ಪ್ರವೀಣ್ ಕೊಲೆ ನಡೆದು ಒಂದು ದಿನ ಮುಗಿಯುವುದರ ಒಳಗಾಗಿ ಮಂಗಳೂರು ಹೊರ ವಲಯದ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ದಾಳಿ ಮಾಡಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸುವ ಮುಂಚೆಯೆ ಕೆಲವು ಬಿಜೆಪಿ ಬೆಂಬಲಿತ ಪೇಜ್‌ಗಳು ಮತ್ತು ಬಿಜೆಪಿ ಬೆಂಬಲಿಗರು ಫಾಝಿಲ್ ಕೊಲೆ ಸುನ್ನಿ-ಷಿಯಾ ಪ್ರೇಮ ಪ್ರಕರಣ ಕೊಲೆ ಎಂದು ತೀರ್ಪು ನೀಡಿ ದುರುದ್ದೇಶದಿಂದ ಹರಿಬಿಡಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಲವ್ ವಿಷಯದಲ್ಲಿ ಸುನ್ನಿ ಮುಸಲ್ಮಾನ ಸಮುದಾಯದ ತಂಡ ಮತ್ತು ಶಿಯಾ ಮುಸಲ್ಮಾನ ಸಮುದಾಯದ ತಂಡದ ನಡುವೆ ಸುರತ್ಕಲ್‌ನಲ್ಲಿ ಮಾರಾಮಾರಿ. ಮೇಲ್ಜಾತಿ ಸುನ್ನಿ ಮುಸಲ್ಮಾನರ ಯುವತಿಯನ್ನು ಪ್ರೀತಿಸಿದ ಕೆಳಜಾತಿಯ ಷಿಯಾ ಮುಸಲ್ಮಾನ ಯುವಕನ ಮೇಲೆ ತಲವಾರು ದಾಳಿ ನಡೆಸಿ ಕೊಂದ ಸುನ್ನಿ ಮುಸಲ್ಮಾನರು. ಯುವಕನ ಸ್ಥಿತಿ ಗಂಭೀರ” ಎಂಬ ಸಂದೇಶವನ್ನು ಬಿಜೆಪಿ ಬೆಂಬಲಿಗರು ಹರಿಯಬಿಟ್ಟಿದ್ದರು.
ಕೊಲೆಯಾದ ಕೂಡಲೇ ಫೇಸ್‌ಬುಕ್‌ನಲ್ಲಿ ತಪ್ಪು ಸಂದೇಶ ಹರಿಯ ಬಿಟ್ಟ ಬಿಜೆಪಿ ಬೆಂಬಲಿಗರ ಕೆಲವು ಪೋಸ್ಟ್
ಕನ್ನಡದ ಮಾಧ್ಯಮಗಳು ಕೂಡಾ ಬಿಜೆಪಿ ಬೆಂಬಲಿಗರ ಸಂದೇಶದಂತೆ ಪ್ರೇಮ ಪ್ರಕರಣದಿಂದಾದ ಕೊಲೆ ಎಂದೆ ವರದಿ ಮಾಡಿದ್ದವು.
ಇದನ್ನೂ ಓದಿ: ಸುರತ್ಕಲ್ ಫಾಝಿಲ್ ಹತ್ಯೆ: ಸುನ್ನಿ-ಶಿಯಾ ಕತೆ ಕಟ್ಟಿ ತನಿಖೆಯ ದಾರಿ ತಪ್ಪಿಸುತ್ತಿರುವ ಬಿಜೆಪಿ ಬೆಂಬಲಿಗರು
ಯಾವುದೇ ಅಧಿಕೃತವಲ್ಲದ ಬಿಜೆಪಿ ಬೆಂಬಲಿಗರು ಹರಿಬಿಟ್ಟ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಮಂಗಳೂರು ನಗರ ಕಮಿಷನರ್ ಶಶಿಕುಮಾರ್ ಅವರು ಕೂಡಾ ತಪ್ಪು ಸಂದೇಶ ಹರಿಬಿಡದಂತೆ ಹಾಗೂ ಕೊಲೆಗೆ ಕಾರಣ ಏನು ಎಂಬ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ತಿಳಿಸಿದ್ದರು. ಮಾಧ್ಯಮಗಳು ಹಾಗೂ ಸಾರ್ವಜನಿಕರು ವದಂತಿ ಹರಡಬೇಡಿ ಎಂದು ಕಿಡಿ ಕಾರಿದ್ದರು.
