13 ವರ್ಷದ ಅಪ್ತಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ದುರ್ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಬಾಲಕಿಯ ಶವವು ಆರೋಪಿಯೊಬ್ಬರ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮಗಳ ಕತ್ತು ಹಿಸುಕಲಾಗಿದೆ, ಕಣ್ಣು ಕೀಳಲಾಗಿದೆ, ನಾಲಿಗೆ ಕತ್ತರಿಸಲಾಗಿದೆ ಎಂದು ಬಾಲಕಿಯ ತಂದೆ ದೂರಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಮತ್ತು ಕತ್ತು ಹಿಸುಕಿರುವುದು ಮಾತ್ರ ದೃಢಪಟ್ಟಿದೆ, ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಅವರ ಮೇಲೆ ಅತ್ಯಾಚಾರ, ಕೊಲೆ ಮತ್ತು ರಾಷ್ಟ್ರೀಯ ಭದ್ರಾತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋದಿಂದ 130 ಕಿ.ಮೀ ದೂರದಲ್ಲಿರುವ ಹಳ್ಳಿಯಲ್ಲಿ ಈ ಅಮಾನವೀಯ ಘಟನೆ ಶುಕ್ರವಾರ ನಡೆದಿದೆ. ನನ್ನ ಮಗಳು ಶುಕ್ರವಾರ ಕಾಣೆಯಾಗಿದ್ದಳು. ಊರಿಲೆಲ್ಲಾ ಹುಡುಕಿದಾಗ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಅವಳ ಕಣ್ಣುಗಳನ್ನು ಕೀಳಲಾಗಿತ್ತು, ಬಟ್ಟೆಯಿಂದ ಕತ್ತು ಹಿಸುಕಲಾಗಿತ್ತು ಎಂದು ಬಾಲಕಿಯ ತಂದೆ ದುಃಖ ವ್ಯಕ್ತಪಡಿಸಿದ್ದಾರೆ.
ಘಟನೆಯನ್ನು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಖಂಡಿಸಿದ್ದಾರೆ. ಅಂತ್ಯಂತ ನಾಚಿಕೆಗೇಡಿನ ಕೃತ್ಯ. ಹಿಂದಿನ ಸಮಾಜವಾದಿ ಪಕ್ಷಕ್ಕೂ, ಈಗಿನಿ ಬಿಜೆಪಿ ಪಕ್ಷಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಯುಪಿಯಲ್ಲಿ ಕೊಲೆ, ಅತ್ಯಾಚಾರಗಳು ನಡೆಯುತ್ತಲೇ ಇವೆ ಎಂದು ಟೀಕಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಅಜಮ್‌ಘಡದ ಬನ್ಸ್‌ಗಾಂವ್‌ನಲ್ಲಿ ದಲಿತ ಮುಖ್ಯಸ್ಥ ಸತ್ಯಮೇವ್ ಜಯತೆ ಪಪ್ಪು ಅವರನ್ನು ಕ್ರೂರವಾಗಿ ಹತ್ಯೆಗೈದ ಸುದ್ದಿ ಬಹಳ ದುಃಖಕರವಾಗಿದೆ. ಯುಪಿಯಲ್ಲಿ ದಲಿತರ ಮೇಲೆ ಈ ರೀತಿಯ ದೌರ್ಜನ್ಯ ಮತ್ತು ಕೊಲೆಗಳು ಮುಂದುವರಿದಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಆಳ್ವಿಕೆಯಲ್ಲಿ ದಲಿತ ದೌರ್ಜನ್ಯವು ಮುಗಿಲು ಮುಟ್ಟಿದೆ. ಇದು ಜಂಗಲ್ ರಾಜ್ ಅಲ್ಲದೇ ಮತ್ತೇನು? ನಮ್ಮ ಹೆಣ್ಣು ಮಕ್ಕಳು ಸುರಕ್ಷಿತವಾಗಿಲ್ಲ, ನಮ್ಮ ಮನೆ ಸುರಕ್ಷಿತವಾಗಿಲ್ಲ, ಎಲ್ಲೆಲ್ಲೂ ಭಯ ಆವರಿಸಿದೆ. ಆಡಳಿತ ನಡೆಸಲು ವಿಫಲವಾಗಿರುವ ಯೋಗಿ ಆದಿತ್ಯಾನಾಥ್ ರಾಜೀನಾಮೆ ನೀಡಬೇಕೆಂದು ಭೀಮ್ ಆರ್ಮಿ ಮುಖಸ್ಥ ಚಂದ್ರಶೇಖರ್ ಅಜಾದ್ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೊಲೆ, ಅತ್ಯಾಚಾರಗಳು ಅವ್ಯಾಹತವಾಗಿ ಮುಂದುವರೆಯುತ್ತಲೇ ಇವೆ ಎಂಬ ಆರೋಪ ಸಾಮಾನ್ಯವಾಗಿದೆ. ಕಳೆದ ವಾರ ತಾನೇ 6 ವರ್ಷದ ಪುಟ್ಟ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಲಾಗಿತ್ತು. ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿತ್ತು. ಆ ಬಾಲಕಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು, ಇನ್ನು ಅಪಾಯದಿಂದ ಹೊರಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಎಷ್ಟೋ ಆದಿವಾಸಿ ಕುಟುಂಬಗಳ ಪ್ರೀತಿಯ ಪುತ್ರ ಮಹೇಶ್ ರಾವುತ್ ಬಂಧನ ನ್ಯಾಯವೇ?


