Homeಮುಖಪುಟಸಿನಿಮಾ ಸ್ಪಂದನೆ; ‘ದ ಗ್ರೇಟ್ ಇಂಡಿಯನ್ ಕಿಚನ್': ಅಡುಗೆಮನೆಯೊಳಗೆ ಅಡಗಿರುವ ಭವ್ಯ ಭಾರತ

ಸಿನಿಮಾ ಸ್ಪಂದನೆ; ‘ದ ಗ್ರೇಟ್ ಇಂಡಿಯನ್ ಕಿಚನ್’: ಅಡುಗೆಮನೆಯೊಳಗೆ ಅಡಗಿರುವ ಭವ್ಯ ಭಾರತ

ಮನೆಯೊಳಗಿನ ಅವ್ಯವಸ್ಥೆಗಳನ್ನು ಸರಿಮಾಡಿಕೊಳ್ಳದೇ ಇದ್ದರೆ ಕೊನೆಗೊಂದು ದಿನ ಸೋರುತ್ತಿರುವ ಅದೇ ರಾಡಿ ತಮ್ಮ ಮುಖಕ್ಕೇ ಅಂಟಿಕೊಳ್ಳಬಹುದೆಂಬ ವಾಸ್ತವವನ್ನು ನಿರ್ದೇಶಕ ಯಾವ ಉಪದೇಶ, ಬೋಧನೆ, ಭಾಷಣಗಳಿಲ್ಲದೇ ಸಮರ್ಪಕವಾಗಿ ಇಲ್ಲಿ ಪ್ರೇಕ್ಷಕನಿಗೆ ರವಾನಿಸಿದ್ದಾರೆ. ‘ಚಿತ್ರಕತೆ’ ಎಂದು ಕರೆಸಿಕೊಳ್ಳುವಂತಹದ್ದು ಈ ಚಿತ್ರದಲ್ಲಿಲ್ಲ. ಆದರೂ ಪ್ರತಿಯೊಬ್ಬರೂ ನೋಡಲೇಬೇಕಾದ ಮನೆಮನೆಯ ಕತೆಯ ಚಿತ್ರವಿದು.

- Advertisement -
- Advertisement -

ಒಂದು: ಮನೆಯ ಸೊಸೆ ನೃತ್ಯ ಶಿಕ್ಷಕಿಯ ಕೆಲಸಕ್ಕೆ ಅರ್ಜಿ ಹಾಕಿರುತ್ತಾಳೆ. ಸಂದರ್ಶನಕ್ಕೆ ಆಹ್ವಾನಿಸಿ ಮನೆಗೆ ಪತ್ರ ಬರುತ್ತದೆ. ಆ ಪತ್ರವನ್ನು ನೋಡಿದ ಮಾವ ಸೊಸೆಗೆ ಮನೆಯೊಳಗಿನ ಹೆಣ್ಣಿನ ಪಾತ್ರದ ಮಹತ್ವವನ್ನು ತಿಳಿಸಿಕೊಡುತ್ತಾನೆ: “ಹೆಣ್ಣೊಬ್ಬಳು ಮನೆಯೊಳಗಿದ್ದರೆ ಐಶ್ವರ್ಯವಿದ್ದಂತೆ, ಮಕ್ಕಳು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಾರೆ, ಅವಳು ಮನೆಯೊಳಗೆ ಮಾಡುವ ಕೆಲಸಕಾರ್ಯಗಳು ಯಾವುದೇ ಅಧಿಕಾರಿ ಅಥವಾ ಮಂತ್ರಿಗಳ ಕೆಲಸಕ್ಕಿಂತ ಕಡಿಮೆಯಿಲ್ಲ ಎಂದು. ಮುಂದಿನ ಶಾಟ್‌ನಲ್ಲಿ ಸೊಸೆ ಮನೆಯ ಹಿತ್ತಲಿನಲ್ಲಿ ಮಾವನ ಚಡ್ಡಿ ಒಗೆಯುತ್ತಿರುತ್ತಾಳೆ.

ಎರಡು: ಮನೆಯ ಡೈನಿಂಗ್ ಟೇಬಲ್‌ನಲ್ಲಿ ಕುಳಿತು ಊಟ ಮಾಡುವಾಗ ಗಂಡ ಊಟದ ತಟ್ಟೆಯಿಂದ ನುಗ್ಗೇಕಾಯಿಯನ್ನು ಜಗಿದು ಅದರ ನಾರನ್ನು ಬಾಯಿಂದ ತೆಗೆದು ಡೈನಿಂಗ್ ಟೇಬಲ್ ಮೇಲಿಡುತ್ತಾನೆ. ಅವನ ಊಟವಾದ ಮೇಲೆ ತಾಯಿಯೋ ಹೆಂಡತಿಯೋ ಅದನ್ನು ಬಳಿದು ಶುಚಿಗೊಳಿಸಬೇಕು. ಹೋಟೆಲಿನಲ್ಲಿ ಊಟ ಮಾಡುವಾಗ ನಾಜೂಕಾಗಿ ತಟ್ಟೆಯ ಮೂಲೆಯಲ್ಲಿಡುತ್ತಾನೆ. ಇದರ ಪ್ರಸ್ತಾಪ ಮಾಡಿದ ಹೆಂಡತಿಯಿಂದ ಕ್ಷಮಾಪಣೆ ಕೇಳುತ್ತಾನೆ.

