ಆಪರೇಷನ್ ಕಮಲ ಪ್ರಕರಣದ ವಿಚಾರಣೆಗೆ ಸಮನ್ಸ್ ನೀಡಿದ ಹೊರತಾಗಿಯು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಇತರ ಇಬ್ಬರು ಆರೋಪಿಗಳು ತೆಲಂಗಾಣ ಪೊಲೀಸರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಎಸ್‌ಐಟಿ ಮಂಗಳವಾರ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಬಿ.ಎಲ್. ಸಂತೋಷ್‌ಗೆ ದೆಹಲಿ ಪೊಲೀಸರ ಮೂಲಕ ನೋಟಿಸ್ ನೀಡಲಾಗಿತ್ತು ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಬಿಜೆಪಿಯ ಪ್ರಮುಖರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಹೈಕೋರ್ಟ್‌ನ ಏಕಸದಸ್ಯ ಪೀಠವು ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ, ಎಸ್‌ಐಟಿ ತನಿಖೆಯ ಪ್ರಗತಿಯನ್ನು ನ್ಯಾಯಾಲಯಕ್ಕೆ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕೇರಳದ ಭಾರತ್ ಧರ್ಮ ಜನಸೇನಾ (ಬಿಡಿಜೆಎಸ್) ಅಧ್ಯಕ್ಷ ತುಷಾರ್ ವೆಲ್ಲಪಲ್ಲಿ ಮತ್ತು ಡಾ. ಜಗ್ಗು ಸ್ವಾಮಿ ಕೂಡ ಎಸ್‌ಐಟಿ ಮುಂದೆ ಹಾಜರಾಗಿಲ್ಲ. ಹೀಗಾಗಿ ಅವರಿಗೆ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಯತ್ನ, 30 ಶಾಸಕರಿಗೆ ತಲಾ 100 ಕೋಟಿ ರೂ. ಆಫರ್’: ತೆಲಂಗಾಣ ಸಿಎಂ ಕೆಸಿಆರ್ ಆರೋಪ
ಕರೀಂನಗರದ ವಕೀಲ ಭೂಸಾರಪು ಶ್ರೀನಿವಾಸ್ ಅವರೊಂದಿಗೆ ಮೂವರಿಗೆ ಎಸ್‌ಐಟಿ ಕಳೆದ ವಾರ ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 21 ರಂದು ಹೈದರಾಬಾದ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.
ಆದರೆ, ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಸಂಬಂಧಿ ಎನ್ನಲಾದ ಶ್ರೀನಿವಾಸ್ ಮಾತ್ರ ತನಿಖಾ ತಂಡದ ಮುಂದೆ ಹಾಜರಾಗಿದ್ದರು. ಸತತ ಎರಡನೇ ದಿನವಾದ ಮಂಗಳವಾರವೂ ಶ್ರೀನಿವಾಸ್ ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾದರು. ಅವರನ್ನು ಸುಮಾರು ಏಳು ಗಂಟೆಗಳ ಕಾಲ ಪ್ರಶ್ನಿಸಲಾಗಿತ್ತು.
ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ನಾಲ್ವರು ಶಾಸಕರನ್ನು ಆಪರೇಷನ್ ಮೂಲಕ ಖರೀದಿಸಲು ಯತ್ನಿಸಿದ ಆರೋಪದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳ ಪೈಕಿ ಒಬ್ಬರಾದ ಸಿಂಹಯಾಜಿ ಅವರಿಗೆ ಶ್ರೀನಿವಾಸ್ ವಿಮಾನ ವೆಚ್ಚಕ್ಕೆ ಹಣ ನೀಡಿದ್ದರು. ತಾನು ಸಿಂಹಯಾಜಿ ಅವರ ಮೇಲಿನ ಗೌರವದಿಂದ ವಿಮಾನ ಟಿಕೆಟ್ ಕಾಯ್ದಿರಿಸಿದ್ದೇನೆ ಹೊರತು ಬಿಜೆಪಿ ಅಥವಾ ಶಾಸಕರ ಆಪರೇಷನ್ ಕಲಮ ಪ್ರಕರಣದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಶಾಸಕರ ಖರೀದಿಗೆ ಯತ್ನ: ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ಗೆ ಸಮನ್ಸ್
ಬಿ.ಎಲ್. ಸಂತೋಷ್‌ಗೆ ನೀಡಿದ್ದ ನೋಟಿಸ್‌ಗೆ ತಡೆ ನೀಡುವಂತೆ ಬಿಜೆಪಿ ರಾಜ್ಯ ಘಟಕದ ಮನವಿಯನ್ನು ತೆಲಂಗಾಣ ಹೈಕೋರ್ಟ್ ನವೆಂಬರ್ 19 ರಂದು ತಿರಸ್ಕರಿಸಿತ್ತು. ಆದಾಗ್ಯೂ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 41 ಎ ಅಡಿಯಲ್ಲಿ ಎಸ್‌ಐಟಿ ಈಗಾಗಲೇ ನೋಟಿಸ್ ಜಾರಿ ಮಾಡಿರುವುದರಿಂದ ಸಂತೋಷ್ ಅವರನ್ನು ಬಂಧಿಸಬಾರದು ಎಂದು ನ್ಯಾಯಮೂರ್ತಿ ಬಿ. ವಿಜಯ್‌ಸೇನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಎಸ್‌ಐಟಿ ನೋಟಿಸ್‌ನಲ್ಲಿ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಕೂಡಾ ಸಂತೋಷ್‌ಗೆ ಸೂಚಿಸಿದ್ದರು.
