ಮಂಗಳೂರು ತುಳುವರ ತಾಯ್ನಾಡಿನ ವಿಶಿಷ್ಟ ಬಹುಭಾಷಾ ಸಾಂಸ್ಕೃತಿಕ ಪ್ರದೇಶದ ಹೃದಯ! ನೇತ್ರಾವತಿ ನದಿ, ಗುರುಪುರ ನದಿ ಮತ್ತು ಅರಬ್ಬಿ ಸಮುದ್ರದಿಂದ ಸುತ್ತುವರಿದಿರುವ ಮಂಗಳೂರಿನ ಗರಿಷ್ಟ ನಗರ ಭಾಗಗಳನ್ನು ಒಳಗೊಂಡು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ರಚಿಸಲಾಗಿದೆ. ವೈವಿಧ್ಯಮಯ ಜನಸಂಖ್ಯಾ ನೋಟದ ಮಂಗಳೂರು ನಗರ ದಕ್ಷಿಣ ಮೆಟ್ರೋಪಾಲಿಟನ್ ಪ್ರದೇಶ. ವ್ಯಾಪಾರಿಗಳು, ಬ್ಯಾಂಕ್-ಖಾಸಗಿ ಕಂಪನಿ-ಸರಕಾರಿ ಕಚೇರಿ ನೌಕರರು ಮತ್ತು ಉತ್ತರ ಕರ್ನಾಟಕದಿಂದ ಹೊಟ್ಟೆಪಾಡಿಗೆ ಬಂದ ಕೂಲಿ ಕಾರ್ಮಿಕರು ಹಾಗು ಗುಜರಾತಿ, ಮರಾಠಿ ಮತ್ತಿತರ ಭಾಷಿಕ ಮಂದಿ ಮಂಗಳೂರು ಮಧ್ಯದಲ್ಲಿ ನೆಲೆಗೊಂಡಿದ್ದಾರೆ.
ಚರ್ಚ್ ದಾಳಿ, ಪಬ್ ದಾಳಿ ಮತ್ತು ಹೊಮ್ ಸ್ಟೇ ದಾಳಿಗಳು ಹಾಗೂ ಎನ್‌ಆರ್‌ಸಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆಗಿಳಿದಿದ್ದ ಮುಸ್ಲಿಮರ ಸಣ್ಣ ಗುಂಪಿನ ಮೇಲಿನ ಅಪ್ರಚೋದನಾತ್ಮಕ ಪೊಲೀಸ್ ಗೋಲಿಬಾರ್‌ಗೆ ಅಮಾಯಕರು ಬಲಿಯಾದಂಥ ಧರ್ಮೋನ್ಮಾದದ ಕೆಟ್ಟ ಕಾರಣಕ್ಕಾಗಿ ಜಾಗತಿಕ ಗಮನ ಸೆಳೆದು ಸುದ್ದಿಯಾಗಿರುವ ಮಂಗಳೂರು ಕೇಂದ್ರ ಕೇಸರಿ ಪಡೆಯ ಕರ್ಮ ಭೂಮಿಯೆಂಬಂತಾಗಿದೆ ಎನ್ನುವುದು ಸಾಮಾನ್ಯ ಅಭಿಪ್ರಾಯ. ಮಹಾನಗರ ಪಾಲಿಕೆಯ ಬಹುತೇಕ ವಾರ್ಡ್ ಸೇರಿಸಿ ರಚಿಸಲಾಗಿರುವ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮಕಾರಣದ ಮೈಲೇಜಿಗಾಗಿ ಯಾವಾಗ, ಯಾರಿಗೆ, ಎಲ್ಲಿ ಹಲ್ಲೆ-ಸುಲಿಗೆ ಆಗುತ್ತದೆಂದು ಹೇಳಲಾಗದೆಂಬ ಮಾತು ಕೇಳಿಬರುತ್ತದೆ.
ಅರ್ಥ ವ್ಯವಸ್ಥೆ
ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರ ಮಂಗಳೂರು ತುಳು ನಾಡಿಗರ ಬಾಯಲ್ಲಿ ಸದಾ ’ಕುಡ್ಲ’; ಕೊಂಕಣಿಗರು ಕೋಡಿಯಾಲ್, ಬ್ಯಾರಿಗಳು ಮೈಕಾಲ್ ಮತ್ತು ಮಲಯಾಳಿಗಳು ಮಂಗಳಪುರಂ ಎಂದು ಸಾಮುದಾಯಿಕವಾಗಿ ಕರೆದರೂ ಸಾಮಾನ್ಯವಾಗಿ ಗುರುತಿಸಲ್ಪಡುವುದು ಕುಡ್ಲ ಎಂದೇ. ಆಡಳಿತಾತ್ಮಕವಾಗಿ ಮತ್ತು ಸರಕಾರಿ ಕಡತ-ಅಧಿಕಾರಿಗಳ ಬಾಯಲ್ಲಿ ಮಾತ್ರ ’ಮಂಗಳೂರು’. ಹಲವು ಸ್ಥಳನಾಮ ಉಲ್ಲೇಖವಿರುವ ಮಂಗಳೂರಿಗೆ ಆ ನಾಮಕರಣವಾಗಲು ರಾಜ್ಯ ಪರಿತ್ಯಕ್ತ ರಾಜಕುಮಾರಿಯೊಬ್ಬರ ಹೆಸರೆ ಕಾರಣವೆಂಬ ಒಂದು ದಂತಕತೆಯಿದೆ. ಮಲಬಾರ್‌ನ ರಾಜಕುಮಾರಿ ಪರಿಮಳಾ ಅಥವಾ ಪ್ರೇಮಲಾದೇವಿ ವೈರಾಗ್ಯದಿಂದ ನಾಥಪಂಥ ಸೇರಿದ್ದರು. ನಾಥ ಸಂಪ್ರದಾಯ ಸಂಸ್ಥಾಪಕರಾದ ಮತ್ಸ್ಯೇಂದ್ರನಾಥರು ಶಿಷ್ಯೆಗೆ ಮಂಗಳಾದೇವಿಯೆಂದು ಹೆಸರಿಟ್ಟಿದ್ದರು. ಗುರು-ಶಿಷ್ಯೆ ಪರ್ಯಟನೆ ಹೊತ್ತಲ್ಲಿ ಮಂಗಳೂರಿಗೆ ಬಂದಿದ್ದರು. ಆಗ ಮಂಗಳಾದೇವಿ ಆರೋಗ್ಯ ಹದಗೆಟ್ಟು ಮಂಗಳೂರಿನ ಬೋಳಾರ್ ಎಂಬಲ್ಲಿ ನಿಧನರಾಗುತ್ತಾರೆ. ಅಲ್ಲಿ ಜನರು ಆಕೆಯ ಗೌರವಾರ್ಥ ದೇವಸ್ಥಾನ ಕಟ್ಟುತ್ತಾರೆ. ಹೀಗಾಗಿ ’ಮಂಗಳೂರು’ ಎಂದು ಹೆಸರು ಬಂತೆಂಬುದು ಪ್ರತೀತಿ.
