ಸಹ್ಯಾದ್ರಿ ಮಡಿಲಲ್ಲಿ ಮೈದುಂಬಿ ಹರಿಯುವ ತುಂಗೆ-ಭದ್ರೆಯರ ಸಿಂಚನದಿಂದ ಹಚ್ಚಹಸುರಾಗಿ ನಳನಳಿಸುವ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಶುದ್ಧ ಹಳ್ಳಿ ಸೊಗಡಿನ ಸೀಮೆ. ಈ ಜೀವ ನದಿಗಳ ಪಾತ್ರದುದ್ದಕ್ಕೂ ಆಚೀಚೆ ಸಮೃದ್ಧವಾಗಿ ಬೆಳೆದಿರುವ ನಯನ ಮನೋಹರ ಅಡಿಕೆ ತೋಟಗಳು, ಭತ್ತದ ಗದ್ದೆಗಳು ಮತ್ತು ನಿತ್ಯ ಹರಿದ್ವರ್ಣ ಕಾಡುಗಳು ಮಲೆನಾಡಿನ ಬೆಡಗು-ಬಿನ್ನಾಣಕ್ಕೆ ಅನ್ವರ್ಥದಂತಿದೆ. ಗ್ರಾಮೀಣ ಭಾಗದ ಕೃಷಿ-ಕಸುಬು, ಸಂಸ್ಕೃತಿ-ಸಂಪ್ರದಾಯದ ಒಟ್ಟಾರೆ ಜನಜೀವನ ನಗರವನ್ನೂ ಒಳಗೊಂಡಂತೆ ಇಡೀ ಶಿವಮೊಗ್ಗ ತಾಲೂಕಿನ ಅಸ್ಮಿತೆ! ಜಿಲ್ಲೆಯ ಬೇರೆಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ತೀರ ಹಿಂದುಳಿದಿರುವ ಈ ಗ್ರಾಮೀಣ ಕಾನ್‌ಸ್ಟಿಟುಯೆನ್ಸಿ ವಿಸ್ತಾರದಲ್ಲೂ ಆಗಾಧ ಹರವು ಹೊಂದಿದೆ.
ಇತಿಹಾಸ-ಸಂಸ್ಕೃತಿ ಮತ್ತು ಆರ್ಥಿಕತೆ
ಶಿವಮೊಗ್ಗವನ್ನು ಹಿಂದೆ ’ಮಂಡ್ಲಿ’ ಎಂದು ಕರೆಯಲಾಗುತ್ತಿತ್ತು. ಆ ನಂತರ ’ಶಿವಮೊಗ್ಗ’ ಎಂದು ನಾಮಕರಣವಾದ ಕುರಿತು ಹಲವಾರು ಪ್ರತೀತಿಗಳಿವೆ; ಒಂದು ದಂತಕತೆಯ ಪ್ರಕಾರ ಮಂಡ್ಲಿ ಕಾಲಕ್ರಮೇಣ ಶಿವಮೊಗ್ಗೆ ಆಗಿದೆ. ಇದರರ್ಥ ಶಿವನ-ಮೊಗ್ಗೆ. ಅಂದರೆ ಹಿಂದು ದೇವರಾದ ಶಿವನಿಗೆ ಅರ್ಪಿಸಬೇಕಾದ ಹೂವುಗಳು. ನಂತರ ಜನಪದ ರೂಢಿಯಲ್ಲಿ ’ಶಿವಮೊಗ್ಗ’ ಆಯಿತು ಎನ್ನಲಾಗುತ್ತಿದೆ. ಮೌರ್ಯ ಸಾಮ್ರಾಟ ಅಶೋಕನಿಂದ ಕದಂಬರು-ವಿಜಯನಗರ ಅರಸರವರೆಗೆ, ಅಲ್ಲಿಂದ ಕೆಳದಿಯ ನಾಯಕರು-ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನ್-ಮೈಸೂರು ಸಂಸ್ಥಾನದ ತನಕ ಹಲವು ರಾಜವಂಶಗಳು ಶಿವಮೊಗ್ಗವನ್ನು ಆಳಿವೆಯೆಂದು ಇತಿಹಾಸ ಹೇಳುತ್ತದೆ. ಬಹು ಭಾಷಾ ಸಾಂಸ್ಕೃತಿಕ ನೆಲ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ; ಕನ್ನಡ ಪ್ರಮುಖ ಭಾಷೆಯಾದರೂ ಲಂಬಾಣಿ, ಉರ್ದು, ತಮಿಳು, ಕೊಂಕಣಿ, ಹವ್ಯಕ ಕನ್ನಡ ಭಾಷೆಗಳು ಕೇಳಿಬರುತ್ತವೆ.
ಮಲೆನಾಡಿನ ಸಂಸ್ಕೃತಿಯ ಶಿವಮೊಗ್ಗ ಗ್ರಾಮೀಣ ಭಾಗದಲ್ಲಿ ವೀರಗಾಸೆ, ಡೊಳ್ಳು ಕುಣಿತ, ಅಂಟಿಗೆಪಿಂಟಿಗೆ, ಹೋರಿ ಬೆರೆಸುವ (ಓಡಿಸುವ) ಸ್ಪರ್ಧೆಯ ಸಂಪ್ರದಾಯವಿದೆ; ಸೂಫಿ ಸಂಸ್ಕೃತಿ ಮುಸ್ಲಿಮರಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಲಂಬಾಣಿ ಸಮುದಾಯವಿದ್ದು ಅವರದೆ ಆದ ವಿಶಿಷ್ಟ ಸಾಂಸ್ಕೃತಿಕ ಸೊಬಗಿದೆ. ವಿವಿಧ ರೀತಿ-ರಿವಾಜಿನ ವಲಸಿಗ ತಮಿಳರಿದ್ದಾರೆ. ಜನ ವಸತಿಯ ತ್ಯಾವರೆಕೊಪ್ಪ ಅರಣ್ಯದಲ್ಲಿ ಹುಲಿ-ಸಿಂಹ ಧಾಮವಿದೆ; ಪ್ರಕೃತಿ ಚೆಲುವಿನ ತುಂಗ-ಭದ್ರಾ ನದಿ ಸಂಗಮ ಕೂಡ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಪರಿಧಿಯಲ್ಲಿದೆ. ಕೃಷಿಯಿಂದ ಬದುಕು ಕಟ್ಟಿಕೊಂಡು, ಉಳುಮೆ ನಂಬಿ ಬದುಕಿರುವ ಶಿವಮೊಗ್ಗೆಯ ಹಳ್ಳಿಗಳ ರೈತರು ಹೊತ್ತು ಮೂಡುತ್ತಲೇ ಟ್ರ್ಯಾಕ್ಟರ್ ಹತ್ತಿ ಹೊಲಕ್ಕೆ ಹೋದರೆ, ಯುವಕ-ಯುವತಿಯರು ಬ್ಯಾಗು ಹೊತ್ತುಕೊಂಡು ನಗರಗಳಿಗೆ ಹೊಟ್ಟೆಪಾಡಿನ ಚಾಕರಿಗೆ ಹೋಗುತ್ತಾರೆ.

ದಲಿತ ಸಮುದಾಯದ ಲಂಬಾಣಿ, ಮಾದಿಗ, ಬೋವಿ ಮುಂತಾದ ಉಪಜಾತಿಯ ಜನರು, ದೀವರು, ಬ್ರಾಹ್ಮಣರು, ಮುಸ್ಲಿಮರು, ಕ್ರಿಶ್ಚಿಯನ್ನರು, ಗೌಂಡರ್ ಮತ್ತಿತರ ತಮಿಳು ವರ್ಗದವರು ಇರುವ ಶಿವಮೊಗ್ಗ ಗ್ರಾಮೀಣ ಕ್ಷೇತ್ರದಲ್ಲಿ ಲಿಂಗಾಯತರ ಏಕಸ್ವಾಮ್ಯ ಎನ್ನಲಾಗುತ್ತದೆ. ಜಮೀನ್ದಾರಿ ದರ್ಪ, ಮೇಲು-ಕೀಳು ತಾರತಮ್ಯ ಮತ್ತು ಶೋಷಣೆ ಕಂಡೂಕಾಣದಂತಿದೆ. ತುಂಗಾ ನೀರಾವರಿ ಕಾಲುವೆ, ತುಂಗಾ ಏತ ನೀರಾವರಿಯಿಂದ ಗ್ರಾಮೀಣ ಪ್ರದೇಶ ಕೃಷಿಪ್ರಧಾನವಾಗಿದೆ. ಎಕರೆಗಟ್ಟಲೆ ಅಡಿಕೆ ತೋಟ-ಭತ್ತದ ಗದ್ದೆಯ ಮೇಲ್ವರ್ಗದ ಜಮೀನ್ದಾರರಿರುವ ಕ್ಷೇತ್ರದಲ್ಲಿ ಅಂಗೈ ಅಗಲದ ಜಾಗವೂ ಇಲ್ಲದ-ಉಳ್ಳವರ ಜಮೀನಿನಲ್ಲಿ ಗೇಯುವ- ಬಡ ಕೃಷಿ ಕಾರ್ಮಿಕರಿದ್ದಾರೆ; ಬದುಕಲು ಅರಣ್ಯ ಸಾಗುವಳಿ ಮಾಡಿಕೊಂಡಿರುವ ಬಗರ್ ಹುಕುಮ್ ರೈತಾಪಿ ವರ್ಗವಿದೆ; ಜಲ ವಿದ್ಯುತ್ ಯೋಜನೆಯಿಂದ ನೆಲೆ ಕಳೆದುಕೊಂಡ ಮುಳುಗಡೆ ಪ್ರದೇಶದ ಮಂದಿಯಿದ್ದಾರೆ.
