Homeಕರ್ನಾಟಕಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಸರಿಯೇ?

ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಸರಿಯೇ?

- Advertisement -
- Advertisement -

ಭಾರತದಲ್ಲಿ ಕೊನೆಯದಾಗಿ ಜಾತಿಗಣತಿ ನಡೆದದ್ದು 1931ರಲ್ಲಿ. ಅದಾಗಿ 84 ವರ್ಷಗಳ ನಂತರ ಅಂದರೆ 2015ರಲ್ಲಿ ಅಂದಿನ ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ಒತ್ತಾಸೆಯ ಫಲವಾಗಿ ರಾಜ್ಯದಲ್ಲಿ ಜಾತಿಗಣತಿ ನಡೆಯಿತು. ಆದರೆ ಅದರ ವರದಿ ಅಧಿಕೃತವಾಗಿ ಬಿಡುಗಡೆಯಾಗಲೇ ಇಲ್ಲ. ಕಾರಣ ಏನೆಂಬುದು ಯಕ್ಷಪ್ರಶ್ನೆಯಾಗಿಯೇ ಉಳಿಯಿತು! (ಅದಿನ್ನೂ ಸಂಪೂರ್ಣವಾಗಿರಲಿಲ್ಲ ಎಂಬಂತೆ ಕೆಲವು ಬಾರಿ ಸಿದ್ದರಾಮಯ್ಯನವರು ಮಾತನಾಡಿದ್ದಿದೆ.) ವರದಿಯ ಅಂಕಿಅಂಶಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಿ ದೊಡ್ಡ ಚರ್ಚೆಗೆ ನಾಂದಿ ಹಾಡಿದವು. ತದನಂತರ ಹೆಚ್.ಡಿ ಕುಮಾರಸ್ವಾಮಿ, ಬಿ.ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಸಿಎಂ ಆದರೂ ಯಾರೂ ಅತ್ತ ಗಮನಿಸಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಅವರು ಈ ಜಾತಿಗಣತಿ ವರದಿಯನ್ನು ಸ್ವೀಕರಿಸಿ ಅಧಿಕೃತವಾಗಿ ಬಿಡುಗಡೆ ಮಾಡಿ ಅದರ ಆಧಾರದಲ್ಲಿ ಮೀಸಲಾತಿ ಸೇರಿದಂತೆ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡುವುದಾಗಿ ಘೋಷಿಸಿದ್ದಾರೆ. ಅದಕ್ಕೆ ಈಗಾಗಲೇ ಬಲಾಢ್ಯ ಜಾತಿಗಳಿಂದ ವಿರೋಧ ವ್ಯಕ್ತವಾಗಿದೆ.

ಸಾವಿರಾರು ಜಾತಿಗಳಿಂದ ಕೂಡಿರುವ ಭಾರತದಲ್ಲಿ ಇಂದಿಗೂ ಅಸಮಾನತೆ ಉಸಿರಾಡುತ್ತಲೇ ಇದೆ ಮತ್ತು ಹೆಚ್ಚಾಗುತ್ತಲೂ ಇದೆ. ಕೆಲವೇ ಬಲಾಢ್ಯ ಜಾತಿಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅಧಿಪತ್ಯ ಸಾಧಿಸಿದರೆ ನೂರಾರು ಸಣ್ಣಪುಟ್ಟ ಸಮುದಾಯಗಳ ದನಿ ಯಾರಿಗೂ ಕೇಳದೆ ನಲುಗಿಹೋಗುತ್ತಿವೆ. ಕೆಲವು ಸಮುದಾಯಗಳು ಜನಸಂಖ್ಯೆ ಹೆಚ್ಚಿದ್ದರೂ ಅದಕ್ಕೆ ಅನುಗುಣವಾಗಿ ಶಿಕ್ಷಣ ಉದ್ಯೋಗಗಳಲ್ಲಿ ಮತ್ತು ಸಂಪನ್ಮೂಲಗಳಲ್ಲಿ ಪಾಲು ಸಿಗದೆ ಪರಿತಪಿಸುತ್ತಿವೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗಗಳು ಎಂಬ 10% ಮೀಸಲಾತಿಯನ್ನು ಕೆಲವೇ ಕೆಲವು ಬಲಾಢ್ಯ ಜಾತಿಗಳನ್ನು ಅದರಲ್ಲಿ ಒಳಗೊಳ್ಳುವಂತೆ ಘೋಷಿಸಿದೆ. ಇನ್ನು ಹಲವು ಬಲಾಢ್ಯ ಜಾತಿಗಳು ಸಹ ತಮಗೆ ಮೀಸಲಾತಿ ನೀಡುವಂತೆ, ಮೀಸಲಾತಿ ಹೆಚ್ಚಿಸುವಂತೆ ಮತ್ತು ತಮ್ಮ ಪ್ರವರ್ಗಗಳನ್ನು ಬದಲಿಸುವಂತೆ ಬೀದಿಗಿಳಿದು ಹೋರಾಟ ಮಾಡುತ್ತಿವೆ. ಹಾಗಾಗಿ ನಿಜವಾಗಿಯೂ ಯಾವ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ, ಅವರ ಸ್ಥಾನಮಾನಗಳೇನು ಎಂಬುದರ ನಿಖರ ಮಾಹಿತಿ ಪಡೆಯಲು ಜಾತಿಗಣತಿ ಅತ್ಯಗತ್ಯವಾಗಿದೆ.

