Homeಕರ್ನಾಟಕಮಂಕಿಪಾಕ್ಸ್: ಆತಂಕದ ಅವಶ್ಯಕತೆ ಇಲ್ಲ; ತಿಳಿವಳಿಕೆ ಮತ್ತು ಮುನ್ನೆಚ್ಚರಿಕೆಯಿಂದ ನಿಯಂತ್ರಣ ಸಾಧ್ಯ

ಮಂಕಿಪಾಕ್ಸ್: ಆತಂಕದ ಅವಶ್ಯಕತೆ ಇಲ್ಲ; ತಿಳಿವಳಿಕೆ ಮತ್ತು ಮುನ್ನೆಚ್ಚರಿಕೆಯಿಂದ ನಿಯಂತ್ರಣ ಸಾಧ್ಯ

- Advertisement -
- Advertisement -

’ಕೊರೊನಾ ನಂತರ ಮಂಕಿಪಾಕ್ಸ್ ವೈರಸ್ ಆತಂಕ’; ’ಹುಷಾರಪ್ಪಾ, ಕೇರಳಕ್ಕೂ ಕಾಲಿಟ್ಟಿದೆ ಜಗತ್ತನ್ನೇ ಕಾಡಿದ ಮಂಕಿಪಾಕ್ಸ್’; ‘BREAKING-ದೇಶದಲ್ಲಿ ಮತ್ತೊಂದು ಮಂಕಿಪಾಕ್ಸ್ ಕೇಸ್ ದೃಢ, ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ’ ಇವು ಟಿವಿ ಸುದ್ದಿಸಂಸ್ಥೆಗಳು ಮಾಡಿರುವ ವರದಿಗಳ ಕೆಲವೇಕೆಲವು ತಲೆಬರಹಗಳು. ಇಂತಹ ಹೆಡ್‌ಲೈನ್‌ಗಳನ್ನು ಕೊರೊನಾ ಸಮಯದಲ್ಲಿ ಮಾಧ್ಯಮಗಳು ವರ್ಣರಂಜಿತವಾಗಿ ಬಳಸಿಕೊಂಡು ಜನರ ನಡುವೆ ಬಿತ್ತಿದ ತಿಳಿವಳಿಕೆರಹಿತ ಆತಂಕಕ್ಕೆ ಎಣೆಯಿಲ್ಲ. ಸರಿಯಾದ ಮಾಹಿತಿ ನೀಡದೆ ಭಾವಾದ್ವೇಗವನ್ನೇ ಬಂಡವಾಳ ಮಾಡಿಕೊಂಡ ಮಾಧ್ಯಮಗಳ ’ಭಯೋತ್ಪಾದನೆ’ಯಿಂದ ಜನರು ಪಟ್ಟ ಸಂಕಷ್ಟವನ್ನು ತಿರುಗಿ ನೋಡಿದರೆ ಅವುಗಳ ಕ್ರೌರ್ಯ ನಮಗೆ ತಿಳಿಯುತ್ತದೆ. ಇದೀಗ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ಮಂಕಿಪಾಕ್ಸ್ (ಮಂಗನ ಸಿಡುಬು) ಬಗ್ಗೆ ’ಭಯ ಉತ್ಪಾದಿಸಲು’ ಮಾಧ್ಯಮಗಳು ತಯಾರಾಗಿ ನಿಂತಿವೆ ಎಂದೆನಿಸುತ್ತಿದೆ.

ಜುಲೈ 25ರವರೆಗೆ ವಿಶ್ವದಲ್ಲಿ ಒಟ್ಟು 17 ಸಾವಿರ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಈವರೆಗೆ ನಾಲ್ಕು ಪ್ರಕರಣಗಳು ವರದಿಯಾಗಿವೆ. ಜುಲೈ 20ರಂದಿನ ವರದಿಯಂತೆ ಮಂಕಿಪಾಕ್ಸ್ ಸೋಂಕಿನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರು 5 ಜನರು. ಆದರೆ ತಜ್ಞರು ಇದು ಮಂಕಿಪಾಕ್ಸ್‌ನಿಂದಾಗಿಯೆ ಉಂಟಾದ ಸಾವು ’ಹೌದೊ-ಅಲ್ಲವೊ’ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಏನಿದು ಮಂಕಿಪಾಕ್ಸ್ ಸೋಂಕು?