ತುಂಗೆಯ ಒಂದು ದಂಡೆಯಲ್ಲಿ ಅಡಿಕೆ ಹೆಚ್ಚು ಬೆಳೆದರೆ, ಮತ್ತೊಂದು ತೀರದಲ್ಲಿ ಭತ್ತದ ವ್ಯವಸಾಯ ಮಾಡಲಾಗುತ್ತಿದೆ. ಅಡಿಕೆ, ಭತ್ತ ಮತ್ತು ಶುಂಠಿ ಜೀವನಾಧಾರ ಬೆಳೆಗಳು. ಗ್ರಾಮೀಣ ಭಾಗದ ಆರ್ಥಿಕತೆಯೂ ಈ ಮೂರು ಕೃಷಿ ಉತ್ಪನ್ನವನ್ನೇ ಅವಲಂಬಿಸಿದೆ. ಅಡಿಕೆ ಹಾಳೆಯ ಲೋಟ-ಪ್ಲೇಟು ತಯಾರಿಕೆಯಂಥ ಕೃಷಿ ಆಧಾರಿತ ಗುಡಿಕೈಗಾರಿಕೆಗಳಿವೆ; ಕ್ಷೇತ್ರದಲ್ಲಿ ಒಂದು ಕೈಗಾರಿಗಾ ವಸಾಹತು ಇದೆಯಾದರೂ ಅಲ್ಲಿ ಕ್ಷೇತ್ರದ ದುಡಿವ ಕೈಗಳಿಗೆ ಕೆಲಸ ದೊರೆತಿರುವುದು ಅಷ್ಟಕ್ಕಷ್ಟೇ ಎಂದು ಜನರು ಹೇಳುತ್ತಾರೆ. ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಬದುಕು ನಡೆಸಲು ಅನಕೂಲ ಕಲ್ಪಿಸುವ ಉದ್ಯಮ-ಕೈಗಾರಿಕೆ ತರುವ ಯೋಚನೆ ಈವರೆಗಿನ ಯಾವ ಶಾಸಕ-ಸಂಸದರಿಗೂ ಹೊಳೆದಿಲ್ಲ ಎಂಬ ಬೇಸರದ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತದೆ. ಉನ್ನತ ಶಿಕ್ಷಣ, ವೈದ್ಯಕೀಯ ಸೌಲಭ್ಯ, ಅಗತ್ಯ ಖರೀದಿ ಮತ್ತು ವಹಿವಾಟಿಗೆಲ್ಲ ಶಿವಮೊಗ್ಗ ನಗರಕ್ಕೆ ಹೋಗಬೇಕಾಗಿದೆ; ಇಲ್ಲಿಂದ ಶಾಸಕರಾದ ’ನಾಯಕ’ರ ನಾಟಿ ರಾಜಕಾರಣದ ಅಭಿವೃದ್ಧಿ ಮತ್ತು ಮಾಮೂಲಿ ಬಜೆಟ್ ಕಾಮಗಾರಿಗಳ ಪ್ರಗತಿ ಬಿಟ್ಟರೆ ಸಂಸದರು, ಸಚಿವರಂಥವರ ನಿರಂತರ ಅವಜ್ಞೆಗೆ ಈಡಾಗುತ್ತಿರುವ ಪ್ರದೇಶವಿದು ಎನ್ನಲಾಗುತ್ತಿದೆ.
ಕ್ಷೇತ್ರ ಪರಿಚಯ
ಶಿವಮೊಗ್ಗ ಗ್ರಾಮಾಂತರ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರ. ಇದು ಬಹುತೇಕ 1978ರಲ್ಲಿ ರಚನೆಯಾದ ಹೊಳೆಹೊನ್ನೂರು ಕ್ಷೇತ್ರವನ್ನು ಒಳಗೊಂಡಿದೆ. 2007ರಲ್ಲಿ ಮಾಡಲಾದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಮಿತಿ ಪುನರ್ ರಚನೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಎರಡು ವಾರ್ಡ್ ಮತ್ತು ತಾಲೂಕಿನ ಅಷ್ಟೂ ಗ್ರಾಮಗಳ ಜತೆ ಭದ್ರಾವತಿ ಹಾಗು ಹೊಸನಗರ ತಾಲೂಕುಗಳ ಕೆಲವು ಹಳ್ಳಿಗಳನ್ನು ಸೇರಿಸಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರವೆಂದು ನಾಮಕರಣ ಮಾಡಲಾಗಿದೆ. ದಲಿತ ಬಾಹುಳ್ಯದ ಈ ಕ್ಷೇತ್ರದಲ್ಲಿ ಲಿಂಗಾಯತರು ದ್ವಿತೀಯ ಬಹುಸಂಖ್ಯಾತರು. ಇಲ್ಲಿಂದ ಯಾರೇ ಎಮ್ಮೆಲ್ಲೆಯಾದರೂ ರಾಜಕೀಯವಾಗಿ ಬಲಾಢ್ಯರಾದ ಲಿಂಗಾಯತರು ಅಂಕಿತದಲ್ಲಿ ಇಟ್ಟುಕೊಂಡು ಪಳಗಿಸುತ್ತಾರೆಂಬ ಮಾತು ಸಾಮಾನ್ಯವಾಗಿದೆ.
ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ) ಕ್ಷೇತ್ರದಲ್ಲಿ ಒಟ್ಟು 2,11,546 ಮತದಾರರಿದ್ದಾರೆ. ಇದರಲ್ಲಿ ಆದಿ ದ್ರಾವಿಡ 25 ಸಾವಿರ, ಬೋವಿ 24ಸಾವಿರ, ಲಂಬಾಣಿ 20 ಸಾವಿರ, ಲಿಂಗಾಯತರು 55 ಸಾವಿರ, ಮುಸ್ಲಿಮರು 25 ಸಾವಿರ, ದೀವರು 12 ಸಾವಿರ, ಒಕ್ಕಲಿಗರು ಮತ್ತು ತಮಿಳರು ತಲಾ 10 ಸಾವಿರ ಮತ್ತು ಕ್ರಿಶ್ಚಿಯನ್ನರು, ಬ್ರಾಹ್ಮಣರೆ ಮುಂತಾದ ಸಣ್ಣ-ಪುಟ್ಟ ಜಾತಿಯ ಮತದಾರರು ಇರಬಹುದೆಂದು ಅಂದಾಜಿಸಲಾಗಿದೆ. 1978ರಲ್ಲಿ ಕ್ಷೇತ್ರಗಳ ಮೀಸಲಾತಿಯನ್ನು ಪುನರ್ ವಿಂಗಡಿಸಿದಾಗ ಆವರೆಗೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಶಿಕಾರಿಪುರ ಸಾಮಾನ್ಯ ಕ್ಷೇತ್ರವಾಯಿತು; ದಲಿತರು ಹೆಚ್ಚಿದ್ದ ಭದ್ರಾವತಿಯ ಹೊಳೆಹೊನ್ನೂರು ಹೋಬಳಿಯ ಸುತ್ತಲಿನ ಶಿವಮೊಗ್ಗೆಯ ಗ್ರಾಮಗಳನ್ನು ಸೇರಿಸಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಾದ ಹೊಳೆಹೊನ್ನೂರು ಎಂಬ ಹೊಸ ಕ್ಷೇತ್ರ ರಚನೆ ಮಾಡಲಾಯಿತು.