ಮೂರು: ಅಡುಗೆಮನೆಯ ಸಿಂಕ್ ಪೈಪ್ ಸೋರುತ್ತಿದೆ. ಮುಸುರೆ ನೀರು ತೊಟ್ಟಿಕ್ಕಿ, ತೊಟ್ಟು ತೊಟ್ಟಾಗಿ ಬೀಳುತ್ತಾ ಹರಿದು ಹೊರಗೆ ಬರುತ್ತಿದೆ. ಸೊಸೆ ಆ ಮುಸುರೆನೀರು ಹರಿದು ಬರುವುದನ್ನು ತಡೆಯಲು ಒಂದು ಗೋಣಿಚೀಲವನ್ನು ಹಾಕುತ್ತಾಳೆ. ಮತ್ತೂ ಹೆಚ್ಚಾದಾಗ ಚಿಕ್ಕದೊಂದು ಬಕೆಟ್ ಇಡುತ್ತಾಳೆ. ಬಕೆಟ್ ತುಂಬಿದಾಗಲೆಲ್ಲಾ ಆ ಮುಸುರೆನೀರನ್ನು ಹೊರಕ್ಕೆ ಸುರಿದು ಬಕೆಟ್ಟನ್ನು ಖಾಲಿ ಮಾಡಿ ಮತ್ತೆ ಸಿಂಕ್ ಕೆಳಗೆ ಇಡುತ್ತಾಳೆ. ಗೋಣಿಚೀಲ ಪೂರ್ತಿ ತೊಯ್ದು ಹೋದಾಗ ಅದನ್ನು ಹೊರಗೆ ಹಾಕಿ ಮತ್ತೊಂದು ಒಣಗಿದ ಚೀಲವನ್ನು ಸಿಂಕ್ ಕೆಳಗೆ ಹರಡುತ್ತಾಳೆ.

ಹೀಗೆ ಗಬ್ಬು ನಾರುತ್ತಿರುವುದು ‘ದ ಗ್ರೇಟ್ ಇಂಡಿಯನ್ ಕಿಚನ್. ಅದನ್ನು ಸಹಿಸಿಕೊಳ್ಳುವಂತೆ ಮಾಡುತ್ತಿರುವುದು ಘಮಘಮಿಸುವ ಮಸಾಲೆಗಳು, ತರಾವರಿ ತಿಂಡಿತಿನಿಸುಗಳು ಮತ್ತು ಅದನ್ನು ಸರಿಮಾಡುತ್ತೇನೆಂದು ನಯವಾಗಿ ಹೇಳುತ್ತಾ ಪ್ರತಿದಿನವೂ ಮರೆತುಹೋಗುವ ಗಂಡನಿರುವ, ತನಗೆ ಎಷ್ಟೇ ಕಷ್ಟವಾದರೂ ಒಂದೂ ಮಾತನಾಡದೆ ಬೆಳಗಿನಿಂದ ರಾತ್ರಿಯವರೆಗೆ ಕತ್ತೆಯ ರೀತಿ ದುಡಿಯುವ ಅತ್ತೆಯಿರುವ, ಪರಂಪರೆ, ಸಂಸ್ಕೃತಿಯ ಹೆಸರಿನಲ್ಲಿ ಪುರುಷಪ್ರಧಾನತೆಯನ್ನು ಎಗ್ಗಿಲ್ಲದೇ ಆಚರಿಸುವ ಮಾವ ಇರುವ – ಕುಟುಂಬ ಎಂಬ ‘ಬಂಧನ’.

ಇಂತಹ ಕೋಟ್ಯಂತರ ಕುಟುಂಬಗಳಿಗೆ ತಮ್ಮ ತಮ್ಮ ಮನೆಯೊಳಕ್ಕೆ ಕನ್ನಡಿ ಹಿಡಿದು ತೋರಿಸಿರುವುದು ‘ದ ಗ್ರೇಟ್ ಇಂಡಿಯನ್ ಕಿಚನ್ ಎಂಬ ಮಲೆಯಾಳಿ ಸಿನೆಮಾ. ಇದನ್ನು ಬರೆದು ನಿರ್ದೇಶನ ಮಾಡಿರುವ ಜೋ ಬೇಬಿ ಅವರ ಸೂಕ್ಷ್ಮತೆ ಚಿತ್ರದುದ್ದಕ್ಕೂ ಎಂತಹ ಗಂಡಸರನ್ನಾದರೂ ಒಂದುಕ್ಷಣ ತಮ್ಮ ಬಗ್ಗೆ ಯೋಚಿಸುವಂತೆ ಮಾಡದೇ ಇರಲಾರದು. ಮತ್ತು ಯಾವ ಹೆಣ್ಣಿಗಾದರೂ ಒಂದಲ್ಲಾ ಒಂದು ದೃಶ್ಯ ತನ್ನ ಬದುಕಿನಲ್ಲಿ ನಡೆದದ್ದು ಎನಿಸದೇ ಇರಲಾರದು.

