ಕೋವಿಡ್-19 ಜಗತ್ತನ್ನೇ ಅಸಹಾಯಕವಾಗಿಸಿದ ವರ್ಷವಿದು. ಮನುಷ್ಯ ಏನೂ ತಪ್ಪು ಮಾಡದೆ ತಿಂಗಳುಗಳ ಕಾಲ ಸೆರೆಯಲ್ಲಿರಬೇಕಾಯಿತು. ಇಂತಹ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗದೆ ಇರಲು ಮನರಂಜನೆ ಅಗತ್ಯವಿತ್ತು. ಚಿತ್ರೀಕರಣವಿಲ್ಲ, ಹೊಸ ಸಿನಿಮಾಗಳಿಲ್ಲ, ಚಿತ್ರಮಂದಿರಗಳಿಗೆ ಹೋಗುವಂತಿಲ್ಲ. ಇಂಥ ದುರಿತ ಕಾಲದಲ್ಲೂ ಮನರಂಜನೆ ಭರವಸೆಯ ಕಿಂಡಿಯನ್ನು ಕಂಡುಕೊಂಡಿತು. ಇದು ಭಾರತೀಯ ಮನರಂಜನಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿತು

ಶುಕ್ರವಾರ ಬಂತೆಂದರೆ ಸಿನಿಮಾ ಪ್ರಿಯರು ಜಪಿಸುವ ದಿನ. ಆದರೆ ಕೋವಿಡ್ ಶುಕ್ರವಾರದ ಆ ಸಂಭ್ರಮವನ್ನು ಕಸಿದುಕೊಂಡಿತ್ತು. ಗೃಹಬಂಧಿಗಳಾದ ಇಷ್ಟು ದಿನಗಳಲ್ಲಿ ಮನರಂಜನೆಯೊಂದೇ ಸ್ವಲ್ಪ ಸಮಾಧಾನ ಕೊಡಬಲ್ಲ ಸಂಗತಿಯಾಗಿತ್ತು. ಆದರೆ ಜಗತ್ತಿನ ಎಲ್ಲ ಚಟುವಟಿಕೆಗಳು ನಿಂತಂತೆ, ಸಿನಿಮಾದ ಚಟುವಟಿಕೆಗಳಲ್ಲೂ ಏರುಪೇರಾಯಿತು.

ಸುಮಾರು 25,000 ಕೋಟಿ ರೂಗಳಷ್ಟು ನಷ್ಟ ಉಂಡ ಭಾರತೀಯ ಸಿನಿಮಾ ರಂಗ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಯಿತು.

ತಾರೆಯೊಬ್ಬರ ಸಾವು ದೊಡ್ಡ ಹಗರಣವಾಯಿತು, ಕೆಲವರ ಮಾತು ಕಿಡಿಯಾಯಿತು, ಕೆಲವರ ಮಾನವೀಯತೆ ನೆರವಾಯಿತು. ಹಾಗೆಯೇ ಸಿನಿಮಾ ನಿರ್ಮಾಣದಲ್ಲಿ ಹೊಸ ಪ್ರಯೋಗಗಳು ನಡೆದು, ಹತಾಶ ಸ್ಥಿತಿಯಲ್ಲೂ ಭರವಸೆ ಮೂಡುವಂತಾಯಿತು.

PC : The Indian Express

ಬಾಲಿವುಡ್‌ನಲ್ಲಿ ಜನವರಿಯಿಂದ ಮಾರ್ಚ್ ಒಳಗೆ ಬಿಡುಗಡೆಯಾದ ಮೂವತ್ತಕ್ಕೂ ಹೆಚ್ಚು ಚಿತ್ರಗಳ ಪೈಕಿ, ಮೇಘನಾ ಗುಲ್ಜಾರ್ ಅವರ, ’ಚಪ್ಪಾಕ್’, ಹಿತೇಶ್ ಕೆವಲ್ಯ ಅವರ ’ಶುಭ್ ಮಂಗಲ್ ಜ್ಯಾದಾ ಸಾವಧಾನ್’ ಮತ್ತು ಅನುಭವ ಸಿನ್ಹಾ ಅವರ, ’ಥಪ್ಪಡ್’ ಚಿತ್ರಗಳು ಅಪಾರ ಮೆಚ್ಚುಗೆ ಗಳಿಸಿದ್ದವು. ಕನ್ನಡದಲ್ಲೂ ಕೃಷ್ಣ ನಿರ್ದೇಶನದ ’ಲವ್ ಮಾಕ್‌ಟೇಲ್’ ಮತ್ತು ಕೆ ಎಸ್ ಅಶೋಕ ನಿರ್ದೇಶನದ ’ದಿಯಾ’ ಚಿತ್ರಗಳು ತಮ್ಮ ಕತೆ, ನಿರೂಪಣೆಯ ತಾಜಾತನದಿಂದಾಗಿ ಅಪಾರ ಪ್ರಶಂಸೆಯನ್ನು ಗಳಿಸಿದವು.