ಮಂಕಿಪಾಕ್ಸ್ ಎಂಬುದು ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಉಂಟಾಗುವ ವೈರಲ್ ಝೂನೋಟಿಕ್ ಸೋಂಕಾಗಿದೆ. ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ, ಜೊತೆಗೆ ಇದು ವ್ಯಕ್ತಿಯಿಂದ ವ್ಯಕ್ತಿಗೂ ಹರಡುತ್ತದೆ. ಮಂಕಿಪಾಕ್ಸ್ 1960-70ರ ದಶಕಗಳಲ್ಲಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾ ದೇಶಗಳ ಹಳ್ಳಿ ಮತ್ತು ಕಾಡಿನ ಸಮೀಪ ವಾಸಿಸುವ ಜನರಲ್ಲಿ ಅಪರೂಪಕ್ಕೆ ವರದಿಯಾಗುತ್ತಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಇದು ನೈಜೀರಿಯಾದಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ವರದಿಯಾಗಿದ್ದವು. ಇದರ ನಂತರ ಸೋಂಕು ಸಿಂಗಾಪುರ, ಅಮೆರಿಕ, ಯುರೋಪ್ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲೂ ಕಂಡುಬಂದಿದೆ. ಭಾರತದಲ್ಲಿ ಪತ್ತೆಯಾಗಿರುವ ನಾಲ್ಕು ಪ್ರಕರಣಗಳಲ್ಲಿ ಮೂರು ಪ್ರಕರಣಗಳು ಮಧ್ಯಪ್ರಾಚ್ಯ ದೇಶದಿಂದ ಬಂದವರ ಮೂಲಕವಾಗಿದೆ.

ಮಂಕಿಪಾಕ್ಸ್‌ನ ಲಕ್ಷಣಗಳೇನು?

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಮಂಕಿಪಾಕ್ಸ್ ಹಲವಾರು ರೋಗಲಕ್ಷಣಗಳನ್ನು ಉಂಟುಮಾಡಬಹುದು. ಕೆಲವು ಜನರು ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದರೆ, ಇತರ ಕೆಲವರು ಹೆಚ್ಚು ಗಂಭೀರವಾದ ರೋಗಲಕ್ಷಣಗಳನ್ನು ಹೊಂದಿರಬಹುದಾಗಿದೆ. ಮಂಕಿಪಾಕ್ಸ್‌ನ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ತಲೆನೋವು, ಸ್ನಾಯು ನೋವು, ಬೆನ್ನು ನೋವು, ಕಡಿಮೆ ಶಕ್ತಿ ಮತ್ತು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು. ಇವುಗಳೊಂದಿಗೆ ’ಗುಳ್ಳೆಗಳು’ ಕೂಡಾ ಬರಬಹುದಾಗಿದೆ.

ಈ ಗುಳ್ಳೆಗಳು ಎರಡು ಮೂರು ವಾರಗಳವರೆಗೆ ಇರುತ್ತದೆ. ಇವು ಮುಖ, ಅಂಗೈಗಳು, ಕಣ್ಣುಗಳು, ಬಾಯಿ, ಗಂಟಲು, ತೊಡೆಸಂದು ಮತ್ತು ದೇಹದ ಜನನಾಂಗ ಮತ್ತು ಗುದದ್ವಾರದ ಬಳಿಯು ಕಂಡುಬರಬಹುದು. ಒಂದು ಗುಳ್ಳೆಯಿಂದ ಹಿಡಿದು ಸಾವಿರಾರು ಗುಳ್ಳೆಗಳು ಆಗುವ ಸಾಧ್ಯತೆ ಇರುತ್ತದೆ. ಇದು ಚಪ್ಪಟೆಯಾಗಿ ಪ್ರಾರಂಭವಾಗಿ ಮೊದಲಿಗೆ ದ್ರವದಿಂದ ತುಂಬುತ್ತವೆ. ನಂತರ ಇದು ಒಣಗುತ್ತಾ ಬಂದು ಅದರ ಪದರ ಬಿದ್ದು, ಹೊಸ ಚರ್ಮ ರೂಪುಗೊಳ್ಳುತ್ತದೆ.