ಕಾಲ ಎಷ್ಟೇ ಬದಲಾಗಿದೆ ಎಂದರೂ – ಮನೆಯಲ್ಲಿ ಮಿಕ್ಸಿಯಿದ್ದರೂ ಒರಳುಕಲ್ಲಿನಲ್ಲೇ ರುಬ್ಬಬೇಕು, ಕುಕ್ಕರ್ ಇದ್ದರೂ ಸೌದೆ ಒಲೆಯಲ್ಲೇ ಅನ್ನ ಬಸಿಯಬೇಕು, ವಾಶಿಂಗ್ ಮೆಶಿನ್ ಇದ್ದರೂ ಬಟ್ಟೆಗಳು ಬಾಳಿಕೆ ಬರಲೆಂದು ಕಯ್ಯಲ್ಲೇ ಒಗೆಯಬೇಕು. ಮಧ್ಯಾಹ್ನದ ಅನ್ನ ಮಿಕ್ಕಿದ್ದರೂ ರಾತ್ರಿಗೆ ಬಿಸಿಯಾಗಿ ಚಪಾತಿ ಮಾಡಲೇಬೇಕು, ಹಾಟ್ ಬಾಕ್ಸಿನಲ್ಲಿ ಹಾಕಿಟ್ಟರೆ ಆಗದು ಊಟಕ್ಕೆ ಕುಳಿತಾಗಲೇ ಬಿಸಿಯಾಗಿ ಒಲೆಯ ಮೇಲಿಂದ ತಂದುಕೊಡಬೇಕು, ಯಾರೂ ಓಡಾಡದಿದ್ದರೂ ಮನೆಯ ಕೋಣೆಗಳನ್ನೆಲ್ಲಾ ಪ್ರತಿನಿತ್ಯ ಒರೆಸಲೇಬೇಕು. ಹೀಗೆ ಕೊಳೆತು ನಾರುತ್ತಿರುವ ಸಂಪ್ರದಾಯಗಳಿಗೆ ಒಣಗಿದ ಗೋಣಿಚೀಲಗಳ ಹೊದಿಸುವ ಬದಲು ಆ ಆಚರಣೆಗಳನ್ನೇ ಕೈಬಿಡಬೇಕಿದೆ.

ಶಾಲೆಯಲ್ಲಿ ಶಿಕ್ಷಕನಾಗಿ ಕುಟುಂಬ ಎಂಬ ವ್ಯವಸ್ಥೆಯ ಬಗ್ಗೆ ಪಾಠ ಮಾಡಿಯೂ, ಮನೆಯೊಳಗಿನ ತನ್ನ ಪಾತ್ರದ ನಿರ್ವಹಣೆಯ ಅರಿವು ಚಿತ್ರದ ನಾಯಕನಿಗೆ ಇಲ್ಲ. ನಮ್ಮ ಸಮಾಜ ಸೋತಿರುವುದು ಇಲ್ಲಿಯೇ ಆದರೆ ಕೌಟುಂಬಿಕ ದೌರ್ಜನ್ಯ ಮತ್ತು ಹಿಂಸೆಯ ಅತಿಸೂಕ್ಷ್ಮವಾದ ವ್ಯಾಖ್ಯಾನವನ್ನು ಈ ಸಿನೆಮಾದಲ್ಲಿ ನಮ್ಮ ಕಣ್ಣೆದುರು ತೋರಿಸುವ ಮೂಲಕ ನಿರ್ದೇಶಕ ಗೆದ್ದಿದ್ದಾರೆ. ಮನೆಯೊಳಗಿನ ದೈನಂದಿನ ಸಣ್ಣಸಣ್ಣ ವಿಚಾರಗಳು ಒಂದು ಸಿನೆಮಾ ಆಗಿ ತೆರೆದುಕೊಳ್ಳುವುದು, ನಿರ್ದೇಶಕ ಕಂಡುಕೊಂಡಿರುವ ಹೊಸ ಪರಿಭಾಷೆಯಾಗಿದೆ.