ಕೋವಿಡ್-19ರ ಸೋಂಕು ವ್ಯಾಪಕವಾಗಿ ಹರಡಲಾರಂಭಿಸದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಅಲ್ಲಿಗೆ ಚಿತ್ರಮಂದಿರಗಳು ಬಂದ್ ಆದವು. ಚಿತ್ರೀಕರಣ ನಿಂತಿತು. ಕಿರುತೆರೆ ಕೂಡ ಹೊಸ ಕಂತುಗಳಿಲ್ಲದೆ, ಹೊಸ ಶೋಗಳಿಲ್ಲದ ನಿರುತ್ಸಾಹಿಯಾಯಿತು. ಈ ಹೊತ್ತಲ್ಲಿ ಆಶಾಕಿರಣದಂತೆ ಹೊಳೆದಿದ್ದು ಒಟಿಟಿ ವೇದಿಕೆಗಳು. ಸಿನಿಮಾಗಳು ದೊಡ್ಡ ಪರದೆಯಿಂದ ಅಂಗೈಯ ಅತಿ ಸಣ್ಣ ಪರದೆಗೆ ಜಿಗಿದು ಹೊಸ ಬದುಕು ಕಂಡುಕೊಂಡವು.

ಕೇವಲ್ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್‌ಗಳಷ್ಟೇ ಅಲ್ಲ, ಜೀ5, ಸೋನಿಲೈವ್, ವೂಟ್, ಆಹಾ, ಹಾಟ್‌ಸ್ಟಾರ್ ಮುಂತಾದ ವೇದಿಕೆಗಳು ದೇಶದ ಎಲ್ಲ ಸಿನಿಮಾ ಪ್ರಿಯರನ್ನು, ಮನರಂಜನೆಯನ್ನು ಅರಸುವ ಪ್ರೇಕ್ಷಕರನ್ನು ಸೆಳೆದವು. ಎರಡೇ ತಿಂಗಳಲ್ಲಿ 22.2 ಮಿಲಿಯನ್ ಇದ್ದ ಚಂದಾದಾರರ ಸಂಖ್ಯೆ 29 ಮಿಲಿಯನ್‌ಗೆ ಏರಿತು ಎಂದರೆ ನೀವೇ ಊಹಿಸಿಕೊಳ್ಳಿ. ಅತಿ ಹೆಚ್ಚು ಒಟಿಟಿ ಆದಾಯ ಗಳಿಸುತ್ತಿರುವ ಟಾಪ್ ಹತ್ತು ದೇಶಗಳಲ್ಲಿ ಭಾರತವೂ ಒಂದಾಗಿದೆ ಎಂಬ ಅಂಶವೂ ಮನರಂಜನೆಯ ಹೊಸ ಅಧ್ಯಾಯ ಆರಂಭವಾಗಿರುವುದರ ಸೂಚನೆ.

ಒಟಿಟಿಯಲ್ಲಿ ಬಿಡುಗಡೆಯಾಗಿ ಗಮನಸೆಳೆದ ಆರಂಭದ ಚಿತ್ರಗಳಲ್ಲಿ ಪ್ರಮುಖವಾಗಿ ಅನುರಾಗ್ ಕಶ್ಯಪ್ ನಿರ್ದೇಶನದ, ’ಚೋಕ್ಡ್’ ಒಂದು. ಡಿಮಾನಿಟೈಸೇಷನ್ ಕಥೆಯನ್ನು ಆಧರಿಸಿದ ಈ ಚಿತ್ರ. ಇದೇ ಅವಧಿಯಲ್ಲಿ ಬಿಡುಗಡೆಯಾದ ’ಘೂಮ್ಕೇತು’, ’ಗುಲಾಬೊ ಸಿತಾಬೊ’ , ’ಬುಲ್‌ಬುಲ್’, ’ಭೊನ್ಸ್‌ಲೇ’ ನಿಟ್ಟುಸಿರು ಬಿಡುವಂತೆ ಮಾಡಿದವು.

