Homeಕರ್ನಾಟಕ’ಪೈಥಾಗೋರಸ್ ಪ್ರಮೇಯ ಬೇಡ ಭಾರತೀಯ ಮೂಲದ ವಿಜ್ಞಾನವನ್ನು ಬೋಧಿಸಿ’ ಎಂಬುದೆಷ್ಟು ಸರಿ?

’ಪೈಥಾಗೋರಸ್ ಪ್ರಮೇಯ ಬೇಡ ಭಾರತೀಯ ಮೂಲದ ವಿಜ್ಞಾನವನ್ನು ಬೋಧಿಸಿ’ ಎಂಬುದೆಷ್ಟು ಸರಿ?

- Advertisement -
- Advertisement -

ಕರ್ನಾಟಕದ ಶಿಕ್ಷಣ ನೀತಿ ಸಮಿತಿಯೊಂದರ ಪೊಸಿಷನ್ ಪೇಪರ್ (ಪಠ್ಯಕ್ರಮ ರಚನಾ ಚೌಕಟ್ಟನ್ನು ಮಂಡಿಸಲು ನೀಡುವ ಅಧ್ಯಯನ ವರದಿ) ಒಂದರಲ್ಲಿ ಪೈಥಾಗೋರಸ್ ಥಿಯರಿ ಮತ್ತು ಗುರುತ್ವಾಕರ್ಷಣೆಯ ಥಿಯರಿಗಳು ಅಥವಾ ಸೂತ್ರಗಳು ವೇದಕಾಲದ ಬೇರುಗಳನ್ನು ಹೊಂದಿದೆ ಎಂದು ಹೇಳುವುದಲ್ಲದೆ ಭಾರತ ಕೇಂದ್ರಿತ ಕಲಿಕೆಗೆ ಒತ್ತುನೀಡಬೇಕೆಂದು ಹೇಳಿದೆ. ಅದು ಗ್ರೀಕ್ ಮೂಲದ ಗಣಿತಶಾಸ್ತ್ರಜ್ಞರನ್ನು ಹೊರಹಾಕಿ, ’ಭಾರತೀಯ’ ಮೂಲದ ಗಣಿತಜ್ಞರನ್ನು ಪಠ್ಯಗಳಲ್ಲಿ ಸೇರಿಸಬೇಕು ಎಂದಿದೆ.

ಹೊಸ ಶಿಕ್ಷಣ ನೀತಿ (ಎನ್‌ಇಪಿ) ಕಾರ್ಯಪಡೆಯ ಅಧ್ಯಕ್ಷ ಮದನ್ ಗೋಪಾಲ್ ಅವರು ಪೈಥಾಗೋರಸ್ ಥೀರಮನ್ನು ವೈಜ್ಞಾನಿಕವಾಗಿ ಒಪ್ಪಲಾಗುವುದಿಲ್ಲ ಮತ್ತು ಆ ಕುರಿತು ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ. ’ಚರ್ಚೆ’ಯು ನಿಜವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ವೇದಕಾಲದ ಸಂಸ್ಕೃತಿಯನ್ನು ಕೇಂದ್ರವಾಗಿಸುವುದರಲ್ಲಿದೆ. ಈ ಪ್ರಮೇಯ ಭಾರತದಲ್ಲಿ ಬೆಳಕು ಕಂಡಿತು ಎಂದು ವಾದಿಸಲು ಅವಕಾಶವಿದೆ. ಅದೇ ರೀತಿ, ಅದನ್ನು ಚೀನಾ, ಈಜಿಪ್ಟ್, ಇರಾಕ್ ಅಥವಾ ಮೆಸೊಅಮೆರಿಕ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಯಿತು ಎಂದು ವಾದಿಸಲೂ ಅವಕಾಶವಿದೆ. ಪೈಥಾಗೋರಸ್ ಪ್ರಮೇಯದ ಕುರಿತ ಇತಿಹಾಸವು ಹಿಂದಿನ ಶಾಸ್ತ್ರಜ್ಞರ ಐರೋಪ್ಯ ಪಕ್ಷಪಾತದ ಮೇಲಿನ ಟೀಕೆಯ ಬಾಗಿಲನ್ನು ತೆರೆದಿದೆ. ಆದರೆ, ಈ ಹೊಗೆಪರದೆಯ ಮರೆಯಲ್ಲಿ ಅನೇಕ ಬಲಪಂಥೀಯ ಪ್ರತಿಪಾದಕರು ಈ ಚರ್ಚೆಯನ್ನು ತಿರುಚಿ ಪ್ರತಿಗಾಮಿ ಇತಿಹಾಸವೊಂದನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ.

