ಬುಧವಾರ ಬಿಹಾರಕ್ಕೆ ಭೇಟಿ ನೀಡಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್(ಕೆಸಿಆರ್) ಅವರು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿ ‘ಬಿಜೆಪಿ-ಮುಕ್ತ ಭಾರತ’ ಕ್ಕೆ ಕರೆ ನೀಡಿದ್ದಾರೆ.
ಇಬ್ಬರು ನಾಯಕರ ಭೇಟಿಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತೆಲಂಗಾಣ ಸಿಎಂ ಕೆಸಿಆರ್, ದೇಶವನ್ನು ಕಾಡುತ್ತಿರುವ ಅನೇಕ ಅನಾಹುತಗಳಿಗೆ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೂಪಾಯಿ ಮೌಲ್ಯ ಕುಸಿತ, ರೈತರ ಪ್ರತಿಭಟನೆ, ನಿರುದ್ಯೋಗ ಮತ್ತು ಬೆಲೆ ಏರಿಕೆಗೆ ನರೇಂದ್ರ ಮೋದಿ ಸರ್ಕಾರವೆ ಕಾರಣ ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿಯ ವಿರುದ್ಧ ತೃತೀಯ ರಂಗದ ವಿಚಾರವಾಗಿ ಕೆಸಿಆರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ. ಜೂನ್ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನೀ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಮಡಿದ ಬಿಹಾರದ ಐವರು ಸೈನಿಕರ ಸಂಬಂಧಿಕರಿಗೆ ತಲಾ 10 ಲಕ್ಷ ರೂಪಾಯಿ ಚೆಕ್‌ಗಳನ್ನು ಹಸ್ತಾಂತರಿಸುವುದು ಕೆಸಿಆರ್ ಅವರ ಪಾಟ್ನಾ ಭೇಟಿಯ ಅಧಿಕೃತ ಉದ್ದೇಶವಾಗಿತ್ತು.
ಇದನ್ನೂ ಓದಿ: ಬಿಹಾರ ರಾಜಕೀಯ: ನಿತೀಶ್ ಹೊಸ ಪಟ್ಟು; ದೆಹಲಿ ರಾಜಕೀಯದಲ್ಲಿ ಬೀಸುವುದೇ ಹೊಸ ಗಾಳಿ?
ಸಿಎಂ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಸಿಆರ್, ಬೆಲೆ ಏರಿಕೆ, ನಿರುದ್ಯೋಗ, ಖಾಸಗೀಕರಣ ನೀತಿಗಳ ಮೇಲೆ ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಬಿಜೆಪಿ-ಮುಕ್ತ ಭಾರತ’ಕ್ಕೆ ಕರೆ ನೀಡಿದ್ದಾರೆ.
ಸಾಧ್ಯವಿರುವ ಯಾವುದೇ ವಿಧಾನದಿಂದ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲು ನಾವು ಪ್ರಯತ್ನಿಸಬೇಕು ಎಂದು ಕೆಸಿಆರ್ ಹೇಳಿದ್ದಾರೆ.
CM of Telangana Sri. KCR & CM of Bihar Sri. Nitish Kumar Addressing the Press Conference at Patna https://t.co/23cjffq0HX
— YSR (@ysathishreddy) August 31, 2022
ಇದನ್ನೂ ಓದಿ: 2014 ರಲ್ಲಿ ಗೆದ್ದಂತೆ 2024 ಗೆಲ್ಲುತ್ತಾರೆಯೆ?: ಮೋದಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಸವಾಲು
ಪಾಟ್ನಾದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಕೆಸಿಆರ್ ಭೇಟಿ ಮಾಡಿದ್ದಾರೆ. 2024 ರಲ್ಲಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಸವಾಲಾಗುತ್ತಾರೆಯೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಸಿಆರ್, “ನಿತೀಶ್ ಅವರು ದೇಶದ ಅತ್ಯುತ್ತಮ ಮತ್ತು ಹಿರಿಯ ನಾಯಕರಲ್ಲಿ ಒಬ್ಬರು. ಈ ಬಗ್ಗೆ ನಾನು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಕೂತು ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದ ಕೆಸಿಆರ್ ನಡೆಸುತ್ತಿರುವ ಆರನೇ ಪ್ರವಾಸ ಇದಾದೆ. ಈ ಹಿಂದೆ ಅವರು ಜೆಎಂಎಂ ಮುಖ್ಯಸ್ಥ ಶಿಬು ಸೊರೆನ್ ಮತ್ತು ಅವರ ಪುತ್ರ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಶಿವಸೇನೆಯ ಉದ್ಧವ್ ಠಾಕ್ರೆ, ತಮಿಳುನಾಡು ಸಿಎಂ, ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಮತ್ತು ಪಶ್ಚಿಮ ಬಂಗಾಳ ಸಿಎಂ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದಾರೆ.