ರೋಗಲಕ್ಷಣಗಳು ಸಾಮಾನ್ಯವಾಗಿ ಎರಡರಿಂದ ಮೂರು ವಾರಗಳವರೆಗೆ ಇರುತ್ತದೆ. ದೇಹದ ಉಷ್ಣಾಂಶ ಹೆಚ್ಚಿದ್ದಾಗ ಸಾಮಾನ್ಯವಾಗಿ ಜ್ವರದ ಔಷಧಿಗಳನ್ನು ತೆಗೆದುಕೊಂಡರೆ ಸಾಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಗುಳ್ಳೆ ಆದ ಎಲ್ಲಾ ಗಾಯಗಳು ಒಣಗಿ ಅವುಗಳ ಮೇಲ್ಪದರ ಬಿದ್ದು ಹೊಸ ಚರ್ಮ ರೂಪುಗೊಳ್ಳುವವರೆಗೆ ಅವರನ್ನು ಸೋಂಕಿತ ಎಂದು ಕರೆಯಲಾಗುತ್ತದೆ.

ಮಂಕಿಪಾಕ್ಸ್‌ನಿಂದ ಜನರು ಗಂಭೀರ ಅನಾರೋಗ್ಯಕ್ಕೆ ಒಳಗಾಗಬಹುದೇ ಅಥವಾ ಸಾಯಬಹುದೇ?

ಹೆಚ್ಚಿನ ಸಂದರ್ಭಗಳಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಕೆಲವೇ ವಾರಗಳಲ್ಲಿ ಅದಾಗಿಯೇ ಹೋಗುತ್ತವೆ. ಆದಾಗ್ಯೂ ಕೆಲವು ಜನರಲ್ಲಿ ಸೋಂಕು ಗಂಭೀರ ಅನಾರೋಗ್ಯಕ್ಕೆ ಕಾರಣವಾಗಿ ಸಾವು ಕೂಡಾ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ನವಜಾತ ಶಿಶುಗಳು, ಮಕ್ಕಳು ಮತ್ತು ರೋಗನಿರೋಧಕ ಕಡಿಮೆಯಿರುವ ಜನರಿಗೆ ಇದು ಗಂಭೀರ ಆರೋಗ್ಯ ಸಮಸ್ಯೆ ತರಬಹುದು ಮತ್ತು ಸಾವಿಗೆ ಕಾರಣವಾಗಬಹುದೆಂದು ಅದು ಹೇಳಿದೆ.

“ಇದು ಬಹಳ ಸೌಮ್ಯ ಕಾಯಿಲೆಯಾಗಿದೆ. ಈ ಕಾಯಿಲೆ ತೀವ್ರಗೊಳ್ಳುವುದು ತೀರಾ ಕಡಿಮೆಯಾಗಿದೆ. ಸೋಂಕು ತೀವ್ರಗೊಳ್ಳುವುದು ಅಂದರೆ ಮೆದುಳಿಗೆ ತೊಂದರೆ ಆಗುವುದು ಮತ್ತು ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುವುದು. ತುಂಬಾ ವಯಸ್ಸಾದ ವ್ಯಕ್ತಿಗಳಲ್ಲಿ, ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಮಾತ್ರ ಸೋಂಕು ಗಂಭೀರವಾಗುತ್ತದೆ, ಅದೂ ಕೂಡಾ ತೀರಾತೀರಾ ಕಡಿಮೆ. ಸಾವಿನ ದರ 0%-1% ಎಂದು ಹೇಳುತ್ತಾರೆ” ಎಂದು ಮಂಗಳೂರಿನ ಖ್ಯಾತ ವೈದ್ಯರಾದ ಶ್ರೀನಿವಾಸಕಕ್ಕಿಲ್ಲಾಯ ಅವರು ಹೇಳುತ್ತಾರೆ.