ವಾಸ್ತವದಲ್ಲಿ ಪೈಥಾಗೋರಸನ ಥಿಯರಿಯ ಮಾನವಜನಾಂಗದ ತಿಳಿವಳಿಕೆಯು ಹಲವಾರು ಶತಮಾನಗಳಷ್ಟು ಹಿಂದಿನಿಂದ ಪ್ರಪಂಚದ ಹಲವಾರು ಭಾಗಗಳಲ್ಲಿ ಅನಾವರಣಗೊಳ್ಳುತ್ತಾ ಬಂದಿದೆ. ಈ ತಿಳಿವಳಿಕೆಗಳು ಹೇಗೆ ಒಂದಕ್ಕೊಂದು ಸಂಬಂಧ ಹೊಂದುತ್ತಾಬಂದಿವೆ ಎಂಬುದನ್ನು ನಾವು ಈಗ ಕೂಡಾ ಕಂಡುಕೊಳ್ಳುತ್ತಾ ಇದ್ದೇವೆ. ಪ್ರಾಚೀನ ಕಾಲದಲ್ಲೂ ಕಲಿಕೆಯಲ್ಲಿ ಸಾಕಷ್ಟು ಕೊಡುಕೊಳ್ಳುವಿಕೆ ಇತ್ತು.

ಒಂದು ಲಂಬಕೋನ ತ್ರಿಭುಜದ ವಿಕರ್ಣದ (ಲಂಭ ಕೋನದ ಎದುರು ಭುಜದ) ವರ್ಗವು (ಸ್ಕ್ವೇರ್ ಆಫ್ ಹೈಪಾಟೆನ್ಯೂಸ್) ಉಳಿದೆರಡು ಭುಜಗಳ ವರ್ಗದ ಒಟ್ಟು ಮೊತ್ತಕ್ಕೆ ಸಮನಾಗಿರುತ್ತದೆ ಎಂದು ಪೈಥಾಗೋರಸ್ ಪ್ರಮೇಯವು ಹೇಳುತ್ತದೆ. ಈ ಪ್ರಮೇಯ ಭೌತಶಾಸ್ತ್ರ, ಇಲೆಕ್ಟ್ರಾನಿಕ್ಸ್, ದೂರಸಂಪರ್ಕ ಸೇರಿದಂತೆ ವಿಜ್ಞಾನದ ಹಲವಾರು ಕ್ಷೇತ್ರಗಳಲ್ಲಿ ಅನ್ವಯವಾಗುವ ಕುರಿತು ಸಾಕ್ಷ್ಯಗಳು ವಿಶ್ವದಾಖಲೆ ಆಗುವಷ್ಟು ಇವೆ.

