Homeಕರ್ನಾಟಕಕರಾವಳಿಯಲ್ಲಿನ ಕೋಮುದ್ವೇಷಗಳ ಆಯಾಮ ತೆರೆದಿಡುವ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’

ಕರಾವಳಿಯಲ್ಲಿನ ಕೋಮುದ್ವೇಷಗಳ ಆಯಾಮ ತೆರೆದಿಡುವ ಕೃತಿ ‘ನೇತ್ರಾವತಿಯಲ್ಲಿ ನೆತ್ತರು’

ಕರಾವಳಿಯ ಕೋಮು ಹಿಂಸೆಯ ನೈಜ ಪ್ರಕರಣಗಳನ್ನು ಪತ್ರಕರ್ತ ‘ನವೀನ್‌ ಸೂರಿಂಜೆ’ ಚಿತ್ರಿಸಿರುವುದು ಹೀಗೆ...

- Advertisement -
- Advertisement -

ಕೋಮುವಾದದ ಪ್ರಯೋಗ ಶಾಲೆ ಎಂದೇ ಕುಖ್ಯಾತವಾಗಿರುವ ಕರ್ನಾಟಕದ ಕರಾವಳಿಯ ಕುರಿತು 2021ರಲ್ಲಿ ಒಂದು ಸಮೀಕ್ಷೆ ಮಾಡಲಾಗಿತ್ತು. ಪೀಪಲ್ಸ್‌ ಯೂನಿಯನ್ ಫಾರ್‌ ಲಿಬರ್ಟೀಸ್‌ ಕರ್ನಾಟಕ, ಆಲ್‌ ಇಂಡಿಯಾ ಲಾಯರ್ಸ್ ಅಸೋಸಿಯೇಷನ್‌ ಫಾರ್‌ ಜಸ್ಟೀಸ್‌, ಆಲ್‌ ಇಂಡಿಯಾ ಪೀಪಲ್ಸ್ ಫೋರಮ್‌‌ ಮತ್ತು ಗೌರಿ ಲಂಕೇಶ್‌ ನ್ಯೂಸ್‌.ಕಾಂ ಬಿಡುಗಡೆ ಮಾಡಿರುವ ವರದಿಯು ಹಲವು ಆತಂಕಕಾರಿ ಸಂಗತಿಗಳನ್ನು ಹೊರಗೆಡವಿತ್ತು. ಜನವರಿ 2021ರಿಂದ ಸೆಪ್ಟೆಂಬರ್‌ 2021ರವರೆಗೆ ನಡೆದ ಮತೀಯ ಗೂಂಡಾಗಿರಿ ಮತ್ತು ದ್ವೇಷದ ಅಪರಾಧಿಕ ಘಟನೆಗಳನ್ನು ವಿಶ್ಲೇಷಿಸಿದ್ದ ಈ ವರದಿಯು ಕೇವಲ ಎಂಟು ತಿಂಗಳಲ್ಲಿ 71 ಕೋಮುದ್ವೇಷ ಪ್ರಕರಣಗಳು ನಡೆದಿವೆ ಎಂದು ತಿಳಿಸಿತ್ತು. ಕೇವಲ 8 ತಿಂಗಳಲ್ಲಿ ಇಷ್ಟಾದರೆ, ಬಾಬ್ರಿ ಮಸೀದಿ ದ್ವಂಸದಿಂದೀಚೆಗೆ ಆಗಿರುವ ಘಟನೆಗಳೆಷ್ಟು? ಕರಾವಳಿಯಲ್ಲಿ ಹರಿದಿರುವ ನೆತ್ತರೆಷ್ಟು?- ಕಲ್ಪಿಸಿಕೊಂಡರೂ ನಡುಗಿ ಹೋಗುತ್ತೇವೆ.

‘ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂದು ಮುಖ್ಯಮಂತ್ರಿಯೇ ಸಮರ್ಥಿಸುವ ಈ ವಿಚಿತ್ರ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ನಿತ್ಯ ಒಂದಲ್ಲ ಒಂದು ಕೋಮುವ್ಯಾದಿ ಬಾಧಿಸತೊಡಗಿದೆ. ಇಂತಹ ಸನ್ನಿವೇಶದಲ್ಲಿ ನಿರ್ಭೀತ, ಮಾನವೀಯ ಹಾಗೂ ಸೃಜನಶೀಲ ಪತ್ರಕರ್ತನೊಬ್ಬ ತನ್ನ ಸುತ್ತಲಿನ ಕೋಮು ಸಂಘರ್ಷವನ್ನು ದಾಖಲಿಸಿದರೆ, ಅದನ್ನು ಓದಿದ ಸಹೃದಯರು ತಲ್ಲಣಿಸದೆ ಇರುವುದಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪತ್ರಕರ್ತ ನವೀನ್‌ ಸೂರಿಂಜೆ ಅವರ ‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯು ಕರಾವಳಿ ಕರ್ನಾಟಕದ ಸುಮಾರು ಒಂದೂವರೆ ದಶಕಗಳ ಕೋಮು ಚರಿತ್ರೆಯನ್ನು ಓದುಗರ ಕಣ್ಣಿಗೆ ಕಟ್ಟುವಂತೆ ಬಿಚ್ಚಿಡುತ್ತದೆ. ಇಲ್ಲಿ ದಾಖಲಾಗಿರುವ ಪ್ರತಿ ಘಟನೆಗೂ ದಾಖಲೆಗಳಿವೆ. ಪ್ರತ್ಯಕ್ಷದರ್ಶಿಗಳ ವಿವರಣೆಗಳಿವೆ.

‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯಲ್ಲಿ ದಾಖಲಿಸಲಾಗಿರುವ ಹತ್ತಾರು ಪ್ರಕರಣಗಳು ಮಾತನಾಡುವುದು ‘ಕೋಮು ದ್ವೇಷ’ದ ಕುರಿತು. ಚಿತ್ರಣಗಳು ಬೇರೆಯಾದರೂ ಕೋಮುದ್ವೇಷಗಳ ಹಿಂದಿರುವ ಕ್ರೌರ್ಯದ ಮಾದರಿ, ಕೇಸರಿಕರಣಗೊಂಡ ಪೊಲೀಸ್ ವ್ಯವಸ್ಥೆಯ ದರ್ಪ, ದೌರ್ಜನ್ಯ, ಅಮಾನವೀಯತೆ ಮಾತ್ರ ಭಿನ್ನವೇನಲ್ಲ. ಕರಾವಳಿಯ ಕೋಮುವಾದದ ನಡುವೆ ಚರ್ಚೆಯಾಗದೆ ಉಳಿದಿರುವ ಹಸಿವು, ದಾರಿದ್ರ್ಯವನ್ನು ನಾವು ಗಂಭೀರವಾಗಿ ಪರಿಗಣಿಸಲೇ ಇಲ್ಲ.

‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯಲ್ಲಿನ ಅಂಶಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು:

  1. ಕೇಸರೀಕರಣಗೊಂಡ ಪೊಲೀಸರು ಮತ್ತು ಮಾನವೀಯ ಪೊಲೀಸರು
  2. ಮತೀಯ ಗೂಂಡಾಗಿರಿ
  3. ಸಂಘ ಪರಿವಾರದ ಹಿಪೋಕ್ರಸಿ ಅಥವಾ ಬೂಟಾಟಿಕೆ/ ಸಂಸ್ಕೃತಿ ರಕ್ಷಕರ ಮನೋವಿಕೃತಿ
  4. ಕರಾವಳಿ ನೆಲದ ನಿಜದ ಗುಣ
  5. ಹಿಂದುತ್ವದ ಜಾಲದಲ್ಲಿ ಬಲಿಪಶುವಾಗುತ್ತಿರುವ ಬ್ರಾಹ್ಮಣೇತರರು
  6. ಮನುಷ್ಯತ್ವದ ಉಳಿವಿಗಾಗಿ ಮಿಡಿಯುತ್ತಿರುವ ಹೃದಯಗಳು
  7. ಕೋಮುವಾದದಾಚೆಗಿನ ಕರಾವಳಿ
  8. ನವೀನ್‌ ಸೂರಿಂಜೆಯ ಆತ್ಮಕತೆ
  9. ವರದಿಗಾರಿಕೆ ಮೀರಿದ ಚಿತ್ರಕತೆ ಶೈಲಿ

– ಹೀಗೆ ವಿಂಗಡಿಸಿಕೊಂಡು ವಿಶ್ಲೇಷಿಸುವುದು ಸೂಕ್ತವೆನಿಸುತ್ತದೆ.

1. ಮಾನವೀಯ ಪೊಲೀಸರು ಮತ್ತು ಕೇಸರೀರಣಗೊಂಡ ಪೊಲೀಸರು

‘ನೇತ್ರಾವತಿಯಲ್ಲಿ ನೆತ್ತರು’ ಹರಿಯದೆ ಅಷ್ಟೋ ಇಷ್ಟೋ ಅಮಾಯಕರು ಪಾರಾಗುವಲ್ಲಿ ಪೊಲೀಸ್‌ ವ್ಯವಸ್ಥೆಯ ಪಾತ್ರವೂ ಇದೆ. ಆದರೆ ಇಲ್ಲಿನ ಬಹುತೇಕ ಪ್ರಕರಣಗಳ ಕ್ರೌರ್ಯದ ಹಿಂದೆ ಪೊಲೀಸರು ನೇರ ಭಾಗೀದಾರರಾಗಿದ್ದಾರೆ. ಮತೀಯ ಗೂಂಡಾಗಿರಿ ಮಾಡಿದವರು ಕಣ್ಣೆದುರೇ ಇದ್ದರೂ ಪ್ರಕರಣ ದಾಖಲಿಸದೆ ಹಲ್ಲೆಗೊಳಗಾದರನ್ನೇ ಅಪರಾಧಿಯಾಗಿ ನೋಡುವ ಪೊಲೀಸರೇ ಇಲ್ಲಿನ ನಿಜವಾದ ಪೀಡಕರು. ಹಿಂದುತ್ವ ಪಡೆಗಳ ಕ್ರೌರ್ಯಗಳಿಗೆ ಸಾಥ್ ನೀಡಿದ್ದು ಕೇಸರಿಕರಣಗೊಂಡ ಪೊಲೀಸರ ಇದೇ ಅಕ್ರಮ ಕೂಟ.

