Homeಮುಖಪುಟಭೂಮಿ ಸ್ವಾಭಿಮಾನದ ಸಂಕೇತ, ಅದು ಆರ್ಥಿಕ ಭದ್ರತೆ ನೀಡಲಿದೆ - ಕುಮಾರ್ ಸಮತಳ ಸಂದರ್ಶನ

ಭೂಮಿ ಸ್ವಾಭಿಮಾನದ ಸಂಕೇತ, ಅದು ಆರ್ಥಿಕ ಭದ್ರತೆ ನೀಡಲಿದೆ – ಕುಮಾರ್ ಸಮತಳ ಸಂದರ್ಶನ

ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನನ್ನು ಪರಿಣಾಮಕಾರಿಯಗಿ ಜಾರಿಗೊಳಿಸಬೇಕು. ಕೃಷಿಗೆ ಸಮಬಂಧಿಸಿದಂತೆ ಈಗ ಮಾಡಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎನ್ನುವುದು ನಮ್ಮ ಮುಖ್ಯ ಹಕ್ಕೊತ್ತಾಯಗಳು.

- Advertisement -
- Advertisement -

ರಾಜ್ಯದ ಭೂಮಿ, ವಸತಿ ರಹಿತ ಬಡಜನರ ಪರವಾಗಿ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈ ವಿಧಾನಸಭಾ ಅಧಿವೇಶನದ ಹಿನ್ನೆಲೆಯಲ್ಲಿಯೂ ಸಹ ರಾಜ್ಯಾದ್ಯಂತ ಜಾಥ ನಡೆಸಲಾಗುತ್ತಿದೆ. ಈ ಹೋರಾಟದ ಆಶಯಗಳು ಮತ್ತು ಮುಂದಿನ ನಡೆ ಕುರಿತು ಚರ್ಚಿಸಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರಲ್ಲೊಬ್ಬರಾದ ಕುಮಾರ್ ಸಮತಳರವರನ್ನು ನಾನುಗೌರಿ ವತಿಯಿಂದ ಸಂದರ್ಶಿಸಲಾಯಿತು. ಅದರ ಪೂರ್ಣಪಾಠ ಇಲ್ಲಿದೆ.

ನಾನು ಗೌರಿ: ಕಳೆದ ಕೆಲವು ವರ್ಷಗಳಿಂದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೀರಿ. ಸರ್ಕಾರಗಳು ಹೇಗೆ ಸ್ಪಂದಿಸಿವೆ?

ಕುಮಾರ್ ಸಮತಳ: ಸರ್ಕಾರಗಳು ಹೋರಾಟಗಳಿಗೆ ಸ್ಪಂದಿಸಿದ್ದಿದ್ದರೆ, ಇಂದು ನಾವು ಹೋರಾಟಗಳನ್ನು ಮಾಡಬೇಕಾದ ಅಗತ್ಯವೇ ಇರಲಿಲ್ಲ. ಇಷ್ಟರಲ್ಲಾಗಲೇ ಬಡವರಿಗೆ ವಸತಿ ಮತ್ತು ಭೂಮಿ ಸಿಗಬೇಕಿತ್ತು. ಯಾವುದೇ ಸರ್ಕಾರಗಳಾದರೂ ಅಧಿಕಾರಕ್ಕೆ ಬರುವ ಮೊದಲು ನೂರಾರು ಆಶ್ವಾಸನೆಗಳನ್ನು ಕೊಡುತ್ತವೆ. ಅಧಿಕಾರಕ್ಕೆ ಬಂದ ನಂತರ ಆಶ್ವಾಸನೆಗಳನ್ನು ಮರೆಯುತ್ತವೆ. ಇದರ ಕುರಿತು ನಡೆಯುವ ಹೋರಾಟಗಳನ್ನು ನಿರ್ಲಕ್ಷಿಸುತ್ತಿವೆ.

ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ

ನಾನು ಗೌರಿ: ಉಳುವವನೇ ಭೂಮಿಯ ಒಡೆಯ ಕಾನೂನು ಬಂದರೂ ಕೂಡ ಬಡಜನರಿಗೆ ಭೂಮಿ ಸಿಗಲಿಲ್ಲವೇಕೆ?

ಕುಮಾರ್ ಸಮತಳ: ಇಲ್ಲ. ಒಂದು ಮಟ್ಟಕ್ಕೆ ಕೆಲವರಿಗೆ ಭೂಮಿ ಸಿಕ್ಕಿದೆ. ಅದು ಪರಿಣಾಮಕಾರಿಯಾಗಿ ಎಲ್ಲರಿಗೂ ಸಿಗಲಿಲ್ಲ ಅಷ್ಟೆ. ಆದರೆ ಇಂತಹ ಕಾನೂನುಗಳಿರುವುದರಿಂದಲೇ ಜನರು ಆಶಾಭಾವದಿಂದ ತಮಗೂ ಒಂದು ಅವಕಾಶವಿದೆ ಎಂದುಕೊಳ್ಳುತ್ತಿದ್ದರು. ಈ ಕಾನೂನು ಜನರಿಗೆ ಧ್ವನಿಯಾಗಿತ್ತು. ಏನೂ ಇಲ್ಲದವರೂ ಕೂಡ ಭೂಮಿ ಹೊಂದಬಹುದು ಎಂಬ ನಂಬಿಕೆಯನ್ನು ಹುಟ್ಟುಹಾಕಿತು. ಆದರೆ ಈ ಕಾನೂನನ್ನು ಇಂದಿನ ಸರ್ಕಾರಗಳು ತಿದ್ದುಪಡಿ ಮಾಡುವ ಮೂಲಕ ದುರ್ಬಲಗೊಳಿಸುತ್ತಿವೆ. ಅದಕ್ಕೆ ನಮ್ಮ ವಿರೋಧವಿದೆ.

ನಾನು ಗೌರಿ: ಅಲ್ಪಸ್ವಲ್ಪ ಭೂಮಿ ಇರುವವರೂ ಸಹ ಬೆಲೆ ಸಿಗದೇ, ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ತುಂಡು ಭೂಮಿ ಕೊಡಿಸುವುದರಿಂದ ಏನು ಲಾಭ?

ಕುಮಾರ್ ಸಮತಳ: ಭೂಮಿ ಎನ್ನುವುದು ಸ್ವಾಭಿಮಾನದ ಸಂಕೇತ. ಇದು ಬಡವರಿಗೆ ಆರ್ಥಿಕ ಭದ್ರತೆಯನ್ನು ಕೊಡುತ್ತದೆ. ಆದರೂ ನೀವು ಹೇಳುತ್ತಿರುವುದು ನಿಜ. ಆದರೆ ವಾಸ್ತವದಲ್ಲಿ ತುಂಡು ಭೂಮಿ ಇರುವವರು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ದೊಡ್ಡ ಸಾಲದ ಸುಳಿಗೆ ಸಿಲುಕುತ್ತಿಲ್ಲ. ಬದಲಾಗಿ ಕನಿಷ್ಟ 5 ಎಕೆರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರುವವರು, ಮಧ್ಯಮ ರೈತರು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಾಗ್ಯೂ ಅವರಿಗೆ ನ್ಯಾಯಯುತ ಬೆಲೆ ಮತ್ತು ಪರಿಹಾರಗಳನ್ನು ಕೊಡಬೇಕಾಗಿರುವುದೂ ಕೂಡ ಸರ್ಕಾರದ ಕರ್ತವ್ಯವಾಗಿದೆ.

ನಾನು ಗೌರಿ: ನಿಮ್ಮ ಹೋರಾಟದ ಪ್ರಮುಖ ಹಕ್ಕೊತ್ತಾಯಗಳೇನು?

