ಕಳೆದ ಜೂನ್‌ನಲ್ಲಿ ದೇಶಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾದ ತಮಿಳುನಾಡಿನ ಜಯರಾಜ್ ಮತ್ತು ಅವರ ಪುತ್ರ ಬೆನ್ನಿಕ್ಸ್ ಅವರ ಲಾಕಪ್ ಡೆತ್ ಪ್ರಕರಣದಲ್ಲಿ ಪೊಲೀಸರು ಸತತ ಆರುಗಂಟೆಗಳ ಕಾಲ ಇಬ್ಬರನ್ನು ಹಿಂಸಿದ್ದಾರೆ ಎಂದು ಸಿಬಿಐ ದೃಢಪಡಿಸಿದೆ.
ಕಳೆದ ಜೂನ್‌ನಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಮೊಬೈಲ್ ಫೋನ್ ಅಂಗಡಿಯೊಂದನ್ನು ನಡೆಸುತ್ತಿದ್ದ ತಂದೆ-ಮಗ ಜೋಡಿಯನ್ನು ಲಾಕ್‌ಡೌನ್ ನಿಯಮ ಉಲ್ಲಂಘನೆ ಎಂಬ ಆರೋಪದ ಮೇಲೆ ಸಾಥನ್‌ಕುಲಂ ಪೊಲೀಸರು ಬಂಧಿಸಿದ್ದರು. ಇಬ್ಬರಿಗೂ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಚಿತ್ರಹಿಂಸೆಯಿಂದ ಇಬ್ಬರ ಗುದನಾಳಗಳಿಂದ ರಕ್ತ ಹರಿಯುತ್ತಿತ್ತು. ನಂತರ ಅವರಿಬ್ಬರೂ ಜೈಲಿನಲ್ಲೇ ಮೃತಪಟ್ಟಿದ್ದರು.
ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಇವರಿಬ್ಬರನ್ನು “ಸಂಜೆ 7.45 ರಿಂದ ಮುಂಜಾನೆ 3 ಗಂಟೆಯ ವರೆಗೂ ಹಲವಾರು ಬಾರಿ ಕ್ರೂರ ಚಿತ್ರಹಿಂಸೆಗೊಳಪಡಿಸಲಾಗಿದೆ” ಎಂದು ಹೇಳಿದೆ. ತಂದೆ-ಮಗನನ್ನು ಎಷ್ಟು ಕ್ರೂರವಾಗಿ ಹಿಂಸಿಸಲಾಗಿತ್ತು ಎಂದರೆ, ಪೊಲೀಸ್ ಠಾಣೆಯ ಗೋಡೆಗಳ ಮೇಲೆಲ್ಲಾ ರಕ್ತ ಚೆಲ್ಲಿತ್ತು ಎಂದು ವಿಧಿವಿಜ್ಞಾನದ ಸಾಕ್ಷ್ಯಗಳು ತಿಳಿಸಿವೆ.
ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್: ಪೊಲೀಸರನ್ನು ವೈಭವೀಕರಿಸಿದ್ದಕ್ಕೆ ಬೇಸರವಿದೆಯೆಂದ ಸಿಂಗಂ ನಿರ್ದೇಶಕ ’ಹರಿ’
ಚಿತ್ರಹಿಂಸೆಯಿಂದಾದ ಗಾಯಗಳು ಬೆನ್ನಿಕ್ಸ್ ಸಾವಿಗೆ ಕಾರಣವಾಗಿವೆ ಎಂದು ಮರಣೋತ್ತರ ವರದಿಯಲ್ಲಿ ತಿಳಿಸಲಾಗಿದೆ. ಚಿತ್ರಹಿಂಸೆಯಿಂದ ಪೊಲೀಸ್ ಠಾಣೆಯಲ್ಲಿ ಚೆಲ್ಲಿದ ರಕ್ತದ ಕಲೆಗಳನ್ನು ತನ್ನದೆ ಬಟ್ಟೆಯಲ್ಲಿ ಒರೆಸಲು ಬೆನ್ನಿಕ್ಸ್‌ಗೆ ಪೊಲೀಸರು ಒತ್ತಾಯಿಸಿದ್ದರು.