ಸಿದ್ದರಾಮಯ್ಯ

ಸುಪ್ರೀಂಕೋರ್ಟ್ 1992ರ ಇಂದಿರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಮೀಸಲಾತಿ ಶೇ.50ಕ್ಕಿಂತ ಹೆಚ್ಚು ಇರಬಾರದು ಎಂಬ ಷರತ್ತನ್ನು ಹಾಕಿದೆ. ಹಲವು ಸುಪ್ರೀಂಕೋರ್ಟ್ ತೀರ್ಪುಗಳು ವಿಶೇಷ ಸಂದರ್ಭದಲ್ಲಿ ಮಾತ್ರ ಈ ನಿಯಮವನ್ನು ಮೀರಬಹುದು ಎನ್ನುತ್ತವೆ. ಈ ವಿಶೇಷ ಸಂದರ್ಭದ ಕಾರಣ ನೀಡಿ ಈಗಾಗಲೇ ದೇಶದ 9 ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವ ಉದಾಹರಣೆಗಳಿವೆ. ಆದರೆ ಕಳೆದ 90 ವರ್ಷಗಳಿಂದ ಜಾತಿಗಣತಿ ನಡೆಯದ, ನಿಖರವಾದ ಜಾತಿವಾರು ಡೇಟಾ ಇಲ್ಲದ ಕಾರಣ, ವಿಶೇಷ ಸಂದರ್ಭವನ್ನು ನಿರೂಪಿಸಿ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಹಲವು ರಾಜ್ಯಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಅಂದರೆ ’ನಮ್ಮ ರಾಜ್ಯಗಳಲ್ಲಿ ಹಲವು ಜಾತಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಮತ್ತು ಸಮಾಜದಲ್ಲಿ ಇವರ ಪ್ರಾತಿನಿಧ್ಯ ಅತಿ ಕಡಿಮೆ ಇದೆ ಎಂದು ತೋರಿಸಲು’ ರಾಜ್ಯಗಳಿಗೆ ಜಾತಿಗಣತಿ ಡೇಟಾ ಅತ್ಯಗತ್ಯವಾಗಿದೆ. ಹಾಗಾಗಿ ದೇಶಾದ್ಯಂತ ಜಾತಿಗಣತಿ ನಡೆಯಬೇಕೆಂಬ ಬಹುದೊಡ್ಡ ಕೂಗು ಎದ್ದಿದೆ.

ಬಲಾಢ್ಯ ಜಾತಿಗಳ ವಿರೋಧ ಸರಿಯೇ?