“ಸೋಂಕಿನಿಂದಾಗಿ ವೃದ್ಧರು ಸಾವಿಗೀಡಾಗುವವರ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಆದರೆ ಭಾರತದ ಬಗ್ಗೆ ಮಾತನಾಡುವುದಾದರೆ, 1980ಕ್ಕಿಂತ ಮುಂಚೆ ಹುಟ್ಟಿದ ಎಲ್ಲಾ ವ್ಯಕ್ತಿಗಳಿಗೆ ಈಗಾಗಲೇ ಸಿಡುಬಿನ ಲಸಿಕೆಯನ್ನು ಹಾಕಲಾಗಿದೆ. ಹೀಗಾಗಿ ಭಾರತದಲ್ಲಿ 43 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಗಳಿಗೆ ಮಂಕಿಪಾಕ್ಸ್ ಸೋಂಕುವುದೆ ಇಲ್ಲ ಅಥವಾ ಸೋಂಕು ತಗಲುವ ಪ್ರಮಾಣ ತೀರಾತೀರಾ ಕಡಿಮೆ. ಮಂಕಿಪಾಕ್ಸ್ ವೈರಸ್ ರೂಪಾಂತರಗೊಳ್ಳುವ ವೈರಸ್ ಅಲ್ಲ, ಜೊತೆಗೆ ಇದು ಚಿಕನ್ ಪಾಕ್ಸ್‌ಗಿಂತಲೂ ತೀರಾ ಸೌಮ್ಯ ಕಾಯಿಲೆಯಾಗಿದೆ” ಎಂದು ಕಕ್ಕಿಲ್ಲಾಯ ಅವರು ಹೇಳುತ್ತಾರೆ.

ಮಂಕಿಪಾಕ್ಸ್ ವ್ಯಕ್ತಿಯಿಂದ ವ್ಯಕ್ತಿಗೆ ಹೇಗೆ ಹರಡುತ್ತದೆ?

ಮಂಕಿಪಾಕ್ಸ್ ಗುಳ್ಳೆ ಹೊಂದಿರುವ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದ ಮೂಲಕ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ. ಮುಖಾಮುಖಿ, ಚರ್ಮದಿಂದ ಚರ್ಮ, ಬಾಯಿಯಿಂದ ಬಾಯಿ ಅಥವಾ ಬಾಯಿಯಿಂದ ಚರ್ಮದ ಸಂಪರ್ಕ, ಲೈಂಗಿಕ ಸಂಪರ್ಕದಿಂದ ಇದು ಹರಡುತ್ತದೆ. ಸಾಂಕ್ರಾಮಿಕ ವ್ಯಕ್ತಿ ಸ್ಪರ್ಶಿಸಿದ ಬಟ್ಟೆ, ಹಾಸಿಗೆ, ಟವೆಲ್, ವಸ್ತುಗಳನ್ನು ಸ್ಪರ್ಶಿಸಿದಾಗಲೂ ಬೇರೊಬ್ಬರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ.

ಗರ್ಭಿಣಿಯಾದವರಿಂದ ಭ್ರೂಣಕ್ಕೆ, ಜನನದ ನಂತರ ಚರ್ಮದಿಂದ ಚರ್ಮದ ಸಂಪರ್ಕದ ಮೂಲಕ ಅಥವಾ ಮಂಕಿಪಾಕ್ಸ್ ಹೊಂದಿರುವ ಪೋಷಕರಿಂದ ನಿಕಟ ಸಂಪರ್ಕದಲ್ಲಿರುವ ಶಿಶು ಅಥವಾ ಮಗುವಿಗೆ ಈ ವೈರಸ್ ಹರಡಬಹುದಾಗಿದೆ. ಆರೋಗ್ಯ ಕಾರ್ಯಕರ್ತರು ಮಂಕಿಪಾಕ್ಸ್ ರೋಗಿಗಳನ್ನು ನೋಡಿಕೊಳ್ಳುವಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು.