ಇದನ್ನೂ ಓದಿರಿ: 8 ತಿಂಗಳ ಅವಧಿಯ ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕ ಕಂಡ 7 ಕೋಮುದ್ವೇಷ ಪ್ರಕರಣಗಳು

ಯಾವುದೇ ತಪ್ಪು ಮಾಡದೆ, ಬಜರಂಗದಳ ಗೂಂಡಾಪಡೆಯಿಂದ ಪೆಟ್ಟು ತಿದ್ದು ಸಾವಿನ ದವಡೆಯಲ್ಲಿ ಸಿಲುಕಿದ ಚಾಲಕ ಅಬ್ದುಲ್‌ ಸಮೀರನನ್ನು ರಕ್ಷಿಸದೆ ಗೋವುಗಳೇ ಮುಖ್ಯವೆಂದು ಭಾವಿಸುವ ಪೊಲೀಸರು, ಬಲಪಂಥೀಯರ ಪಾಲಿಗೆ ಸಿಗಂ ಎಂದೇ ಬಿಂಬಿತವಾಗಿದ್ದ ಕಂಕನಾಡಿ ಪೊಲೀಸ್ ಠಾಣೆಯ ಎಸ್‌ಐ ಅಮಾಯಕ ವೃದ್ಧರ ಮೇಲೆ ನಡೆಸಿದ ಹೇಯ ಕೃತ್ಯ, ಅಧಿಕೃತವಾಗಿ ಪರವಾನಗಿ ಪಡೆದು ದನದ ವ್ಯಾಪಾರ ಮಾಡುತ್ತಿದ್ದ ಕಬೀರ್‌ನನ್ನು ಬಜರಂಗಿ ಪೊಲೀಸ್‌ ಶೂಟೌಟ್ ಮಾಡಿದ್ದು, ದನದ ವ್ಯಾಪಾರ ಮಾಡುತ್ತಿದ್ದ ಇಳಿ ವಯಸ್ಸಿನ ಹುಸೇನಬ್ಬರನ್ನು ಕೊಂದ ಪೊಲೀಸರು, ತನ್ನ ಪ್ರೀತಿಗೆ ಅಡ್ಡಿಯಾಗಿದ್ದ ಅಣ್ಣನನ್ನು ಹಿಂದೂ ಯುವತಿ ಕೊಲೆ ಮಾಡಿಸಿದ್ದನ್ನು ಮುಸ್ಲಿಮರ ತಲೆಗೆ ಕಟ್ಟಿ ಹಿಂದುತ್ವ ಗುಂಪುಗಳು ಮಾಡಿದ ರಾದ್ಧಾಂತದ ಬಳಿಕ ಪೊಲೀಸರು ಅಮಾಯಕ ಮುಸ್ಲಿಮರಿಗೆ ಚಿತ್ರ ಹಿಂಸೆ ನೀಡಿದ್ದು, ಮಾರ್ನಿಂಗ್ ಮಿಸ್ಟ್‌ ಎನ್ನುವ ಹೋಮ್‌ ಸ್ಟೇ ಮೇಲೆ ಸಂಘಪರಿವಾರ ನಡೆಸಿದ ದಾಳಿಯಲ್ಲಿ ಭಾಗಿಯಾದ ಇನ್‌ಸ್ಪೆಕ್ಟರ್‌- ಹೀಗೆ ಅನೇಕ ಪ್ರಕರಣಗಳ ಹಿಂದೆ ಪೊಲೀಸರೇ ಸಂವಿಧಾನ ಬಾಹಿರ ಶಕ್ತಿಗಳಿಗೆ ಬೆಂಬಲ ನೀಡುವುದನ್ನು ನವೀನ್‌ ದಾಖಲಿಸಿದ್ದಾರೆ. ಪೂರ್ವಗ್ರಹ ಪೀಡಿತ, ಮತೀಯವಾದಿ ಪೊಲೀಸರೇ ಕರಾವಳಿಯ ನಿಜವಾದ ವಿಲನ್‌ಗಳು.

ಇಷ್ಟೆಲ್ಲದರ ನಡುವೆ ಕೇಸರಿಧಾರಿಗಳ ಹೆಡೆಮುರಿ ಕಟ್ಟಿದ ಕೆಲವು ಪೊಲೀಸರನ್ನು ಕರಾವಳಿ ಕಂಡಿದೆ. ಇಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಚಿತ್ರಣವೂ ಇದೆ. ದಲಿತ ಯುವಕನನ್ನು ಪ್ರೀತಿಸುತ್ತಿದ್ದ ಯುವತಿಯನ್ನು ಬಜರಂಗದಳದವರಿಂದ ರಕ್ಷಿಸಲು ಸಹಕರಿಸಿದ ಪೊಲೀಸ್ ಆಯುಕ್ತ ಸೀಮಂತ್‌ ಕುಮಾರ್‌, ಹಿಂದೂ ಹುಡುಗಿ, ಮುಸ್ಲಿಂ ಹುಡುಗ ಮಾತನಾಡಿದ್ದಕ್ಕೆ ಪ್ರಾಂಶುಪಾಲರಿಗೆ ಬೆದರಿಕೆ ಹಾಕುತ್ತಿದ್ದ ಸಂಘಿಗಳಿಗೆ ಎರ್‍ರಾಬಿರ್‍ರಿ ಲಾಠಿ ರುಚಿ ತೋರಿಸಿದ ಪ್ರೊಬೆಷನರಿ ಡಿವೈಎಸ್‌ಪಿ ಅಮಿತ್ ಸಿಂಗ್‌… ಈ ಥರದ ಪ್ರಕರಣಗಳನ್ನೂ ಇಲ್ಲಿ ನೋಡಬಹುದು. ಆದರೆ ಪೊಲೀಸರು ತೋರಿದ ಔದಾರ್ಯಕ್ಕಿಂತ ಕ್ರೌರ್ಯವನ್ನೇ ಕರಾವಳಿ ಹೆಚ್ಚಾಗಿ ಕಂಡಿದೆ.