ಕುಮಾರ್ ಸಮತಳ: ಪ್ರಮುಖವಾಗಿ, ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನನ್ನು ಪರಿಣಾಮಕಾರಿಯಗಿ ಜಾರಿಗೊಳಿಸಬೇಕು. ಕೃಷಿಗೆ ಸಮಬಂಧಿಸಿದಂತೆ ಈಗ ಮಾಡಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎನ್ನುವುದು ನಮ್ಮ ಮುಖ್ಯ ಹಕ್ಕೊತ್ತಾಯಗಳು.

ಭೂಮಿ ಮತ್ತು ವಸತಿ ಹಕ್ಕು ಹೋರಾಟ

ನಾನು ಗೌರಿ: ರಾಜ್ಯದಲ್ಲಿ ಭೂಮಿ/ಸ್ವಂತ ನಿವೇಶನ ಇಲ್ಲದವರ ಸಂಖ್ಯೆ ಎಷ್ಟಿದೆ. ಭೂಮಿ/ನಿವೇಶನ ಇಲ್ಲದಿರುವುದಕ್ಕೆ ಭೂಮಿಯ ಅಲಭ್ಯತೆ ಕಾರಣವೋ? ಅಥವಾ ಇದ್ದರೂ ಸರ್ಕಾರದ ಇಚ್ಚಾಶಕ್ತಿಯ ಕೊರತೆ ಕಾರಣವೋ?

ಕುಮಾರ್ ಸಮತಳ: ರಾಜ್ಯದಲ್ಲಿ ಭೂಮಿಗೆ ಕೊರತೆಯಿಲ್ಲ. ಈಗಗಲೇ ಭೂಮಿಗಾಗಿ ಅರ್ಜಿಹಾಕಿ ಕಾಯುತ್ತಿರುವವರ ಸಂಖ್ಯೆ ಮಾತ್ರ 50 ಲಕ್ಷದಷ್ಟಿದೆ. ಆದರೂ ಸರ್ಕಾರ ಅರ್ಜಿಗಳನ್ನು ಇತ್ಯರ್ಥಪಡಿಸುವ ಕ್ರಮಗಳನ್ನು ಕೈಗೊಂಡಿಲ್ಲ. ಖಂಡಿತವಾಗಿಯೂ ಸರ್ಕಾರ ಇಚ್ಚಾಶಕ್ತಿಯ ಕೊರತೆಯೇ ಬಡಜನರಿಗೆ ಇನ್ನೂ ಭೂಮಿ ಸಿಗದಿರುವುದಕ್ಕೆ ಕಾರಣ.

ಇದನ್ನೂ ಓದಿ: ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮಹಿಳಾ ರೈತರ ಹಕ್ಕುಗಳ ವೇದಿಕೆಯ ಖಂಡನೆ

ನಾನು ಗೌರಿ: ದೇಶದ/ರಾಜ್ಯದ ಪ್ರತಿ ಕುಟುಂಬಕ್ಕೂ ಭೂಮಿ, ವಸತಿ ನೀಡಲು ಸಾಧ್ಯವೇ?

ಕುಮಾರ್ ಸಮತಳ: ಖಂಡಿತ ಸಾಧ್ಯ. ಈಗ ಇರುವ ಭೂಮಿಯನ್ನು ಎಲ್ಲರಿಗೂ ಹಂಚಲು ಸಾಧ್ಯವಿದೆ. ಒಂದು ಕುಟುಂಬ ಬದುಕಲು ಬೇಕಾದಷ್ಟು ಭೂಮಿ ಕೊಡಲು ಸಾಧ್ಯತೆಯಿದೆ. ಆದರೆ ಸರ್ಕಾರ ಮನಸ್ಸು ಮಾಡಿದರೆ ಮಾತ್ರ ಇದು ಸಾಧ್ಯ. 5 ಎಕರೆ ಭೂಮಿಯಿರುವವರೂ ಬದುಕಿದ್ದಾರೆ, 5 ಕುಂಟೆ ಭೂಮಿಯಿರುವವರೂ ಬದುಕಿದ್ದಾರೆ. ಅದೇ 5 ಎಕರೆ ಜಾಗಕ್ಕೂ ಮನೆ ಮಾತ್ರ ಕಟ್ಟಿಕೊಂಡು ಬದುಕುತ್ತಿರುವವರೂ ನಮ್ಮ ನಡುವೆ ಇದ್ದಾರಲ್ಲವೇ?