ಎಷ್ಟು ಮಾಡಿದರೂ ಮುಗಿಯದ ಮನೆಕೆಲಸವೆಂಬುದು ಪರಂಪರಾಗತವಾಗಿ ನಡೆದು ಬಂದಿದೆ ಮತ್ತಿದಕ್ಕೆ ಬಿಡುವೇ ಇಲ್ಲ. ಅತ್ತೆ ಮಾಡಬೇಕು ಅತ್ತೆ ಇಲ್ಲದಿದ್ದರೆ ಸೊಸೆ, ಇಲ್ಲದಿದ್ದರೆ ಕೆಲಸದವಳು ಅವಳೂ ಇಲ್ಲದಿದ್ದರೆ ದೂರದ ಸಂಬಂಧಿಕಳಾದರೂ ಇದನ್ನು ಮುಂದುವರೆಸಲೇಬೇಕು. ಮನೆಯೊಳಗಿನ ಹಳೆಯ ಫೋಟೋಗಳ ಮೆರವಣಿಗೆ, ಇಷ್ಟೂ ವರ್ಷಗಳ ಕಾಲ ಆ ಮನೆಯಲ್ಲಿ ಎಲ್ಲವನ್ನೂ ಎಲ್ಲರೂ ಹೀಗೆ ನಡೆಸಿಕೊಂಡು ಬಂದಿರುವುದನ್ನು ಸೂಚ್ಯವಾಗಿ ತಿಳಿಸುತ್ತದೆ. ಮನುಷ್ಯ ಒಂದೆಡೆ ನೆಲೆ ನಿಂತು, ಗಂಡು ಬೇಟೆಯಾಡುವ, ಬೆಳೆ ಬೆಳೆಯುವ, ಹೆಣ್ಣು ಮಕ್ಕಳನ್ನು ನೋಡಿಕೊಂಡು ಮನೆಯೊಳಗಿರುವ ಆದಿಮ ಕಾಲದಿಂದ ಹಿಡಿದು- ಮದುವೆಯಾದ ಮೇಲೆ ಕೆಲಸಕ್ಕೆ ಕಳುಹಿಸುವುದಿಲ್ಲ ಎನ್ನುತ್ತಿದ್ದ ಕಾಲ ಬಂದ ಮೇಲೂ, ಚೆನ್ನಾಗಿ ಸಂಪಾದನೆ ಮಾಡುವ ಹುಡುಗಿಯನ್ನೇ ಹುಡುಕಿ ಮಾದುವೆಯಾಗುವ ಕಾಲದವರೆಗೂ ಈ ಮನೆಯ ಕೆಲಸವೆಂಬುದು ‘ಜೆಂಡರ್‌’ನ್ನು  ಆಧರಿಸಿಕೊಂಡು ಬಂದಿದೆ.

PC : Times of India

ಮನೆಯಲ್ಲಿರುವ ಇಬ್ಬರಿಗೆ ಬೇಯಿಸಿ ಹಾಕುವುದಕ್ಕೆ ಅದೆಷ್ಟು ಹೊತ್ತು ಹಿಡಿದೀತು ಎಂದು ಸುಲಭವಾಗಿ ಒಂದು ಮಾತಿನಲ್ಲಿ ಹೇಳಿ ಮುಗಿಸಿಬಿಡಬಹುದು. ಆದರೆ ಅಡುಗೆ ಎಂದರೆ ಅಷ್ಟು ಸರಳವೇ? ಸಿಪ್ಪೆ ಹೆರೆಯುವುದು, ಹಚ್ಚುವುದು, ತುರಿಯುವುದು, ರುಬ್ಬುವುದು, ಅರೆಯುವುದು, ಹುರಿಯುವುದು, ಬೇಯಿಸುವುದು, ಒಗ್ಗರಿಸುವುದು ಬಿಸಿಬಿಸಿಯಾಗಿರುವಾಗಲೇ ಬಡಿಸುವುದು; ಮತ್ತಿದು ಒಂದು ಹೊತ್ತಿನ ಕತೆಯಲ್ಲ ಒಂದು ದಿನದ ಬವಣೆಯಲ್ಲ. ದಿನದಿನವೂ ಅನುದಿನವೂ ತಪ್ಪಿಸದೆ ಅನೂಚಾನಾಗಿ ನಡೆಯಬೇಕಿರುವುದು. ಬೆಳಗಿನ ತಿಂಡಿಯ ಕೆಲಸ ಮುಗಿಯುವಷ್ಟರಲ್ಲಿ ಮಧ್ಯಾನ್ನದ ಅಡುಗೆಯ ಸಮಯ, ಅದನ್ನು ಮಾಡಿ ಮುಗಿಸುವಷ್ಟರಲ್ಲಿ ಸಂಜೆಯ ಚಹಾ ಜೊತೆಗೆ ಬಾಯಾಡಿಸಲು ಏನಾದರೊಂದು ಮುಗಿಸುವಷ್ಟರಲ್ಲಿ ರಾತ್ರಿಗೆ ಮತ್ತೆ ಬಿಸಿಬಿಸಿಯಾಗಿ ತಯಾರಾಗಬೇಕಿರುವ ಚಪಾತಿ. ಒಬ್ಬರಿಗೆ ಚಟ್ನಿ ಬೇಕು ಮತ್ತೊಬ್ಬರಿಗೆ ಸಾಂಬಾರ್ ಬೇಕೇಬೇಕು.