2. ಮತೀಯ ಗೂಂಡಾಗಿರಿ

ಧರ್ಮ ರಕ್ಷಣೆಯ ಹೆಸರಲ್ಲಿ, ಮತೀಯ ಗೂಂಡಾಗಿರಿ (ನೈತಿಕ ಪೊಲೀಸ್‌ಗಿರಿ) ನಡೆಸಿರುವ ಸಂಘಪರಿವಾರದ ಗೂಂಡಾ ಪಡೆಗಳ ನಿಜದರ್ಶನ ಈ ಕೃತಿಯಲ್ಲಾಗಿದೆ. ಹಿಂದೂ ಮುಸ್ಲಿಂ ಜೊತೆಗಿದ್ದರೆ ಸಹಿಸದೆ ಹಲ್ಲೆ ನಡೆಸುವುದು, ಮುಸ್ಲಿಂ ಯುವಕರನ್ನು ಥಳಿಸುವುದು ನಿತ್ಯದ ವರದಿಗಳಾಗಿವೆ. ಚರ್ಚ್‌, ಹೋಮ್‌ ಸ್ಟೇಗಳ ಮೇಲೆ ನಡೆದ ಗೂಂಡಾಗಿರಿ ಪ್ರಕರಣಗಳು ಇದಕ್ಕೆ ಸಾಕ್ಷಿ.

3. ಸಂಘ ಪರಿವಾರದ ಹಿಪೋಕ್ರಸಿ ಅಥವಾ ಬೂಟಾಟಿಕೆ/ ಸಂಸ್ಕೃತಿ ರಕ್ಷಕರ ಮನೋ ವಿಕೃತಿ

‘ಎಲ್ಲಿ ಹೆಣ್ಣನ್ನು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರುಗಳು ನೆಲಸಿರುತ್ತಾರೆ’, ‘ಹಿಂದೂ ನಾವೆಲ್ಲ ಒಂದು’, ‘ಗೋವು ನಮ್ಮ ತಾಯಿಯ ಸಮಾನ, ಅವುಗಳನ್ನು ರಕ್ಷಿಸಬೇಕು’- ಎಂದೆಲ್ಲ ಬೊಬ್ಬೆ ಹಾಕುವ ಸಂಘಪರಿವಾರ ವಾಸ್ತವದಲ್ಲಿ ಬೇರೆಯೇ ರೀತಿ ಇದೆ ಎಂಬುದು ಹಲವು ಪ್ರಕರಣಗಳಲ್ಲಿ ಬಯಲಾಗಿದೆ.

ಮಾರ್ನಿಂಗ್ ಮಿಸ್ಟ್‌ ಹೋಮ್‌ ಸ್ಟೇ ಮೇಲೆ ಕೇಸರಿ ಪಡೆ ದಾಳಿ ಮಾಡುತ್ತದೆ. ಬರ್ತ್‌ ಡೇ ಪಾರ್ಟಿಗೆ ಸೇರಿದ್ದ ಯುವಕ ಯುವತಿಯರನ್ನು ಅಮಾನುಷವಾಗಿ ಥಳಿಸಲಾಗುತ್ತದೆ. ಹಲ್ಲೆಗೊಳಗಾದವರು ನಂತರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, “ಒಂದು ವೇಳೆ ಅಲ್ಲಿ ಮಾಧ್ಯಮದವರು ಇಲ್ಲದಿದ್ದರೆ ಯುವತಿಯರನ್ನು ಈ ಗೂಂಡಾಗಳು ರೇಪ್‌ ಮಾಡುತ್ತಿದ್ದರು” ಎನ್ನುತ್ತಾರೆ.

ಇದನ್ನೂ ಓದಿರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ತಿಂಗಳಲ್ಲಿ 71 ಕೋಮುದ್ವೇಷ ಪ್ರಕರಣ: ಪೊಲೀಸ್ ವೈಫಲ್ಯ

ಕೊಟ್ಟಾರಿ ಸಮುದಾಯದ ಚೈತನ್ಯ ಎಂಬ ಯುವತಿ, ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಲು ಹೋದಾಗ ಇದೇ ಬಜರಂಗಿಗಳು ಅಡ್ಡಿಪಡಿಸುತ್ತಾರೆ. ಹಿಂದೂ ನಾವೆಲ್ಲ ಒಂದು ಎನ್ನುವ ಸಂಘಟನೆಯ ನಿಜರೂಪವಿದು. ಇನ್ನು ಗೋರಕ್ಷಣೆ ಮಾಡಬೇಕೆನ್ನುವ ಬಜರಂಗದವರೇ ವಾಸ್ತವದಲ್ಲಿ ಹಲವು ಪ್ರಕರಣಗಳಲ್ಲಿ ದನಗಳ್ಳರಾಗಿರಿದ್ದಾರೆ. ಸಂಘಪರಿವಾರದವರೇ ನಡೆಸುವ ಈ ದಂಧೆಯ ಕುರಿತು ಹಲವು ಪ್ರಕರಣಗಳು ಕರಾವಳಿಯಲ್ಲಿ ದಾಖಲಾಗಿರುವುದನ್ನು ಕೃತಿಯಲ್ಲಿ ದಾಖಲಿಸಲಾಗಿದೆ.