ಪಕ್ಷಾಂತರ ಪ್ರವೀಣ
ಶಿಕಾರಿಪುರದಲ್ಲಿ 1967ರಿಂದ 1972ರ ತನಕ ಪ್ರಜಾ ಸೋಷಲಿಸ್ಟ್ ಪಕ್ಷದ ಶಾಸಕರಾಗಿದ್ದ ಜಿ.ಬಸವಣ್ಯೆಪ್ಪ ಹೊಳೆಹೊನ್ನೂರಿನ ಮೊದಲ ಶಾಸಕರು. ಬಂಗಾರಪ್ಪ ಮತ್ತಿತರ ಸಮಾಜವಾದಿಗಳೊಂದಿಗೆ 1978ರ ಚುನಾವಣೆಗೂ ಮೊದಲು ಬಸವಣ್ಯೆಪ್ಪ ಕಾಂಗ್ರೆಸ್ ಸೇರಿದ್ದರು. ದೇವರಾಜ ಅರಸು 1978ರ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಬಸವಣ್ಯೆಪ್ಪರನ್ನು ಕಾಂಗ್ರೆಸ್‌ನಿಂದ ಹೊಳೆಹೊನ್ನೂರು ಆಖಾಡಕ್ಕೆ ಇಳಿಸಿದರು. ಲಂಬಾಣಿ ಸಮುದಾಯದ ಕೆ.ಜಿ. ಚನ್ನಾ ನಾಯ್ಕ್ ಜನತಾ ಪಕ್ಷದ ಅಭ್ಯರ್ಥಿ ಆಗಿದ್ದರು. 28,160 ಮತ ಪಡೆದಿದ್ದ ಬಸವಣ್ಯೆಪ್ಪ 5,673 ಮತದಂತರದಿಂದ ಎದುರಾಳಿಯನ್ನು ಪರಾಭವಗೊಳಿಸಿ ಶಾಸನಸಭೆಗೆ ಪ್ರವೇಶ ಪಡೆದರು. 1983ರ ಚುನಾವಣೆ ಎದುರಾದಾಗ ಕಾಂಗ್ರೆಸ್ ವಿರುದ್ಧ ಬಂಡೆದ್ದಿದ್ದ ಬಂಗಾರಪ್ಪರ ಸಂಗಡ ಬಸವಣ್ಯೆಪ್ಪ ಅರಸು ಕಟ್ಟಿದ್ದ ಕ್ರಾಂತಿರಂಗಕ್ಕೆ ಹೋದರು. ಬಸವಣ್ಯೆಪ್ಪ 1983ರಲ್ಲಿ ಜನತಾ ಪಕ್ಷದ ನೇಗಿಲು ಹೊತ್ತ ರೈತ ಚಿನ್ಹೆಯ ಅಭ್ಯರ್ಥಿ; ಕಾಂಗ್ರೆಸ್ ಹುರಿಯಾಳು ಚನ್ನಾ ನಾಯ್ಕ್. ಈ ಮುಖಾಮುಖಿಯಲ್ಲಿ 30,056 ಮತ ಪಡೆದ ಬಸವಣ್ಯೆಪ್ಪ ಕಾಂಗ್ರೆಸ್‌ನ ಚನ್ನಾ ನಾಯ್ಕ್‌ರನ್ನು (25,413) ಮಣಿಸಿದರು. ಆ ಸಂದರ್ಭದಲ್ಲಿ ಬಿಜೆಪಿಗೆ ದೊರೆತಿದ್ದು ಕೇವಲ 965 ಓಟುಗಳಷ್ಟೆ!

1983ರಲ್ಲಿ ಮೊದಲ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಸರಕಾರ ಬಂದಿತ್ತು. ಜನತಾರಂಗ ಸರಕಾರ ಸ್ಥಾಪನೆಗೆ ಶ್ರಮಿಸಿದ್ಧ ಬಂಗಾರಪ್ಪ, ದೇವೇಗೌಡ, ಎಸ್.ಆರ್.ಬೊಮ್ಮಾಯಿ, ನಜೀರ್ ಸಾಬ್‌ರಂಥವರ ಬಿಟ್ಟು ದಿಲ್ಲಿ ರಾಜಕಾರಣ ಮಾಡಿಕೊಂಡಿದ್ದ ರಾಜ್ಯಸಭಾ ಸದಸ್ಯ ರಾಮಕೃಷ್ಣ ಹೆಗಡೆಯನ್ನು ಸಿಎಂ ಮಾಡಲಾಗಿಯಿತು. ಇದರಿಂದ ಕೆರಳಿದ ಬಂಗಾರಪ್ಪ ಬಂಡೆದ್ದರು. ಬಂಗಾರಪ್ಪ ಜತೆಗಾರರಾಗಿದ್ದ ಬಸವಣ್ಯೆಪ್ಪ ನಿಷ್ಠಾಂತರ ಮಾಡಿ ಹೆಗಡೆ ಹಿಂಬಾಲಕರಾದರು. ಹೆಗಡೆ ಬಸವಣ್ಯೆಪ್ಪರಿಗೆ ಮಂತ್ರಿಗಿರಿ ಕೊಟ್ಟರು! 1985ರ ನಡುಗಾಲ ಚುನಾವಣೆ ಬರುವಾಗ ಬಂಗಾರಪ್ಪ ಜನತಾ ರಂಗಕ್ಕೆ ಸೋಡಾ ಚೀಟಿ ಕೊಟ್ಟು ಕಾಂಗ್ರೆಸ್ಸಿಗೆ ಮರಳಿದರೂ ಬಸವಣ್ಯೆಪ್ಪ ಮಾತ್ರ ಜನತಾ ಪಕ್ಷದಲ್ಲೆ ಉಳಿದರು. ಬಸವಣ್ಯೆಪ್ಪರಿಗೆ 1985ರಲ್ಲಿ ಜನತಾ ಪಕ್ಷದ ಟಿಕೆಟ್ ಗಿಟ್ಟಿಸುವುದು ಕಷ್ಟವಾಗಲಿಲ್ಲ. ಬಂಗಾರಪ್ಪ ಮಾದಿಗ ಸಮುದಾಯದ ಕರಿಯಣ್ಣರನ್ನು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಇಳಿಸಿದರು.
ಆ ಹೊತ್ತಿನಲ್ಲಿ ಜನತಾ ಪಕ್ಷದ ಪ್ರಬಲ ಒಕ್ಕಲಿಗ ನಾಯಕರಾಗಿದ್ದ ದೇವೇಗೌಡರೊಂದಿಗೆ ಪ್ರಚ್ಛನ್ನ ಸಮರಕ್ಕಿಳಿದಿದ್ದ ರಾಮಕೃಷ್ಟ ಹೆಗಡೆ ಲಿಂಗಾಯತ ಪರವೆಂಬ ಭಾವನೆ ರಾಜ್ಯದಾದ್ಯಂತ ಮೂಡಿತ್ತು. ಇದು ಹೊಳೆಹೊನ್ನೂರಿನ ನಿರ್ಣಾಯಕ ಲಿಂಗಾಯತ ಕೋಮಿನ ಮತ ದಂಡಿಯಾಗಿ ಬಸವಣ್ಯೆಪ್ಪರಿಗೆ ಬೀಳುವಂತೆ ಮಾಡಿತ್ತು; ಬಂಗಾರಪ್ಪ ಬಲದಿಂದ ಪ್ರಬಲ ಹೋರಾಟ ಕೊಟ್ಟ ಕರಿಯಣ್ಣ (30,388) ಗೆಲುವಿನ ಹೊಸ್ತಿಲಿಗೆ ಬಂದು ಎಡವಿದರು; ಬಸವಣ್ಣೆಪ್ಪ ಕೇವಲ 2,648 ಮತಗಳಿಂದ ಮೂರನೆ ಬಾರಿ ಶಾಸಕರಾದರು ಎಂದು ಅಂದಿನ ರೋಚಕ ಕಾಳಗ ಕಂಡ ಹಿರಿಯರು ಹೇಳುತ್ತಾರೆ. ಹೆಗಡೆ ಈ ಬಾರಿ ಬಸವಣ್ಯೆಪ್ಪರನ್ನು ಕ್ಯಾಬಿನೆಟ್ ಮಂತ್ರಿ ಮಾಡಿದರು.
