ಕೊನೆಗೂ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಆಯುಕ್ತರ ನೇಮಕಾತಿಯಲ್ಲಿದ್ದ ತಪ್ಪುಗಳನ್ನು ಸುಧಾರಿಸಿದೆ.
ಸಂವಿಧಾನ ಜಾರಿಯಾಗಿ 83 ವರ್ಷಗಳ ನಂತರ, ಕೊನೆಗೂ ಸಾಂವಿಧಾನಿಕ ವ್ಯವಸ್ಥೆಯ ಒಂದು ಗಂಭೀರ ಅಸಂಬದ್ಧತೆಯನ್ನು ಕಳೆದ ವಾರ ಸರ್ವೋಚ್ಚ ನ್ಯಾಯಾಲಯವು ಸರಿಪಡಿಸಿದೆ. ಒಂದು ಐತಿಹಾಸಿಕ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಪೀಠವು ಸರ್ವಸಮ್ಮತಿಯಿಂದ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಬದಲಿಸಿದೆ. ಈಗ ಈ ನೇಮಕಾತಿಗಳು ಸರಕಾರದ ಕೈಯ್ಯಲ್ಲಿ ಮಾತ್ರ ಇರುವುದಿಲ್ಲ. ಈ ನೇಮಕಾತಿಯನ್ನು ಮೂರು ಸದಸ್ಯರ ಸಮಿತಿಯ ಶಿಫಾರಸ್ಸಿನ ಮೇಲೆ ಮಾಡಲಾಗುವುದು, ಅದರಲ್ಲಿ ಪ್ರಧಾನಮಂತ್ರಿ ಮತ್ತು ಲೋಕಸಭೆಯಲ್ಲಿನ ವಿರೋಧಪಕ್ಷದ ಮುಖಂಡರ ಹೊರತಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಇರಲಿದ್ದಾರೆ. ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಒಂದು ಶಾಶ್ವತ ಕಾನೂನಾತ್ಮಕ ವ್ಯವಸ್ಥೆ ಮಾಡುವವರೆಗೆ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಸಂವಿಧಾನ ರಚಿಸುವ ಸಮಯದಲ್ಲೇ ಈ ಅಸಂಬದ್ಧತೆಯ ಬಗ್ಗೆ ಸಂವಿಧಾನ ಸಭೆಯ ಸದಸ್ಯರಿಗೆ ಗೊತ್ತಾಗಿತ್ತು. ಸಂವಿಧಾನ ಸಭೆಯಲ್ಲಿ ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿರಬೇಕು ಹಾಗೂ ಅದನ್ನು ಸರಕಾರದ ಒತ್ತಡದಿಂದ ಮುಕ್ತವಾಗಿಟ್ಟರಬೇಕು ಎಂಬುದರ ಬಗ್ಗೆ ಸಹಮತವಿತ್ತು. ಆದರೆ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯುಕ್ತರ ನೇಮಕಾತಿಯ ಬಗ್ಗೆ ಒಮ್ಮತಕ್ಕೆ ಬರಲಾಗಲಿಲ್ಲ. ಕೊನೆಗೆ ಸಂವಿಧಾನದಲ್ಲಿ ಬರೆಯಲಾಗಿದ್ದೇನೆಂದರೆ, ಚುನಾವಣಾ ಆಯುಕ್ತರ ನೇಮಕಾತಿಯ ಸ್ವತಂತ್ರ ಪ್ರಕ್ರಿಯೆ ರಚಿಸಲು ಸಂಸತ್ತು ಒಂದು ಕಾನೂನನ್ನು ಸೃಷ್ಟಿಸಬೇಕೆಂದು.
ಇದನ್ನು ಸಂವಿಧಾನದ ಪರಿಚ್ಛೇದ 324(2)ನಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ: ’ಚುನಾವಣಾ ಆಯೋಗವು ಮುಖ್ಯ ಚುನಾವಣಾ ಕಮಿಷನರ್‌ನನ್ನೂ ಮತ್ತು ಬೇಕಿದ್ದಲ್ಲಿ, ರಾಷ್ಟ್ರಪತಿಯವರು ಕಾಲಕಾಲಕ್ಕೆ ನಿಗದಿಪಡಿಸಬಹುದಾದಷ್ಟು ಚುನಾವಣಾ ಕಮಿಷನರಗಳನ್ನು ಹೊಂದಿರತಕ್ಕದ್ದು, ಮುಖ್ಯ ಚುನಾವಣಾ ಕಮಿಷನರ್‌ಅನ್ನು ಮತ್ತು ಇತರ ಚುನಾವಣಾ ಕಮಿಷನರುಗಳ ನೇಮಕಾತಿಯನ್ನು ಆ ಬಗ್ಗೆ ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗೊಳಪಟ್ಟು ರಾಷ್ಟ್ರಪತಿಯವರು ಮಾಡತಕ್ಕದ್ದು.’
