ಶಿವಮೊಗ್ಗದ ‘ರಂಗ ಬೆಳಕು ತಂಡ’ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜತೆಗಿರುವನು ಚಂದಿರ’ ನಾಟಕವು ಮುಸ್ಲಿಂ ಪ್ರಧಾನ ಕಥೆ ಹೊಂದಿದೆ ಎಂದು ಅರೋಪಿಸಿ ಬಿಜೆಪಿಯ ಸಹ ಸಂಘಟನೆಯಾದ ಬಜರಂಗಳ ಮತ್ತು ಆರೆಸ್ಸೆಸ್ಸಿನ ದುಷ್ಕರ್ಮಿಗಳು ನಾಟಕಕ್ಕೆ ಅಡ್ಡಿ ಪಡಿಸಿದ್ದು, ಇದರಿಂದಾಗಿ ಸಂಘಟಕರು ನಾಟಕವನ್ನು ಅರ್ಧದಲ್ಲೇ ನಿಲ್ಲಿಸಿದ ಘಟನೆ ನಡೆದಿದೆ.
ನಾಟಕ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿದ ದುಷ್ಕರ್ಮಿಗಳು, ವೀರಶೈವ ಕಲ್ಯಾಣ ಮಂದಿರದಲ್ಲಿ ಮುಸ್ಲಿಂ ಪ್ರಧಾನ ಕಥಾಹಂದರ ಇರುವ ನಾಟಕ ನಡೆಯಬಾರದು ಎಂದು ಆಗ್ರಹಿಸಿ, ಬಲವಂತವಾಗಿ ನಾಟಕ ಸ್ಥಗಿತಗೊಳಿಸಿ, ಜನರನ್ನು ಹೊರ ಕಳುಹಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಾಟಕವೂ ಜೋಸೆಫ್ ಸ್ಟೀನ್ ಅವರ ‘ಪಿಡ್ಲರ್ ಆನ್ ದಿ ರೂಫ್’ನ ಕನ್ನಡ ರೂಪಾಂತರವಾಗಿದ್ದು, ಅದನ್ನು ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರು ಬರೆದಿದ್ದರು. ಈ ನಾಟಕವನ್ನು ಶಿವಮೊಗ್ಗದ ರಂಗಬೆಳಕು ತಂಡ ರಂಗ ಪ್ರಯೋಗಕ್ಕೆ ತಂದಿತ್ತು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು: ಕೇಸರಿ-ಹಸಿರು ಚಕ್ರವ್ಯೂಹ ಬೇಧಿಸಿ ಬರುವರೆ ಸೆಕ್ಯುಲರ್ ಖಾದರ್?
ಮೊದಲೇ ನಿಗದಿಯಾಗಿರುವಂತೆ ರಾತ್ರಿ 7.45ಕ್ಕೆ ನಾಟಕ ಆರಂಭವಾಗಿತ್ತು. ಆದರೆ 9.30ರ ಹೊತ್ತಿಗೆ ಆರೆಸ್ಸೆಸ್‌ನ ಶ್ರೀಧರ ಆಚಾರ್, ಬಜರಂಗದಳದ ಮಂಜಣ್ಣ ಸಭಾಂಗಣದ ಒಳಗೆ ಬಂದಿದ್ದು, ಸಂಜಯ್ ಡೊಂಗ್ರೆ ಎಂಬುವವರು ಹೊರಗಡೆ ನಿಂತಿದ್ದರು ಎಂದು ಪ್ರಜಾವಾಣಿ ವರದಿ ಮಾಡಿದೆ.
ಘೋಷಣೆಗಳನ್ನು ಕೂಗಿದ ದುಷ್ಕರ್ಮಿಗಳು ನಾಟಕವನ್ನು ನಿಲ್ಲಿಸುವಂತೆ ಆಗ್ರಹಿಸಿ, ಪ್ರೇಕ್ಷಕರನ್ನು ಒತ್ತಾಯಪೂರ್ವಕವಾಗಿ ಹೊರಗೆ ಕಳುಹಿಸಿದ್ದಾರೆ. ಈ ಎಲ್ಲಾ ಗೊಂದಲದಿಂದಾಗಿ ಸಂಘಟಕರು ನಾಟಕವನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ.
“ದೇಶದಲ್ಲಿ ಹಿಂದೂ–ಮುಸ್ಲಿಂ ಗಲಾಟೆ ನಡೆಯುತ್ತಿರುವಾಗ ಮುಸ್ಲಿಮರೇ ಪ್ರಧಾನವಾಗಿರುವ ಕಥಾವಸ್ತು ಇಟ್ಟುಕೊಂಡು ನಾಟಕ ಮಾಡಿರುವುದು ಬೇಸರದ ಸಂಗತಿ. ಹೀಗಾಗಿ ನಾಟಕವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು” ಎಂದು ಶ್ರೀಧರ ಆಚಾರ್ ಹಾಗೂ ಮಂಜಣ್ಣ ಸಮರ್ಥಿಸಿಕೊಂಡಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮಂಗಳೂರು ನಗರ ಉತ್ತರ: ಹಿಂದುತ್ವದ ಫ್ರಿಂಜ್ ಅಖಾಡದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಯಾರು?
‘‘ನಾಟಕದಲ್ಲಿ ಆಕ್ಷೇಪಾರ್ಹ ಅಂತಹ ಸನ್ನಿವೇಶಗಳು ಇರಲಿಲ್ಲ. ನಾವು ಭಾರತೀಯರು ಒಂದೇ ಎಂದು ಸಾರುವ ಐಕ್ಯಭಾವ ನಾಟಕದಲ್ಲಿತ್ತು. ನಾಟಕವನ್ನು ನೋಡಿ ವಿಮರ್ಶಿಸಬೇಕಿತ್ತು. ಅರ್ಧಕ್ಕೆ ನಿಲ್ಲಿಸಿದ್ದು ಸರಿಯಲ್ಲ’’ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಕೊಟ್ರಪ್ಪ ಹಿರೇಮಾಗಡಿ ಹೇಳಿದ್ದಾರೆ ಎಂದು ಪ್ರಜಾವಾಣಿ ವರದಿ ಹೇಳಿದೆ.