ಮತ್ತೊಂದು ಮುಖ್ಯವಾದ ಸಂಗತಿ ಇಲ್ಲಿ ಪ್ರಸ್ತಾಪವಾಗಿದೆ. ಸಂಸ್ಕೃತಿ ರಕ್ಷಣೆ ಎನ್ನುವವರು ವಾಸ್ತವದಲ್ಲಿ ಬಂಡವಾಳಶಾಹಿಗಳ  ಕೂಲಿಯಾಳುಗಳಾಗಿದ್ದಾರೆ. ವಿಶೇಷ ಆರ್ಥಿಕ ವಲಯಕ್ಕಾಗಿ ಭೂ ಸ್ವಾಧೀನ ಮಾಡುವುದರ ವಿರುದ್ಧದ ಹೋರಾಟದಲ್ಲಿ ಪೇಜಾವರ ಶ್ರೀಗಳು ಭಾಗಿಯಾಗಿದ್ದಾಗ ಅವರ ಮೇಲುವಸ್ತ್ರವನ್ನು ಕೆಳಗೆ ಬೀಳಿಸಿದ ಗೂಂಡಾಗಳು, ಬಜಪೆಯ ನೆಲ್ಲದಡಿ ಮತ್ತು ಗುತ್ತು ಮನೆಯನ್ನು ದೈವಸ್ಥಾನ ಸಮೇತ ನೆಲಸಮ ಮಾಡಲು ಮುಂದಾದ ಅಧಿಕಾರಿಗಳಿಗೆ ಹಿಂದೂ ಜಾಗರಣಾ ವೇದಿಕೆಯ ಸುಭಾಷ್‌ ಪಡೀಲ್‌ ಬೆಂಬಲ ನೀಡುವುದು- ಇವೆಲ್ಲವೂ ಕಾರ್ಪೋರೇಟ್ ಮತ್ತು ಹಿಂದುತ್ವ ಪಡೆಯ ನಡುವಿನ ಸಂಬಂಧಗಳ ಕುರಿತು ಮಾತನಾಡುತ್ತವೆ.

4. ಕರಾವಳಿ ನೆಲದ ನಿಜದ ಗುಣ

ದಶಕಗಳ ಹಿಂದಕ್ಕೆ ಹೋದರೆ ಕರಾವಳಿ ಭಿನ್ನ ಸಂಸ್ಕೃತಿ ಹಾಗೂ ಕೋಮು ಸೌಹಾರ್ದತೆಯ ಬೀಡಾಗಿತ್ತು. ಆದರೆ ಇತ್ತೀಚಿನ ದಶಕಗಳಲ್ಲಿ ಚಿತ್ರಣವೇ ಬದಲಾಗಿದೆ. ಇಷ್ಟೆಲ್ಲದರ ನಡುವೆ ಕರಾವಳಿ ನೆಲದ ನಿಜವಾದ ಅಸ್ಮಿತೆಯ ಪ್ರಕರಣಗಳು ವರದಿಯಾಗಿವೆ. ಅನ್ಯಾಯಗಳ ವಿರುದ್ಧ ಮಾತನಾಡುವ ಸಂಘಟನೆಗಳಿವೆ. ಹಿಂದೂ ಮುಸ್ಲಿಂ ಗಲಭೆಯ ಕ್ಷಣಗಳಲ್ಲಿ ಮುಸ್ಲಿಂ ಸ್ನೇಹಿತರನ್ನು ರಕ್ಷಿಸಲು ಹೋಗಿ ಹತರಾದ ಹಿಂದೂಗಳಿದ್ದಾರೆ. ತನ್ನ ಗೆಳೆಯ ಸಮೀವುಲ್ಲಾನನ್ನು ರಕ್ಷಿಸಲು ಹೋಗಿ ಹರೀಶ್‌ ಪೂಜಾರಿಯೇ ಕೊಲೆಯಾದ ಪ್ರಕರಣ, ವಿಶೇಷ ಆರ್ಥಿಕ ವಲಯ ಹೋರಾಟದ ವೇಳೆ ಪೇಜಾವರ ಶ್ರೀಗಳ ಪರ ನಿಂತ ಜಮಾತೇ ಇಸ್ಲಾಮೀ ಹಿಂದ್‌ ಯುವಕರು, ಪಾತಕಿಯಾದರೂ ಕೋಮು ಸಹಿಷ್ಣುವಾಗಿದ್ದ ಮಹಾನ್‌ ದೈವಭಕ್ತ ಗಣೇಶ್ ಶೆಟ್ಟಿಯು ಮಾಡೂರು ಯೂಸೆಫ್‌ನನ್ನು ರಕ್ಷಿಸಲು ಹೋಗಿ ಕೊಲೆಯಾಗಿದ್ದು… ಇವೆಲ್ಲವೂ ಕರಾವಳಿಯ ಅಳಿದುಳಿದ ಅಸ್ಮಿತೆಯ ಗುರುತುಗಳಾಗಿ ದಾಖಲಾಗಿವೆ.