ಚಿತ್ರತಂಡಗಳು ಈ ಹೊಸ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ಒಂದಿಷ್ಟೂ ಯೋಚಿಸದೇ ತಮ್ಮೆಲ್ಲಾ ಸಿನಿಮಾಗಳನ್ನು ವಿವಿಧ ಒಟಿಟಿ ಪರದೆಗಳ ಮೂಲಕ ಪ್ರೇಕ್ಷಕರನ್ನು ತಲುಪುವುದಕ್ಕೆ ಹಾತೊರೆದವು. ಈ ಅವಧಿಯಲ್ಲಿ ’ದಿಲ್ ಬೇಚಾರ’, ’ಯಾರಾ’, ’ಶಕುಂತಲಾ ದೇವಿ’, ’ರಾತ್ ಅಕೇಲಿ ಹೈ’ , ’ಗುಂಜನ್ ಶರ್ಮಾ’, ’ಡಾಲಿ ಕಿಟ್ಟಿ ಔರ್ ವೋ ಚಮಕ್ತೆ ಸಿತಾರೆ’, ’ಸೀರಿಯಸ್ ಮೆನ್’, ’ಬಹುತ್ ಹುವಾ ಸಮ್ಮಾನ್’, ’ಲುಡೊ’, ’ಛಲ್ಲಾಂಗ್’, ಲಾಕ್‌ಡೌನ್ ಕತೆಗಳನ್ನು ಆಧರಿಸಿದ ’ಅನ್‌ಪಾಸ್ಡ್’ ಮತ್ತು ವರ್ಷಾಂತ್ಯಕ್ಕೆ ಬಿಡುಗಡೆಯಾದ ’ಎಕೆ ವರ್ಸಸ್ ಎಕೆ’ ಚಿತ್ರಗಳು ವಿಶೇಷ ಅನುಭವಗಳನ್ನು ನೀಡಿದವು.

ಕನ್ನಡ ಚಿತ್ರರಂಗದಲ್ಲೂ ನೇರ ಒಟಿಟಿ ಮೂಲಕ ಚಿತ್ರ ಬಿಡುಗಡೆ ಮಾಡುವ ಸಾಹಸವೂ ನಡೆಯಿತು. ರಘು ಸಮರ್ಥ್ ನಿರ್ದೇಶನದ ’ಲಾ’ ಮತ್ತು ಪನ್ನಗಭರಣ ನಿರ್ದೇಶನದ ’ಫ್ರೆಂಚ್ ಬಿರ್ಯಾನಿ’ ಹಾಗೂ ಕಾರ್ತಿಕ್ ಸರಗೂರು ನಿರ್ದೇಶನದ ’ಭೀಮಸೇನ ನಳ ಮಹರಾಜ’ ಚಿತ್ರಗಳು ಬಿಡುಗಡೆಯಾದವು. ಆದರೆ ಇವು ಆ ಹೊತ್ತಿಗೆ ಹಲವು ಭಾಷೆಗಳ ವಿಶಿಷ್ಟವಾದ ಸಿನಿಮಾ ಪ್ರಯೋಗಗಳ ಮುಂದೆ ಪೇಲವ ಎನಿಸಿದವು. ಆದರೆ ಚಿತ್ರಗಳನ್ನು ಚಿತ್ರಮಂದಿರಗಳಾಚೆಗೆ ಪ್ರೇಕ್ಷಕನತ್ತ ಒಯ್ಯುವ ನಿಟ್ಟಿನಲ್ಲಿ ಚಿತ್ರರಂಗ ನಿರ್ಧರಿಸಿದ್ದು ಗಮನಾರ್ಹ ಬೆಳವಣಿಗೆ. ವರ್ಷಾಂತ್ಯಕ್ಕೆ ಲಾಕ್‌ಡೌನ್ ಸಡಿಲಗೊಂಡ ನಂತರ ಬಿಡುಗಡೆಯಾದ ಮನ್ಸೋರೆ ನಿರ್ದೇಶನದ ’ಆಕ್ಟ್ 1978’ ಯಶಸ್ವಿ ಪ್ರದರ್ಶನ ಕಂಡಿತು. ಇದರ ಜೊತೆಗೆ ಅರವಿಂದ ಕಾಮತ್ ನಿರ್ದೇಶನದ ’ಅರಿಷಡ್ವರ್ಗ ಕೂಡ ತೆರೆ ಕಂಡಿತು. ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವ ಅನುಭವದಿಂದ ವಂಚಿತರಾಗಿದ್ದ ಕನ್ನಡ ಸಿನಿರಸಿಕರು ಈ ಎರಡೂ ಸಿನಿಮಾಗಳನ್ನು ನೋಡಿ ಮೆಚ್ಚಿದರು.

