ಬಿಹಾರ ಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿ ಗಣತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಇಂದು ಪಾಟ್ನಾ ಹೈಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ಪಾರ್ಥಸಾರಥಿಯವರಿದ್ದ ಪೀಠವು 5 ಪ್ರತ್ಯೇಕ ಅರ್ಜಿಗಳನ್ನು ಆಲಿಸಿ ತೀರ್ಪು ನೀಡಿದ್ದು, ರಾಜ್ಯದಲ್ಲಿ ಜಾತಿವಾರು ಸಮೀಕ್ಷೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ.
ಬಿಹಾರದ ಮಹಾಘಟಬಂಧನ ಸರ್ಕಾರ ರಾಜ್ಯದಲ್ಲಿ ಜಾತಿ ಗಣತಿ ನಡೆಸುವ ನಿರ್ಧಾರ ಕೈಗೊಂಡಿತ್ತು. ಈ ಯೋಜನೆಗೆ ಸುಮಾರು 500 ಕೋಟಿ ರೂ ಮೀಸಲಿಡಲಾಗಿದೆ. ಎರಡು ಹಂತಗಳಲ್ಲಿ ಮನೆ ಮನೆ ಸರ್ವೇ ನಡೆಸುತ್ತಿದ್ದು ಜನವರಿಯಲ್ಲಿ ಮೊದಲ ಹಂತದ ಜಾತಿಗಣತಿ ಮುಗಿದಿದ್ದು, ಈ ಏಪ್ರಿಲ್-ಮೇ ತಿಂಗಳಿನಲ್ಲಿ ಎರಡನೇ ಹಂತದ ಗಣತಿ ನಡೆಯಬೇಕಿತ್ತು. ಆದರೆ ಜಾತಿ ಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಬಿಹಾರ ಸರ್ಕಾರ ಈ ಗಣತಿಯಲ್ಲಿ ಸೂಕ್ತ ನಡಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಶ್ನಿಸಿ ಯೂತ್ ಫಾರ್ ಈಕ್ವಾಲಿಟಿ ಸೇರಿದಂತೆ ಮೂರು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಇಂದಿನ ಪಾಟ್ನಾ ತೀರ್ಪು ಕುರಿತು ಪ್ರತಿಕ್ರಿಯಿಸಿರುವ ಲಾಲು ಪ್ರಸಾದ್ ಯಾದವ್, “ಹೈಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇದು ಕೇವಲ ನಿರ್ಧಾರವಲ್ಲ, ಬದಲಿಗೆ ಇದು ಬಡವರಿಗೆ ಬಾಗಿಲು ತೆರೆಯುತ್ತದೆ. ಸಮೀಕ್ಷೆಯ ನಂತರ ಅವರ ಆರ್ಥಿಕ ಸ್ಥಿತಿ ತಿಳಿಯುತ್ತದೆ ಮತ್ತು ಅದರ ಆಧಾರದ ಮೇಲೆ ಸರ್ಕಾರವು ಯೋಜನೆಗಳನ್ನು ರೂಪಿಸುತ್ತದೆ. ಹಾಗಾಗಿ ತೀರ್ಪು ಅಭಿವೃದ್ಧಿಯ ಬಾಗಿಲು ತೆರೆದಿದೆ. ನಾನು ಇದಕ್ಕಾಗಿ ಶ್ರಮಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದಿದ್ದಾರೆ.
“ಬಿಹಾರ ಸರಕಾರದ ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ” ಎಂದು ವಕೀಲ ದಿನು ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಸರಿಯೇ?