ಇಂದಿಗೂ ನಮ್ಮ ದೇಶದ ಬಹುಸಂಖ್ಯಾತ ದಲಿತರು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ನಗಣ್ಯ ಎನ್ನಬಹುದಾದ ಅತಿ ಕಡಿಮೆ ಸಂಪತ್ತಿನ ಮಾಲೀಕತ್ವ ಹೊಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ತೃಪ್ತಿದಾಯಕವಾಗಿಲ್ಲ. ಇನ್ನೂ ಹಲವಾರು ಸಮುದಾಯಗಳು ತೀರಾ ಹಿಂದುಳಿದಿವೆ. ಆದರೆ ಇಂದಿಗೂ ಮುಂದುವರಿದ ಕೆಲ ಜಾತಿಗಳು ಸಮಾಜದಲ್ಲಿ ಅತಿಯಾದ ಪ್ರಾತಿನಿಧ್ಯವನ್ನ ಹೊಂದಿವೆ. ಇಂತಹ ಸಂದರ್ಭದಲ್ಲಿ ಜಾತಿಗಣತಿ ನಡೆದಿದ್ದೇ ಆದಲ್ಲಿ ಎಲ್ಲಾ ಜಾತಿಗಳಲ್ಲಿ ಎಷ್ಟು ಜನರಿದ್ದಾರೆ? ಅವರ ಶೈಕ್ಷಣಿಕ ಸಾಧನೆಯೆಷ್ಟು? ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿದ್ದಾರೆ? ಎಷ್ಟು ಜನ ಉದ್ಯೋಗದಲ್ಲಿದ್ದಾರೆ? ಎಂಬೆಲ್ಲಾ ವಿವರಗಳು ಬಹಿರಂಗಗೊಳ್ಳುತ್ತವೆ. ಅವು ಖಂಡಿತವಾಗಿ ಬಲಾಢ್ಯ ಜಾತಿಗಳು ಈಗ ಸಾರ್ವಜನಿಕವಾಗಿ ಬಿಂಬಿಸುತ್ತಿರುವ ಅಂಕಿಸಂಖ್ಯೆಗಳಿಗೆ ತದ್ವಿರುದ್ಧವಾಗಿರುತ್ತವೆ ಎಂಬ ಭಯ ಅವರನ್ನು ಕಾಡುತ್ತಿದೆ. ಈ ಪಟ್ಟಭದ್ರ ಹಿತಾಸಕ್ತಿಗಳೇ ಅಂದರೆ ಮುಖ್ಯವಾಗಿ ಬಲಾಢ್ಯ ಜಾತಿಗಳು ಈ ಜಾತಿಗಣತಿ ನಡೆಸಲು ಅವಕಾಶ ನೀಡುತ್ತಿಲ್ಲ.

ಇದನ್ನೂ ಓದಿ: ಜಾತಿಗಣತಿ ವರದಿ ಸ್ವೀಕರಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ಆದರೆ ಮೋದಿ ಸರ್ಕಾರ ಆರ್ಥಿಕವಾಗಿ ದುರ್ಬಲವಾದ ಮೇಲ್ಜಾತಿಗಳಿಗೆ 10% ಮೀಸಲಾತಿ ಜಾರಿಗೆ ತಂದಾಗ ಪ್ರತಿಭಟಿಸದ ಈ ಸಮುದಾಯಗಳು ಈಗ ಸಣ್ಣಪುಟ್ಟ ಸಮುದಾಯಗಳ ಸ್ಥಿತಿಗತಿಯನ್ನು ತಿಳಿದು ಅವುಗಳಿಗೆ ಉತ್ತೇಜನ ನೀಡಲು ಹೊರಟಾಗ ವಿರೋಧಿಸುವುದು ಆತ್ಮವಂಚನೆಯಾಗುತ್ತದೆ. ’ದಯೆಯೇ ಧರ್ಮದ ಮೂಲವಯ್ಯ’ ಎಂದ ಬಸವಣ್ಣನವರ ಅನುಯಾಯಿಗಳು ಮತ್ತು ’ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಕುವೆಂಪುರವರ ಆಶಯವನ್ನು ಅರ್ಥ ಮಾಡಿಕೊಂಡವರು ಯಾರೂ ಸಹ ಜಾತಿಗಣತಿಗೆ ವಿರೋಧ ವ್ಯಕ್ತಪಡಿಸಬಾರದು. ಬದಲಿಗೆ ಹಂಚಿ ತಿನ್ನೊಣ, ಕೂಡಿ ಬಾಳೋಣ ಎಂಬ ಸಾಮಾಜಿಕ ಸಾಮರಸ್ಯದಿಂದ ಜಾತಿಗಣತಿಯನ್ನು ಸ್ವಾಗತಿಸಬೇಕು.

ಬಿಜೆಪಿಯ ವಿರೋಧವೇಕೆ?