1989ರ ಸಾರ್ವತ್ರಿಕ ಚುನಾವಣೆ ಎದುರಾದಾಗ ಜನತಾ ದಳವನ್ನು ಹೆಗಡೆ ಹಾಗು ದೇವೇಗೌಡರು ಪಾಲು ಮಾಡಿಕೊಂಡಿದ್ದರು. ಗೊಂದಲಕ್ಕೆ ಬಿದ್ದ ಬಸವಣ್ಯೆಪ್ಪ ಚುನಾವಣೆಗೆ ಇಳಿಯಲಿಲ್ಲ. ಲಿಂಗಾಯತ ವರ್ಗದ ಬಲಾಢ್ಯ ನಾಯಕರಾಗಿ ಅವತರಿಸಿದ್ದ ವೀರೇಂದ್ರ ಪಾಟೀಲ್ ಕಾಂಗ್ರೆಸ್‌ನ ಮುಖ್ಯಮಂತ್ರಿ ಕ್ಯಾಂಡಿಡೇಟಾಗಿದ್ದರು. ಹೀಗಾಗಿ ಹೊಳೆಹೊನ್ನೂರಿನ ಬಹುಸಂಖ್ಯಾತ ಲಿಂಗಾಯತರು ಕಾಂಗ್ರೆಸ್ ಕಡೆ ವಾಲಿದರು. ಕಾಂಗ್ರೆಸ್‌ನ ಕರಿಯಣ್ಣ (38,674), ಕರ್ನಾಟಕ ಕ್ರಾಂತಿ ಸಭಾದ (ಕೆಆರ್‌ಎಸ್) ಎಚ್.ಚೂಡಾ ನಾಯ್ಕ್ (22,940) ಮತ್ತು ಜನತಾ ದಳದ ಕೆ.ಜಿ.ಚನ್ನಾ ನಾಯ್ಕ್ (16,328) ನಡುವೆ ತ್ರಿಕೋನ ಕಾಳಗ ಏರ್‍ಪಟ್ಟಿತು. 15,734 ಮತಗಳ ದೊಡ್ಡ ಅಂತರದ ಗೆಲುವು ಕಂಡರು ಕರಿಯಣ್ಣ!
ಬಾಬರಿ ಮಸೀದಿ ಪತನದ ಬಳಿಕದ ಮತೀಯ ಧ್ರುವೀಕರಣದ ಸಂಚುಕೋರ ರಾಜಕಾರಣದ ಅಡ್ಡ ಪರಿಣಾಮಗಳು ಶಿವಮೊಗ್ಗ ತಾಲೂಕಿನಲ್ಲಿ ಆಗಿತ್ತು. 1994ರ ಅಸೆಂಬ್ಲಿ ಹಣಾಹಣಿಯಲ್ಲಿ ನಗರ ಕ್ಷೇತ್ರದ ಬಿಜೆಪಿ ಹುರಿಯಾಳು ಈಶ್ವರಪ್ಪ ದೊಡ್ಡ ಅಂತದಲ್ಲಿ ಗೆಲುವು ಕಂಡರೆ, ಇತ್ತ ಗ್ರಾಮಾಂತರದಲ್ಲಿ ಕೇಸರಿ ಪಾರ್ಟಿ ಮೊದಲ ಸಲ 15,182ರಷ್ಟು ಮತ ಗಳಿಸಿತ್ತು! ಆದರೆ ಪೈಪೋಟಿ ಏರ್‍ಪಟ್ಟಿದ್ದು ಜನತಾ ದಳದ ಬಸವಣ್ಯೆಪ್ಪ (24,999), ಕಾಂಗ್ರೆಸ್‌ನ ಕರಿಯಣ್ಣ (23,174) ಮತ್ತು ಕೆಆರ್‌ಎಸ್‌ನ ಚೂಡಾ ನಾಯ್ಕ್ (23,047) ಮಧ್ಯದಲ್ಲಿ ಮಾತ್ರವಾಗಿತ್ತು. ಈ ಕತ್ತು-ಕತ್ತಿನ ಹೋರಾಟದಲ್ಲಿ ಬಸವಣ್ಯೆಪ್ಪ ತೀರಾ ಸಣ್ಣ ಮತದಂತರದಿಂದ (1,825) ಗೆದ್ದರು. ಬಂಗಾರಪ್ಪನವರ ಕೆಸಿಪಿ ಅಭ್ಯರ್ಥಿ ಚನ್ನಾ ನಾಯ್ಕ್ ಕಾಂಗ್ರೆಸ್ ಮತಗಳನ್ನು ಒಡೆದದ್ದು ಬಸವಣ್ಯೆಪ್ಪರನ್ನು ಬಚಾವು ಮಾಡಿತೆಂದು ವಿಶ್ಲೇಷಿಸಲಾಗುತ್ತಿದೆ.
1999ರ ಚುನಾವಣೆ ಘೋಷಣೆಯ ಹೊತ್ತಿಗೆ ಜನತಾದಳ ’ಯು’ ಮತ್ತು ’ಎಸ್’ ಆಗಿ ಹೋಳಾಗಿತ್ತು. ಹೆಗಡೆ ಬೆಂಬಲಿಗರಾದ ಬಸವಣ್ಯೆಪ್ಪ ಜೆಡಿಯು ಕ್ಯಾಡಿಡೇಟಾದರೆ, ಜೆಡಿ(ಎಸ್) ಟಿಕೆಟ್ ಹಿಡಿದುಕೊಂಡು ರಾಯಚೂರಿಂದ ಬಿ.ಟಿ.ಲಲಿತಾ ನಾಯಕ್ ಬಂದಿದ್ದರು. ಕ್ಷೇತ್ರದಲ್ಲಿ ಪ್ರಭಾವವಿದ್ದ ಬಂಗಾರಪ್ಪ ಕಾಂಗ್ರೆಸ್‌ಗೆ ವಾಪಸಾಗಿದ್ದರು. ಆ ಸಂದರ್ಭದಲ್ಲಿ ನಾಲ್ಕು ಬಾರಿ ಗೆದ್ದಿದ್ದರೂ ಕ್ಷೇತ್ರದ ಅಭಿವೃದ್ದಿಗೆ ಬದ್ಧತೆಯ ಪ್ರಯತ್ನ ಮಾಡದ ಬಸವಣ್ಯೆಪ್ಪಗೆ ಆಂಟಿ ಇನ್‌ಕಂಬೆನ್ಸ್ ಸುತ್ತಿಕೊಂಡಿತ್ತು ಎನ್ನಲಾಗಿದೆ. ಪಕ್ಕದ ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಲಿಂಗಾಯತ ಕೋಮಿನ ಚಂದ್ರಶೇಖರಪ್ಪರಿಗೆ ಟಿಕೆಟ್ ಕೊಟ್ಟಿತು. ಬಂಗಾರಪ್ಪ ಅಸೆಂಬ್ಲಿ ಚುನಾವಣೆಯೊಂದಿಗೆ ನಡೆಯುತ್ತಿದ್ದ ಲೋಕಸಭೆ ಇಲೆಕ್ಷನ್‌ಗೆ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದರು.
ಇದೆಲ್ಲದರ ಪರಿಣಾಮವಾಗಿ ಕಾಂಗ್ರೆಸ್‌ನ ಕರಿಯಣ್ಣರಿಗೆ 44,512ರಷ್ಟು ಆಗಾಧ ಮತ ಬಂತು. ಬಸವಣ್ಯೆಪ್ಪ 15,389 ಮತಗಳ ಅಂತರದಿಂದ ಹೀನಾಯವಾಗಿ ಸೋಲುವಂತಾಯಿತೆಂಬ ವಿಶ್ಲೇಷಣೆಗಳು ಜಿಲ್ಲೆಯ ರಾಜಕೀಯದ ಪಡಸಾಲೆಯಲ್ಲಿದೆ. ರಾಮಕೃಷ್ಣ ಹೆಗಡೆ ನಿಧಾನವಾಗಿ ರಾಜಕೀಯ ನೇಪಥ್ಯಾಕ್ಕೆ ಸರಿಯುತ್ತಿದ್ದಂತೆ ಬಸವಣ್ಯೆಪ್ಪ ಬಿಜೆಪಿ ಸೇರಿಕೊಂಡರು. 2004ರಲ್ಲಿ ಬಿಜೆಪಿ ಟಿಕೆಟ್ಟನ್ನೂ ಪಡೆದರು. ಕಾಂಗ್ರೆಸ್‌ನ ಕರಿಯಣ್ಣ (43,769) ಮತ್ತು ಬಿಜೆಪಿಯ ಬಸವಣ್ಯೆಪ್ಪ (50,071) ಮಧ್ಯೆ ಹಣಾಹಣಿಯೇ ಆಗಿಹೋಯಿತು. ಆ ಚುನಾವಣೆಯಲ್ಲಿ ಬಂಗಾರಪ್ಪ ಬಿಜೆಪಿಯಲ್ಲಿದ್ದದ್ದು ಬಸವಣ್ಯೆಪ್ಪರಿಗೆ ಅನುಕೂಲವಾಗಿ ಗೆದ್ದರೆನ್ನಲಾಗುತ್ತಿದೆ.