ಅಸಂಬದ್ಧತೆ ಹುಟ್ಟಿದ್ದು ಹೇಗೆಂದರೆ, ಈ ವಿಷಯದಲ್ಲಿ ಸಂಸತ್ತು ಆ ಕಾನೂನನ್ನು ರಚಿಸಲೇ ಇಲ್ಲ. ಇಂತಹ ಯಾವುದೇ ಸ್ವತಂತ್ರ ವ್ಯವಸ್ಥೆಯು ಇಲ್ಲದಿರುವದರಿಂದ ಸಂವಿಧಾನಕ್ಕೆ ಗೌರವ ನೀಡುವ ಅರ್ಥ ಏನಾಯಿತೆಂದರೆ, ಈ ನೇಮಕಾತಿಯನ್ನು ರಾಷ್ಟ್ರಪತಿ ಮಾಡುತ್ತಾರೆ ಎಂದು. ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಇದರ ಅರ್ಥ ಕೊನೆಗೆ ಏನಾಯಿತೆಂದರೆ, ಈ ತೀರ್ಮಾನ ಸರಕಾರ ಮಾಡುವುದು ಎಂದು. ಕಳೆದ 7 ದಶಕಗಳಿಂದ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಆಯುಕ್ತರ ನೇಮಕಾತಿಗಳು ಪ್ರಧಾನಮಂತ್ರಿಗಳ ಇಷ್ಟದ ಅನುಗುಣವಾಗಿ ಆಗುತ್ತಿತ್ತು. ವಿಪರ್ಯಾಸವೇನೆಂದರೆ, ಇದರ ನಡುವೆ ಚುನಾವಣಾ ಆಯೋಗಕ್ಕಿಂತ ಕಡಿಮೆ ಸಾಂವಿಧಾನಿಕ ಅಧಿಕಾರವುಳ್ಳ ಅನೇಕ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ಸುಧಾರಣೆ ಆಯಿತು. ಲೋಕಪಾಲ್ ಮತ್ತು ಸೂಚನಾ ಆಯೋಗದ ಕಾನೂನುಗಳ ನೇಮಕಾತಿಯ ವ್ಯವಸ್ಥೆಯಲ್ಲಿ ಸರಕಾರದ ಜೊತೆಗೆ ವಿರೋಧಪಕ್ಷಗಳ ನಾಯಕರು ಮತ್ತು ನ್ಯಾಯಾಂಗವನ್ನು ಜೋಡಿಸಲಾಯಿತು. ಇಲ್ಲಿಯ ತನಕ, ಸಿಬಿಐದ ನಿರ್ದೇಶಕ ಮತ್ತು ಪ್ರೆಸ್ ಕೌನ್ಸಿಲ್‌ನ ಅಧ್ಯಕ್ಷರ ನೇಮಕಾತಿಯಲ್ಲಿಯೂ ಸರಕಾರ ಮತ್ತು ವಿಪಕ್ಷ ಎರಡರ ಪಾತ್ರಗಳ ಸಮತೋಲನವನ್ನು ಸಾಧಿಸಲಾಗಿದೆ. ಆದರೆ ಚುನಾವಣಾ ಆಯೋಗದಂತಹ ನಿರ್ಣಾಯಕ ಸಂಸ್ಥೆಯಲ್ಲಿ ನೇಮಕಾತಿಯು ಆಡಳಿತದಲ್ಲಿರುವ ಪಕ್ಷಗಳ ಇಷ್ಟದಂತೆ ನಡೆಯುತ್ತಿತ್ತು.