ಪಾಂಡ್ಯ ಸಾಮ್ರಾಜ್ಯದಲ್ಲಿದ್ದ ಈ ಕರಾವಳಿ ಪ್ರದೇಶವನ್ನು ಪಾಂಡ್ಯ ರಾಜ ಚೆಟ್ಟಿಯಾನ್ ’ಮಂಗಳಪುರಂ’ ಎಂದು ಕರೆದಿದ್ದನಂತೆ. ಅಲುಪರಾಜ ವಂಶದ ಆಳ್ವಿಕೆಯಲ್ಲಿ ’ಮಂಗಳಾಪುರ’ ಎಂದಾಗಿತ್ತು ಎನ್ನಲಾಗುತ್ತಿದೆ. ಮೊಟ್ಟಮೊದಲು ’ಮಂಗಳೂರು’ ಬಳಕೆಯಾಗಿದ್ದು ವಿಜಯನಗರ ಸಾಮ್ರಾಜ್ಯದ ಯುಗದಲ್ಲಿ. ಆ ಕಾಲದ ಹಲವು ಶಿಲಾಶಾಸನಗಳಲ್ಲಿ ಮಂಗಳಾಪುರ ನಗರದ ಉಲ್ಲೇಖವಿದೆ. ಆ ನಂತರ ಕನ್ನಡ ಭಾಷೆಯಲ್ಲಿ ಮಂಗಳೂರು ಎಂದಾಯಿತೆಂಬ ವಾದವಿದೆ. ಮತ್ತೊಂದು ವಾದದಂತೆ ಮಲಬಾರ್ ಕರಾವಳಿಯಲ್ಲಿ ಹಿಂದೂ ಮಹಾಸಾಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಮಂಗಳೂರನ್ನು ಅರೇಬಿಕ್ ಭಾಷೆಯಲ್ಲಿ ’ಮಂಜಲೂರ್’ ಎಂದು ಕರೆಯಲಾಗುತ್ತಿತ್ತು. ಹೈದರ್ ಅಲಿ-ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ನಡುವಿನ ವಿವಾದದ ಮೂಲವಾಗಿದ್ದ ಈ ಬಂದರು ನಗರಿಗೆ ಬ್ರಿಟಿಷರ ಆಳ್ವಿಕೆಯಲ್ಲಿ ಆಂಗ್ಲೀಕೃತ ಆವೃತ್ತಿಯಾದ ’ಮಂಗಳೂರು’ ಅಧಿಕೃತ ಉಪನಾಮವಾಯಿತು.
ಶುದ್ಧ ತೌಳವ ಸಂಸ್ಕೃತಿಯ ಮಂಗಳೂರಲ್ಲಿ ಭೂತಾರಾಧನೆ, ನಾಗಾರಾಧನೆ, ಪಾಡ್ದನ, ಆಟಿಕಳಂಜ, ಯಕ್ಷಗಾನ, ಪಿಲಿ (ಹುಲಿ) ವೇಷ ಅನೂಚಾನಾಗಿದೆ. ಬ್ಯಾರಿ ಸಂಪ್ರದಾಯದಲ್ಲಿ ಕೋಲ್ಕೈ, ಉಂಜಾಲ್ ಪಾಟ್ (ಲಾಲಿ), ಮೊಯಿಲಾಂಜಿ ಪಾಟ್, ಒಪ್ಪುನೆ ಪಾಟ್ (ಮದುವೆ ಹಾಡು) ಜಾನಪದ ಹಾಡುಗಳಿವೆ. ಕ್ಯಾಥಲಿಕ್
ಕ್ರಿಶ್ಚಿಯನ್ನರು ಮೊಂಟಿ ಫೆಸ್ಟ್, ಎವ್ಕರಿಸ್ಟಿಕ್ ಪುರ್ಶಾಂವ್ (ಮೆರವಣಿಗೆ) ಆಚರಿಸುತ್ತಾರೆ. ಕೊಂಕಣಿಗಳಿಗೆ (ಗೌಡ ಸಾರಸ್ವತ ಬ್ರಾಹ್ಮಣ) ಕೋಡಿಯಾಲ್ ತೇರು ಸಂಭ್ರಮದ ಉತ್ಸವ. ಬ್ಯಾರಿಗಳು ಪಿಕ್ಹ್ (ಇಸ್ಲಾಮಿಕ್ ನ್ಯಾಯ ಶಾಸ್ತ್ರ) ಮತ್ತು ಶಾಪಿ ಶಿಕ್ಷಣ ಶಾಲೆಗಳನ್ನು ಅನುಸರಿಸುತ್ತಾರೆ. ಮಂಗಳೂರಿನ ಮಸ್ಜಿದ್ ಜಿನತ್ ಬಕ್ಷ ಬಾರತೀಯ ಉಪಖಂಡದಲ್ಲಿ ತೀರಾ ಹಳೆಯ ಮಸೀದಿಗಳಲ್ಲಿ ಒಂದು.
ಬಹುಭಾಷಾ ನಗರವಾದ ಮಂಗಳೂರಲ್ಲಿ ಕನ್ನಡ, ಕೊಂಕಣಿ, ಮಲಯಾಳಂ, ಮರಾಠಿ, ಗುಜರಾತಿ ತಮಿಳು, ನವಾಯತಿ ಮುಂತಾದ ಸಾಮುದಾಯಿಕ ಭಾಷೆಗಳು ಕೇಳಿಬರುತ್ತವೆಯಾದರೂ ಮನೆಯಾಚೆಯ ಸಂವಹುನ ಬಹತೇಕ ತುಳುನಲ್ಲಿ ನಡೆಯುತ್ತದೆ. ಹೆಚ್ಚಿನವರ ಮನೆ ಭಾಷೆಯೂ ತುಳು. ತುಳು ಮಂಗಳೂರಿನ ಅಸ್ಮಿತೆ! ತುಳುನಾಡಲ್ಲಿ ಕನ್ನಡ ಕಸ್ತೂರಿ ಕಂಪು ಶುರುವಾಗಿದ್ದೇ 1960ರ ಮಧ್ಯ ಭಾಗದಲ್ಲಿ. ಔಪಚಾರಿಕ ಕನ್ನಡ ಶಿಕ್ಷಣವನ್ನು ಶಾಲೆಗಳಲ್ಲಿ ಪರಿಚಯಿಸಿದ ಬಳಿಕವೇ ಮಂಗಳೂರಲ್ಲಿ ಕನ್ನಡ ಮಾತು-ಕತೆ ಶುರುವಾಯಿತು ಎನ್ನಲಾಗುತ್ತದೆ. ಕ್ಯಾಥಲಿಕ್ ಕ್ರಿಶ್ಚಿಯನ್ನರನ್ನದು ಕೊಂಕಣಿ ಮಾತೃ ಭಾಷೆಯಾದರೆ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ನರು ವಿಶಿಷ್ಟ ತುಳು ಮತ್ತು ಕನ್ನಡ ಮಾತಾಡುತ್ತಾರೆ. ಕನ್ನಡದ ಮೊದಲ ಪತ್ರಿಕೆ ’ಮಂಗಳೂರು ಸಮಾಚಾರ’ ಶುರುವಾಗಿದ್ದು ಕುಡ್ಲದಲ್ಲಿ. 1843ರಲ್ಲಿ ಬಾಸೆಲ್ ಮಿಷನ್‌ನ ಜರ್ಮನ್ ಪಾದ್ರಿ ಹರ್ಮನ್ ಮೂಗ್ಲಿಂಗ್ ಈ ವಾರ್ತಾ ಪತ್ರಿಕೆ ಪ್ರಕಟಿಸಿದ್ದರು. 1894ರಲ್ಲಿ ಬಂದ ಮೊದಲ ಕನ್ನಡ-ಇಂಗ್ಲಿಷ್ ನಿಘಂಟಿನ ಮೂಲವೂ ಮಂಗಳೂರು.
