Homeಮುಖಪುಟಪ್ರವೀಣ್ ಹತ್ಯೆ ಸಂಬಂಧ ಬಿಜೆಪಿ ಅಧ್ಯಕ್ಷ ಕಟೀಲ್‌ರನ್ನು ತನಿಖೆಗೊಳಪಡಿಸಬೇಕು - ಸಿದ್ದರಾಮಯ್ಯ ಆಗ್ರಹ

ಪ್ರವೀಣ್ ಹತ್ಯೆ ಸಂಬಂಧ ಬಿಜೆಪಿ ಅಧ್ಯಕ್ಷ ಕಟೀಲ್‌ರನ್ನು ತನಿಖೆಗೊಳಪಡಿಸಬೇಕು – ಸಿದ್ದರಾಮಯ್ಯ ಆಗ್ರಹ

ನಳಿನ್ ಕುಮಾರ್ ಕಟೀಲ್ ಅವರಿಗೆ ಆತ್ಮೀಯನಾಗಿದ್ದ ಮೃತ ಪ್ರವೀಣ್ ನೆಟ್ಟಾರ್ ಒಂದಷ್ಟು ಕಾಲ ನಳಿನ್ ಅವರ ಕಾರಿಗೆ ಚಾಲಕನೂ ಆಗಿದ್ದರಂತೆ.

- Advertisement -
- Advertisement -

ದಕ್ಷಿಣ ಕನ್ನಡದ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಪೊಲೀಸರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರನ್ನು ತನಿಖೆಗೊಳಪಡಿಸಬೇಕು ಎಂದು ವಿರೋಧ ಪಕ್ಷದ ಮುಖಂಡ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಅವರಿಗೆ ಆತ್ಮೀಯನಾಗಿದ್ದ ಮೃತ ಪ್ರವೀಣ್ ನೆಟ್ಟಾರ್ ಒಂದಷ್ಟು ಕಾಲ ನಳಿನ್ ಅವರ ಕಾರಿಗೆ ಚಾಲಕನೂ ಆಗಿದ್ದರಂತೆ. ಇಷ್ಟೊಂದು ಆತ್ಮೀಯರಾಗಿದ್ದವರು ಈಗ ದೂರವಾಗಿರುವುದು ಯಾಕೆ? ಪೊಲೀಸರು ಅವರನ್ನೂ ವಿಚಾರಣೆಗೊಳಪಡಿಸಿದರೆ ದುಷ್ಕರ್ಮಿಗಳ ಪತ್ತೆಗೆ ನೆರವಾದೀತು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತೆ ಕಾಣುತ್ತಿದೆ. ಈ ಬೆಳವಣಿಗೆಗಳನ್ನು ಕೂಡಾ ಗಮನದಲ್ಲಿಟ್ಟುಕೊಂಡು ಪೊಲೀಸರು ತನಿಖೆ ನಡೆಸಿದರೆ ಸತ್ಯ ಬಯಲಾದೀತು.
ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಚಿವ ಸುನೀಲ್ ಕುಮಾರ್, ವಿ.ಎಚ್.ಪಿ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಸ್ಥಳೀಯ ಶಾಸಕರ ವಿರುದ್ಧ ಭುಗಿಲೆದ್ದ ಜನಾಕ್ರೋಶದ ಹಿನ್ನೆಲೆಯನ್ನೂ ಪೊಲೀಸರು ತನಿಖೆ ಮಾಡಬೇಕಾಗಿದೆ ಎಂದಿದ್ದಾರೆ.