ಗಣಿತದಲ್ಲಿ ಒಂದು ಪ್ರಮೇಯವು ಹಲವು ವಿಧಗಳಲ್ಲಿ ಸಾಧಿತವಾದಂತ ಒಂದು ಹೇಳಿಕೆಯಾಗಿರುತ್ತದೆ. ಆದರೆ, ಒಂದು ಹೇಳಿಕೆಯನ್ನು ವೈಜ್ಞಾನಿಕವಾಗಿ ಗಮನಿಸಿದ್ದರೂ, ಇನ್ನೂ ಸಿದ್ಧಪಡಿಸಿ ತೋರಿಸಲು (ಪ್ರೂವ್ ಮಾಡಲು) ಸಾಧ್ಯವಾಗದೆ ಆಗಿರಬಹುದು. ಒಂದು ಹೇಳಿಕೆಯ ರೂಪದಲ್ಲಿ ಅಧಿಕೃತವಾಗಿ ದಾಖಲಿಸಲು ಸಾಧ್ಯವಾಗದಿದ್ದರೂ ಒಂದು ಪ್ರಕ್ರಿಯೆ ಅಥವಾ ವಿದ್ಯಮಾನವನ್ನು ಗಮನಿಸಲು ಸಾಧ್ಯ. ಉದಾಹರಣೆಗೆ ಗುರುತ್ವಾಕರ್ಷಣೆಯನ್ನು ಒಂದು ಥಿಯರಿಯಾಗಿ, ಒಂದು ಸೂತ್ರವಾಗಿ ಸಿದ್ಧಪಡಿಸದೆ ಕೂಡ ಅದನ್ನು ಗಮನಿಸಲು ಸಾಧ್ಯವಿದೆ. ಗುರುತ್ವಾಕರ್ಷಣ ಶಕ್ತಿ ಮತ್ತು ಸೂತ್ರವು ಗ್ರಹಗಳ ಚಲನೆಯನ್ನು ಹೇಗೆ ನಿರ್ದೇಶಿಸುತ್ತದೆ ಎಂದು ತಿಳಿದುಕೊಳ್ಳದೆಯೇ, ಜನರು ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಗುರುತಿಸಿ, ಅಂತದ್ದೇ ಸೂತ್ರವೊಂದನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ, ಒಂದು ಅನ್ವೇಷಣೆಯನ್ನು ತಮ್ಮದೇ ಎಂದು ಪ್ರತಿಪಾದಿಸುವ ವಿಷಯವು ತುಂಬಾ ಸಂಕೀರ್ಣವಾಗಿದೆ.

ಪೈಥಾಗೋರಸ್ ಪ್ರಮೇಯದ ಇತಿಹಾಸ

ಪೈಥಾಗೋರಸ್ ಪ್ರಮೇಯದ ಇತಿಹಾಸವನ್ನು ಪ್ರಾಚೀನ ಈಜಿಪ್ಟಿನ ಉಲ್ಲೇಖಗಳಲ್ಲಿ ನೋಡಬಹುದು. 3-4-5 ಅಥವಾ 5-12-13 ಮುಂತಾದ ವಿವಿಧ ಉದ್ದದ ಭುಜಗಳಿರುವ ತ್ರಿಕೋನಗಳನ್ನು ರಚಿಸುವಾಗ ಅತ್ಯಂತ ಉದ್ದವಾದ ಭುಜದ ಎದುರಿನ ಕೋನವು ಲಂಬಕೋನವಾಗಿರುತ್ತದೆ (90 ಡಿಗ್ರಿ) ಎಂದು ಗಮನಿಸಲಾಗಿತ್ತು. ಇದು ನಿರ್ಮಾಣ ಕಾರ್ಯದಲ್ಲಿ ಅತ್ಯಂತ ಉಪಯುಕ್ತ ಸಾಧನವಾಗಿತ್ತು. ಇದು ಲೆಕ್ಕಾಚಾರದ ಅತ್ಯಂತ ಕಚ್ಚಾ ವಿಧಾನದಲ್ಲಿಯೂ ಜನರಿಗೆ ಲಂಬಕೋನ ತ್ರಿಕೋನವನ್ನು ರಚಿಸಲು ಸಾಧ್ಯಮಾಡಿಕೊಡುತ್ತಿತ್ತು. ಈಜಿಪ್ಟ್, ಬ್ಯಾಬಿಲೋನ್ ಮತ್ತು ಮೆಸೊಪೊಟೇಮಿಯಾದ ಪ್ರಾಚೀನ ಗ್ರಂಥಗಳಲ್ಲಿ ವಿವಿಧ ಉದ್ದಗಳ ತ್ರಿಕೋನಗಳ ಪ್ರಮಾಣಗಳ ಕುರಿತು ಸಾಕಷ್ಟು ಹೆಚ್ಚಿನ ವಿವರಗಳನ್ನು ನೀಡಲಾಗಿದೆ.

ಭಾರತದಲ್ಲಿ ಇಂತಹ ಪ್ರಾಚೀನ ಉಲ್ಲೇಖವು ಕ್ರಿ.ಪೂ. 800ರ ಸುಲಭ ಸೂತ್ರಗಳಲ್ಲಿ ಬರುತ್ತದೆ. ಈ ಸೂತ್ರಗಳಲ್ಲಿ ಇರುವ ಕಲ್ಪನೆಯೆಂದರೆ, ಲಂಬಕೋನ ತ್ರಿಕೋನದ ಉದ್ದವಾದ ಭುಜದ ವರ್ಗವು ಉಳಿದೆರಡು ಭುಜಗಳ ವರ್ಗದ ಮೊತ್ತಕ್ಕೆ ಸಮನಾಗಿರುತ್ತದೆ ಎಂದಾಗಿದೆ.