ಮತ್ಸ್ಯೋದ್ಯಮ, ಹಳೆಯ ವಾಣಿಜ್ಯ ಬಂದರು ಹಾಗು ಶಿಕ್ಷಣ ಮಂಗಳೂರು ನಗರದ ಆರ್ಥಿಕ ವಲಯದ ಮೂರು ಆಧಾರ ಸ್ತಂಭಗಳು. ರಸ್ತೆ, ರೈಲು, ವಿಮಾನ ಮತ್ತು ಸಮುದ್ರ ಸಾರಿಗೆ ಸೌಲಭ್ಯವಿರುವ ರಾಜ್ಯದ ಏಕೈಕ ನಗರ ಮಂಗಳೂರು. ಕೈಗಾರಿಕೆ, ವಾಣಿಜ್ಯ, ಕೃಷಿ ಸಂಸ್ಕರಣೆ, ಬಂದರು ಮತ್ತು ಐಟಿ ಸಂಬಂಧಿತ ಚಟುವಟಿಕೆ ಮೇಲೆ ನಗರದ ಆರ್ಥಿಕತೆ ಅವಲಂಬಿಸಿದೆ. ವಾಣಿಜ್ಯೋದ್ಯಮ ಅವಕಾಶಗಳು, ಮೂರು ವೈದ್ಯಕೀಯ ಕಾಲೇಜುಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ವಿವಿಧ ಕೋರ್ಸ್‌ಗಳ ಹಲವು ಕಲಿಕಾ ಕೇಂದ್ರಗಳಿರುವ ಮಂಗಳೂರು ಭಾರತದ ಪ್ರಮುಖ ಶೈಕ್ಷಣಿಕ ಕಾರಿಡಾರ್ ಎಂಬ ಹೆಗ್ಗಳಿಕೆ ಪಡೆದಿದೆ. ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರ ಎನಿಸಿರುವ ಮಂಗಳೂರಿನ ಅತ್ಯಾಧುನಿಕ ಆಸ್ಪತ್ರೆಗಳಿಗೆ ದೇಶ-ವಿದೇಶದ ರೋಗಿಗಳು ಬರುತ್ತಾರೆ. ಬ್ಯಾಂಕುಗಳ ಉಗಮ ಸ್ಥಾನವೆಂಬ ಪ್ರಸಿದ್ಧಿಯ ಮಂಗಳೂರಲ್ಲಿ 20ನೇ ಶತಮಾನದ ಮೊದಲಾರ್ಧದಲ್ಲಿ ಕಾರ್ಪೊರೇಶನ್, ಕೆನರಾ, ವಿಜಯಾ, ಕರ್ನಾಟಕ ಹೆಸರಿನ ರಾಷ್ಟ್ರಮಟ್ಟದ ವಾಣಿಜ್ಯ ಬ್ಯಾಂಕುಗಳು ಮತ್ತು ಎಂಸಿಸಿ, ಎಸ್‌ಡಿಸಿಸಿ, ಮಂಗಳೂರು ಸಹಕಾರಿ ಟೌನ್ ಬ್ಯಾಂಕ್‌ನಂಥ ಹಲವು ಶೆಡ್ಯೂಲ್ ಬ್ಯಾಂಕ್‌ಗಳು ಹುಟ್ಟಿಕೊಂಡಿದ್ದವು. ಹಂಚು ಮತ್ತು ಬೀಡಿ ಕೈಗಾರಿಕೆ ಹಲವು ಕುಟುಂಬಗಳ ತುತ್ತಿಗಾಧಾರವಾಗಿತ್ತು. ಬೀಡಿ ಉದ್ಯಮದ ಅನ್ನದ ಬಟ್ಟಲು ಎನಿಸಿದ್ದಮಂಗಳೂರಲ್ಲೀಗ ಹಂಚು ಮತ್ತು ಬೀಡಿ ಕಟ್ಟುವ ಉದ್ಯೋಗ ಗಣನೀಯವಾಗಿ ಕಡಿಮೆಯಾಗಿದೆ. ಮಂಗಳೂರಿನ ಪೂರ್ವದ ಗುಡ್ಡಗಾಡು ಪ್ರದೇಶದಲ್ಲಿ ಅಡಿಕೆ ಕೃಷಿಯಿಂದ ಒಂದಿಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಕೃಷಿ ನಷ್ಟ-ಬರಗಾಲವೇ ಮುಂತಾದ ಸಮಸ್ಯೆಯಿಂದ ಮಂಗಳೂರಿಗೆ ವಲಸೆ ಬಂದಿರುವ ಉತ್ತರ ಕರ್ನಾಟಕದ ದೊಡ್ಡ ಅಸಹಾಯಕ ಸಮುದಾಯ ಕೂಲಿ-ನಾಲಿ ಮಾಡಿಕೊಂಡು ಬದುಕುತ್ತಿದೆ.
ಮಂಗಳೂರಿನ ಆರ್ಥಿಕ ಚಟುವಟಿಕೆಗೆ ಈಗ ಮೊದಲಿನ ಚೈತನ್ಯವಿಲ್ಲದಾಗಿದೆ. ಚರ್ಚ್, ಪಬ್ ಮತ್ತು ಹೋಂ ಸ್ಟೇ ಮೇಲಿನ ಕೇಸರಿ ದಾಳಿಗಳ ಬಳಿಕ ಮಂಗಳೂರಿನ ವಾಣಿಜ್ಯ, ಉದ್ಯಮ ಹಿಂಜರಿತಕ್ಕೆ ಒಳಗಾಗಿದೆ ಎಂದು ಆರ್ಥಿಕ ಪರಿಸ್ಥಿತಿಯ ವಿಶ್ಲೇಷಕರು ಹೇಳುತ್ತಾರೆ. ಬಂಡವಾಳಗಾರರು, ಕೈಗಾರಿಕೋದ್ಯಮಿಗಳು ವರ್ತಕರು ಅಷ್ಟೇ ಏಕೆ, ಕಂಗೆಟ್ಟಿರುವ ವರ್ತಕರೂ ಮಂಗಳೂರಿನತ್ತ ಬರಲು ಹಿಂದೆಮುಂದೆ ನೋಡುವಂತಾಗಿದೆ ಎನ್ನಲಾಗುತ್ತಿದೆ.
ಅನೈತಿಕ ಪೊಲೀಸ್‌ಗಿರಿ, ಕೌ ಬ್ರಿಗೇಡ್ ಹಾವಳಿ ಮತ್ತು ಈ ಗುಂಪು ಹಲ್ಲೆಕೋರರಿಗೆ ಒತ್ತಾಸೆಯಾಗಿ ನಿಂತಿರುವ ಶಾಸಕ ವೇದವ್ಯಾಸ ಕಾಮತ್‌ರ ಕಾರ್ಯವೈಖರಿಯಿಂದ ಮಂಗಳೂರಿಗರ ಬದುಕು ಅಪನಂಬಿಕೆ, ಆತಂಕದಲ್ಲಿ ಅನಿಶ್ಚಿತವಾಗಿದೆಯೆಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ! ಕಡಲ ತೀರಗಳ ಸ್ವರ್ಗ ಎಂಬ ಅಭಿದಾನದ ಮಂಗಳೂರು ವೈವಿಧ್ಯಮಯ ಮತ್ಸ್ಯ ಭಕ್ಷ್ಯಗಳಿಗೆ ಪ್ರಸಿದ್ಧವಾಗಿದೆ. ಪಿಲಿಕುಳ ನಿಸರ್ಗ ಧಾಮ, ಅಡ್ಯಾರ್ ಫಾಲ್ಸ್, ಕದ್ರಿ ಪಾರ್ಕ್, ಟ್ಯಾಗೋರ್ ಪಾರ್ಕ್ ಮಂಗಳೂರಿನ ಜನಾಕರ್ಷಣೆ ತಾಣಗಳು. ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಭಾರತದ ಮೊದಲ 3ಡಿ ತಾರಾಲಯವಿದೆ.