5. ಹಿಂದುತ್ವದ ಜಾಲದಲ್ಲಿ ಬಲಿಪಶುವಾಗುತ್ತಿರುವ ಬ್ರಾಹ್ಮಣೇತರರು

ಕೋಮುದ್ವೇಷ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ ಬಿಲ್ಲವ, ಮೊಗವೀರ ಸಮುದಾಯದ ಯುವಕರ ಕುರಿತು ವಿಷಾದದ ಛಾಯೆ ಈ ಕೃತಿಯಲ್ಲಿದೆ. ಆದರೆ ಬ್ರಾಹ್ಮಣರ ಮಕ್ಕಳಾಗಲೀ, ಮುಖಂಡರಾಗಲೀ ಜೈಲಿಗೆ ಹೋದದ್ದು ಇಲ್ಲ.

ಇದನ್ನೂ ಓದಿರಿ: ಕೋಮುದ್ವೇಷಕ್ಕೆ ಪೊಳ್ಳು ’ಸಮರ್ಥನೆ’ಯೂ ಬೇಡವಾಗಿರುವ ವಿಷಮ ಹಂತದಲ್ಲಿ..

ಚರ್ಚ್‌ ದಾಳಿಯನ್ನು ಸಮರ್ಥಿಸಿ ಅಂದಿನ ಬಜರಂಗದಳ ರಾಜ್ಯಾಧ್ಯಕ್ಷರಾಗಿದ್ದ, ಶೂದ್ರ ಸಮುದಾಯಕ್ಕೆ ಸೇರಿದ ಮಹೇಂದ್ರ ಕುಮಾರ್‌, ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷರಾಗಿದ್ದ, ಬ್ರಾಹ್ಮಣ ಸಮುದಾಯದ ಎಂ.ಬಿ.ಪುರಾಣಿಕ್‌ ಸುದ್ದಿಗೋಷ್ಠಿ ನಡೆಸುತ್ತಾರೆ. ಆದರೆ ಮಹೇಂದ್ರ ಕುಮಾರ್‌ ಮೇಲೆ ಮಾತ್ರ ಪ್ರಕರಣದ ದಾಖಲಾಗುತ್ತದೆ. ಶರತ್‌ ಮಡಿವಾಳನ ಶವ ಮೆರವಣಿಗೆಯ ಅಹಿತಕರ ಘಟನೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್‌ ಪಾಲು ಕೂಡ ಇರುತ್ತದೆ. ಆದರೆ ಪ್ರಕರಣ ದಾಖಲಾಗುವುದು ಮಾತ್ರ ಬಿಲ್ಲವ ಸಮುದಾಯಕ್ಕೆ ಸೇರಿದ ಸತ್ಯಜಿತ್ ಸುರತ್ಕಲ್‌, ಕೊಟ್ಟಾರಿ ಎಂಬ ಹಿಂದುಳಿದ ಸಮುದಾಯಕ್ಕೆ ಸೇರಿದ ಶರಣ್‌ ಪಂಪ್‌ವೆಲ್‌ ವಿರುದ್ಧ. ಬ್ರಾಹ್ಮಣರಾದ ಪ್ರಭಾಕರ್‌ ಭಟ್ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಹೇಗೆ ಸಂಘ ಪರಿವಾರದವರು ದಲಿತ, ಶೂದ್ರ ಸಮುದಾಯಗಳನ್ನು ಕಾಲಾಳುಗಳಾಗಿ ಬಳಸುತ್ತಿದ್ದಾರೆಂಬುದು ಈ ಪ್ರಕರಣಗಳಿಂದ ಸಾಬೀತಾಗುತ್ತದೆ.

6. ಮನುಷ್ಯತ್ವದ ಉಳಿವಿಗಾಗಿ ಮಿಡಿಯುವ ಹೃದಯಗಳು

ಕರಾವಳಿ ಎಷ್ಟೇ ಕೇಸರೀಕರಣವಾದರೂ ಅಮಾನವೀಯ ಕೃತ್ಯಗಳ ವಿರುದ್ಧ ಹೋರಾಡುತ್ತಿರುವ, ಮನುಷ್ಯತ್ವದ ಉಳಿವಿಗಾಗಿ ಶ್ರಮಿಸುತ್ತಿರುವ ಅನೇಕರು ಇಲ್ಲಿದ್ದಾರೆ. ವಕೀಲ ದಿನೇಶ್ ಹೆಗ್ಡೆ, ಮುನೀರ್‌ ಕಾಟಿಪಳ್ಳ, ವಿದ್ಯಾ ದಿನಕರ್‌- ಹೀಗೆ ಅನೇಕರ ಕ್ರಿಯಾಶೀಲತೆಯನ್ನು ನವೀನ್‌ ದಾಖಲಿಸಿದ್ದಾರೆ. ಅವುಗಳೆಲ್ಲದರಲ್ಲೂ ನವೀನ್ ಅವರ ಪಾತ್ರವೂ ಇದೆ. ಕೃತಿಯಲ್ಲಿ ಕೆಲವೇ ಮಂದಿಯ ಹೆಸರುಗಳು ಸಾಂಕೇತಿಕವಾಗಿ ದಾಖಲಾಗಿವೆ ಎಂದು ಭಾವಿಸಬಹುದು. ಕರಾವಳಿಯ ಉಳಿವಿಗಾಗಿ ಹೋರಾಡುತ್ತಿರುವ ಹಲವು ಹೃದಯಗಳು ನಮ್ಮ ನಡುವೆಯೇ ಇವೆ.