ಶಿವಮೊಗ್ಗ ಗ್ರಾಮಾಂತರ
2008ರ ಸಾರ್ವತ್ರಿಕ ಚುನಾವಣೆ ಹೊತ್ತಲ್ಲಿ ಹೊಳೆಹೊನ್ನೂರು ಕ್ಷೇತ್ರ ಚಹರೆ ಬದಲಿಸಿಕೊಂಡು ಶಿವಮೊಗ್ಗ ಗ್ರಾಮಾಂತರ ಎಂದು ನಾಮಾಂತರಗೊಂಡಿತ್ತು. ಸಮಸ್ಯೆಯಲ್ಲಿರವ ಜನರಿಗೆ ಸ್ಪಂದಿಸುವುದಿಲ್ಲ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗ ಗಮನ ಹರಿಸುವುದಿಲ್ಲ ಎಂಬ ಆರೋಪ ಎದುರಿಸುತ್ತಿದ್ದ ಶಾಸಕ ಬಸವಣ್ಯೆಪ್ಪರಿಗೆ ಅಭ್ಯರ್ಥಿ ಮಾಡಲು ಯಡಿಯೂರಪ್ಪರಿಗೆ ಧೈರ್ಯವಿರಲಿಲ್ಲ ಎನ್ನಲಾಗಿದೆ. ಬಸವಣ್ಯೆಪ್ಪರ ಬೋವಿ ಸಮುದಾಯದವರೇ ಆದ ಕೆ.ಜಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ಒಲಿಯಿತು. ಬ್ಯಾಂಕ್ ಕರ್ಮಚಾರಿಗಳ ಯೂನಿಯನ್ ಮುಂದಾಳಾಗಿ, ಜಿಲ್ಲಾ ಪಂಚಾಯತ್ ಸದಸ್ಯನಾಗಿ ಸಂಘ ಸರದಾರರ ನಿಷ್ಠಾವಂತ ಎನಿಸಿಕೊಂಡಿದ್ದ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಸಾಂಪ್ರದಾಯಿಕ ಹುರಿಯಾಳು ಮಾಜಿ ಶಾಸಕ ಕರಿಯಣ್ಣ ಮುಖಾಮುಖಿಯಾದರು.

ಬಂಗಾರಪ್ಪ ಬಿಜೆಪಿಯಿಂದ ನಿರ್ಗಮಿಸಿದ್ದರಿಂದ ಯಡಿಯೂರಪ್ಪ ಜಿಲ್ಲೆಯ ಕೇಸರಿ ಪಕ್ಷದ ಸುಪ್ರಿಮೊ ಆಗಿದ್ದರು. ಜೆಡಿಎಸ್‌ನ ಕುಮಾರಸ್ವಾಮಿಯವರ ವಚನ ಭ್ರಷ್ಟತೆಯಿಂದ ಸಿಎಂ ಸ್ಥಾನದಿಂದ ವಂಚಿತರಾದರೆಂದು ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಪರವಾದ ಅನುಕಂಪದ ಅಲೆಯೆದ್ದಿತ್ತು. ಹಾಗಾಗಿ ಬಿಜೆಪಿಯ ಕುಮಾರಸ್ವಾಮಿ (56,979) ಕಾಂಗ್ರೆಸ್‌ನ ಕರಿಯಣ್ಣರನ್ನು (32,714) ನಿರಾಯಾಸವಾಗಿ ಮಣಿಸಿದರು.
ಶಾರದಾ ನಾಯ್ಕ್ ಪ್ರವೇಶ!!
ಬಿಜೆಪಿಗೆ ತಿರುಗಿಬಿದ್ದಿದ್ದ ಯಡಿಯೂರಪ್ಪ 2013ರ ಚುನಾವಣೆಗೆ ಮೊದಲು ಕೆಜೆಪಿ ಕಟ್ಟಿಕೊಂಡಿದ್ದರು. ಶಾಸಕ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಸಂಬಂಧ ಸಿಎಂ ಇರುವಾಗಲೆ ಹಳಸಿತ್ತು ಎಂಬ ಮಾತು ಕೇಳಿಬರುತ್ತಿದೆ. ಕುಮಾರಸ್ವಾಮಿ ಬಿಜೆಪಿ ಕ್ಯಾಂಡಿಡೇಟಾದರು; ಐದು ಬಾರಿ ಶಾಸಕರಾಗಿದ್ದ ಬಸವಣ್ಯೆಪ್ಪ ಕೆಜೆಪಿಯಿಂದ ಅಖಾಡಕ್ಕೆ ಧುಮುಕಿದರು. ಕಾಂಗ್ರೆಸ್ ಮತ್ತದೆ ಕರಿಯಣ್ಣರಿಗೆ ಟಿಕೆಟ್ ಕೊಟ್ಟಿತು. ಜಿಪಂ ಮಾಜಿ ಅಧ್ಯಕ್ಷೆ ಶಾರದಾ ಪೂರ್ಯಾ ನಾಯ್ಕ್ ಜೆಡಿಎಸ್ ಅಭ್ಯರ್ಥಿ. ಜನಾನುರಾಗಿ ಜಿಪಂ ಸದಸ್ಯನಾಗಿದ್ದ ಲಂಬಾಣಿ ಸಮುದಾಯದ ಪೂರ್ಯಾ ನಾಯ್ಕ್ ಭಾವಿ ಎಮ್ಮೆಲ್ಲೆ ಎಂಬ ಇಮೇಜು ಬೆಳೆಸಿಕೊಂಡಿದ್ದರು.
ಆದರೆ ತೀರಾ ಸಣ್ಣ ವಯಸ್ಸಿನಲ್ಲೆ ಪೂರ್ಯಾ ನಾಯ್ಕ್ ನಿಧನರಾದಾಗ ಅವರ ಮಡದಿ ರಾಜಕೀಯ ಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಎರಡು ಬಾರಿ ಜಿಪಂ ಸದಸ್ಯೆಯಾದ ಈ ದಲಿತ ಮಹಿಳೆ ಸಾಮಾನ್ಯ ಕ್ಷೇತ್ರದಿಂದ ಗೆದಿದ್ದು ರಾಜಕೀಯ ವಲಯದಲ್ಲಿ ಹುಬ್ಬೇರುವಂತೆಮಾಡಿತ್ತು. ಪತಿಯಂತೆ ಸದಾ ಜನರ ಕಷ್ಟ-ಸುಖಕ್ಕೆ ಸ್ಪಂದಿಸುವ ಶಾರದಾ ನಾಯ್ಕ್ 2013ರ ಅಸೆಂಬ್ಲಿ ಇಲೆಕ್ಷನ್ ಹೊತ್ತಿಗೆ ಎಲ್ಲ ವರ್ಗದ ವಿಶ್ವಾಸ ಗಳಿಸಿದ್ದರು. ಜೆಡಿಎಸ್‌ನ ಶಾರದಾ ನಾಯ್ಕ್ (48,639), ಕೆಜೆಪಿಯ ಬಸವಣ್ಯೆಪ್ಪ (38,530) ಮತ್ತು ಕಾಂಗ್ರೆಸ್‌ನ ಕರಿಯಣ್ಣರ (35,640) ಮಧ್ಯದಲ್ಲಿ ಜಿದ್ದಾಜಿದ್ದಿನ ತ್ರಿಕೋನ ಕಾಳಗ ಎರ್‍ಪಟ್ಟಿತು. ಶಾರದಾ ನಾಯ್ಕ್ ನಿಕಟ ಸ್ಪರ್ಧಿ ಬಸವಣ್ಯೆಪ್ಪರನ್ನು 10,109 ಮತಗಳಿಂದ ಸೋಲಿಸಿ ಶಾಸಕಿಯಾದರೆ ಬಿಜೆಪಿಗೆ ಠೇವಣಿಯೂ ಉಳಿಯಲಿಲ್ಲ.