ಅಡುಗೆ ಮಾಡಿ ಬಡಿಸಿ ಅವರ ಊಟವಾದ ಮೇಲೆ ಶುಚಿಗೊಳಿಸುವುದು ಮತ್ತೊಂದು ಮಹಾಸಂಗ್ರಾಮಕ್ಕೆ ಸಜ್ಜಾದಂತೆ. ಹೆಂಗಸರಿಗೆ ಅಡುಗೆಮನೆಯಿಂದ ‘ಮುಕ್ತಿ’ ಕೊಡುವ ‘ಸಹಾಯ’ ಮಾಡುವ ಗಂಡಸರದು ಇನ್ನೊಂದು ಬಗೆ. ಅವರು ಮಾಡಿದ ಮಹದುಪಕಾರದ ನಂತರ ಅಡುಗೆಮನೆ ರಣರಂಗವೇ ಸರಿ. ಮತ್ತೆ ಒಪ್ಪ ಓರಣಗೊಳಿಸುವಷ್ಟರಲ್ಲಿ ಸಾಕಾಗುತ್ತದೆ. ಆದರೂ ನಾವೇ ಎಲ್ಲ ಮಾಡಿದ ಮೇಲೆ ಇನ್ನೇನು ಕೆಲಸ ಉಳಿದಿರಲು ಸಾಧ್ಯ ಎಂದು ಫರ್ಮಾನು ಹೊರಡಿಸಲಾಗುತ್ತದೆ.

ಎಷ್ಟು ಸಣ್ಣಸಣ್ಣ ಅಂಶಗಳಿಂದ ಬದಲಾವಣೆ ಪ್ರಾರಂಭಿಸಬಹುದು. ಮನೆಗೆ ಬಂದ ತಮ್ಮ, ತಾಯಿಯನ್ನು ಕುಡಿಯುವ ನೀರು ತಂದುಕೊಡಲು ಕೇಳುತ್ತಾನೆ. ನಾಯಕಿ ಅವನಿಗೇ ತೆಗೆದುಕೊಂಡು ಕುಡಿಯಲು ಹೇಳುತ್ತಾಳೆ. ಬದಲಾಗಬೇಕಿರುವುದು ವ್ಯವಸ್ಥೆಯೇ ಆದರೂ ಸುಧಾರಿಸಬೇಕಿರುವುದು ನಮ್ಮ ಮನಸ್ಥಿತಿಯಷ್ಟೇ! ಇದು ಗಂಡಸರ ಕೆಲಸ, ಇದು ಹೆಂಗಸರ ಕೆಲಸ ಎಂದು ಹಿಂದಿನವರು ಹೇಳಿದ್ದನ್ನೇ ಅನುಸರಿಸು, ವಿಭಾಗಿಸಿಕೊಳ್ಳುವ, ಭಾವಿಸಿಕೊಳ್ಳುವ, ಸಾಧಿಸುವ ಬದಲು ನನಗೆ ಅಗತ್ಯವಾದ ಕೆಲಸ, ಮನೆಗೆ ಅಗತ್ಯವಾದ ಕೆಲಸ ಎಂದು ನೋಡುವ ದೃಷ್ಟಿಕೋನದ ಅವಶ್ಯಕತೆಯಿದೆ. ಬದಲಾಗಬೇಕಿರುವುದು ಗಂಡಿನ ಮನಸ್ಥಿತಿಯಷ್ಟೇ ಅಲ್ಲ ಹೆಣ್ಣಿನದೂ ಕೂಡ. ಒಬ್ಬ ಜಾಗೃತ ಹೆಣ್ಣು ಮತ್ತಷ್ಟು ಜನರಲ್ಲಿ ಅರಿವು ಮೂಡಿಸಬೇಕು. ಇಲ್ಲವಾದಲ್ಲಿ ಒಬ್ಬ ಹೆಣ್ಣು ವಿರೋಧಿಸಿದರೆ, ಸ್ವೀಕರಿಸಿವಂತಹ ಮತ್ತೊಬ್ಬ ಹೆಣ್ಣು ಸುಲಭವಾಗಿ ಬಲಿಯಾಗುತ್ತಾಳೆ.

ಚಿತ್ರ ಅಡುಗೆಮನೆಯ ಸುತ್ತ ಸುತ್ತುತ್ತಲೇ ಶಬರಿಮಲೈಗೆ ಹೆಣ್ಣಿನ ಪ್ರವೇಶದಂತಹ ವಿದ್ಯಮಾನವನ್ನೂ ಸೇರಿಸಿಕೊಳ್ಳುತ್ತದೆ. ಮುಟ್ಟಿನ ಸಮಯದಲ್ಲಿ ಹೆಣ್ಣು ಯಾವ ಕೆಲಸವನ್ನೂ ಮಾಡಬಾರದು, ಕೋಣೆಯ ಒಳಗೇ ಇರಬೇಕು ಎನ್ನುವ ಕಟ್ಟಳೆ ಸಂಪ್ರದಾಯವಾದಿಗಳ ಪ್ರಕಾರ ಮೈಲಿಗೆಯಾದರೆ, ಆಧುನಿಕ ಸಂಪ್ರದಾಯವಾದಿಗಳ ಪ್ರಕಾರ ಹೆಣ್ಣಿಗೆ ನೀಡಿರುವ ಲಕ್ಷುರಿ- ವಿಶೇಷ ಸೌಕರ್ಯ. ಆದರೆ ಹೆಣ್ಣಿಗೆ ಇದು ಬಲವಂತದ ಮಾಘಸ್ನಾನವಷ್ಟೇ!