ಚುನಾವಣಾ ರಣಕಣಗಳ ಕತೆಗಳು
ಮೊದಲು ಮಂಗಳೂರು-1, ಆನಂತರದ ಕ್ಷೇತ್ರಗಳ ಡಿಲಿಮಿಟೇಶನ್‌ನಲ್ಲಿ ಮಂಗಳೂರು ಮತ್ತು 2008ರ ಚುನಾವಣೆ ಸಂದರ್ಭದಿಂದ ಮಂಗಳೂರು ನಗರ ದಕ್ಷಿಣವೆಂದು ನಾಮಾಂತರಗೊಂಡಿರುವ ಮಂಗಳೂರಿನ ಮಧ್ಯವರ್ತಿ ಪ್ರದೇಶ ಆರಂಭದಲ್ಲಿ ಕಾಂಗ್ರೆಸ್ ಮತ್ತು ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ ಸಾಂಪ್ರದಾಯಿಕ ಕದನ ಕ್ಷೇತ್ರವಾಗಿತ್ತು. 1970ರ ದಶಕದಲ್ಲಿ ಜನಸಂಘ ಚುನಾವಣಾ ರಾಜಕಾರಣ ಆರಂಭಿಸಿತ್ತು. 1983ರಲ್ಲಿ ಆಕಸ್ಮಿಕವಾಗಿ ಒಮ್ಮೆ ಗೆದ್ದಿದ್ದ ಬಿಜೆಪಿಗೆ, ಮಂಗಳೂರಿನ ಆಯಕಟ್ಟಿನ ಸ್ಥಳದಲ್ಲಿ ಬ್ರೇಕ್ ಸಿಕ್ಕಿದ್ದು ಬಾಬರಿ ಮಸೀದಿ ಹಿಂದುತ್ವದ ದಾಳಿಗೀಡಾಗಿ ಉರುಳಿದ ನಂತರವೆ ಎಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ.
ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2 ಲಕ್ಷ 40 ಸಾವಿರದಷ್ಟು ಮತದಾರರಿದ್ದಾರೆ. ಇದರಲ್ಲಿ ಕ್ಯಾಥಲಿಕ್, ಪ್ರೊಟೆಸ್ಟೆಂಟ್, ನೂತನವಾದಿಗಳೇ ಮುಂತಾದ ಕ್ರಿಶ್ಚಿಯನ್ ಪಂಗಡಗಳು ಒಟ್ಟು ಸೇರಿ 45,000, ಮುಸ್ಲಿಮರ ಎಲ್ಲ ಒಳ ಪಂಗಡಗಳು ಒಟ್ಟಾಗಿ 40,000, ಬಿಲ್ಲವರು 30,000, ಕೊಂಕಣಿಗರು 30,000, ಬಂಟರು 18,000, ಎಸ್‌ಸಿ ಮತ್ತು ಎಸ್‌ಟಿ 7,000, ಮೊಗವೀರ, ದೈವಜ್ಞರು, ಗಾಣಿಗ, ಮರಾಠಿ, ತಮಿಳರು, ಗುಜರಾತಿ, ಜೈನರಂಥ ಸಣ್ಣ ಸಮುದಾಯದ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ. 1957ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿದ್ದ ವೈಕುಂಠ ಬಾಳಿಗ ಮತ್ತು ಸಿಪಿಐನ ಶಾಂತಾರಾಮ ಪೈ ಮುಖಾಮುಖಿಯಾದರು. 16,365 ಮತ ಗಳಿಸಿದ್ದ ಬಾಳಿಗರು ಶಾಸಕರಾದರು.

1962ರಲ್ಲಿ ಕಾಂಗ್ರೆಸ್ ಬಾಳಿಗರನ್ನು ಬೆಳ್ತಂಗಡಿಗೆ ಕಳಿಸಿ ಅವರದೆ ಸಮುದಾಯದ (ಕೊಂಕಣಿ) ಎಂ.ಶ್ರೀನಿವಾಸ್ ನಾಯಕ್‌ಗೆ ಅವಕಾಶ ಕೊಟ್ಟಿತು. ನಾಯಕ್ ಸಿಪಿಐನ ಶಾಂತಾರಾಮ್ ಪೈರನ್ನು ಸೋಲಿಸಿ ಶಾಸನಸಭೆಗೆ ಹೋದರು. ಬಾಳಿಗರು 1962 ಮತ್ತು 1967ರಲ್ಲಿ ಬೆಳ್ತಂಗಡಿಯಿಂದ ಗೆದ್ದು, ಕಾನೂನು ಮಂತ್ರಿ ಮತ್ತು ವಿಧಾನಸಭಾಧ್ಯಕ್ಷರಾಗಿದ್ದರು. 1967ರಲ್ಲಿ ಶ್ರೀನಿವಾಸ್ ನಾಯಕ್ ಪಕ್ಷೇತರ ಎದುರಾಳಿ ಎ.ಆರ್.ಅಹ್ಮದ್‌ರನ್ನು 6006 ಮತಗಳಿಂದ ಸೋಲಿಸಿ ಎರಡನೆ ಬಾರಿ ಎಮ್ಮೆಲ್ಲೆಯಾದರು. 1972ರ ಚುನಾವಣೆ ವೇಳೆ ಕಾಂಗ್ರೆಸ್ ವಿಭಜನೆಯಾದ್ದರಿಂದ ಇಂದಿರಾ ಗಾಂಧಿಗೆ ನಿಷ್ಠರಾಗಿದ್ದ ಆಡಿ ಸಲ್ಡಾನಾ ಕಾಂಗ್ರೆಸ್ ಕ್ಯಾಂಡಿಡೇಟಾಗಿ ಸ್ಪರ್ಧಿಸಿದರು; ಜನಸಂಘದ ಎದುರಾಳಿ ಸಿ.ಜಿ.ಕಾಮತ್‌ರನ್ನು 13,518 ಮತದಂತರದಿಂದ ಸೋಲಿಸಿದ ಸಲ್ಡಾನಾ ಶಾಸಕನಾದರು.