ನಾನು ಗೌರಿ: ಎಲ್ಲಾ ಸರ್ಕಾರಗಳು ಹಲವು ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ಕುಟುಂಬಗಳಿಗೆ ವಸತಿ ನೀಡಿದ್ದೇವೆ ಎಂದು ಜಾಹಿರಾತು ಹಾಕಿಕೊಂಡಿದ್ದಾರಲ್ಲ?

ಕುಮಾರ್ ಸಮತಳ: ಅವುಗಳೆಲ್ಲಾ ಗಿಮಿಕ್. ಈಗ ವಸತಿ ಸಚಿವ ವಿ.ಸೋಮಣ್ಣ ಪ್ರತಿ ಪಂಚಾಯಿತಿಗೂ 20 ಮನೆಗಳನ್ನು ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಕೇವಲ ಇಪ್ಪತ್ತು ಮನೆಗಳು ಸಾಕಾಗುತ್ತವೆಯೇ? ಈಗ ಲಕ್ಷ ಮನೆಗಳನ್ನು ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಒಂದರ ಮೇಲೊಂದರಂತೆ ಬೆಂಕಿಪಟ್ಟಣಗಳಂತೆ ಮನೆ ಕಟ್ಟಿಕೊಟ್ಟಿರುತ್ತಾರೆ. ಇಲ್ಲಿ ನಿವೇಶನ ಕೊಟ್ಟಂತಾಯಿತೇ? ನಿವೇಶನ ಕೊಡುವುದಕ್ಕೆ ಸಾಧ್ಯತೆಯಿದೆ. ಆದರೂ ಕೊಡುವುದಿಲ್ಲ ಅಷ್ಟೆ.

ನಾನು ಗೌರಿ: ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಭೂಸುಧಾರಣೆಗಳ ಕಾಯ್ದೆಯಲ್ಲಿ ತಂದಿರುವ ಬದಲಾವಣೆಗಳು ಭೂಮಿ ಮತ್ತು ವಸತಿರಹಿತರನ್ನು ಹೇಗೆ ಬಾದಿಸುತ್ತದೆ?

ಕುಮಾರ್ ಸಮತಳ: ಈಗ ನೋಡಿ, ನಾವು ಕಾನೂನು ಪ್ರಕಾರ ಬಡವರಿಗೆ ಭೂಮಿ ಕೊಡಿ ಎಂದು ಹೋರಾಟ ಮಾಡುತ್ತೇವೆ. ಆದರೆ ಈ ಕಾಯ್ದೆ ಅಥವಾ ಕಾನೂನು ಇದ್ದರೆ ತಾನೆ ಭೂಮಿ ಕೊಡುವ ಪ್ರಮೇಯ ಬರುತ್ತದೆ. ಹಾಗಾಗಿ ಆ ಕಾಯ್ದೆಗಳನ್ನೇ ರದ್ದುಪಡಿಸಿದರೆ? ಈಗ ಸರ್ಕಾರ ಮಾಡುತ್ತಿರುವುದು ಇಂತಹ ಕೆಲಸಗಳನ್ನೇ. ಜೊತೆಗೆ ಈಗ ತಿದ್ದುಪಡಿ ಮಾಡಿರುವ ವಿಷಯ, ಕೃಷಿಯೇತರರು ಭೂಮಿ ಕೊಳ್ಳಬಹುದು ಎಂದು ಹೇಳುತ್ತಾರೆ. ಅಂದರೆ ನೇರವಾಗಿ ಬಂಡವಾಳಶಾಹಿಗಳಿಗೆ ಭೂಮಿ ಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಇನ್ನೊಂದು ವಿಷಯ, ಭೂಮಿ ಹೊಂದುವ ಮಿತಿಯನ್ನು ಹೆಚ್ಚಿಸಿರುವುದು. ಅಂದರೆ ಒಂದು ಕುಟುಂಬ ಮೊದಲು 54 ಎಕರೆಗಳವರೆಗೆ ಭೂಮಿ ಹೊಂದಬಹುದಿತ್ತು. ಆದರೆ ಈ ತಿದ್ದುಪಡಿಯ ಮೂಲಕ ಸುಮಾರು 200 ಎಕರೆಗಳವರೆಗೆ ಭೂಮಿ ಹೊಂದಬಹುದು ಎಂದು ಹೇಳುತ್ತದೆ. ಇದರ ಮೂಲಕ ಜಮೀನ್ದಾರಿ ಪದ್ದತಿಯನ್ನು ಮತ್ತೊಮ್ಮೆ ಜಾರಿಗೆ ತರಲು ಹೊರಟಿದೆ.