ಸೋಂಕಿತ ಪ್ರಾಣಿಯೊಂದಿಗೆ ದೈಹಿಕ ಸಂಪರ್ಕಕ್ಕೆ ಬಂದಾಗ ಮಂಕಿಪಾಕ್ಸ್ ಜನರಿಗೆ ಹರಡುತ್ತದೆ. ಕಾಡು ಪ್ರಾಣಿಗಳೊಂದಿಗೆ ಅಸುರಕ್ಷಿತ ಸಂಪರ್ಕವನ್ನು ತಪ್ಪಿಸುವ ಮೂಲಕ ಪ್ರಾಣಿಗಳಿಂದ ಮಂಕಿಪಾಕ್ಸ್ ಪಡೆಯುವ ಅಪಾಯವನ್ನು ಕಡಿಮೆ ಮಾಡಬಹುದು. ವಿಶೇಷವಾಗಿ ಅನಾರೋಗ್ಯದಿಂದ ಇದ್ದ ಅಥವಾ ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುವ ಮೊದಲು ಸಂಪೂರ್ಣವಾಗಿ ಬೇಯಿಸಬೇಕು.

ಯಾವುದೇ ರೋಗಲಕ್ಷಣಗಳಿಲ್ಲದ ಜನರು ರೋಗವನ್ನು ಹರಡಬಹುದೇ ಅಥವಾ ಇತರ ದೈಹಿಕ ದ್ರವಗಳ ಮೂಲಕ ಹರಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಎದೆಹಾಲು ಅಥವಾ ರಕ್ತದ ಮೂಲಕ ಹರಡುವ ಸಾಧ್ಯತೆ ಇದೆಯೆ ಎಂಬ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ.

ಮಂಕಿಪಾಕ್ಸ್‌ನಿಂದ ರಕ್ಷಣೆ ಹೇಗೆ?

ಮಂಕಿಪಾಕ್ಸ್ ಸೋಂಕಿದೆ ಎಂದು ಶಂಕೆ ಇರುವ ಅಥವಾ ದೃಢಪಡಿಸಿದ ಜನರೊಂದಿಗೆ ಹಾಗೂ ಸೋಂಕಿಗೆ ಒಳಗಾಗಿರಬಹುದಾದ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕವನ್ನು ಕಡಿಮೆಗೊಳಿಸುವ ಮೂಲಕ ಸೋಂಕನ್ನು ತಡೆಯಬಹುದಾಗಿದೆ. ಸೋಂಕಿಗೆ ಒಳಗಾಗಿರುವ ವ್ಯಕ್ತಿಯಿಂದ ಕಲುಷಿತಗೊಳ್ಳಬಹುದಾದ ಪರಿಸರವನ್ನು ಸ್ವಚ್ಛಗೊಳಿಸಬೇಕು ಮತ್ತು ಸೋಂಕುರಹಿತಗೊಳಿಸಬೇಕು.

