2016ರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರು, ಸಾಕ್ಷಿ ಹೇಳಲು ಹಾಜರಾಗದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದಕ್ಷಿಣ ಕನ್ನಡದ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿ ಆದೇಶಿಸಿದೆ.
ಸ್ಥಳೀಯ ವಿದ್ಯುತ್ ಸಮಸ್ಯೆ ಬಗ್ಗೆ ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷ ಸಾಯಿ ಗಿರಿಧರ್ ರೈ ಮತ್ತು ಅಂದಿನ ಇಂಧನ ಖಾತೆ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ನಡುವಿನ ಫೋನ್ ಸಂಭಾಷಣೆ ವೇಳೆ ಮಾತಿನ ಚಕಮಕಿ ನಡೆದಿತ್ತು.
ಮೆಸ್ಕಾಂ ಎಂಡಿ ಮೂಲಕ ಅಂದಿನ ಸುಳ್ಯ ಮೆಸ್ಕಾಂ ಪ್ರಭಾರ ಎಇಇ ಹರೀಶ್ ನಾೖಕ್ ಅವರಿಂದ ಸಾಯಿ ಗಿರಿಧರ್ ರೈ ವಿರುದ್ಧ ಡಿ.ಕೆ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಡಿ.ಕೆ ಶಿವಕುಮಾರ್ ನ್ಯಾಯಾಲಯಕ್ಕೆ ಹಾಕರಾಗಿಲ್ಲದ ಕಾರಣ ವಾರಂಟ್ ಜಾರಿ ಮಾಡಲಾಗಿದೆ. ಈ ಹಿಂದೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಹಾಜರಾಗದಿರುವ ಹಿನ್ನೆಲೆ ವಾರಂಟ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ವಿಧಾನಸಭಾ ಅಧಿವೇಶನ: ಕಾಂಗ್ರೆಸ್‌ನ ’ಎತ್ತಿನಗಾಡಿ ಚಲೋ’ ಪ್ರತಿಭಟನೆ ಚಿತ್ರಗಳಲ್ಲಿ…
ಸ್ಥಳೀಯ ವಿದ್ಯುತ್ ಸಮಸ್ಯೆಯ ಬಗ್ಗೆ ಸಾಯಿ ಗಿರಿಧರ ರೈ ಅವರು 2016ರ ಫೆಬ್ರವರಿ 28ರ ರಾತ್ರಿ ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗ್ಗೆ ದೂರು ನೀಡಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಅವಾಚ್ಯ ಶಬ್ದಗಳ ಬಳಕೆ ಕೂಡ ಆಗಿತ್ತು ಎನ್ನಲಾಗಿದೆ. ಕೋಪಗೊಂಡಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದೂರು ದಾಖಲಿಸಿದ್ದರು.
ಬಳಿಕ ಪೊಲೀಸರು ಸಾಯಿ ಗಿರಿಧರ್ ರೈ ಅವರನ್ನು ಬಂಧಿಸಿದ್ದರು. ಅದರಲ್ಲೂ ಪೊಲೀಸರು ಮನೆಯ ಛಾವಣಿ ಏರಿ ಹೆಂಚುಗಳನ್ನು ಒಡೆದು ಮನೆಯೊಳಗೆ ಇಳಿದು ಬಂಧಿಸಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಈ ಹಿಂದೆ ಮೂರು ಬಾರಿ ಸಮನ್ಸ್ ಜಾರಿ ಮಾಡಿ, ಒಂದು ಬಾರಿ ವಾರಂಟ್ ನೀಡಲಾಗಿತ್ತು. ಪ್ರಕರಣದಲ್ಲಿ ಸಾಕ್ಷಿಯಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಐಜಿಪಿ ಮತ್ತು ಡಿಐಜಿಗೆ ಕೂಡ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದಾರೆ. ಸೆಪ್ಟಂಬರ್ 29ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ: ಅಧಿಕಾರ ದುರ್ಬಳಕೆಯಿಂದ ಬಿಜೆಪಿಗೆ ಗೆಲುವು: ಡಿ.ಕೆ.ಶಿವಕುಮಾರ್ ಆರೋಪ