ನವದೆಹಲಿ – ಪಂಜಾಬ್ ಪ್ರವಾಸದಲ್ಲಿ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಅವರನ್ನು ಭೇಟಿಯಾಗಿದ್ದಾರೆ. ಇಷ್ಟೆ ಅಲ್ಲದೆ ಅವರು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ.
ಇದನ್ನೂ ಓದಿ: ‘ಬಿಜೆಪಿ ಭಾರತ ಬಿಟ್ಟು ತೊಲಗು’ ಅಭಿಯಾನ ಬಿಹಾರದಲ್ಲಿ ಉತ್ತಮ ಆರಂಭ ಕಂಡಿದೆ: ಅಖಿಲೇಶ್ ಯಾದವ್
ಪಾಟ್ನಾ ಸಭೆಯ ಸಂದರ್ಭದಲ್ಲಿ, ಕೆಸಿಆರ್ ಮತ್ತು ನಿತೀಶ್ ಕುಮಾರ್ ಇಬ್ಬರೂ ಬಿಜೆಪಿಗೆ ಪರ್ಯಾಯವಾಗಿ ಮುಖ್ಯ ವಿರೋಧ ಪಕ್ಷದ ರಂಗ (ಕಾಂಗ್ರೆಸ್ ಇಲ್ಲದೆ)ವಾಗಿ ಇರುತ್ತೇವೆ, ಇದು ತೃತೀಯ ರಂಗವಲ್ಲ ಎಂದು ಹೇಳಿದ್ದಾರೆ. “ತನ್ನ ಸಣ್ಣ ರಾಜಕೀಯ ಲಾಭಕ್ಕಾಗಿ ಕೋಮು ಭಾವನೆಗಳನ್ನು ಪ್ರಚೋದಿಸಿ ಅಪಾಯಕಾರಿ ಆಟವಾಡುತ್ತಿರುವ ಬಿಜೆಪಿ ವಿರುದ್ಧ ನಮ್ಮದು ತೃತೀಯ ರಂಗವಲ್ಲ, ಪ್ರಮುಖ ರಂಗವಾಗಿದೆ” ಎಂದು ಕೆಸಿಆರ್ ಹೇಳಿದ್ದಾರೆ.
ಕೆಸಿಆರ್-ನಿತೀಶ್ ಭೇಟಿಯನ್ನು ವ್ಯಂಗವಾಡಿದ ಬಿಜೆಪಿ ರಾಜ್ಯಸಭಾ ಸಂಸದ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ,“ಕೆಸಿಆರ್-ನಿತೀಶ್ ಭೇಟಿಯು ಕಾಮಿಡಿ ಶೋ ಅಷ್ಟೆ ಹೊರತು ಬೇರೇನಿಲ್ಲ” ಎಂದು ಹೇಳಿದ್ದಾರೆ.
ಕೆಸಿಆರ್ ಅವರು ತಮ್ಮ ಭೇಟಿಯ ಸಮಯದಲ್ಲಿ ಈ ವರ್ಷ ಹೈದರಾಬಾದ್‌ನ ಸ್ಕ್ರ್ಯಾಪ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ ಸಾವನ್ನಪ್ಪಿದ ಬಿಹಾರದ 12 ಕಾರ್ಮಿಕರ ಸಂಬಂಧಿಕರಿಗೆ ತಲಾ ಐದು ಲಕ್ಷ ರೂ. ಚೆಕ್‌ಗಳನ್ನು ಹಸ್ತಾಂತರಿಸಿದರು.
CM Sri KCR along with Bihar CM Sri @NitishKumar today distributed cheques of ₹10 lakhs each to the families of soldiers who sacrificed their lives in the Galwan Valley and of ₹5 lakhs to each family of the migrant workers who died in a mishap in a scrap godown. pic.twitter.com/BBM37ZLnIg
— Telangana CMO (@TelanganaCMO) August 31, 2022
ಇದನ್ನೂ ಓದಿ: ಬಿಹಾರ: ನಿತೀಶ್-ತೇಜಸ್ವಿ ನಡುವೆ ಒಪ್ಪಂದ; ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಸ್ಥಾನ?
ಬಿಹಾರವನ್ನು ಕ್ರಾಂತಿಯ ನಾಡು ಎಂದು ಉಲ್ಲೇಖಿಸಿದ ಕೆಸಿಆರ್, ಗುರು ಗೋಬಿಂದ್ ಸಿಂಗ್ ಜನಿಸಿದ ಸ್ಥಳದಲ್ಲಿ ನಿರ್ಮಿಸಲಾದ ತಖ್ತ್ ಹರ್ಮಂದಿರ್ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಪ್ರವಾಸವನ್ನು ಕೊನೆಗೊಳಿಸಿದರು.