ಮನೆಯೊಳಗಿನ ಅವ್ಯವಸ್ಥೆಗಳನ್ನು ಸರಿಮಾಡಿಕೊಳ್ಳದೇ ಇದ್ದರೆ ಕೊನೆಗೊಂದು ದಿನ ಸೋರುತ್ತಿರುವ ಅದೇ ರಾಡಿ ತಮ್ಮ ಮುಖಕ್ಕೇ ಅಂಟಿಕೊಳ್ಳಬಹುದೆಂಬ ವಾಸ್ತವವನ್ನು ನಿರ್ದೇಶಕ ಯಾವ ಉಪದೇಶ, ಬೋಧನೆ, ಭಾಷಣಗಳಿಲ್ಲದೇ ಸಮರ್ಪಕವಾಗಿ ಇಲ್ಲಿ ಪ್ರೇಕ್ಷಕನಿಗೆ ರವಾನಿಸಿದ್ದಾರೆ. ‘ಚಿತ್ರಕತೆ’ ಎಂದು ಕರೆಸಿಕೊಳ್ಳುವಂತಹದ್ದು ಈ ಚಿತ್ರದಲ್ಲಿಲ್ಲ. ಆದರೂ ಪ್ರತಿಯೊಬ್ಬರೂ ನೋಡಲೇಬೇಕಾದ ಮನೆಮನೆಯ ಕತೆಯ ಚಿತ್ರವಿದು. ಚಿತ್ರದ ಮತ್ತೊಂದು ವೈಶಿಷ್ಟ್ಯತೆ ಎಂದರೆ ಈ ಕುಟುಂಬದಲ್ಲಿ ಯಾವುದೇ ಕೊರತೆಯಿಲ್ಲ. ಇಲ್ಲಿ ಯಾರೂ ಕೆಡುಕು ಮಾಡಲೆಂದೇ ಕಾದು ಕುಳಿತಿಲ್ಲ. ಕಾಟ ಕೊಡುವ ಅತ್ತೆ, ಕಾಮಿಸುವ ಮಾವ, ದುಡಿಯದ/ಹೊಡೆಯುವ ಗಂಡ ಊಹೂಂ ಈ ಯಾವ ಅಂಶವೂ ಇಲ್ಲ. ಸಮಸ್ಯೆಯ ಮೂಲ ಇರುವುದು ಪುರುಷಪ್ರಧಾನ ಮನಸ್ಥಿತಿಯಲ್ಲಿ, ಪಿತೃಪ್ರಧಾನ ಸಮಾಜ ಹೊರೆಸಿರುವ ಕಟ್ಟುಪಾಡುಗಳನ್ನು ಪ್ರಶ್ನಿಸದೇ ಅನುಸರಿಸಿಕೊಂಡು ಹೋಗುವ ಮನಸ್ಥಿತಿಯಲ್ಲಿ.

ಕೊನೆಗೂ ಹೆಣ್ಣಿನ ಬಿಡುಗಡೆಯೆಂಬುದು ಹೆಣ್ಣೇ ಕಂಡುಕೊಳ್ಳಬೇಕಿರುವ ದಾರಿಯಾಗಿದೆ. ಚಿತ್ರದ ಕೊನೆಯಲ್ಲಿ ನಾಯಕಿ ಗಂಡನ ಮನೆಯಿಂದ ಹೊರನಡೆದು ಬರುತ್ತಿರುವಾಗ, ಹಿನ್ನೆಲೆಯಲ್ಲಿ ಊರಿನ ಹೆಂಗಸರು ತಮ್ಮ ತಮ್ಮ ನಿತ್ಯದ ಮನೆಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ನೃತ್ಯವೇ ತನ್ನ ಮಾಧ್ಯಮ ಎಂದರಿತ ನಾಯಕಿ ನೃತ್ಯದ ಮೂಲಕವೇ ಬಿಡುಗಡೆಯ ದಾರಿ ಕಂಡುಕೊಳ್ಳುತ್ತಾಳೆ.

ಭಾರತೀಯ ಚಿತ್ರರಂಗಕ್ಕೆ ಮಲೆಯಾಳಂ ಸಿನೆಮಾಗಳ ಕೊಡುಗೆ ದೊಡ್ಡದು. ಈ ಚಿತ್ರ ಕೂಡ ಆ ಸಾಲಿನಲ್ಲಿ ನಿಲ್ಲುತ್ತದೆ. ಚಿತ್ರದಲ್ಲಿ ಹಿನ್ನೆಲೆ ಸಂಗೀತವೆಂಬುದು ಇಲ್ಲವೇ ಇಲ್ಲ. ಅಡುಗೆಮನೆಯೊಳಗಿನ ದೈನಂದಿನ ಏಕತಾನತೆಯನ್ನು ಎತ್ತಿಹಿಡಿಯುವುದರಲ್ಲಿ ಈ ಅಂಶವೂ ಕೆಲಸಮಾಡಿದೆ. ಅದಕ್ಕೆ ಪೂರಕವಾಗಿ ಚಿತ್ರದುದ್ದಕ್ಕೂ ಮನೆಯೊಳಗಿರುವ ಮಂದ ಬೆಳಕಷ್ಟನ್ನೇ ಕಾಯ್ದುಕೊಳ್ಳಲಾಗಿದೆ. ಚಿತ್ರದ ಕೊನೆಯಲ್ಲಿ ನೃತ್ಯದ ಸನ್ನಿವೇಶದ ಮೂಲಕ ತೆರೆಯ ಮೇಲೆ ಬೆಳಕು, ಬಣ್ಣ, ಸಂಗೀತ, ನೃತ್ಯಗಳು ಸಮ್ಮಿಳಿತಗೊಂಡು ನಾಯಕಿ ತಾನು ಸಂಯೋಜಿಸಿದ ನೃತ್ಯಕ್ಕೆ ಏಕಮಾತ್ರ ಪ್ರೇಕ್ಷಕಳಾಗಿ ತಾನೇ ಚಪ್ಪಾಳೆ ಹೊಡೆಯುವ ಮೂಲಕ ತನ್ನ ಮುಂದಿನ ದಾರಿಯ ಸುಳುಹು ನೀಡುತ್ತಾಳೆ.