ಜಾತಿಗಣತಿ ನಡೆಸುವಂತೆ ದೇಶದಲ್ಲಿ ಹಲವಾರು ಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಬಿಜೆಪಿ ಮಾತ್ರ ಬೇಕು, ಬೇಡ ಏನನ್ನೂ ಹೇಳದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದೆ. ಆ ಮೂಲಕ ಅದು ಜಾತಿಗಣತಿ ಬೇಡವೆಂದೇ ಪರೋಕ್ಷವಾಗಿ ಹೇಳುತ್ತಿದೆ. ಅದಕ್ಕೆ ಮೊದಲ ಕಾರಣವೆಂದರೆ ಅದರ ಹಿಂದೂ ರಾಷ್ಟ್ರದ ಹಿಂದುತ್ವದ ಸಿದ್ಧಾಂತ. ಹಿಂದೂ ಧರ್ಮದಲ್ಲಿ ಎಲ್ಲಾ ಜಾತಿಗಳು ಸಮಾನರು ಎಂಬ ಮಿಥ್ ಅನ್ನು ಜಾತಿಗಣತಿ ಹೊಡೆದುಹಾಕುತ್ತದೆ. ಪ್ರತಿಯೊಂದು ಜಾತಿಗಳು ತಮ್ಮ ಜನಸಂಖ್ಯೆ ಮತ್ತು ತಮಗೆ ದಕ್ಕಿರುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಾತಿನಿದ್ಯಾವನ್ನು ತಿಳಿದಲ್ಲಿ ಅವುಗಳು ಎಂದಿಗೂ ’ನಾವೆಲ್ಲ ಹಿಂದು, ನಾವೆಲ್ಲ ಒಂದು’ ಎನ್ನುವ ಪೊಳ್ಳು ಘೋಷಣೆಯನ್ನು ಒಪ್ಪುವುದಿಲ್ಲ. ಬಲಾಢ್ಯ ಜಾತಿಗಳು, ಮುಸ್ಲಿಮರು ಮತ್ತು ದಲಿತರನ್ನು ಧಿಕ್ಕರಿಸಿ ನೂರಾರು ಸಣ್ಣಪುಟ್ಟ ಹಿಂದುಳಿದ ಜಾತಿಗಳನ್ನು ಒಲೈಸಿ ಅಧಿಕಾರ ಹಿಡಿಯಲು ಮುಂದಾಗಿರುವ ಬಿಜೆಪಿಗೆ ಜಾತಿಗಣತಿ ಎರಡು ಅಲಗಿನ ಕತ್ತಿಯಾಗಿ ಪರಿಣಮಿಸುತ್ತಿದೆ. ಹಾಗಾಗಿ ಅದು ಜಾತಿಗಣತಿ ಬಗ್ಗೆ ಮಗುಮ್ಮಾಗಿದೆ.

ಜಾತಿಗಣತಿ ವರದಿ ಸಲ್ಲಿಸುತ್ತೇವೆ: ಕೆ.ಜಯಪ್ರಕಾಶ್ ಹೆಗ್ಡೆ

ಈ ಕುರಿತು ನ್ಯಾಯಪಥ ಪತ್ರಿಕೆಯೊಂದಿಗೆ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆಯವರು, “ಜಾತಿಗಣತಿ ವರದಿ ಸಲ್ಲಿಕೆಗೆ ಕೋರ್ಟಿನ ಯಾವ ಅಡೆತಡೆಗಳು ಇಲ್ಲ. ಸದಸ್ಯ

ಕೆ.ಜಯಪ್ರಕಾಶ್ ಹೆಗ್ಡೆ

ಕಾರ್ಯದರ್ಶಿಯವರ ಸಹಿ ಹಾಕಬೇಕಾದ ಸಣ್ಣ ಸಮಸ್ಯೆ ಇದ್ದು, ಅದನ್ನು ಕೂಡಲೇ ಬಗೆಹರಿಸಿಕೊಳ್ಳುತ್ತೇವೆ. ಜೊತೆಗೆ ಎಲ್ಲರ ಸಭೆ ಕರೆದು ಜಾತಿಗಣತಿ ವರದಿ ಸಲ್ಲಿಕೆಗೆ ತಯಾರಿ ನಡೆಸುತ್ತೇವೆ” ಎಂದರು.