ಇವೆಲ್ಲವುಗಳಿಗಿಂತ ವಿಶೇಷವೆನಿಸಿದ್ದು, ಮಲಯಾಳಂನಲ್ಲಿ ಬಿಡುಗಡೆಯಾದ ಮಹೇಶ್ ನಾರಾಯಣನ್ ನಿರ್ದೇಶನದ ’ಸಿ ಯು ಸೂನ್’ ಲಾಕ್‌ಡೌನ್ ಅವಧಿಯಲ್ಲೇ ಐಫೋನ್ ಬಳಸಿ ಚಿತ್ರಿಸಲಾದ ಥ್ರಿಲ್ಲರ್ ಸಿನಿಮಾ. ಇದು ದೇಶದ ಮೊದಲ ಕಂಪ್ಯೂಟರ್ ಸ್ಕ್ರೀನ್ ಸಿನಿಮಾ ಎನಿಸಿಕೊಂಡಿತು.

ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಂದ ’ನಿಶ್ಯಬ್ದಂ’, ’ಕಾ ಪೇ ರಣಸಿಂಗಂ’, ’ಅಂಧಗಾರಂ’, ’ಮೂಕುತಿ ಅಮ್ಮನ್’, ’ಪೊನ್ಮಗಳ್ ವಂದಾಳ್’, ’ಪಾವ ಕದೈಗಳ್’, ’ಸೂರರೈ ಪೋಟ್ರು’, ’ಮಿಡಲ್‌ಕ್ಲಾಸ್ ಮೆಲೊಡಿಸ್’ ಚಿತ್ರಗಳೂ ಕೂಡ ಭಿನ್ನ ರಂಜನೆಯನ್ನು ನೀಡಿ ಪ್ರೇಕ್ಷಕರ ಮನಗೆದ್ದವು.

ಸ್ಟಾರ್, ಸೂಪರ್ ಸ್ಟಾರ್‌ಗಳ ಕಾರಣಕ್ಕೇ ಸುದ್ದಿಯಾಗುತ್ತಿದ್ದ ಚಿತ್ರಗಳು ಇಲ್ಲದೆ, ಚಿತ್ರರಂಗ ಈ ಬಾರಿ ಅಂಥ ಝಗಮಗಿಸುವ ತಾರೆಗಳ ಹಂಗಿಲ್ಲದೆ ಸದ್ದು ಮಾಡಿದವು. ಹಿಂದಿ ಚಿತ್ರರಂಗದಲ್ಲಿ ಅಮೀರ್‌ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಸುದ್ದಿಯಲ್ಲಿರಲಿಲ್ಲ. ಕನ್ನಡದಲ್ಲೂ ಸುದೀಪ್, ದರ್ಶನ್, ಪುನೀತ್ ಕೂಡ ತೆರೆಗೆ ಬರಲಿಲ್ಲ. ಸುದೀರ್ಘ ಅವಧಿಯ ಈ ಗೈರನ್ನು ಈ ನಟರು ಹೇಗೆ ಜೀರ್ಣಿಸಿಕೊಂಡಿದ್ದಾರೋ! ಆದರೆ ಪ್ರೇಕ್ಷಕ ಪ್ರಭುವಂತು ತರಹೇವಾರಿ ರಂಜನೆಯನ್ನು ಆಸ್ವಾದಿಸಿ ಮುಂದೆ ಸಾಗಿದ್ದಾನೆ.

ಹೊಸ ಕಾಲದ ಧಾರಾವಾಹಿಗಳ ಹೊಸ ಪುಳಕ

ಕಥಾವಸ್ತು, ನಿರೂಪಣೆ, ನಿರ್ಮಾಣ, ತಾರಾಗಣ ಈ ಎಲ್ಲ ಕಾರಣಗಳಿಗೆ ಸಿನಿಮಾಗಳಿಗೆ ಸೆಡ್ಡು ಹೊಡೆದದ್ದು ವೆಬ್‌ಸೀರೀಸ್‌ಗಳು. ಈ ವರ್ಷ ವಿವಿಧ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾದ ವೆಬ್‌ಸೀರೀಸ್ ಸಿನಿಮಾದಿಂದ ಸಿಗುತ್ತಿದ್ದ ರಂಜನೆಯ ಕೊರತೆಯನ್ನು ಲೀಲಾಜಾಲವಾಗಿ ನಿಭಾಯಿಸಿ ತಮ್ಮ ತೆಕ್ಕೆಗೆ ತೆಗೆದುಕೊಂಡವು.