ಮಂಕಿಪಾಕ್ಸ್ ಸೋಂಕಿದೆ ಎಂದು ಅನ್ನಿಸಿದರೆ ಅಥವಾ ಗೋಚರಿಸಿದರೆ ವೈದ್ಯಕೀಯ ಸಲಹೆಯನ್ನು ಪಡೆಯುವ ಮೂಲಕ ಮತ್ತು ಪರೀಕ್ಷೆಗೆ ಒಳಪಡುವವರೆಗೆ ಇತರರಿಂದ ಪ್ರತ್ಯೇಕವಾಗಿ ಇರಬೇಕಾಗಿದೆ. ಒಂದು ವೇಳೆ ಸೋಂಕು ದೃಢಪಟ್ಟರೆ ಸೋಂಕಿನಿಂದ ಉಂಟಾಗುವ ಎಲ್ಲಾ ಗಾಯಗಳು ಒಣಗಿ ಚರ್ಮದ ಹೊಸ ಪದರ ರೂಪುಗೊಳ್ಳುವವರೆಗೆ ಪ್ರತ್ಯೇಕವಾಗಿ ಇರಬೇಕಾಗಿದೆ. ಸೋಂಕಿನ ಸಮಯದಲ್ಲಿ ಮನೆಯಲ್ಲಿರಬೇಕೆ ಅಥವಾ ಆರೋಗ್ಯ ಸೌಲಭ್ಯದಲ್ಲಿ ಪ್ರತ್ಯೇಕವಾಗಿರಬೇಕೆ ಎಂಬುದರ ಕುರಿತು ಆರೋಗ್ಯ ಕಾರ್ಯಕರ್ತರಿಂದ ಸಲಹೆ ಪಡೆಯಬೇಕು. ಸೋಂಕಿನಿಂದ ಚೇತರಿಸಿಕೊಂಡ 12 ವಾರಗಳವರೆಗೆ ಲೈಂಗಿಕ ಸಂಪರ್ಕವನ್ನು ಹೊಂದುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಕಾಂಡೋಮ್‌ಗಳನ್ನು ಬಳಸಬೇಕಿದೆ.

ಮಂಕಿಪಾಕ್ಸ್ ವಿರುದ್ಧ ಲಸಿಕೆ ಇದೆಯೇ?

ಮಂಕಿಪಾಕ್ಸ್ ತಡೆಗಟ್ಟಲು ಲಸಿಕೆಯನ್ನು ಇತ್ತೀಚೆಗೆ ಅನುಮೋದಿಸಲಾಗಿದೆ. ಕೆಲವು ದೇಶಗಳು ಅಪಾಯದಲ್ಲಿರುವ ವ್ಯಕ್ತಿಗಳಿಗೆ ಲಸಿಕೆ ಪಡೆಯುವಂತೆ ಶಿಫಾರಸು ಮಾಡುತ್ತಿವೆ. “ಸಿಡುಬು ಕಾಯಿಲೆಗೆ ಬಳಸಿದ ಲಸಿಕಯನ್ನೇ ಮಂಕಿಪಾಕ್ಸ್‌ಗೆ ಸಹ ಉಪಯುಕ್ತವಾಗಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಅಪಾಯದಲ್ಲಿರುವ ಜನರು ಮಾತ್ರ ಲಸಿಕೆ ಪಡೆಯಬೇಕು ಎಂದು ಆರೋಗ್ಯ ಸಂಸ್ಥೆ ಹೇಳಿದ್ದು, ಸಾಮೂಹಿಕ ವ್ಯಾಕ್ಸಿನೇಷನ್ ನಡೆಸಲು ಈವರೆಗೆ ಶಿಫಾರಸು ಮಾಡಲಾಗಿಲ್ಲ.

ಶ್ರೀನಿವಾಸ ಕಕ್ಕಿಲ್ಲಾಯ

“ಯಾವುದೇ ಗಂಭೀರ ಪರಿಣಾಮ ಮಾಡದ ಕಾಯಿಲೆಗೆ ಲಸಿಕೆ ನೀಡುವುದನ್ನು ಯಾರೂ ಬೆಂಬಲಿಸಬಾರದು. ಲಸಿಕೆ ತಯಾರಿಸಲು ವ್ಯವಸ್ಥೆ ಇದೆ ಎಂಬ ಕಾರಣಕ್ಕೆ ರಾತ್ರೋರಾತ್ರಿ ಲಸಿಕೆಯನ್ನು ತಯಾರಿಸಿದರೆ ಅದನ್ನು ನಾವು ಪಡೆಯಬೇಕು ಎಂದೇನಿಲ್ಲ. ಪೂರೈಕೆಗೆ ಸರಿಯಾಗಿ ಬೇಡಿಕೆ ಸೃಷ್ಟಿಸುವುದಲ್ಲ, ಮೊದಲಿಗೆ ಲಸಿಕೆಗೆ ಬೇಡಿಕೆ ಮತ್ತು ಅಗತ್ಯ ಇದೆಯೆ ಎಂಬುವುದನ್ನು ಪರಿಶೀಲಿಸಬೇಕು. ಅದಕ್ಕಿಂತ ಜನರಿಗೆ ಇದರ ಬಗ್ಗೆ ಶಿಕ್ಷಣ ಕೊಡಲಿ, ಜನರ ನಡುವೆ ಜಾಗೃತಿ ಮೂಡಿಸಲಿ. ಯಾರಿಗೆ ಸೋಂಕಿನ ಲಕ್ಷಣ ಇದೆಯೊ ಅವರು ಕ್ವಾರಂಟೈನ್ ಆಗಲಿ” ಎಂದು ಶ್ರೀನಿವಾಸ ಕಕ್ಕಿಲ್ಲಾಯ ಅವರು ಹೇಳಿದ್ದಾರೆ.