ಹಿಂದುಗಳು ಸತ್ತರೆ ಮುಸ್ಲಿಮರ ಮೇಲೆ, ಮುಸ್ಲಿಮರು ಸತ್ತರೆ ಹಿಂದುಗಳ ಮೇಲೆ ಸಂಶಯ ಪಡುವುದು ಸಾಮಾನ್ಯವಾಗಿಬಿಟ್ಟಿದೆ. ಪೊಲೀಸ್ ತನಿಖೆಯೂ ಇದೇ ಜಾಡಿನಲ್ಲಿ ಸಾಗುತ್ತಿರುವುದರಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರಗೆ ಬರದೆ ಮುಚ್ಚಿಹೋಗುತ್ತಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಹತ್ಯೆ ನಡೆಸಿರುವ ದುಷ್ಕರ್ಮಿಗಳು ಯಾವುದೇ ಪಕ್ಷ, ಜಾತಿ, ಧರ್ಮ ಇಲ್ಲವೇ ಸಂಘಟನೆಗಳಿಗೆ ಸೇರಿದ್ದರೂ ಮುಲಾಜಿಲ್ಲದೆ ಅವರನ್ನು ಬಂಧಿಸಿ ಜೈಲಿಗಟ್ಟಬೇಕು. ಯಾವುದಾದರೂ ಸಂಘಟನೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರೆ ಅವುಗಳನ್ನು ನಿಷೇಧಿಸುವ ದಿಟ್ಟತನವನ್ನು ರಾಜ್ಯ ಸರ್ಕಾರ ತೋರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯಾಕೆ ಹಿಂದುಳಿದ ಜಾತಿಗಳ ಅದರಲ್ಲೂ ಮುಖ್ಯವಾಗಿ ಬಿಲ್ಲವ ಯುವಕರೇ ಕೋಮು ಘರ್ಷಣೆಯಲ್ಲಿ ಬಲಿಯಾಗುತ್ತಿದ್ದಾರೆ? ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳುತ್ತಿರುವ ಈ ಸಮುದಾಯದ ಯುವಕರು ಪ್ರಾಣವನ್ನೂ ಯಾಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಸಹ ಅವರು ಪ್ರಶ್ನಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಕೇವಲ ಬಿಜೆಪಿ ಕಾರ್ಯಕರ್ತರಿಗಷ್ಟೇ ಮುಖ್ಯಮಂತ್ರಿಗಳೋ? ಇಲ್ಲವೇ ರಾಜ್ಯದ ಸಮಸ್ತ ಆರುವರೆ ಕೋಟಿ ಜನತೆಗೋ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ದುಷ್ಕರ್ಮಿಗಳ ದಾಳಿಯಿಂದ ಬಲಿಯಾಗಿದ್ದ ಮಸೂದ್ ಮನೆಗೆ ಹೋಗದಿರಲು ಕಾರಣ ಏನೆಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೃತ ಬಿಜೆಪಿ ಕಾರ್ಯಕರ್ತರಿಗೆ ಪಕ್ಷ ಎಷ್ಟೇ ಮೊತ್ತದ ಪರಿಹಾರ ನೀಡಿದರೂ ಅದು ಅವರ ಸಂಘಟನೆಗೆ ಸಂಬಂಧಿಸಿದ್ದು, ಆದರೆ ವಿಚಾರಣಾ ಹಂತದಲ್ಲಿರುವ ಹತ್ಯೆ ಪ್ರಕರಣಗಳಲ್ಲಿ ಕುಟುಂಬಗಳಿಗೆ ಪರಿಹಾರ ನೀಡುವಾಗ ಭೇದಭಾವ ಆಗದಂತೆ ಎಚ್ಚರಿಕೆ ವಹಿಸುವುದು ಮುಖ್ಯಮಂತ್ರಿಗಳ ಕರ್ತವ್ಯವಾಗಿದೆ. ಆದರೆ ಅಸಹಾಯಕರಾಗಿರುವ ಬೊಮ್ಮಾಯಿಯವರು ಕುರ್ಚಿ ಉಳಿಸಿಕೊಳ್ಳಲಿಕ್ಕಾಗಿ ಆರ್.ಎಸ್.ಎಸ್ ಹೇಳಿದಂತೆ ಬೊಂಬೆ ರೀತಿ ಕುಣಿಯುತ್ತಿದ್ದಾರೆ. ಅವರ ಕುರ್ಚಿಯ ಉಳಿವು, ರಾಜ್ಯದ ಅಳಿವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೊಲೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬುಧವಾರ ಭೇಟಿ ನೀಡಿದ ವೇಳೆ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಬಿಜೆಪಿ ಕಾರ್ಯಕರ್ತರು ನಳಿನ್ ಕುಮಾರ್ ಅವರಿಗೆ ಧಿಕ್ಕಾರ ಕೂಗಿದರು. ‘ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಪಕ್ಷದ ಕಾರ್ಯಕರ್ತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಏಕೆ’ ಎಂದು ಪ್ರಶ್ನಿಸಿದ ಅವರು, ಪಕ್ಷದ ಅಮಾಯಕ ಕಾರ್ಯಕರ್ತನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರವೀಣ್ ನೆಟ್ಟಾರ್ ಅವರ ಅಂತಿಮ‌ ದರ್ಶನಕ್ಕಾಗಿ ಬೆಳ್ಳಾರೆಗೆ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಒಟ್ಟಿಗೆ ಬಂದರು. ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ನಳಿನ್‌ ಕುಮಾರ್ ಕಟೀಲ್ ಮತ್ತು ಬಿಜೆಪಿಗೆ ಧಿಕ್ಕಾರ ಕೂಗಿದ್ದಾರೆ. ಕಟೀಲ್ ಇದ್ದ ಕಾರನ್ನು ಉರುಳಿಸಲೂ ಕಾರ್ಯಕರ್ತರು ಯತ್ನಿಸಿದರು. ಟೈರ್​ಗಳಿಂದ ಗಾಳಿ ಹೊರಬಿಟ್ಟರು. ಪರಿಸ್ಥಿತಿ ಕೈಮೀರುವುದು ಮನಗಂಡ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪು ಚೆದುರಿಸಿದರು. ಪೊಲೀಸ್ ಭದ್ರತೆಯಲ್ಲಿಯೇ ನಳಿನ್ ಕುಮಾರ್ ಕಟೀಲ್ ಸ್ಥಳದಿಂದ ಹೊರನಡೆಯಬೇಕಾಗಿತ್ತು.

ಇದನ್ನೂ ಓದಿ; ಪ್ರವೀಣ್‌ ಕೊಲೆ ಪ್ರಕರಣ: ನಳಿನ್‌ ಕಾರು ಉರುಳಿಸಲು ಬಿಜೆಪಿ ಕಾರ್ಯಕರ್ತರ ಯತ್ನ; ಲಾಠಿ ಚಾರ್ಜ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ವಿರುದ್ಧದ ದೂರುಗಳ ಪರಿಶೀಲನೆ ಆರಂಭಿಸಿದ ಚುನಾವಣಾ ಆಯೋಗ

0
ಪ್ರತಿಪಕ್ಷಗಳು ಮತ್ತು ದೇಶದ ಜನರ ಒತ್ತಡದ ಹೆಚ್ಚಾದ ನಂತರ, 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಮಾಡಿದ ದ್ವೇಷ ಭಾಷಣದ...