ದೇಶದ ಪ್ರಖ್ಯಾತ ನಿರ್ದೇಶಕರು ಕೂಡ ಒಟಿಟಿಯ ಮಾಂತ್ರಿಕತೆಯನ್ನು ಅರಿತು ವಿಶಿಷ್ಟವಾದ ಸರಣಿಗಳನ್ನು ನೀಡಿದರು. ಕ್ರಿಕೆಟ್ ಬೆಟ್ಟಿಂಗ್ ಕತೆ ಬಿಚ್ಚಿಟ್ಟ ’ಇನ್‌ಸೈಡ್ ಎಡ್ಜ್’, ರಕ್ತಸಿಕ್ತ ಕತೆಯನ್ನು ಅನಾವರಣ ಮಾಡಿದ ’ಮಿರ್ಜಾಪುರ್ -2’, ’ಅಸುರ್, ’ಪಂಚಾಯತ್, ’ಜಮ್ತಾರ್ ಸರಣಿಗಳು ರಂಜಿಸಿದವು.

ಆದರೆ ಮೂರು ವಿಶಿಷ್ಟ ಸರಣಿಗಳು ಅಪಾರ ಪ್ರಶಂಸೆಗೆ ಪಾತ್ರವಾದವು: ’ಪಾತಾಳ್ ಲೋಕ್, ’ಸ್ಕ್ಯಾಮ್ 1992’ ಮತ್ತು ’ಎ ಸೂಟಬಲ್ ಬಾಯ್’.

ಅವಿನಾಶ್ ಅರುಣ್ ಮತ್ತು ಪ್ರೊಸಿತ್ ರಾಯ್ ನಿರ್ದೇಶನದ ’ಪಾತಾಳ್‌ಲೋಕ್, ವ್ಯವಸ್ಥೆಯ ಕರಾಳ ಮುಖವನ್ನು ಬಿಚ್ಚಿಟ್ಟ ಸರಣಿ. ಈ ಸರಣಿಯ ಮೂಲಕ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಜೈದೀಪ್ ಅಹಲ್ವಾಟ್ ಸ್ಟಾರ್ ಆಗಿ ಹೊರಹೊಮ್ಮಿದರು. ಹನ್ಸಲ್ ಮೆಹ್ತಾ ನಿರ್ದೇಶನದ ’ಸ್ಕ್ಯಾಮ್ 1992′, ಹರ್ಷದ್ ಮೆಹ್ತಾ ಅವರ ದೇಶ ಕಂಡ ಅತಿ ದೊಡ್ಡ ಹಗರಣವನ್ನು ಆಧರಿಸಿದ್ದು. ಜಿತಿನ್ ಗಾಂಧಿ ಅಭಿನಯದ ಈ ಸರಣಿ ಇದುವರೆಗೂ ಭಾರತದಲ್ಲಿ ನಿರ್ಮಾಣದ ಸರಣಿಗಳಲ್ಲೇ ಶ್ರೇಷ್ಠ ಎನಿಸಿಕೊಂಡಿದೆ. ಇವುಗಳ ಜೊತೆಗೆ ವಿಕ್ರಮ್ ಸೇಠ್ ಕಾದಂಬರಿ ಆಧರಿಸಿದ ಮೀರಾ ನಾಯರ್ ನಿರ್ದೇಶನದ ’ಎ ಸೂಟಬಲ್ ಬಾಯ್’ ಸರಣಿಯೂ ಬಿಡುಗಡೆಯಾಯಿತು. ಹಲವು ತಕರಾರುಗಳ ನಡುವೆಯೂ ಈ ಸರಣಿ ಮೆಚ್ಚುಗೆ ಗಳಿಸಿಕೊಂಡಿತು.