ಸಾಮಾಜಿಕ ನ್ಯಾಯಕ್ಕಾಗಿ ಜಾತಿಗಣತಿ ಬೇಕು

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರು ಮತ್ತು ಕಾಂಗ್ರೆಸ್ ಮುಖಂಡರಾದ ಸಿ.ಎಸ್ ದ್ವಾರಕನಾಥ್‌ರವರು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ್ದು, “ಜಾತಿಗಣತಿ ವರದಿಯನ್ನು ಸ್ವೀಕರಿಸಿ ಬಿಡುಗಡೆ ಮಾಡುತ್ತೇವೆ ಎನ್ನುವ ಸಿಎಂ ಸಿದ್ದರಾಮಯ್ಯನವರ ನಿಲುವನ್ನು ಸ್ವಾಗತಿಸುತ್ತೇವೆ. ಇದಕ್ಕೆ ಕೆಲವರು ವಿರೋಧಿಸುವುದು ಸಹಜ. ಆದರೆ ಕಳೆದ 90 ವರ್ಷಗಳಿಂದ ಜತಿ ಗಣತಿ ನಡೆಯದೇ ಇರುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಹಿತದೃಷ್ಟಿ ಮತ್ತು ತಳಸಮುದಾಯಗಳ ಸ್ಥಿತಿಗತಿಯನ್ನು ಈಗಲಾದರೂ ತಿಳಿದುಕೊಳ್ಳಲು ಜಾತಿಗಣತಿ ಬಹಳ ಅತ್ಯಗತ್ಯವಾದುದಾಗಿದೆ” ಎಂದರು.

ಜಾತಿ ನಿರ್ಮೂಲನೆಗಾಗಿ ಜಾತಿಗಣತಿ ನಡೆಯಬೇಕು: ಶಿವಸುಂದರ್

“ಜಾತಿಗಣತಿ ಎನ್ನುವುದು ಜಾತಿ ಸಮಸ್ಯೆಯ ರೋಗ ಪತ್ತೆ ಹಚ್ಚುವ ಕೆಲಸವಾಗಿದೆ (ಡಯಾಗ್ನೋಸಿಸ್). ಜಾತಿ ಎನ್ನುವ ಅಧಿಕಾರ ಯಾವ ರೀತಿ ಹರಡಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಜಾತಿ ನಿರ್ಮೂಲನೆಯ ಭಾಗವಾಗಿದೆ. ಆದರೆ ಕೇವಲ ಜಾತಿಗಣತಿ ಮಾಡಿ ಜಾತಿನಿರ್ಮೂಲನೆಗೆ ಅದನ್ನು ಬಳಸಿಕೊಳ್ಳದಿದ್ದರೆ ಅದು ಜಾತಿಯ ಸ್ಥಿರೀಕರಣಕ್ಕೆ ದಾರಿಮಾಡಿಕೊಡುತ್ತದೆ. ಇತಿಹಾಸದಲ್ಲಿ ಇದೇ ಆಗಿದ್ದು, 1873ರಲ್ಲಿ ಮೊದಲ ಜಾತಿಗಣತಿ ಆರಂಭವಾದ ಮೇಲೆ, ಅಧಿಕಾರ ಮತ್ತು ಸಂಪತ್ತಿನಲ್ಲಿ ಪಾಲು ಪಡೆಯಲು ಜಾತಿಗಳು ಮತ್ತೆ ಧ್ರುವೀಕರಣಗೊಂಡವು. ಈಗ ಹಾಗಾಗದಂತೆ ತಡೆಯಬೇಕು” ಎನ್ನುತ್ತಾರೆ ಚಿಂತಕ ಶಿವಸುಂದರ್‌ರವರು.

“ಇರುವ ಸಂಪನ್ಮೂಲಗಳನ್ನು ಜಾತಿ ನಿರ್ಮೂಲನೆ ಆಗುವವರೆಗೂ ಪ್ರಜಾತಾಂತ್ರಿಕವಾಗಿ, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಹಂಚಿಕೊಳ್ಳುವುದಕ್ಕೆ ಪರಿಣಾಮಕಾರಿ ಕ್ರಿಯಾಯೋಜನೆ ರೂಪಿಸಲು ಜಾತಿಗಣತಿಯ ಅಗತ್ಯವಿದೆ. ಆದರೆ ಅದು ಅಲ್ಲಿಗೆ ನಿಂತಲ್ಲಿ ಜಾತಿಯ ಸ್ಥಿರೀಕರಣವಾಗಿ ಜಾತಿ ವ್ಯವಸ್ಥೆ ಮುಂದುವರಿಯುತ್ತದೆ. ಹಾಗಾಗಿ ಯಾವ ಕಾರಣಕ್ಕಾಗಿ ಜಾತಿಗಣತಿ ಮಾಡುತ್ತೇವೆ ಎಂಬುದು ಬಹಳ ಮುಖ್ಯವಾದುದು.