ಪ್ರಾಚೀನ ಚೀನಾದಲ್ಲಿ ಕ್ರಿ.ಪೂ. 1000ದಲ್ಲಿ ಪೈಥಾಗೋರಸ್ ಪ್ರಮೇಯದುಲ್ಲಿ ಬರುವ ವಿದ್ಯಮಾನದ ಉಲ್ಲೇಖವಿದ್ದು ಅದಕ್ಕೆ ಕೆಲ ವಿವರಣೆಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಈ ವಿವರಣೆಗಳು ಕಾಲಕಳೆದಂತೆ ಹೆಚ್ಚು ಪರಿಷ್ಕರಣೆಗೊಂಡಿವೆ.

ಪ್ರಾಚೀನ ಗ್ರೀಸಿನ ಪೈಥಾಗೋರಸ್ ಈ ಪ್ರಮೇಯವನ್ನು ಸಾಧಿಸುವ ಸಾಕ್ಷ್ಯಾಧಾರಗಳನ್ನು ಹೊಂದಿದ್ದರೂ ನಿಗೂಢ ಮೌಖಿಕ ಶಿಕ್ಷಣ ಪರಂಪರೆಗೆ ಸೇರಿದ ಆತ ಇದನ್ನು ಬರೆದಿಡಲಿಲ್ಲ. ಇದರ ಮೊದಲ ಉಲ್ಲೇಖವು ಕ್ರಿ.ಪೂ. 300ರ ಸುಮಾರಿನಲ್ಲಿ ಗ್ರೀಕರಿಗೆ ಪರಿಚಯವಾದ ಯೂಕ್ಲಿಡ್‌ನ ಎಲಿಮೆಂಟ್ಸ್‌ನ ಮೂಲಭೂತ ತತ್ವಗಳಲ್ಲಿ ಇದೆ.

ಆದರೆ, ವಿಶಿಷ್ಟವಾದ ಭಾರತೀಯ ಅಥವ ವೇದ ಗಣಿತ ಇತ್ತೆಂದು ಹೇಳಲು ಸಾಧ್ಯವಿದೆಯೆ?

ವೇದಗಣಿತ ಎಂಬುದೊಂದು ಇತ್ತು ಎಂಬ ಪರಿಕಲ್ಪನೆಯೇ ತೀರಾ ಇತ್ತೀಚೆಗೆ, ಅಂದರೆ, 1960ರ ದಶಕದಲ್ಲಿ ಆರಂಭವಾಯಿತು. ವೇದದ ಬರಹಗಳು ವಿಶಿಷ್ಟವಾದ ಲೆಕ್ಕಾಚಾರದ ತಂತ್ರಗಳನ್ನು ಹೊಂದಿವೆ ಎಂಬ ಕಲ್ಪನೆಯೂ ತೀರಾ ಹೊಸದು ಮತ್ತು ಪ್ರಾಚೀನ ಪಠ್ಯಗಳ ಆಧಾರ ಈ ಪ್ರತಿಪಾದನೆಗಿಲ್ಲ. ಇದರ ಉದ್ದೇಶ ಗಣಿತದ ಜ್ಞಾನವನ್ನು ಹೆಚ್ಚಿಸುವ ಬದಲಾಗಿ ವೇದಗಳಿಗೆ ಹೆಚ್ಚಿನ ಮಹತ್ವ ಕಲ್ಪಿಸುವುದಾಗಿದೆ. ವೇದಗಣಿತ ಅಥವಾ ವೇದದಿಂದ ಹುಟ್ಟಿದ ಗಣಿತ ಎಂಬ ಕಲ್ಪನೆಯೇ ಗಣಿತದ ಹೊಸ ಸೂತ್ರಗಳನ್ನು ಕಂಡುಕೊಳ್ಳುವ ಬದಲಾಗಿ ವೇದಗಳು ಮತ್ತು ಅವು ಪ್ರತಿಪಾದಿಸುವ ಜಾತಿವ್ಯವಸ್ಥೆಯ ಬಗ್ಗೆ ಹೆಮ್ಮೆ ಹುಟ್ಟಿಸುವಂತದ್ದಾಗಿದೆ.