ಕನ್ನಡದಲ್ಲೂ ಈ ವರ್ಷ ವೆಬ್ ಸರಣಿಯೊಂದು ಬಿಡುಗಡೆಯಾಯಿತು. ನಾಗಭೂಷಣ್ ನಟಿಸಿದ ’ಹನಿಮೂನ್ ಹೆಸರಿನ ಈ ಸರಣಿಯನ್ನು ಸಖತ್ ಸ್ಟುಡಿಯೋ ನಿರ್ಮಿಸಿತು. ಇದು ತೆಲುಗಿಗೂ ಡಬ್ ಆಗಿ ಬಿಡುಗಡೆಯಾಗಿದ್ದು ವಿಶೇಷ. ಇಷ್ಟರ ಹೊರತಾಗಿ ಇದುವರೆಗೂ ಕನ್ನಡದಲ್ಲಿ ಡಿಜಿಟಲ್ ಪ್ಲಾಟ್‌ಫಾರಂಗಳನ್ನು ಪ್ರಯೋಗಗಳ ವೇದಿಕೆಯನ್ನಾಗಿ ಬಳಸಿಕೊಳ್ಳುವ ಧೈರ್ಯ ಮಾಡುತ್ತಿಲ್ಲ ಎಂಬುದು ಈ ವರ್ಷ ಕೂಡ ಸಾಬೀತಾಯ್ತು.

ಇಡೀ ಜಗತ್ತನ್ನೇ ತಲೆಕೆಳಗು ಮಾಡಿದ ಕೋವಿಡ್-19 ಸೋಂಕಿನಿಂದ ಚಿತ್ರರಂಗವೂ ಪೆಟ್ಟು ತಿಂದಿತಾದರೂ, ಒಟಿಟಿ ಸಮಾಧಾನಕರವಾದ ಆಸರೆಯಾಗಿ ಒದಗಿ ಬಂದಿತು. ಅದೇ ಜೀವಚೈತನ್ಯದ ಸೆಲೆಯಾಗಿ ಹೊಮ್ಮಿತು. ಅಷ್ಟೇ ಅಲ್ಲದೆ ಏಕತಾನತೆಯ ಕಥಾವಸ್ತು, ನಿರ್ಮಾಣ ಶೈಲಿಗಳಿಂದ ಜಡವಾಗಿದ್ದ ಚಿತ್ರರಂಗಗಳಿಗೆ ಮಾದರಿಗಳನ್ನು ಕಟ್ಟಿಕೊಟ್ಟಿತು. ಘಟಾನುಘಟಿಗಳೇ ನೇರವಾಗಿ ಪ್ರೇಕ್ಷಕನನ್ನು ತಲುಪುವ ಈ ಮಾಧ್ಯಮ ಪರಿಣಾಮಕಾರಿ ಎನಿಸಿ, ವೆಬ್‌ಸರಣಿಗಳನ್ನು, ಸಿನಿಮಾಗಳನ್ನು ಒಟಿಟಿಗಳಿಗಾಗಿಯೇ ನಿರ್ಮಿಸಿದ್ದು ಈ ಮಾತಿಗೆ ಸಾಕ್ಷಿ. ಭಾಷೆಯ ಗಡಿಯನ್ನು ಒಡೆದ ಈ ಒಟಿಟಿ ಡಬ್ ಮಾಡಿದ ಸರಣಿ, ಸಿನಿಮಾಗಳನ್ನು ಪ್ರೇಕ್ಷಕನಿಗೆ ಉಣಬಡಿಸುವ ಮೂಲಕ ಮೂಲ ಭಾಷೆಯ ಚಿತ್ರ ನಿರ್ಮಾಪಕರಿಗೆ ನಿಜಕ್ಕೂ ಸವಾಲು ಒಡ್ಡಿವೆ. ಈಗ ಈ ವರ್ಷ ಮುಂದೂಡಲ್ಪಟ್ಟ ಅನೇಕ ಸ್ಟಾರ್ ಚಿತ್ರಗಳು, ಬರುವ ವರ್ಷ ಬಿಡುಗಡೆಯಾಗುತ್ತಾವಾದರೂ ಅವು ಎಷ್ಟರ ಮಟ್ಟಿಗೆ ಪ್ರೇಕ್ಷಕನ ಮನತಣಿಸಬಹುದು ಎಂಬ ಕುತೂಹಲವಂತೂ ಇದೆ.

ಮರೆಯಾದ ತಾರೆಗಳು

2020 ಎಲ್ಲ ರೀತಿಯಲ್ಲೂ ವಿಷಾದವನ್ನು ಉಳಿಸಿದ ವರ್ಷವೆಂದೇ ವಿಶ್ಲೇಷಿಸಲಾಗುತ್ತಿದೆ. ಭಾರತೀಯ ಚಿತ್ರರಂಗ ಪ್ರತಿಭಾವಂತ, ವೃತ್ತಿಪರ ಹಾಗೂ ಮೇರು ಪ್ರತಿಭೆಗಳನ್ನು ಕಳೆದುಕೊಳ್ಳುವಂತಾಗಿದ್ದು ನಿಜಕ್ಕೂ ವಿಷಾದದ ಸಂಗತಿಯೇ.