ಆರಂಭದಲ್ಲಿ ಸರಕಾರವು ಈ ಸ್ಥಾನದ ಮತ್ತು ಲೋಕತಾಂತ್ರಿಕ ಗೌರವವನ್ನು ಗಮನದಲ್ಲಿಟ್ಟುಕೊಂಡು ನಿಷ್ಪಕ್ಷಪಾತ ವ್ಯಕ್ತಿಗಳ ನೇಮಕಾತಿ ಮಾಡಿದವು. ಆದರೆ ಆಗಾಗ ಸರಕಾರದ ಭಟ್ಟಂಗಿ ಅಧಿಕಾರಿಗಳು ಚುನಾವಣಾ ಆಯೋಗದಲ್ಲಿ ನೇಮಕಗೊಳ್ಳುವ ದೂರು ಕೇಳಿಬರುತ್ತಿತ್ತು. ಮೋದಿ ಸರಕಾರವು ಎಲ್ಲೋ ಸ್ವಲ್ಪ ಮಿಕ್ಕಿ ಉಳಿದಿದ್ದ ಗೌರವವನ್ನು ಬದಿಗೆ ಸರಿಸಿ ಅನೇಕ ಏಕಪಕ್ಷೀಯ ನೇಮಕಾತಿಗಳನ್ನು ಮಾಡಿತು, ಅದರಿಂದ ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಸಂದೇಹ ಹುಟ್ಟಿಕೊಂಡವು. ಕಳೆದ ಕೆಲವು ವರ್ಷಗಳಲ್ಲಿ ಸಾಂವಿಧಾನಿಕ ಸಂಸ್ಥೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಹುಟ್ಟಿಕೊಳ್ಳುವಂತೆ ಚುನಾವಣಾ ಆಯೋಗವೇ ಅನೇಕ ತೀರ್ಮಾನಗಳನ್ನು ಕೈಗೊಂಡಿತು. ಚುನಾವಣಾ ಆಯೋಗವು ಬಿಜೆಪಿಯ ಕಚೇರಿಯಾಗಿದೆ ಎಂಬ ಆರೋಪಗಳು ಸಾರ್ವಜನಿಕ ಚರ್ಚೆಗಳಲ್ಲಿ ಕೇಳಿಬಂದವು. ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆಗಳಿಗೆ ಜಗತ್ತಿನಲ್ಲೇ ಉದಾಹರಣೆಯಾಗಿದ್ದ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಂದು ನಿಸ್ಸಂದೇಹವಾಗಿ ಒಂದು ನಾಚಿಕೆಗೇಡಿನ ಅವಧಿಯಾಗಿತ್ತು.
ಇದನ್ನೂ ಓದಿ: ಚುನಾವಣಾ ಆಯೋಗದೊಂದಿಗೆ ₹ 2,000 ಕೋಟಿ ಡೀಲ್ ಮಾಡಿದ ಶಿಂಧೆ ಬಣ: ಸಂಜಯ್ ರಾವತ್ ಆರೋಪ
ಈ ಅಸಂಬದ್ಧತೆಗೆ ಪರಿಹಾರವಾಗಿ, ಪದೇಪದೇ ಚುನಾವಣಾ ಸುಧಾರಣೆಯ ವರದಿ ಮತ್ತು ಶಿಫಾರಸ್ಸುಗಳಲ್ಲಿ ಒತು ನೀಡಲಾಯಿತು. ಚುನಾವಣಾ ಆಯೋಗದ ಸಾಂವಿಧಾನಿಕ ಸ್ಥಾನಗಳಲ್ಲಿ ನೇಮಕಾತಿಯನ್ನು ಒಂದು ನಿಷ್ಪಕ್ಷಪಾತ ವ್ಯವಸ್ಥೆಯ ಮೂಲಕ ಮಾಡಬೇಕೆಂದು ಎಪ್ಪತ್ತರ ದಶಕದ ತಾರಕುಂಡೆ ಸಮಿತಿಯಿಂದ ಹಿಡಿದು ಭಾರತ ಸರಕಾರ ನೇಮಕ ಮಾಡಿದ ದಿನೇಶ ಗೋಸ್ವಾಮಿ ಸಮಿತಿ ಹಾಗೂ ಕಾನೂನು ಆಯೋಗದ ವರದಿಗಳಲ್ಲಿ ಅನೇಕ ಬಾರಿ ಶಿಫಾರಸ್ಸನ್ನು ಮಾಡಲಾಗಿತ್ತು. ಆದರೆ ಎಲ್ಲಾ ಆಡಳಿತ ಪಕ್ಷಗಳು ಹಾಗೂ ಸರಕಾರಗಳು ಕಣ್ಣುಮುಚ್ಚಿ ಕುಳಿತವು ಹಾಗೂ ಸಂವಿಧಾನದ ನಿರ್ದೇಶನವನ್ನು ಉಲ್ಲಂಘನೆ ಮಾಡುತ್ತಾ ಮುಂದುವರಿದವು.