7. ಕೋಮುವಾದದಾಚೆಗಿನ ಕರಾವಳಿ

ಹಿಂದೂ ಮುಸ್ಲಿಂ ಬೈನರಿಯಾಚೆಗಿರುವ ಅಪರಾಧದ ಜಗತ್ತನ್ನು ನವೀನ್‌ ದಾಖಲಿಸಿದ್ದಾರೆ. ಹಸಿವು ತಾಳಲಾರದೆ ಮಕ್ಕಳನ್ನು ಮಾರಿದ ಘಟನೆಗಳು, ತುತ್ತು ಅನ್ನಕ್ಕಾಗಿ ಸದಾ ಜೈಲಿಗೆ ಸೇರುವ ದಲಿತ ವ್ಯಕ್ತಿ ಸಂಜೀವ ಮುಖಾರಿ, ಮುಟ್ಟಿನ ವೇಳೆ ಸ್ಯಾನಿಟರಿ ಪ್ಯಾಡ್ ಸಿಗದೆ ಒದ್ದಾಡುತ್ತಿರುವ ಮಹಿಳಾ ಕೈದಿಗಳು- ಇವೆಲ್ಲವೂ ಕೋಮುವಾದಾಚೆಯ ಕರಾವಳಿಯ ಅಪರಾಧ ಜಗತ್ತು. ಹಿಂದುತ್ವ ಎಂದು ನಿತ್ಯವೂ ಗಲಭೆ ಸೃಷ್ಟಿಸುವವರಿಗೆ ಕಾಣದ ಹಸಿವಿನ ಜಗತ್ತು ಇದು.

8. ನವೀನ್‌ ಸೂರಿಂಜೆಯವರ ಆತ್ಮಕತೆ

‘ನೇತ್ರಾವತಿಯಲ್ಲಿ ನೆತ್ತರು’ ಕೃತಿಯು ಕರಾವಳಿಯ ರಕ್ತಸಿಕ್ತ ಚರಿತ್ರೆಯ ದಾಖಲೆಯಷ್ಟೇ ಅಲ್ಲದೇ, ನವೀನ್‌ ಸೂರಿಂಜೆಯವರ ಆತ್ಮಕತೆಯಂತೆಯೂ ಭಾಸವಾಗುತ್ತದೆ. ಇಲ್ಲಿನ ಅನೇಕ ಪ್ರಕರಣಗಳನ್ನು ವರದಿ ಮಾಡುವಾಗ ನವೀನ್‌ ಆ ಘಟನೆಗಳ ಭಾಗವಾಗಿದ್ದಾರೆ. ಮಾರ್ನಿಂಗ್ ಮಿಸ್ಟ್‌ ಹೋಮ್‌ ಸ್ಟೇ ದಾಳಿಯ ಪ್ರಕರಣದ ಕುರಿತು ಹತ್ತಾರು ಪುಟಗಳಲ್ಲಿ ತಮ್ಮ ಅನುಭವಗಳನ್ನು ಸೂರಿಂಜೆ ಅವರು ದಾಖಲಿಸಿದ್ದಾರೆ. ವರದಿ ಮಾಡಿದ ಕಾರಣಕ್ಕೆ ಪೊಲೀಸರು ನಡೆಸಿದ ಪಿತೂರಿಗಳನ್ನು ದಿಟ್ಟವಾಗಿ ಪ್ರಶ್ನಿಸಿದ್ದಾರೆ. ಕರ್ನಾಟಕ ಪೊಲೀಸ್ ಆಕ್ಟ್‌-96 ದುರ್ಬಳಕೆ ಮಾಡಿಕೊಂಡ ಪೊಲೀಸ್ ವ್ಯವಸ್ಥೆಯನ್ನು ಜೈಲಿನಲ್ಲಿದ್ದುಕೊಂಡೇ ಗಮನಿಸಿರುವ ನವೀನ್‌, ಅಮಾಯಕರ ಬಿಡುಗಡೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಸಮಾಜದೊಂದಿಗೆ ನಿತ್ಯ ಒಡನಾಡುವ ಪತ್ರಕರ್ತನ ಬದುಕು ವೈಯಕ್ತಿಕತೆಯಾಚೆಗೆ ಸಾಮಾಜೀಕರಣಗೊಳ್ಳುವುದನ್ನು ಇಲ್ಲಿ ಗುರುತಿಸಬಹುದು.