ಮಂಗಳೂರು-1 ಕ್ಷೇತ್ರದ ವ್ಯಾಪ್ತಿ ಮತ್ತು ಹೆಸರು 1978ರಲ್ಲಿ ಬದಲಾಯಿತು. ಮಂಗಳೂರು ಎಂದು ಹೆಸರು ಪಡೆದ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪಿ.ಎಫ್.ರೊಡ್ರಿಗಸ್ ಮತ್ತು ಜನತಾ ಪಕ್ಷದ ಶಾರದಾ ಆಚಾರ್ ನಡುವೆ ಕತ್ತುಕತ್ತಿನ ಹೋರಾಟ ಏರ್‍ಪಟ್ಟಿತ್ತೆಂದು ಅಂದಿನ ಕದನ ಕುತೂಹಲ ಕಂಡವರು ಹೇಳುತ್ತಾರೆ. ಮೀಸಾ ನಂತರದ ಚುನಾವಣೆಯಾದ್ದರಿಂದ ಕಾಂಗ್ರೆಸ್ ಕಷ್ಟಕ್ಕೆ ಸಿಲುಕಿತ್ತು. ಆದರೂ ಕಾಂಗ್ರೆಸ್‌ನ ರೊಡ್ರಿಗಸ್ 1,235 ಮತದಿಂದ ಗೆಲುವು ಕಂಡರು. ದೇವರಾಜ ಅರಸ್ ಸರಕಾರದಲ್ಲಿ ಮಂತ್ರಿಯಾಗಿದ್ದ ರೊಡ್ರಿಗಸ್‌ರಿಗೆ 1983ರಲ್ಲಿ ಗೆಲ್ಲಲಾಗಲಿಲ್ಲ. ಅಂದು ಅಷ್ಟೇನು ಪರಿಚಿತರಲ್ಲದ ಹಾಗೂ ವಕೀಲಿ ಮಾಡಿಕೊಂಡಿದ್ದ ಬಿಜೆಪಿಯ ಧನಂಜಯಕುಮಾರ್ ಶಾಸಕನಾಗಿದ್ದು ಅನಿರೀಕ್ಷಿತವಾಗಿತ್ತೆಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ರಾಮಕೃಷ್ಣ ಹೆಗಡೆ 1983ರಲ್ಲಿ ಬಿಜೆಪಿ ಬಾಹ್ಯ ಬೆಂಬಲದಿಂದ ಸರಕಾರ ರಚಿಸಿದ್ದರು. ಆದರೆ ದಿನಕಳೆದಂತೆ ಬಿಜೆಪಿ ಹಂಗಿನಲ್ಲಿ ಸರಕಾರ ನಡೆಸುವುದು ಕಷ್ಟವಾಗಿ ಹೆಗಡೆ 1985ರಲ್ಲಿ ಅಸೆಂಬ್ಲಿ ವಿಸರ್ಜಿಸಿ ನಡುಗಾಲ ಚುನಾವಣೆ ಘೋಷಿಸಿದ್ದರು. ಆಗ ಹೆಗಡೆ ಹವಾ ಎಷ್ಟಿತ್ತೊ, ಅಷ್ಟೆ ಬಿಜೆಪಿ ಬಗ್ಗೆ ಅಸಹನೆ-ಆಕ್ರೋಶ ಜನರಲ್ಲಿತ್ತು. ಹೀಗಾಗಿ 1985ರಲ್ಲಿ ಮಂಗಳೂರಲ್ಲಿ ಧನಂಜಯ್‌ಕುಮಾರ್‌ಗೆ ಮಾತ್ರವಲ್ಲ, 1983ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಬಿಜೆಪಿಯಿಂದ ಆಯ್ಕೆಯಾಗಿದ್ದ ಏಳು ಶಾಸಕರಲ್ಲಿ ಯಾರಿಗೂ ಮತ್ತೆ ಗೆಲ್ಲಲಾಗಲಿಲ್ಲ. ಮಂಗಳೂರಲ್ಲಿ ಜನತಾ ದಳದ ಜುಡಿತ್ ಮಸ್ಕೇರೇನಸ್ (15,752) ರನ್ನರ್ ಅಪ್ ಆಗಿದ್ದರು. ಕಾಂಗ್ರೆಸ್‌ನ ಬ್ಲೇಸಿಯಸ್ ಡಿಸೋಜಾ 8,769 ಮತದಂತರದಿಂದ ಆಯ್ಕೆಯಾದರು. ರಾಜಕಾರಣದಿಂದ ನಿಧಾನ ನೇಪಥ್ಯಕ್ಕೆ ಸರಿದಿದ್ದ ಪಿ.ಎಫ್.ರೊಡ್ರಿಗಸ್ ಬದಲಿಗೆ ಶ್ರೀಮಂತ ಜವಳಿ ಉದ್ಯಮಿ ಬ್ಲೇಸಿಯಸ್ ಡಿಸೋಜಾ ಕಾಂಗ್ರೆಸ್ ಅಭ್ಯರ್ಥಿ ಆಗುವಂತೆ ಆಸ್ಕರ್ ಫರ್ನಾಂಡಿಸ್ ನೋಡಿಕೊಂಡಿದ್ದರು ಎನ್ನಲಾಗಿತ್ತು.
1989ರಲ್ಲಿ ಬಿಜೆಪಿಯ ಮಾಜಿ ಶಾಸಕ ಧನಂಜಯ್‌ಕುಮಾರ್‌ಗೆ ಟಿಕೆಟ್ ಕೊಡದೆ ಕಾರ್ಪೊರೇಟರ್ ಆಗಿದ್ದ ಎನ್.ಯೋಗಿಶ್ ಭಟ್‌ರನ್ನು ಅಭ್ಯರ್ಥಿ ಮಾಡಿತು. 23,739 ಓಟು ಪಡೆದಿದ್ದ ಬ್ಲೇಸಿಯಸ್ ಡಿಸೋಜಾ ಎರಡನೆ ಬಾರಿ ಶಾಸಕನಾದರು. ಮಂಗಳೂರು ನಗರದಲ್ಲಿ ಗಣನೀಯ ಮತವಿರುವ ಮತ್ತು ಸ್ಥಳೀಯ ಬಿಜೆಪಿಯ ಆಗುಹೋಗು ನಿಭಾಯಿಸುವ ಆಯಕಟ್ಟಿನ ಸ್ಥಾನದಲ್ಲಿರುವ ಕೊಂಕಣಿ ಸಮುದಾಯದ ಯೋಗೀಶ್ ಭಟ್ 1994ರಲ್ಲಿ ಬ್ಲೇಸಿಯಸ್ ಡಿಸೋಜಾರನ್ನು 7,976 ಮತದಂತರದಿಂದ ಪರಾಭವಗೊಳಿಸಿದರು. ಬಾಬರಿ ಮಸೀದಿ ಪತನದ ನಂತರದ ಮತ ಧ್ರುವೀಕರಣ, ಕಾಂಗ್ರೆಸ್ ಒಳಗಿನ ಭಿನ್ನಮತ ಮತ್ತು ಮಿಲಾಗ್ರಿಸ್ ಚರ್ಚ್ ಬಳಿ ನೂರ್ ಮಸೀದಿ ಕಟ್ಟಲು ಬ್ಲೇಸಿಯಸ್ ಡಿಸೋಜಾ ಅಡ್ಡಿಪಡಿಸಿದರೆಂಬ ಮುಸ್ಲಿಮರ ಸಿಟ್ಟು ಕಾಂಗ್ರೆಸ್ ಸೋಲಿಗೆ ಕಾರಣವಾಯಿತೆಂದು ವಿಶ್ಲೇಷಿಸಲಾಗುತ್ತಿದೆ. 1999ರಲ್ಲಿ ಮತ್ತೆ ಕಾಂಗ್ರೆಸ್‌ನ ಡಿಸೋಜಾ ಮತ್ತು ಬಿಜೆಪಿಯ ಭಟ್ ಮುಖಾಮುಖಿಯಾದರು. ಈ ಕಾಳಗದಲ್ಲೂ ಬಿಜೆಪಿ ಭಟ್ಟರೆ ಧರ್ಮಕಾರಣದ ಬಲದಿಂದ ಗೆದ್ದರೆನ್ನಲಾಗುತ್ತಿದೆ.
ಎಮ್ಮೆಲ್ಲೆಆಗಲಾಗದ ಬಿಜೆಪಿಯ ಧನಂಜಯ್‌ಕುಮಾರ್ 1991ರಿಂದ ಸತತ ನಾಲ್ಕು ಬಾರಿ ಮಂಗಳೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸಂಸದರಾದರು! ವಾಜಪೇಯಿ ಪ್ರಥಮ ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದ
ಧನಂಜಯ್‌ಕುಮಾರ್ ದ್ವಿತೀಯ ಸರಕಾರದಲ್ಲಿ ರಾಜ್ಯ ಸಚಿವರಾಗಿದ್ದರು. ಅಸೆಂಬ್ಲಿ ಚುನಾವಣೆಯಲ್ಲಿ ಸತತ ಎರಡು ಬಾರಿ ಸೋಲನುಭವಿಸಿದ ಕಾಂಗ್ರೆಸ್‌ನ ಬ್ಲೇಸಿಯ್ ಡಿಸೋಜಾ ಎರಡು ಸಲ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ಎಮ್ಮೆಲ್ಸಿ ಆಗಿದ್ದರು. 2004ರಲ್ಲಿ ಯೋಗಿಶ್ ಭಟ್ (29,928) ಕಾಂಗ್ರೆಸ್‌ನ ಕಾರ್ಪೊರೇಟರ್
ಲ್ಯಾನ್ಸ್‌ಲಾಟ್ ಪಿಂಟೋರನ್ನು (24,827) ಮಣಿಸಿದರು. 2008ರ ಡಿಲಿಮಿಟೇಶನ್‌ನಲ್ಲಿ ಮಂಗಳೂರು ನಗರ ದಕ್ಷಿಣ ಎಂದು ಹೆಸರಾದ ಕ್ಷೇತ್ರದ ಚುನಾವಣಾ ಕಣದಲ್ಲಿ ಶಾಸಕ ಯೋಗಿಶ್ ಭಟ್‌ರಿಗೆ ಕ್ಯಾಥಲಿಕ್ ಸಮುದಾಯದ ಪ್ರಭಾವಿ ಮುಂದಾಳು ಐವಾನ್ ಡಿಸೋಜಾ ಕಾಂಗ್ರೆಸ್ ಎದುರಾಳಿ ಆಗಿದ್ದರು. ಜನತಾ ದಳ ಮೂಲದ ಐವಾನ್‌ರು ಕಾಂಗ್ರೆಸ್‌ನ ಒಳಸುಳಿ ಮತ್ತು ಬಿಜೆಪಿಯ ಧರ್ಮಕಾರಣದ ಅಬ್ಬರ ಎದುರಿಸಲಾಗದೆ ವಿಫಲರಾದರೆಂಬ ಅಭಿಪ್ರಾಯ ರಾಜಕೀಯ ಪಡಸಾಲೆಯಲ್ಲಿದೆ. ನಾಲ್ಕನೆ ಸಲ ಶಾಸಕರಾದ ಯೋಗಿಶ್ ಭಟ್ ವಿಧಾನಸಭೆಯ ಉಪಾಧ್ಯಕ್ಷರಾದರು.

ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್, ಸಹಾಯಕ ಜಿಲ್ಲಾಧಿಕಾರಿ ಮತ್ತು ಪಿಲಿಕುಳ ನಿಸರ್ಗಧಾಮದ ಆಡಳಿತಾಧಿಕಾರಿಯಂಥ ಆಯಕಟ್ಟಿನ ಜಾಗದಲ್ಲಿದ್ದ, ಕೆಲಸಗಾರ-ಜನಾನುರಾಗಿ ಕೆಎಎಸ್ ಅಧಿಕಾರಿ ಎಂಬ ಇಮೇಜಿನ ಜೆ.ಆರ್.ಲೋಬೋ 2013ರ ಚುನಾವಣೆಯಲ್ಲಿ ಆಸ್ಕರ್ ಫರ್ನಾಂಡಿಸ್ ಮತ್ತು ಜನಾರ್ದನ ಪೂಜಾರಿಯವರ ಒತ್ತಾಸೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಬಿಜೆಪಿಯ ಯೋಗಿಶ್ ಭಟ್ಟರು 12,275 ಮತಗಳಿಂದ ಲೋಬೋರಿಗೆ ಮಣಿಯಬೇಕಾಗಿ ಬಂತು. ಭಟ್ ಅಸಲಿ ಸಂಘಿಯಾದರೂ ಪ್ರಚೋದನಾತ್ಮಕ ಧರ್ಮಕಾರಣ ಪ್ರವೃತ್ತಿಯವರಲ್ಲ ಎನಿಸಿಕೊಂಡಿದ್ದರು. ಇದು ಕಟ್ಟರ್ ಹಿಂದುತ್ವವಾದಿಗಳಿಗೆ ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ. ಜತೆಗೆ ನಿರಂತರ ಎರಡು ದಶಕದ ಶಾಸಕಗಿರಿ ಎಂಟಿ ಇನ್‌ಕಂಬೆನ್ಸ್‌ಗೆ ಕಾರಣವಾಗಿದ್ದರಿಂದ ಭಟ್ ಸೋತರೆಂಬ ಮಾತು ಕೇಳಿಬರುತ್ತಿದೆ.
2018ರ ಚುನಾವಣೆಯಲ್ಲಾದ ಧರ್ಮಕಾರಣದ ಕಸರತ್ತಿಗೆ ಅಭಿವೃದ್ಧಿ-ಜನಪರ ಬದ್ಧತೆಯ ಹಂಗು-ಮುಲಾಜು ಇರಲಿಲ್ಲವೆಂದು ಮಂಗಳೂರಿನ ಪ್ರಜ್ಞಾವಂತರು ಬೇಸರಿಸುತ್ತಾರೆ. ತನ್ನ ಶಾಸಕತ್ವದ ಅವಧಿಯಲ್ಲಿ ಒಂದೇಒಂದು ದಿನವೂ ರಜೆ ಪಡೆಯದೆ ಜನಹಿತ ಹಾಗು ಪ್ರಗತಿಯ ಯೋಜನೆ-ಯೋಚನೆ ಮಾಡಿದ ಲೋಬೋ ಇಲೆಕ್ಷನ್ ಸಂದರ್ಭದಲ್ಲಾದ ಪ್ರಬಲ ಮತ ಧ್ರುವೀಕರಣದಿಂದಾಗಿ ದೊಡ್ಡ ಅಂತರದಲ್ಲಿ ಸೋಲಬೇಕಾಗಿ ಬಂತೆನ್ನಲಾಗಿದೆ. ಕ್ಷೇತ್ರದ ನಾಡಿಮಿಡಿತವೆ ಗೊತ್ತಿಲ್ಲದ ಗೇರು ಬೀಜ ವ್ಯಾಪಾರಿ ವೇದವ್ಯಾಸ ಕಾಮತ್ ಶಾಸಕನಾಗಿದ್ದು ಜನತಂತ್ರದ ದೌರ್ಬಲ್ಯವೆಂದು ವಿಶ್ಲೇಷಿಸಲಾಗುತ್ತಿದೆ.
ಕ್ಷೇತ್ರದ ಕಥೆ-ವ್ಯಥೆ
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಧ್ಯದಲ್ಲಿ ನಿಂತು ಸುತ್ತಲೂ ಕಣ್ಣು ಹಾಯಿಸಿದರೆ ಕಳೆದ ನಾಲ್ಕು ವರ್ಷದಲ್ಲಿ ಯಾರೇ ಶಾಸಕನಾದರೂ ತಂತಾನೆ ಬರುವ ಮಾಮೂಲಿ ಬಜೆಟ್‌ನ ಒಂದಿಷ್ಟು ಕಾಮಗಾರಿ ಆಗಿರುವುದು ಬಿಟ್ಟರೆ ಜನಸಾಮಾನ್ಯರ ಬದುಕು ಹಗುರಗೊಳಿಸುವಂಥ ವಿಶೇಷ ಯೋಜನೆ ಒಂದೇಒಂದು ಬಂದಿದ್ದು ಕಾಣಿಸದೆಂಬುದು ಸಾಮಾನ್ಯ ಅನಿಸಿಕೆಯಾಗಿದೆ. ಅನೈತಿಕ ಪೊಲೀಸ್ ಪಡೆ, ಗೋರಕ್ಷಕ ದಳ ಮತ್ತು ಗುಂಪು ಹಲ್ಲೆಕೋರರಿಗೆ ಮಾತ್ರ ಶಾಸಕ ವೇದವ್ಯಾಸ ಕಾಮತರ ಇರುವಿಕೆಯ ಅರಿವಾಗುತ್ತಿದೆಯ ವಿನಃ ಸಾಮಾನ್ಯರಿಗೆ ಕ್ಷೇತ್ರಕ್ಕೊಬ್ಬ ಎಮ್ಮೆಲೆ ಇದ್ದಾರೆ ಅನ್ನಿಸುತ್ತಿಲ್ಲವೆಂದು ಪ್ರಜ್ಞಾವಂತರು ಹೇಳುತ್ತಾರೆ. ಅವರುಗಳನ್ನು ರಕ್ಷಿಸಲು ನೇರ ಪೊಲೀಸ್ ಠಾಣೆಗೆ ಶಾಸಕರು ಹೋಗುತ್ತಾರೆ ಮತ್ತು ಆರೋಪಿಗಳೆದುರೆ ಹಲ್ಲೆಗೀಡಾದವರನ್ನು ಹೀಯಾಳಿಸಿ ದಾಳಿಗೆ ಹವಣಿಸುತ್ತಾರೆಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.