ಕೊನೆಗೆ, ಲೋಕತಾಂತ್ರಿಕ ಸುಧಾರಣೆಗೆ ಕಟಿಬದ್ಧ ಸ್ವತಂತ್ರ ಸಂಘಟನೆಯಾದ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿತು ಹಾಗೂ ಅವರ ಪರವಾಗಿ ಪ್ರಸಿದ್ಧ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತರ ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದವು. ಸರಕಾರವು ತನ್ನ ವರಿಷ್ಠ ವಕೀಲರನ್ನು ಮುಂದೆ ನಿಲ್ಲಿಸಿ ನ್ಯಾಯಾಲಯವು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಒತ್ತಾಯಿಸಿತು. ಕೂದಲು ಸೀಳುವ ಕೆಲಸ ಮಾಡುತ್ತ ಸಂವಿಧಾನದ 324ರ ಅನುಚ್ಛೇದದಲ್ಲಿ ಸಂಸತ್ತಿಗೆ ಕಾನೂನು ರಚಿಸುವ ಅವಕಾಶ ಇಲ್ಲ ಎಂದು ಹೇಳಲಾಯಿತು. ಕಾನೂನು ರಚಿಸುವ ಕೆಲಸ ಸರ್ವೋಚ್ಚ ನ್ಯಾಯಾಲಯದ್ದು ಅಲ್ಲ ಎಂದೂ ವಾದ ಮಂಡಿಸಲಾಯಿತು. ಒಂದು ವೇಳೆ ಸಂಸತ್ತು ಕಾನೂನು ರಚಿಸದೇ ಇದ್ದರೆ ಈ ಕೊರತೆಯನ್ನು ಸರ್ವೋಚ್ಚ ನ್ಯಾಯಾಲಯ ತುಂಬಲು ಆಗುವುದಿಲ್ಲ ಎಂದು ಕೂಡ ಹೇಳಿದರು. ಒಂದು ವೇಳೆ ನ್ಯಾಯಾಲಯ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ, ನಂತರ ಏನೆಲ್ಲ ವಿಷಯಗಳು ಹೊರಬಿದ್ದಾವು ಎಂಬ ಬೆದರಿಕೆಯನ್ನೂ ನ್ಯಾಯಾಲಯದೆದುರಿಗೆ ಪ್ರದರ್ಶಿಸಲಾಯಿತು. ಸರಕಾರ ಇದರಿಂದ ಎಷ್ಟು ಹೆದರಿಕೊಂಡಿತ್ತೆಂದರೆ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗದಲ್ಲಿ ಸರಕಾರ ಒಂದು ವಿಚಿತ್ರವಾದ ನೇಮಕಾತಿ ಮಾಡಿತು. ಈ ಪ್ರಕರಣ ವಿಚಾರಣೆ ನಡೆಯುತ್ತಿರುವಾಗ ಚುನಾವಣಾ ಆಯೋಗದಲ್ಲಿ ಯಾವುದೇ ಹೊಸ ನೇಮಕಾತಿ ಮಾಡಬಾರದು ಎಂದು ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದಲ್ಲಿ ಮನವಿ ಮಾಡಿದ ಕೂಡಲೇ, ಮರುದಿನ ಸರಕಾರ, ರಾಷ್ಟ್ರಪತಿಯ ಕೈಯ್ಯಿಂದ ಅರುಣ ಗೋಯಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ಫರ್ಮಾನು ಜಾರಿ ಮಾಡಿಸಿತು. ಯಾವಾಗ ನ್ಯಾಯಾಲಯವು ಈ ನೇಮಕಾತಿಯ ಕಡತ ಕೊಡಿ ಎಂದು ಕೇಳಿತೋ, ಆಗ ತಿಳಿದಿದ್ದೇನೆಂದರೆ, 24 ಗಂಟೆಗಳ ಒಳಗೇ ಕಾನೂನು ಸಚಿವಾಲಯವು ನೇಮಕಾತಿಯ ಪ್ಯಾನಲ್ ರಚಿಸಿತು, ಪ್ರಧಾನಮಂತ್ರಿ ಅದರಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದರು, ಆ ವ್ಯಕ್ತಿ ಐಎಎಸ್‌ನಿಂದ ರಾಜೀನಾಮೆ ನೀಡಿದರು, ಆ ರಾಜೀನಾಮೆಯನ್ನು ಸ್ವೀಕರಿಸಲಾಯಿತು ಹಾಗೂ ಅವರ ಹೊಸ ನೇಮಕಾತಿಯ ಆದೇಶವನ್ನೂ ಜಾರಿಗೊಳಿಸಲಾಯಿತು. ಚುನಾವಣಾ ಆಯುಕ್ತರ ನೇಮಕಾತಿಯ ಪ್ರಕ್ರಿಯೆಯ ಎಲ್ಲಾ ಕೊರತೆಗಳು ಈ ಒಂದು ಉದಾಹರಣೆಯಲ್ಲಿ ಸ್ಪಷ್ಟಗೊಂಡವು.