ಕನ್ನಡದ ಹಿರಿಯ ನಟ ಎಚ್ ಜಿ ಸೋಮಶೇಖರ್, ಸಂಭಾಷಣೆಕಾರ, ನಟ ಕೃಷ್ಣ ನಾಡಿಗ್, ಸಂಗೀತ ಸಂಯೋಜಕ ರಾಜನ್, ಶ್ರೇಷ್ಠ ನಿರ್ದೇಶಕ ವಿಜಯ್‌ರೆಡ್ಡಿ, ಭಾರತದ ಹೆಮ್ಮೆಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ, ರಾಕ್‌ಲೈನ್ ಸುಧಾಕರ್, ಸುಶೀಲ್ ಗೌಡ, ಚಿರಂಜೀವಿ ಸರ್ಜಾ, ಬುಲೆಟ್ ಪ್ರಕಾಶ್, ಮೈಕೆಲ್ ಮದನ್ ವಿವಿಧ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ವಿಧಿವಶರಾದರು.

ಭಾರತೀಯ ಚಿತ್ರರಂಗದ ಮಟ್ಟಿಗೆ ಆಘಾತಕಾರಿಯಾಗಿ ಬಂದ ಸುದ್ದಿಗಳಲ್ಲಿ ಒಂದು ಇರ್ಫಾನ್ ಖಾನ್ ಅವರ ಸಾವು. ನ್ಯೂರೋ ಎಂಡೋಕ್ರೈನ್ ಎಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದರು. ಆದರೆ ಏಪ್ರಿಲ್ 29 ರಂದು ಅವರು ಕೊನೆಯುಸಿರೆಳೆದ ಸುದ್ದಿ ಚಿತ್ರರಸಿಕರಿಗೆ ಬರಸಿಡಿಲಿನಂತೆ ಅಪ್ಪಳಿಸಿತು. ಈ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳುವಷ್ಟರಲ್ಲಿ ಮರುದಿನವೇ ಹಿರಿಯ ನಟ ರಿಶಿ ಕಪೂರ್ ನಿಧನರಾದರು.

ಸಂಗೀತ ನಿರ್ದೇಶಕ ವಾಝಿದ್ ಖಾನ್, ನಟ ಸುಶಾಂತ್ ಸಿಂಗ್ ರಜಪೂತ್, ಪ್ರಖ್ಯಾತ ನೃತ್ಯ ನಿರ್ದೇಶಕಿ ಸರೋಜ್ ಖಾನ್, ಹಿರಿಯ ಹಾಸ್ಯ ನಟ ಜಗದೀಪ್, ತೆಲುಗಿನ ಹಿರಿಯ ಕಲಾವಿದ ಜಯಪ್ರಕಾಶ್ ರೆಡ್ಡಿ, ಹಿರಿಯ ನಟಿ, ಆಶಾಲತ, ವಬ್‌ಗಾಂವಕರ್, ಆಸ್ಕರ್ ಪುರಸ್ಕತ ವಸ್ತ್ರ ವಿನ್ಯಾಸಕಿ ಭಾನು ಅಥಯ್ಯ, ಪ್ರಖ್ಯಾತ ಬಂಗಾಳಿ ನಟ ಸೌಮಿತ್ರ ಚಟರ್ಜಿಯನ್ನು ಚಿತ್ರರಂಗ ಕಳೆದುಕೊಂಡಿತು.