ಅದೇ ದಿನ ಸಂತೋಷ್‌ಗೆ ನೋಟಿಸ್ ನೀಡುವಲ್ಲಿ ಎಸ್‌ಐಟಿಗೆ ಸಹಕರಿಸುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡುವಂತೆ ಕೋರಿ ತೆಲಂಗಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಯಾವುದೇ ವಿಳಂಬ ಮಾಡದೆ ಸಂತೋಷ್‌ಗೆ ನೋಟಿಸ್ ಜಾರಿ ಮಾಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದರು. ಹೀಗಾಗಿ ದೆಹಲಿ ಪೊಲೀಸ್ ಅಧಿಕಾರಿಗೆ ಇ-ಮೇಲ್ ಅಥವಾ ವಾಟ್ಸಾಪ್ ಮೂಲಕ ಸಂತೋಷ್‌ಗೆ ನೋಟಿಸ್ ನೀಡಲು ಅವರು ಎಸ್‌ಐಟಿಗೆ ಅವಕಾಶ ನೀಡಿದ್ದರು.
ಕಳೆದ ತಿಂಗಳು ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಭಾರಿ ಹಣದ ಆಮಿಷ ನೀಡಿ ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದ ಮೂವರು ಬಿಜೆಪಿ ಏಜೆಂಟ್‌ಗಳ ನಡುವಿನ ಸಂಭಾಷಣೆಯಲ್ಲಿ ಸಂತೋಷ್ ಹೆಸರು ಕೂಡಾ ಕೇಳಿಬಂದಿತ್ತು. ಎಸ್‌ಐಟಿ ಕೇರಳದ ವೈದ್ಯ ಜಗ್ಗು ಸ್ವಾಮಿ ಮತ್ತು ಬಿಡಿಜೆಎಸ್ ಅಧ್ಯಕ್ಷ ವೆಲ್ಲಪಲ್ಲಿ ಅವರಿಗೆ ವಿಚಾರಣೆಗಾಗಿ ನೋಟಿಸ್ ನೀಡಿದೆ.
ಇದನ್ನೂ ಓದಿ: ‘ಅಮಿತ್ ಶಾ, ಬಿ.ಎಲ್. ಸಂತೋಷ್ ಮತ್ತು ಜೆ.ಪಿ. ನಡ್ಡಾ’: ಆಪರೇಷನ್ ಕಮಲ ಹ್ಯಾಂಡಲ್ ಮಾಡುವ ರಾಷ್ಟ್ರೀಯ ತಂಡ!
ಕಳೆದ ತಿಂಗಳು ದಾಖಲಾದ ಪ್ರಕರಣದಲ್ಲಿ ಬಂಧಿತರಾದ ಮೂವರು ಆರೋಪಿಗಳ ಜತೆಗಿನ ಸಂಬಂಧದ ಆರೋಪದ ಮೇರೆಗೆ ನಾಲ್ವರನ್ನು ಒಂದೇ ದಿನ ವಿಚಾರಣೆಗೆ ಕರೆಸಲಾಗಿತ್ತು.
ಜಗ್ಗು ಕೊಟ್ಟಿಲಿಲ್ ಅಲಿಯಾಸ್ ಜಗ್ಗು ಸ್ವಾಮಿ ಕೊಚ್ಚಿಯ ಅಮೃತ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ವೆಲ್ಲಪಲ್ಲಿ ಕೇರಳದ ಬಿಜೆಪಿಯ ಮಿತ್ರಪಕ್ಷವಾದ ಬಿಡಿಜೆಎಸ್‌ನ ನಾಯಕರಾಗಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಯನಾಡ್‌ನಿಂದ ಸ್ಪರ್ಧಿಸಿದ್ದ ವೆಲ್ಲಪಲ್ಲಿ ಅವರ ಹೆಸರು, ಮೂವರು ಆರೋಪಿಗಳು ಟಿಆರ್‌ಎಸ್ ಶಾಸಕರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಹೇಳಿಕೊಂಡಿದ್ದರು.
ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಬಿಜೆಪಿ ಮನವಿಯನ್ನು ತೆಲಂಗಾಣ ಹೈಕೋರ್ಟ್ ಕಳೆದ ವಾರ ತಿರಸ್ಕರಿಸಿದೆ ಆದರೆ ಪ್ರಕರಣದ ತನಿಖೆಯನ್ನು ಏಕ ನ್ಯಾಯಾಧೀಶರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ತೀರ್ಪು ನೀಡಿತ್ತು. ತನಿಖೆಯ ಪ್ರಗತಿಯ ಕುರಿತು ನವೆಂಬರ್ 29 ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಅದು ಎಸ್‌ಐಟಿಗೆ ಕೇಳಿದೆ.
ಇದನ್ನೂ ಓದಿ: ತೆಲಂಗಾಣ: ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಯತ್ನ; ಕೇಂದ್ರ ಸಚಿವರ ಆಪ್ತ ಸೇರಿದಂತೆ ಮೂವರ ಬಂಧನ
ಈ ಮಧ್ಯೆ, ಮೂವರು ಆರೋಪಿಗಳನ್ನು ಒಂದು ವಾರ ಕಸ್ಟಡಿಗೆ ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಶೇಷ ಎಸಿಬಿ ನ್ಯಾಯಾಲಯ ಬುಧವಾರಕ್ಕೆ ಮುಂದೂಡಿದೆ. ಈ ಹಿಂದೆ ಆರೋಪಿಗಳನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಎಸ್‌ಐಟಿ, ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಇನ್ನೊಂದು ವಾರ ಅವರ ಕಸ್ಟಡಿ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.