ಗಣಿತವನ್ನು ಸಂಪ್ರದಾಯದ ಅಡಿಗೆ ತರುವ ಪ್ರಯತ್ನಗಳು ಯಾವತ್ತೂ ಅಪಾಯಕಾರಿಯಾಗಿವೆ. ಐರೋಪ್ಯರು ತಮ್ಮ ಸಂಪ್ರದಾಯಗಳನ್ನು ಕಟ್ಟಿಕೊಳ್ಳಲು ಯತ್ನಿಸಿದಾಗ ಜಗತ್ತಿನಾದ್ಯಂತದಿಂದ ಅವರನ್ನು ಪ್ರಭಾವಿಸಿದ ವಿವಿಧ ಸಂಸ್ಕೃತಿಗಳ ತಂತ್ರಗಳು ಹಾಗೂ ಸಂಕೇತಗಳನ್ನು ಮರೆಮಾಚಲು ಸಾಧ್ಯವಾಗಲಿಲ್ಲ. ನಾಜಿ ಜರ್ಮನಿಯಲ್ಲಿ, ಗ್ರೀಕರ ದೃಶ್ಯ ಮೂಲದ ಗೋಚರಿಸುವ ರೇಖಾಗಣಿತ ಶೈಲಿಯನ್ನು ಸಾಂಕೇತಿಕ ಮತ್ತು ಅಮೂರ್ತವಾದ ಸೆಮೆಟಿಕ್ ಶೈಲಿಯ ಗಣಿತದಿಂದ ಪ್ರತ್ಯೇಕಿಸುವ ವಾಸ್ತವ ಪ್ರಯತ್ನ ಮಾಡಲಾಯಿತು. ಇದು ಜರ್ಮನಿಯಲ್ಲಿ ಗಣಿತಶಾಸ್ತ್ರದ ಸಂಶೋಧನೆಗೆ ಮಾರಕವಾಗಿ ಪರಿಣಮಿಸಿತು. ಗಣಿತವನ್ನು ವಿವಿಧ ಶೈಲಿಗಳ ಮೂಲಕ ಸಾಧಿಸುವ ಪ್ರಯತ್ನ ಅವರ ವ್ಯಾಪ್ತಿಯನ್ನು ವಿಸ್ತರಿಸಬಹುದಾದರೂ, ಅದನ್ನು ಸಾಂಸ್ಕೃತಿಕ ಮತ್ತು ನಾಗರಿಕತೆಯ ಪೆಟ್ಟಿಗೆಗಳಲ್ಲಿ ಬಂಧಿಸಿಡುವುದು ಯಾವತ್ತೂ ಫಲಪ್ರದಕಾರಿ ಚರ್ಚೆಗಳಿಗೆ ದಾರಿಮಾಡಿಕೊಟ್ಟಿಲ್ಲ. ಬದಲಾಗಿ ಅದು ಸಂಶೋಧನೆ ಮತ್ತು ಶಿಕ್ಷಣದಲ್ಲಿ ಸಾಂಸ್ಥಿಕವಾದ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ.

ಹಾಗಾದರೆ, ಶ್ರೇಯವು ಯಾರಿಗೆ ಸಿಗಬೇಕು?

ಒಂದು ಪ್ರಮೇಯ ಅಥವಾ ಸೂತ್ರದ ಶ್ರೇಯವನ್ನು ಯಾರಿಗೆ ಕೊಡಬೇಕು ಎಂಬ ಬಗ್ಗೆ ಬೇರೆಬೇರೆ ವಾದಗಳಿವೆ. ಮೂಲದಲ್ಲಿ ಸಾಮಾನ್ಯ ಪರಿಕಲ್ಪನೆಯನ್ನು ಮೊದಲ ಬಾರಿಗೆ ನಿರೂಪಿಸಿದವರಿಗೆ (ಪ್ರೂವ್) ಕೊಡಬೇಕೆಂದು ಕೆಲವರು ಹೇಳುತ್ತಾರೆ. ಕೆಲವರು ಒಂದು ವಿದ್ಯಮಾನವನ್ನು ಮೊದಲ ಬಾರಿಗೆ ಕಂಡುಹಿಡಿದವರಿಗೆ ಶ್ರೇಯ ಸಲ್ಲಬೇಕು ಎಂದು ಹೇಳುತ್ತಾರೆ. ಪೈಥಾಗೋರಸ್ ಥಿಯರಿಯ ಮೂಲ ತತ್ವಗಳ ಅರಿವು ಅನೇಕ ಸಮಾಜಗಳಿಗೆ ಇದ್ದವು ಮತ್ತು ಅದರ ಉಪಯೋಗ ಪಡೆಯುತ್ತಿದ್ದವು ಎಂದು ಸ್ಪಷ್ಟವಾಗಿದೆ.