ಈ ನಡುವೆ ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಮೊಯಿದಿನ್ ಬಾವ ಅವರು, ‘‘ಇದು ಪ್ರೇಮ ಪ್ರಕರಣದ ಕಾರಣಕ್ಕೆ ನಡೆದ ಕೊಲೆ” ಎಂದು ಹೇಳಿದ್ದಾಗಿ ಕನ್ನಡ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಬಗ್ಗೆ ಮತ್ತೇ ಸ್ಪಷ್ಟನೆ ನೀಡಿದ್ದ ಮೊಯಿದಿನ್ ಬಾವ ಅವರು, “ನಾನು ಈ ರೀತಿ ಹೇಳಿಕೆ ನೀಡಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನನ್ನ ಹೇಳಿಕೆ ತಿರುಚಿರುವ ಸುವರ್ಣ ನ್ಯೂಸ್ ವಿರುದ್ಧ ಪ್ರಕರಣ ದಾಖಲಿಸುತ್ತೇನೆ” ಎಂದು ಹೇಳಿದ್ದರು.
ಅದಾಗಿಯೂ ದೇಶದ ಪ್ರಮುಖ ಇಂಗ್ಲಿಷ್ ಪತ್ರಿಕೆಯಾಗಿರುವ ಡೆಕ್ಕನ್ ಹೆರಾಲ್ಡ್ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ, “ಶಿಯಾ ಸಮುದಾಯದ ಹುಡುಗಿಯನ್ನು ಪ್ರೀತಿಸುತ್ತಿದ್ದ ಕಾರಣ ಫಾಝಿಲ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೊಹಮ್ಮದ್ ಫಾಝಿಲ್ ಅವರು ಸುನ್ನಿ ಮುಸ್ಲಿಂ ಎಂದು ಪೊಲೀಸ್ ಮೂಲಗಳು ತಿಳಿಸಿವೆ” ಎಂದು ವರದಿ ಮಾಡಿದೆ.

ಡೆಕ್ಕನ್ ಹೆರಾಲ್ಡ್‌ನ ಈ ವರದಿಯನ್ನು ಉಲ್ಲೇಖಿಸಿ ಭಾರತ ಮಟ್ಟದಲ್ಲಿ ಬಿಜೆಪಿಯ ಪರವಾಗಿ ಪ್ರೊಪಗಾಂಡ ಹರಡುವ ಒಪಿಂಡಿಯಾ ಎಂಬ ವೆಬ್‌ಸೈಟ್, “ಸುನ್ನಿ ಫಾಜಿಲ್ ಶಿಯಾ ಹುಡುಗಿಯನ್ನು ಪ್ರೀತಿಸುತ್ತಿರುವುದೇ ಹತ್ಯೆಗೆ ಕಾರಣ ಎಂದು ವರದಿಗಳು ಸೂಚಿಸುತ್ತವೆ” ಎಂಬ ಹೆಡ್‌ಲೈನ್‌ನೊಂದಿಗೆ ವರದಿ ಮಾಡಿದೆ.

ವಾಸ್ತವದಲ್ಲಿ ಕೊಲೆಯಾದ ಫಾಝಿಲ್ ಆದರೆ ಸುನ್ನಿ ಮುಸ್ಲಿಂ ಆಗಿದ್ದು, ಬಿಜೆಪಿ ಬೆಂಬಲಿಗರು ಹೇಳುವಂತೆ ಶಿಯಾ ಪಂಥವನ್ನು ಅನುಸರಿಸುವ ಯುವಕನಲ್ಲ. ಅವರ ಅಂತ್ಯ ಸಂಸ್ಕಾರವನ್ನು ಸುರತ್ಕಲ್‌ನ ಮಂಗಳಪೇಟೆಯ ಮುಹಿಯದ್ದೀನ್ ಮಸೀದಿಯಲ್ಲಿ ಮಾಡಲಾಗಿದೆ. ಈ ಮಸೀದಿ ಸುನ್ನಿ ಮಸೀದಿಯಾಗಿದೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ, ಗೃಹಸಚಿವರನ್ನು ಕೊಲ್ಲಿ: ಕಾಳಿ ಸ್ವಾಮೀಜಿ ಪ್ರಚೋದನೆ