ಬಿಜೆಪಿ ಕೇಂದ್ರ ನಾಯಕತ್ವದಿಂದ ಲಾಲ್ ಕೃಷ್ಣ ಆಡ್ವಾಣಿ ನೇಪಥ್ಯಕ್ಕೆ ಸರಿಯುತ್ತಿದ್ದಂತೆ ಯಡಿಯೂರಪ್ಪರಿಗೆ ಕೇಸರಿ ಪಾಳೆಯ ಪ್ರವೇಶ ಸಲೀಸಾಯಿತು. ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರೂ ಆದರು. ತನ್ಮೂಲಕ 2018 ಅಸೆಂಬ್ಲಿ ಇಲೆಕ್ಷನ್ ಸಮಯಕ್ಕೆ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಏಕಮೇವಾದ್ವಿತೀಯ ನಾಯಕರಾದರು. ತನ್ನ ಹಿತಶತ್ರು ಈಶ್ವರಪ್ಪ ಕ್ಯಾಂಪಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾಜಿ ಶಾಸಕ ಕುಮಾರಸ್ವಾಮಿಗೆ ಟಿಕೆಟ್ ಸಿಗದಂತೆ ಯಡಿಯೂರಪ್ಪ ನೋಡಿಕೊಂಡರೆಂಬ ಮಾತು ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. ಯಡಿಯೂರಪ್ಪರ ಆಜ್ಞಾಧಾರಿ ಎನ್ನಲಾದ ಜಿಪಂ ಸದಸ್ಯರಾಗಿದ್ದ ಲಂಬಾಣಿ ಸಮುದಾಯದ ಕೆ.ಬಿ.ಅಶೋಕ್ ನಾಯ್ಕ್‌ರನ್ನು ಬಿಜೆಪಿ ಅಭ್ಯರ್ಥಿ ಮಾಡಲಾಯಿತು. ಕಾಂಗ್ರೆಸ್ ಮಾಜಿ ಶಾಸಕ ಕರಿಯಣ್ಣರ ಬದಲಿಗೆ ಅವರ ಮಗ ಡಾ. ಶ್ರೀನಿವಾಸ್ ಕರಿಯಣ್ಣರನ್ನು ಆಖಾಡಕ್ಕೆ ಇಳಿಸಿತು.

2018ರ ಅಸೆಂಬ್ಲಿ ಚುನಾವಣೆ ವೇಳೆಯಲ್ಲಾದ ಮತೀಯ ಧ್ರುವೀಕರಣದಿಂದಾಗಿ ಬಿಜೆಪಿ ಕ್ಯಾಂಡಿಡೇಟ್ 69,326 ಮತ ಪಡೆದರೂ ಜೆಡಿಎಸ್‌ನ ಶಾರದಾ ಪೂರ್ಯಾ ನಾಯ್ಕ್ ಬೆನ್ನಿಗೆ ಬಂದು ನಿಂತಿದ್ದರು! ಆರಂಭದಿಂದಲೂ ಶಾರದಾ ನಾಯ್ಕ್‌ಗೆ ಬೆಂಬಲಿಸುತ್ತ ಬಂದಿದ್ದ ಮುಸ್ಲಿಮರು ಮತದಾನ ಹತ್ತಿರ ಬಂದಾಗ ಸಿದ್ದರಾಮಯ್ಯ ಬಂದು ’ಜೆಡಿಎಸ್ ಬಿಜೆಪಿಯ ಬಿ-ಟೀಮ್’ ಎಂದಿದ್ದು ತಿಣುಕಾಡುತ್ತಿದ್ದ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿತು. ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ಕಡೆ ಮುಸ್ಲಿಮರು ವಾಲಿದ್ದರಿಂದ 33,493 ಓಟು ಸಿಕ್ಕಿತು; ಮುಸ್ಲಿಮರ ಮತ ಖೋತಾ ಆದ ಶಾರದಾ ನಾಯ್ಕ್ 3,777 ಮತಗಳ ಸಣ್ಣ ಅಂತರದಿಂದ ಸೋಲುವಂತಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ಷೇತ್ರದ ಕತೆ-ವ್ಯಥೆ!
ನಾಲ್ಕೂವರೆ ದಶಕದಿಂದ ಅಸ್ತಿತ್ವದಲ್ಲಿರುವ ಶಿವಮೊಗ್ಗ ಗ್ರಾಮಾಂತರ ಅಥವಾ ಹೊಳೆಹುನ್ನೂರು ವಿಧಾನಸಭಾ ಕ್ಷೇತ್ರ ಐವರು ಶಾಸಕರನ್ನು ಕಂಡಿದೆ; ಬಸವಣ್ಯೆಪ್ಪ ಹಲವು ಸಲ ಕ್ಯಾಬಿನೆಟ್ ಮಂತ್ರಿಯಂಥ ಮಹತ್ವದ ಸ್ಥಾನಕ್ಕೂ ಏರಿದ್ದಾರೆ. ಆದರೆ ಅಭಿವೃದ್ಧಿಯ ಓಟದಲ್ಲಿ ಈ ಕ್ಷೇತ್ರ ತೀರಾ ಹಿಂದುಳಿದು ಏದುಸಿರುಬಿಡುತ್ತಿದೆ. ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ, ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್.ಪಟೇಲ್, ಯಡಿಯೂರಪ್ಪರ ಸನಿಹ ಸಂಪರ್ಕವಿದ್ದ ಬಸವಣ್ಯೆಪ್ಪ ಮನಸ್ಸು ಮಾಡಿದರೆ ಕ್ಷೇತ್ರವನ್ನು ಅಕ್ಕ-ಪಕ್ಕದ ಕ್ಷೇತ್ರಗಳಿಗಿಂತ ಹೆಚ್ಚು ಅಭಿವೃದ್ಧಿಪಡಿಸಬಹುದಿತ್ತು. ಮೀಸಲು ಕ್ಷೇತ್ರವಾದ್ದರಿಂದ ಅಧಿಕಾರಶಾಹಿ ಮತ್ತು ಆಳುವವರು ಉಪೇಕ್ಷಿಸುತ್ತಿದ್ದಾರೆ; ಅದನ್ನು ಪ್ರಶ್ನಿಸುವ ಪ್ರಜ್ಞೆಯೂ ಇಲ್ಲಿಯ ಶಾಸಕರಿಗೆ ಇಲ್ಲದಿರುವುದು ಕ್ಷೇತ್ರದ ದೊಡ್ಡ ದುರಂತ ಎಂಬ ಬೇಸರ ಕ್ಷೇತ್ರದಲ್ಲಿದೆ. ಆದರೆ ಇರುವವರಲ್ಲೆ ಸ್ವಂತ ವರ್ಚಸ್ಸಿರುವ ಜನತಾದಳದ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಬೆಟರ್; ಕ್ಷೇತ್ರದ ಬೇಕುಬೇಡಗಳ ಅರಿವಿರುವ ಶಾರದಾ ನಾಯ್ಕ್ ಜನರ ಕಷ್ಟಸುಖಕ್ಕೆ ಸ್ಪಂದಿಸುತ್ತಾರೆ ಎಂಬ ಅಭಿಪ್ರಾಯ ಪಕ್ಷ-ಪಂಗಡದ ಹಂಗಿಲ್ಲದೆ ವ್ಯಕ್ತವಾಗುತ್ತಿದೆ.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಭದ್ರಾವತಿ, ಹೊಸನಗರ, ಶಿಕಾರಿಪುರ, ತೀರ್ಥಹಳ್ಳಿ, ಹೊನ್ನಾಳ್ಳಿ ತಾಲೂಕಿನ ಗಡಿವರೆಗೆ ವ್ಯಾಪಿಸಿದೆ. ಒಂದು ತುದಿಯಿಂದ ಇನ್ನೊಂದು ತುದಿಗೆ 150-170 ಕಿ.ಮೀ ದೂರಕ್ಕೆ ಹಬ್ಬಿರುವ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಅಭಿವೃದ್ಧಿಯ ಯಾವ ಕುರುಹುಗಳೂ ಕಾಣಿಸದು; ರಸ್ತೆ-ಕಾಲು ಸಂಕ-ಕುಡಿಯುವ ನೀರು-ಆರೋಗ್ಯದಂಥ ಅಗತ್ಯ ಸೌಲಭ್ಯಗಳಿಲ್ಲದ ಹಳ್ಳಿಗಳ ಈ ಕ್ಷೇತ್ರದ ಬೃಹತ್ ಗಾತ್ರಕ್ಕೆ ಅನುಗುಣವಾಗಿ ಅನುದಾನವೂ ಮಂಜೂರಿ ಆಗುತ್ತಿಲ್ಲ. ಕುಂಸಿ ಜಿಪಂ ಕ್ಷೇತ್ರದಲ್ಲಿರುವ ಜಲ ವಿದ್ಯುತ್ ಯೋಜನಾ ನಿರಾಶ್ರಿತರ ದುರ್ಗಮ ಕೇರಿಗಳಿಗೆ ಮೂಲ ಸೌಕರ್ಯಗಳಿಲ್ಲದೆ ಜನರು ಒದ್ದಾಡುತ್ತಿದ್ದಾರೆ! ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂಥ ಕೈಗಾರಿಕೆ-ಉದ್ಯಮ ಬೇಕಾಗಿದೆ. ಕ್ಷೇತ್ರದ ಆರ್ಥಿಕತೆಯನ್ನು ಪ್ರಭಾವಿಸುವ ಭದ್ರಾವತಿಯ ಕಾರ್ಖಾನೆಗಳನ್ನು ಪುನರಾರಂಭಿಸುವ ಅವಶ್ಯಕತೆಯಿದೆ. ರೈತರು ಗೊಬ್ಬರ-ಬೀಜಕ್ಕೂ ಪರದಾಡುವಂತಾಗಿದೆ ಎಂಬುದು ಕ್ಷೇತ್ರದ ಉದ್ದಗಲಕ್ಕಿರುವ ಸಾಮಾನ್ಯ ಅಳಲಾಗಿದೆ.
