ಮಹಾರಾಷ್ಟ್ರದಲ್ಲಿ ಸಿಎಂ ಹುದ್ದೆಗೇರಿರುವ ದೇವೇಂದ್ರ ಫಡ್ನವೀಸ್ ಅವರು ಸರ್ಕಾರ ರಚಿಸುತ್ತಾರೆ. ಎನ್ ಸಿಪಿಯ 54 ಮತ್ತು 11 ಸ್ವತಂತ್ರ ಶಾಸಕರು ಮತ್ತು ಬಿಜೆಪಿಯ 105 ಶಾಸಕರ ಬಲದೊಂದಿಗೆ ಬಿಜೆಪಿ ನೇತೃತ್ವದ ಸರ್ಕಾರ ರಚಿಸುವುದಾಗಿ ಬಿಜೆಪಿ ಹೇಳಿದೆ.
ನವೆಂಬರ್ 30ರವರೆಗೂ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಬಿಜೆಪಿಗೆ ಅವಕಾಶವಿದೆ. 288 ಬಲ ಹೊಂದಿರುವ ಮಹಾರಾಷ್ಟ್ರದಲ್ಲಿ ಬಹುಮತ ಸಾಬೀತಿಗೆ 145 ಸ್ಥಾನ ಬೇಕು. ಈಗಾಗಲೇ ಬಿಜೆಪಿ ತನ್ನ ಬಳಿ 170 ಸ್ಥಾನಗಳ ಬಲವಿದೆ ಎಂದು ಹೇಳಿದೆ.
ಇನ್ನು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸೋದರಳಿಯ ಮತ್ತು ಹಿರಿಯ ನಾಯಕ ಅಜಿತ್ ಪವಾರ್ ಅವರು ಬಿಜೆಪಿ ಜತೆಗೆ ಮಾಡಿಕೊಂಡಿರುವ ಮೈತ್ರಿಗೆ ಪಕ್ಷದ ಬೆಂಬಲವಿಲ್ಲ ಎಂದು ಹೇಳಿದ್ದಾರೆ. ಅಕ್ಟೋಬರ್ 30 ರಂದು ಹೊಸದಾಗಿ ಆಯ್ಕೆಯಾದ ಶಾಸಕರ ಸಭೆಯಲ್ಲಿ ಅಜಿತ್ ಪವಾರ್ ಅವರನ್ನು ಎನ್‌ಸಿಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ತಮ್ಮ ಪಕ್ಷದ ಎಲ್ಲ ಶಾಸಕರ ಬೆಂಬಲ ಪತ್ರವನ್ನು ಅಜಿತ್ ಹೊಂದಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.
ಇದನ್ನೂ ಓದಿ: ನಗರ ಭಾಗದಲ್ಲಿ ಮಾರ್ಚ್ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ತುಸು ಇಳಿಕೆ…
ಬಿಜೆಪಿಯ ಹಿರಿಯ ಮುಖಂಡರೊಬ್ಬರು ಮಾತನಾಡಿ, ಪಕ್ಷದ 105 ಸದಸ್ಯರು ಹಾಗೂ ಎನ್ ಸಿಪಿಯ 54 ಮತ್ತು 11 ಸ್ವತಂತ್ರ ಶಾಸಕರಿರುವ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದೇವೆ. ಒಂದು ವೇಳೆ ಎನ್ ಸಿಪಿ ವಿಭಜನೆಯಾದರೆ 30ಕ್ಕಿಂತ ಹೆಚ್ಚು ಶಾಸಕರು ನಮ್ಮನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಅಲ್ಲದೇ ಬದಲಾಗುತ್ತಿರುವ ಸನ್ನಿವೇಶದಲ್ಲಿ ಸ್ವತಂತ್ರ ಶಾಸಕರ ಬೆಂಬಲವನ್ನೇ ಹೆಚ್ಚೆಚ್ಚು ಪಡೆಯುತ್ತೇವೆ ಎಂದು ಹೇಳಿದರು. ಇನ್ನು ಅಗತ್ಯವಿರುವ ಶಾಸಕರ ಬೆಂಬಲ ಪಡೆಯಲು ಒಂದು ವಾರ ಸಾಕು ಎಂದು ಬಿಜೆಪಿ ತಿಳಿಸಿದೆ.
ಈ ಮಧ್ಯೆ ಎನ್ ಸಿಪಿಯ ಎಲ್ಲಾ ಶಾಸಕರನ್ನು ಶರದ್ ಪವಾರ್ ತಮ್ಮ ಸಿಲ್ವರ್ ಓಕ್ ನಿವಾಸಕ್ಕೆ ಬರುವಂತೆ ತಿಳಿಸಿದ್ದಾರೆ. ಮುಂಬೈನಲ್ಲಿ ಇಲ್ಲದ ಶಾಸಕರು ಸಂಜೆ 4:30ರೊಳಗೆ ಹಾಜರಿರಬೇಕು ಎಂದು ಹೇಳಿದ್ದಾರೆ.