9. ವರದಿಗಾರಿಕೆ ಮೀರಿದ ಚಿತ್ರಕತೆಯ ಶೈಲಿ

ಪ್ರತಿಯೊಂದು ಪ್ರಕರಣವು ಸರಳವಾಗಿ ಓದಿಸಿಕೊಂಡು ಹೋಗುವುದು ಈ ಕೃತಿಯ ವೈಶಿಷ್ಟ್ಯ ಎನ್ನಬಹುದು. ಇಲ್ಲಿ ದಾಖಲಾಗಿರುವ ಘಟನೆಗಳು ಮಾಮೂಲಿ ಪತ್ರಿಕಾ ವರದಿಗಳಾಗಿಲ್ಲ. ಪ್ರತಿ ಪ್ರಕರಣವನ್ನು ಸಮಗ್ರವಾಗಿ ಕಟ್ಟಿಕೊಡುವುದನ್ನು ಇಲ್ಲಿನ ಬಿಡಿ ಲೇಖನಗಳಲ್ಲಿ ಗುರುತಿಸಬಹುದು. ನವೀನ್‌ ಸೂರಿಂಜೆ ಅವರು ದೃಶ್ಯಮಾಧ್ಯಮದ ಪತ್ರಕರ್ತರೂ ಆಗಿರುವುದರಿಂದ ಪ್ರಕರಣಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಪ್ರತಿ ಪ್ರಕರಣವೂ ಕೊನೆಯವರೆಗೆ ಕುತೂಹಲವನ್ನು ಉಳಿಸಿಕೊಂಡು ಓದಿಸಿಕೊಳ್ಳುತ್ತವೆ. ಒಂದು ರೀತಿಯಲ್ಲಿ ಚಿತ್ರಕತೆಯ ನಿರೂಪಣಾ ಮಾದರಿ ಇಲ್ಲಿದೆ. ಸೃಜನಶೀಲ ಹಾಗೂ ಧೈರ್ಯವಂತ ಸಿನಿಮಾ ನಿರ್ದೇಶಕನ ಕೈಗೆ ಈ ಕೃತಿ ಸಿಕ್ಕಲ್ಲಿ ಹತ್ತಾರು ಕಿರುಚಿತ್ರಗಳನ್ನು, ಸಿನಿಮಾಗಳನ್ನು ಮಾಡುವಷ್ಟು ಸರಕು ಇಲ್ಲಿದೆ. ಪ್ರತಿ ವರದಿಯಲ್ಲೂ ಕಥನ ಶೈಲಿ ಮನೆ ಮಾಡಿದೆ.

ಕೊನೆಯದಾಗಿ…

ಆಗಿರುವ ತಪ್ಪನ್ನು ತಿದ್ದಿ ಭವಿಷ್ಯವನ್ನು ರೂಪಿಸುವ ದೃಷ್ಟಿಯಿಂದ ಈ ಕೃತಿ ಮಹತ್ವದ್ದಾಗಿದೆ. ‘ಕ್ರಿಯಾ ಮಾಧ್ಯಮ’ ಪ್ರಕಟಿಸಿರುವ ಈ ಕೃತಿಗೆ ನಿವೃತ್ತ ಎ.ಸಿ.ಪಿ. ಬಿ.ಕೆ.ಶಿವರಾಂ ಮುನ್ನುಡಿ ಬರೆದಿದ್ದಾರೆ. ನೇತ್ರಾವತಿಯಲ್ಲಿ ಹರಿದಿರುವ ನೆತ್ತರಿನಲ್ಲಿ ಪೊಲೀಸ್ ವ್ಯವಸ್ಥೆಯ ಪಾಲನ್ನು ಕಂಡು ಮರುಗಿದ್ದಾರೆ.

ಇದನ್ನೂ ಓದಿರಿ: ‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ಪೊಲೀಸ್ ಇಲಾಖೆಯನ್ನು ಮಾನವೀಯಗೊಳಿಸಲು ಯತ್ನಿಸುತ್ತಿದ್ದ ಸದಾ ಸಮಾನತೆಗಾಗಿ ತುಡಿಯುತ್ತಿದ್ದ ಐಪಿಎಸ್ ಅಧಿಕಾರಿ ಡಾ.ಮಧುಕರ ಶೆಟ್ಟಿ ಅವರಿಗೆ, ಕೋಮುವಾದದ ವಿರುದ್ಧದ ಸುಧೀರ್ಘ ಹೋರಾಟದಲ್ಲಿ ಹುತಾತ್ಮರಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಹಾಗೂ ಕೋಮುವಾದದ ಸಂತ್ರಸ್ತರಿಗೆ ಈ ಕೃತಿಯನ್ನು ಅರ್ಪಿಸಿರುವುದು ಅರ್ಥಪೂರ್ಣವಾಗಿದೆ.

ಪೊಲೀಸ್ ವ್ಯವಸ್ಥೆ ಸಾಂವಿಧಾನಿಕವಾಗಿ ನಡೆದುಕೊಂಡರೆ, ಹಿಂದೂ ಮುಸ್ಲಿಂ ಸೌಹಾರ್ದತೆ ನೆಲೆಸಿದರೆ, ಕರಾವಳಿ ತನ್ನ ನಿಜದ ಬೇರುಗಳನ್ನು ಅರಿತರೆ, ಸಂಘಪರಿವಾರದ ಉದ್ದೇಶಗಳನ್ನು ದಲಿತಾದಿ ಶೂದ್ರರು ಮನವರಿಕೆ ಮಾಡಿಕೊಂಡರೆ- ಈ ಕೃತಿಯ ಉದ್ದೇಶ ಸಾರ್ಥಕವಾದಂತೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...