲ 20 ವರ್ಷಗಳ ಅಭಿವೃದ್ಧಿ ಸಮಾಜದ ಎಲ್ಲಾ ವಲಯಕ್ಕೂ ಹರಡಲಿಲ್ಲ. ಇದರ ಮೇಲೆ ಡಿಮಾನೆಟೈಸೇಶನ್ ನಂತಹ ಕೆಟ್ಟ ನಡೆಗಳು ಹೆಚ್ಚು ಅಪಾಯವನ್ನು ತಂದು ಒಡ್ಡಿದವು.
ಇಂತಹ ಸಮಯದಲ್ಲಿ ಸರ್ಕಾರ ಏನು ಮಾಡಬೇಕು ಎಂಬ ಪ್ರಶ್ನೆ ತಲೆದೋರುತ್ತದೆ. ಏಕೆಂದರೆ ಖಾಸಗಿ ವಲಯ ಇಂತಹ ಸಮಸ್ಯೆಗಳ ಪರಿಹಾರಕ್ಕೆ ಏನೂ ಮಾಡುತ್ತಿಲ್ಲ. ಅಭಿವೃದ್ಧಿ ಎಲ್ಲಾ ವಲಯಗಳಿಗೂ ಹಬ್ಬುವಂತೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು. ಇಂತಹ ಸಮಯದಲ್ಲಿ ಸರ್ಕಾರ ನರೇಗಾದಂತಹ ಯೋಜನೆಯಲ್ಲಿ ಹೆಚ್ಚು ಹೂಡಿಗೆ ಮಾಡಬೇಕು. ಇದನ್ನು ಹಳ್ಳಿಗಳ ಜೊತೆಗೆ, ಸಣ್ಣ ಪಟ್ಟಣಗಳಿಗೂ ವಿಸ್ತರಿಸಬೇಕು. ಸಣ್ಣ ಪಟ್ಟಣಗಳಲ್ಲಿ ಕೆಲವು ವ್ಯಾವಹಾರಿಕ ವರ್ಗಗಳನ್ನು ಬಿಟ್ಟರೆ ಉಳಿದ ಜನರ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಆದುದರಿಂದ ಇಂತಹ ಪಟ್ಟಣಗಳಲ್ಲಿ ಅಸಂಘಟಿತ ವಲಯಗಳಿಗೆ ಹೂಡಿಕೆ ಬರುವಂತೆ ನೋಡಿಕೊಂಡರೆ ಆರ್ಥಿಕ ಸ್ಥಿತಿ ಬಹಳಷ್ಟು ಸುಧಾರಿಸುವ ಸೂಚನೆ ಇದೆ. ಇದಕ್ಕೆ 2-3 ಲಕ್ಷ ಕೋಟಿ ಹೆಚ್ಚಿನ ಹೂಡಿಕೆ ಬೇಕಾಗಬಹುದು. ಇದು ಸುಮಾರು ನಮ್ಮ ಜಿಡಿಪಿಯ 1%. ಆದುದರಿಂದ ವಿತ್ತೀಯ ಕೊರತೆ ಗುರಿಯಲ್ಲಿ 1% ಬದಲಾವಣೆ ಆಗಬಹುದು. ಅದು ಅಂತಹ ಹೊರೆಯಾಗುವುದಿಲ್ಲ. ಹೆಚ್ಚು ಉದ್ಯೋಗ ಸೃಷ್ಟಿಯಾದರೆ ಹೆಚ್ಚಿನ ಆಸ್ತಿ ಸೃಷ್ಟಿಗೆ ಇಂಬು ನೀಡುತ್ತದೆ. ಇಂತಹ ಸರ್ವಾಂಗೀಣ ಅಭಿವೃದ್ಧಿ ಯೋಜನೆಗಳ ಬಗ್ಗೆ ಸರ್ಕಾರ ಯೋಚಿಸಬೇಕು.
ಬೇಡಿಕೆ ವೃದ್ಧಿಯಾದರೆ ಬ್ಯಾಂಕಿಂಗ್ ಬಿಕ್ಕಟ್ಟು ಬಗೆಹರಿಯುತ್ತದೆ ಎಂದಲ್ಲ. ಅದಕ್ಕೆ ಪ್ರತ್ಯೇಕವಾದ ನಿಯಂತ್ರಣಗಳ ಅಗತ್ಯ ಇದೆ. ಆದರೆ ಒಟ್ಟಾರೆಯಾಗಿ ಆರ್ಥಿಕತೆಯ ವೃದ್ಧಿ ಬ್ಯಾಂಕಿಂಗ್ ವಲಯಕ್ಕೆ ಸ್ವಲ್ಪ ಪುಷ್ಟಿ ನೀಡಲಿದೆ.