ಈ ಪ್ರಮೇಯದ ಹೇಳಿಕೆಯ ಆಚೆಗೆ ನೋಡುವುದಾದರೆ, ಸಮುದ್ರಯಾನ, ಕೃಷಿ ಮತ್ತು ನಿರ್ಮಾಣದಂತ ಕಾರ್ಯಗಳಲ್ಲಿ ತೊಡಗಿದ್ದ ಅನೇಕ ಜನರು ಪೈಥಾಗೋರಸ್ ಪ್ರಮೇಯದಲ್ಲಿ ಹೇಳಲಾಗಿರುವ ವಿಷಯಗಳನ್ನು ರೇಖಾಗಣಿತದ ಅಡಿಗಲ್ಲಾಗಿ ಬಳಸುತ್ತಿದ್ದರು ಎಂದು ಹೇಳಬಹುದು. ಈ ಪ್ರಮೇಯವನ್ನು ಮತ್ತೆಮತ್ತೆ ಕಂಡುಕೊಂಡು ಮರುಬಳಸಿದ ಉದಾಹರಣೆಗಳನ್ನು ಕಾಣಬಹುದು. ಈ ಪರಿಕಲ್ಪನೆಗಳನ್ನು ಕಂಡುಹಿಡಿದ ಸಂಸ್ಕೃತಿಗಳು ಸಾಮುದಾಯಿಕ ಜ್ಞಾನವನ್ನು ಹೊಂದಿದ್ದವು ಮತ್ತು ಆ ಒಳನೋಟಗಳನ್ನು ಸೂತ್ರೀಕರಿಸಿ ರಕ್ಷಿಸುತ್ತಿದ್ದವು. ಆದರೆ ಈ ಒಳನೋಟ ಆಯಾ ಸಮಾಜದ ಎಲ್ಲ ಸದಸ್ಯರ ಒಟ್ಟು ಉತ್ಪನ್ನವಾಗಿದ್ದು, ಅವುಗಳನ್ನು ಬೇರೆಬೇರೆ ಸಮಯದಲ್ಲಿ ಮರುಅನ್ವೇಷಿಸಿರುವ ಸಾಧ್ಯತೆ ಇದೆ.

ಈ ಪ್ರಮೇಯವು ಭಾರತದ ಪರಂಪರೆಯ ಭಾಗವಾಗಿತ್ತೆಂದು ನಾವು ಹೆಮ್ಮೆ ಪಡಬಾರದೆ?