ಇದನ್ನೂ ಓದಿ: ‘ಭೂಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಟೆಕ್ಕಿಗಳಿಗೆ ಲಾಭ: ಸಚಿವ ಮಾಧುಸ್ವಾಮಿ

ನಾನು ಗೌರಿ: ಮಹಿಳೆಯರಿಗೆ ಭೂ ಒಡೆತನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕುಮಾರ್ ಸಮತಳ: ಖಂಡಿತವಾಗಿಯೂ ಭೂಮಿಯ ಒಡೆತನ ಮಹಿಳೆಯರಿಗೂ ಕೊಡಬೇಕು. ಭೂಮಿಯ ಪಹಣಿಯನ್ನು ಜಂಟಿಯಾಗಿ ಮಾಡಿಸಿ, ಪ್ರತಿ ಮನೆಯಲ್ಲಿಯೂ ಮಹಿಳೆಯ ಹೆಸರಿನಲ್ಲಿಯೂ ಭೂಮಿ ಇರುವಂತೆ ನೊಡಿಕೊಂಡು ಅವರನ್ನೂ ಸಬಲರನ್ನಾಗಿ ಮಾಡಬೇಕು ಎನ್ನುವುದು ನಮ್ಮ ಆಶಯವೂ ಆಗಿದೆ. ಸರ್ಕಾರ ಭೂಮಿಯನ್ನು ಕೊಡುವಾಗ ಅದನ್ನು ಮಹಿಳೆಯರ ಹೆಸರಿನಲ್ಲಿಯೇ ಕೊಡಬೇಕು ಎಂಬುದೇ ನಮ್ಮ ಒತ್ತಾಯವಾಗಿದೆ.

ಭೂಮಿ ಮತ್ತು ವಸತಿ ಹಕ್ಕು ಹೋರಾಟ

ನಾನು ಗೌರಿ: ಕೊರೊನಾ ಸಾಂಕ್ರಾಮಿಕದಿಂದ ಭೂರಹಿತ ಮತ್ತು ವಸತಿರಹಿತ ಜನರ ಮೇಲೆ ಉಂಟಾದ ಪರಿಣಾಮಗಳೇನು?

ಕುಮಾರ್ ಸಮತಳ: ತಮ್ಮ ಹಳ್ಳಿಯಲ್ಲಿ ಯಾರಿಗೆ ಭೂಮಿ ಇರುವುದಿಲ್ಲವೋ ಅಂಥವರು ಕೆಲಸವನ್ನರಸಿ ಅಥವಾ ಬದುಕನ್ನರಸಿ ಪಟ್ಟಣಗಳಿಗೆ ವಲಸೆ ಬರುತ್ತಾರೆ. ಆದರೆ ಈ ಕೊರೊನಾದಂತಹ ರೋಗಗಳಿಂದ ಅವರು ಅಲ್ಲಿಯೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ದುಡಿದು ತಿನ್ನಬೇಕು ಎನ್ನುವವರಿಗೆ ನಿಜವಾಗಿಯೂ ಇದು ಸಂಕಷ್ಟದ ಪರಿಸ್ಥಿತಿ. ಈಗಾಗಲೆ ಸಾಲದಲ್ಲಿ ಬದುಕು ನಡೆಸುತ್ತಿರುವವರು, ಈ ಸಂದರ್ಭದಲ್ಲಿ ಬದುಕುವುದಕ್ಕಾಗಿಯೇ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿ ಅವರ ಋಣಭಾರವನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಇದು ವಸತಿ ಮತ್ತು ಭೂರಹಿತರ ಸಮಸ್ಯೆಯಾಗಿದೆ. ಜೊತೆಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳೂ ಸಹ ಸಮರ್ಪಕವಾಗಿ ಸಿಗಲಿಲ್ಲವಾದ್ದರಿಂದ ಇವರ ಬದುಕು ಮೂರಾಬಟ್ಟೆಯಾಗಿದೆ.