ಕೊರೊನಾ ರೀತಿಯಲ್ಲಿ ಸರ್ಕಾರ ಅನಾಹುತ ಮಾಡಿಕೊಳ್ಳದೆ ಇರಲಿ!

ಸೋಂಕಿನ ನಿಯಂತ್ರಣದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಶ್ರೀನಿವಾಸ ಕಕ್ಕಿಲ್ಲಾಯ ಅವರು, “ಸರ್ಕಾರ ವೈಜ್ಞಾನಿಕವಾಗಿ ಯೋಚಿಸಿ ಹಾಗೂ ಸಮುದಾಯದ ಆರೋಗ್ಯದ ನೆಲೆಯಲ್ಲಿ ಸೋಂಕನ್ನು ನಿಯಂತ್ರಿಸಬೇಕೆ ಹೊರತು, ಬೊಬ್ಬೆ ಹಾಕುತ್ತಾ ಕೂತರೆ ಏನೂ ಪ್ರಯೋಜನವಿಲ್ಲ. ಸರ್ಕಾರವಾಗಲಿ – ಸರ್ಕಾರ ನೇಮಿಸಿರುವ ತಜ್ಞರಾಗಲೀ ಸಾಮಾನ್ಯಜ್ಞಾನ ಉಪಯೋಗಿಸಬೇಕಾಗಿದೆ” ಎಂದರು.

“ಸರ್ಕಾರದ ತಾಂತ್ರಿಕ ಸಲಹಾ ಸಮಿತಿಯಲ್ಲಿ ಇನ್ನೂ ಹೃದಯ ತಜ್ಞರೆ ಇದ್ದಾರೆ. ವೈರಲ್ ಸೋಂಕಿನ ತುರ್ತಿಗೆ ಹೃದಯತಜ್ಞರು ಯಾಕೆ? ಅವರನ್ನು ಬದಲಾಯಿಸಲಿ. ಎಷ್ಟು ಕಾಲದವರೆಗೂ ಸರ್ಕಾರ ಅವರೊಂದಿಗೆ ಸಲಹೆ ಪಡೆಯುತ್ತದೆ?. ಕೊರೊನಾ ಸಮಯದಲ್ಲಿ ಅವರೊಂದಿಗೆ ಸಲಹೆ ಪಡೆದು ಸರ್ಕಾರ ಅನಾಹುತ ಮಾಡಿಕೊಂಡಿತು. ಮತ್ತೆ ಇದಕ್ಕೂ ಅವರೊಂದಿಗೆಯೆ ಸಲಹೆ ಕೇಳುತ್ತೀರಾ? ನಾಡಿನಲ್ಲಿ ಸೋಂಕು ವಿಷಯ ತಜ್ಞರು ಯಾರೂ ಇಲ್ಲವೆ?” ಎಂದು ಕಕ್ಕಿಲ್ಲಾಯ ಹೇಳಿದರು.


ಇದನ್ನೂ ಓದಿ: ಭಾರತದಲ್ಲಿ 4 ಮಂಕಿಪಾಕ್ಸ್ ಪ್ರಕರಣಗಳು: ಕೋವಿಡ್ ರೀತಿ ವೇಗವಾಗಿ ಹರಡುವುದಿಲ್ಲ ಎಂದ ತಜ್ಞರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...