ಫಾಝಿಲ್ ಅವರು ಸುನ್ನಿ ಪಂಥವನ್ನು ಅನುಸರಿಸುತ್ತಿದ್ದರು. ಅಷ್ಟಕ್ಕೂ ಸುರತ್ಕಲ್ ಆಸುಪಾಸಿನಲ್ಲಿ ಶಿಯಾ ಪಂಥದ ಜನರು ಕೂಡಾ ಇಲ್ಲ ಎಂದು ಸ್ಥಳೀಯರು ಉಲ್ಲೇಖಿಸುತ್ತಾರೆ. ಹೀಗಾಗಿ ಬಿಜೆಪಿ ಬೆಂಬಲಿಗರು ಸುನ್ನಿ ಶಿಯಾ ಕಟ್ಟುಕತೆಯನ್ನು ತನಿಖೆಯ ದಾರಿ ತಪ್ಪಿಸಲು ಬೇಕಾಗಿ ದುರುದ್ದೇಶ ಪೂರ್ವಕವಾಗಿ ಹರಿಯ ಬಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಸುನ್ನಿ-ಶಿಯಾ ಪ್ರೇಮ ವಿವಾದ’’ ಎಂಬುವುದು ಬಲಪಂಥೀಯರು ಕಟ್ಟಿದ ಅಪ್ಪಟ ಕಟ್ಟುಕತೆ ಎಂದು ಬ್ಯಾರಿ ಸಮುದಾಯದ ಸಂಸ್ಕೃತಿ ಚಿಂತಕ, ಬರಹಗಾರ ಇಸ್ಮತ್ ಪಜೀರ್ ಅವರು ಆರೋಪಿಸುತ್ತಾರೆ. “ವಾಸ್ತವದಲ್ಲಿ ಕರಾವಳಿಯಲ್ಲಿ ಶಿಯಾ ಸಮುದಾಯ ತೀರಾ ಇಲ್ಲವೆ ಇಲ್ಲ ಎನ್ನುವಷ್ಟು ಕಡಿಮೆ, ಇದ್ದರೂ ಒಂದಷ್ಟು ಬೆರಳೆಣಿಕೆಯ ಆಗರ್ಭ ಶ್ರೀಮಂತರು ವ್ಯಾಪರಕ್ಕೆ ಅಷ್ಟೆ ಬರುತ್ತಾರೆ. ಅವರು ಇಲ್ಲಿನ ಬ್ಯಾರಿ ಸಮುದಾಯ(ಸ್ಥಳೀಯ ಮುಸ್ಲಿಮರು)ದೊಂದಿಗೆ ಸಾಮಾಜಿಕವಾಗಿ ಬೆರೆಯುವುದೆ ಇಲ್ಲ. ಅವರಿಗೆ ಬ್ಯಾರಿ ಭಾಷೆಯು ಬರುವುದಿಲ್ಲ” ಎಂದು ಹೇಳಿದ್ದಾರೆ.
ಅದೂ ಅಲ್ಲದೆ ಶಿಯಾ-ಸುನ್ನಿ ಎಂಬುವುದು ಮುಸ್ಲಿಮರ ಒಳಗಿನ ಜಾತಿಗಳೂ ಅಲ್ಲ ಎಂದು ಇಸ್ಮತ್ ಹೇಳುತ್ತಾರೆ. ಸುನ್ನಿ-ಶಿಯಾ ಎಂಬುವುದು ತಾತ್ವಿಕ ಭಿನ್ನತೆಗಳ ಆಧಾರದಲ್ಲಿ ವಿಗಂಡನೆಗೊಂಡಿರುವ ಪಂಥಗಳಾಗಿವೆ. ಭಾರತದಲ್ಲಿ ಕಂಡು ಬರುವ ಜಾತಿ ಮಾದರಿಯಲ್ಲಿ ಅವುಗಳು ಇರುವುದಿಲ್ಲ. ಜಾತಿಗಳು ಜನ್ಮತಃ ಬರುತ್ತದೆ ಮತ್ತು ತಮ್ಮ ಹೆತ್ತವರ ಜಾತಿಯೆ ಮಕ್ಕಳ ಜಾತಿಯೂ ಆಗಿರುತ್ತದೆ. ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸುನ್ನಿ ಮುಸ್ಲಿಂ ಒಬ್ಬ ಯಾವುದೇ ಸಮಯಕ್ಕೆ ಶಿಯಾ ಆಗಬಹುದಾಗಿದೆ ಹಾಗೆಯೆ ಶಿಯಾ ಒಬ್ಬ ಸುನ್ನಿ ಕೂಡಾ ಆಗಬಹುದಾಗಿದೆ. ಅವುಗಳು ಕೇವಲ ಸೈದ್ಧಾಂತಿಕ ವಿಚಾರ ಧಾರೆಯಾಗಿದೆ.
ಇದನ್ನೂ ಓದಿ: ಪ್ರವೀಣ್ ಹತ್ಯೆ ಸಂಬಂಧ ಬಿಜೆಪಿ ಅಧ್ಯಕ್ಷ ಕಟೀಲ್‌ರನ್ನು ತನಿಖೆಗೊಳಪಡಿಸಬೇಕು – ಸಿದ್ದರಾಮಯ್ಯ ಆಗ್ರಹ
ಫಾಝಿಲ್ ಕೊಲೆಯು ಸುನ್ನಿ-ಶಿಯಾ ಪ್ರೇಮ ವಿಚಾರದ ಕಾರಣದಕ್ಕೆ ನಡೆದಿದೆ ಎಂಬ ವರದಿಯ ಬಗ್ಗೆ ಮಾತನಾಡಿದ ಇಸ್ಮತ್ ಪಜೀರ್, “Deccan herald ನಂತಹ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯೂ ಈ ಸಂಘಪರಿವಾರದ ಆಯಾಮವನ್ನು ಸುದ್ಧಿಮೂಲವಾಗಿ ಎತ್ತಿಕೊಂಡು ವರದಿ ಮಾಡಿ ಉನ್ನತ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆಂದು ಪ್ರಕಟಿಸಿದೆ ಎಂಬುವುದು ಬೇಸರದ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