ಇದನ್ನೂ ಓದಿ: ಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು – ಡಾ.ಎ.ಆರ್ ವಾಸವಿ

ನಾನು ಗೌರಿ: ಕೊರೊನಾ ಲಾಕ್‌ಡೌನ್ ನಂತರದ ಕಾಲದಲ್ಲಿ ಹೋರಾಟಗಳಿಗೆ ಜನರ ಪ್ರತಿಕ್ರಿಯೆ ಹೇಗಿದೆ. ನಿಮ್ಮ ಜಾಥದ ಅನುಭವಗಳೇನು?

ಕುಮಾರ್ ಸಮತಳ: ನೋಡಿ ಸರ್, ನಾವು ಬದುಕಬೇಕು ಎಂದರೆ ಹೊರಾಟ ಮಾಡಲೇಬೇಕು. ಕೊರೊನಾ ಇದ್ದರೂ ಸರಿ ಮತ್ತೊಂದೇ ಇದ್ದರೂ ಸರಿ. ನನಗೆ ಹೊಟ್ಟೆತುಂಬಬೇಕು ಎಂದರೆ ನಾನು ಹೊರಗೆ ಬರಲೇಬೆಕು. ಹಾಗಾಗಿಯೇ ನಮ್ಮ ಬದುಕಿಗೆ ಕುಂದುಂಟಾಗುವ ಈ ಸಮಯದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದರೆ ಈಗಿರುವ ಸ್ಥಿತಿಗಿಂತಲೂ ಕೆಳಮಟ್ಟಕ್ಕೆ ತಲುಪುವುದು ಶತಸಿದ್ಧ. ನಾವು ನಮ್ಮ ಹೋರಾಟದ ಸಲುವಾಗಿ ಪ್ರತಿ ಹಳ್ಳಿಗೂ ಜಾಥಾ ಹೊರಟಾಗ ಅಲ್ಲೆಲ್ಲಾ ಜನರ ಸ್ಪಂದನೆ ಚೆನ್ನಾಗಿದೆ. ಅವರಿಗೆ ಜಾಗೃತಿ ಮೂಡಿಸುವ ನಮ್ಮ ಕೆಲಸವೂ ಚೆನ್ನಾಗಿ ಆಗುತ್ತಿದೆ. ಜನರಿಗೂ, ಇದು ನಿಜವಾಗಲೂ ನಮ್ಮ ಸಮಸ್ಯೆ ಎನಿಸತೊಡಗಿ, ನಾವೂ ಚಳವಳಿ ಮಾಡಬೇಕು ಎಂಬ ಭಾವನೆ ಬಂದಿದೆ. ಚಳವಳಿ ಮಾಡದಿದ್ದರೆ ನಮಗೆ ನಮ್ಮ ಹಕ್ಕು ಸಿಗಲಾರದು ಎಂದು ಹಲವರಿಗೆ ಮನವರಿಕೆಯಾಗಿದೆ. ನಮ್ಮ ಪರವಾಗಿಯೂ ದನಿಯೆತ್ತುವವರು ಇದ್ದಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ.


ಇದನ್ನೂ ಓದಿ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...