ಸಾವು, ಡ್ರಗ್ಸ್ ಅಮಲು, ಹದ ತಪ್ಪಿದ ಮಾತು

ಧೋನಿ ಚಿತ್ರದ ಮೂಲಕ ಅಪಾರ ಮೆಚ್ಚುಗೆ ಗಳಿಸಿದ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಇಡೀ ದೇಶದ ಗಮನಸೆಳೆಯಿತು. ತಮ್ಮ ಅಭಿನಯ ಮತ್ತು ಪ್ರಯೋಗಶೀಲ ವ್ಯಕ್ತಿತ್ವದಿಂದಾಗಿ ಗಮನಸೆಳೆದಿದ್ದ ನಟನ ಸಾವು ಆತ್ಮಹತ್ಯೆಯೊ, ಕೊಲೆಯೊ ಎಂಬ ಅನುಮಾನವು ರಾಜಕೀಯ ತಿರುವುಗಳನ್ನು ಪಡೆದಿದ್ದು ಅನೇಕರನ್ನು ಅನುಮಾನದ ಚೌಕಟ್ಟಿಗೆ ತಂದು ನಿಲ್ಲಿಸಿತು. ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಈ ಪ್ರಕರಣದಲ್ಲಿ ನೇರವಾಗಿ ಆರೋಪ, ವಾಗ್ದಾಳಿಗೆ ಗುರಿಯಾದರು. ಖಿನ್ನತೆಯಿಂದ ಬಳಲುತ್ತಿದ್ದ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ದೃಢಪಡುವ ಹೊತ್ತಿಗೆ ಬಾಲಿವುಡ್‌ನಲ್ಲಿ ಕೆಸರೆರಚಾಟ ನಡೆದಿತ್ತು.

ಸುಶಾಂತ್ ಸಾವಿನ ನೆಪದಲ್ಲಿ ಶುರುವಾದ ಡ್ರಗ್ಸ್ ಸೇವನೆಯ ಬಿರುಗಾಳಿ ಬಾಲಿವುಡ್‌ನ ಹಲವು ನಟ-ನಟಿ- ನಿರ್ದೇಶಕ-ನಿರ್ಮಾಪಕರ ಮನೆಯಂಗಳವನ್ನು ಹಾದು ಬಂತು. ಕರಣ್ ಜೋಹರ್, ಮಹೇಶ್ ಭಟ್, ಕಂಗನಾ ರಣಾವತ್, ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಇವೆಲ್ಲರೂ ಸುದ್ದಿಯಲ್ಲಿದ್ದರು.

ಕಂಗನಾ ರಣಾವತ್ ಈ ಅವಧಿಯಲ್ಲಿ ಬಾಲಿವುಡ್‌ನ ಸ್ವಜನ ಪಕ್ಷಪಾತವನ್ನು ಟೀಕಿಸುವ ಭರದಲ್ಲಿ ವಿವಾದಕ್ಕೆ ಸಿಲುಕಿಕೊಂಡರು. ಮುಂದುವರೆದು ವರ್ಷದ ದ್ವಿತೀಯಾರ್ಧದಲ್ಲಿ ತಮ್ಮ ವಿಚಿತ್ರ, ರಾಜಕೀಯ ಹೇಳಿಕೆಗಳ ಮೂಲಕ ಚಿತ್ರರಂಗದ ಟೀಕೆಗೆ ಗುರಿಯಾದ ಕಂಗನಾ ರಣಾವತ್ ಸಾರ್ವಜನಿಕರ ಕೋಪಕ್ಕೂ ಗುರಿಯಾದರು. ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದು ದೇಶದ ಎಲ್ಲ ಸಂವೇದನಾಶೀಲರು ತೀವ್ರವಾಗಿ ಟೀಕಿಸುವಂತೆ ಮಾಡಿತು. ಶಿವಸೇನೆಯನ್ನು ಸೋನಿಯಾ ಸೇನೆ ಎಂದು ಕರೆದಿದ್ದು, ಮುಂಬೈ ನಗರವನ್ನು ಪಾಕಿಸ್ತಾನ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದು ಅತಿರೇಕವೆಂದು ಅನೇಕರು ಖಂಡಿಸಿದರು. ಈ ಎಲ್ಲ ಬೆಳವಣಿಗೆಗಳ ನಡುವೆ ಸರ್ಕಾರ ರಣಾವತ್ ಅವರಿಗೆ ವೈ ಪ್ಲಸ್ ರಕ್ಷಣೆ ಒದಗಿಸಿದ್ದು ಮತ್ತಷ್ಟು ಕಾವಿನ ಚರ್ಚೆಗೆ ಕಾರಣವಾಗಿತ್ತು.


ಇದನ್ನೂ ಓದಿ: JNU ಪ್ರತಿಭಟನೆ ಆಧಾರಿತ ಚಿತ್ರಕ್ಕೆ ತಡೆಯೊಡ್ಡಿದ ಸೆನ್ಸಾರ್ ಮಂಡಳಿಯ ಬಿಜೆಪಿ ಮುಖಂಡ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಎಸ್ ಕುಮಾರ್
+ posts

LEAVE A REPLY

Please enter your comment!
Please enter your name here