ಶಿವಸುಂದರ್

“ಬಲಾಢ್ಯ ಜಾತಿಗಳು ಜಾತಿಗಣತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣ ತಮ್ಮಗಳ ಪ್ರಮಾಣ ಏರುಪೇರಾಗುತ್ತದೆ ಎಂಬ ಆತಂಕದಿಂದ. ಈ ಜಾತಿಗಳು ಹಿಂದಿನಿಂದಲೂ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಂಪನ್ನರಾದ ಕಾರಣಕ್ಕೆ ಮೇಲ್ಚಲನೆ ಹೊಂದುತ್ತಿದ್ದಂತೆ ಸಹಜವಾಗಿ ಅಲ್ಪ ಮಟ್ಟಿಗೆ ಜನಸಂಖ್ಯೆ ನಿಯಂತ್ರಣ ಮಾಡಿರುವುದು ನಿಜ. ಹಾಗಾಗಿ ಅವರ ಪ್ರಮಾಣ ಕಡಿಮೆಯಾಗಿರುತ್ತದೆ. ಆದರೆ ದಮನಿತ ಜಾತಿಗಳು ನಿಧಾನಕ್ಕೆ, ಅಂದರೆ ತೀರಾ ಇತ್ತೀಚೆಗೆ ಶಿಕ್ಷಣಕ್ಕೆ ತೆರೆದುಕೊಂಡ ಕಾರಣ ಅವರ ಪ್ರಮಾಣ ಕಡಿಮೆಯಾಗಿದ್ದರೂ ಬಲಾಢ್ಯ ಜಾತಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಗೆ ತಮ್ಮ ಪ್ರಮಾಣಕ್ಕನುಗುಣವಾಗಿ ಹಕ್ಕು ಸೌಲಭ್ಯಗಳು ದೊರೆತಿಲ್ಲ.

“ಬಲಾಢ್ಯ ಜಾತಿಗಳು ಸದ್ಯಕ್ಕೆ ತಮ್ಮ ಪಟ್ಟಭದ್ರ ಹಿತಾಸಕ್ತಿಗೆ ಧಕ್ಕೆ ಬರುತ್ತದೆಂದು, ಈಗ ಪಡೆದುಕೊಂಡಿರುವ ಸೌಲಭ್ಯಗಳನ್ನು ಕಳೆದುಕೊಳ್ಳಬೇಕೆಂಬ ಭಯದಲ್ಲಿ ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಸಮರ್ಪಕವಾಗಿ ನಿಭಾಯಿಸುವ ರೀತಿಯಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕಿದೆ. ಆದರೆ ಆ ರೀತಿಯ ಪ್ರಬುದ್ಧತೆ ಯಾವುದೇ ರಾಜಕೀಯ ಪಕ್ಷಗಳಿಗೂ ಇಲ್ಲ, ಕಾಂಗ್ರೆಸ್‌ಗೂ ಕೂಡ ಇಲ್ಲ ಎಂಬುದನ್ನು ಇತಿಹಾಸ ತೋರಿಸುತ್ತದೆ. ಆದರೂ ಅವರು ಈ ಜಾತಿಗಣತಿಗೆ ಮುಂದಾಗಿರುವುದು ತಮ್ಮ ಪಕ್ಷದ ಅನುಕೂಲಕ್ಕಾಗಿ ಜಾತಿಯ ಮರುಸಮೀಕರಣಗಳನ್ನು ಮಾಡುವುದಕ್ಕಾಗಿ” ಎಂದು ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.

“ವೈಜ್ಞಾನಿಕವಾಗಿ ಜಾತಿಗಣತಿ ವರದಿ ಜಾರಿಯಾಗುವಂತೆ, ಸಾಮಾಜಿಕ ನ್ಯಾಯದ ಸುತ್ತ ಬಲವಾದ ಕೂಗು ಎದ್ದು ಬರಬೇಕಿದೆ. ಆದರೆ ಅವಕಾಶವಾದಿ ರಾಜಕಾರಣದಲ್ಲಿ ಜಾತಿ ಜಗಳವಾಗದಂತೆ ಸಾಮಾಜಿಕ ಶಕ್ತಿಗಳು ಎಚ್ಚರಿಕೆ ವಹಿಸಬೇಕು” ಎಂದು ಶಿವಸುಂದರ್ ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...