ಕಾವ್ಯಶ್ರೀ. ಎಚ್

ಕಾವ್ಯಶ್ರೀ. ಎಚ್
ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಕಾವ್ಯಶ್ರೀ ಅವರು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಬರಹಗಾರ್ತಿ. ಸ್ತ್ರೀವಾದಿ ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ಚಲನಚಿತ್ರ 2020: ಸ್ಟ್ರೀಮ್ ಸಿನಿಮಾ ಕುಗ್ಗಿದ ಪರದೆ, ಹಿಗ್ಗಿದ ಮಾರುಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದರ್: ಗಾಳಿಪಟದ ದಾರ ಕುತ್ತಿಗೆ ಸೀಳಿ ಸ್ಥಳದಲ್ಲಿ ಪ್ರಾಣ ಬಿಟ್ಟ 48 ವರ್ಷದ ಬೈಕ್ ಸವಾರ

ಬೀದರ್ ಜಿಲ್ಲೆಯ ತಲಮಡಗಿ ಸೇತುವೆ ಬಳಿಯ ರಸ್ತೆಯಲ್ಲಿ ಮಗಳನ್ನು ಕರೆತರಲು ಬೈಕ್ ನಲ್ಲಿ ತೆರಳುತ್ತಿದ್ದ 48 ವರ್ಷದ ವ್ಯಕ್ತಿ ಕೊರಳಿಗೆ ಗಾಳಿ ಪಟದ ದಾರ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ.  ಮೃತ...

ಐ-ಪ್ಯಾಕ್ ಮೇಲಿನ ದಾಳಿ: ಟಿಎಂಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್

ಐ-ಪಿಎಸಿಗೆ ಸಂಬಂಧಿಸಿದ ಇತ್ತೀಚಿನ ದಾಳಿಗಳ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಪಕ್ಷದ ಫೈಲ್‌ಗಳು ಮತ್ತು ಚುನಾವಣಾ ಸಂಬಂಧಿತ ಡೇಟಾವನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್...

ತೆಲಂಗಾಣ| ಪಂಚಾಯತ್ ಚುನಾವಣೆಯ ನಂತರ 500 ಬೀದಿ ನಾಯಿಗಳ ಸಾಮೂಹಿಕ ಕೊಲೆ; ‘ನಾಯಿ ಮುಕ್ತ ಗ್ರಾಮ’ದ ಭರವಸೆ ನೀಡಿದ್ದ ಅಭ್ಯರ್ಥಿಗಳು

ತೆಲಂಗಾಣದ ಹನಮಕೊಂಡ ಮತ್ತು ಕಾಮರೆಡ್ಡಿ ಜಿಲ್ಲೆಗಳಿಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಜನವರಿಯ ಮೊದಲ ಎರಡು ವಾರಗಳಲ್ಲಿ ಸುಮಾರು 500 ನಾಯಿಗಳನ್ನು ವಿಷ ಹಾಕಿ ಕೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ....

ಕಾನ್ಪುರ ದೇಹತ್‌ನಲ್ಲಿ ನೆರೆಯವರ ಹಲ್ಲೆಯಿಂದ ದಲಿತ ರೈತ ಸಾವು; ಆರು ಮಂದಿ ಬಂಧನ

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ 50 ವರ್ಷದ ದಲಿತ ರೈತನೊಬ್ಬ ತನ್ನ ನೆರೆಹೊರೆಯವರು ಮತ್ತು ಅವರ ಸಂಬಂಧಿಕರಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮತ್ತು ಆತನ...

ಸರ್ಕಾರದ ಅಧಿಕೃತ ದಾಖಲೆಗಳಲ್ಲಿ ‘ಹರಿಜನ-ಗಿರಿಜನ’ ಪದಗಳನ್ನು ನಿಷೇಧಿಸಿದ ಹರಿಯಾಣ ಸರ್ಕಾರ

ಹರಿಯಾಣ ಸರ್ಕಾರವು ತನ್ನ ಎಲ್ಲಾ ಅಧಿಕೃತ ಸಂವಹನಗಳಲ್ಲಿ 'ಹರಿಜನ' ಮತ್ತು 'ಗಿರಿಜನ' ಪದಗಳ ಬಳಕೆಯನ್ನು ನಿಷೇಧಿಸಿದೆ. ಇಲಾಖೆಗಳು 'ಪರಿಶಿಷ್ಟ ಜಾತಿ (ಎಸ್‌ಸಿ)' ಮತ್ತು 'ಪರಿಶಿಷ್ಟ ಪಂಗಡ (ಎಸ್‌ಟಿ)' ಅಥವಾ ಅವುಗಳ ಸಮಾನ ಪದಗಳನ್ನು...