ನೀರಾವರಿ ಯೋಜನೆಗಳು ತ್ವರಿತವಾಗಿ ಮುಗಿಯಬೇಕಾಗಿದೆ. ಸುಮಾರು 300ರಷ್ಟಿರುವ ಕೆರೆಗಳಲ್ಲಿ ಶಾರದಾ ನಾಯ್ಕ್ ಶಾಸಕಿಯಾಗಿದ್ದಾಗ ಕೆಲವು ಕೆರೆಗಳ ಹೂಳೆತ್ತಲಾಗಿದ್ದು, ಇನ್ನಿತರ ಕೆರೆಗಳ ಅಭಿವೃದ್ಧಿ ಆಗಬೇಕಾಗಿದೆ. ಆಳುವವರ ಇಚ್ಛಾ ಶಕ್ತಿಯ ಕೊರತೆಯಿಂದ ಬಗರ್ ಹುಕುಮ್ ರೈತರಿಗೆ ಹಕ್ಕುಪತ್ರ ಹಂಚಿಕೆ ಆಗುತ್ತಿಲ್ಲ; 94ಸಿ ಕಾಯ್ದೆಯಂತೆ ಸೂರಿಲ್ಲದವರಿಗೆ ನಿವೇಶನ ಮಂಜೂರಿ ಪ್ರಕಿಯೆ ಆಗುತ್ತಿಲ್ಲ. ಅರ್ಹರು ಈ ಭೂ ಸೌಲಭ್ಯ ದೊರೆಯದೆ ಹತಾಶರಾಗಿದ್ದರೆ, ವಶೀಲಿಬಾಜಿಯ ಅಯೋಗ್ಯರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಗ್ರಾಮೀಣ ಪ್ರತ್ಯೇಕ ತಾಲೂಕು ರಚನೆ ಆಗ್ರಹ ಮೊಳಗುತ್ತಿದೆ. ಬೆಟ್ಟದ ಬುಡದಲ್ಲಿ ತಲತಲಾಂತರದಿಂದ ವಾಸಿಸುತ್ತಿರುವ ಮಂದಿ ಕಸ್ತೂರಿರಂಗನ್ ವರದಿ ಅನುಷ್ಠಾನವಾದರೆ ಹೊಲ-ತೋಟಕ್ಕೆ ರಸಗೊಬ್ಬರ-ಕ್ರಿಮಿನಾಶಕಗಳನ್ನು ಬಳಸದಂತಾಗಿ, ನೆಲೆ ತಪ್ಪುವಂತಾಗುತ್ತದೆ ಎಂಬ ಭೀತಿಯಲ್ಲಿದ್ದಾರೆ. ಈ ದಲಿತ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಲಭ್ಯಗಳೆ ಇಲ್ಲದ ದಲಿತರ ಕೇರಿಗಳಿವೆ! ಇದ್ಯಾವುದೂ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಉದಾಸೀನದಿಂದ ಶಾಸಕ ಅಶೋಕ್ ನಾಯ್ಕ್ ಮತ್ತು ಸಂಸದ ರಾಘವೇಂದ್ರ ಇದ್ದಾರೆ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿದೆ.

ಕಳೆದ ವರ್ಷ ಹುಣಸಗೋಡು ಎಂಬಲ್ಲಾದ ಶಿಲೆ ಕಲ್ಲು ಕ್ವಾರಿ ಸ್ಫೋಟಕ್ಕೆ ಆರು ಅಮಾಯಕ ಜೀವಗಳು ಬಲಿಯಾದದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಇಂಥ ನೂರಾರು ಅಕ್ರಮ ಕಲ್ಲು ಗಣಿಗಳು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿದೆ ಎನ್ನಲಾಗುತ್ತಿದೆ. ಈ ಗಣಿ ಮಾಲೀಕರು ಮಂಜೂರಿ ಜಾಗಕ್ಕಿಂತ ಹೆಚ್ಚು ಪ್ರದೇಶ ಅತಿಕ್ರಮಿಸಿಕೊಂಡಿದ್ದಾರೆ. ಕಲ್ಲು ಲೂಟಿ ಅಹೋರಾತ್ರಿ ಆಗುತ್ತಿದೆ; ಮತ್ತೊಂದೆಡೆ ಮರಳು ಮಾಫಿಯಾ ಅವ್ಯಾಹತವಾಗಿ ಸುತ್ತಲಿನ ನದಿ-ತೊರೆಗಳ ಒಡಲು ಬಗೆದು ಮರಳು ಕಳ್ಳ ಸಾಗಾಣಿಕೆಯಲ್ಲಿ ನಿರತವಾಗಿದೆ! ಆಳುವ ಮಂದಿಯ ಕೃಪಾಕಟಾಕ್ಷ ಕಲ್ಲು-ಮರಳು ಮಾಫಿಯಾಕ್ಕೆ ಇರುವುದರಿಂದ ಅಕ್ರಮ ದಂಧೆ ನಿರಾತಂಕವಾಗಿ ಸಾಗಿದೆ ಎಂಬ ಆರೋಪ ಕ್ಷೇತ್ರದಲ್ಲಿ ಸಾಮಾನ್ಯ ಎಂಬಂತಾಗಿ ಹೋಗಿದೆ.
ಕೇಸರಿ ಕುದುರೆ ಯಾರು?
ಏಳೆಂಟು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆ ರಂಗತಾಲೀಮು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸಾವಕಾಶವಾಗಿ ನಡೆಯತೊಡಗಿದೆ. ಈಗ ಹಬ್ಬಿರುವ ಸುದ್ದಿಗಳ ಪ್ರಕಾರ ಸಂಘ ಪರಿವಾರದ ಶ್ರೇಷ್ಠರಿಗೆ ಹಾಲಿ ಶಾಸಕ ಅಶೋಕ ನಾಯ್ಕ್ ಬಗ್ಗೆ ಸಮಾಧಾನವಿಲ್ಲ. 2008-2013ರ ಅವಧಿಯಲ್ಲಿ ಬಿಜೆಪಿ ಎಮ್ಮೆಲ್ಲೆಯಾಗಿದ್ದ ಕುಮಾರಸ್ವಾಮಿಯಂತೆ ಈಗಿನ ಶಾಸಕ ಅಶೋಕ್ ನಾಯ್ಕ್ ಕಿಕ್ ಬ್ಯಾಕ್-ಕಮಿಷನ್-ಪರ್ಸೆಂಟೇಜ್‌ನಂಥ ಆರೋಪಕ್ಕೆ ಸಿಲುಕಿರುವುದು ಬಿಜೆಪಿಯಲ್ಲಿ ನಿತ್ಯ ಚರ್ಚೆಯ ಸಂಗತಿಯಾಗಿದೆ; ಬಿಜೆಪಿ ಮಾಡಿಸಿರುವ ಆಂತರಿಕ ಸರ್ವೆಯಲ್ಲೂ ಅಶೋಕ ನಾಯ್ಕ್‌ರನ್ನು ಮತ್ತೆ ಆಖಾಡಕ್ಕಿಳಿಸಿದರೆ ಗೆಲ್ಲುವುದು ಕಷ್ಟವೆಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂಬ ಮಾತುಗಳು ಬಿಜೆಪಿ ಬಿಡಾರದಿಂದಲೆ ಹೊರಬರುತ್ತಿವೆ.