ಶಾಸಕ ಕಾಮತ್ ಹಾಗೂ ಸಂಸದ ಕಟೀಲ್‌ರಿಂದ ದುಡಿಯುವ ಕೈಗಳಿಗೆ ಕೆಲಸ ಕೊಡುವ ಕೈಗಾರಿಕೆ ತರಲಾಗಿಲ್ಲ; ಐಟಿ ಪಾರ್ಕ್ ಮಾಡುವ ವಿಪುಲ ಅವಕಾಶವಿದ್ದರೂ ಅತ್ತ ಅಧಿಕಾರಸ್ಥರು ತಲೆ ಹಾಕುತ್ತಿಲ್ಲ; ಉದ್ಯೋಗ ಸೃಷ್ಟಿಯಾಗುತ್ತಿಲ್ಲ; ಸ್ಮಾರ್ಟ್ ಸಿಟಿ ಯೋಜನೆ ಹಳಿ ತಪ್ಪಿದೆ; ಸ್ಮಾರ್ಟ್ ನಗರ ಪ್ರಾಜೆಕ್ಟ್ ನೆಪದಲ್ಲಿ ಅಧಿಕಾರಸ್ಥರು ರಿಯಲ್ ಎಸ್ಟೇಟ್, ಬಿಲ್ಡರ್‍ಸ್, ಕಂಟ್ರಾಕ್ಟರ್‍ಸ್ ಲಾಬಿ ಪೋಷಿಸುತ್ತಿದ್ದಾರೆಂಬ ಟೀಕೆ-ಟಿಪ್ಪಣಿಗಳು ಮಂಗಳೂರಲ್ಲಿ ಸಾಮಾನ್ಯವಾಗಿದೆ.
“ನನ್ನ ಶಾಸಕತ್ವದ ಅವಧಿ ಮುಗಿಯುವ ವೇಳೆಗೆ 3,500 ಕೋಟಿ ರೂಗಳ ಯೋಜನೆಯ ರೊಪುರೇಷೆ ಸಿದ್ಧಪಡಿಸಿದ್ದೆ; ಬಹುತೇಕ ಯೋಜನೆಗೆ ಮಂಜೂರಾತಿಯೂ ದೊರೆತಿತ್ತು; ಸಾಮಾನ್ಯವಾಗಿ ಎಡಿಬಿ ಎರಡನೆ ಬಾರಿ ಯೋಜನೆಯೊಂದಕ್ಕೆ ಹಣ ಕೊಡುವುದಿಲ್ಲ. ಆದರೆ ನಾನು ಅಧಿಕಾರಿಯಾಗಿದ್ದಾಗ ಹಿರಿಯ ಅಧಿಕಾರಿಗಳೊಂದಿಗೆ ನನಗಿದ್ದ ಸಂಪರ್ಕ ಬಳಸಿ ಕುಡಿಯುವ ನೀರು ಯೋಜನೆಗೆ ಎರಡನೆ ಬಾರಿ 650 ಕೋಟಿ ರೂ ತಂದಿದ್ದೆ. ಆ ಯೋಜನೆಯೂ ಪೂರ್ಣವಾಗಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಸರಿಯಾಗಿ ಅನುಷ್ಠಾನಗೊಳಿಸಲು ಆಳುವವರಿಂದಾಗುತ್ತಿಲ್ಲ. ನಾನು ಸ್ಮಾರ್ಟ್ ಸಿಟಿ ಯೋಜನೆಯ ನೀಲಿನಕ್ಷೆ ತಯಾರಿಸಿದಾಗ ಅದನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ದರು. ತಮಾಷೆಯೆಂದರೆ, ಈಗ ಅದೇ ಯೋಜನೆಗಳಲ್ಲಿ ಒಂದೊಂದೇ ಉದ್ಘಾಟನೆ ಮಾಡುತ್ತ ತಾವೆ ಅದರ ಶಿಲ್ಪಿಗಳೆಂಬಂತೆ ಬಿಜೆಪಿ ಶಾಸಕರು ಮತ್ತವರ ಜತೆಗಾರರು ಫ್ಲೆಕ್ಸ್-ಬ್ಯಾನರ್‌ನಲ್ಲಿ ಮಿಂಚುತ್ತಿದ್ದಾರೆ” ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಹೇಳುತ್ತಾರೆ.

ಲಕ್ಷದ್ವೀಪದಿಂದ ಕೇರಳಕ್ಕೆ ಹೋಗುವ ಹಡಗುಗಳು ಮಂಗಳೂರಲ್ಲಿ ತಂಗುವಂತಾದರೆ ಸ್ಥಳೀಯ ಅಭಿವೃದ್ಧಿಗದು ಪೂರಕವಾಗುತ್ತದೆಂಬ ಯೋಚನೆ ಶಾಸಕರಾಗಿದ್ದ ಲೋಬೋರದಾಗಿತ್ತು. ಲೋಬೋ ಲಕ್ಷದ್ವೀಪಕ್ಕೆ ಹೋಗಿ, ಪ್ರತ್ಯೇಕ ಬಂದರು ಕಟ್ಟೆಯ ನಿರ್ಮಾಣಕ್ಕೆ ಅಲ್ಲಿನ ಸರಕಾರ ಬಂಡವಾಳ ಹಾಕುವಂತೆ ಮನವೊಲಿಸಿದ್ದರು. 200 ಕೋಟಿ ಹೂಡಿಕೆಗೆ ಲಕ್ಷದ್ವೀಪ ಸರಕಾರ ಒಪ್ಪಿಗೆಯೂ ಸೂಚಿಸಿತ್ತು. ಆ ಯೋಜನೆ ಈಗ ಮಂಜೂರಾಗಿದೆ. ಇಂಥ ಯೋಚನೆಯೊಂದೂ ಶಾಸಕ-ಸಂಸದರಿಂದ ಈಗ ಆಗುತ್ತಿಲ್ಲ; ಧರ್ಮಕಾರಣ ನಿರಾಯಾಸವಾಗಿ ದಂಡಿಯಾಗಿ ಓಟು ತರುತ್ತಿರುವುದರಿಂದ ಈ ರೀತಿಯ ಪ್ರಗತಿ ಪ್ಲಾನುಗಳ ಉಸಾಬರಿಯೇ ಬಿಜೆಪಿಯವರಿಗೆ ಬೇಡವಾಗಿದೆಯೆಂದು ಜನರು ಬೇಸರದಿಂದ ಹೇಳುತ್ತಾರೆ.
ಟಿಕೆಟ್ ತಂತ್ರಗಾರಿಕೆ!