ಜಸ್ಟಿಸ್ ಕೆ.ಎಂ ಜೋಸೆಫ್ ಅವರ ಅಧ್ಯಕ್ಷತೆಯ ಈ ಪೀಠವು (ನ್ಯಾಯಮೂರ್ತಿ ಕೆ.ಎಂ ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್) ಒಮ್ಮತದಿಂದ ಸರಕಾರ ಮಂಡಿಸಿದ ಎಲ್ಲಾ ಕುತರ್ಕಗಳನ್ನು ತಳ್ಳಿಹಾಕಿತು. 378 ಪುಟಗಳ ಎರಡು ಏಕರೂಪದ ತೀರ್ಪುಗಳಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವು ಸಂವಿಧಾನ ನಡಾವಳಿ ಸಭೆಯ ಚರ್ಚೆ, ಸಂವಿಧಾನದ ಶಬ್ದಾವಳಿ ಹಾಗೂ ಇದಕ್ಕೆ ಸಂಬಂಧಿಸಿದ ಸರ್ವೋಚ್ಚ ನ್ಯಾಯಾಲಯದ ಪ್ರತಿಯೊಂದು ಹಳೆಯ ತೀರ್ಪುಗಳನ್ನು ವಿವರವಾಗಿ ಚರ್ಚಿಸಿ ಎಲ್ಲಾ ಸಂದೇಹಗಳನ್ನು ನಿವಾರಿಸಲಾಗಿದೆ. 73 ವರ್ಷಗಳ ನಂತರ ಸಂವಿಧಾನ ಸಭೆಯ ಅಭಿಪ್ರಾಯವನ್ನು ಗೌರವಿಸುತ್ತ ಸ್ಪಷ್ಟಪಡಿಸಿದ್ದೇನೆಂದರೆ, ಚುನಾವಣಾ ಆಯೋಗದಂತಹ ಮಹತ್ವಪೂರ್ಣ ಸಾಂವಿಧಾನಿಕ ಸಂಸ್ಥೆಗೆ ನೇಮಕಾತಿಯನ್ನು ಸರಕಾರದ ಬೆರಳ ತುದಿಯ ಮೇರೆಗೆ ನಡೆಸುವುದು ಸಂವಿಧಾನದ ಆತ್ಮ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಉಲ್ಲಂಘನೆಯೆಂದು.
ಪ್ರಜಾಪ್ರಭುತ್ವಕ್ಕೆ ಅಪಾಯಗಳು ಸನ್ನಿಹಿತವಾಗುತ್ತಿರುವ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅಂಧಕಾರದಲ್ಲಿ ಒಂದು ಬೆಳಕಿನ ಕಿರಣವನ್ನು ತಂದಂತಿದೆ. ಈಗ ಸಂಸತ್ತಿನಲ್ಲಿ ತರಾತುರಿಯಲ್ಲಿ ಯಾವುದೋ ಒಂದು ಕಾನೂನು ತಂದು ಈ ತೀರ್ಪಿನ ಪರಿಣಾಮ ಇಲ್ಲವಾಗುವಂತೆ ಮಾಡುವ ಬದಲಿಗೆ ಸರಕಾರವು ಈ ತೀರ್ಪಿನ ಭಾವನೆಯನ್ನು ಗೌರವಿಸುತ್ತದೆ ಎಂದು ನಿರೀಕ್ಷೆ ಮಾಡಬೇಕಿದೆ. ಹಾಗೂ ಈ ತೀರ್ಪಿನಲ್ಲಿ ಹೇಳಿರುವಂತೆ ಆಯೋಗದ ನಿಷ್ಪಕ್ಷಪಾತದ ಅನಿವಾರ್ಯಕ್ಕೆ ಸಂಬಂಧಿಸಿದ ಟಿಪ್ಪಣಿಗಳಿಂದ ಚುನಾವಣಾ ಆಯೋಗ ಸ್ವತಃ ಪಾಠ ಕಲಿತು ತನ್ನ ಸಾಂವಿಧಾನಿಕ ಗರಿಮೆಯ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂತಲೂ ಆಶಿಸಬೇಕಿದೆ.
ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