ಭಾರತೀಯ ಇತಿಹಾಸಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯು ತುಂಬಾ ಗೊಂದಲ ಮತ್ತು ಕಳವಳಕಾರಿ ಎಂದು ವಿಶ್ವದಾದ್ಯಂತದ ವಿಜ್ಞಾನದ ಇತಿಹಾಸಕಾರರು ಪ್ರತಿಕ್ರಿಯಿಸಿದ್ದಾರೆ. ಪ್ರತಿ ವೈಜ್ಞಾನಿಕ ತಿಳಿವಳಿಕೆಯನ್ನು ಭಾರತೀಯರೇ ಕಂಡುಹಿಡಿದರು ಎಂಬ ಭಾರತೀಯ ಇತಿಹಾಸದ ಕಾಲ್ಪನಿಕ ಹೆಮ್ಮೆ ಸಮಸ್ಯಾತ್ಮಕವಾದದ್ದು. ಇನ್ನೊಂದು ಸಾರಾಸಗಟಾದ ಅಜ್ಞಾನವೆಂದರೆ, ಭಾರತದಲ್ಲಿ ನಡೆದಿದ್ದ ಮಹಾನ್ ವೈಜ್ಞಾನಿಕ ಕೆಲಸಗಳ ಬಗ್ಗೆ ಸಂಪೂರ್ಣ ಅವಜ್ಞೆ. ಎರಡೂ ಜೊತೆಜೊತೆಗೇ ಸಾಗುತ್ತವೆ. ಯಾವುದೋ ಒಂದು ಪುರಾತನ ಕಾಲದಲ್ಲಿ ಮಾಡಿದ ಸಾಧನೆಯ ಬಗ್ಗೆ ಹೆಮ್ಮೆ ತಳೆಯುವುದು ಮತ್ತು ನಮ್ಮ ಕಾಲದಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ಆದ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಹೆಮ್ಮೆ ತಳೆಯುವುದು ಬಹುತೇಕ ಒಂದೇ ಅನಿಸಿದರೂ, ಹಿಂದೆಂದೋ ಆದ ಸಂಶೋಧನೆಗಳಿಗಿಂತ ಹೆಚ್ಚಾಗಿ ಇಂದಿನ ಕಾಲದ ಸಂಶೋಧನೆಗಳ ಜೊತೆಗೆ ನಾವು ಹೆಚ್ಚಿನ ಸಂಬಂಧ ಹೊಂದಿದ್ದೇವೆ.

ಗ್ರೀಕ್ ಗಣಿತವೇ ನಿಜವಾದ ಏಕೈಕ ಗಣಿತ ಪರಂಪರೆ ಎಂಬ ಐರೋಪ್ಯ ಕೇಂದ್ರಿತ ಕಲ್ಪನೆಗೆ ಸವಾಲೆಸೆಯುವುದು ಹೊಸ ಆತಂಕಗಳಿಗೆ ಎಡೆಮಾಡಿಕೊಡುತ್ತದೆ. ಪ್ರಪಂಚವು ಹಲವಾರು ಮಹಾನ್ ನಾಗರಿಕತೆಗಳಿಂದ ಕೂಡಿದೆ ಎಂದು ವಾದಿಸುವುದು ಮತ್ತು ಒಂದೊಂದು ನಾಗರಿಕತೆಗಳಿಗೆ ಶ್ರೇಯ ನೀಡುವುದು- ತಾವು ವಾಸಿಸುತ್ತಿದ್ದ ಸಮಾಜದಿಂದ ದೂರವಿದ್ದು ವೈಯು ಕ್ತಿಕವಾಗಿ ಸಾಧನೆ ಮಾಡಿದರೆಂಬ ರೀತಿಯಲ್ಲಿ ವ್ಯಕ್ತಿಗಳಿಗೆ ಶ್ರೇಯವನ್ನು ಅರ್ಪಿಸುವುದಕ್ಕೆ ಸಮ. ಜ್ಞಾನದ ಕುರಿತ ಇತ್ತೀಚಿನ ತಿಳಿವಳಿಕೆಗಳು- ಗಣಿತವೂ ಸೇರಿದಂತೆ ಜ್ಞಾನದ ಉತ್ಪಾದನೆಯಲ್ಲಿ ಸಮಾಜದ ಪ್ರತಿಯೊಬ್ಬ ಸದಸ್ಯನ ದೇಣಿಗೆ ಎಷ್ಟು ಮುಖ್ಯ ಎಂದು ತೋರಿಸುತ್ತವೆ. ಅಳತೆಯ ಮಾಪನಗಳಿಂದ ಹಿಡಿದು, ಶಾಲೆಗಳಿಗೆ, ವೈಜ್ಞಾನಿಕ ಸಂಶೋಧನಾ ಕೇಂದ್ರಗಳಿಗೆ ಹಣಕಾಸು ಬೆಂಬಲ ನೀಡುವ ತನಕ ಗಣಿತದ ವಿವೇಕ, ವಿವೇಚನೆಗಳು ಎಲ್ಲಾ ಮೂಲೆಗಳಿಂದ ಹರಿದುಬಂದಿರುತ್ತದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರಚನೆ ಪ್ರಕ್ರಿಯೆ; ಶಿಕ್ಷಣದ ಮೇಲಿನ ರಾಜ್ಯಗಳ ಅಧಿಕಾರವನ್ನು ಕಸಿಯುವ ಪ್ರಹಸನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...