ಸಂಘಪರಿವಾರದ ಹೈಕಮಾಂಡ್ ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಹಲವು ಹಾಲಿ ಶಾಸಕರಿಗೆ ಮನೆಗೆ ಕಳಿಸಿ ಹೊಸ ಕುದುರೆಗಳನ್ನು ಅಖಾಡಕ್ಕೆ ಇಳಿಸಲಿದೆಯೆಂಬ ಸುದ್ದಿಗಳಿವೆಯಾದರೂ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ವೇದವ್ಯಾಸ ಕಾಮತ್‌ಗೆ ಟಿಕೆಟ್ ತಪ್ಪುವ ಸಾಧ್ಯತೆಯಿಲ್ಲವೆಂಬ ಮಾತು ಬಿಜೆಪಿ ಪಡಸಾಲೆಯಲ್ಲಿದೆ. ಕಳೆದ ಬಾರಿ ಅನಿರೀಕ್ಷತವಾಗಿ ಕಾಮತ್‌ರಿಗೆ ಬಿಜೆಪಿ ಟಿಕೆಟ್ ಲಾಟರಿ ಹೊಡೆದಿದ್ದರ ಹಿಂದೊಂದು ’ಕೊಲೆ ಕಹಾನಿ’ ಸಹ ಇದೆ! ಸಂಸದ ನಳಿನ್‌ಕುಮಾರ್ ಕಟೀಲ್ ಪರಮಾಪ್ತ ಮತ್ತು ಚಕ್ರವರ್ತಿ ಸೂಲಿಬೆಲೆಯ ’ಮೋದಿ ಬ್ರಿಗೇಡ್’ ಸಂಸ್ಥಾಪಕರಲ್ಲಿ ಒಬ್ಬನಾದ ನರೇಶ್ ಶೆಣೈಗೆ ಟಿಕೆಟ್ ಕೊಡುವ ತೀರ್ಮಾನ ಆಗಿತ್ತು. 2018ರಲ್ಲಿ ಶಾಸಕ ಯೋಗಿಶ್ ಭಟ್ ಬದಲಿಗೆ ನರೇಶ್ ಶೆಣೈ ಅಭ್ಯರ್ಥಿಯೆಂಬುದು ಬಿಜೆಪಿಯಲ್ಲಿ ಪಕ್ಕಾ ಆಗಿತ್ತು. ನರೇಶ್ ಚುನಾವಣಾ ತಯಾರಿಯೂ ನಡೆಸಿದ್ದರು.
ಮಂಗಳೂರಿನ ಪ್ರಭಾವಿ ವರ್ತಕ ಕೊಂಕಣಿ ಸಮುದಾಯದ ಆರಾಧ್ಯದೈವ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಆಯಕಟ್ಟಿ ಜಾಗದಲ್ಲಿದ್ದ ನರೇಶ್ ಶೆಣೈ ಮೇಲೆ ಕೋಟ್ಯಾಂತರ ರೂ ಅವ್ಯವಹಾರದ ಆರೋಪ ಕೇಳಿಬಂದಿತ್ತು. ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದರು. ಬಾಳಿಗರನ್ನು ಸುಫಾರಿ ಕೊಟ್ಟು ಕೊಲ್ಲಿಸಲಾಯಿತು. ಈ ಕೊಲೆ ಪ್ರಕರಣದಲ್ಲಿ ಸಂಘಪರಿವಾರದ ಮುಂದಾಳು ನರೇಶ್ ಶೆಣೈ ಪ್ರಮುಖ ಆರೋಪಿಯೆಂದು ಪರಿಗಣಿಸಿ ಪೊಲೀಸರು ಹುಡುಕಾಟ ನಡೆಸಿದ್ದರು.
ಕರಾವಳಿಯಲ್ಲಿ ತೀವ್ರ ಕತೂಹಲ ಕೆರಳಿಸಿದ್ದ ಬಾಳಿಗಾ ಮರ್ಡರ್ ಕೇಸ್ ಆರೋಪಿ ನರೇಶ್ ಶಣೈ ಹಲವು ತಿಂಗಳು ತಲೆಮರೆಸಿಕೊಂಡಿದ್ದರು. ಬಿಜೆಪಿಯ ಅಧಿಕಾರಸ್ಥರು ನರೇಶ್‌ಗೆ ಆಶ್ರಯ ಕೊಟ್ಟಿದ್ದಾರೆಂಬ ಮಾತೂ ಕೇಳಿಬಂದಿತ್ತು! ಕೊನೆಗೆ ನರೇಶ್ ಪೊಲೀಸರಿಗೆ ಶರಣಾಗಬೇಕಾಯಿತು. ಜೈಲು ಸೇರಿದ ನರೇಶ್‌ಗೆ ಬಿಜೆಪಿ ಟಿಕೆಟ್ ತಪ್ಪಿತು. ನರೇಶ್ ತನ್ನ ಆತ್ಮೀಯ ಮಿತ್ರ ವೇದವ್ಯಾಸ್ ಕಾಮತ್ ಬಿಜೆಪಿ ಅಭ್ಯರ್ಥಿ ಆಗುವಂತೆ ನೋಡಿಕೊಂಡರು ಎನ್ನಲಾಗುತ್ತಿದೆ. ಜಾಮೀನಿನಲ್ಲಿ ಹೊರಗಿರುವ ನರೇಶ್ ಇವತ್ತಿಗೂ ಸಂಘ ಮತ್ತು ಬಿಜೆಪಿಯಲ್ಲಿ ಪ್ರಭಾವಿ ಆಗಿರುವುದರಿಂದ ಕಾಮತರಿಗೆ 2023ರಲ್ಲಿ ಟಿಕೆಟ್ ಗ್ಯಾರಂಟಿ ಎಂಬ ಸುದ್ದಿ ವಿಶ್ಲೇಷಣೆ ಜಿಲ್ಲೆಯ ರಾಜಕೀಯ ವಲಯದಲ್ಲಿ ನಡೆದಿದೆ. ಕಟ್ಟರ್ ಸಂಘಿಗಳಿಗೂ ಕಾಮತ್ ಅಚ್ಚುಮೆಚ್ಚು.
ಇತ್ತ ಕಾಂಗ್ರೆಸ್‌ನಲ್ಲಿ ಕ್ಯಾಂಡಿಡೇಟಾಗಲು ಮಾಜಿ ಶಾಸಕ ಜೆ.ಆರ್.ಲೋಬೋ ಮತ್ತು ಮಾಜಿ ಎಮ್ಮೆಲ್ಸಿ ಐವಾನ್ ಡಿಸೋಜಾ ನಡುವೆ ಬಿರುಸಿನ ಪೈಪೋಟಿ ನಡೆದಿದೆ. ಲೋಬೋರಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಗಾಡ್‌ಫಾದರ್ ಆದರೆ ಐವಾನ್ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಶಿಷ್ಯರೆನ್ನಲಾಗುತ್ತಿದೆ. ಅಂತಿಮವಾಗಿ ಕ್ಯಾಥಲಿಕ್ ಚರ್ಚ್ ಯಾರಿಗೆ ಆಶೀರ್ವಾದ ಮಾಡುತ್ತದೋ ಅವರು ಟಿಕೆಟ್ ಹೋರಾಟದಲ್ಲಿ ಗೆಲ್ಲುತ್ತಾರೆಂಬ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಿಂದೂ ಸಮುದಾಯದ, ಅದರಲ್ಲೂ ಬಿಲ್ಲವ ಜಾತಿಯ ಪರಿಚಿತ ಮುಖಕ್ಕೆ ಅವಕಾಶ ಕೊಡುವ ಸೋಶಿಯಲ್ ಇಂಜಿನಿಯರಿಂಗ್ ಪ್ರಯೋಗ ಮಾಡಿದರೆ ಫಲ ಸಿಗಬಹುದೆಂದು ಕಾಂಗ್ರೆಸ್‌ನ ಒಂದು ವರ್ಗ ಹೇಳುತ್ತಿದೆ. ಹಾಗೇನಾದರೂ ಕಾಂಗ್ರೆಸ್ ಬಿಲ್ಲವ ಹುರಿಯಾಳನ್ನು ಅಖಾಡಕ್ಕಿಳಿಸಿದ್ದೇ ಆದರೆ ಕದನ ಕುತೂಹಲ ಏರ್ಪಡಲಿದೆಯೆಂದು ರಾಜಕೀಯ ತಂತ್ರಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು: ಕೇಸರಿ-ಹಸಿರು ಚಕ್ರವ್ಯೂಹ ಬೇಧಿಸಿ ಬರುವರೆ ಸೆಕ್ಯುಲರ್ ಖಾದರ್?