ಐಎಎಸ್ ಅಧಿಕಾರಿ ಮಾನನಷ್ಟ ಮೊಕದ್ದಮೆ ಪ್ರಕರಣ: ಎನ್‌ಟಿವಿ ಸಂಪಾದಕ, ಇಬ್ಬರು ಪತ್ರಕರ್ತರ ಬಂಧನ

ತೆಲಂಗಾಣ ಸರ್ಕಾರದ ರಸ್ತೆ ಮತ್ತು ಕಟ್ಟಡಗಳ ಸಚಿವ ಕೋಮತಿರೆಡ್ಡಿ ವೆಂಕಟ್ ರೆಡ್ಡಿ ಹಾಗೂ ಮಹಿಳಾ ಐಎಎಸ್ ಅಧಿಕಾರಿ ಅವರ ಕುರಿತು ವಿವಾದಾತ್ಮಕ ಸುದ್ದಿ ವರದಿಗೆ ಸಂಬಂಧಿಸಿದಂತೆ, ಹೈದರಾಬಾದ್ ಕೇಂದ್ರ ಅಪರಾಧ ಠಾಣೆ...

ಇರಾನ್: ಪ್ರತಿಭಟನಾಕಾರರ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವಿನ ಸಂಖ್ಯೆ 2571ಕ್ಕೆ ಏರಿಕೆ 

ಇರಾನ್‌ನಲ್ಲಿ ಪ್ರತಿಭಟನೆಗಳ ಮೇಲೆ ನಡೆದ ದಮನ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 2,571 ಕ್ಕೆ ಏರಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಬುಧವಾರ ತಿಳಿಸಿದ್ದಾರೆ. ಈ ಅಂಕಿ ಅಂಶವು ಅಮೆರಿಕ ಮೂಲದ ಮಾನವ ಹಕ್ಕುಗಳ...

ಕಾಂಗ್ರೆಸ್‌ ಮುಖಂಡನ ಗೂಂಡಾವರ್ತನೆ : ಫ್ಲೆಕ್ಸ್‌ ತೆರವುಗೊಳಿಸಿದ್ದಕ್ಕೆ ಪೌರಾಯುಕ್ತೆಗೆ ಧಮ್ಕಿ, ಅವಾಚ್ಯ ಶಬ್ದಗಳಿಂದ ನಿಂದನೆ

ಸಚಿವ ಝಮೀರ್ ಅಹ್ಮದ್ ಅವರ ಮಗ ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ ವಿಚಾರವಾಗಿ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ. ಅಮೃತಗೌಡ ಅವರೊಂದಿಗೆ ಗೂಂಡಾವರ್ತನೆ...

ಹಿಂದಿ ಶೈಕ್ಷಣಿಕ ಪದ್ಧತಿ ಹೇರಿಕೆಯಿಂದ ಉತ್ತರದ ಜನರಿಂದ ದಕ್ಷಿಣಕ್ಕೆ ವಲಸೆ: ಮಾರನ್

ಇಂಗ್ಲಿಷ್ ಶಿಕ್ಷಣವನ್ನು ನಿರುತ್ಸಾಹಗೊಳಿಸುತ್ತಾ, ವಿದ್ಯಾರ್ಥಿಗಳು ಹಿಂದಿ ಮಾತ್ರ ಕಲಿಯಲು ಪ್ರೋತ್ಸಾಹಿಸುತ್ತಿದ್ದಾರೆ. ಉತ್ತರ ರಾಜ್ಯಗಳ ಈ ನೀತಿಗಳಿಂದ ಉದ್ಯೋಗ ಸಿಗದೆ ದಕ್ಷಿಣದ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂದು ಡಿಎಂಕೆ ಸಂಸದ ದಯಾನಿಧಿ ಮಾರನ್ ಉತ್ತರ...

ಚಿಕ್ಕಮಗಳೂರು| ದಲಿತರ ಜಮೀನಿಗೆ ನುಗ್ಗಿ ಬೆಳೆ ನಾಶ; ಪ್ರಬಲ ಜಾತಿ ಜನರಿಂದ ವಿನಾಕಾರಣ ತೊಂದರೆ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಸತ್ತಿಹಳ್ಳಿ ಗ್ರಾಮದ ದಲಿತ ಸಮುದಾಯದ ರೈತರಿಗೆ ಅದೇ ಊರಿನ ಪ್ರಬಲ ಜಾತಿಗೆ ಸೇರಿದ ಜನರು ವಿನಾಕಾರಣ ತೊಂದರೆ ನಿಡುತ್ತಿದ್ದು, ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಾರೆ ಎಂಬ...