ಪೊಲೀಸರು ತಮ್ಮ ಅಪರಾಧವನ್ನು ಮುಚ್ಚಿಹಾಕಲು ಬೆನ್ನಿಕ್ಸ್ ಮತ್ತು ಜಯರಾಜ್ ವಿರುದ್ಧ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರು ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ಹೇಳಿದೆ.
ಪೊಲೀಸರು ಸಾಕ್ಷಿಗಳನ್ನು ನಾಶಪಡಿಸಿದರು. ರಕ್ತದಿಂದ ತುಂಬಿದ್ದ ತಂದೆ ಮತ್ತು ಮಗನ ಬಟ್ಟೆಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಡಸ್ಟ್‌ಬಿನ್‌ನಲ್ಲಿ ಎಸೆದಿದ್ದರು ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
“ಬೆನ್ನಿಕ್ಸ್ ಮತ್ತು ಜಯರಾಜ್ ಅವರಿಗೆ ಸಾಥನ್‌ಕುಲಂ ಪೊಲೀಸ್ ಠಾಣೆಯಲ್ಲಿ ಜೂನ್ 19 ಮತ್ತು20ರ ಮಧ್ಯರಾತ್ರಿ ಪೊಲೀಸ್ ಅಧಿಕಾರಿಗಳು ಕ್ರೂರ ಚಿತ್ರಹಿಂಸೆ ಮಾಡಿದ್ದಾರೆ ಎಂಬ ಅಂಶವು ದೃಢಪಟ್ಟಿದೆ” ಎಂದು ಸಿಬಿಐ ತಿಳಿಸಿದೆ. ಹಿಂಸೆಯ ಪರಿಣಾಮವಾಗಿ ಜೂನ್ 22 ಮತ್ತು ಜೂನ್ 23ರ ಮಧ್ಯರಾತ್ರಿಯಲ್ಲಿ ಇಬ್ಬರೂ ಸಾವನ್ನಪ್ಪಿದರು.
ಇಬ್ಬರಿಗೂ ಚಿತ್ರಹಿಂಸೆ ನೀಡಿದ ದಿನದ ಯಾವುದೇ ಸಿಸಿಟಿವಿ ದೃಶ್ಯಾವಳಿಗಳು ಇರಲಿಲ್ಲ. ಸಿಸ್ಟಂನ ಹಾರ್ಡ್ ಡಿಸ್ಕ್ನಲ್ಲಿ ಸಾಕಷ್ಟು ಶೇಖರಣಾ ಸ್ಥಳವಿದ್ದರೂ ಪೊಲೀಸ್ ಠಾಣೆಯಲ್ಲಿ ಭದ್ರತಾ ಕ್ಯಾಮೆರಾಗಳನ್ನು ಪ್ರತಿದಿನ ಸ್ವಯಂಚಾಲಿತವಾಗಿ ದೃಶ್ಯಗಳನ್ನು ಅಳಿಸುವ ರೀತಿ ಸೆಟ್ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ಮ್ಯಾಜಿಸ್ಟ್ರೇಟ್ ತಿಳಿಸಿದ್ದರು.
ಲಾಕಪ್ ಡೆತ್ ಪ್ರಕರಣ ರಾಷ್ಟ್ರವ್ಯಾಪಿ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆಯಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವ ಅಭಿಯಾನವನ್ನು ಆರಂಭವಾಗಿತ್ತು. ಲಾಕಪ್ ಡೆತ್ ಪ್ರಕರಣದಲ್ಲಿ ಒಂಬತ್ತು ಪೊಲೀಸರ ಮೇಲೆ ಕೊಲೆ, ಪಿತೂರಿ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್‌ಶೀಟ್ ದಾಖಲಿಸಿತ್ತು.