ಶಾಸಕ ಅಶೋಕ್ ನಾಯ್ಕ್ ಬಗ್ಗೆ ಕ್ಷೇತ್ರದ ಜನರಿಗೂ ಸಿಟ್ಟಿದೆ; ಸಮಸ್ಯೆ-ಸಂಕಟ ಹೇಳಿಕೊಂಡು ಬರುವವರಿಗೆ ಶಾಸಕ ಸ್ಪಂದಿಸುವುದಿಲ್ಲ. ಹಾಗಾಗಿ ಅಶೋಕ್ ನಾಯ್ಕ್ ಚುನಾವಣೆಗಿಳಿದರೆ ಸೋಲುವ ಸಾಧ್ಯತೆಯೆ ಹೆಚ್ಚೆಂಬ ಅಭಿಪ್ರಾಯ ದಟ್ಟವಾಗಿದೆ. ಬಂಜಾರ ಸಮುದಾಯಕ್ಕಿಂತ ಅಧಿಕವಾಗಿರುವ ಆದಿ ಕರ್ನಾಟಕ ಮತ್ತು ಬೋವಿ ಜಾತಿಯ ಟಿಕೆಟ್ ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪರ ಅವಕೃಪೆಗೆ ತುತ್ತಾಗಿರುವ ಮಾಜಿ ಶಾಸಕ-ಬೋವಿ ಜಾತಿಯ ಕಮಾರಸ್ವಾಮಿ ಈಶ್ವರಪ್ಪ ಮತ್ತಿತರ ಯಡಿಯೂರಪ್ಪ ವಿರೋಧಿ ಧುರೀಣರ ಮೂಲಕ ಮತ್ತೊಂದು ಛಾನ್ಸ್ ಪಡೆಯಲು ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟ ಗಮನಿಸಿದರೆ ಅನಿರೀಕ್ಷಿತ ಅಭ್ಯರ್ಥಿಯನ್ನು ಸಂಘ ಪರಿವಾರದ ಟಿಕೆಟ್ ತಂತ್ರಗಾರರು ಘೋಷಿಸುವ ಸಾಧ್ಯತೆಯಿದೆ ಎಂಬುದು ರಾಜಕೀಯ ಜಿಜ್ಞಾಸೆಯಾಗಿದೆ.
ಕಾಂಗ್ರೆಸ್ ಪಕ್ಷದ ಕಾಯಂ ಅಭ್ಯರ್ಥಿ ಎನಿಸಿದ್ದ ಎರಡು ಬಾರಿಯ ಶಾಸಕ ಕರಿಯಣ್ಣ ಕಳೆದ ಬಾರಿ ವಯೋಸಹಜ ನಿತ್ರಾಣದಿಂದ ಆಖಾಡಕ್ಕೆ ಇಳಿಯಲಾಗದೆ ಮಗ ಡಾ. ಶ್ರೀನಿವಾಸ್‌ರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಬೌರಿಂಗ್ ಆಸ್ಪತ್ರೆಯ ಪ್ರತಿಷ್ಟಿತ ಸರಕಾರಿ ವೈದ್ಯ ಉದ್ಯೋಗ ಬಿಟ್ಟು ನೇರವಾಗಿ ಚುನಾವಣಾ ರಣರಂಗ ಪ್ರವೇಶಿಸಿದ್ದ ಶ್ರೀನಿವಾಸ್‌ರನ್ನು ಮತದಾರರು ಒಪ್ಪಿಕೊಳ್ಳಲಿಲ್ಲ. ಈಗವರು ತುಂಬ ಆಸಕ್ತಿಯಿಂದ ಮತ್ತು ಅಗ್ರೆಸಿವ್ ಆಗಿ ರಾಜಕಾರಣ ನಡೆಸಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಶಿವರುದ್ರ ಸ್ವಾಮಿ ಕಳೆದ ಬಾರಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ ಸಿದ್ದರಾಮಯ್ಯ ಆಶೀರ್ವಾದ ಪಡೆದಿರುವ ಡಾ.ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಂಭವ ಜಾಸ್ತಿ; ಕ್ಷೇತ್ರದಲ್ಲಿ ಇತರ ದಲಿತ ಸಮುದಾಯಕ್ಕಿಂತ ಹೆಚ್ಚಿರುವ ಮಾದಿಗ ಪಂಗಡಕ್ಕೆ ಶ್ರೀನಿವಾಸ್ ಸೇರಿರುವುದು ಅವರಿಗೆ ಟಿಕೆಟ್ ಫೈಟ್‌ನಲ್ಲಿ ಎಡ್ಜ್ ಇದೆಯೆನ್ನಲಾಗುತ್ತಿದೆ.
ಕಳೆದ ಬಾರಿಯ ಬಿಜೆಪಿಯ ಮತೀಯ ಧ್ರುವೀಕರಣದ ವ್ಯವಸ್ಥಿತ ತಂತ್ರಗಾರಿಕೆ ನಡುವೆಯೂ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ಜೆಡಿಎಸ್‌ನ ಶಾರದಾ ನಾಯ್ಕ್ ಬಗ್ಗೆ ಕ್ಷೇತ್ರದಲ್ಲಿ ಮೆಚ್ಚುಗೆ ಮತ್ತು ಅನುಕಂಪವಿದೆ. ಜಿಪಂ ಸದಸ್ಯೆ, ಜಿಪಂ ಅಧ್ಯಕ್ಷೆ, ಒಂದು ಸಲ ಎಮ್ಮೆಲ್ಲೆಯಾಗಿ ಕ್ಷೇತ್ರದ ಬೇಕುಬೇಡಗಳ ತಿಳಿವಳಿಕೆಯಿರುವ ಶಾರದಾ ನಾಯ್ಕ್‌ಗೆ ಅಭಿವೃದ್ಧಿ ಅನುದಾನ ತರುವ ಉಪಾಯಗಳು ಗೊತ್ತಿವೆ. ಜೆಡಿಎಸ್ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿದ್ದ ಶಾರದಾ ನಾಯ್ಕ್ 2023ರಲ್ಲಿ ಗೆಲ್ಲುವ ಅವಕಾಶ ಹೆಚ್ಚಿದೆ ಎಂಬ ತರ್ಕ ರಾಜಕೀಯ ವಲಯದಲ್ಲಿದೆ. ಶಿವಮೊಗ್ಗ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ನಗರ ಕ್ಷೇತ್ರದಲ್ಲಿರವಷ್ಟು ಭದ್ರ ಬುನಾದಿಯಿಲ್ಲ; ಗ್ರಾಮಾಂತರದ ಮಂದಿ ನಗರದವರಂತೆ ಧರ್ಮಕಾರಣಕ್ಕೆ ಮರುಳಾಗುತ್ತಿಲ್ಲ. ಶಿವಮೊಗ್ಗ ಗ್ರಾಮಾಂತರ (ಹೊಳೆಹೊನ್ನೂರು) ಕ್ಷೇತ್ರದಲ್ಲಿ ಪಕ್ಷದ ಪ್ರಭಾವಕ್ಕಿಂತ ವೈಯಕ್ತಿಕ ವರ್ಚಸ್ಸೇ ಪ್ರಬಲವಾಗಿರುವುದು ಬಸವಣ್ಯೆಪ್ಪ, ಬಂಗಾರಪ್ಪ, ಯಡಿಯೂರಪ್ಪರ ’ಆಟ’ಗಳಿಂದ ಸಾಬೀತಾಗಿದೆ ಎಂಬ ಅಭಿಪ್ರಾಯವಿದೆ.
ಸದ್ಯದ ಕುತೂಹಲವೆಂದರೆ, ಬಿಜೆಪಿ ಅಭ್ಯರ್ಥಿ ಯಾರಾಗಬಹುದು? ಜೆಡಿಎಸ್‌ನ ಶಾರದಾ ನಾಯ್ಕ್‌ರಿಗೆ ಪೈಪೋಟಿ ನೀಡಬಲ್ಲ ಬಿಜೆಪಿ ಮತ್ತು ಕಾಂಗ್ರೆಸ್ ಕ್ಯಾಂಡಿಡೇಟು ಯಾರಾಗಬಹುದೆಂಬುದಷ್ಟೆ!
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿವಮೊಗ್ಗ: ಮತೋನ್ಮತ್ತ ರಣಕಣದಿಂದ ಈಶ್ವರಪ್ಪ ಕಡ್ಡಾಯ ನಿವೃತ್ತಿ?!


